ಪ್ರಧಾನ ಮಂತ್ರಿಯವರ ಕಛೇರಿ

ಜಿ.ಸಿ.ಸಿ.ಎಸ್ 2017 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 23 NOV 2017 11:35AM by PIB Bengaluru

ಜಿ.ಸಿ.ಸಿ.ಎಸ್ 2017 ರಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ 
 

ಗೌರವಾನ್ವಿತರಾದ, ಶ್ರೀಲಂಕಾದ ಪ್ರಧಾನ ಮಂತ್ರಿಗಳಾದ ಶ್ರೀ ರನಿಲ್ ವಿಕ್ರಮಸಿಂಘೆ ಅವರೇ

ಭಾರತದ ಮತ್ತು ವಿದೇಶದ ಮಂತ್ರಿಗಳೇ

ಐ.ಟಿ.ಯು.ನ ಮಹಾಪ್ರಧಾನ ಕಾರ್ಯದರ್ಶಿಗಳೇ

ಇತರ ವಿಶೇಷ ಅತಿಥಿ ಗಣ್ಯರೇ

120 ದೇಶಗಳಿಂದ ಬಂದಿರುವ ಪ್ರತಿನಿಧಿಗಳೇ,

ವಿದ್ಯಾರ್ಥಿಗಳೇ,

ಮಹಿಳೆಯರೇ ಮತ್ತು ಮಹನೀಯರೇ.

   ಸೈಬರ್ ಅವಕಾಶ (ಸೈಬರ್ ಸ್ಪೇಸ್) ಕುರಿತ ಜಾಗತಿಕ ಸಮ್ಮೇಳನಕ್ಕಾಗಿ ಹೊಸದಿಲ್ಲಿಗೆ ಬಂದಿರುವ ನಿಮಗೆಲ್ಲಾ ನಾನು ಸ್ವಾಗತ ಕೋರುತ್ತೇನೆ. ಅಂತರ್ಜಾಲದ ಮೂಲಕ ವಿಶ್ವದ ಮೂಲೆ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಸಂಪರ್ಕಗೊಂಡಿರುವವರಿಗೂ ನಾನು ಸ್ವಾಗತ ಕೋರುತ್ತೇನೆ.

 

ಸ್ನೇಹಿತರೇ.

   ಕಳೆದ ಕೆಲವು ದಶಕಗಳಲ್ಲಿ ಸೈಬರ್ ಅವಕಾಶ ವಿಶ್ವವನ್ನು ಹೇಗೆ ಬದಲಾಯಿಸಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಇಲ್ಲಿರುವ ಹಿರಿಯ ತಲೆಮಾರು ಎಪ್ಪತ್ತರ ಮತ್ತು ಎಂಬತ್ತರ ದಶಕದಲ್ಲಿದ್ದ ದೊಡ್ದದಾದ ಕಂಪ್ಯೂಟರ್ ವ್ಯವಸ್ಥೆಯನ್ನು ನೆನಪಿಸಿಕೊಳ್ಳುತ್ತಿರಬಹುದು. ಆ ಬಳಿಕ ಬಹಳ ಬದಲಾವಣೆಗಳಾಗಿವೆ. ತೊಂಬತ್ತರಲ್ಲಿ  ಇ-ಮೈಲ್ (ಮಿಂಚಂಚೆ) ಮತ್ತು ವೈಯಕ್ತಿಕ ಕಂಪ್ಯೂಟರುಗಳು (ಪಿ.ಸಿ.) ಗಳು ಹೊಸ ಕ್ರಾಂತಿಯನ್ನು ತಂದಿವೆ. ಇದನ್ನು ಅನುಸರಿಸಿ ಸಾಮಾಜಿಕ ಮಾಧ್ಯಮಗಳೂ ಜನ್ಮತಾಳಿ ಬೆಳೆದವು ಮತ್ತು ಮೊಬೈಲ್ ಫೋನ್  ಸಂಪರ್ಕ ಹಾಗು ದತ್ತಾಂಶ ಸಂಗ್ರಹದ ಮುಖ್ಯ ವಾಹಕವಾಯಿತು. ಅಂತರ್ಜಾಲದ ಅಭಿವ್ಯಕ್ತಿಯಾಗಿ ಹಲವು ಹೊಸ ಕಲ್ಪನೆಗಳು ಬಂದವು. ಮತ್ತು ಕೃತಕ ಬುದ್ಧಿಮತ್ತೆ ಈಗ ಸಾಮಾನ್ಯ ಸಂಗತಿಯ ಸಾಲಿಗೆ ಸೇರಿದೆ. ಇದರ ಸೂಚನೆ ಏನೆಂದರೆ ಬದಲಾವಣೆಗಳು ಮುಂದುವರಿಯುತ್ತವೆ ಮತ್ತು ಅವು ಬಹಳ ವೇಗದಿಂದ ಸಂಭವಿಸುತ್ತವೆ.

 ಡಿಜಿಟಲ್ ಕ್ಷೇತ್ರದಲ್ಲಿ ಈ ತ್ವರಿತ ಗತಿಯ ಬೆಳವಣಿಗೆಗಳು ಭಾರತದಲ್ಲಿಯೂ ಬದಲಾವಣೆಗಳನ್ನು ಪ್ರತಿಫಲಿಸಿವೆ. ಭಾರತದ ಮಾಹಿತಿ ತಂತ್ರಜ್ಞಾನ ಪ್ರತಿಭೆಗಳು ವಿಶ್ವವ್ಯಾಪೀ ಮನ್ನಣೆ ಪಡೆದಿವೆ. ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಜಾಗತಿಕವಾಗಿ ತಮ್ಮ ಹೆಸರನ್ನು ಸ್ಥಾಪಿಸಿಕೊಂಡಿವೆ.

  ಇಂದು ಡಿಜಿಟಲ್ ತಂತ್ರಜ್ಞಾನ ದೊಡ್ಡ ಶಕ್ತಿಯಾಗಿ , ಸಾಮರ್ಥ್ಯವಾಗಿ ಮೂಡಿ ಬಂದಿದೆ. ಇದು ಸಮರ್ಥ ಸೇವಾ ಪೂರೈಕೆ ವ್ಯವಸ್ಥೆ ಮತ್ತು ಆಡಳಿತ, ಮೇಲುಸ್ತುವಾರಿ ವ್ಯವಸ್ಥೆಗೆ ಹಾದಿ ಮಾಡಿಕೊಟ್ಟಿದೆ. ಅದು ಶಿಕ್ಷಣದಿಂದ ಹಿಡಿದು ಆರೋಗ್ಯ ಕ್ಶೇತ್ರದವರೆಗೆ ಎಲ್ಲಾ ಕಾರ್ಯಕ್ಷೇತ್ರಗಳಲ್ಲೂ  ಸಂಪರ್ಕ/ಲಭ್ಯತೆಯ ಅವಕಾಶವನ್ನು ಸುಧಾರಿಸಿದೆ. ಮತ್ತು ಅದು ವ್ಯಾಪಾರೋದ್ಯಮದ ಭವಿಷ್ಯ  ಮತ್ತು ಆರ್ಥಿಕತೆಯನ್ನು ರೂಪಿಸಲು ಸಹಾಯ ಮಾಡುತ್ತಿದೆ. ಮತ್ತು ಈ ಪ್ರತೀ ಹಾದಿಗಳ ಮೂಲಕ ಅದು ಸಮಾಜದ ಅಂಚಿನಲ್ಲಿರುವ, ದುರ್ಬಲ ವಲಯಗಳಿಗೂ ಸಮಾನ ಸ್ಪರ್ಧೆಯ ಅವಕಾಶವನ್ನು ಒದಗಿಸಿದೆ. ವಿಸ್ತಾರ ವ್ಯಾಪ್ತಿಯಲ್ಲಿ ಗಮನಿಸಿದಾಗ , ಅದು ಚಪ್ಪಟೆ ಅಥವಾ ಸಮಾನಾಂತರ ವಿಶ್ವ ರೂಪುಗೊಳ್ಳಲು ಕೊಡುಗೆ ಕೊಡುತ್ತಿದೆ .ಇಲ್ಲಿ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳು, ಅಭಿವೃದ್ಧಿ ಹೊಂದಿದ ದೇಶಗಳ ಜತೆ  ಸಮಾನ ನೆಲೆಯಲ್ಲಿ ಸ್ಪರ್ಧಿಸಬಹುದಾಗಿದೆ.

  ಸ್ನೇಹಿತರೇ.

 ತಂತ್ರಜ್ಞಾನ ವಿಭಜನೆಯ ಗೋಡೆಗಳನ್ನು , ತಡೆಬೇಲಿಗಳನ್ನು ಒಡೆದು ಹಾಕಿದೆ. ಅದು ವಿಶ್ವವೇ ಒಂದು ಕುಟುಂಬ ಎಂಬ ಭಾರತೀಯ ತತ್ವವಾದ “ವಸುದೈವ ಕುಟುಂಬಕಂ”ನ್ನು ನಂಬುವ ನಮ್ಮ ಸಿದ್ಧಾಂತವನ್ನು ಪುಷ್ಟೀಕರಿಸುತ್ತದೆ. ಈ ಭಾವನೆ/ವಿವರಣೆ ನಮ್ಮ ಪ್ರಾಚೀನ ಮತ್ತು ಒಳಗೊಳ್ಳುವ ಸಂಪ್ರದಾಯವನ್ನು ಪ್ರತಿಫಲಿಸುತ್ತದೆ. ತಂತ್ರಜ್ಞಾನದ ಮೂಲಕ , ನಾವು ಈಗ ಈ ಭಾವನೆಗೆ ಅರ್ಥ ಕೊಡಲು ಸಮರ್ಥರಾಗಿದ್ದೇವೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯ್ಗಗಳಿಗೆ ಕೂಡಾ ನಿಶ್ಚಯವಾಗಿ ಅರ್ಥ ಕೊಡಲು ಅರ್ಹತೆ ಹೊಂದಿದ್ದೇವೆ.

  ನಾವು ಭಾರತದಲ್ಲಿ ತಂತ್ರಜ್ಞಾನದ ಮಾನವೀಯ ಮುಖಕ್ಕೆ ಸರ್ವೋತ್ಕೃಷ್ಟತೆಯನ್ನು ಕೊಡುತ್ತೇವೆ. ಮತ್ತು ಅದನ್ನು “ಜೀವಿಸಲು ಅನುಕೂಲಕರ ವಾತಾವರಣ” ನಿರ್ಮಿಸಲು ಬಳಸುತ್ತೇವೆ. ಡಿಜಿಟಲ್ ವ್ಯವಸ್ಥೆ ಲಭ್ಯತೆಯ ಮೂಲಕ ಸಶಕ್ತೀಕರಣ ಭಾರತ ಸರಕಾರದ ಪ್ರಮುಖ ಉದ್ದೇಶವಾಗಿದೆ, ವಿಶೇಷವಾಗಿ  “ಡಿಜಿಟಲ್ ಇಂಡಿಯಾ”ವು ವಿಶ್ವದ ಅತ್ಯಂತ ದೊಡ್ಡ ತಂತ್ರಜ್ಞಾನ ಆಧಾರಿತ ಪರಿವರ್ತನಾ ಕಾರ್ಯಕ್ರಮವಾಗಿದ್ದು, ನಮ್ಮ ನಾಗರಿಕರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದೆ.. ನಾವು ಮೊಬೈಲ್ ಶಕ್ತಿಯನ್ನು ಅಥವಾ ಎಂ-ಶಕ್ತಿಯನ್ನು ನಾಗರಿಕರ ಸಶಕ್ತೀಕರಣಕ್ಕಾಗಿ ಬಳಸುತ್ತಿದ್ದೇವೆ.

 ನನಗೆ ಖಚಿತವಿದೆ, ನಿಮ್ಮಲ್ಲಿ ಹೆಚ್ಚಿನವರಿಗೆಲ್ಲಾ ಆಧಾರ್ ಬಗ್ಗೆ ಈಗಾಗಲೇ ಗೊತ್ತಿರಬಹುದು, ಇದೊಂದು ವ್ಯಕ್ತಿಯ ವಿಶೇಷ ಬಯೋಮೆಟ್ರಿಕ್ ಗುರುತಿಸುವಿಕೆ. ನಾವು ಈ ಗುರುತಿಸುವಿಕೆ ತಂತ್ರಜ್ಞಾನವನ್ನು ನಮ್ಮ ಜನರನ್ನು ಸರತಿಯ ಸಾಲಿನಿಂದ ಪಾರು ಮಾಡಲು ಮತ್ತು ತೊಡಕಿನ ಪ್ರಕ್ರಿಯೆಗಳಿಂದ ಪಾರು ಮಾಡಲು ಬಳಸಿದ್ದೇವೆ. ಇದರಲ್ಲಿ ಮೂರು ಅಂಶಗಳಿವೆ: ಮೊದಲನೇಯದ್ದು, ನಮ್ಮ ಜನ -ಧನ ಬ್ಯಾಂಕ್ ಖಾತೆಗಳ ಮೂಲಕ ಹಣಕಾಸು ಸೇರ್ಪಡೆ; ಎರಡನೇಯದ್ದು ಆಧಾರ್ ವೇದಿಕೆ ಮತ್ತು ಮೂರನೇಯದ್ದು ಮೊಬೈಲ್ ಫೋನ್, ಇವು ಭ್ರಷ್ಟಾಚಾರವನ್ನು ದೊಡ್ಡ ಪ್ರಮಾಣದಲ್ಲಿ ಇಳಿಸಲು ಸಹಾಯ ಮಾಡಿವೆ. ನಾವು ಇವುಗಳನ್ನು ಜೆ.ಎ.ಎಂ ಅಥವಾ ಜಾಮ್ ತ್ರೀತ್ರಯ ಎನ್ನುತ್ತೇವೆ. ಸಬ್ಸಿಡಿಗಳ ಮೇಲೆ ಗುರಿ ಇಡುವ ಮೂಲಕ ಈ ಜಾಮ್ ತ್ರೀತ್ರಯ ವ್ಯವಸ್ಥೆ ಸುಮಾರು 10 ಬಿಲಿಯನ್ ಡಾಲರುಗಳ ಸೋರಿಕೆಯನ್ನು ಇದುವರೆಗೆ ತಡೆಹಿಡಿದಿದೆ. 

  ಡಿಜಿಟಲ್ ತಂತ್ರಜ್ಞಾನ ಹೇಗೆ “ಜೀವಿಸಲು ಅನುಕೂಲಕರ ವಾತಾವರಣ” ನಿರ್ಮಾಣ ಮಾಡಲು ಅನುಕೂಲಕರವಾಗಿದೆ ಎಂಬುದರ ಕುರಿತಂತೆ ಕೆಲವು ಉದಾಹರಣೆಗಳನ್ನು ನಾನು ಹಂಚಿಕೊಳ್ಳುತ್ತೇನೆ.

  ಇಂದು ರೈತರು ಹಲವಾರು ಸೇವೆಗಳನ್ನು ಇದರ ಮೂಲಕ ಪಡೆಯಬಹುದಾಗಿದೆ. ಮಣ್ಣಿನ ಪರೀಕ್ಷೆಯ ಫಲಿತಾಂಶ, ತಜ್ಞರ ಸಲಹೆ , ಮತ್ತು ಅವರ ಉತ್ಪಾದನೆಗೆ ಉತ್ತಮ ಬೆಲೆಯನ್ನು ಗುಂಡಿಯೊಂದನ್ನು ಒತ್ತುವ ಮೂಲಕ ಪಡೆಯಬಹುದು. ಆದ್ದರಿಂದ ಡಿಜಿಟಲ್ ತಂತ್ರಜ್ಞಾನ ಕೃಷಿ ಆದಾಯ ಹೆಚ್ಚಳಕ್ಕೂ ಕಾಣಿಕೆ ಕೊಡುತ್ತಿದೆ.

ಸಣ್ಣ ವ್ಯಾಪಾರಿಯೊಬ್ಬರು ಸರಕಾರದ ಇ-ಮಾರ್ಕೆಟ್ ನಲ್ಲಿ ನೊಂದಾಯಿಸಿಕೊಳ್ಳಬಹುದು ಮತ್ತು ಸರಕಾರಕ್ಕೆ ಸರಕುಗಳನ್ನು ಪೂರೈಸಲು ಸ್ಪರ್ಧಾತ್ಮಕವಾಗಿ ಬಿಡ್ ಮಾಡಬಹುದು. ಆತ ವ್ಯಾಪಾರೋದ್ಯಮ ವಿಸ್ತರಿಸುತ್ತಿದ್ದಂತೆ , ಸರಕಾರದ ಖರೀದಿ ಖರ್ಚನ್ನು ಕಡಿಮೆ ಮಾಡುವಲ್ಲಿ ತನ್ನ ಕಾಣಿಕೆ ಕೊಡುತ್ತಾನೆ. ಇದು ದಕ್ಷತೆಯನ್ನು ಹೆಚ್ಚಿಸುತ್ತದೆ  ಮತ್ತು ಸಾರ್ವಜನಿಕ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ತಂದುಕೊಡುತ್ತದೆ.

  “ ಜೀವಂತ ಸಾಕ್ಷಿ “ಗಾಗಿ ನಿವೃತ್ತಿ ವೇತನದಾರರು ಬ್ಯಾಂಕ್ ಅಧಿಕಾರಿಗಳ ಎದುರು ತಮ್ಮನ್ನು ತಾವು ಹಾಜರು ಮಾಡಬೇಕೆಂದಿಲ್ಲ. ಇಂದು ನಿವೃತ್ತಿ ವೇತನದಾರರು ಅತ್ಯಂತ ಕಡಿಮೆ ದೈಹಿಕ ಪ್ರಯತ್ನದ ಮೂಲಕ ಆಧಾರ್ ಬಯೋಮೆಟ್ರಿಕ್ ವೇದಿಕೆಯಲ್ಲಿ ಇದಕ್ಕೆ ಸಾಕ್ಷಿಯನ್ನು ಒದಗಿಸಬಹುದು.

 ಮಾಹಿತಿ ತಂತ್ರಜ್ಞಾನದ ಕೆಲಸಗಾರರಲ್ಲಿ ಮಹಿಳೆಯರ ಪಾಲುದಾರಿಕೆ ಮಹತ್ವದ್ದಾಗಿದೆ. ಡಿಜಿಟಲ್ ತಂತ್ರಜ್ಞಾನ ಮಹಿಳೆಯರ ನೇತೃತ್ವದ ಹಲವು ಹೊಸ ಉದ್ಯಮಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಈ ರೀತಿಯಲ್ಲಿ ಐ.ಟಿ. ವಲಯವು ಲಿಂಗತ್ವ ಸಶಕ್ತೀಕರಣದ ನಿಟ್ಟಿನಲ್ಲಿಯೂ ಕಾಣಿಕೆ ನೀಡಿದೆ.

  ಭಾರತದ ನಾಗರಿಕರು ಹೆಚ್ಚು ಹೆಚ್ಚು ನಗದು ರಹಿತ ವಹಿವಾಟು ನಡೆಸುತ್ತಿದ್ದಾರೆ. ಇದಕ್ಕಾಗಿ ನಾವು ಭಾರತ್ ಇಂಟರ್ ಫೇಸ್ ಫ಼ಾರ್ ಮನಿ –ಅಥವಾ ಭೀಮ್ ಆಪ್ ನಿರ್ಮಿಸಿದ್ದೇವೆ. ಈ ಆಪ್ ನಗದು ರಹಿತ ಮತ್ತು ಭ್ರಷ್ಟಾಚಾರ ಮುಕ್ತ ಸಮಾಜದತ್ತ ಚಲಿಸಲು ಸಹಾಯ ಮಾಡುತ್ತದೆ.

  ಈ ಉದಾಹರಣೆಗಳು ಆಡಳಿತ ಸುಧಾರಣೆಯಲ್ಲಿ ತಂತ್ರಜ್ಞಾನದ ಶಕ್ತಿಯನ್ನು ತೋರಿಸುತ್ತವೆ.

ಸ್ನೇಹಿತರೇ,

  ನಾವು ಡಿಜಿಟಲ್  ಭೂಮಿಕೆಯನ್ನು  ಸಹಭಾಗಿತ್ವದ ಆಡಳಿತಕ್ಕಾಗಿ ಅಥವಾ “ಜನ್ ಭಾಗೀದಾರಿ” ಗಾಗಿ ಬಳಸುತ್ತಿದ್ದೇವೆ. 2014 ರ ಮೇ ತಿಂಗಳಲ್ಲಿ ನಾವು ಅಧಿಕಾರಕ್ಕೇರಿದಾಗ , ಹಲವು ಜನರು ಅದರಲ್ಲೂ ಯುವಕರು ತಮ್ಮ  ಚಿಂತನೆಗಳನ್ನು ಹಂಚಿಕೊಳ್ಳಲು ಮತ್ತು ದೇಶಕ್ಕಾಗಿ ದುಡಿಯಲು ಆಶಯವನ್ನು ವ್ಯಕ್ತಪಡಿಸಿದ್ದರು.ಇಲ್ಲಿ ನಮ್ಮ ದೃಢ ನಂಬಿಕೆ ಏನೆಂದರೆ , ನಮ್ಮಲ್ಲಿ ಮಿಲಿಯಾಂತರ ಭಾರತೀಯರು ಇದ್ದಾರೆ, ಅವರ ಪರಿವರ್ತನಾತ್ಮಕ ಚಿಂತನೆಗಳು ಭಾರತವನ್ನು ಹೊಸ ಎತ್ತರಕ್ಕೇರಿಸುವಲ್ಲಿ ಬಹು ದೂರಕ್ಕೆ ಕೊಂಡೊಯ್ಯಬಲ್ಲವು ಎಂಬುದಾಗಿದೆ.

  ಇದರಿಂದಾಗಿ ನಾವು ನಾಗರಿಕರನ್ನು ಒಳಗೊಳ್ಳುವಂತಹ ಪೋರ್ಟಲ್  ಮೈಗವರ್ನಮೆಂಟ್ (MyGov.    ) ಆರಂಭಿಸಿದೆವು.ಈ ವೇದಿಕೆ ಪ್ರಮುಖ ವಿಷಯಗಳ ಬಗ್ಗೆ ನಾಗರಿಕರ ಚಿಂತನೆ ಮತ್ತು ಯೋಚನೆಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಹಲವು ಮುಖ್ಯ ನೀತಿ ವಿಷಯಗಳಲ್ಲಿ , ನಾವು ಸಾವಿರಾರು ಮೌಲ್ಯಯುತವಾದ ಸಲಹೆಗಳನ್ನು ಸ್ವೀಕರಿಸಿದ್ದೇವೆ. ಸರಕಾರದ  ಹಲವು ಆರಂಭಿಕ ಉಪಕ್ರಮಗಳ  ಲೋಗೋ ಮತ್ತು ಚಿಹ್ನೆಗಳ ವಿನ್ಯಾಸವನ್ನು  ಮೈ ಗೌ (.MyGov.) ನಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗುಂಪು ಮೂಲಗಳಿಂದ ಪಡೆದು ಕೊಂಡಿದ್ದೇವೆ. ಪ್ರಧಾನ ಮಂತ್ರಿಯವರ ಕಚೇರಿಯಲ್ಲಿರುವ ಅಧಿಕೃತ ಆಪ್ ಕೂಡಾ  ಮೈ ಗೌ ನಲ್ಲಿ ಹರಿಯಲು ಬಿಟ್ಟ ಸ್ಪರ್ಧೆಯ ಫಲಿತಾಂಶವಾಗಿದೆ. ಇದಕ್ಕೆ ಯುವಕರಿಂದ ಪ್ರತಿಭಾಪೂರ್ಣ ಪ್ರತಿಕ್ರಿಯೆಗಳು ಬಂದಿವೆ. ಮೈ ಗೌ ಪ್ರಜಾಪ್ರಭುತ್ವವನ್ನು ಹೇಗೆ ತಂತ್ರಜ್ಞಾನ ಬಲಪಡಿಸಬಲ್ಲುದು ಎಂಬುದಕ್ಕೊಂದು ಉದಾಹರಣೆ.

  ನಾನು ಇನ್ನೊಂದು ಉದಾಹರಣೆಯತ್ತ ಹೊರಳುತ್ತೇನೆ. ಅಧಿಕಾರ ವಹಿಸಿಕೊಂಡ ಬಳಿಕ ಪ್ರಮುಖ ಸರಕಾರಿ ಯೋಜನೆಗಳು  ಮತ್ತು ಆರಂಭಿಕ ಉಪಕ್ರಮಗಳು ಸರಕಾರಿ ಕಾರ್ಯವೈಖರಿಯಲ್ಲಿ ಕೆಲವೊಮ್ಮೆ  ಅನಗತ್ಯವಾಗಿ ಹಗೇವಿನಂತೆ ದಾಸ್ತಾನು ಆಗುತ್ತಿದ್ದುದು ನನ್ನ ಗಮನಕ್ಕೆ ಬಂದಿತು.ಜತೆಗೆ ಅದರತ್ತ ಗಮನ ಕೇಂದ್ರಿತ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯ ಲೋಪವೂ ಇತ್ತು. ಆದ್ದರಿಂದ ನಾವು ಸೈಬರ್ ಅವಕಾಶ ಆಧಾರಿತ ವೇದಿಕೆ “ಪ್ರಗತಿ” ಯನ್ನು ರೂಪಿಸಿದೆವು. ಕ್ರಿಯಾತ್ಮಕ ಆಡಳಿತದ ಸಕಾಲಿಕ ಅನುಷ್ಟಾನವೇ –ಪ್ರಗತಿ. ಹಿಂದಿಯಲ್ಲಿ ಪ್ರಗತಿ ಎಂದರೆ ಸದಾ ಮುಂದುವರಿಯುವಿಕೆ/ಪ್ರಗತಿ.

  ಪ್ರತೀ ತಿಂಗಳ ಕೊನೆಯ ಬುಧವಾರ ನಾನು ಕೇಂದ್ರ ಹಾಗು ರಾಜ್ಯಗಳ ಹಿರಿಯ ಅಧಿಕಾರಿಗಳನ್ನು ಪ್ರಗತಿ ಸಭೆಯಲ್ಲಿ ಭೇಟಿಯಾಗುತ್ತೇನೆ. ಹಗೇವುಗಳನ್ನು ತಂತ್ರಜ್ಞಾನ ಒಡೆದು ಹಾಕುತ್ತದೆ.ನಮ್ಮ ನಮ್ಮ ಕಚೇರಿಗಳಲ್ಲಿ ಕುಳಿತುಕೊಂಡೇ ನಾವು ಸೈಬರ್ ಲೋಕದ ಸಹಾಯದಿಂದ ಪ್ರಮುಖ ಆಡಳಿತಾತ್ಮಕ ವಿಷಯಗಳನ್ನು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ. ಈ ವಿಷಯದಲ್ಲಿ  ನನಗೆ ಸಂತೋಷವಿದೆ , ಪ್ರಗತಿ ಸಭೆಗಳು ತ್ವರಿತ ಗತಿಯಲ್ಲಿ ನಿರ್ಧಾರ ಕೈಗೊಳ್ಳುವಲ್ಲಿ , ಒಮ್ಮತಾಭಿಪ್ರಾಯ, ಒಟ್ಟಾಭಿಪ್ರಾಯ ರೂಪಿಸುವಲ್ಲಿ ಮತ್ತು ದೇಶದ ವಿಶಾಲ ವ್ಯಾಪ್ತಿಯ ಹಿತಾಸಕ್ತಿ ಕಾಪಾಡುವಲ್ಲಿ ನೆರವಾಗಿವೆ.ಕೆಂಪು ಪಟ್ಟಿಯಲ್ಲಿ ಸಿಕ್ಕಿ ಬಿದ್ದಿದ್ದ ಬಿಲಿಯಾಂತರ ಡಾಲರ್ ಮೌಲ್ಯದ  ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಮತ್ತೆ ಹಳಿಗೆ ತಂದು ಪ್ರಗತಿಯಲ್ಲಿ ಕೊಂಡೊಯ್ಯುವಲ್ಲಿ ಪ್ರಗತಿ ಮಹತ್ವದ ಪಾತ್ರ ವಹಿಸಿದೆ.

 ನಾನು ನನ್ನದೇ ರೀತಿಯಲ್ಲಿ ಪ್ರಯತ್ನ ಮಾಡಿದ್ದೇನೆ- ನರೇಂದ್ರ ಮೋದಿ ಮೊಬೈಲ್ ಆಪ್ ಮೂಲಕ . ಈ ಆಪ್ ನಾಗರಿಕರ ಜತೆ ನನ್ನ ಸಂಪರ್ಕವನ್ನು ಹೆಚ್ಚು ಆಳಗೊಳಿಸಿದೆ. ಈ ಆಪ್ ಮೂಲಕ ನನಗೆ ಬರುತ್ತಿರುವ ಸಲಹೆಗಳು ಬಹಳ ಉಪಯುಕ್ತವಾಗಿವೆ.

   ಇಂದು ನಾವು ಉಮಾಂಗ್ ಮೊಬೈಲ್ ಆಪ್ ಆರಂಭಿಸಿದ್ದೇವೆ. ಇದು ನೂರಕ್ಕೂ ಅಧಿಕ ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಇಲಾಖೆಗಳ ವ್ಯಾಪ್ತಿಯಲ್ಲಿ ಈ ಸೇವೆಗಳು ಇರುತ್ತವೆ. ಈ ಸಮಗ್ರ ಧೋರಣೆ  ಈ ಇಲಾಖೆಗಳ ಕೆಲಸದಲ್ಲಿ “  ಸಮಾನ ನಿರ್ವಹಣಾ ಒತ್ತಡ” ದ ಸ್ವಯಂಚಾಲಿತ ಸ್ತರವನ್ನು ನಿರ್ಮಾಣ ಮಾಡುತ್ತದೆ.

 ಸ್ನೇಹಿತರೇ,

  ವಿಶ್ವ ಸಮುದಾಯದ ಜತೆ ನಾವು ನಮ್ಮ ಯಶೋಗಾಥೆಗಳನ್ನು, ಅನುಭವಗಳನ್ನು  ಹಂಚಿಕೊಳ್ಲಲು ಸಂತೋಷಪಡುತ್ತೇವೆ. ಇನ್ನೊಂದೆಡೆ ಭಾರತವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸಿ ಆಧುನಿಕ, ನಾವೀನ್ಯ ರೀತಿಯ ಪರಿಹಾರಗಳನ್ನು   ಒದಗಿಸುವ ಮಾದರಿಗಳಿಗೆ ಹುಡುಕಾಟವನ್ನು ಮಾಡುತ್ತಿದೆ. ಅಂಗವೈಕಲ್ಯ ಇರುವವರ ಅನುಕೂಲಕ್ಕೆ  ಸೈಬರ್ ಅವಕಾಶವನ್ನು ಸಮರ್ಥವಾಗಿಸುವ ಬಗ್ಗೆಯೂ ನಾವು ಆಶಯ ಹೊಂದಿದ್ದೇವೆ. ಇತ್ತೀಚೆಗೆ 36 ಗಂಟೆಗಳ ಹ್ಯಾಕಥಾನ್ ನಲ್ಲಿ ಮಂತ್ರಾಲಯಗಳು ಮಂಡಿಸಿದ ಗಂಭೀರ ಸಮಸ್ಯೆಗಳಿಗೆ ಕಾಲೇಜು ವಿದ್ಯಾರ್ಥಿಗಳು ಪರಿಹಾರ ಸಲಹೆ ಮಾಡಿದ್ದಾರೆ. ನಾವು ಜಾಗತಿಕ ಅನುಭವಗಳಿಂದ ಮತ್ತು ಉತ್ತಮ ಮಾದರಿಗಳಿಂದ ಕಲಿಯುವುದನ್ನು ಎದುರು ನೋಡುತ್ತೇವೆ. ನಾವೆಲ್ಲರೂ ಒಗ್ಗೂಡಿ ಬೆಳೆದಾಗ ಮಾತ್ರ ಬೆಳವಣಿಗೆ ಆಗುತ್ತದೆ ಎಂಬ ತತ್ವದಲ್ಲಿ ನಾವು ನಂಬಿಕೆ ಇರಿಸಿದ್ದೇವೆ.

  ಸೈಬರ್ ಅವಕಾಶ ನಾವೀನ್ಯತೆ, ಅನ್ವೇಷಣೆಗೆ ಪ್ರಮುಖ ಕ್ಷೇತ್ರವಾಗಿ ಉಳಿದಿದೆ. ನಮ್ಮ “ಸ್ಟಾರ್ಟಪ್ “ಗಳು ಜನಸಾಮಾನ್ಯರು ಪ್ರತೀದಿನ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು, ಮತ್ತು ಜನರ ಜೀವನ ಸುಧಾರಿಸಲು ಕಾರ್ಯೋನ್ಮುಖವಾಗಿವೆ. ಜಾಗತಿಕ ಹೂಡಿಕೆದಾರ ಸಮುದಾಯ ಭಾರತದ ಸ್ಟಾರ್ಟಪ್ ಗುಂಪಿನಿಂದ ಬಳಸಿಕೊಳ್ಳಲು ಕಾಯುತ್ತಿರುವ ವ್ಯಾಪಕವಾದ ಸಾಮರ್ಥ್ಯವನ್ನು ಪರಿಗಣಿಸುವ ಬಗ್ಗೆ ನನಗೆ ವಿಶ್ವಾಸವಿದೆ. ಈ ಅವಕಾಶದಲ್ಲಿ ಹೂಡಿಕೆ ಮಾಡಲು ನಾನು ನಿಮಗೆ ಆಹ್ವಾನ ನೀಡುತ್ತೇನೆ ಮತ್ತು ಆ ಮೂಲಕ ಭಾರತೀಯ ಸ್ಟಾರ್ಟಪ್ ಗಳ ಯಶೋಗಾಥೆಯಲ್ಲಿ ಪಾಲುದಾರರಾಗಬಹುದಾಗಿದೆ.

  ಸ್ನೇಹಿತರೇ,

  ಅಂತರ್ಜಾಲ ತನ್ನ ಸ್ವಭಾವದಿಂದಲೇ ಎಲ್ಲರನ್ನೂ ಒಳಗೊಳ್ಳುವಂತಹದ್ದು ಅದು ಯಾರನ್ನೂ ಹೊರಗಿಡುವಂತಹದ್ದಲ್ಲ. ಅದು ಸಂಪರ್ಕದಲ್ಲಿ ಸಮಾನತೆಯನ್ನು ಒದಗಿಸುತ್ತದೆ. ಅವಕಾಶಗಳ ಸಮಾನತೆಯನ್ನು ಒದಗಿಸುತ್ತದೆ. ಇವತ್ತಿನ ಉಪನ್ಯಾಸಗಳು, ಪ್ರವಚನಗಳು ಫೇಸ್ ಬುಕ್ಕಿನ ಜನರಿಂದ  ಟ್ವೀಪಲ್ಸ್  ಮತ್ತು ಇನ್ಸ್ಟಾಗ್ರಾಮರುಗಳಿಂದ ವಿನ್ಯಾಸಗೊಳಿಸಲ್ಪಡುತ್ತಿವೆ. ಸಾಮಾಜಿಕ ಮಾಧ್ಯಮ ವೇದಿಕೆಗಳು ಸೈಬರ್ ಅವಕಾಶದಲ್ಲಿ ಎಲ್ಲರಿಗೂ ಸಹಭಾಗಿತ್ವವನ್ನು ನೀಡುತ್ತಿವೆ. ಸ್ಟುಡಿಯೋಗಳಿಂದ ತಜ್ಞರು ಹೇಳುವ ಸುದ್ದಿಗಳು, ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಅನುಭವಗಳ ಪೂರಕ ಮಾಹಿತಿಯೊಂದಿಗೆ ಹೈಲೈಟ್ ಆಗುತ್ತಿವೆ. ತಜ್ಞತೆ ಮತ್ತು ಅನುಭವವನ್ನು ಒಟ್ಟಿಗೆ ತರುವ ಈ ಪರಿವರ್ತನೆ ಸೈಬರ್ ವಿಶ್ವದ  ಕೊಡುಗೆ. ಅಂತರ್ಜಾಲ ಯುವಕರಿಗೆ ತಮ್ಮ ಸೃಜನ ಶೀಲತೆ, ಸಾಮರ್ಥ್ಯ, ಮತ್ತು ಸಮರ್ಥತತ್ವವನ್ನು ತೋರಿಸಲು ಇರುವ ಆದರ್ಶ ವೇದಿಕೆಯಾಗಿದೆ. ಆಳವಾದ ಜ್ಞಾನದ ಬ್ಲಾಗ್ ಇರಲಿ, ಅದ್ಭುತ ಸಂಗೀತದ ನಿರೂಪಣೆ , ಕಲೆ ಅಥವಾ ನಾಟಕವೇ ಇರಲಿ , ...ಇಲ್ಲಿ ಅದಕ್ಕೆಲ್ಲಾ ಆಕಾಶವೇ ಮಿತಿ.

  ಸ್ನೇಹಿತರೇ,

 ಈ ಸಮ್ಮೇಳನದ ಶೀರ್ಷಿಕೆ : “ಸಹ್ಯ ಅಭಿವೃದ್ಧಿಗೆ ಸೈಬರ್ ಅವಕಾಶದ ಪಡೆಯುವಿಕೆ ಮತ್ತು ಒಳಗೊಳ್ಳುವಿಕೆ”ಯು ಮಾನವ ಕುಲಕ್ಕೆ ಈ ಪ್ರಮುಖ ಆಸ್ತಿಯನ್ನು ಪಡೆದುಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ. ವಿಶ್ವ ಸಮುದಾಯವು ಸೈಬರ್ ಭದ್ರತೆಯ ವಿಷಯವನ್ನು  ಆತ್ಮವಿಶ್ವಾಸದಿಂದ ಎದುರಿಸಿ ದೃಢವಿಶ್ವಾಸದಿಂದ ಪರಿಹರಿಸಿಕೊಳ್ಳುವ ಧೋರಣೆಯನ್ನು ಹೊಂದಬೇಕಾಗಿದೆ. ಸೈಬರ್ ಆವಕಾಶ ತಂತ್ರಜ್ಞಾನಗಳು ನಮ್ಮ ಜನರಿಗೆ ಶಕ್ತಿ ಕೊಡುವಂತೆ ಉಳಿಯಬೇಕು.  

 ಮುಕ್ತ ಮತ್ತು ಎಲ್ಲರಿಗೂ ಲಭ್ಯವಾಗುವ ಅಂತರ್ಜಾಲದ ಹಂಬಲ ಕೆಲವೊಮ್ಮೆ ಅಪಾಯಕ್ಕೀಡು ಮಾಡುವ ಸಾಧ್ಯತೆಯೂ ಇದೆ. ವೆಬ್ ಸೈಟ್ ಗಳ ಹ್ಯಾಕಿಂಗ್ ಮತ್ತು ಅವುಗಳನ್ನು ಹಾಳುಗೆಡವುದು ಬೃಹತ್ ಮಂಜುಗಡ್ಡೆಯ ತುದಿಯಂತೆ. ಸೈಬರ್ ಧಾಳಿಗಳು ಪ್ರಮುಖ ಬೆದರಿಕೆಗಳು, ಅದರಲ್ಲೂ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿ ಇವುಗಳ ಹಾವಳಿ ವಿಶೇಷ. ನಾವು ಇಂತಹ ಅಪಾಯ,  ಬೆದರಿಕೆ ಇರುವ ನಮ್ಮ ಸಮಾಜದ ವಲಯಗಳು ಸೈಬರ್ ಕ್ರಿಮಿನಲ್ ಗಳ ದುಷ್ಟ ಉದ್ದೇಶಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಸೈಬರ್ ಭದ್ರತೆಯ ಕಳವಳಗಳಿಗೆ ಜಾಗೃತರಾಗಿರುವುದು ಜೀವನದ ವಿಧಾನವಾಗಬೇಕು.

ಸೈಬರ್ ಬೆದರಿಕೆಗಳನ್ನು ಎದುರಿಸಲು ಸಮರ್ಥ ವೃತ್ತಿಪರರನ್ನು ಸೂಕ್ತ ಸಾಧನ , ಸಲಕರಣೆಗಳೊಂದಿಗೆ ತಯಾರು ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಗಬೇಕು. ಸೈಬರ್ ದಾಳಿಗಳ ವಿರುದ್ಧ ಈ ಸೈಬರ್ ಸೈನಿಕರು ಸದಾ ಜಾಗೃತರಾಗಿರಬೇಕು. “ಹ್ಯಾಕಿಂಗ್” ಎಂಬ ಶಬ್ದ  ಅದು ಸಂಶಯಾಸ್ಪದ ಹಿನ್ನೆಲೆಯದ್ದಾದರೂ ಬಹಳ ಉತ್ಸಾಹ, ರೋಮಾಂಚನಗೊಳಿಸುತ್ತದೆ. ಯುವಕರಿಗೆ ಸೈಬರ್ ರಕ್ಷಣೆ ಇಂದು ಆಕರ್ಷಕ ಮತ್ತು ಉತ್ತಮ ಉದ್ಯೋಗಾವಕಾಶ ಆಗಿರುವಂತೆ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ.

  ಇದೇ ಸಂಧರ್ಭದಲ್ಲಿ ಡಿಜಿಟಲ್ ಅವಕಾಶ ಭಯೋತ್ಪಾದನೆ ಮತ್ತು ಕ್ರಾಂತಿಕಾರಿ ಶಕ್ತಿಗಳಿಗೆ ಆಟದ ಬಯಲು ಆಗದಂತೆಯೂ ರಾಷ್ಟ್ರವು ಆ ಜವಾಬ್ದಾರಿ ತೆಗೆದುಕೊಂಡು ನಿಭಾಯಿಸಬೇಕು. ಸದಾ ಬದಲಾಗುತ್ತಿರುವ ಬೆದರಿಕೆ ಭೂಪಟವನ್ನು/ಪರಿಸ್ಥಿತಿಯನ್ನು ಪ್ರತಿಬಂಧಿಸಲು ,  ಭದ್ರತಾ ಏಜೆನ್ಸಿಗಳ ನಡುವೆ ಮಾಹಿತಿ ವಿನಿಮಯ ಮತ್ತು ಸಮನ್ವಯ ಅಗತ್ಯವಾಗಿದೆ.

  ಒಂದೆಡೆ ನಾವು ಖಾಸಗಿತನ ಮತ್ತು ಮುಕ್ತತೆಯೊಂದಿಗೆ ಸಾಗುತ್ತಿದ್ದರೆ ಇನ್ನೊಂದೆಡೆ ರಾಷ್ಟ್ರದ ಭದ್ರತೆಯನ್ನೂ ಪರಿಗಣಿಸಬೇಕಾದ ಜರೂರು ಇದೆ. ಇದರ ಜತೆಯಾಗಿ ನಾವು ಒಂದೆಡೆ ವಿಶ್ವ ಮತ್ತು ಮುಕ್ತ ವ್ಯವಸ್ಥೆಗಳ ಜತೆ ಸಾಗುತ್ತಿರುವಂತೆಯೇ, ಇನ್ನೊಂದೆಡೆ ರಾಷ್ಟ್ರಕ್ಕೆ ವಿಶೇಷವಾಗಿ ಬೇಕಾದ ಕಾನೂನು ಆವಶ್ಯಕತೆಗಳನ್ನು ನಿಭಾಯಿಸಿಕೊಂಡು ಸಾಗಬಹುದು.

  ಸ್ನೇಹಿತರೇ.

  ಭವಿಷ್ಯದಲ್ಲಿ ಡಿಜಿಟಲ್ ತಂತ್ರಜ್ಞಾನ ಯಾವ ಪರಿಣಾಮ ಬೀರಬಹುದು ಎಂಬುದನ್ನು ನಾವೀಗಲೇ ಮುಂಗಾಣ್ಕೆ ಮಾಡಲಾರೆವು. ಪಾರದರ್ಶಕತೆ, ಖಾಸಗಿತನ,  ನಂಬಿಕೆ ಮತ್ತು ಭದ್ರತೆಯಂತಹ ಪ್ರಮುಖ ಪ್ರಶ್ನೆಗಳು ನಾವು  ಎದುರಿಸಬೇಕಾದ ಪ್ರಮುಖ  ಸವಾಲುಗಳಾಗಿವೆ. ಡಿಜಿಟಲ್ ತಂತ್ರಜ್ಞಾನ ಮಾನವ ಕುಲವನ್ನು ಸಶಕ್ತೀಕರಣಗೊಳಿಸುತ್ತದೆ. ಅದು ಆ ಹಾದಿಯಲ್ಲಿಯೇ ಸಾಗುವಂತೆ ನಾವು ಖಚಿತಪಡಿಸಿಕೊಳ್ಳಬೇಕು.

 ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗೀದಾರರ ಪಾಲುದಾರಿಕೆಯು  ಈ ವೇದಿಕೆಯು ಜಾಗತಿಕವಾಗಿ  ಪಡೆಯುತ್ತಿರುವ ಬೆಂಬಲದ ಪ್ರತೀಕವಾಗಿದೆ. ರಾಷ್ಟ್ರ, ರಾಜ್ಯಗಳು, ಕೈಗಾರಿಕೆಗಳು, ಶಿಕ್ಷಣ ವಲಯ ಮತ್ತು ನಾಗರಿಕ ಸಮಾಜ-ಇವೆಲ್ಲವೂ ಪರಸ್ಪರ ಔಪಚಾರಿಕ ಸಹಭಾಗಿತ್ವದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾದ ಅಗತ್ಯವಿದೆ. ಇದು ಜೀವನ ಗುಣಮಟ್ಟವನ್ನು ಬದಲಾಯಿಸುವ ಭದ್ರ ಸೈಬರ್ ಅವಕಾಶದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ.

ಸ್ನೇಹಿತರೇ, 

  ಸಂಖ್ಯೆಯನ್ನು ಗಮನಿಸಿದರೆ ಈ ಸಮ್ಮೇಳನ ಇಂತಹ ಸಮ್ಮೇಳನಗಳಲ್ಲಿ ಅತ್ಯಂತ ದೊಡ್ಡದು. ಎಲ್ಲಾ ಹಿನ್ನೆಲೆ ಮತ್ತು ಸಾರಿಗೆಯನ್ನು ಡಿಜಿಟಲ್ ವ್ಯವಸ್ಥೆ ಮೂಲಕ ನಿರ್ವಹಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ವಿಶ್ವದ ವಿವಿಧೆಡೆಯಿಂದ ಬಂದಿರುವ ಪ್ರತಿನಿಧಿಗಳು ಇದನ್ನು ಯಾವುದೇ ಅಡೆತಡೆ ಇಲ್ಲದ , ಸುಲಲಿತ ಅನುಭವವಾಗಿ ಪರಿಗಣಿಸುತ್ತಾರೆಂದು ನಾನು ಭಾವಿಸುತ್ತೇನೆ.

  ಇಲ್ಲಿ ಫಲಪ್ರದ ಮತ್ತು ಉತ್ಪಾದಕತೆಯನ್ನು ಗಮನದಲ್ಲಿಟ್ಟ ಚರ್ಚೆಗಳು ನಡೆಯಲಿ ಎಂದು ಹಾರೈಸುತ್ತಾ ನನ್ನ ಮಾತುಗಳನ್ನು ಕೊನೆಗೊಳಿಸುತ್ತೇನೆ. ನಾನು ಮಗದೊಮ್ಮೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಸಮ್ಮೇಳನ ಎಲ್ಲಾ ರೀತಿಯಲ್ಲೂ ಯಶಸ್ಸು ಪಡೆಯಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳು.

 

 



(Release ID: 1510954) Visitor Counter : 97


Read this release in: English , Gujarati , Tamil