ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಅತ್ಯಾಧುನಿಕ ಸ್ಪೆಕ್ಟ್ರಲ್ ಸಿಟಿ ಸೌಲಭ್ಯವನ್ನು ಉದ್ಘಾಟಿಸಿ, ಮಾನಸಿಕ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದ ಪ್ರಮುಖ ಉಪಕ್ರಮಗಳ ಪ್ರಗತಿ ಪರಿಶೀಲಿಸಿದರು


ಶ್ರೀಮತಿ ಶ್ರೀವಾಸ್ತವ ಅವರು ನಾಲ್ಕು ವೃತ್ತಿಪರ ವಿಭಾಗಗಳಲ್ಲಿ ಮಾನಸಿಕ ಆರೋಗ್ಯ ಕಾರ್ಯಪಡೆಯನ್ನು ಬಲಪಡಿಸುವ ನಿಮ್ಹಾನ್ಸ್‌ನ ಆತ್ಮಹತ್ಯೆ ತಡೆ ಕಾರ್ಯಕ್ರಮಗಳು ಮತ್ತು ಸಾಮರ್ಥ್ಯವರ್ಧನೆಯ ಉಪಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದರು

ಟೆಲಿ-ಮಾನಸ್‌ಗೆ 50 ಲಕ್ಷ ಕರೆಗಳು: ಸಹಾಯವಾಣಿ ಏಕೀಕರಣ, ಸಮಾಲೋಚಕರ ತರಬೇತಿ, ಗುಣಮಟ್ಟದ ಭರವಸೆ ಮತ್ತು ತಂತ್ರಜ್ಞಾನ ಆಧಾರಿತ ಮಾನಸಿಕ ಆರೋಗ್ಯ ಸೇವೆಗಳ ವಿಸ್ತರಣೆಯ ಪ್ರಗತಿ ಪರಿಶೀಲನೆ

ನಿಮ್ಹಾನ್ಸ್‌ನ ವ್ಯಸನ ವಿಮುಕ್ತಿ ವೈದ್ಯಕೀಯ ಕೇಂದ್ರದಿಂದ 2026ರ ಜನವರಿಯಿಂದ ಅಕ್ಟೋಬರ್‌ವರೆಗೆ 25,913 ಮಂದಿಗೆ ಚಿಕಿತ್ಸೆ; ಟೆಲಿಮೆಡಿಸಿನ್ ಅನುಸರಣಾ ಸೇವೆಗಳು, ವಿಶೇಷ ಚಿಕಿತ್ಸಾ ಸೌಲಭ್ಯಗಳು ಮತ್ತು ರಾಷ್ಟ್ರವ್ಯಾಪಿ ಸೇವಾ ವ್ಯಾಪ್ತಿ ಬಲವರ್ಧನೆ

ಕರ್ನಾಟಕದ 37 ಸರ್ಕಾರಿ ಆಸ್ಪತ್ರೆಗಳಿಗೆ ತಲುಪಿದ ನಿಮ್ಹಾನ್ಸ್‌ನ ಆತ್ಮಹತ್ಯೆ ತಡೆ ಉಪಕ್ರಮಗಳು; ನಗರ ಸ್ವಯಂ-ಹಾನಿ ಅಧ್ಯಯನದಡಿ 31,557 ಮಂದಿ ಬದುಕುಳಿದವರಿಗೆ ನೆರವು

ನೀತಿ ಆಯೋಗದ ಸಮಾಲೋಚನೆಯೊಂದಿಗೆ ನಿಮ್ಹಾನ್ಸ್ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ (KaBHI) ಅಡಿಯಲ್ಲಿ 2.61 ಲಕ್ಷ ಮಂದಿಯ ತಪಾಸಣೆ, 32,630 ರೋಗಿಗಳಿಗೆ ಚಿಕಿತ್ಸೆ; ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯಪಡೆ ಪ್ರಸ್ತಾವನೆ

ಪ್ರಕಟಣಾ ದಿನಾಂಕ: 27 NOV 2026 8:01PM by PIB Bengaluru

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ ಅವರು ಇಂದು ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಸ್ಪೆಕ್ಟ್ರಲ್ ಸಿಟಿ (Spectral CT) ಸೌಲಭ್ಯವನ್ನು ಉದ್ಘಾಟಿಸಿ, ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ತಮ್ಮ ಭೇಟಿಯ ಸಂದರ್ಭದಲ್ಲಿ, ಮಾನಸಿಕ ಆರೋಗ್ಯ ಸೇವೆ, ಆತ್ಮಹತ್ಯೆ ತಡೆ, ವ್ಯಸನ ವಿಮುಕ್ತಿ ಚಿಕಿತ್ಸೆ, ಸಾಮರ್ಥ್ಯವರ್ಧನೆ ಮತ್ತು ಮೆದುಳಿನ ಆರೋಗ್ಯಕ್ಕೆ ಸಂಬಂಧಿಸಿದ ರಾಷ್ಟ್ರೀಯ ಪ್ರಯತ್ನಗಳಿಗೆ ಸಂಸ್ಥೆಯ ಪ್ರಮುಖ ಉಪಕ್ರಮಗಳು ಹಾಗೂ ಕೊಡುಗೆಗಳನ್ನು ಕಾರ್ಯದರ್ಶಿಯವರು ಪರಿಶೀಲಿಸಿದರು.

ಹೊಸದಾಗಿ ಕಾರ್ಯಾರಂಭಗೊಂಡಿರುವ ಈ ಸೌಲಭ್ಯದಲ್ಲಿ ಜಿಇ ಕಂಪನಿಯ ರೆವಲ್ಯೂಷನ್ ಅಪೆಕ್ಸ್ ಎಲೈಟ್ ಸಿಟಿ ಸ್ಕ್ಯಾನರ್ ಅಳವಡಿಸಲಾಗಿದೆ. ಇದು ಅತ್ಯಾಧುನಿಕ ಸ್ಪೆಕ್ಟ್ರಲ್ ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರ ಮರುರಚನೆ ತಂತ್ರಜ್ಞಾನ ಹೊಂದಿರುವ 256-ಡಿಟೆಕ್ಟರ್-ರೋ ವ್ಯವಸ್ಥೆಯಾಗಿದೆ. ವಯಸ್ಕರು ಮತ್ತು ಮಕ್ಕಳಿಗೆ ಸಂಬಂಧಿಸಿದ ನರಮಂಡಲ, ಹೃದಯ, ರಕ್ತನಾಳಗಳು ಹಾಗೂ ಇಡೀ ದೇಹದ ಸಮಗ್ರ ಚಿತ್ರಣವನ್ನು ಒದಗಿಸುವ ಉದ್ದೇಶದಿಂದ ಇದನ್ನು ವಿನ್ಯಾಸಗೊಳಿಸಲಾಗಿದೆ. ತುರ್ತು ಚಿಕಿತ್ಸಾ ವಿಭಾಗಕ್ಕೆ ಬರುವ ಹೆಚ್ಚಿನ ಸಂಖ್ಯೆಯ ರೋಗಿಗಳ ಅಗತ್ಯಗಳನ್ನು ಪೂರೈಸಲು ಈ ಸ್ಕ್ಯಾನರ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಈ ಅತ್ಯಾಧುನಿಕ ಇಮೇಜಿಂಗ್ ವ್ಯವಸ್ಥೆಯು ತುರ್ತು ರೋಗನಿರ್ಣಯ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ವಿಶೇಷವಾಗಿ, ಪಾರ್ಶ್ವವಾಯು ಮತ್ತು ಮೆದುಳಿನ ರಕ್ತನಾಳಗಳಿಗೆ ಸಂಬಂಧಿಸಿದ ತುರ್ತು ಚಿಕಿತ್ಸೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ. ಇಂತಹ ಸಂದರ್ಭಗಳಲ್ಲಿ ಸಕಾಲಿಕ ಮತ್ತು ನಿಖರವಾದ ರೋಗನಿರ್ಣಯ ಅತ್ಯಂತ ನಿರ್ಣಾಯಕವಾಗಿದೆ. ಮೆದುಳಿನಲ್ಲಿ ರಕ್ತಸ್ರಾವ, ಅಪಧಮನಿಗಳಲ್ಲಿನ ಅಡಚಣೆಗಳು ಹಾಗೂ ಜೀವಕ್ಕೆ ಅಪಾಯವನ್ನುಂಟುಮಾಡುವ ಇತರ ಪರಿಸ್ಥಿತಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಈ ವ್ಯವಸ್ಥೆ ನೆರವಾಗಲಿದೆ. ಜೊತೆಗೆ, ಹೃದಯ ಮತ್ತು ರಕ್ತನಾಳಗಳ ಕಾಯಿಲೆಗಳು, ವೈದ್ಯಕೀಯ ಮಧ್ಯಸ್ಥಿಕೆಗಳ ನಂತರ ಉಂಟಾಗುವ ತೊಡಕುಗಳು, ಬಹು ಗಂಭೀರ ಗಾಯಗಳು (ಪಾಲಿಟ್ರಾಮಾ) ಹಾಗೂ ಇತರ ಸಂಕೀರ್ಣ ವೈದ್ಯಕೀಯ ಪರಿಸ್ಥಿತಿಗಳ ಮೌಲ್ಯಮಾಪನಕ್ಕೂ ಇದು ಸಹಕಾರಿಯಾಗಲಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಉಪಕ್ರಮಗಳ ಪ್ರಗತಿ ಪರಿಶೀಲನೆ

ಕಾರ್ಯದರ್ಶಿಯವರು ಭೇಟಿಯ ಸಂದರ್ಭದಲ್ಲಿ, 50 ಲಕ್ಷ ಕರೆಗಳ ಮೈಲಿಗಲ್ಲು ದಾಟಿರುವ ಟೆಲಿ-ಮಾನಸ್ (ವಿವಿಧ ರಾಜ್ಯಗಳ ನಡುವಿನ ದೂರವಾಣಿ ಮಾನಸಿಕ ಆರೋಗ್ಯ ನೆರವು ಮತ್ತು ಜಾಲ ವ್ಯವಸ್ಥೆ) ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಿದರು. ಇತರ ಸಹಾಯವಾಣಿಗಳೊಂದಿಗೆ ಏಕೀಕರಣ, ರಾಷ್ಟ್ರವ್ಯಾಪಿ ಜಾಗೃತಿ ಉಪಕ್ರಮಗಳು, ಸಮಾಲೋಚಕರಿಗೆ ತರಬೇತಿ ಮತ್ತು ಮಾನ್ಯತೆ, ಗುಣಮಟ್ಟದ ಭರವಸೆ ಕ್ರಮಗಳು ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ಈ ಕಾರ್ಯಕ್ರಮದ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸಲಾಗಿದೆ. 2027–32ರ ಅವಧಿಗೆ ರೂಪಿಸಿರುವ ಇದರ ಐದು ವರ್ಷಗಳ ದೂರದೃಷ್ಟಿಯು ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದು, ಸೇವೆಗಳ ಗುಣಮಟ್ಟವನ್ನು ಉತ್ತಮಪಡಿಸುವುದು ಮತ್ತು ಟೆಲಿ-ಮಾನಸ್ ವ್ಯವಸ್ಥೆಯನ್ನು ವಿಶಾಲ ಆರೋಗ್ಯ ಸೇವಾ ವ್ಯವಸ್ಥೆಯೊಂದಿಗೆ ಇನ್ನಷ್ಟು ನಿಕಟವಾಗಿ ಸಂಯೋಜಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ.

ಆರೋಗ್ಯ ಕಾರ್ಯದರ್ಶಿಯವರು ನಿಮ್ಹಾನ್ಸ್‌ನ ವ್ಯಸನ ವಿಮುಕ್ತಿ ವೈದ್ಯಕೀಯ ಕೇಂದ್ರದ (CAM) ಚಟುವಟಿಕೆಗಳನ್ನೂ ಪರಿಶೀಲಿಸಿದರು. ಕೇಂದ್ರ ಆರೋಗ್ಯ ಸಚಿವಾಲಯದ ತಂಬಾಕು ನಿಯಂತ್ರಣ ಮತ್ತು ಮಾದಕವಸ್ತು ವ್ಯಸನಮುಕ್ತಗೊಳಿಸುವ ಕಾರ್ಯಕ್ರಮದಡಿ ನೆರವು ಪಡೆಯುತ್ತಿರುವ ಆರು ಕೇಂದ್ರಗಳಲ್ಲಿ ಇದು ಒಂದಾಗಿದೆ. 2026ರ ಜನವರಿಯಿಂದ ಅಕ್ಟೋಬರ್‌ವರೆಗೆ ವ್ಯಸನ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ 25,913 ಮಂದಿಗೆ ಈ ಕೇಂದ್ರ ಚಿಕಿತ್ಸೆ ಒದಗಿಸಿದ್ದು, ಅವರಲ್ಲಿ 7,000ಕ್ಕೂ ಹೆಚ್ಚು ಮಂದಿಗೆ ಟೆಲಿಮೆಡಿಸಿನ್ ಮೂಲಕ ಅನುಸರಣಾ (ಫಾಲೋ-ಅಪ್)‌ ಸೇವೆಗಳನ್ನು ನೀಡಲಾಗಿದೆ.

ಈ ಕೇಂದ್ರದ ವಿಶೇಷ ಚಿಕಿತ್ಸಾ ಸೇವೆಗಳಲ್ಲಿ ಓಪಿಯಾಯ್ಡ್ ಪರ್ಯಾಯ ಚಿಕಿತ್ಸೆ, ನ್ಯೂರೋಮಾಡ್ಯುಲೇಷನ್, ಸಮಾಲೋಚನೆ ಮತ್ತು ಟೆಲಿಮೆಡಿಸಿನ್ ಆಧಾರಿತ ಚಿಕಿತ್ಸೋತ್ತರ ಆರೈಕೆ ಸೇರಿವೆ. ಡಿಜಿಟಲ್ ತರಬೇತಿ ಮತ್ತು ಇ-ಕಲಿಕಾ ಕಾರ್ಯಕ್ರಮಗಳ ಮೂಲಕ ದೇಶಾದ್ಯಂತದ ಆರೋಗ್ಯ ವೃತ್ತಿಪರರಿಗೂ ಈ ಕೇಂದ್ರ ತರಬೇತಿ ಒದಗಿಸುತ್ತಿದೆ. ಇದರ 'ಅಡಿಕ್ಷನ್ ಆರ್‌ಎಕ್ಸ್' ಮೊಬೈಲ್ ಅಪ್ಲಿಕೇಶನ್ 145 ದೇಶಗಳಲ್ಲಿ ಸುಮಾರು 19,600 ಬಾರಿ ಡೌನ್‌ಲೋಡ್ ಆಗಿದೆ. ಸಮುದಾಯ ಮಟ್ಟದ ಸಂಪರ್ಕ ಕಾರ್ಯಕ್ರಮಗಳಲ್ಲಿ 'ನಶಾ ಮುಕ್ತ ಭಾರತ ಅಭಿಯಾನ' ಮತ್ತು 36,000ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿರುವ 'ಟೊಬ್ಯಾಕೋ ಕ್ವಿಟ್‌ಲೈನ್' ಸಹಾಯವಾಣಿ ಉಪಕ್ರಮಗಳೂ ಸೇರಿವೆ. ವಿಶೇಷವಾಗಿ ಯುವಜನರಲ್ಲಿ ವ್ಯಸನದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಲು ನೆರವಾಗುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ, ತನ್ನ ತರಬೇತಿ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಸಮಾಲೋಚನಾ ಸೇವೆಗಳನ್ನು ವಿಸ್ತರಿಸಲು ಈ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ವೃತ್ತಿಪರ ಸಾಮರ್ಥ್ಯಗಳು ಮತ್ತು ಆತ್ಮಹತ್ಯೆ ತಡೆ ಕ್ರಮಗಳ ಬಲವರ್ಧನೆ

ರಾಂಚಿಯ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ (ಸಿಐಪಿ) ಮತ್ತು ತೇಜ್‌ಪುರದ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯಿ ಪ್ರಾದೇಶಿಕ ಮಾನಸಿಕ ಆರೋಗ್ಯ ಸಂಸ್ಥೆ (ಎಲ್‌ಜಿಬಿಆರ್‌ಐಎಂಎಚ್) ಸಹಯೋಗದೊಂದಿಗೆ ಕೈಗೊಂಡಿರುವ ನಿಮ್ಹಾನ್ಸ್–ಸಿಐಪಿ–ಎಲ್‌ಜಿಬಿಆರ್‌ಐಎಂಎಚ್ ಸಾಮರ್ಥ್ಯವರ್ಧನಾ ಕಾರ್ಯಕ್ರಮದ ಪ್ರಗತಿಯನ್ನೂ ಪರಿಶೀಲಿಸಲಾಯಿತು. ಮನೋವೈದ್ಯಶಾಸ್ತ್ರ, ವೈದ್ಯಕೀಯ ಮನೋವಿಜ್ಞಾನ, ಮನೋವೈದ್ಯಕೀಯ ಸಮಾಜಕಾರ್ಯ ಮತ್ತು ಮನೋವೈದ್ಯಕೀಯ ಶುಶ್ರೂಷೆ ಎಂಬ ನಾಲ್ಕು ವಿಭಾಗಗಳಲ್ಲಿ ವೃತ್ತಿಪರರ ಸಾಮರ್ಥ್ಯವನ್ನು ಬಲಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ರಾಷ್ಟ್ರೀಯ ಆತ್ಮಹತ್ಯೆ ತಡೆ ಕಾರ್ಯತಂತ್ರದ (2022) ನಾಲ್ಕು ಆಧಾರಸ್ತಂಭಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವ ನಿಮ್ಹಾನ್ಸ್‌ನ ಆತ್ಮಹತ್ಯೆ ತಡೆ, ಸಂಶೋಧನೆ, ಅನುಷ್ಠಾನ, ತರಬೇತಿ ಮತ್ತು ತೊಡಗಿಸಿಕೊಳ್ಳುವಿಕೆ ಕೇಂದ್ರದ (ಎನ್-ಸ್ಪ್ರೈಟ್) ಕಾರ್ಯಚಟುವಟಿಕೆಗಳೂ ಪರಿಶೀಲನೆಯ ಮತ್ತೊಂದು ಪ್ರಮುಖ ವಿಷಯವಾಗಿದ್ದವು.

ಈ ಕೇಂದ್ರದ ʼನಗರ ಸ್ವಯಂ-ಹಾನಿ ಅಧ್ಯಯನʼ (ಯುಷಾಸ್) ದ ಅಡಿಯಲ್ಲಿ 2022ರಿಂದ ಈವರೆಗೆ 42,382 ಪ್ರಕರಣಗಳು ದಾಖಲಾಗಿವೆ. ಅವರಲ್ಲಿ 31,557 ಮಂದಿ ಬದುಕುಳಿದವರಿಗೆ ನೆರವು ಒದಗಿಸಲಾಗಿದ್ದು, ಆತ್ಮಹತ್ಯೆ ಅಥವಾ ಸ್ವಯಂಹಾನಿ ಪ್ರಯತ್ನದ ಮರುಕಳಿಕೆಯ ಪ್ರಮಾಣ ಶೇ. 1.3ರಷ್ಟಿದೆ ಎಂದು ವರದಿಯಾಗಿದೆ. ಪ್ರಸ್ತುತ ಈ ಕೇಂದ್ರವು ಕರ್ನಾಟಕದ 37 ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಮುದಾಯ, ಯುವಜನತೆ ಮತ್ತು ಕೆಲಸದ ಸ್ಥಳಗಳಲ್ಲಿ ಆತ್ಮಹತ್ಯೆ ತಡೆಗೆ ಗಮನಹರಿಸುವ 'ಸುರಕ್ಷಾ', 'ಯಶಸ್' ಮತ್ತು 'ಎಂಪವರ್' ಕಾರ್ಯಕ್ರಮಗಳನ್ನೂ ಇದು ಅನುಷ್ಠಾನಗೊಳಿಸುತ್ತಿದೆ.

ಇತ್ತೀಚೆಗೆ ಆರಂಭಿಸಲಾದ ನಿಮ್ಹಾನ್ಸ್ ವಿದ್ಯಾರ್ಥಿ ಮಾನಸಿಕ ಆರೋಗ್ಯ ಸೇವೆಗಳ ಕ್ಷೇಮ ಕೇಂದ್ರದ ಬಗ್ಗೆಯೂ ಶ್ರೀಮತಿ ಶ್ರೀವಾಸ್ತವ ಅವರಿಗೆ ಮಾಹಿತಿ ನೀಡಲಾಯಿತು. ಬಹುಶಿಸ್ತೀಯ ತಂಡದ ಮೂಲಕ ಈ ಕೇಂದ್ರವು ವಿದ್ಯಾರ್ಥಿಗಳಿಗೆ ವಿಶೇಷ ಸಮಾಲೋಚನೆ, ಮನೋಚಿಕಿತ್ಸೆ ಮತ್ತು ಮನೋವೈದ್ಯಕೀಯ ನೆರವನ್ನು ಒದಗಿಸುತ್ತದೆ. ಇದರ ಸೇವೆಗಳಲ್ಲಿ ವ್ಯವಸ್ಥಿತ ಅಲ್ಪಾವಧಿ ಚಿಕಿತ್ಸಾ ವಿಧಾನ, ಅಗತ್ಯವಿರುವವರಿಗೆ ದೀರ್ಘಾವಧಿ ಆರೈಕೆಗಾಗಿ ಇತರ ಕೇಂದ್ರಗಳಿಗೆ ಶಿಫಾರಸು ಮತ್ತು ವಾರಕ್ಕೆ ಎರಡು ಬಾರಿ ಮನೋವೈದ್ಯಕೀಯ ಸಮಾಲೋಚನೆ ಸೇರಿವೆ.

ಮೆದುಳಿನ ಆರೋಗ್ಯ ಮತ್ತು ತುರ್ತು ನರವೈದ್ಯಕೀಯ ಆರೈಕೆಯ ಸುಧಾರಣೆ

ಕರ್ನಾಟಕದಾದ್ಯಂತ ಮೆದುಳಿನ ಆರೋಗ್ಯ ಮತ್ತು ನರವೈದ್ಯಕೀಯ ಆರೈಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ಕೈಗೊಂಡಿರುವ ಪ್ರಯತ್ನಗಳ ಬಗ್ಗೆಯೂ ಚರ್ಚಿಸಲಾಯಿತು. ನಿಮ್ಹಾನ್ಸ್ ಮತ್ತು ರಾಜ್ಯ ಸರ್ಕಾರವು ನೀತಿ ಆಯೋಗದ ಸಮಾಲೋಚನೆಯೊಂದಿಗೆ ರೂಪಿಸಿರುವ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮವು (KaBHI) ನರವೈಜ್ಞಾನಿಕ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ತಡೆಗಟ್ಟುವುದು ಮತ್ತು ಚಿಕಿತ್ಸೆ ನೀಡುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಈ ಉಪಕ್ರಮದಡಿ ಈವರೆಗೆ 2.61 ಲಕ್ಷ ಮಂದಿಯ ತಪಾಸಣೆ ನಡೆಸಲಾಗಿದ್ದು, 32,630 ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಚಿಸಿರುವ ಮೆದುಳಿನ ಆರೋಗ್ಯ ಕುರಿತ ರಾಷ್ಟ್ರೀಯ ಕಾರ್ಯಪಡೆಯು, ರಾಷ್ಟ್ರೀಯ ಮಟ್ಟದ ಉಪಕ್ರಮಗಳಿಗೆ ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮವನ್ನು ಮಾದರಿಯಾಗಿ ಅಳವಡಿಸಿಕೊಳ್ಳುವಂತೆ ಪ್ರಸ್ತಾಪಿಸಿದೆ. ಈ ಪ್ರಯತ್ನಗಳಿಗೆ ಪೂರಕವಾಗಿ, ಕರ್ನಾಟಕದಲ್ಲಿ ತಲೆಗಾಯ ಮತ್ತು ಪಾರ್ಶ್ವವಾಯು ಆರೈಕೆಗಾಗಿ ಪ್ರಸ್ತಾಪಿಸಲಾಗಿರುವ 'ಹಬ್ ಮತ್ತು ಸ್ಪೋಕ್' ಮಾದರಿಯು ಪ್ರಾದೇಶಿಕ ಕೇಂದ್ರಗಳು ಮತ್ತು ಸಂಯೋಜಿತ ರೆಫರಲ್‌ ಜಾಲದ ಮೂಲಕ ಸಕಾಲಿಕ ತುರ್ತು ನರವೈದ್ಯಕೀಯ ಆರೈಕೆಯ ಲಭ್ಯತೆಯನ್ನು ಸುಧಾರಿಸುವ ಗುರಿ ಹೊಂದಿದೆ. ಈ ಪ್ರಸ್ತಾವಿತ ಮಾದರಿಯಲ್ಲಿ ಹುಬ್ಬಳ್ಳಿಯ ಕೆಎಂಸಿಆರ್‌ಐನಲ್ಲಿ ನ್ಯೂರೋಹಬ್ ಮತ್ತು ನಿಮ್ಹಾನ್ಸ್‌ನಲ್ಲಿ ತೀವ್ರ ಪಾರ್ಶ್ವವಾಯು ತುರ್ತು ಚಿಕಿತ್ಸಾ ಹಾಗೂ ಮೌಲ್ಯಮಾಪನ ಕೇಂದ್ರವನ್ನು ಸ್ಥಾಪಿಸುವುದು ಸೇರಿದೆ.

ಸಮಗ್ರ ಮತ್ತು ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಗಳನ್ನು ಬಲಪಡಿಸಲು ಭಾರತ ಸರ್ಕಾರ ಬದ್ಧವಾಗಿದೆ. ಈ ಪ್ರಯತ್ನದಲ್ಲಿ ಮಾನಸಿಕ ಆರೋಗ್ಯವು ಅವಿಭಾಜ್ಯ ಅಂಗವಾಗಿದೆ. ಆರಂಭಿಕ ಹಂತದ ರೋಗನಿರ್ಣಯ, ಚಿಕಿತ್ಸೆ, ಆತ್ಮಹತ್ಯೆ ತಡೆ, ವ್ಯಸನ ಆರೈಕೆ, ವೃತ್ತಿಪರರ ಸಾಮರ್ಥ್ಯವರ್ಧನೆ ಮತ್ತು ಮೆದುಳಿನ ಆರೋಗ್ಯವನ್ನು ಒಳಗೊಂಡ ವಿವಿಧ ಉಪಕ್ರಮಗಳ ಮೂಲಕ, ಗುಣಮಟ್ಟದ ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಹಾಗೂ ದೇಶಾದ್ಯಂತ ಮಾನಸಿಕ ಆರೋಗ್ಯ ಸೇವಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಚಿವಾಲಯ ನಿರಂತರವಾಗಿ ಬೆಂಬಲ ನೀಡುತ್ತಿದೆ.

 

*****

 


(ಪ್ರಕಟಣೆ ಐ.ಡಿ.: 2342879) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी