ಪ್ರಧಾನ ಮಂತ್ರಿಯವರ ಕಛೇರಿ

ದಿನಾಂಕ 24-06-2018ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ‘ಮನದ ಮಾತು’ (‘ಮನ್ ಕಿ ಬಾತ್’) – 45 ನೇ ಭಾಷಣದ ಕನ್ನಡ ಅವತರಣಿಕೆ

Posted On: 24 JUN 2018 11:49AM by PIB Bengaluru

ದಿನಾಂಕ 24-06-2018ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ‘ಮನದ ಮಾತು’ (‘ಮನ್ ಕಿ ಬಾತ್’) – 45 ನೇ ಭಾಷಣದ ಕನ್ನಡ ಅವತರಣಿಕೆ 

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ಇಂದು ಮತ್ತೊಮ್ಮೆ ಮನದ ಮಾತಿನ ಈ ಕಾರ್ಯಕ್ರಮದಲ್ಲಿ ನಿಮ್ಮೆಲ್ಲರೊಂದಿಗೆ ಮಾತನಾಡುವ ಸೌಭಾಗ್ಯ ಲಭಿಸಿದೆ. ಇತ್ತೀಚೆಗೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಐತಿಹಾಸಿಕ ಕ್ರಿಕೆಟ್ ಪಂದ್ಯ ನಡೆಯಿತು. ನಾನು ಭಾರತ ಮತ್ತು ಅಫ್ಘಾನಿಸ್ಥಾನದ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ನಿಮಗೆ ಚೆನ್ನಾಗಿ ಅರ್ಥವಾಗಿರಬಹುದು. ಇದು ಅಫ್ಘಾನಿಸ್ಥಾನದ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು ಮತ್ತು ಅಫ್ಘಾನಿಸ್ಥಾನದ ಈ ಐತಿಹಾಸಿಕ ಪಂದ್ಯ ಭಾರತದೊಂದಿಗೆ ಇತ್ತು ಎನ್ನುವುದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಷಯ.  ಈ ಪಂದ್ಯದಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿದವು. ಅಫ್ಘಾನಿಸ್ಥಾನದ ಇನ್ನೊಬ್ಬ ಬೌಲರ್ ರಷೀದ್ ಖಾನ್ ಅಂತೂ ಈ ಬಾರಿಯ ಐಪಿಎಲ್‍ನಲ್ಲಿ  ಉತ್ತಮ ಪ್ರದರ್ಶನ ನೀಡಿದ್ದರು. ಅಫ್ಘಾನಿಸ್ಥಾನದ ರಾಷ್ಟ್ರಪತಿ ಅಶ್ರಫ್ ಘನಿ ಅವರು“ಅಫ್ಘಾನಿಸ್ಥಾನದ ಜನರಿಗೆ ತಮ್ಮ ಹಿರೋ ರಶೀದ್ ಖಾನ್ ಅವರ ಬಗ್ಗೆ ಅಪಾರ ಅಭಿಮಾನವಿದೆ” ಎಂದು  ನನಗೆ ಟ್ಯಾಗ್ ಮಾಡಿ ಟ್ವಿಟ್ಟರ್ ನಲ್ಲಿ ಬರೆದಿದ್ದು ನನಗೆ ನೆನಪಿದೆ. ನಮ್ಮ ಕ್ರೀಡಾಳುಗಳಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಒಂದು ವೇದಿಕೆ ಕಲ್ಪಿಸಿದ ನನ್ನ ಭಾರತೀಯ ಮಿತ್ರರಿಗೂ ನಾನು ಆಭಾರಿಯಾಗಿದ್ದೇನೆ. ಅಫ್ಘಾನಿಸ್ಥಾದಲ್ಲಿ ಶ್ರೇಷ್ಠವಾದುದರ ಪ್ರತಿನಿಧಿತ್ವವನ್ನು ರಶೀದ್ ವಹಿಸಿದ್ದಾರೆ. ಅವರು ಕ್ರಿಕೆಟ್ ವಿಶ್ವದ ಆಸ್ತಿಯಿದ್ದಂತೆ ಮತ್ತು ಅದರ ಜೊತೆಗೆ ಹಾಸ್ಯದ ರೂಪದಲ್ಲಿ “ ಇಲ್ಲ ನಾವು ಅವರನ್ನು ಯಾರಿಗೂ ಕೊಡುವುದಿಲ್ಲ” ಎಂದು ಘನಿ ಅವರು ಬರೆದಿದ್ದರು. ಈ ಪಂದ್ಯ ನಮ್ಮೆಲ್ಲರಿಗೂ ನೆನಪಿನಲ್ಲುಳಿಯುವಂಥದ್ದಾಗಿದೆ. ಇರಲಿ, ಮೊದಲ ಪಂದ್ಯವಾದ್ದರಿಂದ ನೆನಪಿನಲ್ಲುಳಿಯುವುದು ಸಹಜವೇ. ಆದರೆ ನನಗೆ ಈ ಪಂದ್ಯ ಒಂದು ವಿಶೇಷ ಕಾರಣಕ್ಕೆ ನೆನಪಿನಲ್ಲುಳಿಯಲಿದೆ. ಭಾರತೀಯ ತಂಡ ಮಾಡಿರುವಂಥ ಕೆಲಸ ಇಡೀ ವಿಶ್ವಕ್ಕೆ ಒಂದು ಉದಾಹರಣೆಯಾಗಿದೆ. ಟ್ರೋಫಿ ತೆಗೆದುಕೊಳ್ಳುವಾಗ ಓರ್ವ ವಿಜೇತ ತಂಡ ಏನು ಮಾಡಬಲ್ಲದು – ಅವರು ಏನು ಮಾಡಿದರು! ಭಾರತೀಯ ತಂಡ ಟ್ರೋಫಿ ತೆಗೆದುಕೊಳ್ಳುವಾಗ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವಾಡಿದ ಅಫ್ಘಾನಿಸ್ಥಾನದ ತಂಡವನ್ನು ಆಹ್ವಾನಿಸಿದರು ಮತ್ತು ಎರಡೂ ತಂಡದವರು ಒಟ್ಟಿಗೇ ಫೋಟೊ ತೆಗೆಸಿಕೊಂಡರು. ಕ್ರೀಡಾ ಮನೋಭಾವ ಎಂದರೇನು,  ಕ್ರೀಡಾಪಟುತ್ವ ಎಂದರೇನು – ಎಂಬುದನ್ನು ಈ ಒಂದು ಘಟನೆಯಿಂದ ನಾವು ತಿಳಿದುಕೊಳ್ಳಬಹುದಾಗಿದೆ. ಕ್ರೀಡೆ ಎಂಬುದು ಸಮಾಜವನ್ನು ಒಗ್ಗೂಡಿಸುವ ಮತ್ತು ನಮ್ಮ ಯುವಕರಲ್ಲಿ ಹುದುಗಿದ ಕೌಶಲ್ಯ, ಪ್ರತಿಭೆಯ ಶೋಧದ ಉತ್ತಮ ಸಾಧನವಾಗಿದೆ. ಭಾರತ ಮತ್ತು  ಅಫ್ಘಾನಿಸ್ಥಾನದ ಎರಡೂ ತಂಡಗಳಿಗೆ ಅಭಿನಂದನೆಗಳು. ನಾವು ಮುಂದೆ ಕೂಡಾ ಇದೇ ರೀತಿ ಕ್ರೀಡಾ ಮನೋಭಾವದೊಂದಿಗೆ ಆಡುತ್ತೇವೆ ಮತ್ತು ಅಭಿವೃದ್ಧಿ ಸಾಧಿಸುತ್ತೇವೆ ಎಂದು ನನಗೆ ಭರವಸೆಯಿದೆ.

ನನ್ನ ಪ್ರಿಯ ದೇಶವಾಸಿಗಳೇ! ಇದೇ ಜೂನ್ 21 ಕ್ಕೆ ನಾಲ್ಕನೇ ಯೋಗ ದಿನದಂದು ಬೆರೆಯೇ ದೃಶ್ಯ ಕಂಡುಬಂತು. ಸಂಪೂರ್ಣ ವಿಶ್ವ ಒಂದಾಗಿದ್ದು ಕಂಡುಬಂತು. ವಿಶ್ವಾದ್ಯಂತ ಜನರು ಸಂಪೂರ್ಣ ಉತ್ಸಾಹ ಮತ್ತು ಉಲ್ಲಾಸದಿಂದ ಯೋಗಾಭ್ಯಾಸ ಮಾಡಿದರು. ಬ್ರೆಜಿಲ್‍ನಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಆಗಲಿ,ನ್ಯೂಯಾರ್ಕ್‍ನಲ್ಲಿರುವ ಸಂಯುಕ್ತ ರಾಷ್ಟ್ರಗಳ ಮುಖ್ಯ ಕಛೇರಿಯಲ್ಲಾಗಿರಲಿ, ಜಪಾನಿನ ನೌಕಾ ಬಲದ ಯುದ್ಧ ಹಡಗುಗಳಲ್ಲಾಗಲಿ ಎಲ್ಲೆಡೆ ಜನರು ಯೋಗವನ್ನು ಮಾಡುವುದು ಕಂಡುಬಂತು. ಸೌದಿ ಅರಬ್‍ನಲ್ಲಿ ಮೊದಲ ಬಾರಿಗೆ ಯೋಗದ ಐತಿಹಾಸಿಕ ಕಾರ್ಯಕ್ರಮ ಜರುಗಿತು. ಈ ಬಾರಿ ಮಹಿಳೆಯರು ಆಸನಗಳ ಪ್ರದರ್ಶನವನ್ನು ಮಾಡಿದರು ಎಂದು ತಿಳಿದುಬಂದಿದೆ. ಲಢಾಕ್‍ನ ಎತ್ತರದ ಮಂಜಿನಿಂದಾವೃತವಾದ ಶಿಖರಗಳಲ್ಲಿ ಭಾರತ ಮತ್ತು ಚೀನಾ ಸೈನಿಕರು ಒಟ್ಟಿಗೆ ಸೇರಿ ಯೋಗಾಭ್ಯಾಸ ಮಾಡಿದ್ದಾರೆ. ಯೋಗ ಎಲ್ಲ ಗಡಿಗಳನ್ನು ಮೀರಿ ಒಗ್ಗೂಡಿಸುವ ಕೆಲಸ ಮಾಡುತ್ತದೆ.  ಬಹಳಷ್ಟು ದೇಶಗಳ ಸಾವಿರಾರು ಉತ್ಸಾಹಿ ಜನರು ಜಾತಿ, ಧರ್ಮ, ಕ್ಷೇತ್ರ,ವರ್ಣ ಅಥವಾ ಲಿಂಗ ಎಂಬ ಭೇದಭಾವವನ್ನು ಮೆಟ್ಟಿ ಈ ಸಂದರ್ಭವನ್ನು ಒಂದು ಬಹು ದೊಡ್ಡ ಉತ್ಸವವನ್ನಾಗಿ ಮಾಡಿದರು. ವಿಶ್ವಾದ್ಯಂತದಿಂದ ಜನರು ಇಷ್ಟೊಂದು ಉತ್ಸಾಹದಿಂದ ಯೋಗ ದಿನದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದ ಮೇಲೆ ಭಾರತದಲ್ಲಿ ಅದರ ಉತ್ಸಾಹ ಹಲವು ಪಟ್ಟು ಹೆಚ್ಚಾಗಿರಲೇಬೇಕಲ್ಲವೇ. 

ನಮ್ಮ ರಕ್ಷಣಾ ಪಡೆ ಯೋಧರು ಜಲ, ಭೂಮಿ ಮತ್ತು ಅಂತರಿಕ್ಷ ಹೀಗೆ ಮೂರು ಸ್ಥಳದಲ್ಲಿ ಯೋಗಾಭ್ಯಾಸ ಮಾಡಿದ್ದನ್ನು ನೋಡಿ ದೇಶದ 125 ಕೋಟಿ ಜನರಿಗೆ ಹೆಮ್ಮೆಯೆನಿಸುತ್ತದೆ. ಕೆಲ ವೀರ ಯೋಧರು ಪನಡುಬ್ಬಿಯಲ್ಲಿ ಯೋಗ ಮಾಡಿದರೆ ಇನ್ನು ಕೆಲ ಯೋಧರು ಸಿಯಾಚಿನ್‍ನ ಮಂಜು ಮುಸುಕಿದ ಪರ್ವತಗಳ ಮೇಲೆ ಯೋಗಾಭ್ಯಾಸ ಮಾಡಿದರು. ವಾಯುಪಡೆಯ ನಮ್ಮ ಯೋಧರಂತೂ ಭೂಮಿಯಿಂದ 15 ಸಾವಿರ ಅಡಿ ಎತ್ತರದಲ್ಲಿ ಯೋಗಾಸನ ಮಾಡಿ, ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದರು. ಅವರು ವಿಮಾನದಲ್ಲಿ ಕುಳಿತು ಯೋಗ ಮಾಡದೇ ಗಾಳಿಯಲ್ಲಿ ತೇಲುತ್ತಾ ಯೋಗ ಮಾಡಿದ್ದು ವಿಶೇಷವಾಗಿತ್ತು. ಶಾಲೆಯಾಗಿರಲಿ, ಕಾಲೇಜು ಆಗಿರಲಿ, ಕಛೇರಿಯಾಗಿರಲಿ, ಉದ್ಯಾನವಾಗಿರಲಿ, ದೊಡ್ಡ ಕಟ್ಟಡವಾಗಿರಲಿ ಅಥವಾ ಆಟದ ಮೈದಾನವಾಗಿರಲಿ ಎಲ್ಲೆಡೆ ಯೋಗಾಭ್ಯಾಸ ನಡೆಯಿತು. ಅಹ್ಮದಾಬಾದ್‍ನ ಒಂದು ದೃಶ್ಯ ಮನಸೂರೆಗೊಳ್ಳುವಂತಿತ್ತು. ಸುಮಾರು750 ಜನ ದಿವ್ಯಾಂಗ ಸೋದರ ಸೋದರಿಯರು ಒಂದು ಸ್ಥಳದಲ್ಲಿ ಎಲ್ಲರೂ ಸೇರಿ ಯೋಗಾಭ್ಯಾಸ ಮಾಡಿ ವಿಶ್ವಕ್ಕೇ ಕೀರ್ತಿಯನ್ನು ತಂದರು. ಯೋಗ ಜಾತಿ, ಪಂಥ ಮತ್ತು ಭೌಗೋಳಿಕ ಮಿತಿಯನ್ನೂ ದಾಟಿ ವಿಶ್ವಾದ್ಯಂತ ಜನರನ್ನು ಒಗ್ಗೂಡಿಸಿ ಮಾಡುವಂಥ ಕೆಲಸ ಮಾಡಿದೆ. ಸಹಸ್ರಾರು ವರ್ಷಗಳಿಂದ ನಾವು ಅಳವಡಿಸಿಕೊಂಡಿರುವ, ನಮ್ಮ ಋಷಿ ಮುನಿಗಳು, ಸಂತರು ಯಾವುದಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರೋ  ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ಯೋಗ ಸರಿಯಾದ ರೀತಿಯಲ್ಲಿ ಸಾಧಿಸಿ ತೋರಿಸಿದೆ.  ಇಂದು ಯೋಗ ಕ್ಷೇಮ ಕ್ರಾಂತಿಯ ಕೆಲಸ ಮಾಡುತ್ತಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಈಗ ಆರಂಭಗೊಂಡಿರುವ ಯೋಗದಿಂದ ಕ್ಷೇಮ ಎಂಬ ಅಭಿಯಾನ ಮುಂದುವರಿಯುತ್ತದೆ ಎಂದು ನಾನು ಆಶಿಸುತ್ತೇನೆ. ಹೆಚ್ಚೆಚ್ಚು ಜನರು ಇದನ್ನು ತಮ್ಮ ಜೀವನದ ಅಂಗವನ್ನಾಗಿಸಿಕೊಳ್ಳುವರು. 

ನನ್ನ ಪ್ರಿಯ ದೇಶಬಾಂಧವರೇ, ಮೈ ಗೌ ಮತ್ತು ನರೇಂದ್ರ ಮೋದಿ ಆಪ್‍ನಲ್ಲಿ ಈ ಬಾರಿಯ ಮನದ ಮಾತಿನಲ್ಲಿ ಮುಂಬರುವ ಜುಲೈ 1 ರಂದು ಬರಲಿರುವ ವೈದ್ಯರ ದಿನಾಚರಣೆ ಬಗ್ಗೆ ಮಾತನಾಡಿ ಎಂದು ಬಹಳ ಜನ ಬರೆದಿದ್ದಾರೆ. ಸರಿಯಾಗಿದೆ. ಕಷ್ಟ ಕಾಲದಲ್ಲೇ ನಮಗೆ ವೈದ್ಯರು ನೆನಪಾಗುತ್ತಾರೆ ಆದರೆ ಇದು,ಸಂಪೂರ್ಣ ದೇಶ ವೈದ್ಯರ ಸಾಧನೆಗಳನ್ನು ಆಚರಣೆ ಮಾಡುವಂಥ ದಿನವಾಗಿದೆ ಮತ್ತು ಸಮಾಜಕ್ಕೆ ಅವರು ನೀಡಿದ ಸೇವೆ ಮತ್ತು ಸಮರ್ಪಣೆಗೆ ಅವರಿಗೆ ಅನಂತ ಧನ್ಯವಾದಗಳನ್ನು ಅರ್ಪಿಸುವ ದಿನವಾಗಿದೆ.

ನಾವು ಸ್ವಭಾವತಃ ತಾಯಿಯನ್ನು ದೇವರೆಂದು ಪೂಜಿಸುವವರಾಗಿದ್ದೇವೆ. ದೇವರ ಸಮ ಎಂದು ಭಾವಿಸುತ್ತೇವೆ ಏಕೆಂದರೆ ತಾಯಿ ನಮಗೆ ಜನ್ಮ ನೀಡುತ್ತಾಳೆ. ತಾಯಿ ನಮಗೆ ಜನ್ಮ ನೀಡಿದರೆ ವೈದ್ಯರು ನಮಗೆ ಎಷ್ಟೋ ಸಲ ಪುನರ್ಜನ್ಮ ನೀಡುತ್ತಾರೆ. ವೈದ್ಯರ ಪಾತ್ರ ಕೇವಲ ರೋಗವನ್ನು ಗುಣಪಡಿಸುವವರೆಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯವಾಗಿ ವೈದ್ಯರು ಕುಟುಂಬದ ಸ್ನೇಹಿತರಂತೆ ಇರುತ್ತಾರೆ. ನಮ್ಮ ಜೀವನ ಶೈಲಿಯ ಮಾರ್ಗದರ್ಶಕರಾಗಿರುತ್ತಾರೆ – “They not only cure but also heal” ವೈದ್ಯರ ಬಳಿ ವೈದ್ಯಕೀಯ ಪರಿಣಿತಿಯಂತೂ ಇದ್ದೇ ಇರುತ್ತದೆ ಜೊತೆಗೆ ಸಾಮಾನ್ಯ ಜೀವನ ಶೈಲಿಯ ರೂಢಿಗಳ ಬಗ್ಗೆ, ಅವು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತವೆ ಇದೆಲ್ಲದರ ಬಗ್ಗೆ ಆಳವಾದ ಅನುಭವವು ಇರುತ್ತದೆ. ಭಾರತೀಯ ವೈದ್ಯರು ತಮ್ಮ ಸಾಮಥ್ರ್ಯ ಮತ್ತು ಕೌಶಲ್ಯದಿಂದಾಗಿ ವಿಶ್ವದೆಲ್ಲೆಡೆ ಹೆಸರು ಗಳಿಸಿದ್ದಾರೆ.  ವೈದ್ಯ ವೃತ್ತಿಯಲ್ಲಿ ಪಾಂಡಿತ್ಯ ಮತ್ತು ಕಠಿಣ ಪರಿಶ್ರಮ ಸಾಧಿಸಿರುವುದರ ಜೊತೆಗೆ ನಮ್ಮ ವೈದ್ಯರು ಜಟಿಲ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಹೆಸರುವಾಸಿಯಾಗಿದ್ದಾರೆ. ಮನದ ಮಾತಿನ ಮೂಲಕ ನಾನು ಎಲ್ಲ ದೇಶಬಾಂಧವರ ಪರವಾಗಿ ಮುಂಚಿತವಾಗಿಯೇ ನನ್ನೆಲ್ಲ ವೈದ್ಯ ಮಿತ್ರರಿಗೆ ಜುಲೈ 1 ರಂದು ಆಚರಿಸುವ ವೈದ್ಯರ ದಿನದ ಶುಭಾಷಯ ತಿಳಿಸುತ್ತೇನೆ. 

ನನ್ನ ಪ್ರಿಯ ದೇಶಬಾಂಧವರೇ, ಭಾರತದಲ್ಲಿ ಜನಿಸಿದ ನಾವು ಎಂಥ  ಭಾಗ್ಯಶಾಲಿಗಳು. ಭಾರತದ ಇತಿಹಾಸ ಎಷ್ಟು ಸಮೃದ್ಧವಾಗಿದೆ ಎಂದರೆ ಒಂದಲ್ಲಾ ಒಂದು ಐತಿಹಾಸಿಕ ಘಟನೆ ಘಟಿಸಿರದ  ಯಾವುದೇ ದಿನವಾಗಲಿ ಅಥವಾ ಯಾವುದೇ ತಿಂಗಳು ಆಗಲಿ ಇಲ್ಲ. ಹಾಗೆ ನೋಡಿದರೆ ಭಾರತದ ಪ್ರತಿ ಸ್ಥಳಕ್ಕೂ ತನ್ನದೇ ಆದ ಪರಂಪರೆಯಿದೆ. ಆ ಸ್ಥಳಕ್ಕೆ ಸಂಬಂಧಿಸಿದ ಯಾರೋ ಸಂತರಿದ್ದಾರೆ, ಮಹಾಪುರುಷರಿದ್ದಾರೆ, ಯಾರೋ ಪ್ರಸಿದ್ಧ ವ್ಯಕ್ತಿಗಳಿದ್ದಾರೆ ಎಲ್ಲರದೂ ಅವರದೇ ಆದ ಪಾಲುದಾರಿಕೆಯಿದೆ, ಅವರದ್ದೇ ಆದ ಶ್ರೇಷ್ಠತೆಯಿದೆ.

“ಪ್ರಧಾನಮಂತ್ರಿಯವರೇ ನಮಸ್ಕಾರ! ನಾನು ಡಾಕ್ಟರ್ ಸುರೇಂದ್ರ ಮಿಶ್ರ್ರ ಮಾತನಾಡುತ್ತಿದ್ದೇನೆ. ನೀವು ಜೂನ್ 28 ರಂದು ಮಗಹರ್ ಗೆ ಬರುತ್ತಿರುವಿರಿ ಎಂದು ನಮಗೆ ತಿಳಿದುಬಂದಿದೆ. ನಾನು ಮಗಹರ್ ಪಕ್ಕದ ಗೋರಖಪುರದ ಒಂದು ಪುಟ್ಟ ಗ್ರಾಮ ಟಡವಾ ನಿವಾಸಿಯಾಗಿದ್ದೇನೆ. ಮಗಹರ್ ಕಬೀರ್ ಅವರ ಸಮಾಧಿ ಸ್ಥಳವಾಗಿದೆ ಮತ್ತು ಇಲ್ಲಿ ಜನರು ಕಬೀರ್ ರನ್ನು ಸಾಮಾಜಿಕ ಸಾಮರಸ್ಯಕ್ಕಾಗಿ ಸ್ಮರಿಸುತ್ತಾರೆ ಹಾಗೂ ಪ್ರತಿ ಹಂತದಲ್ಲೂ ಕಬೀರ್ ರ ವಿಚಾರಧಾರೆಗಳ ಚರ್ಚೆಯಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ಕಾರ್ಯ ಯೋಜನೆಗಳು ಸಮಾಜದ ಎಲ್ಲ ಘಟ್ಟಗಳಲ್ಲಿ ಸಾಕಷ್ಟು ಪ್ರಭಾವ ಬೀರಲಿವೆ. ಭಾರತ ಸರ್ಕಾರದ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿಕೊಡಬೇಕೆಂದು ತಮ್ಮನ್ನು ಕೇಳಿಕೊಳ್ಳುತ್ತೇನೆ.”

ನಿಮ್ಮ ದೂರವಾಣಿ ಕರೆಗೆ ಅನಂತ ಧನ್ಯವಾದಗಳು. ನಾನು ಜೂನ್ 28 ರಂದು ಮಗಹರ್ ಗೆ ಬರುತ್ತಿರುವುದು ನಿಜ ಮತ್ತು ನಿಮಗೆ ಗುಜರಾತ್‍ನ ಕಬೀರ್‍ವಡದ ಬಗ್ಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ, ನಾನು ಗುಜರಾತ್‍ನಲ್ಲಿದ್ದಾಗ, ನಾನು ಅಲ್ಲಿ ಕೆಲಸ ಮಾಡುತ್ತಿದ್ದಾಗ ಸಂತ ಕಬೀರ್ ರ ಪರಂಪರೆಯೊಂದಿಗೆ ಒಗ್ಗೂಡಿದ ಜನರ ಒಂದು ಮಹಾ ರಾಷ್ಟ್ರೀಯ ಅಧಿವೇಶನವನ್ನೂ ಆಯೋಜಿಸಿದ್ದೆ. ನಿಮಗೆಲ್ಲ ಕಬೀರರು ಮಗಹರ್ ಗೆ ತೆರಳಿದ್ದು ಏಕೆ ಎಂಬುದು ತಿಳಿದಿದೆ. ಅಂದು ಮಗಹರ್ ನಲ್ಲಿ ಯಾರದೇ ಮೃತ್ಯುವಾದರೆ ಅವರಿಗೆ ಸ್ವರ್ಗ ಲಭಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ಕಾಶಿಯಲ್ಲಿ ಮರಣ ಹೊಂದುವವರು ಸ್ವರ್ಗಕ್ಕೆ ಸೇರುತ್ತಾರೆ ಎಂಬ ನಂಬಿಕೆ ಇತ್ತು. ಮಗಹರ್ ನ್ನು ಅಪವಿತ್ರ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಸಂತ ಕಬೀರರು ಇದನ್ನು ನಂಬುತ್ತಿರಲಿಲ್ಲ. ತಮ್ಮ ಕಾಲದ ಇಂಥ ಅನಿಷ್ಠ ಪದ್ಧತಿಗಳು ಮತ್ತು ಮೂಢನಂಬಿಕೆಗಳನ್ನು ತೊಡೆದು ಹಾಕಲು ಶ್ರಮಿಸಿದರು ಮತ್ತು ಅದಕ್ಕಾಗಿಯೇ  ಮಗಹರ್ ಗೆ ತೆರಳಿದರು ಮತ್ತು ಅಲ್ಲಿಯೇ ಸಮಾಧಿ ಹೊಂದಿದರು. ಸಂತ ಕಬೀರರು ತಮ್ಮ ರಚನೆಗಳು ಮತ್ತು ದ್ವಿಪದಿಗಳ ಮೂಲಕ ಸಾಮಾಜಿಕ ಸಮಾನತೆ, ಶಾಂತಿ ಮತ್ತು ಸೋದರತ್ವಕ್ಕೆ ಪುಷ್ಟಿ ನೀಡಿದರು. ಇವೇ ಅವರ ಆದರ್ಶಗಳಾಗಿದ್ದವು. ಅವರ ರಚನೆಗಳಲ್ಲಿ ಇದೇ ಆದರ್ಶ ಎದ್ದು ಕಾಣುತ್ತದೆ. ಇಂದಿನ ಯುಗದಲ್ಲೂ ಅವರು ಅಷ್ಟೇ ಪ್ರೇರಣಾದಾಯಕರಾಗಿದ್ದಾರೆ. ಅವರ ಒಂದು ದ್ವಿಪದಿ :

ಕಬೀರ್ ಸೋಇ ಪೀರ್ ಹೈ, ಜೊ ಜಾನೆ ಪರ್ ಪೀರ್

ಜೋ ಪರ್ ಪೀರ್ ನ ಜಾನಹಿ ಸೋ ಕಾ ಪೀರ್ ಮೆ ಪೀರ್

 

ಅಂದರೆ ಇದರ ಅರ್ಥ ಇತರರ ಕಷ್ಟಗಳನ್ನು ಅರಿಯಬಲ್ಲವನೇ ನಿಜವಾದ ಯೋಗಿ, ಯಾರು ಇತರರ ದುಖಃಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ನಿಷ್ಠರರು ಎಂದು.

ಕಬೀರರು ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರು ದೂರದೃಷ್ಟಿಯ ವಿಚಾರವಂತರಾಗಿದ್ದರು. ವಿಶ್ವದಲ್ಲಿ ಅವನತಿ ಮತ್ತು ಸಂಘರ್ಷದ ಕಾಲಘಟ್ಟದಲ್ಲಿ ಅವರು ಶಾಂತಿ ಮತ್ತು ಸದ್ಭಾವನೆಯ ಸಂದೇಶ ಸಾರಿದರು. ವಿಶ್ವದ ಮನುಕುಲವನ್ನು ಒಗ್ಗೂಡಿಸಿ ಮತಭೇದವನ್ನು ತೊಡೆದು ಹಾಕುವ ಕೆಲಸ ಮಾಡಿದರು.

ಜಗ್ ಮೆ ಬೈರಿ ಕೋಯಿ ನಹಿ ಜೊ ಮನ್ ಶೀಲಲ್ ಹೋಯ್

ಯೆ ಆಪಾ ತೊ ಡಾಲ್ ದೆ ದಯಾ ಕರೆ ಸಬ್ ಕೊಇ

 

ಇನ್ನೊಂದು ದ್ವಿಪದಿಯಲ್ಲಿ ಕಬೀರರು ಬರೆಯುತ್ತಾರೆ

 

ಜಹಾ ದಯಾ ತಹಂ ಧರ್ಮ ಹೈ, ಜಹಾ ಲೋಭ ತಹಂ ಪಾಪ

ಜಹಾ ಕ್ರೋಧ ತಹಂ ಕಾಲ ಹೈ. ಆಹಾ ಕ್ಷಮಾ ತಹಂ ಆಪ್

 

ಅವರು ಹೇಳುತ್ತಾರೆ: -

 

“ಸಾಧು ಸಂತರ ಜಾತಿಯನ್ನು ಕೇಳಬೇಡಿ ಅವರಿಂದ ಜ್ಞಾನವನ್ನು ಪಡೆಯಿರಿ” ಎಂದು. ಎಲ್ಲರೂ ಜಾತಿ ಧರ್ಮಕ್ಕಿಂತ ಮಿಗಿಲಾಗಿ ಜನರನ್ನು ಅವರ ಜ್ಞಾನದ ಬಲದಿಂದ ಪರಿಗಣಿಸಿ, ಅವರನ್ನು ಗೌರವಿಸಿ ಎಂದು ಕಬೀರರು ಜನರಿಗೆ ಮನವಿ ಮಾಡಿದರು. ಇಂದಿಗೂ ಅವರ ಮಾತುಗಳು ಅಷ್ಟೇ ಪ್ರಭಾವಯುತವಾಗಿವೆ. ಈಗ ನಾವು ಸಂತ ಕಬೀರರ ಬಗ್ಗೆ ಮಾತನಾಡುತ್ತಿರುವಂತೆ ನನಗೆ ಅವರ ದ್ವಿಪದಿಯೊಂದು ನೆನಪಾಗುತ್ತಿದೆ. ಅದರಲ್ಲಿ ಅವರು ಹೇಳುತ್ತಾರೆ

“गुरु गोविन्द दोऊ खड़े, काके लागूं पांय |

 बलिहारी गुरु आपने, गोविन्द दियो बताय ||”

 

ಹೀಗಿದೆ ಗುರುವಿನ ಮಹಾತ್ಮೆ. ಇಂಥ ಒಬ್ಬ ಗುರುಗಳು ಜಗದ್ಗುರುಗಳು ಅಂದರೆ, ಗುರುನಾನಕ ದೇವರು. ಅವರು ಕೋಟ್ಯಾಂತರ ಜನರಿಗೆ ಸನ್ಮಾರ್ಗವನ್ನು ತೋರುತ್ತಾ ಸಾವಿರಾರು ವರ್ಷಗಳಿಂದ ಪ್ರೇರಣೆ ನೀಡುತ್ತಿದ್ದಾರೆ. ಗುರುನಾನಕ ದೇವರು ಸಮಾಜದಲ್ಲಿ ಮತೀಯ ಭೇದಭಾವ ತೊಲಗಿಸಲು ಮತ್ತು ಸಂಪೂರ್ಣ ಮನುಕುಲವನ್ನು ಒಂದು ಎಂದು ಪರಿಗಣಿಸಿ ಅಪ್ಪಿಕೊಳ್ಳುವ ಬೋಧನೆ ಮಾಡಿದರು. ಗುರುನಾನಕರು ಬಡವರು ಮತ್ತು ಅವಶ್ಯಕತೆಯಿರುವವರ ಸೇವೆಯನ್ನೇ ಭಗವಂತನ ಸೇವೆ ಎನ್ನುತ್ತಿದ್ದರು. ಅವರು ಎಲ್ಲೆಲ್ಲಿ ಹೋದರೋ ಅಲ್ಲೆಲ್ಲ ಸಮಾಜದ ಏಳ್ಗೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡರು. ಯಾವುದೇ ಜಾತಿ, ಪಂಥ, ಧರ್ಮ ಅಥವಾ ಸಂಪ್ರದಾಯದ ವ್ಯಕ್ತಿ ಬಂದು ಊಟ ಮಾಡುವಂಥ ಸಾಮಾಜಿಕ ಭೇದಭಾವದಿಂದ ಮುಕ್ತವಾದ ಅಡುಗೆ ಮನೆ ವ್ಯವಸ್ಥೆ ಮಾಡಿದರು. ಗುರುನಾನಕ ದೇವರೇ ಲಂಗರ್ ವ್ಯವಸ್ಥೆಯನ್ನು ಆರಂಭಿಸಿದವರು. 2019ರಲ್ಲಿ ಗುರುನಾನಕ ದೇವರ 550 ನೇ ವರ್ಧಂತಿ ಆಚರಣೆ ಕೈಗೊಳ್ಳಲಾಗುವುದು. ನಾವೆಲ್ಲರೂ ಸಂಪೂರ್ಣ ಉತ್ಸಾಹ ಉಲ್ಲಾಸದಿಂದ ಇದರಲ್ಲಿ ಪಾಲ್ಗೊಳ್ಳೋಣ ಎಂದು ನಾನು ಬಯಸುತ್ತೇನೆ.  ಗುರುನಾನಕ ದೇವರ550 ನೇ ವರ್ಧಂತಿಯನ್ನು ಸಮಾಜದಲ್ಲಿ ಮತ್ತು ಸಂಪೂರ್ಣ ವಿಶ್ವದಲ್ಲಿ ಹೇಗೆ ಆಚರಿಸೋಣ ಎಂಬುದರ ಬಗ್ಗೆ ಹೊಸ ಹೊಸ ವಿಚಾರಗಳು, ಹೊಸ ಹೊಸ ಸಲಹೆಗಳು, ಹೊಸ ಹೊಸ ಕಲ್ಪನೆಗಳು ಹೇಗಿರಬೇಕು ಎಂಬುದರ ಬಗ್ಗೆ ಆಲೋಚಿಸೋಣ, ಸಿದ್ಧತೆಗಳನ್ನು ಕೈಗೊಳ್ಳೋಣ ಮತ್ತು ಅತ್ಯಂತ ಗೌರವದಿಂದ ನಾವೆಲ್ಲ ಸೇರಿ ಈ ವರ್ಧಂತಿಯನ್ನು ಪ್ರೇರಣಾ ಪರ್ವವನ್ನಾಗಿ ಮಾಡೋಣ.  

 

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಸ್ವಾತಂತ್ರ್ಯದ ಸಂಗ್ರಾಮವು ಬಹಳ ಸುದೀರ್ಘವಾದದ್ದು,ವ್ಯಾಪಕವಾಗಿದೆ, ಬಹಳ ಆಳವಾಗಿದೆ ಮತ್ತು ಅಸಂಖ್ಯ ಹುತಾತ್ಮರಿಂದ ತುಂಬಿಕೊಂಡಿದೆ. ಪಂಜಾಬಿನೊಂದಿಗೆ ಇನ್ನೊಂದು ಇತಿಹಾಸ ತಳುಕು ಹಾಕಿಕೊಂಡಿದೆ. 2019 ಕ್ಕೆ ಇಡೀ ಮನುಕುಲವನ್ನೇ ಮುಜುಗರಕ್ಕೀಡುಮಾಡಿದ ಜಲಿಯನ್ ವಾಲಾ ಬಾಗ್ ನ ಆ ಭಯಾನಕ ಘಟನೆಗೆ ಸಹ 100 ವರ್ಷಗಳಾಗುತ್ತಿವೆ. ಅಧಿಕಾರದ ದುರುಪಯೋಗವನ್ನು ಮಾಡಿಕೊಂಡು ಕ್ರೂರತೆಯ ಎಲ್ಲಾ ಎಲ್ಲೆಗಳನ್ನು ಮೀರಿ ನಿರ್ದೋಷಿಗಳಾದ,ನಿಶ್ಶಸ್ತ್ರರಾಗಿದ್ದ ಮುಗ್ಧ ಜನರ ಮೇಲೆ ಗುಂಡು ಹಾರಿಸಿದ 1919 ರ ಏಪ್ರಿಲ್ 13 ರ ಆ ಕರಾಳ ದಿನವನ್ನು ಯಾರು ಮರೆಯಬಲ್ಲರು? ಈ ಘಟನೆಗೆ 100 ವರ್ಷಗಳಾಗುತ್ತಿವೆ. ಇದನ್ನು ನಾವು ಹೇಗೆ ಸ್ಮರಿಸುವುದು ಎನ್ನುವುದರ ಬಗ್ಗೆ ನಾವು ಯೋಚಿಸಬಹುದು, ಆದರೆ ಈ ಘಟನೆಯು ನೀಡಿದ ಅಮರ ಸಂದೇಶವನ್ನು ನಾವು ಯಾವಾಗಲೂ ನೆನಪಿಟ್ಟುಕೊಳ್ಳಬೇಕು. ಈ ಹಿಂಸೆ ಮತ್ತು ಕ್ರೂರತೆಯಿಂದ ಎಂದಿಗೂ ಯಾವ ಸಮಸ್ಯೆಗೂ ಪರಿಹಾರ ದೊರಕುವುದಿಲ್ಲ. ಜಯವು ಯಾವಾಗಲೂ ಶಾಂತಿ ಮತ್ತು ಅಹಿಂಸೆಯದೇ ಆಗಿರುತ್ತದೆ; ತ್ಯಾಗ ಮತ್ತು ಬಲಿದಾನದ್ದೇ ಆಗಿರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ದೆಹಲಿಯ ರೋಹಿಣಿಯ ಶ್ರೀಯುತ ರಮಣ್ ಕುಮಾರ್ ರವರು ‘‘Narendra Modi Mobile App’ನಲ್ಲಿ, ಬರುವ ಜುಲೈ 6 ರಂದು ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಜನ್ಮದಿನವಾಗಿದ್ದು, ಈ ಕಾರ್ಯಕ್ರಮದಲ್ಲಿ ನಾನು  ಡಾ. ಶ್ಯಾಮಾ ಪ್ರಸಾದ್ ಮುಖರ್ಜಿಯವರ ಬಗ್ಗೆ ದೇಶವಾಸಿಗಳ ಜೊತೆ ಮಾತನಾಡಬೇಕೆಂದು ಬರೆದಿದ್ದಾರೆ. ರಮಣ್ ರವರೇ, ಎಲ್ಲಕ್ಕಿಂತ ಮೊದಲು ನಿಮಗೆ ಅನಂತಾನಂತ ಧನ್ಯವಾದಗಳು. ಭಾರತದ ಇತಿಹಾಸದಲ್ಲಿ ತಮ್ಮ ಅಭಿರುಚಿಯನ್ನು ನೋಡಿ ಬಹಳ ಸಂತೋಷವಾಯಿತು. ನಿನ್ನೆ ಅಂದರೆ 23 ನೇ ಜೂನ್ ರಂದು ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಪುಣ್ಯತಿಥಿ ಎಂದು ನಿಮಗೆ ಗೊತ್ತಿರಬಹುದು.  ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರು ಬಹಳಷ್ಟು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿ ಇದ್ದರು, ಆದರೆ ಅವರಿಗೆ ಎಲ್ಲಕ್ಕಿಂತ ಹತ್ತಿರವಿದ್ದ ಕ್ಷೇತ್ರಗಳೆಂದರೆ ಶಿಕ್ಷಣ,ಆಡಳಿತ ಮತ್ತು ಸಂಸದೀಯ ವ್ಯವಹಾರಗಳು. ಕೋಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಅತಿ ಕಿರಿಯ ವಯಸ್ಸಿನ ಉಪಕುಲಪತಿಗಳಾಗಿದ್ದರು ಎನ್ನವುದು ಬಹಳ ಕಡಿಮೆ ಜನರಿಗೆ ತಿಳಿದಿರುವ ವಿಚಾರ. ಅವರು ಉಪಕುಲಪತಿಗಳಾದಾಗ ಅವರ ವಯಸ್ಸು ಬರೀ 33 ವರ್ಷಗಳು.  ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಆಮಂತ್ರಣದ ಮೇರೆಗೆ ಶ್ರೀ ಗುರುದೇವ ರವೀಂದ್ರನಾಥ ಟ್ಯಾಗೋರ್ ರವರು 1937 ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಬಂಗಾಳಿ ಭಾಷೆಯಲ್ಲಿ ಮಾತನಾಡಿದರು. ಬ್ರೀಟಿಷರ ಆಳ್ವಿಕೆಯ ಸಮಯದಲ್ಲಿ, ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಯಾರಾದರೊಬ್ಬರು ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದೇ ಆಗಿದ್ದರೆ ಅದು ಇದೇ ಮೊದಲು.  1947 ರಿಂದ 1950 ರ ವರೆಗೆ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರು ಭಾರತದ ಮೊದಲ ಕಾರ್ಮಿಕ ಸಚಿವರಾಗಿದ್ದರು ಮತ್ತು ಒಂದು ಅರ್ಥದಲ್ಲಿ ಹೇಳುವುದಾದರೆ ಅವರು ಭಾರತದ ಮತ್ತು ಔದ್ಯೋಗಿಕ ವಿಕಾಸದ ಗಟ್ಟಿಮುಟ್ಟಾದ ನೆಲೆಗಟ್ಟನ್ನು ಹಾಕಿಕೊಟ್ಟರು. ಮಜಬೂತಾದ ತಳಹದಿ ಹಾಕಿದರು; ಒಂದು ಗಟ್ಟಿಯಾದ ವೇದಿಕೆಯನ್ನು ತಯಾರುಗೊಳಿಸಿದರು. 1948 ರಲ್ಲಿ ಬಂದ ಸ್ವತಂತ್ರ ಭಾರತದ ಮೊದಲ ಔದ್ಯೋಗಿಕ ನೀತಿಯು ಅವರ ಪರಿಕಲ್ಪನೆ ಮತ್ತು ದೂರದೃಷ್ಟಿಯ ಛಾಯೆಯನ್ನು ಹೊತ್ತುಕೊಂಡೇ ಬಂದಿತ್ತು. ಭಾರತವು ಪ್ರತಿ ಕ್ಷೇತ್ರದಲ್ಲೂ ಔದ್ಯೋಗಿಕವಾಗಿ ಸ್ವಾವಲಂಬಿಯಾಗಿ, ಕೌಶಲ್ಯ ಹೊಂದಿ ಸಮೃದ್ಧಿಯಾಗಬೇಕು ಎನ್ನುವುದು ಡಾ. ಮುಖರ್ಜಿಯವರ ಕನಸಾಗಿತ್ತು. ಭಾರತವು ದೊಡ್ಡ ಉದ್ದಿಮೆಗಳನ್ನು ಬೆಳೆಸುವುದರ ಜೊತೆಗೆ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು, ಕೈಮಗ್ಗ, ಜವಳಿ ಮತ್ತು ಗುಡಿ ಕೈಗಾರಿಕೆ ಬಗ್ಗೆಯೂ ಸಹ ಗಮನಹರಿಸಬೇಕು ಎನ್ನುವುದನ್ನು ಅವರು ಬಯಸುತ್ತಿದ್ದರು. ಗ್ರಾಮೀಣ ಮತ್ತು ಲಘು ಉದ್ದಿಮೆಗಳ ಸರಿಯಾದ ಅಭಿವೃದ್ಧಿಗೆ ಅವುಗಳಿಗೆ ಅರ್ಥಿಕ ಸಹಾಯ ಮತ್ತು ಸಂಸ್ಥೆಗಳ ರೂಪ ಕೊಡಬೇಕು ಎನ್ನುವ ಉದ್ದೇಶದಿಂದ 1948 ರಿಂದ1950 ರ ನಡುವೆ  All India Handicrafts Board, All India Handloom Board ಮತ್ತುKhadi & Village Industries Board ಇವುಗಳ ಸ್ಥಾಪನೆಯನ್ನು ಮಾಡಲಾಯಿತು. ಭಾರತದ ಸೇನಾ ಉತ್ಪಾದನೆಗಳ ಸ್ವದೇಶೀಕರಣದ ಬಗ್ಗೆಯೂ ಡಾ. ಮುಖರ್ಜಿಯವರು ವಿಶೇಷವಾಗಿ ಒತ್ತು ಕೊಟ್ಟಿದ್ದರು. ಎಲ್ಲಕ್ಕಿಂತ ಸಫಲವಾದ ನಾಲ್ಕು ದೊಡ್ಡ ಯೋಜನೆಗಳಾದ Chittaranjan locomotive works factory, Hindustan aircraft factory, ಸಿಂದರಿ ಯ ಗೊಬ್ಬರ ಕಾರ್ಖಾನೆ, ದಾಮೋದರ್ ವ್ಯಾಲಿ ನಿಗಮ ಹಾಗೂ ಮತ್ತೊಂದೆಡೆ ನದಿ ಕಣಿವೆ ಯೋಜನೆಗಳ ಸ್ಥಾಪನೆಗಳಲ್ಲಿ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಕೊಡುಗೆ ಬಹಳ ದೊಡ್ಡದು. ಪಶ್ಚಿಮ ಬಂಗಾಳದ ಅಭಿವೃದ್ಧಿಯ ಬಗ್ಗೆ ಅವರು ಬಹಳ ಉತ್ಸುಕರಾಗಿದ್ದರು. ಅವರ ತಿಳುವಳಿಕೆ, ಆತ್ಮಸಾಕ್ಷಿ ಮತ್ತು ಸಕ್ರಿಯತೆಯ ಪರಿಣಾಮವಾಗಿ ಬಂಗಾಳದ ಒಂದು ಭಾಗವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಮತ್ತು ಅದು ಇಂದಿಗೂ ಕೂಡ ಭಾರತದ ಭಾಗವಾಗಿದೆ. ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರಿಗೆ ಎಲ್ಲಕ್ಕಿಂತ ಮಹತ್ವಪೂರ್ಣವಾದದ್ದೆಂದರೆ ಅದು ಭಾರತದ ಅಖಂಡತೆ ಮತ್ತು ಏಕತೆ – ಇದಕ್ಕಾಗಿಯೇ 52 ನೇ ವರ್ಷದ ಸಣ್ಣ  ವಯಸ್ಸಿನಲ್ಲಿಯೇ ಅವರು ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಬನ್ನಿ, ನಾವೆಲ್ಲರೂ ಯಾವಾಗಲೂ ಡಾ. ಶ್ಯಾಮಾಪ್ರಸಾದ್ ಮುಖರ್ಜಿಯವರ ಏಕತೆಯ ಸಂದೇಶವನ್ನು ನೆನಪಿಡೋಣ, ಒಳ್ಳೆಯ ಭಾವನೆ ಮತ್ತು ಸೋದರಭಾವದೊಂದಿಗೆ ಭಾರತದ ಪ್ರಗತಿಗಾಗಿ ತನು ಮನಗಳೊಂದಿಗೆ ಬೆಸೆದುಕೊಂಡಿರೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಕಳೆದ ಕೆಲವು ವಾರಗಳಲ್ಲಿ ಸರ್ಕಾರದ ವಿಭಿನ್ನ ಯೋಜನೆಗಳ ಫಲಾನುಭಾವಿಗಳೊಂದಿಗೆ ವೀಡಿಯೊ ಕರೆಗಳ ಮೂಲಕ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಕಡತಗಳಿಂದ ಹೊರಬಂದು ಜನರ ಜೀವನದಲ್ಲಿ ಏನು ಬದಲಾವಣೆಗಳು ಆಗುತ್ತಿವೆ ಎನ್ನುವುದರ ಬಗ್ಗೆ ನೇರವಾಗಿ ಅವರಿಂದಲೇ ತಿಳಿದುಕೊಳ್ಳುವ ಅವಕಾಶ ಸಿಕ್ಕಿತ್ತು. ಜನರು ತಮ್ಮ ಸಂಕಲ್ಪ, ತಮ್ಮ ಸುಖ-ದುಃಖ,ತಮ್ಮ ದೊರೆತ ಸೌಲಭ್ಯಗಳ ಬಗ್ಗೆ ಹೇಳಿದರು. ಇದು ನನಗೆ ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ, ಬದಲಿಗೆ ಇದು ಒಂದು ಬೇರೆ ರೀತಿಯ ಕಲಿಕೆಯ ಅನುಭವವಾಗಿತ್ತು. ಇದರ ಮುಖಾಂತರ ಜನರ ಮುಖದಲ್ಲಿ ಇರುವ ಆ ಖುಷಿಯನ್ನು ನೋಡಲು ಲಭ್ಯವಾಯಿತು. ಯಾರದೇ ಜೀವನದಲ್ಲಿ ಇದಕ್ಕಿಂತ ದೊಡ್ಡ ಸಂತೋಷದ ಕ್ಷಣ ಬೇರೆ ಏನಾಗಿರಬಹುದು? ಸಾಮಾನ್ಯರ  ಕಥೆಗಳನ್ನು ಕೇಳಿದಾಗ, ಅವರ ಮುಗ್ಧ ಮಾತುಗಳಲ್ಲಿ ತಮ್ಮ ಅನುಭವದ ಕಥೆಯನ್ನು ಹೇಳುತ್ತಿದ್ದಾಗ ಅದು ನನ್ನ ಹೃದಯ ಮುಟ್ಟುತ್ತಿತ್ತು.  ದೂರಾತಿದೂರದ ಹಳ್ಳಿಗಳಲ್ಲಿ ಹೆಣ್ಣುಮಕ್ಕಳು common service centre ನ ಮುಖಾಂತರ ಹಳ್ಳಿಯ ವೃದ್ಧರ ಪಿಂಚಣಿಯಿಂದ ಹಿಡಿದು ಪಾಸ್ ಪೋರ್ಟ್ ಮಾಡಿಸಿಕೊಡುವುದರ ತನಕ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಛತ್ತೀಸ್ ಗಡದ ಯಾರೋ ಸೋದರಿ ಸೀತಾಫಲವನ್ನು ಸಂಗ್ರಹಿಸಿ ಅದರ ಐಸ್ ಕ್ರೀಮ್ ಮಾಡಿಕೊಂಡು ಉದ್ಯೋಗ ಮಾಡುತ್ತಿರುವ ಬಗ್ಗೆ; ಜಾರ್ಖಂಡ್ ನಲ್ಲಿ ಅಂಜನ್ ಪ್ರಕಾಶ್ ರವರಂತಹ ದೇಶದ ಲಕ್ಷಾಂತರ ಯುವ ಜನರು ಔಷಧಿ ಕೇಂದ್ರಗಳನ್ನು ನಡೆಸುವುದರ ಜೊತೆಜೊತೆಗೆ ಅಕ್ಕಪಕ್ಕದ ಹಳ್ಳಿಗಳಿಗೆ ಹೋಗಿ ಸುಲಭ ದರದಲ್ಲಿ ಔಷಧಿಗಳು ಸಿಗುವಂತೆ ಮಾಡುತ್ತಿರುವುದರ ಬಗ್ಗೆ;  ಎರಡು ಮೂರು ವರ್ಷಗಳಿಂದ ಕೆಲಸ ಹುಡುಕುತ್ತಿದ್ದು ಈಗ ಸ್ವ ಉದ್ಯೋಗವನ್ನು ಸಫಲ ರೀತಿಯಲ್ಲಿ ಮಾಡುತ್ತಿರುವುದಷ್ಟೇ ಅಲ್ಲದೆ, ಹತ್ತು ಹದಿನೈದು ಜನರಿಗೆ ಕೆಲಸ ಕೊಟ್ಟಿರುವ ಪಶ್ಚಿಮ ಬಂಗಾಳದ ಒಬ್ಬ ಯುವಕನ ಬಗ್ಗೆ; ಇತ್ತ ತಮಿಳುನಾಡು, ಪಂಜಾಬ್, ಗೋವಾ ದ ಶಾಲೆಯ ಮಕ್ಕಳು ತಮ್ಮ ಚಿಕ್ಕ ವಯಸ್ಸಿನಲ್ಲಿ ಶಾಲೆಯ ಣiಟಿಞeಡಿiಟಿg ಟಚಿb ನಲ್ಲಿ ತ್ಯಾಜ್ಯ ನಿರ್ವಹಣೆಯಂತಹ ಮುಖ್ಯ ವಿಷಯಗಳ ಮೇಲೆ ಕೆಲಸಮಾಡುತ್ತಿರುವ ಬಗ್ಗೆ; ಹೀಗೆ ಇನ್ನೂ ಎಷ್ಟು ಕಥೆಗಳಿವೆಯೋ ಗೊತ್ತಿಲ್ಲ, ದೇಶದ ಯಾವ ಮೂಲೆಯಲ್ಲಿಯೂ ಜನರ ಸಫಲತೆಯ ಮಾತುಗಳನ್ನಾಡದಿರುವಂಥ ಸಂದರ್ಭವೇ ಇಲ್ಲ. ಈ ಇಡೀ ಕಾರ್ಯಕ್ರಮದಲ್ಲಿ ಸರಕಾರದ ಸಫಲತೆಗಿಂತ ಸಾಮಾನ್ಯ ಜನರ ಸಾಫಲ್ಯದ ಮಾತುಗಳು, ದೇಶದ ಶಕ್ತಿ, ನವಭಾರತದ ಕನಸಿನ ಶಕ್ತಿ, ನವಭಾರತದ ಸಂಕಲ್ಪದ ಶಕ್ತಿ – ಇವುಗಳನ್ನು ನಾನು ಅನುಭವಿಸುತ್ತಿದ್ದೆ ಎನ್ನುವುದು ನನಗೆ ಖುಷಿಯ ವಿಚಾರ. ಸಮಾಜದಲ್ಲಿ ಕೆಲವು ಜನರು ಎಂಥವರಿರುತ್ತಾರೆ ಎಂದರೆ ನಿರಾಶೆಯ ಮಾತುಗಳನ್ನಾಡದಿದ್ದರೆ, ಹತಾಶೆಯ ಮಾತುಗಳನ್ನಾಡದಿದ್ದರೆ, ಅಪನಂಬಿಕೆ ಹುಟ್ಟುಹಾಕುವ ಪ್ರಯತ್ನ ಮಾಡದಿದ್ದರೆ, ಬೆಸೆಯುವ ಬದಲು ಒಡೆಯುವ ದಾರಿಯನ್ನು ಹುಡುಕದಿದ್ದರೆ ಅವರಿಗೆ ಸಮಾಧಾನವಾಗುವುದಿಲ್ಲ. ಇಂತಹ ವಾತಾವರಣದಲ್ಲಿ ಸಾಮಾನ್ಯ ಜನರು ಹೊಸ ಆಸೆ, ಹೊಸ ಉತ್ಸಾಹ, ಮತ್ತು ತಮ್ಮ ಜೀವನದಲ್ಲಿ ಆಗಿಹೋದ ಘಟನೆಗಳ ಮಾತುಗಳನ್ನು ತೆಗೆದುಕೊಂಡು ಬರುತ್ತಾರೋ ಆಗ ಅದು ಸರಕಾರದ ಸಾಧನೆಯಾಗಿ ಉಳಿಯುವುದಿಲ್ಲ. ದೂರಾತಿದೂರದ ಒಂದು ಸಣ್ಣ ಹಳ್ಳಿಯ, ಒಂದು ಪುಟ್ಟ ಹುಡುಗಿಯ ಘಟನೆಯು ಕೂಡಾ 125 ಕೋಟಿ ದೇಶವಾಸಿಗಳಿಗೆ ಪ್ರೇರಣೆಯಾಗುತ್ತದೆ. ತಾಂತ್ರಿಕತೆಯ ನೆರವಿನಿಂದ, video bridge ನ ಮೂಲಕ ಫಲಾನುಭವಿಗಳ ಜೊತೆ ಸಮಯ ಕಳೆದ ಕ್ಷಣವು ನನಗೆ ತುಂಬಾ ಸಂತೋಷದಾಯಕ ಮತ್ತು ಬಹಳ ಪ್ರೇರಣಾದಾಯಕವಾಗಿದೆ ಮತ್ತು ಇದರಿಂದ ಕೆಲಸ ಮಾಡಿದ ಸಂತೋಷ ಸಿಗುವುದಷ್ಟೇ ಅಲ್ಲದೆ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವ ಉತ್ಸಾಹ ಸಹ ದೊರೆಯುತ್ತದೆ. ಬಡವರಲ್ಲಿ ಬಡವನಾದ ವ್ಯಕ್ತಿಗೆ ಜೀವನವನ್ನು ನಡೆಸಲು ಮತ್ತೊಂದು ಹೊಸ ಆನಂದ, ಮತ್ತೊಂದು ಹೊಸ ಉತ್ಸಾಹ, ಮತ್ತೊಂದು ಹೊಸ ಪ್ರೇರಣೆ ಸಿಗುತ್ತದೆ. ನಾನು ದೇಶವಾಸಿಗಳಿಗೆ ತುಂಬಾ ಅಭಾರಿಯಾಗಿದ್ದೇನೆ. 40 – 50 ಲಕ್ಷದಷ್ಟು ಜನರು video bridge ನ ಕಾರ್ಯಕ್ರಮದಲ್ಲಿ ಭಾಗವಹಿಸಿ ನನಗೆ ಹೊಸ ಶಕ್ತಿಯನ್ನು ಕೊಡುವ ಕೆಲಸವನ್ನು ಮಾಡಿದ್ದೀರಿ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ತಿಳಿಸಲು ಬಯಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಒಂದುವೇಳೆ ನಾವು ನಮ್ಮ ಸುತ್ತಮುತ್ತಲೂ ಗಮನಿಸಿದರೆ ಎಲ್ಲಿಯಾದರೂ ಏನಾದರೊಂದು ಒಳ್ಳೆಯದು ನಡೆಯುತ್ತಿರುತ್ತದೆ ಎನ್ನುವುದು ನನ್ನ ಅನುಭವಕ್ಕೆ ಬಂದಿದೆ. ಒಳ್ಳೆಯದನ್ನು ಮಾಡುವ ಜನರು ಇರುತ್ತಾರೆ. ಒಳ್ಳೆಯತನದ ಸುವಾಸನೆಯನ್ನು ನಾವೂ ಕೂಡ ಅನುಭವಿಸಬಹುದು. ಕೆಲವು ದಿನಗಳ ಹಿಂದೆ ಒಂದು ವಿಷಯ ನನಗೆ ತಿಳಿಯಿತು ಮತ್ತು ಇದು ಒಂದು ರೀತಿಯ ದೊಡ್ಡದಾದ, ಹೊಸದಾದ ಸಂಯೋಜನೆಯಾಗಿದೆ. ಇದರಲ್ಲಿ ಒಂದು ಕಡೆ ವೃತ್ತಿಪರರು ಮತ್ತು ಇಂಜಿನಿಯರ್ ಗಳಿದ್ದರೆ ಮತ್ತೊಂದೆಡೆ ಹೊಲದಲ್ಲಿ ಕೆಲಸ ಮಾಡುವ ವ್ಯವಸಾಯದೊಂದಿಗೆ ಬೆಸೆದುಕೊಂಡಿರುವ ನಮ್ಮ ರೈತ ಸೋದರ-ಸೋದರಿಯರಿದ್ದಾರೆ. ಇವೆರಡೂ ಖಡಾಖಂಡಿತವಾಗಿ ಬೇರೆ ಬೇರೆ ವೃತ್ತಿಗಳು, ಇವುಗಳ ಸಂಬಂಧ ಏನು ಎಂದು ನೀವು ಈಗ ಯೋಚಿಸುತ್ತಿರಬಹುದು. ಆದರೆ ಇದು ಹೀಗಿದೆ – ಬೆಂಗಳೂರಿನಲ್ಲಿ ಕಾರ್ಪೊರೇಟ್ ವೃತ್ತಿಪರರು, ಐ.ಟಿ. ಇಂಜಿನಿಯರ್ ಗಳು ಒಟ್ಟಿಗೆ ಬಂದರು. ಅವರು ಜೊತೆ ಸೇರಿ ‘ಸಹಜ್ ಸಮೃದ್ಧಿ’ ಎನ್ನುವ ಟ್ರಸ್ಟ್ ಮಾಡಿದ್ದಾರೆ. ರೈತರ ಆದಾಯ ಎರಡರಷ್ಟು ಮಾಡುವ ಉದ್ದೇಶದಿಂದ ಈ ಟ್ರಸ್ಟ್ ಗೆ ಚಾಲನೆ ನೀಡಿದರು. ಇವರು ರೈತರ ಜೊತೆ ಸೇರಿಕೊಂಡಿದ್ದಾರೆ, ಯೋಜನೆಗಳನ್ನು ಮಾಡುತ್ತಿದ್ದಾರೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸಫಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕೃಷಿಯ ಹೊಸ ವಿಧಾನಗಳನ್ನು ಕಲಿಸುವುದರ ಜೊತೆಜೊತೆಗೆ ಜೈವಿಕ ಕೃಷಿಯನ್ನು ಹೇಗೆ ಮಾಡಬೇಕು, ಜಮೀನಿನಲ್ಲಿ ಒಂದು ಫಸಲಿನ ಜೊತೆಜೊತೆಗೆ ಬೇರೆ ಫಸಲುಗಳನ್ನು ಹೇಗೆ ಬೆಳೆಯುವುದು ಎನ್ನುವುದರ ಬಗ್ಗೆ ಈ ಟ್ರಸ್ಟ್  ವೃತ್ತಿಪರರು,ಇಂಜಿನಿಯರ್ ಗಳು ಮತ್ತು ತಂತ್ರಜ್ಞ ರ ಮೂಲಕ ರೈತರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಮೊದಲಿಗೆ ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಒಂದೇ ಒಂದು ಫಸಲಿನ ಮೇಲೆ  ಅವಲಂಬಿತರಾಗಿರುತ್ತಿದ್ದರು. ಇಳುವರಿಯೂ ಹೆಚ್ಚು ಸಿಗುತ್ತಿರಲಿಲ್ಲ ಮತ್ತು ಹೆಚ್ಚು ಲಾಭವೂ ಸಿಗುತ್ತಿರಲಿಲ್ಲ. ಈಗ ಅವರು ತರಕಾರಿಗಳನ್ನು ಬೆಳೆಯುತ್ತಿರುವುದಷ್ಟೇ ಅಲ್ಲದೆ ಟ್ರಸ್ಟ್ ನ ಮೂಲಕ ತಮ್ಮ ತರಕಾರಿಗಳಿಗೆ ಮಾರುಕಟ್ಟೆ ಒದಗಿಸಿಕೊಂಡು ಒಳ್ಳೆಯ ಬೆಲೆಯನ್ನೂ ಪಡೆಯುತ್ತಿದ್ದಾರೆ. ಧಾನ್ಯಗಳನ್ನು ಉತ್ಪಾದಿಸುವ ರೈತರು ಕೂಡ ಇದರೊಂದಿಗೆ ಸೇರಿಕೊಂಡಿದ್ದಾರೆ. ಒಂದು ಕಡೆ ಫಸಲಿನ ಉತ್ಪಾದನೆಯಿಂದ ಹಿಡಿದು ಮಾರುಕಟ್ಟೆ ಒದಗಿಸುವವರೆಗೆ  ಪೂರ್ತಿ ಸರಪಳಿಯಲ್ಲಿ ರೈತರ ಪ್ರಮುಖ ಪಾತ್ರವಿದ್ದರೆ, ಮತ್ತೊಂದೆಡೆ ಬರುವ ಲಾಭದಲ್ಲಿ ರೈತರ ಭಾಗವಹಿಸುವಿಕೆ ಮತ್ತು ಹಕ್ಕನ್ನು ಕೊಡಿಸುವ ಪ್ರಯತ್ನ ಇದೆ. ಫಸಲು ಚೆನ್ನಾಗಿರಲು, ಅದಕ್ಕಾಗಿ ಒಳ್ಳೆಯ ತಳಿಯ ಬಿತ್ತನೆ ಬೀಜಗಳನ್ನು ದೊರಕಿಸಿಕೊಡಲು ಬೇರೆ ರೀತಿಯ ಸೀಡ್ ಬ್ಯಾಂಕ್ ಗಳನ್ನೂ ಮಾಡಲಾಗಿದೆ. ಮಹಿಳೆಯರು ಈ ಸೀಡ್ ಬ್ಯಾಂಕ್ ಗಳ ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ಮಹಿಳೆಯರನ್ನೂ ಇದರಲ್ಲಿ ಸೇರಿಸಿಕೊಳ್ಳಲಾಗಿದೆ. ಇಂತಹ ವಿನೂತನ ಪ್ರಯೋಗಕ್ಕೆ ನಾನು ಈ ಯುವಕರಿಗೆ ತುಂಬಾ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ವೃತ್ತಿಪರರು, ತಂತ್ರಜ್ಞರು, ಇಂಜಿನಿಯರ್ ಗಳ ಜಗತ್ತಿಗೆ ಸೇರಿರುವ ಈ ಯುವಕರು ತಮ್ಮ  ಮಿತಿಯಿಂದ ಹೊರಬಂದು ರೈತರ ಜೊತೆ ಬೆರೆಯುವುದು, ಹಳ್ಳಿಗಳ ಜೊತೆ ಬೆರೆಯುವುದು, ಕೃಷಿ ಮತ್ತು  ನೇಗಿಲಿನ ಜೊತೆ ಸೇರಿಕೊಳ್ಳುವ ಈ ದಾರಿಯನ್ನು ತಮ್ಮದನ್ನಾಗಿ ಮಾಡಿಕೊಂಡಿರುವುದು ನನಗೆ ತುಂಬಾ ಖುಷಿಯೆನಿಸುತ್ತದೆ. ನಾನು ಮತ್ತೊಮ್ಮೆ ನನ್ನ ದೇಶದ ಯುವ ಪೀಳಿಗೆಗೆ, ಅವರ ಈ ವಿನೂತನ ಪ್ರಯೋಗಗಳಿಗೆ, ಕೆಲವು ನನಗೆ ಗೊತ್ತಿರಬಹುದು, ಕೆಲವು ಗೊತ್ತಿಲ್ಲದಿರಬಹುದು, ಕೆಲವು ಜನರಿಗೆ ಗೊತ್ತಿರಬಹುದು, ಕೆಲವು ಗೊತ್ತಿಲ್ಲದಿರಬಹುದು, ಆದರೆ ಕೋಟ್ಯಾಂತರ ಜನರು ನಿರಂತರವಾಗಿ ಏನಾದರೊಂದು ಒಳ್ಳೆಯದನ್ನು ಮಾಡುತ್ತಿದ್ದಾರೆಯೋ ಅವರೆಲ್ಲರಿಗೂ ನನ್ನ ಕಡೆಯಿಂದ ತುಂಬಾ ಅಭಿನಂದನೆಗಳು. 

ನನ್ನ ಪ್ರೀತಿಯ ದೇಶವಾಸಿಗಳೇ, ಜಿ.ಎಸ್.ಟಿ. ಜಾರಿಗೆ ಬಂದು ಒಂದು ವರ್ಷವಾಗುತ್ತಿದೆ. ‘One Nation, One Tax’ ಎನ್ನುವುದು ದೇಶದ ಜನರ ಕನಸಾಗಿತ್ತೋ ಅದು ಇಂದು ನನಸಾಗಿದೆ. One Nation One Tax reform, ಇದಕ್ಕಾಗಿ ನಾನು ಇದರ ಸಂಪೂರ್ಣ ಕೀರ್ತಿಯನ್ನು ರಾಜ್ಯಗಳಿಗೆ ಕೊಡುತ್ತೇನೆ. ಜಿ.ಎಸ್.ಟಿ. Cooperative federalism ಇದಕ್ಕೆ ಒಂದು ಒಳ್ಳೆಯ ಉದಾಹರಣೆ. ಅಲ್ಲಿ ಎಲ್ಲಾ ರಾಜ್ಯಗಳೂ ಒಟ್ಟಾಗಿ ಸೇರಿ ದೇಶದ ಹಿತಕ್ಕಾಗಿ ನಿರ್ಧಾರ ತೆಗೆದುಕೊಂಡಿದ್ದರಿಂದ ದೇಶದಲ್ಲಿ ಇಷ್ಟು ದೊಡ್ಡ ತೆರಿಗೆ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವಾಯಿತು. ಇಲ್ಲಿಯವರೆಗೆ ಜಿ.ಎಸ್.ಟಿ.  Council ನ 27 ಸಭೆಗಳು ನಡೆದಿವೆ ಮತ್ತು ಅಲ್ಲಿ ಬೇರೆ ಬೇರೆ ರಾಜಕೀಯ ಸಿದ್ಧಾಂತದ ಜನರು ಕುಳಿತುಕೊಳ್ಳುತ್ತಾರೆ, ಬೇರೆ ಬೇರೆ ರಾಜ್ಯದ ಜನರು ಇರುತ್ತಾರೆ, ಬೇರೆ ಬೇರೆ priority ಇರುವ ರಾಜ್ಯಗಳು ಇರುತ್ತವೆ ಆದರೆ ಅದೆಲ್ಲವುಗಳ ನಡುವೆಯೂಜಿ.ಎಸ್.ಟಿ.  Councilನಲ್ಲಿ ಇದುವರೆಗೆ ಏನೇನು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆಯೋ ಅವೆಲ್ಲವೂ ಸರ್ವಾನುಮತದಿಂದ ತೆಗೆದುಕೊಳ್ಳಲಾಗಿದೆ. ಜಿ.ಎಸ್.ಟಿ ಜಾರಿಯಾಗುವ ಮುನ್ನ ದೇಶದಲ್ಲಿ 17 ಬೇರೆ ಬೇರೆ ರೀತಿಯ ತೆರಿಗೆಗಳು ಇರುತ್ತಿದ್ದವು ಆದರೆ ಈಗ ಈ ವ್ಯವಸ್ಥೆಯಲ್ಲಿ ಇಡೀ ದೇಶದಲ್ಲಿ ಒಂದೇ ತೆರಿಗೆಯನ್ನು ಜಾರಿಗೊಳಿಸಲಾಗಿದೆ. ಜಿ.ಎಸ್.ಟಿ. ಯು ಪ್ರಾಮಾಣಿಕತೆಗೆ ಸಂದ ಜಯ ಮತ್ತು ಪ್ರಾಮಾಣಿಕತೆಯ ಒಂದು ಹರ್ಷೋಲ್ಲಾಸ. ಮೊದಲು ದೇಶದಲ್ಲಿ ಸಾಕಷ್ಟು ಸಾರಿ ತೆರಿಗೆ ವಿಷಯದಲ್ಲಿ ಇನ್ ಸ್ಪೆಕ್ಟರ್ ರಾಜ್ ನ ದೂರುಗಳು ಬರುತ್ತಿದ್ದವು. ಜಿ.ಎಸ್.ಟಿ.ಯಲ್ಲಿ  ಇನ್ ಸ್ಪೆಕ್ಟರ್ ಜಾಗವನ್ನು ಐ.ಟಿ. ಯ ಮಾಹಿತಿ ತಂತ್ರಜ್ಞಾನವು ತೆಗೆದುಕೊಂಡಿದೆ. Returnನಿಂದ refundವರೆಗೆ ಎಲ್ಲವೂ ಆನ್ ಲೈನ್ ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಆಗುತ್ತದೆ. ಜಿ.ಎಸ್.ಟಿ. ಜಾರಿಯಾಗಿರುವುದರಿಂದ ಚೆಕ್ ಪೋಸ್ಟ್ ಗಳು ತೆರವಾಗಿವೆ ಮತ್ತು ಸರಕುಗಳ ಸಾಗಣೆಯ ವೇಗವೂ ಹೆಚ್ಚಾಗಿದೆ. ಇದರಿಂದ ಬರೀ ಸಮಯ ಉಳಿತಾಯವಷ್ಟೇ ಅಲ್ಲದೆlogisticsಕ್ಷೇತ್ರಕ್ಕೆ ಕೂಡ ಬಹಳಷ್ಟು ಲಾಭ ಸಿಗುತ್ತಿದೆ. ಜಿ.ಎಸ.ಟಿ ಯು ಬಹುಶಃ ಜಗತ್ತಿನ ಎಲ್ಲಕ್ಕಿಂತ ದೊಡ್ಡ ತೆರಿಗೆ ಸುಧಾರಣೆಯಾಗಿದೆ. ಭಾರತದಲ್ಲಿ ಇಷ್ಟು ದೊಡ್ಡ ತೆರಿಗೆ ಸುಧಾರಣೆ ಸಫಲವಾದ ಕಾರಣವೆಂದರೆ ದೇಶದ ಜನರು ಇದನ್ನು ತಮ್ಮದಾಗಿಸಿಕೊಂಡರು, ಮತ್ತು ಜನಶಕ್ತಿಯ ಮೂಲಕವೇ ಜಿ.ಎಸ್.ಟಿ ಯು ಖಂಡಿತವಾಗಿಯೂ ಸಫಲವಾಯಿತು. ಇಷ್ಟು ದೊಡ್ಡ ಸುಧಾರಣೆ, ಇಷ್ಟು ದೊಡ್ಡ ದೇಶ, ಇಷ್ಟೊಂದು ಹೆಚ್ಚಿನ ಜನಸಂಖ್ಯೆ ಇವೆಲ್ಲವುಗಳ ಕಾರಣದಿಂದ ಇದು ಪರಿಪೂರ್ಣವಾಗಿ ಸ್ಥಿರವಾಗಲು 5 ರಿಂದ 7 ವರ್ಷಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆದರೆ, ದೇಶದ ಪ್ರಾಮಾಣಿಕ ಜನರ ಉತ್ಸಾಹ, ದೇಶದ ಪ್ರಾಮಾಣಿಕತೆಯ ಉತ್ಸವ, ಜನ ಶಕ್ತಿಯ ಭಾಗವಹಿಸುವಿಕೆ ಇವೆಲ್ಲಾ ಕಾರಣಗಳಿಂದಾಗಿಯೇ ಒಂದು ವರ್ಷದ ಒಳಗೆ ಬಹಳಷ್ಟು ಸಂಖ್ಯೆಯಲ್ಲಿ ಈ ಹೊಸ ತೆರಿಗೆ ಪ್ರಣಾಳಿಕೆಯು ತನ್ನ ಜಾಗವನ್ನು ಭದ್ರಪಡಿಸಿಕೊಂಡು, ಸ್ಥಿರತೆಯನ್ನು ಪಡೆದುಕೊಂಡಿದೆ. ಅವಶ್ಯಕತೆಗೆ ತಕ್ಕಂತೆ ತನ್ನ inbuiltವ್ಯವಸ್ಥೆಯ ಮೂಲಕ ಅದು ಸುಧಾರಣೆಗೆ ಒಳಪಡುತ್ತಿರುತ್ತದೆ. ಇದು 125 ಕೋಟಿ ದೇಶವಾಸಿಗಳು ಸ್ವತಃ ಗಳಿಸಿಕೊಂಡ ಬಹಳ ದೊಡ್ಡ ಸಾಧನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಮತ್ತೊಮ್ಮೆ ಮನದ ಮಾತನ್ನು ಮುಗಿಸುತ್ತಾ ನಿಮ್ಮನ್ನು ಸಂಧಿಸುವ,ನಿಮ್ಮಜೊತೆ ಮಾತನಾಡುವ ಮುಂದಿನ ಮನದ ಮನದ ಮಾತು ಕಾರ್ಯಕ್ರಮಕ್ಕೆ ಕಾಯುತಿದ್ದೇನೆ. ನಿಮಗೆ ಅನಂತಾನಂತ ಶುಭಾಷಯಗಳು.

ಅನಂತಾನಂತ ಧನ್ಯವಾದಗಳು. 



(Release ID: 1536451) Visitor Counter : 222