ಪ್ರಧಾನ ಮಂತ್ರಿಯವರ ಕಛೇರಿ

ಕುಪೋಷಣೆ ತಗ್ಗಿಸಲು ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದ ಪ್ರಧಾನಿ

Posted On: 25 NOV 2017 11:55AM by PIB Bengaluru

ಕುಪೋಷಣೆ ತಗ್ಗಿಸಲು ಕೈಗೊಂಡಿರುವ ಕ್ರಮಗಳ ಪರಿಶೀಲನೆ ನಡೆಸಿದ ಪ್ರಧಾನಿ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಕ್ರವಾರ ಭಾರತದಲ್ಲಿ ಕುಪೋಷಣೆ ಮತ್ತು ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಮತ್ತು ತಗ್ಗಿಸಲು ಕೈಗೊಂಡಿರುವ ಪ್ರಯತ್ನಗಳ ಪ್ರಗತಿ ಪರಿಶೀಲನೆ ನಡೆಸಿದರು. ಉನ್ನತ ಮಟ್ಟದ ಪರಾಮರ್ಶೆ ಸಭೆಯಲ್ಲಿ ಪ್ರಧಾನಮಂತ್ರಿಗಳ ಕಾರ್ಯಾಲಯ, ನೀತಿ ಆಯೋಗ ಮತ್ತು ಇತರ ಸಚಿವಾಲಯಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಅಪೌಷ್ಟಿಕತೆ, ಕುಂಠಿತ ಮತ್ತು ಸಂಬಂಧಿತ ಸಮಸ್ಯೆಗಳ ಪ್ರಸಕ್ತ ಸ್ಥಿತಿಗತಿಯನ್ನೂ ಪರಿಶೀಲಿಸಲಾಯಿತು.ಕೆಲವು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿನ ಯಶಸ್ವಿ ಪೌಷ್ಟಿಕತೆಯ ಉಪಕ್ರಮಗಳು ಚರ್ಚೆಗೆ ಬಂದವು. ಕುಪೋಷಣೆ, ಕಡಿಮೆ ತೂಕದ ಶಿಶು ಜನನ ಮತ್ತು ರಕ್ತಹೀನತೆ ತಗ್ಗಿಸುವ ನಿಟ್ಟಿನಲ್ಲಿ ಸಮಗ್ರ ಉದ್ದೇಶದ ಅಗತ್ಯವನ್ನು ಅವರು ಒತ್ತಿ ಹೇಳಿದರು. ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಹೊತ್ತಿಗೆ ಅಂದರೆ 2022ರ ಹೊತ್ತಿಗೆ ಕಣ್ಣಿಗೆ ಕಾಣುವ ಮತ್ತು ಮಾನದಂಡಕ್ಕೆ ಸಿಲುಕುವ ಫಲಿತಾಂಶಗಳು ಕಾಣಬೇಕು ಎಂದು ಪ್ರತಿಪಾದಿಸಿದರು. 

ಈ ನಿಟ್ಟಿನಲ್ಲಿ, ಪೌಷ್ಟಿಕಾಂಶದ ಫಲಶ್ರುತಿಯ ಪ್ರಗತಿಗೆ ಸಕಾಲದ ಮೇಲ್ವಿಚಾರಣೆ ಅದರಲ್ಲೂ ಕಳಪೆ ಪ್ರದರ್ಶನದ ಜಿಲ್ಲೆಗಳ ಕುರಿತು ಚರ್ಚಿಸಲಾಯಿತು.

ಹಿರಿಯ ಅಧಿಕಾರಿಗಳು ಪೌಷ್ಟಿಕತೆಯ ವಿಚಾರದಲ್ಲಿ ಧನಾತ್ಮಕ ಪರಿಣಾಮ ಬೀರಿರುವ ಸ್ವಚ್ಛ ಭಾರತ ಅಭಿಯಾನ, ಇಂಧ್ರದನುಷ್ ಅಭಿಯಾನ, ಬೇಟಿ ಬಚಾವೋ – ಬೇಟಿ ಪಡಾವೋ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಇತ್ಯಾದಿಗಳ ಬಗ್ಗೆ ಪದೆ ಪದೇ ಒತ್ತಿ ಹೇಳಿದರು. ಈ ವಿಚಾರದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಈ ಎಲ್ಲ ಯೋಜನೆಗಳಲ್ಲಿ ಐಕಮತ್ಯಕ್ಕೆ ಪ್ರಧಾನಿ ಕರೆ ನೀಡಿದರು, ಇದು ನೇರವಾಗಿ ಮತ್ತು ಪರೋಕ್ಷವಾಗಿ ಪೌಷ್ಟಿಕತೆ ಫಲಶ್ರುತಿಯ ಮೇಲೆ ಪರಿಣಾಮ ಬೀರುತ್ತದೆ ಎಂದರು. ಅಪೇಕ್ಷಿತ ಫಲಿತಾಂಶ ಪಡೆಯಲು ಪೌಷ್ಟಿಕತೆಯ ಕುರಿತಂತೆ ಹೆಚ್ಚುತ್ತಿರುವ ಸಾಮಾಜಿಕ ಅರಿವು ಮಹತ್ವವಾದದ್ದು ಎಂದು ಅವರು ಹೇಳಿದರು. ಈ ಜಾಗೃತಿ ಮೂಡಿಸಲು ಅನೌಪಚಾರಿಕ ಮಾರ್ಗಗಳನ್ನು ಬಳಕೆ ಮಾಡುವ ಮಹತ್ವವನ್ನೂ ಅವರು ಪ್ರತಿಪಾದಿಸಿದರು.


(Release ID: 1510957) Visitor Counter : 130


Read this release in: English , Gujarati , Tamil