ಸಂಪುಟ

2000 ರೂ.ಗಿಂತ ಕಡಿಮೆ ಮೌಲ್ಯದ ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್ ವಹಿವಾಟುಗಳ ಮೇಲಿನ ಎಂ.ಡಿ.ಆರ್. ಶುಲ್ಕಕ್ಕೆ ಸಹಾಯಧನ ನೀಡಲು ಸಂಪುಟದ ಅನುಮೋದನೆ

Posted On: 15 DEC 2017 5:56PM by PIB Bengaluru

2000 ರೂ.ಗಿಂತ ಕಡಿಮೆ ಮೌಲ್ಯದ  ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್  ವಹಿವಾಟುಗಳ ಮೇಲಿನ ಎಂ.ಡಿ.ಆರ್. ಶುಲ್ಕಕ್ಕೆ ಸಹಾಯಧನ ನೀಡಲು ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲ್ಲ ಡೆಬಿಟ್ ಕಾರ್ಡ್ /ಭೀಮ್ ಯುಪಿಐ/ ಆಧಾರ್ ಸಂಪರ್ಕಿತ ಪಾವತಿ ವ್ಯವಸ್ಥೆ (ಎಇಪಿಎಸ್)ಗಳ ಮೂಲಕ ನಡೆಸುವ 2000 ರೂ. ಸೇರಿದಂತೆ ಆ ಮೌಲ್ಯದವರೆಗಿನ ವಹಿವಾಟಿನ ಮೇಲೆ ವ್ಯಾಪಾರಿಗಳ ರಿಯಾಯಿತಿ ದರ (ಎಂ.ಡಿ.ಆರ್.) ಶುಲ್ಕ ಅನ್ವಯವಾಗಲಿದ್ದು, ಅದನ್ನು ಬ್ಯಾಂಕ್ ಗಳಿಗೆ ಹಿಂತಿರುಗಿಸುವ ಮೂಲಕ ಜನವರಿ 1 2018ರಿಂದ ಎರಡು ವರ್ಷಗಳ ಅವಧಿಗೆ  ಸರ್ಕಾರವೇ ಭರಸಲು ತನ್ನ ಅನುಮೋದನೆ ನೀಡಿದೆ.

ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಮತ್ತು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್.ಪಿ.ಸಿ.ಐ) ಸಿ.ಇ.ಓ. ಅವರನ್ನು ಒಳಗೊಂಡ ಸಮಿತಿಯು ಮರುಪಾವತಿ ಮಟ್ಟವನ್ನು ನಿರ್ಧರಿಸಲು ಆಧಾರವಾಗಿರುವ ಅಂತಹ ವಹಿವಾಟಿನ ಉದ್ಯಮ ವೆಚ್ಚದ ವಿನ್ಯಾಸವನ್ನು ನೋಡಿಕೊಳ್ಳುತ್ತದೆ.

ಈ ಅನುಮೋದನೆಯ ಫಲವಾಗಿ, 2000 ರೂ. ಮೌಲ್ಯಕ್ಕಿಂತ ಕಡಿಮೆ ಮೊತ್ತದ ಎಲ್ಲ ವಹಿವಾಟುಗಳಿಗೆ ಗ್ರಾಹಕರು ಮತ್ತು ವ್ಯಾಪಾರಿಗಳು ಎಂ.ಡಿ.ಆರ್. ಸ್ವರೂಪದಲ್ಲಿ ಯಾವುದೇ ಹೆಚ್ಚಿನ ಹೊರೆಯನ್ನು ಅನುಭವಿಸುವುದಿಲ್ಲ, ಇದು ಇಂಥ ವಹಿವಾಟುಗಳಿಗೆ ಡಿಜಿಟಲ್ ಪಾವತಿಯ ಹೆಚ್ಚಿನ ಅಳವಡಿಕೆಗೆ ಇಂಬು ನೀಡುತ್ತದೆ. ಅಂತಹ ವಹಿವಾಟುಗಳ ಗಣನೀಯ ಶೇಕಡಾವಾರು ವಹಿವಾಟು ಪರಿಮಾಣಕ್ಕೆ ಕಾರಣವಾದರೆ, ಇದು ಕಡಿಮೆ ನಗದು ಆರ್ಥಿಕತೆಗೆ ರಾಷ್ಟ್ರ ತೆರಳಲು ಸಹಾಯ ಮಾಡುತ್ತದೆ.
2000 ರೂ.ಗಿಂತ ಕಡಿಮೆ ಮೌಲ್ಯದ ವಹಿವಾಟಿಗೆ ಸಂಬಂಧಿಸಿದಂತೆ 2018-19ರ ಹಣಕಾಸು ವರ್ಷದಲ್ಲಿ 1,050 ಕೋಟಿ ರೂಪಾಯಿ ಮತ್ತು 2019-20ರ ಹಣಕಾಸು ವರ್ಷದಲ್ಲಿ 1,462 ಕೋಟಿ ರೂಪಾಯಿಗಳ ಮೊತ್ತದ ಎಂ.ಡಿ.ಆರ್. ಅನ್ನು ಬ್ಯಾಂಕ್ ಗಳಿಗೆ ಮರು ಪಾವತಿ ಮಾಡಬೇಕಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
ಮರ್ಚೆಂಟ್ ಪಾಯಿಂಟ್ ಆಫ್ ಸೇಲ್ ಮೂಲಕ ಪಾವತಿ ಮಾಡಿದಾಗ, ವ್ಯಾಪಾರಿಗಳು ಬ್ಯಾಂಕ್ ಗಳಿಗೆ ಎಂ.ಡಿ.ಆರ್. ಪಾವತಿಸಬೇಕಾಗುತ್ತದೆ. ಇದರಿಂದಾಗಿ ಅನೇಕರು ಡೆಬಿಟ್ ಕಾರ್ಡ್ ಗಳು ಇದ್ದಾಗ್ಯೂ ನಗದು ಪಾವತಿ ಮಾಡುತ್ತಿದ್ದಾರೆ. ಅದೇ ರೀತಿ, ಭೀಮ್ ಯುಪಿಐ ಮತ್ತು ಎಇಪಿಎಸ್ ಮೂಲಕ ವ್ಯಾಪಾರಿಗಳಿಗೆ ಮಾಡಲಾದ ಪಾವತಿಗೂ ಎಂ.ಡಿ.ಆರ್. ಶುಲ್ಕ ಅನ್ವಯವಾಗುತ್ತಿತ್ತು. 
*****



(Release ID: 1513003) Visitor Counter : 97


Read this release in: English , Telugu