ಪ್ರಕಟಣಾ ದಿನಾಂಕ:
12 NOV 2026 4:13PM by PIB Bengaluru
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2020ರ ಆಗಸ್ಟ್ 15ರಂದು ಆರಂಭಿಸಿದ 'ನಶಾ ಮುಕ್ತ ಭಾರತ ಅಭಿಯಾನ' (ಎನ್ ಎಂ ಬಿ ಎ), ಮಾದಕವಸ್ತು ದುರ್ಬಳಕೆ ವಿರುದ್ಧದ ಒಂದು ರಾಷ್ಟ್ರವ್ಯಾಪಿ ಜನಾಂದೋಲನವಾಗಿ ಬೆಳೆದಿದೆ. 2026ರ ನವೆಂಬರ್ 12ರ ವೇಳೆಗೆ ಈ ಅಭಿಯಾನವು ದೇಶಾದ್ಯಂತ 35.88 ಕೋಟಿಗೂ ಅಧಿಕ ಜನರನ್ನು ತಲುಪಿದೆ.
ಈ ಅಭಿಯಾನವು 14.35 ಕೋಟಿಗೂ ಅಧಿಕ ಯುವಕರು ಮತ್ತು 11.33 ಕೋಟಿ ಮಹಿಳೆಯರನ್ನು ಸಂಪರ್ಕಿಸಿದ್ದು, ಸಮಾಜದ ಪ್ರಮುಖ ವರ್ಗಗಳಲ್ಲಿ ಇದರ ವ್ಯಾಪ್ತಿ ವಿಸ್ತರಿಸುತ್ತಿರುವುದನ್ನು ಇದು ತೋರಿಸುತ್ತದೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ನಾಗರಿಕರು 'ನಶಾ ಮುಕ್ತಿ ಮಿತ್ರ'ರಾಗಿ ನೋಂದಾಯಿಸಿಕೊಂಡಿದ್ದು, 'ಮಾದಕವಸ್ತು ಮುಕ್ತ ಭಾರತ'ವನ್ನು ನಿರ್ಮಿಸುವ ಸಾಮೂಹಿಕ ಪ್ರಯತ್ನದಲ್ಲಿ ಸಮುದಾಯದ ಭಾಗವಹಿಸುವಿಕೆ ಬಲವರ್ಧನೆಗೊಳಿಸಿದ್ದಾರೆ.

ಆರಂಭದಲ್ಲಿ ಮಾದಕವಸ್ತು ಬಳಕೆಯ ಅಪಾಯಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆಯಿದ್ದ 272 ಜಿಲ್ಲೆಗಳಲ್ಲಿ ಈ ಅಭಿಯಾನವನ್ನು ಆರಂಭಿಸಲಾಯಿತು. ನಂತರ, 2022ರ ಆಗಸ್ಟ್ನಲ್ಲಿ ಇದನ್ನು 372 ಜಿಲ್ಲೆಗಳಿಗೆ ವಿಸ್ತರಿಸಲಾಯಿತು ಮತ್ತು 2023ರ ಆಗಸ್ಟ್ 15ರಿಂದ ದೇಶದ ಎಲ್ಲಾ ಜಿಲ್ಲೆಗಳಿಗೂ ಅನ್ವಯಿಸುವಂತೆ ವಿಸ್ತರಿಸಲಾಯಿತು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಲ್ಲಿ, ಎನ್ ಎಂ ಬಿ ಎ ಕೇವಲ ಸಾಂಸ್ಥಿಕ ಭಾಗವಹಿಸುವಿಕೆಯನ್ನು ಒಳಗೊಂಡ ಉಪಕ್ರಮದಿಂದ, ಸಮುದಾಯದ ನೇತೃತ್ವದ ಚಳವಳಿಯಾಗಿ ವಿಕಸನಗೊಂಡಿದೆ ಎಂದು ಅವರು ಹೇಳಿದರು. ಇದರಲ್ಲಿ ರಾಜ್ಯಗಳು, ಜಿಲ್ಲೆಗಳು, ಶಿಕ್ಷಣ ಸಂಸ್ಥೆಗಳು, ನಾಗರಿಕ ಸಮಾಜ ಸಂಘಟನೆಗಳು ಮತ್ತು ಸ್ಥಳೀಯ ಪಾಲುದಾರರು ಇದರ ಅನುಷ್ಠಾನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ.

ಈ ಅಭಿಯಾನವು ಈವರೆಗೆ 35.88 ಕೋಟಿಗೂ ಅಧಿಕ ಜನರನ್ನು ತಲುಪಿದೆ ಎಂದು ಅಧಿಕಾರಿ ತಿಳಿಸಿದರು. 2021ರಲ್ಲಿ ಸುಮಾರು 1.4 ಕೋಟಿ ಜನರನ್ನು ತಲುಪಿದ್ದಕ್ಕೆ ಹೋಲಿಸಿದರೆ, ಇದು ಗಮನಾರ್ಹ ವಿಸ್ತರಣೆಯಾಗಿದೆ. ಮಾದಕವಸ್ತು ಸೇವನೆಯ ವಿರುದ್ಧದ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ನಾಗರಿಕರನ್ನು ಪ್ರೋತ್ಸಾಹಿಸುವುದು, ಸಮುದಾಯ ಒಗ್ಗೂಡಿಸುವುದು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ನಡೆಸಲಾದ ಪ್ರಯತ್ನಗಳ ಫಲವಾಗಿ ಈ ವ್ಯಾಪ್ತಿ ವಿಸ್ತರಿಸಿದೆ ಎಂದು ಅವರು ಹೇಳಿದರು.

ಶೈಕ್ಷಣಿಕ ಸಂಸ್ಥೆಗಳಲ್ಲಿ 34.07 ಲಕ್ಷಕ್ಕೂ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಅವುಗಳ ಮೂಲಕ ವಿದ್ಯಾರ್ಥಿಗಳು ಮತ್ತು ಯುವಜನರನ್ನು ಮಾದಕವಸ್ತು ಸೇವನೆಯ ಹಾನಿಕಾರಕ ಪರಿಣಾಮಗಳ ಕುರಿತಾದ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ಈ ಚಟುವಟಿಕೆಗಳು ಯುವ ಪೀಳಿಗೆಯಲ್ಲಿ ಮಾದಕವಸ್ತು ಸೇವನೆಯ ತಡೆಗಟ್ಟುವಿಕೆಯ ಬಗ್ಗೆ ಅರಿವನ್ನು ಬಲಪಡಿಸುವ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವ ಗುರಿಯನ್ನು ಹೊಂದಿವೆ ಎಂದು ಅವರು ಹೇಳಿದರು.
ವ್ಯಕ್ತಿಗಳು, ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುವ ಮಾದಕವಸ್ತು ಅವಲಂಬನೆಯನ್ನು, ಒಂದು ಸಂಕೀರ್ಣ ಮನೋ-ಸಾಮಾಜಿಕ ಮತ್ತು ವೈದ್ಯಕೀಯ ಸವಾಲಾಗಿ ಪರಿಗಣಿಸಿ ಅದನ್ನು ನಿಭಾಯಿಸುವ ಅಗತ್ಯದಿಂದಲೇ 'ಎನ್ಎಂಬಿಎ' ವಿಸ್ತರಣೆಯಾಗಿದೆ ಎಂದು ತಿಳಿಸಿದರು.
2018ರಲ್ಲಿ ಭಾರತದಲ್ಲಿ ಮಾದಕವಸ್ತು ಬಳಕೆಯ ವ್ಯಾಪ್ತಿ ಮತ್ತು ಸ್ವರೂಪದ ಕುರಿತು ನಡೆಸಲಾದ ಮೊದಲ ರಾಷ್ಟ್ರೀಯ ಸಮೀಕ್ಷೆಯು, ಈ ಸವಾಲಿನ ಗಂಭೀರತೆಯನ್ನು ಉಲ್ಲೇಖಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ಸಮೀಕ್ಷೆಯ ಪ್ರಕಾರ, ದೇಶದಲ್ಲಿ ಸುಮಾರು 1.2 ಕೋಟಿ ಮಕ್ಕಳು ಮತ್ತು 58 ಲಕ್ಷ ಮಹಿಳೆಯರು ಸೇರಿದಂತೆ ಒಟ್ಟು 7 ಕೋಟಿಗೂ ಅಧಿಕ ಜನರು ಮಾದಕವಸ್ತು ಬಳಕೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಒಂದು ಸಮಗ್ರ ಮತ್ತು ನಿರಂತರ ಪ್ರತಿಕ್ರಿಯೆಯ ಅಗತ್ಯತೆಯನ್ನು ಮನಗಂಡು, ಸಚಿವಾಲಯವು 'ನಶಾ ಮುಕ್ತ ಭಾರತ ಅಭಿಯಾನ'ವನ್ನು (ಎನ್ ಎಂ ಬಿ ಎ) ಆರಂಭಿಸಿದೆ. ಇದು 'ಮಾದಕವಸ್ತು ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ'ಯ (ಎನ್ ಎ ಪಿ ಡಿ ಡಿ ಆರ್-NAPDDR) ಅಡಿಯಲ್ಲಿನ ಪ್ರಮುಖ ಜಾಗೃತಿ ಉಪಕ್ರಮವಾಗಿದ್ದು, ಮಾದಕವಸ್ತು ಬಳಕೆಯ ನಿಯಂತ್ರಣ, ಚಿಕಿತ್ಸೆ ಮತ್ತು ಪುನರ್ವಸತಿಯ ಮೇಲೆ ಹೆಚ್ಚಿನ ಗಮನಹರಿಸುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಜಾಗೃತಿ ಮೂಡಿಸುವ ಜೊತೆಗೆ, ಎನ್ ಎ ಪಿ ಡಿ ಡಿ ಆರ್ ಅಡಿಯಲ್ಲಿ ಚಿಕಿತ್ಸೆ ಮತ್ತು ಸಮಾಲೋಚನಾ ವ್ಯವಸ್ಥೆಯನ್ನು ಸಚಿವಾಲಯವು ಬಲಪಡಿಸಿದೆ ಎಂದು ಅವರು ಹೇಳಿದರು.
ಈ ಸೇವೆಗಳ ವಿಸ್ತರಣೆಯು ಮಾದಕವಸ್ತು ಅವಲಂಬನೆ ನಿಭಾಯಿಸುವಲ್ಲಿ ಸುಲಭವಾಗಿ ಲಭ್ಯವಿರುವ ಚಿಕಿತ್ಸೆ, ಸಮಯೋಚಿತ ಮಧ್ಯಸ್ಥಿಕೆ ಮತ್ತು ನಿರಂತರ ಪುನರ್ವಸತಿಯ ಮಹತ್ವವನ್ನು ಉಲ್ಲೇಖಿಸುತ್ತದೆ ಎಂದು ಅಧಿಕಾರಿ ವಿವರಿಸಿದರು. ಚಿಕಿತ್ಸೆ ಮತ್ತು ಸಮಾಲೋಚನೆ ಪಡೆಯುವವರ ಸಂಖ್ಯೆಯು 2020-21ರಲ್ಲಿ 2.08 ಲಕ್ಷವಿದ್ದದ್ದು, 2025-26ರ ವೇಳೆಗೆ 9.11 ಲಕ್ಷಕ್ಕೂ ಅಧಿಕಕ್ಕೆ ಏರಿಕೆಯಾಗಿದೆ; ಇದು ಬೆಂಬಲ ಸೇವೆಗಳ ವ್ಯಾಪ್ತಿ ಮತ್ತು ಬಳಕೆಯು ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಸದ್ಯ ದೇಶದಲ್ಲಿ ಒಟ್ಟು 198 ಜಿಲ್ಲಾ ಮಟ್ಟದ ವ್ಯಸನ ಮುಕ್ತ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.
ಎನ್ ಎಂ ಬಿ ಎ ಯ ಪ್ರಮುಖ ಭಾಗವೆಂದರೆ 'ನಶಾ ಮುಕ್ತಿ ಮಿತ್ರ' ಉಪಕ್ರಮ. ಇದು ಮಾದಕವಸ್ತು ದುರ್ಬಳಜೆ ವಿರುದ್ಧದ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ ಎಂದು ಅಧಿಕಾರಿ ತಿಳಿಸಿದರು.
2026ರ ನವೆಂಬರ್ 12 ರ ವೇಳಗೆ 2 ಲಕ್ಷಕ್ಕೂ ಅಧಿಕ ನಾಗರಿಕರು 'ನಶಾ ಮುಕ್ತಿ ಮಿತ್ರ'ರಾಗಿ ನೋಂದಾಯಿಸಿಕೊಂಡಿದ್ದಾರೆ. ಈ ಉಪಕ್ರಮವು ಸಮುದಾಯ ಸ್ವಯಂಸೇವಕರ ಜಾಲ ರೂಪಿಸುತ್ತಿದ್ದು, ಅವರು ಜಾಗೃತಿ ಮೂಡಿಸಲು, ವ್ಯಕ್ತಿಗಳಿಗೆ ಸಹಾಯ ಪಡೆಯಲು ಪ್ರೇರೇಪಿಸಲು ಮತ್ತು ಮಾದಕವಸ್ತು ಮುಕ್ತ ಸಮುದಾಯಗಳನ್ನು ನಿರ್ಮಿಸಲು ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ನಿರಂತರ ಜಾಗೃತಿ ಅಭಿಯಾನಗಳು, ಚಿಕಿತ್ಸೆ ಮತ್ತು ಪುನರ್ವಸತಿ ಸೇವೆಗಳ ಬಲವರ್ಧನೆ ಹಾಗೂ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯ ಮೂಲಕ, 'ನಶಾ ಮುಕ್ತ ಭಾರತ ಅಭಿಯಾನ'ವು ಆರೋಗ್ಯಕರ, ಸುಶಿಕ್ಷಿತ ಮತ್ತು ಮಾದಕವಸ್ತು ಮುಕ್ತ ಸಮಾಜವನ್ನು ನಿರ್ಮಿಸುವ ದೂರದೃಷ್ಟಿ ಸಾಕಾರದತ್ತ ಮುನ್ನಡೆಯುತ್ತಿದೆ.
*****