ಪ್ರಕಟಣಾ ದಿನಾಂಕ:
22 NOV 2026 7:12PM by PIB Bengaluru
ಮಾದಕವಸ್ತು ಬಳಕೆಯಿಂದ ಬಾಧಿತರಾದ ವ್ಯಕ್ತಿಗಳು, ತೃತೀಯ ಲಿಂಗಿಗಳು, ಹಿರಿಯ ನಾಗರಿಕರು ಮತ್ತು ಭಿಕ್ಷಾಟನೆಗೆ ತಳ್ಳಲ್ಪಡುವ ಸಾಧ್ಯತೆಯಿರುವ ವ್ಯಕ್ತಿಗಳಿಗೆ ತರಬೇತಿ, ಸಾಮರ್ಥ್ಯವರ್ಧನೆ, ಪುನರ್ವಸತಿ, ಜೀವನೋಪಾಯದ ಅವಕಾಶಗಳು ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ವಿಶ್ವವಿದ್ಯಾಲಯಗಳು, ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳೊಂದಿಗಿನ ಸಹಭಾಗಿತ್ವವು ನೆರವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆಯ (ಎನ್ಐಎಸ್ಡಿ) ಆವರಣದಲ್ಲಿ ನಡೆದ ಒಡಂಬಡಿಕೆಗಳ ವಿನಿಮಯ ಸಮಾರಂಭದಲ್ಲಿ ಮಾತನಾಡಿದ ಡಾ. ಕುಮಾರ್, ಈ ಉಪಕ್ರಮವು ದುರ್ಬಲ ವರ್ಗದ ವ್ಯಕ್ತಿಗಳು ಗೌರವಯುತ ಹಾಗೂ ಸ್ವಾವಲಂಬಿ ಜೀವನ ನಡೆಸಲು ಮತ್ತು ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡಲು ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳನ್ನು ಬಲಪಡಿಸಲಿದೆ ಎಂದು ಹೇಳಿದರು.
ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಸಾಮಾಜಿಕ ರಕ್ಷಣಾ ಸಂಸ್ಥೆ (ಎನ್ಐಎಸ್ಡಿ), ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ವ್ಯಾಪಕ ಸಹಯೋಗದ ಭಾಗವಾಗಿ ದೇಶದಾದ್ಯಂತದ 23 ವಿಶ್ವವಿದ್ಯಾಲಯಗಳು, ಸಂಘಟನೆಗಳು ಮತ್ತು ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡಿತು.
ಇವುಗಳಲ್ಲಿ 15 ಸಂಸ್ಥೆಗಳು ಖುದ್ದಾಗಿ ಭಾಗವಹಿಸಿದರೆ, 8 ಸಂಸ್ಥೆಗಳು ವರ್ಚುವಲ್ ಮೂಲಕ ಪಾಲ್ಗೊಂಡಿದ್ದವು. ಈ ಒಪ್ಪಂದಗಳೊಂದಿಗೆ ವಿಶ್ವವಿದ್ಯಾಲಯಗಳು ಮತ್ತು ಸಂಘಟನೆಗಳೊಂದಿಗೆ ಈ ಹಿಂದೆ ಮಾಡಿಕೊಂಡಿದ್ದ 7 ಒಪ್ಪಂದಗಳೂ ಸೇರಿದಂತೆ ಎನ್ಐಎಸ್ಡಿಯ ಸಾಂಸ್ಥಿಕ ಸಹಭಾಗಿತ್ವಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.


ಈ ಉಪಕ್ರಮವನ್ನು ಮಹತ್ವಪೂರ್ಣ ಮತ್ತು ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ ಡಾ. ಕುಮಾರ್, ಸಂಸ್ಥೆಗಳ ನಡುವೆ ನಿಯಮಿತ ಸಂವಾದ ಮತ್ತು ಸಮಾಲೋಚನೆ, ಉಪಕ್ರಮಗಳ ಪರಿಶೀಲನೆ ಹಾಗೂ ಉತ್ತಮ ಅಭ್ಯಾಸಗಳ ಹಂಚಿಕೆ ಅಗತ್ಯವಾಗಿದೆ ಎಂದು ಒತ್ತಿಹೇಳಿದರು. ಇದರಿಂದ ವಿವಿಧ ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಪರಿಣಾಮಕಾರಿ ಕ್ರಮಗಳನ್ನು ವಿಸ್ತರಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.


ಶೈಕ್ಷಣಿಕ ಸಂಸ್ಥೆಗಳಲ್ಲಿ ನಿಯತಕಾಲಿಕವಾಗಿ ಮಾದಕವಸ್ತು ವಿರೋಧಿ ಪ್ರತಿಜ್ಞೆ ಸ್ವೀಕಾರ ಸೇರಿದಂತೆ ನಿರಂತರ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರಿಂದ ಮಾದಕವಸ್ತು ಮುಕ್ತ ಭಾರತದ ಗುರಿಯತ್ತ ವ್ಯಾಪಕ ಜಾಗೃತಿ ಮತ್ತು ಸಾಮೂಹಿಕ ಕ್ರಮದ ಸರಪಳಿಯನ್ನು ನಿರ್ಮಿಸಲು ನೆರವಾಗಲಿದೆ ಎಂದು ಡಾ. ಕುಮಾರ್ ಹೇಳಿದರು.

ಮಾದಕವಸ್ತು ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸಹಯೋಗದ ಪ್ರಯತ್ನಗಳನ್ನು ಬಲಪಡಿಸಲು ಎನ್ಐಎಸ್ಡಿ ಮತ್ತು ಅದರ ಸಹಭಾಗಿ ಸಂಸ್ಥೆಗಳು ನಿಯಮಿತ ಸಮನ್ವಯ, ಮೇಲ್ವಿಚಾರಣೆ ಹಾಗೂ ಕ್ಯಾಂಪಸ್ಗಳಲ್ಲಿ ಅಲ್ಪಾವಧಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸುವಂತೆ ಸಚಿವರು ಕರೆ ನೀಡಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್ ಅವರು, ಯುವಜನರಲ್ಲಿ ಮಾದಕವಸ್ತು ದುರ್ಬಳಕೆಯನ್ನು ತಡೆಗಟ್ಟುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್ಗಳಿಂದ ಮಾದಕವಸ್ತು ತಡೆಗಟ್ಟುವಿಕೆಯ ಸಂದೇಶವನ್ನು ಕುಟುಂಬಗಳು, ಸಹಪಾಠಿಗಳು ಮತ್ತು ಸಮುದಾಯಗಳಿಗೆ ತಲುಪಿಸಲು ಅನುಕೂಲವಾಗುವಂತೆ, ಸಂಸ್ಥೆಗಳು ನಿಯಮಿತವಾಗಿ ಮಾದಕವಸ್ತು ವಿರೋಧಿ ಜಾಗೃತಿ ಚಟುವಟಿಕೆಗಳು ಮತ್ತು ಪ್ರತಿಜ್ಞಾ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಅವರು ಕರೆ ನೀಡಿದರು.
ಎನ್ಐಎಸ್ಡಿ ಮತ್ತು ಸಹಭಾಗಿ ಸಂಸ್ಥೆಗಳ ನಡುವೆ ನಿಯಮಿತ ಸಮನ್ವಯ, ಮೇಲ್ವಿಚಾರಣೆ ಹಾಗೂ ಪರಸ್ಪರ ಪ್ರಯೋಜನಕಾರಿಯಾದ ತರಬೇತಿ ಕಾರ್ಯಕ್ರಮಗಳ ಅಗತ್ಯವನ್ನೂ ಶ್ರೀ ಪಂತ್ ಒತ್ತಿಹೇಳಿದರು.

ಈ ಸಮಾರಂಭದಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶ್ ಪಂತ್, ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸಂದೀಪ್ ರೇವಾಜಿ ರಾಥೋಡ್, ನವದೆಹಲಿಯ ಎನ್ಐಎಸ್ಡಿ ನಿರ್ದೇಶಕ ಶ್ರೀ ಗೌರವ್ ಸಿಂಗ್ ರಜಾವತ್, ಇತರ ಹಿರಿಯ ಅಧಿಕಾರಿಗಳು ಹಾಗೂ ಎನ್ಐಎಸ್ಡಿ ಮತ್ತು ಸಚಿವಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.

ಈ 23 ಸಂಸ್ಥೆಗಳಲ್ಲಿ ಜಾರ್ಖಂಡ್ನ ರಾಂಚಿಯ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ; ಮೇಘಾಲಯದ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ; ಮಣಿಪುರದ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಸ್ಐಆರ್ಡಿ); ತೆಲಂಗಾಣದ ತೆಲಂಗಾಣ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಟಿಜಿಐಆರ್ಡಿ); ಆಂಧ್ರಪ್ರದೇಶ ಕೇಂದ್ರೀಯ ವಿಶ್ವವಿದ್ಯಾಲಯ; ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ; ಲಖನೌದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯ; ಜೋಧಪುರದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ; ಹರಿಯಾಣದ ಶ್ರೀ ವಿಶ್ವಕರ್ಮ ಕೌಶಲ ವಿಶ್ವವಿದ್ಯಾಲಯ ಹಾಗೂ ಕರ್ನಾಟಕದ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಸೇರಿವೆ.



ಇದಲ್ಲದೆ, ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯ; ಕರ್ನಾಟಕದ ಯೆನೆಪೋಯ (ಡೀಮ್ಡ್ ವಿಶ್ವವಿದ್ಯಾಲಯ); ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ; ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ; ನವದೆಹಲಿಯ ಭಾರತೀಯ ವಯಸ್ಕರ ಶಿಕ್ಷಣ ಸಂಘ; ಆಂಧ್ರಪ್ರದೇಶ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ; ರಾಜಸ್ಥಾನದ ಏಮ್ಸ್ ಜೋಧಪುರ; ಪುದುಚೇರಿಯ ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ (ಐಐಪಿಎ)ಯ ಆಡಳಿತಾತ್ಮಕ ತರಬೇತಿ ಕೇಂದ್ರ; ಕೇರಳದ ಸ್ಥಳೀಯ ಆಡಳಿತ ಸಂಸ್ಥೆ (ಕಿಲಾ); ಛತ್ರಪತಿ ಸಂಭಾಜಿನಗರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ; ಪಾಟ್ನಾದ ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ; ಬಿಹಾರದ ಮಹಾತ್ಮ ಗಾಂಧಿ ಕೇಂದ್ರ ವಿಶ್ವವಿದ್ಯಾಲಯ ಹಾಗೂ ನಾಗಪುರದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸೇರಿದಂತೆ ಇತರ ಸಂಸ್ಥೆಗಳು ಎನ್ಐಎಸ್ಡಿಯೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿವೆ.



ಈ ಒಡಂಬಡಿಕೆಗಳ ವ್ಯಾಪ್ತಿಯಲ್ಲಿ ಸಾಮಾಜಿಕ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾದಕವಸ್ತು ದುರ್ಬಳಕೆ ತಡೆಗಟ್ಟುವಿಕೆ, ಹಿರಿಯ ನಾಗರಿಕರ ಕಲ್ಯಾಣ, ತೃತೀಯ ಲಿಂಗಿಗಳ ಕಲ್ಯಾಣ ಮತ್ತು ಭಿಕ್ಷಾಟನೆ ತಡೆಗಟ್ಟುವಿಕೆ ಕುರಿತ ಶಿಕ್ಷಣ, ಸಂಶೋಧನೆ, ತರಬೇತಿ ಮತ್ತು ಸಾಮರ್ಥ್ಯವರ್ಧನೆ, ಪಠ್ಯಕ್ರಮ ಅಭಿವೃದ್ಧಿ, ಸಂಪರ್ಕ ಮತ್ತು ಜನಜಾಗೃತಿ ಚಟುವಟಿಕೆಗಳು ಒಳಗೊಂಡಿವೆ.



ಈ ಸಹಭಾಗಿತ್ವಗಳು ಸಂಸ್ಥೆಗಳ ನಡುವಿನ ಸಹಯೋಗ, ಜ್ಞಾನ ವಿನಿಮಯ, ತರಬೇತಿ ಅವಕಾಶಗಳು ಹಾಗೂ ಈ ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಕ್ರಮಗಳ ಅಭಿವೃದ್ಧಿಗೆ ನೆರವಾಗುವ ನಿರೀಕ್ಷೆಯಿದೆ.



ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಭಾಗವಹಿಸಿದ್ದವರಿಗೆ ‘ಹಿರಿಯ ನಾಗರಿಕರ’ ಮತ್ತು ‘ಮಾದಕವಸ್ತು ವಿರೋಧಿ’ ಪ್ರತಿಜ್ಞೆಗಳನ್ನು ಬೋಧಿಸಿದರು. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಜವಾಬ್ದಾರಿಯುತವಾಗಿ ತೊಡಗಿಸಿಕೊಳ್ಳುವ ಮನೋಭಾವವನ್ನು ಪುನರುಚ್ಚರಿಸುವುದು, ಹಿರಿಯ ನಾಗರಿಕರ ಗೌರವ ಮತ್ತು ಘನತೆಯನ್ನು ಎತ್ತಿಹಿಡಿಯುವುದು, ಅವರ ಆರೋಗ್ಯ ಸೇವೆ ಮತ್ತು ಕಲ್ಯಾಣವನ್ನು ಖಚಿತಪಡಿಸುವುದು ಹಾಗೂ ಮಾದಕವಸ್ತು ದುರ್ಬಳಕೆಯಿಂದ ಬಾಧಿತರಾದ ವ್ಯಕ್ತಿಗಳಲ್ಲಿ ಮಾದಕವಸ್ತು ದುರ್ಬಳಕೆ ತಡೆಗಟ್ಟುವಿಕೆ, ಚಿಕಿತ್ಸೆ ಮತ್ತು ಪುನರ್ವಸತಿಗೆ ಒತ್ತು ನೀಡುವುದು ಈ ಪ್ರತಿಜ್ಞೆಗಳ ಉದ್ದೇಶವಾಗಿದೆ.



ಸಾಂಸ್ಥಿಕ ಸಹಭಾಗಿತ್ವಗಳ ವಿಸ್ತೃತ ಜಾಲವು ಸಾಮಾಜಿಕ ರಕ್ಷಣಾ ಕ್ಷೇತ್ರದಲ್ಲಿ ತರಬೇತಿ, ಜಾಗೃತಿ ಮೂಡಿಸುವಿಕೆ, ಸಂಶೋಧನೆ ಹಾಗೂ ಸಾಕ್ಷ್ಯಾಧಾರಿತ ಕ್ರಮಗಳ ಅನುಷ್ಠಾನಕ್ಕೆ ನಿರಂತರ ಚೌಕಟ್ಟನ್ನು ರೂಪಿಸುವ ನಿರೀಕ್ಷೆಯಿದೆ.


ದೇಶಾದ್ಯಂತದ ವಿಶ್ವವಿದ್ಯಾಲಯಗಳು, ಸಾರ್ವಜನಿಕ ತರಬೇತಿ ಸಂಸ್ಥೆಗಳು ಮತ್ತು ವಿಶೇಷ ಪರಿಣತಿ ಹೊಂದಿರುವ ಸಂಘಟನೆಗಳೊಂದಿಗಿನ ಸಹಯೋಗದ ಮೂಲಕ, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪುನರ್ವಸತಿ, ಸಬಲೀಕರಣ ಮತ್ತು ಸಾಮಾಜಿಕ ಒಳಗೊಳ್ಳುವಿಕೆಗಾಗಿ ಎನ್ಐಎಸ್ಡಿ ತನ್ನ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲಿದೆ.


ಈ ಉಪಕ್ರಮವು ಸಾಂಸ್ಥಿಕ ಸಹಯೋಗವನ್ನು ಬಲಪಡಿಸುವ ಮತ್ತು ಸಾಮಾಜಿಕ ಭದ್ರತೆ, ಒಳಗೊಳ್ಳುವಿಕೆ ಹಾಗೂ ಸಶಕ್ತ ಭಾರತವನ್ನು ರೂಪಿಸುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ.

ಇದಕ್ಕೂ ಮುನ್ನ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸಂದೀಪ್ ರೇವಾಜಿ ರಾಥೋಡ್ ಅವರು ಗಣ್ಯರು ಹಾಗೂ ಭಾಗವಹಿಸಿದ್ದ ವಿಶ್ವವಿದ್ಯಾಲಯಗಳು ಮತ್ತು ಸಂಘಟನೆಗಳ ಹಿರಿಯ ಪ್ರತಿನಿಧಿಗಳನ್ನು ಸ್ವಾಗತಿಸಿದರು.
ನವದೆಹಲಿಯ ಎನ್ಐಎಸ್ಡಿ ನಿರ್ದೇಶಕ ಶ್ರೀ ಗೌರವ್ ಸಿಂಗ್ ರಾಜಾವತ್ ಅವರು ವಂದನಾರ್ಪಣೆ ಮಾಡಿದರು.
ಎನ್ಐಎಸ್ಡಿಯ ಕಿರಿಯ ಸಲಹೆಗಾರರಾದ ಕುಮಾರಿ ಅನುಷ್ಕಾ ಭಾರದ್ವಾಜ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
*****