ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

2026-27ನೇ ಸಾಲಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒಎಂಎಸ್ಎಸ್ (ಡಿ)] ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು 25 ಎಲ್‌ಎಂಟಿಯಿಂದ 50 ಎಲ್‌ಎಂಟಿಗೆ ದ್ವಿಗುಣಗೊಳಿಸಿದ ಸರ್ಕಾರ; 31 ಅಕ್ಟೋಬರ್ 2026ರವರೆಗೆ ಇ-ಹರಾಜಿನ ಮೂಲಕ ಈಗಾಗಲೇ 25 ಎಲ್‌ಎಂಟಿ ಅಕ್ಕಿ ಮಾರಾಟ


ದೇಶಾದ್ಯಂತ ಅಕ್ಕಿ ಮತ್ತು ಭತ್ತ ದಾಸ್ತಾನು ಹೊಂದಿರುವ ಎಲ್ಲ ಘಟಕಗಳು ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು; ಪ್ರತಿ ಶುಕ್ರವಾರ ದಾಸ್ತಾನು ಸ್ಥಿತಿಯನ್ನು ನವೀಕರಿಸಬೇಕು

ದಕ್ಷಿಣ ರಾಜ್ಯಗಳಲ್ಲಿ, ವಿಶೇಷವಾಗಿ ಅಕ್ಕಿಯ ಲಭ್ಯತೆಯನ್ನು ಹೆಚ್ಚಿಸಲು ನಾಫೆಡ್, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್‌ಗೆ ಹೆಚ್ಚುವರಿ ಪ್ರಮಾಣದ ಭಾರತ್ ರೈಸ್ ಹಂಚಿಕೆ

ಅಗತ್ಯವಿದ್ದಲ್ಲಿ, 31 ಜನವರಿ 2027ರವರೆಗೆ ಅಕ್ಕಿ ಮತ್ತು ಭತ್ತದ ದಾಸ್ತಾನಿನ ಮೇಲೆ ಮಿತಿ ವಿಧಿಸಲು ಐದು ದಕ್ಷಿಣದ ರಾಜ್ಯಗಳಿಗೆ ಸಮ್ಮತಿ ಸೂಚಿಸಿದ ಕೇಂದ್ರ ಸರ್ಕಾರ

ಪ್ರಕಟಣಾ ದಿನಾಂಕ: 06 NOV 2026 4:41PM by PIB Bengaluru

ಭಾರತ ಸರ್ಕಾರವು ಆಹಾರ ಧಾನ್ಯಗಳ, ವಿಶೇಷವಾಗಿ ಅಕ್ಕಿ ಬೆಲೆಯ ಮೇಲೆ ನಿಕಟ ನಿಗಾ ಇರಿಸಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳುವುದು, ಬೆಲೆ ಸ್ಥಿರತೆಯನ್ನು ಕಾಪಾಡುವುದು, ಅಕ್ರಮ ದಾಸ್ತಾನು ತಡೆಯುವುದು ಹಾಗೂ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರ ಹಲವು ನೀತಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳು ಹೀಗಿವೆ:

ದೇಶಾದ್ಯಂತ ಅಕ್ಕಿ ಮತ್ತು ಭತ್ತದ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸುವುದು

ಭಾರತ ಸರ್ಕಾರವು 06.11.2026ರಂದು ಆದೇಶವೊಂದನ್ನು ಹೊರಡಿಸಿದ್ದು, ಅದರಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಎಲ್ಲ ವರ್ತಕರು/ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಸರಣಿ ಚಿಲ್ಲರೆ ವ್ಯಾಪಾರಿಗಳು ಹಾಗೂ ಸಂಸ್ಕರಣಾ ಘಟಕಗಳು/ಅಕ್ಕಿ ಗಿರಣಿದಾರರು ಈ ಕೆಳಗಿನ ಆರು ವಿಭಾಗಗಳ ಅಡಿಯಲ್ಲಿ ತಮ್ಮ ಅಕ್ಕಿ ಮತ್ತು ಭತ್ತದ ದಾಸ್ತಾನು ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ:

(i) ಬಾಸ್ಮತಿ ಅಕ್ಕಿ;

(ii) ಬಾಸ್ಮತಿಯೇತರ ಪ್ರೀಮಿಯಂ ಅಕ್ಕಿ;

(iii) ಬಾಸ್ಮತಿಯೇತರ ಅಕ್ಕಿ;

(iv) ಕುಚಲಕ್ಕಿ (ಪಾರ್‌ಬಾಯ್ಲ್ಡ್ ರೈಸ್);

(v) ನುಚ್ಚಕ್ಕಿ; ಮತ್ತು

(vi) ಭತ್ತ.

ಅಕ್ಕಿ ಮತ್ತು ಭತ್ತದ ದಾಸ್ತಾನು ಹೊಂದಿರುವ ಎಲ್ಲ ಘಟಕಗಳು ಪ್ರತಿ ಶುಕ್ರವಾರ ಆಹಾರ ದಾಸ್ತಾನು ಪೋರ್ಟಲ್‌ನಲ್ಲಿ (https://foodstock.dfpd.gov.in) ತಮ್ಮ ದಾಸ್ತಾನು ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಲ್ಲದೆ, ಸಲ್ಲಿಸುವ ಮಾಹಿತಿಯು ನಿಖರವಾಗಿರುವುದನ್ನು ಮತ್ತು ಅದನ್ನು ನಿಯಮಿತವಾಗಿ ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳದಿರುವ ಅಥವಾ ನಿಗದಿಪಡಿಸಿದ ದಾಸ್ತಾನು ಮಿತಿಗಳನ್ನು ಉಲ್ಲಂಘಿಸುವ ಯಾವುದೇ ಘಟಕದ ವಿರುದ್ಧ ಅಗತ್ಯ ವಸ್ತುಗಳ ಕಾಯಿದೆ, 1955ರ ಸೆಕ್ಷನ್‌ 6 ಮತ್ತು 7ರ ಅಡಿಯಲ್ಲಿ ಸೂಕ್ತ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುವುದು.

ದಾಸ್ತಾನು ಮಿತಿ ವಿಧಿಸಲು ದಕ್ಷಿಣ ರಾಜ್ಯಗಳಿಗೆ ಸಮ್ಮತಿ

ಗ್ರಾಹಕರಿಗೆ, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ, ಕೈಗೆಟುಕುವ ಬೆಲೆಯಲ್ಲಿ ಅಕ್ಕಿ ಲಭ್ಯವಾಗುವಂತೆ ನೋಡಿಕೊಳ್ಳುವ ಉದ್ದೇಶದಿಂದ ಭಾರತ ಸರ್ಕಾರವು 06.11.2026ರ ಪತ್ರದ ಮೂಲಕ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳಿಗೆ ಅಗತ್ಯವೆಂದು ಕಂಡುಬಂದಲ್ಲಿ ಸೂಕ್ತ ನಿಯಂತ್ರಣ ಆದೇಶಗಳನ್ನು ಹೊರಡಿಸುವ ಮೂಲಕ ಭತ್ತ ಮತ್ತು ಅಕ್ಕಿಯ ದಾಸ್ತಾನಿನ ಮೇಲೆ ಮಿತಿ ವಿಧಿಸಲು ತನ್ನ ಸಮ್ಮತಿಯನ್ನು ಸೂಚಿಸಿದೆ.

ಈ ದಾಸ್ತಾನು ಮಿತಿಗಳು 31 ಜನವರಿ 2027ರವರೆಗೆ ಜಾರಿಯಲ್ಲಿರಲಿವೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಅಕ್ಕಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಅಕ್ರಮ ದಾಸ್ತಾನು ಮತ್ತು ಕಾಳಸಂತೆಯನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಕ್ರಮಗಳ ಅನುಷ್ಠಾನದ ಮೇಲೆ ನಿಕಟ ನಿಗಾ ಇರಿಸಲಿವೆ.

ಮಾರುಕಟ್ಟೆಯಲ್ಲಿ ಲಭ್ಯತೆ ಹೆಚ್ಚಿಸಲು ಭಾರತ್ ರೈಸ್‌ನ ಹೆಚ್ಚುವರಿ ಹಂಚಿಕೆ

ಭಾರತ ಸರ್ಕಾರವು ದೇಶಾದ್ಯಂತ, ವಿಶೇಷವಾಗಿ ದಕ್ಷಿಣದ ರಾಜ್ಯಗಳಲ್ಲಿ, ‘ಭಾರತ್ ರೈಸ್’ ಮಾರಾಟ ಮತ್ತು ಲಭ್ಯತೆಯನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ ನಾಫೆಡ್, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಂಡಾರ್ ಎಂಬ ಮೂರು ಸಂಸ್ಥೆಗಳಿಗೆ ಹೆಚ್ಚುವರಿ ಪ್ರಮಾಣದ ‘ಭಾರತ್ ರೈಸ್’ ಹಂಚಿಕೆ ಮಾಡುತ್ತಿದೆ. ಗ್ರಾಹಕರಿಗೆ ‘ಭಾರತ್ ರೈಸ್’ ಹೆಚ್ಚಿನ ಪ್ರಮಾಣದಲ್ಲಿ ತಲುಪುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸಾಧ್ಯವಿರುವ ಎಲ್ಲ ವಿತರಣಾ ಮಾರ್ಗಗಳನ್ನು ಬಳಸಿಕೊಳ್ಳುವಂತೆಯೂ ಈ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಈ ಉಪಕ್ರಮದಿಂದ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆ ಹೆಚ್ಚಾಗುವ ನಿರೀಕ್ಷೆಯಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಅಕ್ಕಿ ಲಭ್ಯವಾಗುವುದರ ಜೊತೆಗೆ ಚಿಲ್ಲರೆ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಲಿದೆ.

2026-27ನೇ ಸಾಲಿಗೆ ಒಎಂಎಸ್ಎಸ್ (ಡಿ) ಅಡಿಯಲ್ಲಿ ಅಕ್ಕಿ ಮಾರಾಟದ ಗುರಿ ದ್ವಿಗುಣ

ಭಾರತ ಸರ್ಕಾರವು 2026-27ನೇ ಸಾಲಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ದೇಶೀಯ) [ಒಎಂಎಸ್ಎಸ್ (ಡಿ)] ಅಡಿಯಲ್ಲಿ ಇ-ಹರಾಜಿನ ಮೂಲಕ ಮಾರಾಟ ಮಾಡುವ ಅಕ್ಕಿಯ ಗುರಿ ಪ್ರಮಾಣವನ್ನು 25 ಲಕ್ಷ ಮೆಟ್ರಿಕ್ ಟನ್‌ಗಳಿಂದ 50 ಲಕ್ಷ ಮೆಟ್ರಿಕ್ ಟನ್‌ಗಳಿಗೆ ದ್ವಿಗುಣಗೊಳಿಸಿದೆ.

2026-27ನೇ ಹಣಕಾಸು ವರ್ಷದಲ್ಲಿ (31.10.2026ರವರೆಗೆ) ಒಎಂಎಸ್ಎಸ್ (ಡಿ) ಇ-ಹರಾಜಿನ ಮೂಲಕ ಖಾಸಗಿ ಖರೀದಿದಾರರಿಗೆ ಒಟ್ಟು 25 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮಾರಾಟ ಮಾಡಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 11 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಮಾರಾಟ ಮಾಡಲಾಗಿತ್ತು. ಈ ಕ್ರಮದ ಮೂಲಕ ಮಾರುಕಟ್ಟೆಯಲ್ಲಿ ಅಕ್ಕಿಯ ಪೂರೈಕೆಯಲ್ಲಿ ಗಣನೀಯ ಹೆಚ್ಚಳವಾಗಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಅಗತ್ಯ ಆಹಾರ ಸರಕುಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸುವುದು, ಬೆಲೆ ಸ್ಥಿರತೆಯನ್ನು ಕಾಪಾಡುವುದು ಮತ್ತು ದೇಶಾದ್ಯಂತ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಈ ಕ್ರಮಗಳು ಮತ್ತೊಮ್ಮೆ ದೃಢಪಡಿಸಿವೆ.

 

*****

 


(ಪ್ರಕಟಣೆ ಐ.ಡಿ.: 2333680) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati