ಪ್ರಧಾನ ಮಂತ್ರಿಯವರ ಕಛೇರಿ

ಐ ಕ್ರಿಯೇಟ್ ಅನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು

Posted On: 17 JAN 2018 4:41PM by PIB Bengaluru

ಐ ಕ್ರಿಯೇಟ್ ಅನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ, ಇಸ್ರೇಲ್ ಪ್ರಧಾನಿ ನೆತನ್ಯಾಹು

ಪ್ರಧಾನಮಂತ್ರಿ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಅವರಿಂದು ಅಹ್ಮದಾಬಾದ್ ನ ಹೊರ ವಲಯದಲ್ಲಿ ಸ್ಥಾಪನೆಯಾಗಿರುವ ಐ ಕ್ರಿಯೇಟ್ ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಿದರು. ಐ ಕ್ರಿಯೇಟ್, ಸೃಜನಶೀಲತೆ, ನಾವಿನ್ಯತೆ, ಎಂಜಿನಿಯರಿಂಗ್, ಉತ್ಪನ್ನ ವಿನ್ಯಾಸ ಮತ್ತು ಆಹಾರ ಭದ್ರತೆ, ಜಲ, ಸಂಪರ್ಕ, ಸೈಬರ್ ಸುರಕ್ಷತೆ, ಐಟಿ ಮತ್ತು ವಿದ್ಯುನ್ಮಾನ, ಇಂಧನ, ಜೈವಿಕ – ವೈದ್ಯಕೀಯ ಸಲಕರಣೆ ಮತ್ತು ಸಾಧನಗಳು ಇತ್ಯಾದಿ ಪ್ರಮುಖ ವಿಷಯಗಳ ನಿರ್ವಹಣೆಗೆ ಹೊರಹೊಮ್ಮುತ್ತಿರುವ ಹೊಸ ತಂತ್ರಜ್ಞಾನ ಬಳಕೆಯ ಉದ್ದೇಶದೊಂದಿಗೆ ರೂಪುಗೊಂಡ ಒಂದು ಸ್ವತಂತ್ರ ಕೇಂದ್ರವಾಗಿದೆ. ಐ ಕ್ರಿಯೇಟ್ ಭಾರತದಲ್ಲಿ ಗುಣಮಟ್ಟದ ಉದ್ಯಮಶೀಲತೆಯನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಇಬ್ಬರೂ ನಾಯಕರು ವಿವಿಧ ವಲಯಗಳಲ್ಲಿ ನಾವಿನ್ಯತೆ ಮತ್ತು ತಂತ್ರಜ್ಞಾನವನ್ನು ಪ್ರಮುಖವಾಗಿ ಪ್ರದರ್ಶಿಸುವ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ನಾವಿನ್ಯತೆಯು ಭಾರತ ಮತ್ತು ಇಸ್ರೇಲ್ ಜನರನ್ನು ಪರಸ್ಪರ ಹತ್ತಿರಕ್ಕೆ ತರಲು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು. ಇಡೀ ವಿಶ್ವ ಇಸ್ರೇಲ್ ನ ತಂತ್ರಜ್ಞಾನದ ಶಕ್ತಿ ಮತ್ತು ಸೃಜನಶೀಲತೆಯನ್ನು ಗುರುತಿಸಿದೆ ಎಂದರು.

ಭಾರತದ ಯುವಜನರು ಚೈತನ್ಯ ಮತ್ತು ಉತ್ಸಾಹ ಹೊಂದಿದ್ದಾರೆ ಎಂದು ತಿಳಿಸಿದರು. ಯುವಕರಿಗೆ ಬೇಕಾಗಿರುವುದು ಕೊಂಚ ಪ್ರೋತ್ಸಾಹ ಮತ್ತು ಸಾಂಸ್ಥಿಕ ಬೆಂಬಲ ಎಂದು ತಿಳಿಸಿದರು.

ಇಡೀ ವ್ಯವಸ್ಥೆಯನ್ನು ನಾವಿನ್ಯ ಸ್ನೇಹಿಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದರಿಂದಾಗಿ ಕಲ್ಪನೆಗಳು ಸೃಷ್ಟಿಯಾಗುತ್ತವೆ, ಕಲ್ಪನೆಗಳಿಂದಾಗಿ ನಾವಿನ್ಯತೆ ಮೂಡುತ್ತದೆ, ಮತ್ತು ನಾವಿನ್ಯತೆಯು ನವ ಭಾರತ ನಿರ್ಮಾಣಕ್ಕೆ ನೆರವಾಗುತ್ತದೆ ಎಂದರು.

ಯಶಸ್ಸಿನ ಮುನ್ನುಡಿಯೇ ಧೈರ್ಯ ಎಂದು ಪ್ರಧಾನಿ ಹೇಳಿದರು. ಐ ಕ್ರಿಯೇಟ್ ನಲ್ಲಿ ನಾವಿನ್ಯ ಚಟುವಟಿಕೆಯಲ್ಲಿ ತೊಡಗಿರುವ ಧೈರ್ಯಶಾಲಿ ಯುವಜನರನ್ನು ಪ್ರಧಾನಿ ಅಭಿನಂದಿಸಿದರು.

ಕಾಳಿದಾಸನ ಉಲ್ಲೇಖ ಮಾಡಿದ, ಪ್ರಧಾನಮಂತ್ರಿಯವರು, ರೂಢಿ ಮತ್ತು ನಾವೀನ್ಯತೆ ನಡುವಿನ ಸಂದಿಗ್ಧತೆಯ ಬಗ್ಗೆ ಪ್ರಸ್ತಾಪಿಸಿದರು. ದೇಶ ಇಂದು ಎದುರಿಸುತ್ತಿರುವ ಸವಾಲುಗಳಿಂದ ಹೊರಬರಲು ಮತ್ತು ಶ್ರೀಸಾಮಾನ್ಯನ ಜೀವನ ಮಟ್ಟವನ್ನು ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಸುಧಾರಿಸಲು ನಾವಿನ್ಯತೆಯ ಶೋಧಕ್ಕೆ ಯುವಕರಿಗೆ ಕರೆ ನೀಡಿದರು.

ಆಹಾರ, ಆರೋಗ್ಯ, ಜಲ ಮತ್ತು ಇಂಧನ ಕ್ಷೇತ್ರಗಳಲ್ಲಿನ ನಾವಿನ್ಯತೆಗಾಗಿ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರದ ಬಗ್ಗೆ ಪ್ರಧಾನಿ ಮಾತನಾಡಿದರು. ಎರಡೂ ರಾಷ್ಟ್ರಗಳ ನಡುವಿನ ಈ ಸಹಕಾರ 21ನೇ ಶತಮಾನದ ಮನುಕುಲದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದೂ ಹೇಳಿದರು.

******



(Release ID: 1517080) Visitor Counter : 253


Read this release in: English , Hindi , Assamese