ಪ್ರಕಟಣಾ ದಿನಾಂಕ:
13 NOV 2026 12:35PM by PIB Bengaluru
ಔಷಧ ಇಲಾಖೆಯ ಅಧೀನದಲ್ಲಿರುವ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು, 137 ಪಟ್ಟಿ ಮಾಡಲಾಗದ ಕ್ಯಾನ್ಸರ್ ವಿರೋಧಿ ಔಷಧಿಗಳ ಮೇಲೆ 'ಟ್ರೇಡ್ ಮಾರ್ಜಿನ್ ರೇಷನಲೈಸೇಶನ್' (TMR - ವ್ಯಾಪಾರ ಲಾಭಾಂಶದ ತರ್ಕಬದ್ಧಗೊಳಿಸುವಿಕೆ) ಅನುಷ್ಠಾನವನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲು ನಿರ್ದೇಶಿಸಿದೆ. ಈ ಕುರಿತ ಅಧಿಸೂಚನೆಯನ್ನು 17 ಅಕ್ಟೋಬರ್ 2026 ರಂದು ಗೆಜೆಟ್ ಆದೇಶದ ಮೂಲಕ ಹೊರಡಿಸಲಾಗಿದ್ದು, ಪರಿಷ್ಕೃತ ಬೆಲೆಗಳು 9 ನವೆಂಬರ್ 2026 ರಿಂದ ಜಾರಿಗೆ ಬಂದಿವೆ.
ನವೆಂಬರ್ 11, 2026 ರವರೆಗೆ ಕಂಪನಿಗಳಿಂದ ಸ್ವೀಕರಿಸಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾದ ಇತ್ತೀಚಿನ ಪರಿಷ್ಕೃತ ಬೆಲೆ ಪಟ್ಟಿಗಳು, NPPA ವೆಬ್‌ಸೈಟ್ ಮತ್ತು 'ಫಾರ್ಮಾ ಸಹಿ ದಾಮ್' ಆ್ಯಪ್/ಪೋರ್ಟಲ್‌ನಲ್ಲಿ ಲಭ್ಯವಿವೆ. ಎಲ್ಲಾ ತಯಾರಕರು, ಚಿಲ್ಲರೆ ವ್ಯಾಪಾರಿಗಳು, ವಿತರಕರು, ಸ್ಟಾಕಿಸ್ಟ್‌ಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ಈ ಪರಿಷ್ಕೃತ ಬೆಲೆಗಳನ್ನು ಪಾಲಿಸುವಂತೆ ಹಾಗೂ ತಮ್ಮ ಆವರಣಗಳಲ್ಲಿ ಮತ್ತು ವೆಬ್‌ಸೈಟ್‌ಗಳಲ್ಲಿ ನವೀಕರಿಸಿದ ಬೆಲೆ ಪಟ್ಟಿಗಳನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವಂತೆ ಸೂಚಿಸಲಾಗಿದೆ.
ರಾಜ್ಯ ಔಷಧ ನಿಯಂತ್ರಕರು ನಿಯಮ ಪಾಲನೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ರೋಗಿಗಳ ಹಿತಾಸಕ್ತಿಗಳನ್ನು ರಕ್ಷಿಸಬೇಕು:
ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆಗಳ (MRP) ಪ್ರಯೋಜನಗಳು ರೋಗಿಗಳಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ತಯಾರಕರು, ವಿತರಕರು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ನಿಯಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ರಾಜ್ಯ ಔಷಧ ನಿಯಂತ್ರಕರಿಗೆ (SDCs) ಸೂಚಿಸಲಾಗಿದೆ. ನಿಯಮ ಉಲ್ಲಂಘನೆಯಾದಲ್ಲಿ, DPCO 2013 ರ ನಿಬಂಧನೆಗಳ ಅಡಿಯಲ್ಲಿ ಅತಿಯಾದ ಬೆಲೆ ವಿಧಿಸಿದಕ್ಕಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅತಿಯಾದ ಬೆಲೆ ವಿಧಿಸುವಿಕೆ, ಔಷಧಿಗಳ ಕೊರತೆ ಅಥವಾ ಲಭ್ಯವಿಲ್ಲದಿರುವಿಕೆ ಕುರಿತ ದೂರುಗಳನ್ನು 'ಫಾರ್ಮಾ ಸಹಿ ದಾಮ್' ಆ್ಯಪ್/ಪೋರ್ಟಲ್, NPPA ಸಹಾಯವಾಣಿ (1800-111-255) ಅಥವಾ ಇಮೇಲ್ (monitoring-nppa[at]gov[dot]in) ಮೂಲಕ ಸಲ್ಲಿಸಬಹುದು. ರಾಜ್ಯ ಔಷಧ ನಿಯಂತ್ರಕರು ತಾವು ಕೈಗೊಂಡ ಕ್ರಮಗಳ ವರದಿಯನ್ನು 16 ನವೆಂಬರ್ 2026 ರೊಳಗೆ NPPA ಗೆ ಸಲ್ಲಿಸುವಂತೆ ಕೋರಲಾಗಿದೆ.
https://t.co/B9mEk0l7X7
*****