ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 13-14 ರಂದು ಕರ್ನಾಟಕ ಮತ್ತು ಗುಜರಾತ್‌ಗೆ ಪ್ರಧಾನಮಂತ್ರಿ ಭೇಟಿ


ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರಿಂದ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ, ಶಂಕುಸ್ಥಾಪನೆ ಮತ್ತು ಚಾಲನೆ

ನಗರ ಸಂಚಾರ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ರೈಲ್ವೆ ಸೇರಿದಂತೆ ಪ್ರಮುಖ ವಲಯಗಳನ್ನು ಒಳಗೊಂಡಿರುವ ಯೋಜನೆಗಳು

ಕಾಳೇನ ಅಗ್ರಹಾರದಿಂದ ತವರೇಕೆರೆವರೆಗಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಮಂಗಳೂರಿನಲ್ಲಿ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಶೇಖರಣಾ ಕೇವರ್ನ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ

ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಮರುಅಭಿವೃದ್ಧಿಗೊಂಡ ನಾಲ್ಕು ರೈಲು ನಿಲ್ದಾಣಗಳಾದ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ

ಬೆಂಗಳೂರಿನ ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಭಾರತದ ಮೊದಲ ಎಲ್‌ಇಡಿ ಡೋಮ್ ಪ್ಲಾನಿಟೋರಿಯಂ ಆಗಿರುವ 'ಕಾಸ್ಮೋಸ್-ಮೈಸೂರು' ಪ್ಲಾನಿಟೋರಿಯಂ ಅನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಗುಜರಾತ್‌ನ ಬನಾಸಕಾಂಠಾದಲ್ಲಿರುವ ಅಂಬಾಜಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 11 NOV 2026 5:14PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಅವರು ನವೆಂಬರ್ 13-14 ರಂದು ಕರ್ನಾಟಕ ಮತ್ತು ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 10:45ಕ್ಕೆ, ಪ್ರಧಾನಮಂತ್ರಿಯವರು ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ ಸುಮಾರು 12:45 ಕ್ಕೆ, ಪ್ರಧಾನಮಂತ್ರಿಯವರು ತವರೇಕೆರೆಯಿಂದ ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣದವರೆಗಿನ ಮೆಟ್ರೋ ರೈಲಿಗೆ ಚಾಲನೆ ನೀಡಿ, ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ ಸುಮಾರು 1:15 ಕ್ಕೆ, ಪ್ರಧಾನಮಂತ್ರಿಯವರು ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲೂ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಅದರ ನಂತರ, ಸನ್ಮಾನ್ಯ ಪ್ರಧಾನಮಂತ್ರಿಯವರು ಮೈಸೂರಿಗೆ ಪ್ರಯಾಣಿಸಲಿದ್ದು, ಅಲ್ಲಿ ಮಧ್ಯಾಹ್ನ ಸುಮಾರು 3:30 ಕ್ಕೆ ಭಾರತ್ ವನ್‌ನಲ್ಲಿ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸುಮಾರು 4 ಗಂಟೆಗೆ, ಪ್ರಧಾನಮಂತ್ರಿಯವರು 'ಕಾಸ್ಮೋಸ್-ಮೈಸೂರು' ಪ್ಲಾನಿಟೋರಿಯಂ ಅನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನವೆಂಬರ್ 14 ರಂದು, ಸನ್ಮಾನ್ಯ ಪ್ರಧಾನಮಂತ್ರಿಯವರು ಗುಜರಾತ್‌ನ ಬನಾಸಕಾಂಠಾದಲ್ಲಿರುವ ಅಂಬಾಜಿ ದೇವಾಲಯದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಅಂಬಾಜಿ ದೇವಾಲಯವು 51 ಪೂಜ್ಯ ಶಕ್ತಿಪೀಠಗಳಲ್ಲಿ ಒಂದಾಗಿದೆ.

ಬೆಂಗಳೂರಿನಲ್ಲಿ ಪ್ರಧಾನಮಂತ್ರಿ

ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (S-VYASA) ವಸತಿ ಪ್ರಧಾನ ಕಚೇರಿಯ ಆವರಣವಾದ ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ, ಅವರು ಸ್ವರ್ಣ ಜಯಂತಿ ಆಡಳಿತ ಮಂಡಳಿಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಕೇರಳಂನ  ತಿರುವನಂತಪುರಂನಲ್ಲಿ ಎಸ್-ವ್ಯಾಸ (S-VYASA) ಆಫ್-ಕ್ಯಾಂಪಸ್‌ಗೆ ಚಾಲನೆ ನೀಡಲಿದ್ದಾರೆ.

'ವಿಕಸಿತ ಭಾರತ 2047 ರತ್ತ' ಎಂಬ ವಿಷಯದ ಅಡಿಯಲ್ಲಿ 2026 ರ ನವೆಂಬರ್ 13 ರಿಂದ 23 ರವರೆಗೆ ನಡೆಯಲಿರುವ ಸ್ವರ್ಣ ಜಯಂತಿ ಆಚರಣೆಯು, ಸಂಸ್ಥೆಯ ನಿರ್ಮಾಣ ಮತ್ತು ಸೇವೆಯ ಐದು ದಶಕಗಳನ್ನು ಗುರುತಿಸುತ್ತದೆ. 1975 ರಲ್ಲಿ ಸ್ಥಾಪಿತವಾದ ಪ್ರಶಾಂತಿ ಕುಟೀರವನ್ನು ಆಧುನಿಕ ವಿಜ್ಞಾನವನ್ನು ಭಾರತದ ಆಧ್ಯಾತ್ಮಿಕ ಜ್ಞಾನದೊಂದಿಗೆ ಸಂಯೋಜಿಸುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದು ಎಸ್-ವ್ಯಾಸ ಸಂಸ್ಥೆಯ ನೆಲೆಯಾಗಿದ್ದು, ಇದನ್ನು 2002 ರಲ್ಲಿ ನಿಗಮಿತ ವಿಶ್ವವಿದ್ಯಾಲಯ (Deemed-to-be University) ಎಂದು ಘೋಷಿಸಲಾಯಿತು ಮತ್ತು ಇದು ಯೋಗ ಶಿಕ್ಷಣ ಹಾಗೂ ಸಂಶೋಧನೆಗೆ ಮೀಸಲಾಗಿದೆ.

1926ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವಿಶಿಷ್ಟ ಚಿಂತಕ, ಬರಹಗಾರ ಮತ್ತು ಸಂಘಟಕರಾಗಿದ್ದ ಶ್ರೀ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ ಅವರ ಜನ್ಮ ಶತಮಾನೋತ್ಸವವನ್ನೂ ಈ ಕಾರ್ಯಕ್ರಮವು ನೆನಪಿಸುತ್ತದೆ. ಅವರು 1946ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಗೊಂಡರು ಮತ್ತು 1987 ರಿಂದ 2000 ರವರೆಗೆ ಅದರ ಸರ್ಕಾರ್ಯವಾಹರಾಗಿ ಸೇವೆ ಸಲ್ಲಿಸಿದರು. ಅವರು ಎಸ್-ವ್ಯಾಸ ಸಂಸ್ಥೆಯ ಹಿಂದಿನ ದೃಷ್ಟಾರರಲ್ಲಿ ಒಬ್ಬರಾಗಿದ್ದರು ಮತ್ತು ಅವರ ಪ್ರೇರಣೆ ಹಾಗೂ ಮಾರ್ಗದರ್ಶನವು ಪ್ರಶಾಂತಿ ಕುಟೀರದ ಬೆಳವಣಿಗೆಯನ್ನು ರೂಪಿಸುವಲ್ಲಿ ಮತ್ತು ದಶಕಗಳಿಂದ ಸಂಸ್ಥೆಯ ಧ್ಯೇಯವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಬೆಂಗಳೂರಿನಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಯವರು ₹15,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ, ಶಂಕುಸ್ಥಾಪನೆ ಮತ್ತು ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ನಗರ ಚಲನಶೀಲತೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ ಮೂಲಸೌಕರ್ಯ, ತ್ಯಾಜ್ಯ ನಿರ್ವಹಣೆ ಮತ್ತು ರೈಲ್ವೆ ಸೇರಿದಂತೆ ಪ್ರಮುಖ ವಲಯಗಳನ್ನು ಒಳಗೊಂಡಿವೆ.

ಸುಮಾರು ₹3,470 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಕಾಳೇನ ಅಗ್ರಹಾರದಿಂದ ತವರೇಕೆರೆವರೆಗಿನ ನಮ್ಮ ಮೆಟ್ರೋದ ಪಿಂಕ್ ಲೈನ್ ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ಹೊಸ ಮಾರ್ಗವು ನಗರ ಸಂಪರ್ಕವನ್ನು ಹೆಚ್ಚಿಸಲಿದೆ, ದೈನಂದಿನ ಪ್ರಯಾಣವನ್ನು ಸುಗಮಗೊಳಿಸಲಿದೆ, ಪ್ರಯಾಣದ ಸಮಯವನ್ನು ತಗ್ಗಿಸಲಿದೆ ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯಗಳನ್ನು ಬಲಪಡಿಸಲಿದೆ.

ಸುಮಾರು ₹4,450 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಕೊಪ್ಪಳ-II ಮತ್ತು ಗದಗ-II ರಲ್ಲಿ ನವೀಕರಿಸಬಹುದಾದ ಇಂಧನ ವಲಯಗಳ ಸಂಯೋಜನೆಗಾಗಿ ಪ್ರಸರಣ ಯೋಜನೆ (ಹಂತ-II) ಯನ್ನು ಸನ್ಮಾನ್ಯ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಈ ಪ್ರಸರಣ ವ್ಯವಸ್ಥೆಯು ಕರ್ನಾಟಕದ ಕೊಪ್ಪಳ ಮತ್ತು ಗದಗ ಪ್ರದೇಶಗಳಿಂದ ಸುಮಾರು 2 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಗ್ರಿಡ್‌ನಾದ್ಯಂತ ಫಲಾನುಭವಿಗಳಿಗೆ ರವಾನಿಸಲು ಮತ್ತು ವಿತರಿಸಲು ಸುಗಮಗೊಳಿಸುತ್ತದೆ. ಸುಮಾರು ₹1,370 ಕೋಟಿ ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಬೀದರ್‌ನ ಸೌರ ವಿದ್ಯುತ್ ವಲಯದ ಪ್ರಸರಣ ಯೋಜನೆಯನ್ನೂ ಅವರು ಉದ್ಘಾಟಿಸಲಿದ್ದಾರೆ. ಈ ಯೋಜನೆಯು ಬೀದರ್ ಪೂಲಿಂಗ್ ಸ್ಟೇಷನ್ ಸ್ಥಾಪನೆಯನ್ನು ಒಳಗೊಂಡಿದ್ದು, ಈ ಪ್ರದೇಶದಿಂದ 2.5 GW ಸೌರ ವಿದ್ಯುತ್ ರವಾನೆಯನ್ನು ಸುಗಮಗೊಳಿಸುತ್ತದೆ.

₹3,450 ಕೋಟಿಗೂ ಹೆಚ್ಚಿನ ಹೂಡಿಕೆಯಲ್ಲಿ ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಸಂಯೋಜನೆಗಾಗಿ ಪ್ರಸರಣ ಯೋಜನೆಗೆ ಸನ್ಮಾನ್ಯ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸಂಯೋಜನೆಗಾಗಿ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ₹1,100 ಕೋಟಿಗೂ ಹೆಚ್ಚಿನ ಹೂಡಿಕೆಯಲ್ಲಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಮಂಗಳೂರಿನಲ್ಲಿ ₹850 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಶೇಖರಣಾ ಕೇವರ್ನ್ ಅನ್ನು ಸನ್ಮಾನ್ಯ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 80,000 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯದೊಂದಿಗೆ, ಈ ಸೌಲಭ್ಯವು ಭಾರತದ ಎಲ್‌ಪಿಜಿ ಶೇಖರಣಾ ಮೂಲಸೌಕರ್ಯವನ್ನು ಗಮನಾರ್ಹವಾಗಿ ಬಲಪಡಿಸಲಿದೆ. ಈ ಯೋಜನೆಯು ನವ ಮಂಗಳೂರು ಬಂದರನ್ನು ಮುಖ್ಯ ಟರ್ಮಿನಲ್‌ಗೆ ಬೆಸೆಯುವ 9.4 ಕಿಮೀ ಎಲ್‌ಪಿಜಿ ಪೈಪ್‌ಲೈನ್ ಅನ್ನು ಸಹ ಒಳಗೊಂಡಿದ್ದು, ಎಲ್‌ಪಿಜಿಯ ಸಮರ್ಥ ಸಾಗಣೆ ಮತ್ತು ಶೇಖರಣೆಯನ್ನು ಸುಗಮಗೊಳಿಸುತ್ತದೆ. ಮ್ಯಾಂಗಲೋರ್ ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನ (MRPL) ಬೆಂಗಳೂರಿನ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್ ಅನ್ನು ಸಹ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ₹330 ಕೋಟಿ ಹೂಡಿಕೆಯಲ್ಲಿ ನಿರ್ಮಿಸಲಾದ ಈ ಅತ್ಯಾಧುನಿಕ ಸೌಲಭ್ಯವು ಕರ್ನಾಟಕದಲ್ಲಿ ಪೆಟ್ರೋಲಿಯಂ ಉತ್ಪನ್ನ ಶೇಖರಣೆ ಮತ್ತು ವಿತರಣಾ ಮೂಲಸೌಕರ್ಯವನ್ನು ಬಲಪಡಿಸಲಿದೆ.

ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್ (GAIL) ಸಂಸ್ಥೆಯ ಸಂಕೋಚಿತ ಜೈವಿಕ ಅನಿಲ ಸ್ಥಾವರಕ್ಕೆ ಸನ್ಮಾನ್ಯ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸ್ಥಾವರವು ದಿನಕ್ಕೆ ಸುಮಾರು 300 ಟನ್ ಪುರಸಭೆಯ ಘನತ್ಯಾಜ್ಯವನ್ನು ಸಂಸ್ಕರಿಸಿ 12.6 ಟನ್ ಶುದ್ಧ ಸಂಕೋಚಿತ ಜೈವಿಕ ಅನಿಲವನ್ನು (CBG) ಉತ್ಪಾದಿಸಲಿದೆ. ಈ ಯೋಜನೆಯು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲಿದೆ, ಸಾಂಪ್ರದಾಯಿಕ ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲಿದೆ ಮತ್ತು ಸ್ವಚ್ಛ ಹಾಗೂ ಹೆಚ್ಚು ಸುಸ್ಥಿರ ಪರಿಸರಕ್ಕೆ ಕೊಡುಗೆ ನೀಡಲಿದೆ.

ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಮರುಅಭಿವೃದ್ಧಿಗೊಂಡ ನಾಲ್ಕು ರೈಲು ನಿಲ್ದಾಣಗಳಾದ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್‌ಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಮರುಅಭಿವೃದ್ಧಿಗೊಂಡ ನಿಲ್ದಾಣಗಳು ಸುಧಾರಿತ ಪ್ರಯಾಣಿಕ ಸೌಲಭ್ಯಗಳನ್ನು ಒದಗಿಸಲಿವೆ ಮತ್ತು ನಗರ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿದ್ದು, ಪ್ರಾದೇಶಿಕವಾಗಿ ಸ್ಥಳೀಯ ವಾಣಿಜ್ಯ ಚಟುವಟಿಕೆಗಳು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿವೆ.

284 ಕಿ.ಮೀ. ಗದಗ-ಹೋಟಗಿ ದ್ವಿಗುಣಗೊಳಿಸುವ ಯೋಜನೆಯ ಭಾಗವಾಗಿರುವ 45 ಕಿಮೀ ಬಾಗಲಕೋಟೆ-ವಂಡಾಲ್ ರೈಲು ಮಾರ್ಗ ದ್ವಿಗುಣಗೊಳಿಸುವ ವಿಭಾಗವನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ವಿಭಾಗವು ಪ್ರಯಾಣಿಕರ ಮತ್ತು ಸರಕುಗಳ ಸಂಚಾರವನ್ನು ಸುಧಾರಿಸಲಿದೆ, ಸ್ಥಳೀಯ ವ್ಯಾಪಾರಕ್ಕೆ ಬೆಂಬಲ ನೀಡಲಿದೆ ಮತ್ತು ಕುಡಗಿ ಎನ್‌ಟಿಪಿಸಿ (NTPC) ಸ್ಥಾವರಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಸುಗಮಗೊಳಿಸಲಿದೆ.

55 ಕಿ.ಮೀ. ಉದ್ದದ ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ವಿಭಾಗದ ವಿದ್ಯುದ್ದೀಕರಣವನ್ನು ಸಹ ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭಾರತದ ಅತ್ಯಂತ ಸವಾಲಿನ ರೈಲ್ವೆ ಭೂಪ್ರದೇಶಗಳಲ್ಲಿ ಒಂದಾದ ಈ ಭಾಗದಲ್ಲಿ ಹಾದುಹೋಗುವ ಈ ಯೋಜನೆಯು ಒಂದು ಪ್ರಮುಖ ಎಂಜಿನಿಯರಿಂಗ್ ಸಾಧನೆಯನ್ನು ಗುರುತಿಸುತ್ತದೆ. ಇದರ ಪೂರ್ಣಗೊಳಿಸುವಿಕೆಯೊಂದಿಗೆ, ಇಡೀ ಬೆಂಗಳೂರು-ಮಂಗಳೂರು ರೈಲು ಮಾರ್ಗವು ಈಗ ಸಂಪೂರ್ಣವಾಗಿ ವಿದ್ಯುದ್ದೀಕರಣಗೊಂಡಿದೆ.

ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ವೇಗದ ಹಾಗೂ ಆಧುನಿಕ ರೈಲು ಸಂಪರ್ಕವನ್ನು ಒದಗಿಸುವ ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ. ಈ ಸೇವೆಯು ಮಡಗಾಂವ್ ತಲುಪುವ ಮೊದಲು ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರುಡೇಶ್ವರ, ಗೋಕರ್ಣ ಮತ್ತು ಕಾರವಾರ ಸೇರಿದಂತೆ ಪ್ರಮುಖ ತಾಣಗಳನ್ನು ಬೆಸೆಯಲಿದ್ದು, ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡಲಿದೆ ಮತ್ತು ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.

ಮೈಸೂರಿನಲ್ಲಿ ಪ್ರಧಾನಮಂತ್ರಿ

'ಏಕ್ ಪೇಡ್ ಮಾ ಕೆ ನಾಮ್' ಉಪಕ್ರಮದ ಭಾಗವಾಗಿ ಭಾರತ್ ವನ್‌ನಲ್ಲಿ ನಡೆಯುವ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ. ಭಾರತ್ ವನ್ ಎಂಬುದು ಜಪಾನಿನ ಮಿಯಾವಾಕಿ ತಂತ್ರಜ್ಞಾನವನ್ನು ಬಳಸಿ ದಟ್ಟವಾದ, ಸ್ವಯಂ-ಸುಸ್ಥಿರ ದೇಶೀಯ ಕಾಡುಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ ನಗರ ಅರಣ್ಯೀಕರಣ ಉಪಕ್ರಮವಾಗಿದೆ. 17.63 ಎಕರೆಗಳಲ್ಲಿ ಹರಡಿರುವ ಮೈಸೂರು ಯೋಜನೆಯು 2 ಲಕ್ಷಕ್ಕೂ ಹೆಚ್ಚು ದೇಶೀಯ ಮರಗಳೊಂದಿಗೆ ಹಸಿರು ಸಮುದಾಯ ಆಸ್ತಿಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ದೇಶೀಯ ಪೊದೆಗಳು, ಮರಮಟ್ಟುಗಳು, ಹಸಿರು ಹೊದಿಕೆ, ಹೂಬಿಡುವ ಮತ್ತು ಹಣ್ಣು ಬಿಡುವ ಮರಗಳ ಬೆಳವಣಿಗೆಯನ್ನು ಬೆಂಬಲಿಸಲು ಸಗಣಿ, ಕಾಂಪೋಸ್ಟ್ ಮತ್ತು ಜೀವಾಮೃತದಂತಹ ನೈಸರ್ಗಿಕ ಮಣ್ಣು-ಸಮೃದ್ಧಗೊಳಿಸುವ ವಸ್ತುಗಳನ್ನು ಬಳಸುತ್ತದೆ. ಈ ಬಹುಸ್ತರದ ಕಾಡುಗಳು ಜೀವವೈವಿಧ್ಯತೆಯನ್ನು ಹೆಚ್ಚಿಸಲು, ಅಂತರ್ಜಲ ಮರುಪೂರಣವನ್ನು ಸುಧಾರಿಸಲು, ಧೂಳು ಮತ್ತು ವಾಯು ಮಾಲಿನ್ಯವನ್ನು ತಗ್ಗಿಸಲು, ಸ್ಥಳೀಯ ತಾಪಮಾನವನ್ನು ಸರಳೀಕರಿಸಲು, ಮಣ್ಣಿನ ಸವೆತವನ್ನು ತಡೆಯಲು ಮತ್ತು ಇಂಗಾಲದ ಶೇಖರಣೆಗೆ ಬೆಂಬಲ ನೀಡಲು ಸಹಾಯ ಮಾಡುತ್ತವೆ.

ದೇಶದಲ್ಲಿ, ಪ್ಲಾನಿಟೋರಿಯಂ ತಂತ್ರಜ್ಞಾನ ಮತ್ತು ಖಗೋಳಶಾಸ್ತ್ರ ಶಿಕ್ಷಣದಲ್ಲಿ ಪ್ರಮುಖ ಪ್ರಗತಿಯನ್ನು ಗುರುತಿಸುವ 'ಕಾಸ್ಮೋಸ್-ಮೈಸೂರು' ಪ್ಲಾನಿಟೋರಿಯಂ ಅನ್ನು ಸನ್ಮಾನ್ಯ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಭಾರತೀಯ ಅಸ್ಟ್ರೋಫಿಜಿಕ್ಸ್ ಸಂಸ್ಥೆ (IIA) ನಿರ್ಮಿಸಿರುವ ಕಾಸ್ಮೋಸ್-ಮೈಸೂರು ಭಾರತದ ಮೊದಲ ಎಲ್‌ಇಡಿ ಡೋಮ್ ಪ್ಲಾನಿಟೋರಿಯಂ ಆಗಿದೆ. ಖಗೋಳಶಾಸ್ತ್ರ ಶಿಕ್ಷಣ ಮತ್ತು ತರಬೇತಿ ಕೇಂದ್ರವಾಗಿ ಪರಿಭಾವಿಸಲಾದ ಇದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿದೆ.

ಈ ಅತ್ಯಾಧುನಿಕ ಸೌಲಭ್ಯವು 4.2 ಕೋಟಿ ಪ್ರತ್ಯೇಕ ಎಲ್‌ಇಡಿಗಳನ್ನು ಹೊಂದಿರುವ ಸುಮಾರು 6,150 ಪ್ಯಾನಲ್‌ಗಳನ್ನು ಒಳಗೊಂಡ 15-ಮೀಟರ್ ಓರೆಯಾದ ಡೋಮ್ ಅನ್ನು ಹೊಂದಿದೆ. ನಿಷ್ಕ್ರಿಯ ಡೋಮ್‌ನಲ್ಲಿ ಚಿತ್ರಗಳನ್ನು ಪ್ರದರ್ಶಿಸಲು ಪ್ರೊಜೆಕ್ಟರ್‌ಗಳನ್ನು ಬಳಸುವ ಸಾಂಪ್ರದಾಯಿಕ ಪ್ಲಾನಿಟೋರಿಯಂಗಳಿಗಿಂತ ಭಿನ್ನವಾಗಿ, ಇದರ ಎಲ್‌ಇಡಿ ಪ್ಯಾನಲ್‌ಗಳನ್ನು ನೈಜ ಸಮಯದಲ್ಲಿ ನಿಯಂತ್ರಿಸಬಹುದು, ಇದು ತಲ್ಲೀನಗೊಳಿಸುವ ದೃಶ್ಯ ಅನುಭವ ಮತ್ತು ಖಗೋಳಶಾಸ್ತ್ರ ಶಿಕ್ಷಣಕ್ಕೆ ಹೊಸ ಸಾಧ್ಯತೆಗಳನ್ನು ಒದಗಿಸುತ್ತದೆ.

ಸ್ಕೈ ಥಿಯೇಟರ್ ವೃತ್ತಿಪರವಾಗಿ ನಿರ್ಮಿಸಲಾದ ಖಗೋಳಶಾಸ್ತ್ರ ಕಾರ್ಯಕ್ರಮಗಳನ್ನು ಹಾಗೂ ಮೈಸೂರಿನ ಇತಿಹಾಸ ಮತ್ತು ಖಗೋಳಶಾಸ್ತ್ರದ ನಡುವಿನ ಸಂಪರ್ಕವನ್ನು ಅನ್ವೇಷಿಸುವ ಇನ್-ಹೌಸ್ ಚಲನಚಿತ್ರವನ್ನು ಪ್ರದರ್ಶಿಸಲಿದೆ. ಪ್ರದರ್ಶನಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿರಲಿವೆ. ಈ ಕೇಂದ್ರವು ಪ್ರದರ್ಶನ ಸಭಾಂಗಣಗಳು, ಖಗೋಳಶಾಸ್ತ್ರದ ಮಾದರಿಗಳು ಮತ್ತು ಕಲಾಕೃತಿಗಳನ್ನು ಒಳಗೊಂಡ ಮ್ಯೂಸಿಯಂ, ಉಪನ್ಯಾಸ ಸಭಾಂಗಣ, ತರಬೇತಿ ಕೇಂದ್ರ ಮತ್ತು ಸಂವಾದಾತ್ಮಕ ಹೊರಾಂಗಣ ಪ್ರದರ್ಶನಗಳನ್ನು ಸಹ ಹೊಂದಿರಲಿದೆ.

ಈ ಕೇಂದ್ರದ ಚಟುವಟಿಕೆಗಳು ಭಾರತೀಯ ಅಸ್ಟ್ರೋಫಿಜಿಕ್ಸ್ ಸಂಸ್ಥೆಯ ಸಂಶೋಧನೆ, ಭಾರತದಾದ್ಯಂತ ಮತ್ತು ಬಾಹ್ಯಾಕಾಶದಲ್ಲಿ ಬಹು-ತರಂಗಾಂತರ ದೂರದರ್ಶಕ ಸೌಲಭ್ಯಗಳ ಕಾರ್ಯಾಚರಣೆ, ಭವಿಷ್ಯದ ಖಗೋಳಶಾಸ್ತ್ರದ ಸೌಲಭ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಮಟ್ಟದ ಜಾಗೃತಿ ಕಾರ್ಯಕ್ರಮಗಳಿಗೆ ಪೂರಕವಾಗಿರಲಿವೆ.

 

*****


(ಪ್ರಕಟಣೆ ಐ.ಡಿ.: 2335125) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati