ರಕ್ಷಣಾ ಸಚಿವಾಲಯ
azadi ka amrit mahotsav

ಜಂಟಿ ಹೇಳಿಕೆ: ನಾಲ್ಕನೇ ಭಾರತ-ಜಪಾನ್ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆ

ಪ್ರಕಟಣಾ ದಿನಾಂಕ: 19 NOV 2026 5:23PM by PIB Bengaluru

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎಸ್. ಜೈಶಂಕರ್, ಜಪಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವರಾದ ಶ್ರೀ ಮೋಟೆಗಿ ತೋಶಿಮಿತ್ಸು ಮತ್ತು ಜಪಾನ್‌ನ ರಕ್ಷಣಾ ಸಚಿವರಾದ ಶ್ರೀ ಕೊಯಿಜುಮಿ ಶಿಂಜಿರೋ ಅವರು 2026ರ ನವೆಂಬರ್ 19ರಂದು ಟೋಕಿಯೊದಲ್ಲಿ ನಾಲ್ಕನೇ ಭಾರತ-ಜಪಾನ್ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆ ನಡೆಸಿದರು.

ಹೆಚ್ಚುತ್ತಿರುವ ಸಂಕೀರ್ಣತೆ ಮತ್ತು ಅನಿಶ್ಚಿತತೆಯ ಅಂತರರಾಷ್ಟ್ರೀಯ ಪರಿಸ್ಥಿತಿಯಲ್ಲಿ ಭಾರತ ಮತ್ತು ಜಪಾನ್ ನಡುವಿನ ಕಾರ್ಯತಂತ್ರದ ನಿಲುವುಗಳಲ್ಲಿನ ಸಾಮ್ಯತೆ ಹಾಗೂ ಪರಸ್ಪರ ವಿಶ್ವಾಸ ಹೆಚ್ಚುತ್ತಿರುವುದನ್ನು ಸಚಿವರು ಒತ್ತಿಹೇಳಿದರು. ಪ್ರಸ್ತುತ ಭೌಗೋಳಿಕ ರಾಜಕೀಯ, ಆರ್ಥಿಕ ಮತ್ತು ಭದ್ರತಾ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಡಿ ಎರಡೂ ದೇಶಗಳ ನಡುವೆ ನಿಕಟ ಸಮನ್ವಯದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಜಗತ್ತಿನ ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಬೃಹತ್ ಆರ್ಥಿಕತೆಗಳಾಗಿರುವ ಎರಡೂ ದೇಶಗಳು, ಮುಕ್ತ ಹಾಗೂ ನ್ಯಾಯಸಮ್ಮತವಾದ ಮತ್ತು ಕಾನೂನಿನ ಆಳ್ವಿಕೆಯನ್ನು ಆಧರಿಸಿದ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಕಾಪಾಡುವ ಹಾಗೂ ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದವು. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳಿಗೆ ಗೌರವ ನೀಡುವುದು ಹಾಗೂ ಬೆದರಿಕೆ ಅಥವಾ ಬಲಪ್ರಯೋಗಕ್ಕೆ ಮುಂದಾಗದೆ ಶಾಂತಿಯುತವಾಗಿ ವಿವಾದಗಳನ್ನು ಬಗೆಹರಿಸುವುದು ಈ ವ್ಯವಸ್ಥೆಯ ಪ್ರಮುಖ ಆಧಾರಗಳಾಗಿವೆ ಎಂದು ಅವರು ತಿಳಿಸಿದರು. ಯಾವುದೇ ದೇಶವು ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಬಾರದು ಎಂಬ ಅಗತ್ಯವನ್ನೂ ಅವರು ಒತ್ತಿಹೇಳಿದರು.

ಶಾಂತಿಯುತ, ಸಮೃದ್ಧ ಮತ್ತು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿರುವ ಇಂಡೋ-ಪೆಸಿಫಿಕ್ ಪ್ರದೇಶವನ್ನು ರೂಪಿಸುವ ನಿಟ್ಟಿನಲ್ಲಿ ಇಂಡೋ-ಪೆಸಿಫಿಕ್ ಮಹಾಸಾಗರಗಳ ಉಪಕ್ರಮ (ಐಪಿಒಐ), ಪ್ರದೇಶಗಳಾದ್ಯಂತ ಭದ್ರತೆ ಮತ್ತು ಬೆಳವಣಿಗೆಗಾಗಿ ಪರಸ್ಪರ ಮತ್ತು ಸಮಗ್ರ ಪ್ರಗತಿ (ಮಹಾಸಾಗರ್) ಹಾಗೂ ಪರಿಷ್ಕೃತ ‘ಸ್ವತಂತ್ರ ಮತ್ತು ಮುಕ್ತ ಇಂಡೋ-ಪೆಸಿಫಿಕ್ (ಎಫ್‌ಒಐಪಿ)’ ಉಪಕ್ರಮಗಳ ನಡುವಿನ ಪರಸ್ಪರ ಸಮನ್ವಯ ಹೆಚ್ಚಿಸುವುದನ್ನು ಸಚಿವರು ಸ್ವಾಗತಿಸಿದರು ಮತ್ತು ಈ ನಿಟ್ಟಿನಲ್ಲಿ ತಮ್ಮ ಸಹಕಾರವನ್ನು ಬಲಪಡಿಸುವ ಬದ್ಧತೆ ವ್ಯಕ್ತಪಡಿಸಿದರು.

2024ರಲ್ಲಿ ನಡೆದ ಹಿಂದಿನ 2+2 ಸಭೆಯ ನಂತರ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಗಣನೀಯ ಪ್ರಗತಿಯ ಬಗ್ಗೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು. 2025ರ ಆಗಸ್ಟ್ ಮತ್ತು 2026ರ ಜುಲೈನಲ್ಲಿ ನಡೆದ ಕ್ರಮವಾಗಿ 15ನೇ ಮತ್ತು 16ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಗಳ ಫಲಿತಾಂಶಗಳನ್ನು ಅವರು ಸ್ವಾಗತಿಸಿದರು. ರಕ್ಷಣೆ ಮತ್ತು ಭದ್ರತಾ ಸಹಕಾರ, ಆರ್ಥಿಕ ಭದ್ರತೆ ಸೇರಿದಂತೆ ಆರ್ಥಿಕ ಪಾಲುದಾರಿಕೆ, ಇಂಧನ ಪೂರೈಕೆಯ ಸ್ಥಿರತೆ, ತಂತ್ರಜ್ಞಾನ, ನಾವೀನ್ಯತೆ ಹಾಗೂ ಪರಸ್ಪರ ಪೂರಕ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಜನರ ನಡುವಿನ ವಿನಿಮಯವನ್ನು ಮತ್ತಷ್ಟು ಆಳಗೊಳಿಸಲು ಈ ಶೃಂಗಸಭೆಗಳು ಉಭಯ ದೇಶಗಳ ನಾಯಕರ ಮಟ್ಟದಲ್ಲಿ ಕಾರ್ಯತಂತ್ರದ ಮಾರ್ಗದರ್ಶನ ಒದಗಿಸಿವೆ ಎಂದು ಅವರು ತಿಳಿಸಿದರು. ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಮುಂದುವರಿಸುವ ನಿಟ್ಟಿನಲ್ಲಿ ಆಫ್ರಿಕಾ, ಏಷ್ಯಾ ಮತ್ತು ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾದಂತಹ ಪ್ರದೇಶಗಳ ಕುರಿತ ವಿಷಯಗಳಲ್ಲಿ ಹಾಗೂ ವಿಶ್ವಸಂಸ್ಥೆಯ ಸುಧಾರಣೆ, ಬಾಹ್ಯಾಕಾಶ, ಸಾಗರ ವಲಯ, ಹವಾಮಾನ ಬದಲಾವಣೆ, ಭಯೋತ್ಪಾದನೆ ಮತ್ತು ಆರ್ಕ್ಟಿಕ್ ಸೇರಿದಂತೆ ಬಹುಪಕ್ಷೀಯ ವಿಷಯಗಳಲ್ಲಿ ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವಿನ ನೀತಿ ಸಮಾಲೋಚನೆಗಳನ್ನು ಮತ್ತಷ್ಟು ಬಲಪಡಿಸಲು ಅವರು ಒಪ್ಪಿಕೊಂಡರು. ನೀತಿ ರೂಪಿಸುವ ಕುರಿತ ಸಮಾಲೋಚನೆಗಳನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದರು.

2025ರ ಆಗಸ್ಟ್‌ನಲ್ಲಿ ನಡೆದ ಹಿಂದಿನ ವಾರ್ಷಿಕ ಶೃಂಗಸಭೆಯಲ್ಲಿ ಅಂಗೀಕರಿಸಲಾದ ಭದ್ರತಾ ಸಹಕಾರ ಕುರಿತ ಜಂಟಿ ಘೋಷಣೆಗೆ ಅನುಗುಣವಾಗಿ ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಹಾಗೂ ಭದ್ರತಾ ಪಾಲುದಾರಿಕೆ ಬೆಳೆಯುತ್ತಿರುವುದನ್ನು ಸಚಿವರು ಸ್ವಾಗತಿಸಿದರು. ಜಪಾನ್‌ನ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ, ರಾಷ್ಟ್ರೀಯ ರಕ್ಷಣಾ ಕಾರ್ಯತಂತ್ರ ಮತ್ತು ರಕ್ಷಣಾ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಪರಿಷ್ಕರಿಸಲು ಕೈಗೊಳ್ಳಲಾಗುತ್ತಿರುವ ಪ್ರಯತ್ನಗಳ ಕುರಿತು ಸಚಿವ ಮೋಟೆಗಿ ಮತ್ತು ಸಚಿವ ಕೊಯಿಜುಮಿ ವಿವರಿಸಿದರು. ಈ ಪರಿಷ್ಕರಣೆಗಳು ಭಾರತ ಸೇರಿದಂತೆ ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಹಕಾರವನ್ನು ಹೆಚ್ಚಿಸಲು ನೆರವಾಗಲಿವೆ ಎಂದು ಅವರು ತಿಳಿಸಿದರು.

ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸೇನಾ ಅಭ್ಯಾಸಗಳು ವಿಸ್ತರಣೆಗೊಳ್ಳುತ್ತಿರುವುದರ ಬಗ್ಗೆ ಹಾಗೂ ಅವು ಮತ್ತಷ್ಟು ಬಲಗೊಳ್ಳುತ್ತಿರುವುದರ ಬಗ್ಗೆ ಸಚಿವರು ತೃಪ್ತಿ ವ್ಯಕ್ತಪಡಿಸಿದರು. ಅದರಲ್ಲೂ, ಭಾರತ-ಜಪಾನ್ ವಾಯುಪಡೆಗಳ ‘ವೀರ್ ಗಾರ್ಡಿಯನ್ 26’ ಸಮರಾಭ್ಯಾಸದಲ್ಲಿ ಮೊದಲ ಬಾರಿಗೆ ಜಪಾನ್‌ನ ಏರ್ ಸೆಲ್ಫ್-ಡಿಫೆನ್ಸ್ ಫೋರ್ಸ್‌ನ ಯುದ್ಧವಿಮಾನಗಳು ಭಾರತಕ್ಕೆ ಭೇಟಿ ನೀಡಿರುವುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಈ ಸಮರಾಭ್ಯಾಸದ ಸಂದರ್ಭದಲ್ಲಿ ಜಪಾನ್ ಏರ್ ಸೆಲ್ಫ್-ಡಿಫೆನ್ಸ್ ಫೋರ್ಸ್‌ನ ಮುಖ್ಯಸ್ಥರು ಭಾರತಕ್ಕೆ ಭೇಟಿ ನೀಡಿದ್ದನ್ನೂ ಅವರು ಗಮನಿಸಿದರು. ಸಮರಾಭ್ಯಾಸಗಳ ಸಂಕೀರ್ಣತೆಯನ್ನು ಹೆಚ್ಚಿಸುವುದು, ಮಾನವರಹಿತ ವ್ಯವಸ್ಥೆಗಳನ್ನು ಸೇನಾ ಅಭ್ಯಾಸಗಳಲ್ಲಿ ಅಳವಡಿಸಿಕೊಳ್ಳುವುದು ಹಾಗೂ ಅಲ್ಪಾವಧಿ ಸೂಚನೆಯಲ್ಲಿಯೇ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಮರಾಭ್ಯಾಸಗಳನ್ನು ನಡೆಸುವ ಮೂಲಕ ಈ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಅವರು ಒಪ್ಪಿಕೊಂಡರು. ಭಾರತದಲ್ಲಿರುವ ಗುಂಡು ಹಾರಿಸುವ ತರಬೇತಿ ಕೇಂದ್ರಗಳನ್ನು (ಫೈರಿಂಗ್ ರೇಂಜ್ಗಳು) ಬಳಸಿಕೊಳ್ಳುವ ಸಂಬಂಧ ಉದ್ದೇಶ ಪತ್ರಕ್ಕೆ (ಎಲ್‌ಒಐ) ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಇದರನ್ವಯ, ಜಪಾನ್‌ನ ಸೆಲ್ಫ್-ಡಿಫೆನ್ಸ್ ಫೋರ್ಸ್‌ಗಳು ಮೊದಲ ಬಾರಿಗೆ ಭಾರತದಲ್ಲಿನ ತರಬೇತಿ ಕೇಂದ್ರಗಳಲ್ಲಿ ನೈಜ ಗುಂಡು ಹಾರಿಸುವ ತರಬೇತಿ ನಡೆಸಲಿವೆ. ಇದರಲ್ಲಿ ಭೂಮಿಯಿಂದ ಹಡಗುಗಳನ್ನು ಗುರಿಯಾಗಿಸುವ ಕ್ಷಿಪಣಿಗಳ ಬಳಕೆಯ ತರಬೇತಿಯೂ ಸೇರಿದೆ. ಈ ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಎರಡೂ ದೇಶಗಳ ರಕ್ಷಣಾ ಅಧಿಕಾರಿಗಳ ನಡುವಿನ ಸಮನ್ವಯವನ್ನು ತ್ವರಿತಗೊಳಿಸಲು ಅವರು ಒಪ್ಪಿಕೊಂಡರು.

ಯುನಿಕಾರ್ನ್ ಸಂಬಂಧಿತ ವ್ಯವಸ್ಥೆಗಳನ್ನು ಶೀಘ್ರವಾಗಿ ಅಂತಿಮಗೊಳಿಸುವ ಹಾಗೂ 2027ರ ಫೆಬ್ರವರಿಯೊಳಗೆ ಭಾರತದಿಂದ ಅಗತ್ಯತೆಯ ಅನುಮೋದನೆ (ಎಒಎನ್) ದೊರೆಯುವ ನಿರೀಕ್ಷೆಯನ್ನು ಸಚಿವರು ವ್ಯಕ್ತಪಡಿಸಿದರು. ‘ಜಪಾನ್‌ನೊಂದಿಗೆ ವಿನ್ಯಾಸ, ಭಾರತದಲ್ಲಿ ತಯಾರಿಕೆ’ ಎಂಬ ಚೌಕಟ್ಟಿನಡಿ ರಕ್ಷಣಾ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ಬಲಪಡಿಸುವುದನ್ನೂ ಅವರು ಎದುರು ನೋಡಿದರು. 2026ರ ಅಕ್ಟೋಬರ್‌ನಲ್ಲಿ ಟೋಕಿಯೊದಲ್ಲಿ ನಡೆದ ಮೂರನೇ ಭಾರತ-ಜಪಾನ್ ರಕ್ಷಣಾ ಕೈಗಾರಿಕೆಗಳ ವೇದಿಕೆಯ ಸಭೆಯನ್ನು ಅವರು ಸ್ವಾಗತಿಸಿದರು.

ಇತ್ತೀಚೆಗೆ ಸಹಿ ಹಾಕಲಾದ ಸಾಗರ ಭದ್ರತಾ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದವನ್ನು ಸಚಿವರು ಸ್ವಾಗತಿಸಿದರು. ಎರಡೂ ದೇಶಗಳ ಆಯಾ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆ ಮತ್ತು ಜಪಾನ್‌ನ ಮ್ಯಾರಿಟೈಮ್ ಸೆಲ್ಫ್-ಡಿಫೆನ್ಸ್ ಫೋರ್ಸ್ ನಡುವೆ ಸ್ಪಷ್ಟ ಫಲಿತಾಂಶಗಳನ್ನು ಸಾಧಿಸಲು ತ್ವರಿತ ಕ್ರಮ ಕೈಗೊಳ್ಳಲು ಅವರು ಒಪ್ಪಿಕೊಂಡರು. ಸಾಗರ ಮತ್ತು ವಾಯು ವಲಯದ ಚಟುವಟಿಕೆಗಳ ಅರಿವು (ಎಂಡಿಎ), ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು (ಎಸ್‌ಎಆರ್), ಮಾಹಿತಿ ವಿನಿಮಯ ಹಾಗೂ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್‌ಎಡಿಆರ್) ಕ್ಷೇತ್ರಗಳಲ್ಲಿನ ಸಹಕಾರವೂ ಇದರಲ್ಲಿ ಸೇರಿದೆ. ಸಮುದ್ರದಲ್ಲಿನ ಸ್ಫೋಟಕಗಳನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ನೌಕಾಪಡೆಯ ಹಡಗುಗಳ ನಿರ್ಮಾಣ ಮತ್ತು ವಿನ್ಯಾಸದಲ್ಲಿ ಜಂಟಿ ಅಭಿವೃದ್ಧಿಯ ಸಾಧ್ಯತೆಗಳನ್ನು ಪರಿಶೀಲಿಸಲು ಎರಡೂ ದೇಶಗಳ ರಕ್ಷಣಾ ಅಧಿಕಾರಿಗಳು ಬದ್ಧರಾಗಿದ್ದಾರೆ ಎಂದು ಅವರು ತಿಳಿಸಿದರು. ಜಪಾನ್‌ನ ಕರಾವಳಿ ರಕ್ಷಣಾ ಪಡೆಯು ಆರಂಭಿಸಿದ ಸಹಕಾರದ ಚೌಕಟ್ಟಿನಡಿ ಎರಡೂ ದೇಶಗಳ ಕರಾವಳಿ ರಕ್ಷಣಾ ಪಡೆಗಳ ನಡುವಿನ ಸಹಕಾರ ವಿಸ್ತರಣೆಯಾಗುತ್ತಿರುವುದನ್ನೂ ಅವರು ಸ್ವಾಗತಿಸಿದರು. ಇದರ ಭಾಗವಾಗಿ 2027ರ ಫೆಬ್ರವರಿಯಲ್ಲಿ ಭಾರತದಲ್ಲಿ ನಡೆಯಲಿರುವ ಐದನೇ ಜಾಗತಿಕ ಕರಾವಳಿ ಕಾವಲು ಶೃಂಗಸಭೆ (ಸಿಜಿಜಿಎಸ್) ಕೂಡ ಸೇರಿದೆ.

ವಿದೇಶಗಳಲ್ಲಿರುವ ತಮ್ಮ ತಮ್ಮ ದೇಶಗಳ ನಾಗರಿಕರಿಗೆ ನೆರವು ಒದಗಿಸುವ ಸಹಕಾರಕ್ಕೆ ಸಂಬಂಧಿಸಿದಂತೆ ಟೇಬಲ್‌ಟಾಪ್ ಅಭ್ಯಾಸ (ಟಿಟಿಎಕ್ಸ್) ನಡೆಸುವುದು ಸೇರಿದಂತೆ, ವಿವಿಧ ದೂತಾವಾಸ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು ಭಾರತ ಮತ್ತು ಜಪಾನ್‌ನ ದೂತಾವಾಸ ಅಧಿಕಾರಿಗಳ ನಡುವೆ ಸಂವಾದ ನಡೆಸಲು ಸಚಿವರು ಒಪ್ಪಿಕೊಂಡರು.

ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸುರಕ್ಷಿತ ಮತ್ತು ಸವಾಲುಗಳನ್ನು ಎದುರಿಸಬಲ್ಲ ಡಿಜಿಟಲ್ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು. ಉದ್ಯಮ ಸಂಸ್ಥೆಗಳ ಸಹಭಾಗಿತ್ವ ಸೇರಿದಂತೆ, ವಿಶ್ವಾಸಾರ್ಹ, ಪರ್ಯಾಯ ಸಂಪರ್ಕ ವ್ಯವಸ್ಥೆ ಹೊಂದಿರುವ ಮತ್ತು ಅಧಿಕ ವೇಗದ ಸಮುದ್ರತಳದ ಕೇಬಲ್ ಜಾಲಗಳನ್ನು ಅಭಿವೃದ್ಧಿಪಡಿಸುವಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಅವರು ಒಪ್ಪಿಕೊಂಡರು. ಅಲ್ಲದೆ, ಸಮುದ್ರತಳದಲ್ಲಿನ ಪ್ರಮುಖ ಸಂವಹನ ಮೂಲಸೌಕರ್ಯದ ಭದ್ರತೆ, ವಿಶ್ವಾಸಾರ್ಹತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಲು ನಿರ್ಧರಿಸಿದರು.

ಸೈಬರ್ ದಾಳಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಸಚಿವರು, ಸೈಬರ್ ಭದ್ರತಾ ಸಹಕಾರವನ್ನು ಬಲಪಡಿಸುವ ಅಗತ್ಯವಿದೆ ಎಂದು ಒಪ್ಪಿಕೊಂಡರು. ಇದರಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳ ಸುರಕ್ಷತೆಗೂ ಆದ್ಯತೆ ನೀಡಲಾಗುವುದು. ವಿಶೇಷವಾಗಿ ಪ್ರಮುಖ ಮೂಲಸೌಕರ್ಯಗಳ ಭದ್ರತೆಯ ಬಗ್ಗೆ ಗಮನ ಹರಿಸಲಾಗುವುದು. ಸೈಬರ್ ಭದ್ರತಾ ಕ್ಷೇತ್ರದಲ್ಲಿ ಈಗಿರುವ ಸಹಕಾರದ ತಿಳಿವಳಿಕೆ ಒಪ್ಪಂದವನ್ನು ನವೀಕರಿಸುವಂತೆ ಹಾಗೂ ಮುಂದಿನ ಭಾರತ-ಜಪಾನ್ ಸೈಬರ್ ಸಂವಾದವನ್ನು ಶೀಘ್ರದಲ್ಲೇ ನಡೆಸುವಂತೆ ಅವರು ತಮ್ಮ ತಂಡಗಳಿಗೆ ನಿರ್ದೇಶನ ನೀಡಿದರು.

ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಹಕಾರವನ್ನು ವಿಸ್ತರಿಸಲು ಸಚಿವರು ಒಪ್ಪಿಕೊಂಡರು. ಬಾಹ್ಯಾಕಾಶದಲ್ಲಿನ ಪರಿಸ್ಥಿತಿಗಳ ಅರಿವು (ಎಸ್‌ಎಸ್‌ಎ), ಸಾಗರ ವಲಯದ ಚಟುವಟಿಕೆಗಳ ಅರಿವಿಗಾಗಿ (ಎಂಡಿಎ) ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ, ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ನಿಯಮಗಳು ಮತ್ತು ಮಾನದಂಡಗಳು ಹಾಗೂ ಪರಸ್ಪರ ಆಸಕ್ತಿಯ ಇತರ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವುದು ಇದರಲ್ಲಿ ಸೇರಿದೆ. ಮುಂದಿನ ಭಾರತ-ಜಪಾನ್ ಬಾಹ್ಯಾಕಾಶ ಸಂವಾದವನ್ನು ಶೀಘ್ರದಲ್ಲೇ ನಡೆಸುವ ಅಗತ್ಯವಿದೆ ಎಂದೂ ಅವರು ಒಪ್ಪಿಕೊಂಡರು.

ಭಾರತ-ಜಪಾನ್ ದ್ವಿಪಕ್ಷೀಯ ಸಹಕಾರ ಮತ್ತು ಕ್ವಾಡ್‌ನ ನಾಲ್ಕು ಆದ್ಯತಾ ಕ್ಷೇತ್ರಗಳ ನಡುವಿನ ಪರಸ್ಪರ ಸಮನ್ವಯವನ್ನು ಗುರುತಿಸಿದ ಸಚಿವರು, ಕ್ವಾಡ್‌ನ ಉಪಕ್ರಮಗಳಿಗೆ ಪೂರಕವಾಗಿ ಹಾಗೂ ಅವುಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಸಹಕಾರವನ್ನು ಬಳಸಿಕೊಳ್ಳುವ ಬದ್ಧತೆಯನ್ನು ಒತ್ತಿಹೇಳಿದರು. ಈ ಮೂಲಕ ಇಂಡೋ-ಪೆಸಿಫಿಕ್ ಪ್ರದೇಶದ ಪಾಲುದಾರ ರಾಷ್ಟ್ರಗಳಿಗೆ ಸ್ಪಷ್ಟ ಪ್ರಯೋಜನಗಳನ್ನು ಒದಗಿಸುವ ಗುರಿಯನ್ನು ಅವರು ಪುನರುಚ್ಚರಿಸಿದರು. ಕ್ವಾಡ್‌ನ ನಾಲ್ಕು ಆದ್ಯತಾ ಕ್ಷೇತ್ರಗಳೆಂದರೆ ಸಾಗರ ಮತ್ತು ಅಂತಾರಾಷ್ಟ್ರೀಯ ಭದ್ರತೆ, ಆರ್ಥಿಕ ಸಮೃದ್ಧಿ ಮತ್ತು ಭದ್ರತೆ, ಸಾಗರ ಮತ್ತು ಅಂತಾರಾಷ್ಟ್ರೀಯ ಭದ್ರತೆ, ನಿರ್ಣಾಯಕ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಮಾನವೀಯ ನೆರವು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣದ ನೆರವು. ಈ ಹಿನ್ನೆಲೆಯಲ್ಲಿ 2026ರ ನವೆಂಬರ್‌ನಲ್ಲಿ ನಡೆದ ಕ್ವಾಡ್ ವಿದೇಶಾಂಗ ಸಚಿವರ ಸರಣಿ ಸಭೆಗಳು ಹಾಗೂ ಕ್ವಾಡ್ ನಾಯಕರ ಶೃಂಗಸಭೆಯನ್ನು ಅವರು ಸ್ವಾಗತಿಸಿದರು.

ಪ್ರಾದೇಶಿಕ ಸ್ಥಿರತೆ ಮತ್ತು ಸಂಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಹಾಗೂ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಲು ಆಸಿಯಾನ್ ಸದಸ್ಯ ರಾಷ್ಟ್ರಗಳೊಂದಿಗಿನ ಸಹಕಾರದ ಮಹತ್ವವನ್ನೂ ಸಚಿವರು ಪ್ರಸ್ತಾಪಿಸಿದರು. ಈ ಹಿನ್ನೆಲೆಯಲ್ಲಿ, ಅಕ್ಟೋಬರ್‌ನಲ್ಲಿ ನಡೆದ ಮೊದಲ ಭಾರತ-ಜಪಾನ್-ಫಿಲಿಪ್ಪೀನ್ಸ್ ತ್ರಿಪಕ್ಷೀಯ 1.5 ಸಂವಾದ ಹಾಗೂ 2026ರ ಫೆಬ್ರವರಿಯಲ್ಲಿ ಭಾರತ, ಜಪಾನ್ ಮತ್ತು ಇಂಡೋನೇಷ್ಯಾ ಭಾಗವಹಿಸಿದ್ದ ಮೊದಲ ತ್ರಿಪಕ್ಷೀಯ ನೌಕಾಪಡೆಗಳ ಪ್ಯಾಸೆಕ್ಸ್ (ಪ್ಯಾಸೆಕ್ಸ್) ಸಮರಾಭ್ಯಾಸವನ್ನು ಅವರು ಸ್ವಾಗತಿಸಿದರು.

ಯಾವುದೇ ನ್ಯಾಯಸಮ್ಮತ ಕಾರಣವಿಲ್ಲದೆ ಹೇರಲಾಗುವ ರಫ್ತು ನಿರ್ಬಂಧಗಳು ಸೇರಿದಂತೆ ಆರ್ಥಿಕ ಒತ್ತಡ ಹೇರುವ ಕ್ರಮಗಳು ಹಾಗೂ ಮಾರುಕಟ್ಟೆ ನಿಯಮಗಳಿಗೆ ವಿರುದ್ಧವಾದ ನೀತಿಗಳು ಮತ್ತು ಪದ್ಧತಿಗಳ ಬಗ್ಗೆ ಸಚಿವರು ಗಂಭೀರ ಕಳವಳ ವ್ಯಕ್ತಪಡಿಸಿದರು. ಇಂತಹ ಕ್ರಮಗಳಿಂದ ಅತಿಯಾದ ಸಾಮರ್ಥ್ಯ ಸೃಷ್ಟಿಯಾಗಿ, ಪ್ರಮುಖ ಕೈಗಾರಿಕೆಗಳ ಜಾಗತಿಕ ಪೂರೈಕೆ ಸರಪಳಿಗಳಿಗೆ ಅಡಚಣೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದರು. ಜಾಗತಿಕ ಮಟ್ಟದಲ್ಲಿ ನ್ಯಾಯಯುತ ಸ್ಪರ್ಧಾತ್ಮಕ ವಾತಾವರಣವನ್ನು ಕಾಪಾಡುವ ಹಾಗೂ ಸಮಾನ ಮನೋಭಾವ ಹೊಂದಿರುವ ಪಾಲುದಾರ ರಾಷ್ಟ್ರಗಳ ನಡುವೆ ವಿಶ್ವಾಸಾರ್ಹ ಮತ್ತು ಸ್ಥಿರವಾದ ಪೂರೈಕೆ ಸರಪಳಿಗಳನ್ನು ರೂಪಿಸಿ, ಅವುಗಳನ್ನು ಸುರಕ್ಷಿತವಾಗಿರಿಸುವ ಮಹತ್ವವನ್ನು ಅವರು ಒತ್ತಿಹೇಳಿದರು. ಇದರಿಂದ ಎಲ್ಲ ರಾಷ್ಟ್ರಗಳೂ ಒಟ್ಟಾಗಿ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ, 16ನೇ ವಾರ್ಷಿಕ ಶೃಂಗಸಭೆಯಲ್ಲಿ ಆರ್ಥಿಕ ಭದ್ರತಾ ಸಹಕಾರ ಕುರಿತ ಜಂಟಿ ಘೋಷಣೆಯನ್ನು ಅಂಗೀಕರಿಸಿರುವುದನ್ನು ಸಚಿವರು ಸ್ವಾಗತಿಸಿದರು. ಸೆಮಿಕಂಡಕ್ಟರ್‌ಗಳು, ನಿರ್ಣಾಯಕ ಖನಿಜಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಶುದ್ಧ ಇಂಧನ ಮತ್ತು ಔಷಧೀಯ ಉತ್ಪನ್ನಗಳು ಸೇರಿದಂತೆ ಕಾರ್ಯತಂತ್ರದ ಮಹತ್ವ ಹೊಂದಿರುವ ಕ್ಷೇತ್ರಗಳಲ್ಲಿ ನಿರ್ದಿಷ್ಟ ಯೋಜನೆಗಳನ್ನು ಆಧರಿಸಿದ ಸಹಕಾರವನ್ನು ಉತ್ತೇಜಿಸಲು ಅವರು ಒಪ್ಪಿಕೊಂಡರು. ಆರ್ಥಿಕ ಭದ್ರತಾ ಸಂವಾದದ ಎರಡನೇ ಸುತ್ತು ಹಾಗೂ ಖಾಸಗಿ ವಲಯದ ಆರ್ಥಿಕ ಭದ್ರತಾ ಸಂವಾದದ ಮೊದಲ ಸಭೆಯಲ್ಲಿ ಆಗಿರುವ ಪ್ರಗತಿಯನ್ನು ಸ್ವಾಗತಿಸಿದ ಅವರು, ಸ್ಥಿರ ಮತ್ತು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಹಾಗೂ ಕಾರ್ಯತಂತ್ರದ ದುರ್ಬಲತೆಗಳನ್ನು ಕಡಿಮೆ ಮಾಡುವ ಅವಕಾಶಗಳನ್ನು ಗುರುತಿಸಲು ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವೆ ನಿಕಟ ಸಹಕಾರಕ್ಕೆ ಕರೆ ನೀಡಿದರು. ಟ್ರ್ಯಾಕ್ 1.5 ಸಂವಾದದ ಮೊದಲ ಸಭೆ ಮತ್ತು ಮುಂದುವರಿದ ಸಮನ್ವಯ ವ್ಯವಸ್ಥೆಯ ಮೊದಲ ಸಭೆಯನ್ನು ಶೀಘ್ರದಲ್ಲೇ ನಡೆಸಲು ಅವರು ಒಪ್ಪಿಕೊಂಡರು.

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಭಾರತ ಮತ್ತು ಜಪಾನ್ ಕಾರ್ಯತಂತ್ರದ ಸಂಶೋಧನೆ ಮತ್ತು ಅಭಿವೃದ್ಧಿ ಪಾಲುದಾರ ರಾಷ್ಟ್ರಗಳಾಗಿವೆ ಎಂದು ಸಚಿವರು ತಿಳಿಸಿದರು. ನಾಯಕರ ಶೃಂಗಸಭೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಸಹಕಾರ ಕುರಿತ ಭಾರತ-ಜಪಾನ್ ಜಂಟಿ ಹೇಳಿಕೆಯನ್ನು ಅಂಗೀಕರಿಸಿರುವುದನ್ನು ಅವರು ಸ್ವಾಗತಿಸಿದರು. ‘ಜಪಾನ್-ಭಾರತ ಎಐ ಸಹಕಾರ ಉಪಕ್ರಮ’ (ಜೆಎಐ) ಅಡಿಯಲ್ಲಿ ಕೃತಕ ಬುದ್ಧಿಮತ್ತೆಯ ಪೂರಕ ವ್ಯವಸ್ಥೆಗೆ ಸಂಬಂಧಿಸಿದ ಸಹಕಾರವನ್ನು ಮತ್ತಷ್ಟು ಆಳಗೊಳಿಸಲು ಒಪ್ಪಿಕೊಂಡರು. ಎರಡೂ ದೇಶಗಳ ರಾಷ್ಟ್ರೀಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹಕರಿಸುವುದಾಗಿ ಅವರು ದೃಢಪಡಿಸಿದರು. ಅಲ್ಲದೆ, ತಮ್ಮ ಕಾರ್ಯತಂತ್ರ, ಆರ್ಥಿಕ ಮತ್ತು ಸಾಮಾಜಿಕ ಆದ್ಯತೆಗಳನ್ನು ಈಡೇರಿಸಲು ಕೃತಕ ಬುದ್ಧಿಮತ್ತೆಯ ಪೂರಕ ವ್ಯವಸ್ಥೆಯನ್ನು ಜಂಟಿಯಾಗಿ ರೂಪಿಸುವ ಕಾರ್ಯವನ್ನು ತ್ವರಿತಗೊಳಿಸುವಂತೆ ಕರೆ ನೀಡಿದರು.

ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲ ರೂಪಗಳು ಮತ್ತು ಅಭಿವ್ಯಕ್ತಿಗಳ ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಉಗ್ರವಾದವನ್ನು ಸಚಿವರು ಯಾವುದೇ ಸಂದೇಹಕ್ಕೆ ಅವಕಾಶವಿಲ್ಲದಂತೆ ತೀವ್ರವಾಗಿ ಖಂಡಿಸಿದರು. ಅಲ್ ಖೈದಾ, ಐಸಿಸ್/ದಾಯೆಶ್, ಲಷ್ಕರ್-ಎ-ತೈಬಾ (ಎಲ್‌ಇಟಿ), ಜೈಷ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅವುಗಳ ಪರವಾಗಿ ಕಾರ್ಯನಿರ್ವಹಿಸುವ ಸಂಘಟನೆಗಳು ಸೇರಿದಂತೆ ವಿಶ್ವಸಂಸ್ಥೆಯ ಪಟ್ಟಿಯಲ್ಲಿರುವ ಎಲ್ಲ ಭಯೋತ್ಪಾದಕ ಸಂಘಟನೆಗಳು ಮತ್ತು ಘಟಕಗಳ ವಿರುದ್ಧ ಸಂಘಟಿತ ಕ್ರಮ ಕೈಗೊಳ್ಳುವಂತೆ ಕರೆ ನೀಡಿದರು. ಭಯೋತ್ಪಾದಕರಿಗೆ ಸುರಕ್ಷಿತ ಆಶ್ರಯ ಒದಗಿಸುವ ತಾಣಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮಾರ್ಗಗಳನ್ನು ಹಾಗೂ ಗಡಿಯಾಚೆಗಿನ ಅಪರಾಧಗಳೊಂದಿಗಿನ ಅವುಗಳ ನಂಟನ್ನು ಕಡಿತಗೊಳಿಸುವುದು ಮತ್ತು ಭಯೋತ್ಪಾದಕರು ಗಡಿದಾಟಿ ಸಂಚರಿಸುವುದನ್ನು ತಡೆಯಲು ದೃಢವಾದ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಪ್ರಸ್ತುತ ಭೌಗೋಳಿಕ ರಾಜಕೀಯ ವಾಸ್ತವಗಳನ್ನು ಉತ್ತಮವಾಗಿ ಪ್ರತಿಬಿಂಬಿಸುವ ಉದ್ದೇಶದಿಂದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಸುಧಾರಣೆಗಳನ್ನು ಕೈಗೊಳ್ಳುವ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು. ಇದರಲ್ಲಿ ಬಹುತೇಕ ಸದಸ್ಯ ರಾಷ್ಟ್ರಗಳ ಬೆಂಬಲ ಹೊಂದಿರುವಂತೆ, ಕಾಯಂ ಮತ್ತು ಕಾಯಂಯೇತರ ಸದಸ್ಯ ಸ್ಥಾನಗಳೆರಡರ ಸಂಖ್ಯೆಯನ್ನು ಹೆಚ್ಚಿಸುವುದೂ ಸೇರಿದೆ. ಸುಧಾರಣೆಗೊಂಡ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯಲು ಭಾರತ ಮತ್ತು ಜಪಾನ್ ಪರಸ್ಪರ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದವು. 2028-29 ಮತ್ತು 2033-34ನೇ ಸಾಲಿನಲ್ಲಿ ಭದ್ರತಾ ಮಂಡಳಿಯ ಕಾಯಂಯೇತರ ಸದಸ್ಯ ಸ್ಥಾನಗಳಿಗೆ ಸ್ಪರ್ಧಿಸುವ ಉಭಯ ದೇಶಗಳ ಉಮೇದುವಾರಿಕೆಗೆ ಪರಸ್ಪರ ಬೆಂಬಲ ನೀಡಿರುವುದನ್ನೂ ಸಚಿವರು ಮೆಚ್ಚುಗೆಯಿಂದ ಉಲ್ಲೇಖಿಸಿದರು.

2027ರಲ್ಲಿ ಭಾರತ ಮತ್ತು ಜಪಾನ್ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು 'ಭಾರತ-ಜಪಾನ್ ಹಂಚಿಕೆಯ ಕ್ಷಿತಿಜಗಳ ವರ್ಷ'ವನ್ನಾಗಿ ಆಚರಿಸಲು ಸಚಿವರು ಒಪ್ಪಿಕೊಂಡರು. ವರ್ಷವಿಡೀ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ವಿಶೇಷ ಸಂದರ್ಭವನ್ನು ಆಚರಿಸಲಾಗುವುದು. 75ನೇ ವಾರ್ಷಿಕೋತ್ಸವದ ಅಧಿಕೃತ ಲಾಂಛನದ ಘೋಷಣೆಯನ್ನು ಅವರು ಸ್ವಾಗತಿಸಿದರು. ಈ ಸಂಭ್ರಮಾಚರಣೆಗೆ ಮುನ್ನುಡಿಯಾಗಿ ಜಪಾನ್‌ನ ಸಾನೊ ನಗರದಲ್ಲಿ ನಡೆದ ಭಾರತ-ಜಪಾನ್ ಕ್ರಿಕೆಟ್ ಪಂದ್ಯವನ್ನೂ ಅವರು ಸ್ವಾಗತಿಸಿದರು. ಈ ಮಹತ್ವದ ಮೈಲಿಗಲ್ಲು ಎರಡೂ ದೇಶಗಳ ನಡುವಿನ ಸ್ನೇಹ ಮತ್ತು ಪರಸ್ಪರ ತಿಳಿವಳಿಕೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಉಭಯ ದೇಶಗಳ ಜನರ ನಡುವಿನ ವಿನಿಮಯವನ್ನು ವಿಸ್ತರಿಸಲು ಮಹತ್ವದ ಅವಕಾಶ ಒದಗಿಸಲಿದೆ ಎಂದು ಅವರು ಒಪ್ಪಿಕೊಂಡರು.

ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಭದ್ರತಾ ಬೆಳವಣಿಗೆಗಳ ಕುರಿತು ನಿಯಮಿತ ಸಮಾಲೋಚನೆಗಳನ್ನು ನಡೆಸುವ ಹಾಗೂ ಈ ನಿಟ್ಟಿನಲ್ಲಿ ಪರಸ್ಪರ ವಿನಿಮಯವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಸಚಿವರು ಪುನರುಚ್ಚರಿಸಿದರು. ಮುಂದಿನ 2+2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಸಭೆಯನ್ನು ಪರಸ್ಪರ ಅನುಕೂಲಕರವಾದ ದಿನಾಂಕದಂದು ಭಾರತದಲ್ಲಿ ನಡೆಸಲು ಅವರು ನಿರ್ಧರಿಸಿದರು.

image.jpeg

image.jpeg

image.jpeg

 

*****

 

 


(ಪ್ರಕಟಣೆ ಐ.ಡಿ.: 2338755) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी