ಪ್ರಧಾನ ಮಂತ್ರಿಯವರ ಕಛೇರಿ

ಉತ್ತರ ಪ್ರದೇಶದಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ಭಾಗಿ

Posted On: 29 JUL 2018 2:35PM by PIB Bengaluru

ಉತ್ತರ ಪ್ರದೇಶದಲ್ಲಿ ಹಲವು ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನಿ ಭಾಗಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಲಕ್ನೋಗೆ ಭೇಟಿ ನೀಡಿದ್ದರು. ಅವರು ಉತ್ತರ ಪ್ರದೇಶದಲ್ಲಿ ಸುಮಾರು 60 ಸಾವಿರ ಕೋಟಿ ರೂಪಾಯಿ ಒಟ್ಟಾರೆ ಹೂಡಿಕೆಯ 81 ಯೋಜನೆಗಳ ಶಂಕುಸ್ಥಾಪನೆ ಅಥವಾ ಭೂಮಿ ಪೂಜೆ ಸಮಾರಂಭದಲ್ಲಿ ಭಾಗಿಯಾದರು. 

ಉತ್ತರಪ್ರದೇಶದಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸಲು ಮತ್ತು ಬಂಡವಾಳ ಆಕರ್ಷಣೆ ಉದ್ದೇಶದಿಂದ 2018ರ ಫೆಬ್ರವರಿ ತಿಂಗಳಲ್ಲಿ ಯುಪಿ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿತ್ತು, ಅದಾದ ಕೆಲವು ತಿಂಗಳಲ್ಲಿ ಈ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. 

ಪ್ರಧಾನಮಂತ್ರಿಗಳು ತಮ್ಮ ಭಾಷಣದಲ್ಲಿ ದೇಶದ ಹಲವೆಡೆ ಭಾರಿ ಮಳೆಯಾಗಿರುವುದನ್ನು ಉಲ್ಲೇಖಿಸಿದರು. ಕೇಂದ್ರ ಸರ್ಕಾರ ಪರಿಸ್ಥಿತಿಯ ಬಗ್ಗೆ ನಿಗಾವಹಿಸುತ್ತಿದ್ದು, ಎಲ್ಲ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ರಾಜ್ಯ ಸರ್ಕಾರಗಳೊಂದಿಗೆ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು. 

ಜನರಿಗೆ ಸ್ಪಂದಿಸುವ ಸರ್ಕಾರವಾಗಿ, ಜನರ ಕಷ್ಟಗಳನ್ನು ಪರಿಹರಿಸುವ ಉದ್ದೇಶ ಹೊಂದಿದೆ ಮತ್ತು ಜನರ ಜೀವನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತಿದೆ ಎಂದರು. ಇಂದು ಇಲ್ಲಿ ಸೇರಿರುವ ಭಾರಿ ಜನಸ್ತೋಮ, ಉತ್ತರಪ್ರದೇಶ ರಾಜ್ಯವನ್ನು ಪರಿವರ್ತಿಸುವ ಪ್ರಯತ್ನದ ಭಾಗವಾಗಿದ್ದಾರೆ. ಐದೇ ತಿಂಗಳಲ್ಲಿ (ಪ್ರಸ್ತಾವದಿಂದ ಶಂಕುಸ್ಥಾಪನೆವರೆಗೆ) ಈ ಯೋಜನೆಗಳು ಕಾರ್ಯಗತಗೊಳ್ಳುತ್ತಿರುವ ವೇಗ ಅತ್ಯದ್ಭುತ ಎಂದರು. 

ಈ ಸಾಧನೆಗಾಗಿ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಗಳು ರಾಜ್ಯದ ಕೆಲವು ಭಾಗಗಳಿಗೆ ಸೀಮಿತವಾಗಿಲ್ಲ, ರಾಜ್ಯದ ಎಲ್ಲ ಭಾಗಗಳ ಸಮತೋಲಿತ ಅಭಿವೃದ್ಧಿಯ ಗುರಿಯನ್ನು ಹೊಂದಿವೆ ಎಂದರು. 

ರಾಜ್ಯ ಸರ್ಕಾರದ ಹೊಸ ಕಾರ್ಯಶೈಲಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ತಕ್ತಪಡಿಸಿದರು. ರಾಜ್ಯದಲ್ಲಿ ಬದಲಾಗಿರುವ ಬಂಡವಾಳ ಹೂಡಿಕೆ ವಾತಾವರಣದಿಂದಾಗಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ಸೃಷ್ಟಿಯಾಗುತ್ತಿವೆ, ಜೊತೆಗೆ ಉತ್ತಮ ರಸ್ತೆಗಳು, ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಉಜ್ವಲ ಭವಿಷ್ಯ ನಿರ್ಮಿಸಲು ಸಾಧ್ಯವಾಗುತ್ತಿದೆ.ಈ ಯೋಜನೆಗಳು ಹಲವು ಹೊಸ ಉದ್ಯೋಗಗಳನ್ನು ಸೃಷ್ಟಿಸುವುದರಿಂದ, ಅದು ಸಮಾಜದ ನಾನಾ ವರ್ಗಗಳಿಗೆ ಪ್ರಯೋಜನವಾಗುತ್ತದೆ ಎಂದರು. ಈ ಅಭಿವೃದ್ಧಿ ಯೋಜನೆಗಳಿಂದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗಳಿಗೆ ಹೆಚ್ಚಿನ ಉತ್ತೇಜನ ದೊರಕಲಿದೆ ಎಂದು ಅವರು ಹೇಳಿದರು. 

ದೇಶದ ಗ್ರಾಮೀಣ ಭಾಗಗಳಲ್ಲಿ ಹರಡಿರುವ 3 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಿಂದು ಗ್ರಾಮಗಳ ಜನರ ಜೀವನವನ್ನು ಪರಿವರ್ತಿಸುತ್ತಿದ್ದು, ಅವುಗಳ ಮೂಲಕ ಜನರಿಗೆ ಪಾರದರ್ಶಕ ಮತ್ತು ಪರಿಣಾಮಕಾರಿ ಸೇವೆಗಳು ಲಭ್ಯವಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 

ಕೇಂದ್ರ ಸರ್ಕಾರ ಹಗೆತನವನ್ನು ಆಂತ್ಯಗೊಳಿಸಿ, ಪರಿಹಾರ ಮತ್ತು ಸಮನ್ವಯತೆಗೆ ಹೆಚ್ಚಿನ ಗಮನಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. 

ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದನಾ ರಾಷ್ಟ್ರವಾಗಿದೆ ಮತ್ತು ಉತ್ತರ ಪ್ರದೇಶ ಈ ಉತ್ಪಾದನಾ ಕ್ರಾಂತಿಯ ಮುಂಚೂಣಿಯಲ್ಲಿದೆ ಎಂದರು. 

ದೇಶದಲ್ಲಿ ಎನ್ ಡಿ ಎ ಸರ್ಕಾರ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಪೂರ್ಣಗೊಂಡರೆ, ಭಾರತದಲ್ಲಿ ವ್ಯಾಪಾರ ವಹಿವಾಟು ನಡೆಸುವುದು ಅತ್ಯಂತ ಸುಲಭವಾಗಲಿದೆ ಮತ್ತು ಸರಕುಗಳ ಸಾಗಾಣೆ ವೆಚ್ಚ ಗಣನೀಯವಾಗಿ ತಗ್ಗಲಿದೆ ಎಂದ ಪ್ರಧಾನಿ ಅವರು, ಉದ್ಯಮಿಗಳು ಮತ್ತು ವ್ಯಾಪಾರಿಗಳು ಡಿಜಿಟಲ್ ವಹಿವಾಟು ಅಳವಡಿಕೆಗೆ ಗಮನಹರಿಸಬೇಕು ಎಂದು ಕರೆ ನೀಡಿದರು. 

ತಮ್ಮ ಸರ್ಕಾರ ದೇಶದಲ್ಲಿ ವಿದ್ಯುತ್ ಪೂರೈಕೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಪ್ರಧಾನಿ ಅವರು, ದೇಶ ಸಾಂಪ್ರದಾಯಿಕ ಇಂಧನದಿಂದ ಹಸಿರು ಇಂಧನದತ್ತ ಸಾಗುತ್ತಿದೆ ಮತ್ತು ಉತ್ತರ ಪ್ರದೇಶ ಸೌರಶಕ್ತಿಯ ತಾಣವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು. 2013-14ರಲ್ಲಿ ಭಾರತದಲ್ಲಿ ಇಂಧನ ಕೊರತೆ ಶೇ.4.2ರಷ್ಟಿತ್ತು, ಇದೀಗ ಅದು ಶೇ.1ಕ್ಕಿಂತಲೂ ಕಡಿಮೆಯಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದರು. 

ಜನರ ಆಶೋತ್ತರಗಳನ್ನು ಈಡೇರಿಸಲು ನವ ಭಾರತ ನಿರ್ಮಾಣದ ಮಾರ್ಗಸೂಚಿ ಸಿದ್ಧಪಡಿಸಲಾಗಿದ್ದು, ಜನರ ಭಾಗಿದಾರಿಕೆ- ಪಾಲ್ಗೊಳ್ಳುವಿಕೆಯೊಂದಿಗೆ(ಜನರ ಸಹಭಾಗಿತ್ವ)ದೊಂದಿಗೆ ಅದನ್ನು ಸಾಧಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. 



(Release ID: 1540772) Visitor Counter : 127