ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಅಂತಾರಾಷ್ಟ್ರೀಯ ಸೌರ ಮೈತ್ರಿ ಮೊದಲ ಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ 

Posted On: 02 OCT 2018 10:25PM by PIB Bengaluru

ಅಂತಾರಾಷ್ಟ್ರೀಯ ಸೌರ ಮೈತ್ರಿ ಮೊದಲ ಸಭೆ ಉದ್ಘಾಟಿಸಿದ ಪ್ರಧಾನಮಂತ್ರಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವಿಜ್ಞಾನ ಭವನದಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೊದಲ ಸಭೆಯನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಎರಡನೇ ಐಓ ಆರ್ ಏ ನವೀಕರಿಸಬಹುದಾದ ಇಂಧನ ಸಚಿವರ ಸಭೆ ಮತ್ತು ಎರಡನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಶೃಂಗಸಭೆ ಮತ್ತು ಎಕ್ಸ್ ಪೋ ಉದ್ಘಾಟಿಸಿದರು. ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟರೆರ್ಸ್ ಈ ಸಂದರ್ಭದಲ್ಲಿ ಹಾಜರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಕಳೆದ 150-200 ವರ್ಷಗಳಿಂದ ಮನುಕುಲ ಇಂಧನ ಅಗತ್ಯತೆಗಳಿಗಾಗಿ ಸಾಂಪ್ರದಾಯಿಕ ಇಂಧನ ಮೂಲಗಳನ್ನು ಅವಲಂಬಿಸಿತ್ತು ಎಂದರು.

ಆದರೆ ಇದೀಗ ಪ್ರಕೃತಿ ಅಥವಾ ನಿಸರ್ಗ ಸೌರ, ಪವನ ಮತ್ತು ಜಲ ಮತ್ತಿತರ ಅಧಿಕ ಸುಸ್ಥಿರ ಇಂಧನ ಪರಿಹಾರಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, 21ನೇ ಶತಮಾನದಲ್ಲಿ ಮನುಕುಲದ ಒಳಿತಿಗಾಗಿ ಸಂಸ್ಥೆಗಳನ್ನು ಕಟ್ಟಬೇಕಿದೆ ಎಂದು ಜನರು ಮಾತನಾಡುತ್ತಾರೆ. ಅಂತಹ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿ ಅಗ್ರಸ್ಥಾನದಲ್ಲಿದೆ ಎಂದರು. ಹವಾಮಾನ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ಇದೊಂದು ಶ್ರೇಷ್ಠ ವೇದಿಕೆಯಾಗಲಿದೆ ಎಂದು ಅವರು ಹೇಳಿದರು. ಭವಿಷ್ಯದಲ್ಲಿ ಒಪೆಕ್ ಬದಲಿಗೆ ಅಂತಾರಾಷ್ಟ್ರೀಯ ಸೌರ ಮೈತ್ರಿ ಪ್ರಮುಖ ಜಾಗತಿಕ ಇಂಧನ ಪೂರೈಕೆ ಮಾಡುವ ಸಂಸ್ಥೆಯಾಗಲಿದೆ ಎಂದರು.

ಭಾರತದಲ್ಲಿ ಇದೀಗ ನವೀಕರಿಸಬಹುದಾದ ಇಂಧನ ಬಳಕೆ ಹೆಚ್ಚಾಗಿರುವುದರ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಕ್ರಿಯಾ ಯೋಜನೆ ಮೂಲಕ ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ

ಎಂದು ಅವರು ಹೇಳಿದರು. 2030ರ ವೇಳೆಗೆ ಭಾರತದ ಒಟ್ಟಾರೆ ಇಂಧನ ಅಗತ್ಯತೆಯಲ್ಲಿ ಶೇಕಡ 40ರಷ್ಟನ್ನು ಅಸಂಪ್ರದಾಯಿಕ ಇಂಧನ ಮೂಲಗಳಿಂದ ಉತ್ಪಾದಿಸಬೇಕೆಂಬ ಗುರಿ ಹೊಂದಲಾಗಿದೆ ಎಂದು ಪ್ರಧಾನಿ ಹೇಳಿದರು. ಭಾರತ ‘ಬಡತನದಿಂದ ಶಕ್ತಿ’ ಎಂಬ ಹೊಸ ಸ್ವಯಂನಂಬಿಕೆಯಿಂದಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು.

ಇಂಧನ ಉತ್ಪಾದನೆ ಜೊತೆಗೆ ಇಂಧನ ಶೇಖರಣೆಯೂ ಅತ್ಯಂತ ಪ್ರಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಅವರು ರಾಷ್ಟ್ರೀಯ ಸೌರ ಶೇಖರಣಾ ಯೋಜನೆಯನ್ನು ಉಲ್ಲೇಖಿಸಿದರು. ಈ ಯೋಜನೆಯಡಿ ಸರ್ಕಾರ ಬೇಡಿಕೆ ಸೃಷ್ಟಿ, ದೇಶೀಯ ಉತ್ಪಾದನೆ, ಆವಿಷ್ಕಾರ ಮತ್ತು ಇಂಧನ ಶೇಖರಣೆಗೆ ಗಮನಹರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ಸೌರ ಮತ್ತು ಪವನ ವಿದ್ಯುತ್ ಅಲ್ಲದೆ ಭಾರತ ಬಯೋಮಾಸ್, ಜೈವಿಕ ಇಂಧನ ಮತ್ತು ಜೈವಿಕ ವಿದ್ಯುತ್ ಗಾಗಿ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಂಚಾರ ವ್ಯವಸ್ಥೆಯನ್ನು ಶುದ್ಧ ಇಂಧನ ಆಧಾರಿತಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಜೈವಿಕ ತ್ಯಾಜ್ಯವನ್ನು ಜೈವಿಕ ಇಂಧನವನ್ನಾಗಿ ಪರಿವರ್ತಿಸುವ ಸವಾಲು ಭಾರತದ ಮುಂದಿದ್ದು, ಅದನ್ನು ಅವಕಾಶವನ್ನಾಗಿ ಸೃಷ್ಟಿಸಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.



(Release ID: 1549391) Visitor Counter : 164


Read this release in: English , Urdu