ಪ್ರಧಾನ ಮಂತ್ರಿಯವರ ಕಛೇರಿ
ತೇಕನ್ಪುರದಲ್ಲಿ ಡಿಜಿಪಿ/ಐಜಿಪಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಷಣ
Posted On:
08 JAN 2018 5:04PM by PIB Bengaluru
ತೇಕನ್ಪುರದಲ್ಲಿ ಡಿಜಿಪಿ/ಐಜಿಪಿಗಳ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ಭಾಷಣ
ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರಿಂದು ತೇಕನ್ಪುರದ ಬಿ.ಎಸ್.ಎಫ್. ಅಕಾಡಮಿಯಲ್ಲಿ ನಡೆದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರ ಸಮಾವೇಶದ ಸಮಾರೋಪ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.
ದೆಹಲಿಯಿಂದ ಹೊರಗೆ ವರ್ಗಾವಣೆಯಾದ ಬಳಿಕ 2014ರಿಂದ ಸಮಾವೇಶದ ಸ್ವರೂಪ ಮತ್ತು ವ್ಯಾಪ್ತಿ ಹೇಗೆ ಬದಲಾಯಿತು ಎಂಬುದನ್ನು ಪ್ರಧಾನಿ ಸ್ಮರಿಸಿದರು. ಈ ಅನುಕೂಲಕರ ಬದಲಾವಣೆಗೆ ಕಾರಣರಾದ ಅಧಿಕಾರಿಗಳನ್ನು ಅವರು ಶ್ಲಾಘಿಸಿದರು. ರಾಷ್ಟ್ರ ಎದುರಿಸುತ್ತಿರುವ ಸವಾಲುಗಳು ಮತ್ತು ಜವಾಬ್ದಾರಿಯ ಹಿನ್ನೆಲೆಯಲ್ಲಿ ಈ ಸಮಾವೇಶವು ಈಗ ಹೆಚ್ಚು ಪ್ರಸ್ತುತವಾಗಿದೆ ಎಂದು ಪ್ರಧಾನಿ ಹೇಳಿದರು. ಸಮಾವೇಶದ ಹೊಸ ವಿಧಾನವು ಗುಣಮಟ್ಟದ ಸಮಾಲೋಚನೆಯಲ್ಲಿ ಗಮನಾರ್ಹ ಸುಧಾರಣೆ ತಂದಿದೆ ಎಂದರು.
ದೇಶದ ಸುರಕ್ಷತೆವಾಗಿಡಲು ಭದ್ರತಾ ಪಡೆಗಳು ಮಾಡುತ್ತಿರುವ ಕೆಲಸವನ್ನು ಅವರು ಪ್ರಶಂಸಿಸಿದರು. ಇಂದು ಸಮಾವೇಶದಲ್ಲಿ ಹಾಜರಿರುವ ಅಧಿಕಾರಿಗಳು ಹಲವು ಬಾರಿ ನೇತ್ಯಾತ್ಮಕ ವಾತಾವರಣದಲ್ಲಿ ಕೆಲಸ ಮಾಡುವ ಸನ್ನಿವೇಶದ ನಡುವೆಯೂ ನಾಯಕತ್ವವನ್ನು ತೋರಿದ್ದಾರೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಸಮಾವೇಶದಲ್ಲಿ ನಡೆದ ಚರ್ಚೆಗಳ ಫಲವಾಗಿ, ಈಗ ಪೊಲೀಸ್ ಪಡೆಗಳ ಉದ್ದೇಶವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ, ಅನುಷ್ಠಾನದಲ್ಲಿ ಸಾಕಷ್ಟು ಏಕತೆ ಇದೆ ಎಂದು ಅವರು ಹೇಳಿದರು. ಈ ಸಮಾವೇಶವು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸವಾಲುಗಳು ಮತ್ತು ಸಮಸ್ಯೆಗಳನ್ನು ಸಮಗ್ರವಾಗಿ ನೋಡಲು ನೆರವಾಗುತ್ತದೆ ಎಂದರು. ಕಳೆದ ಎರಡು ವರ್ಷಗಳಿಂದ ಚರ್ಚಿತವಾಗುತ್ತಿರುವ ವಿಷಯಗಳು ಹೆಚ್ಚು ವಿಸ್ತಾರ ಶ್ರೇಣಿಯದಾಗಿವೆ ಎಂದು ಹೇಳಿದರು. ಇದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೊಸ ಸಮ್ಯಕ್ ನೋಟ ಪಡೆಯಲು ನೆರವಾಗಿದೆ ಎಂದರು.
ಸಮಾವೇಶಕ್ಕೆ ಹೆಚ್ಚಿನ ಮೌಲ್ಯ ತುಂಬುವ ಮಾರ್ಗಗಳ ಬಗ್ಗೆ ಚರ್ಚಿಸಿದ ಪ್ರಧಾನಮಂತ್ರಿಯವರು, ಮುಂದಿನ ವರ್ಷ ಪೂರ್ತಿ ಕಾರ್ಯ ಗುಂಪುಗಳ ಮೂಲಕ ಅನುಸರಣೆ ಮುಂದುವರಿಯಬೇಕು ಎಂದು ಸೂಚಿಸಿದರು. ಈ ನಿಟ್ಟಿನಲ್ಲಿ ಅವರು, ಯುವ ಅಧಿಕಾರಿಗಳ ಭಾಗವಹಿಸುವಿಕೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಇದು ಸಾಮಾನ್ಯವಾಗಿ ದಕ್ಷತೆಯ ಸುಧಾರಣೆಗೆ ನೆರವಾಗುತ್ತದೆ ಎಂದರು.
ನ್ಯಾಯಸಮ್ಮತವಾದ ಹಣಕಾಸು ವ್ಯವಹಾರಗಳ ಕುರಿತು ಹೆಚ್ಚಿನ ಮಾಹಿತಿಯ ಹಂಚಿಕೆಗೆ ಜಾಗತಿಕ ಒಮ್ಮತವನ್ನು ಉಲ್ಲೇಖಿಸಿದ ಪ್ರಧಾನಿ, ಇದನ್ನು ಸಾಧಿಸಲು ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಭದ್ರತಾ ವಿಷಯಗಳ ಬಗ್ಗೆ ವಿಶ್ವಾದ್ಯಂತ ಮುಕ್ತತೆ ಹೆಚ್ಚಾಗುತ್ತಿರುವಂತೆ, ರಾಜ್ಯಗಳ ನಡುವೆ ಹೆಚ್ಚಿನ ಮುಕ್ತತೆಯ ಅಗತ್ಯ ಕಂಡುಬಂದಿದೆ ಎಂದು ಪ್ರಧಾನಿ ಹೇಳಿದರು. ಭದ್ರತೆಯನ್ನು ಏಕಾಂಗಿಯಾಗಿ ಅಥವಾ ಆಯ್ಕೆಯ ಮೂಲಕ ಸಾಧಿಸಲು ಸಾಧ್ಯವಿಲ್ಲ. ರಾಜ್ಯಗಳ ನಡುವೆ ಮಾಹಿತಿಯ ವಿನಿಮಯ ಎಲ್ಲರನ್ನೂ ಹೆಚ್ಚು ಸುರಕ್ಷಿತಗೊಳಿಸುತ್ತದೆ ಎಂದರು. "ನಮ್ಮದು ಜೋಡಣೆ ಮಾಡಲಾಗಿರುವ ಕಾಯವಲ್ಲ, ಬದಲಾಗಿ ಸಾವಯವ ಕಾಯ" ಎಂದು ಅವರು ಸಮರ್ಥಿಸಿದರು.
ಸೈಬರ್ ಭದ್ರತೆಯ ವಿಚಾರಗಳನ್ನು ತತ್ ಕ್ಷಣವೇ ನಿರ್ವಹಿಸಬೇಕು ಮತ್ತು ಅದಕ್ಕೆ ಉನ್ನತ ಆದ್ಯತೆ ನೀಡಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ, ಅವರು ಸಾಮಾಜಿಕ ಮಾಧ್ಯಮದ ಮಹತ್ವವನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಹೆಚ್ಚಿನ ಪರಿಣಾಮಕಾರಿತ್ವಕ್ಕಾಗಿ ಮೆಸೇಜಿಂಗ್ ಪ್ರಾದೇಶಿಕ ಭಾಷೆಯಲ್ಲಿರಬೇಕು ಎಂದು ಪ್ರಧಾನಿ ಹೇಳಿದರು. ಮೂಲಭೂತೀಕರಣ ಕುರಿತಂತೆ ಮಾತನಾಡಿದ ಪ್ರಧಾನಿ, ಸಮಸ್ಯೆಯ ಕ್ಷೇತ್ರಗಳನ್ನು ಗುರುತಿಸಲು ತಂತ್ರಜ್ಞಾನ ಬಳಸುವಂತೆ ಆಗ್ರಹಿಸಿದರು.
ಐಬಿ ಅಧಿಕಾರಿಗಳಿಗೆ ಗಣನೀಯ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನೂ ಪ್ರಧಾನಿಯವರು ಪ್ರದಾನ ಮಾಡಿದರು. ತಮ್ಮ ಭಾಷಣದ ವೇಳೆ ಪ್ರಧಾನಮಂತ್ರಿಯವರು, ಪದಕ ವಿಜೇತ ಐ.ಬಿ. ಅಧಿಕಾರಿಗಳ ಬದ್ಧತೆ ಮತ್ತು ಗಣನೀಯ ಸೇವೆಯನ್ನು ಪ್ರಶಂಸಿಸಿದರು.
ಕೇಂದ್ರ ಗೃಹ ಸಚಿವ ಶ್ರೀ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಶ್ರೀ ಹನ್ಸ್ ರಾಜ್ ಆಹಿರ್ ಮತ್ತು ಶ್ರೀ ಕಿರಣ್ ರಿಜಿಜು ಈ ಸಂದರ್ಭದಲ್ಲಿ ಹಾಜರಿದ್ದರು.
****
(Release ID: 1515987)
Visitor Counter : 128