ಪ್ರಕಟಣಾ ದಿನಾಂಕ:
17 NOV 2026 9:25PM by PIB Bengaluru
ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ನೀತಿ ಆಯೋಗ ಇಂದು ಆಯೋಜಿಸಿದ್ದ ‘ಧ್ಯೇಯವಾಗಿ ನಾಯಕತ್ವ’ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಐಗಾಟ್ ಕರ್ಮಯೋಗಿ (iGOT Karmayogi) ವೇದಿಕೆಯಲ್ಲಿ ‘ಕರ್ಮಯೋಗಿ ಸಂಕಲ್ಪ’ಕ್ಕೆ ಚಾಲನೆ ನೀಡಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನೀತಿ ಆಯೋಗ ಆಯೋಜಿಸುತ್ತಿರುವ ಐದು ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯಲ್ಲಿ ಇದು ಮೊದಲನೆಯದಾಗಿದೆ.
‘ಕರ್ಮಯೋಗಿ ಸಂಕಲ್ಪ’ದ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕ ಸೇವಾ ಅಧಿಕಾರಿಯು ತಮ್ಮ ನಾಯಕತ್ವದ ಕಾರ್ಯವೈಖರಿಯಲ್ಲಿ ತರಲಿರುವ ಒಂದು ನಿರ್ದಿಷ್ಟ ಬದಲಾವಣೆಯ ಕುರಿತು ಬದ್ಧತೆಯನ್ನು ದಾಖಲಿಸುತ್ತಾರೆ. ಈ ಸಂಕಲ್ಪದಲ್ಲಿ ಅಧಿಕಾರಿ ಯಾವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲಿದ್ದಾರೆ, ಯಾವ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲಿದ್ದಾರೆ, ಇದರಿಂದ ನಾಗರಿಕರಿಗೆ ಯಾವ ಬದಲಾವಣೆ ಗೋಚರಿಸಲಿದೆ ಮತ್ತು ಅದಕ್ಕಾಗಿ ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿವರಗಳಿರುತ್ತವೆ. ಭಾರತ್ ಮಂಟಪದಲ್ಲಿ ಭಾಗವಹಿಸಿದ್ದವರು ಹಾಗೂ ಐಗಾಟ್ ಕರ್ಮಯೋಗಿ ವೇದಿಕೆಯ ಮೂಲಕ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಚಾಲನೆ ನೀಡಿದ ಸಂದರ್ಭದಲ್ಲಿ ತಮ್ಮ ಸಂಕಲ್ಪಗಳನ್ನು ದಾಖಲಿಸಿದರು. ಸರ್ಕಾರಿ ಅಧಿಕಾರಿಗಳು ದಾಖಲಿಸಿರುವ ಬದ್ಧತೆಗಳ ಅನುಷ್ಠಾನದ ಪ್ರಗತಿಯನ್ನು ಕರ್ಮಯೋಗಿ ಭಾರತ್ ಸಂಸ್ಥೆಯು ಪರಿಶೀಲಿಸಲಿದೆ. ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ತರಬೇತಿ ಸಂಸ್ಥೆಗಳ ಮೂಲಕ ಈ ಸಂಕಲ್ಪ ಅಭಿಯಾನವನ್ನು ಮುಂದುವರಿಸಲಾಗುವುದು. ಡಿಸೆಂಬರ್ 25, 2026ರಂದು ಆಚರಿಸಲಾಗುವ ʼಉತ್ತಮ ಆಡಳಿತ ದಿನʼದ ವೇಳೆಗೆ ವೇದಿಕೆಯಲ್ಲಿ 25,000 ಬದ್ಧತೆಗಳನ್ನು ದಾಖಲಿಸುವ ಗುರಿ ಹೊಂದಲಾಗಿದೆ.
ದಿನದ ಕಾರ್ಯಕ್ರಮವು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರ ಉದ್ಘಾಟನಾ ಮುಖ್ಯ ಭಾಷಣದೊಂದಿಗೆ ಆರಂಭವಾಯಿತು. ಬಳಿಕ 2001ರ ಭೂಕಂಪದ ನಂತರ ಕಚ್ನ ಪುನರ್ನಿರ್ಮಾಣ, ಕೋವಿಡ್-19 ಸಾಂಕ್ರಾಮಿಕದ ನಿರ್ವಹಣೆ, ಲಖ್ಪತಿ ದೀದಿ ಮತ್ತು ಬಾಹ್ಯಾಕಾಶ ಆರ್ಥಿಕತೆಯನ್ನು ಮುಕ್ತಗೊಳಿಸಿದ ಪ್ರಕ್ರಿಯೆ ಕುರಿತ ಪ್ರತ್ಯಕ್ಷ ಅನುಭವಗಳನ್ನು ಹಂಚಿಕೊಳ್ಳಲಾಯಿತು. ‘ಕೇಸ್ ಕ್ಲಿನಿಕ್’ನಲ್ಲಿ ಪ್ರತಿಯೊಂದು ಗುಂಪು ತಮಗೆ ವಹಿಸಲಾದ ಘಟನೆಯೊಂದಕ್ಕೆ ಸಂಬಂಧಿಸಿದ ಒಂದು ನಿರ್ಧಾರವನ್ನು ಪರಿಶೀಲಿಸಿತು. ಆ ನಿರ್ಧಾರ ಕೈಗೊಳ್ಳುವಾಗ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಏನು ಅಗತ್ಯವಿತ್ತು, ಅದಕ್ಕೆ ಎದುರಾದ ಅಡೆತಡೆಗಳೇನು ಮತ್ತು ಅನುಷ್ಠಾನದ ಹಂತದಲ್ಲಿಯೂ ನಿರ್ಧಾರವು ತನ್ನ ಮೂಲ ಉದ್ದೇಶದಿಂದ ವಿಮುಖವಾಗದಂತೆ ಹೇಗೆ ನೋಡಿಕೊಳ್ಳಲಾಯಿತು ಎಂಬ ಅಂಶಗಳನ್ನು ಅವಲೋಕಿಸಲಾಯಿತು.
ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರ ನಿರ್ವಹಣೆಯಲ್ಲಿ ‘ವಿಕಸಿತ ಭಾರತಕ್ಕಾಗಿ ನಾಯಕತ್ವ’ ಕುರಿತ ಚರ್ಚಾಗೋಷ್ಠಿ ನಡೆಯಿತು. ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಮತ್ತು ಇಂಧನ ಖಾತೆ ಸಚಿವ ಶ್ರೀ ಅರವಿಂದ್ ಕುಮಾರ್ ಶರ್ಮಾ, ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ), ಅಹಮದಾಬಾದ್ನ ಪ್ರೊ. ವಿಶಾಲ್ ಗುಪ್ತಾ, ನಾಸ್ಕಾಂನ ಮಾಜಿ ಅಧ್ಯಕ್ಷೆ ಹಾಗೂ ನೀತಿ ಆಯೋಗದ ಡಿಸ್ಟಿಂಗ್ವಿಶ್ಡ್ ಫೆಲೋ ಶ್ರೀಮತಿ ದೇಬಜಾನಿ ಘೋಷ್ ಮತ್ತು ಉತ್ತರ ಪ್ರದೇಶದ ಹರ್ದೋಯಿಯ ಜಂಟಿ ಮ್ಯಾಜಿಸ್ಟ್ರೇಟ್ ಶ್ರೀಮತಿ ನಾರಾಯಣಿ ಭಾಟಿಯಾ ಅವರು ಚರ್ಚಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ತತ್ವಗಳು ಹಾಗೂ ವಿಕಸಿತ ಭಾರತ 2047ರ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಅವುಗಳ ಪ್ರಸ್ತುತತೆ ಕುರಿತು ಚರ್ಚಾಗೋಷ್ಠಿಯ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಧಾನಮಂತ್ರಿಯವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಉಂಟಾದ ಮಹತ್ವದ ಬದಲಾವಣೆಯನ್ನು ಶ್ರೀ ಅರವಿಂದ್ ಕುಮಾರ್ ಶರ್ಮಾ ಅವರು ವಿವರಿಸಿದರು. ಹೊಸ ಕಾರ್ಯವಿಧಾನಗಳನ್ನು ರೂಪಿಸುವುದು, ಸಂಸ್ಥೆಗಳ ಹಾಗೂ ಮಾನವ ಸಂಪನ್ಮೂಲದ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಅಭಿವೃದ್ಧಿಯ ಕೇಂದ್ರಬಿಂದುವಿನಲ್ಲಿ ಸ್ಥಳೀಯ ಸಮುದಾಯಗಳನ್ನು ಇರಿಸುವ ಅವರ ಸಾಮರ್ಥ್ಯವನ್ನು ಅವರು ಒತ್ತಿಹೇಳಿದರು.
ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಬಹುದು ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸುವ ಪ್ರಧಾನಮಂತ್ರಿಯವರ ಸಾಮರ್ಥ್ಯವನ್ನು ಪ್ರೊ. ವಿಶಾಲ್ ಗುಪ್ತಾ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ರಾಜಕೀಯ ಇಚ್ಛಾಶಕ್ತಿಯೊಂದಿಗೆ ಆಡಳಿತಾತ್ಮಕ ಸುಧಾರಣೆಗಳೂ ಕೈಜೋಡಿಸಬೇಕು ಎಂದು ಅವರು ಒತ್ತಿಹೇಳಿದರು. ಅಲ್ಲದೆ, ‘ಸೇವಾ ಭಾವ’ವು ನಾಯಕತ್ವದ ಪ್ರಮುಖ ತತ್ವವಾಗಿದೆ ಎಂದು ಅವರು ತಿಳಿಸಿದರು.
ತಂತ್ರಜ್ಞಾನವನ್ನು ಅಂತಿಮವಾಗಿ ಜನರು ಮತ್ತು ಸಮಾಜದ ಮೇಲೆ ಅದು ಬೀರುವ ಪರಿಣಾಮದ ಆಧಾರದ ಮೇಲೆ ಅಳೆಯಬೇಕು ಎಂದು ಶ್ರೀಮತಿ ದೇಬಜಾನಿ ಘೋಷ್ ಅವರು ಪ್ರತಿಪಾದಿಸಿದರು. ಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನದ ಪ್ರಗತಿಯಲ್ಲಿ ಮಾನವಕೇಂದ್ರಿತ ದೃಷ್ಟಿಕೋನಕ್ಕೆ ಆದ್ಯತೆ ನೀಡಬೇಕು. ನಾವೀನ್ಯತೆಯು ಸಮಾಜದಲ್ಲಿ ಅರ್ಥಪೂರ್ಣ ಬದಲಾವಣೆಗೆ ಕಾರಣವಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರ ವಿಭಿನ್ನವಾಗಿ ಆಲೋಚಿಸುವ ಸಾಮರ್ಥ್ಯ ಹಾಗೂ ಪರಸ್ಪರ ಸಂಬಂಧಿತ ಅವಕಾಶಗಳನ್ನು ಗುರುತಿಸುವ ಗುಣವನ್ನು ಶ್ರೀಮತಿ ನಾರಾಯಣಿ ಭಾಟಿಯಾ ಅವರು ಪ್ರಸ್ತಾಪಿಸಿದರು. ವಿಶೇಷವಾಗಿ, ಇತರರ ಮಾತುಗಳನ್ನು ತಾಳ್ಮೆಯಿಂದ ಆಲಿಸುವ ಮತ್ತು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಪ್ರಧಾನಮಂತ್ರಿಯವರ ಗುಣವನ್ನು ಅವರು ಒತ್ತಿಹೇಳಿದರು. ಯುವ ಅಧಿಕಾರಿಗಳು ಸೇರಿದಂತೆ ಎಲ್ಲರಿಗೂ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡುವುದು ಅವರ ನಾಯಕತ್ವದ ಅತ್ಯಂತ ಮೌಲ್ಯಯುತ ಗುಣಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದರು.
‘ಅಪ್ಲಿಕೇಶನ್ ಕ್ಲಿನಿಕ್’ನಲ್ಲಿ ಸರ್ಕಾರಿ ಅಧಿಕಾರಿಗಳು ‘ಕೇಸ್ ಕ್ಲಿನಿಕ್’ನಿಂದ ಪಡೆದ ಕಲಿಕೆಗಳನ್ನು ತಮ್ಮ ಪ್ರಸ್ತುತ ಹುದ್ದೆಗಳಲ್ಲಿ ಎದುರಿಸುತ್ತಿರುವ ನೈಜ ನಾಯಕತ್ವದ ಸವಾಲುಗಳಿಗೆ ಅನ್ವಯಿಸಿ ಪರಿಶೀಲಿಸಿದರು.
ಸಮಾರೋಪ ಸಮಾರಂಭದಲ್ಲಿ ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರು ದಿನದ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. ಇದರೊಂದಿಗೆ, ವಿವಿಧ ಗುಂಪುಗಳು ತಾವು ಸಿದ್ಧಪಡಿಸಿದ ಕಾರ್ಯಯೋಜನೆಗಳನ್ನು ಪ್ರಸ್ತುತಪಡಿಸಿದವು. ಅವುಗಳಲ್ಲಿ ದೂರದ ಬುಡಕಟ್ಟು ಜನವಸತಿ ಪ್ರದೇಶಗಳಲ್ಲಿ ತಾಯಂದಿರ ಆರೈಕೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅದರ ಮೇಲ್ವಿಚಾರಣೆ ನಡೆಸಲು ಉದ್ದೇಶಿಸಿರುವ ‘ಎಎಸ್ಆರ್ ಸಾಥಿ – ಸುರಕ್ಷಿತ ಪ್ರಸವಪೂರ್ವ ನೆರವು’; ಸಾಂಕ್ರಾಮಿಕವಲ್ಲದ ರೋಗಗಳಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸಲು, ರೋಗಿಗಳನ್ನು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕಳುಹಿಸುವ ಪ್ರಕ್ರಿಯೆಯಲ್ಲಿ ನಿರಂತರ ಸಮನ್ವಯ ಹೊಂದಿರುವ ವ್ಯವಸ್ಥೆಯನ್ನು ಜಾರಿಗೊಳಿಸುವುದು; ಸ್ವಸಹಾಯ ಗುಂಪುಗಳ ಉದ್ಯಮಗಳು ಲಖ್ಪತಿ ದೀದಿ ಯೋಜನೆಯಡಿ ಆದಾಯವನ್ನು ನಿರಂತರವಾಗಿ ಕಾಯ್ದುಕೊಳ್ಳಲು ಪ್ರತಿಯೊಂದು ಸರಸ್ ಮೇಳದಲ್ಲೂ ವರ್ಷವಿಡೀ ಖರೀದಿಗೆ ಸಂಬಂಧಿಸಿದ ಬದ್ಧತೆಗಳನ್ನು ಖಚಿತಪಡಿಸುವುದು; ಮತ್ತು ಸ್ವಚ್ಛ ಭಾರತ್ ಮಿಷನ್ – ಗ್ರಾಮೀಣ್ ಅಡಿಯಲ್ಲಿ ನಿರ್ಮಿಸಲಾದ ಬೂದು ನೀರು ನಿರ್ವಹಣಾ ಆಸ್ತಿಗಳು ಆರಂಭದಿಂದಲೇ ಹಾಗೂ ದೀರ್ಘಾವಧಿಯವರೆಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಸೇರಿದ್ದವು.
ತಮ್ಮ ಸಮಾರೋಪ ಭಾಷಣದಲ್ಲಿ ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಅವರು, “ನಾಯಕತ್ವದ ಪಾಠಗಳನ್ನು ಶೈಕ್ಷಣಿಕ ಕೋರ್ಸ್ಗಳು ಮತ್ತು ಸಂಶೋಧನೆಗಳ ಮೂಲಕ ಅಧ್ಯಯನ ಮಾಡಬಹುದು. ಆದರೆ, ಸಮರ್ಥ ನಾಯಕರನ್ನು ನಿಕಟವಾಗಿ ಗಮನಿಸುವುದರಿಂದ ಮತ್ತು ಅವರೊಂದಿಗೆ ಕಾರ್ಯನಿರ್ವಹಿಸುವುದರಿಂದ ಅತ್ಯಂತ ಮೌಲ್ಯಯುತ ಪಾಠಗಳನ್ನು ಕಲಿಯಬಹುದು ಎಂದು ಹೇಳಿದರು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಂತಹ ನಾಯಕರೊಂದಿಗೆ ಕಾರ್ಯನಿರ್ವಹಿಸಿದ ತಮ್ಮ ಅನುಭವವನ್ನು ಆಧರಿಸಿ, ನಾಗರಿಕ ಸೇವಾ ಅಧಿಕಾರಿಗಳು ಅಳವಡಿಸಿಕೊಳ್ಳಬಹುದಾದ ಪ್ರಮುಖ ಆಡಳಿತಾತ್ಮಕ ನಾಯಕತ್ವದ ಕಾರ್ಯವಿಧಾನಗಳನ್ನು ಅವರು ವಿವರಿಸಿದರು. ಕಾರ್ಯಾಗಾರದಲ್ಲಿ ಕಲಿತ ಪಾಠಗಳನ್ನು ಕಾರ್ಯಕ್ಷೇತ್ರಕ್ಕೆ ಕೊಂಡೊಯ್ಯುವಲ್ಲಿ ‘ಕರ್ಮಯೋಗಿ ಸಂಕಲ್ಪ’ ಪ್ರಮುಖ ಪಾತ್ರ ವಹಿಸಲಿದೆ. ಸಮರ್ಥ ನಾಯಕರೊಂದಿಗಿನ ಅನುಭವದ ಮೂಲಕವೇ ಪರಿಣಾಮಕಾರಿ ನಾಯಕತ್ವವನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಎಂಬುದನ್ನು ಡಾ. ಸೋಮನಾಥನ್ ಒತ್ತಿಹೇಳಿದರು. ಅವರ ಆಡಳಿತಾತ್ಮಕ ಕೌಶಲಗಳಿಂದ ಕಲಿಯುವುದರ ಮಹತ್ವವನ್ನೂ ಅವರು ಪ್ರಸ್ತಾಪಿಸಿದರು.
ಪರಿಣಾಮಕಾರಿ ಆಡಳಿತಾತ್ಮಕ ನಾಯಕತ್ವ ಎಂದರೆ ದೂರದೃಷ್ಟಿಯನ್ನು ಅಳೆಯಬಹುದಾದ ಫಲಿತಾಂಶಗಳಾಗಿ ಪರಿವರ್ತಿಸುವುದಾಗಿದೆ. ಇದಕ್ಕಾಗಿ ಉದ್ದೇಶಪೂರ್ವಕವಾಗಿ ಪ್ರಶ್ನಿಸುವುದು, ಸಕ್ರಿಯವಾಗಿ ಆಲಿಸುವುದು, ನಿರ್ಣಾಯಕ ನಿರ್ಧಾರಗಳನ್ನು ಕೈಗೊಳ್ಳುವುದು, ಹೊಣೆಗಾರಿಕೆಯನ್ನು ಖಚಿತಪಡಿಸುವುದು ಮತ್ತು ನಿಗದಿತ ಪ್ರಕ್ರಿಯೆಗಳನ್ನು ಪಾಲಿಸುವುದು ಅಗತ್ಯ ಎಂದು ಅವರು ಹೇಳಿದರು.
ಗುಂಪುಗಳು ನಡೆಸಿದ ವಿಶ್ಲೇಷಣೆಯನ್ನು ಪ್ರಕರಣ ಅಧ್ಯಯನಗಳ ರೂಪದಲ್ಲಿ ಕೇಸ್ ರೈಟರ್ಗಳು ಅಭಿವೃದ್ಧಿಪಡಿಸಲಿದ್ದು, ನಾಗರಿಕ ಸೇವಾ ಅಧಿಕಾರಿಗಳು ಮತ್ತು ತರಬೇತಿ ಸಂಸ್ಥೆಗಳ ಬಳಕೆಗಾಗಿ ಅವುಗಳನ್ನು ಐಗಾಟ್ ಕರ್ಮಯೋಗಿ ವೇದಿಕೆಯಲ್ಲಿ ಪ್ರಕಟಿಸಲಾಗುವುದು. ಪ್ರತಿಯೊಂದು ಗುಂಪು ಸಿದ್ಧಪಡಿಸಿದ ಅನುಷ್ಠಾನ ಯೋಜನೆಗಳು ಮತ್ತು ‘ಕರ್ಮಯೋಗಿ ಸಂಕಲ್ಪ’ದ ಅಡಿಯಲ್ಲಿ ದಾಖಲಿಸಲಾದ ಬದ್ಧತೆಗಳು ಕಾರ್ಯಾಗಾರದಲ್ಲಿ ಕಲಿತ ಪಾಠಗಳನ್ನು ಕಾರ್ಯಕ್ಷೇತ್ರಕ್ಕೆ ಕೊಂಡೊಯ್ಯಲಿವೆ. ಈ ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯಲ್ಲಿ ಮುಂದಿನ ಕಾರ್ಯಾಗಾರವನ್ನು ‘ಈಡೇರಿಕೆಯಾಗಿ ಆಡಳಿತ’ (Governance as Delivery) ಎಂಬ ವಿಷಯದ ಕುರಿತು ಜನವರಿ 2027ರಲ್ಲಿ ಆಯೋಜಿಸಲಾಗುವುದು. ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅನುರಾಗ್ ಜೈನ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಾಗಾರ ಮುಕ್ತಾಯವಾಯಿತು.

_20261117212646_bc0379.jpeg)

_20261117212709_c3bc70.jpeg)
*****