ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಅವರಿಂದ ನಾಳೆ ವಾರಣಾಸಿಯಲ್ಲಿ ವರ್ತುಲ ರಸ್ತೆ ಮತ್ತು ಬಬತ್ಪುರ್ ವಿಮಾನ ನಿಲ್ದಾಣ ರಸ್ತೆ ಉದ್ಘಾಟನೆ  ವಾರಣಾಸಿಯ ಗಂಗಾ ನದಿಯಲ್ಲಿ ಅಂತರ್ನದಿ ಜಲಸಾರಿಗೆ ನಿಲ್ದಾಣ (ಟರ್ಮಿನಲ್ ) ವನ್ನು ಪ್ರಧಾನಮಂತ್ರಿ ಅವರು ದೇಶಾರ್ಪಣೆ ಮಾಡಲಿದ್ದಾರೆ 

Posted On: 11 NOV 2018 12:18PM by PIB Bengaluru

ಪ್ರಧಾನಮಂತ್ರಿ ಅವರಿಂದ ನಾಳೆ ವಾರಣಾಸಿಯಲ್ಲಿ ವರ್ತುಲ ರಸ್ತೆ ಮತ್ತು ಬಬತ್ಪುರ್ ವಿಮಾನ ನಿಲ್ದಾಣ ರಸ್ತೆ ಉದ್ಘಾಟನೆ 

ವಾರಣಾಸಿಯ ಗಂಗಾ ನದಿಯಲ್ಲಿ ಅಂತರ್ನದಿ ಜಲಸಾರಿಗೆ ನಿಲ್ದಾಣ (ಟರ್ಮಿನಲ್ ) ವನ್ನು ಪ್ರಧಾನಮಂತ್ರಿ ಅವರು ದೇಶಾರ್ಪಣೆ ಮಾಡಲಿದ್ದಾರೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೋಮವಾರ, ನವೆಂಬರ್ 12, 2018ರಂದು ವಾರಣಾಸಿಯಲ್ಲಿ ಒಟ್ಟು 34 ಕಿಮೀ ಉದ್ದದ, ರೂ 1571.95 ಕೋಟಿ ವೆಚ್ಚದಲ್ಲಿ ನಿರ್ಮಿತ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನು ದೇಶಾರ್ಪಣೆ ಮಾಡಲಿದ್ದಾರೆ. ಪ್ರಧಾನಮಂತ್ರಿ ಅವರ ಜೊತೆ ಸಮಾರಂಭದಲ್ಲಿ ಉತ್ತರಪ್ರದೇಶದ ರಾಜ್ಯಪಾಲ ಶ್ರೀ ರಾಮನಾಯ್ಕ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನೌಕಾಯಾನ, ಜಲಸಂಪನ್ಮೂಲಗಳು, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಸಚಿವ ಶ್ರೀ ನಿತಿನ್ ಗಡ್ಕರಿ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪಾಲ್ಗೊಳ್ಳಲಿದ್ದಾರೆ. ಉತ್ತರಪ್ರದೇಶದ ವಾರಣಾಸಿಯ ಹರ್ದುವಾದ ತಿರಹಾ ವರ್ತುಲ ರಸ್ತೆಯಲ್ಲಿ ಮಧ್ಯಾಹ್ನ ಸಮಾರಂಭ ನಡೆಯಲಿದೆ. 

ರೂ. 759.36 ಕೋಟಿ ವಚ್ಚದಲ್ಲಿ ನಿರ್ಮಿಸಲಾದ 16.55 ಕಿಮೀ ಉದ್ದದ ವಾರಣಾಸಿ ವರ್ತುಲ ರಸ್ತೆಯ ಮೊದಲ ಹಂತ ಪೂರ್ತಿಯಾಗಿದೆ, ಹಾಗೂ ರಾಷ್ಟ್ರೀಯ ಹೆದ್ದಾರಿ(ಎನ್.ಹೆಚ್.) 56 ಯಲ್ಲಿ ಬಬತ್ಪುರ್ ನಿಂದ ವಾರಣಾಸಿಗೆ ನಾಲ್ಕು ಪಥದ 17.25 ಕಿಮೀ ಉದ್ದದ ರಸ್ತೆಯನ್ನು ರೂ 812.59 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 

ಬಬತ್ಪುರ್ ವಿಮಾನನಿಲ್ದಾಣ ಹೆದ್ದಾರಿ ವಾರಣಾಸಿಗೆ ವಿಮಾನನಿಲ್ದಾಣವನ್ನು ಜೋಡಿಸುತ್ತದೆ, ಹಾಗೂ ಮುಂದುವರಿಯುತ್ತಾ, ಜೌನ್ಪುರ್, ಸುಲ್ತಾನ್ಪುರ್ ಮತ್ತು ಲಖನೌ ಗಳನ್ನು ಸಂಪರ್ಕಿಸುತ್ತದೆ. ಹ ರ್ಹುವಾದ ಮೇಲ್ಸೇತುವೆ ಮತ್ತು ತರ್ನಾದಲ್ಲಿನ ಸೇತುವೆಯ ಮೇಲಿನ ರಸ್ತೆ (ಆರ್.ಒ.ಬಿ)ಗಳಿಂದಾಗಿ ವಾರಣಾಸಿ ಮತ್ತು ವಿಮಾನನಿಲ್ದಾಣಗಳ ನಡುವಿನ ರಸ್ತೆ ಪ್ರಯಾಣದ ಸಮಯ ಉಳಿತಾಯವಾಗುತ್ತದೆ. ಇದರಿಂದಾಗಿ, ವಾರಣಾಸಿಯ ಜನತೆಗೆ, ಮತ್ತು ಪ್ರವಾಸಿ ಯಾತ್ರಿಗಳಿಗೆ ಹಾಗೂ ನಗರ ಸಂದರ್ಶಕರಿಗೆ ಬಹಳ ಪ್ರಯೋಜನವಾಗಲಿದೆ. 

ಎರಡು ಆರ್.ಒ.ಬಿ.ಗಳು ಮತ್ತು ಮೇಲ್ಸೇತುವೆಗಳನ್ನು ಹೊಂದಿರುವ ವರ್ತುಲ ರಸ್ತೆಯು ರಾ.ಹೆ.56 ( ಲಖನೌ-ವಾರಣಾಸಿ) , ರಾ.ಹೆ.-233 (ಆಜಂಘಡ್-ವಾರಣಾಸಿ),ರಾ.ಹೆ.29 (ಗೋರಖ್ಪುರ್ –ವಾರಣಾಸಿ) ಮತ್ತು ಅಯೋಧ್ಯೆ- ವಾರಣಾಸಿ ಹೆದ್ದಾರಿಗಳನ್ನು ವಾರಣಾಸಿ ನಗರ ಪ್ರವೇಶಿಸದೆ ಹೊರವಲಯದಿಂದ (ಬೈಪಾಸ್) ಸಾಗಿಸುತ್ತದೆ. ಇದು ರಸ್ತೆಗಳಲ್ಲಿ ಹಾಗೂ ವಾರಣಾಸಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸಲಿದೆ. ಇದರಿಂದಾಗಿ ಪಯಣ ಸಮಯ, ಇಂಧನ ವೆಚ್ಚ ಮತ್ತು ಈ ಪ್ರದೇಶದ ವಾಯು ಮಾಲಿನ್ಯತೆ ಕಡಿಮೆಯಾಗಲಿದೆ. ಅಲ್ಲದೆ, ಈ ರಸ್ತೆಯು ಪ್ರಮುಖ ಬೌದ್ಧ ಯಾತ್ರಾಸ್ಥಳವಾದ ಸಾರನಾಥ್ ಗೂ ಅನುಕೂಲಕರ ಹಾಗೂ ಸುಲಭ ಸಂಪರ್ಕ ಏರ್ಪಡಿಸುತ್ತದೆ. 

ಈ ಯೋಜನೆಗಳಿಂದಾಗಿ, ಪ್ರದೇಶದಲ್ಲಿ ಆರ್ಥಿಕ ವಿಕಾಸಕ್ಕೆ ಅನುಕೂಲವಾಗಲಿದೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಯಾಗಲಿದೆ, ಉದ್ಯೋಗ ಸೃಷ್ಠಿಯಲ್ಲಿ ಹೆಚ್ಚಳವಾಗಲಿದೆ. ಈಶಾನ್ಯ ಉತ್ತರ ಪ್ರದೇಶದಲ್ಲಿ ವಿವಿಧ ಸ್ಥಳಗಳಿಂದ ವಾರಣಾಸಿಗೆ ನೇರ ಸಂಪರ್ಕ ಜೋಡಿಸುವ, ಒಟ್ಟು 2833 ಕಿಮೀ ರಾ.ಹೆ. ಯೋಜನೆಗಳು ರೂ.63,885 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿವೆ. 

ಗಂಗಾ ನದಿಯಲ್ಲಿ ಅಂತರ್ನದಿ ಜಲಸಾರಿಗೆ ನಿಲ್ದಾಣವನ್ನು(ಟರ್ಮಿನಲ್) ಪ್ರಧಾನಮಂತ್ರಿ ಅವರು ವಾರಣಾಸಿಯಲ್ಲಿ ದೇಶಾರ್ಪಣೆ ಮಾಡಲಿದ್ದಾರೆ. ಭಾರತೀಯ ಅಂತರ್ನದಿ ಜಲಸಾರಿಗೆ ಪ್ರಾಧಿಕಾರದ ಜಲ ಮಾರ್ಗ ವಿಕಾಸ ಯೋಜನೆಗಳಿಗಾಗಿ ವಿಶ್ವಬ್ಯಾಂಕ್ ನೀಡುವ ಆರ್ಥಿಕ ಸಹಾಯದ ಅಂಗವಾಗಿ ಎನ್.ಡಬ್ಲೂ-1 (ಗಂಗಾ ನದಿ)ಯಲ್ಲಿ ನಿರ್ಮಿಸಲಾಗುವ ನಾಲ್ಕು ಬಹು ಮಾದರಿಯ ನಿಲ್ದಾಣ(ಟರ್ಮಿನಲ್) ಗಳಲ್ಲಿ ಇದು ಮೊದಲನೆಯದಾಗಿದೆ. ಈ ಯೋಜನೆಯ, ಸಾಹಿಬ್ಗಂಜ್, ಹಾಲ್ದಿಯಾ ಮತ್ತು ಗಾಜೀಪುರ್ ಗಳಲ್ಲಿರುವ ಇತರ ಮೂರು ನಿಲ್ದಾಣಗಳು(ಟರ್ಮಿನಲ್) ನಿರ್ಮಾಣ ಹಂತದಲ್ಲಿವೆ. ಈ ಯೋಜನೆಯು ಗಂಗಾ ನದಿ ಮೂಲಕ ಸರಕು ಹಡಗುಗಳಿಗೆ 1500-2000 ಡಿ.ಬ್ಲೂ.ಟಿ. ಸಾಮರ್ಥ್ಯದ ವಾಣಿಜ್ಯ ಸಾಗಾಟ ಮಾರ್ಗ ಮಾಡಿಕೊಡುತ್ತವೆ. 

ಅಂತರ್ನದಿ ಜಲಸಾರಿಗೆ ಮೂಲಕ ಸಾಗಿಸಲ್ಪಟ್ಟ ಭಾರತದ (ಸ್ವಾತಂತ್ರ್ಯಾನಂತರದಲ್ಲಿ) ಪ್ರಪ್ರಥಮ ಹಡಗು ಸರಕು ಸಾಗಾಟವನ್ನು ಪ್ರಧಾನಮಂತ್ರಿ ಅವರು ಸ್ವೀಕರಿಸಲಿದ್ದಾರೆ. ಅಕ್ಟೋಬರ್ ತಿಂಗಳ ಕೊನೆಯ ವಾರದಂದು ಪೆಪ್ಸಿಕೋ ಸಂಸ್ಥೆಯ ಪಾನೀಯ ಮತ್ತು ಆಹಾರವಸ್ತುಗಳನ್ನು ಸರಕು ಸಾರಿಗೆ ಹಡಗದಲ್ಲಿ ಕೊಲ್ಕತ್ತಾದ ತುಂಬಿಸಿ ಕಳುಹಿಸಿಕೊಡಲಾಗಿತ್ತು. 
 

***



(Release ID: 1552473) Visitor Counter : 86


Read this release in: English , Marathi , Assamese , Tamil