ಲೋಕಸಭಾ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ಹಾಗೂ ವಿಕಸಿತ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಲು ಯುವಜನತೆಗೆ ಲೋಕಸಭೆ ಸ್ಪೀಕರ್ ಕರೆ


ಸರ್ದಾರ್ ವಲ್ಲಭಭಾಯಿ ಪಟೇಲರ ದೃಷ್ಟಿಕೋನ, ದೃಢ ಸಂಕಲ್ಪ ಮತ್ತು ಸಾಂಸ್ಥಿಕ ಕೌಶಲ್ಯಗಳು, ರಾಷ್ಟ್ರ ನಿರ್ಮಾಣಕ್ಕೆ ಸಾರ್ವಕಾಲಿಕ ಪ್ರೇರಣೆಯಾಗಿ ಉಳಿದಿವೆ: ಲೋಕಸಭೆ ಸ್ಪೀಕರ್

ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಲೋಕಸಭೆ ಸ್ಪೀಕರ್

ಸೆಂಟ್ರಲ್ ಹಾಲ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಚಿವರು, ಸಂಸದರು ಮತ್ತು ಇತರ ಗಣ್ಯರು

ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿವಿಧ ಕಾಲೇಜು ಮತ್ತು ಶಾಲೆಗಳ ಮಕ್ಕಳು

ಪ್ರಕಟಣಾ ದಿನಾಂಕ: 31 OCT 2026 8:48PM by PIB Bengaluru

ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಸಂದರ್ಭದಲ್ಲಿ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್; ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜೆ. ಪಿ. ನಡ್ಡಾ; ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು; ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ; ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್; ಶ್ರೀ ನಿತಿನ್ ನವೀನ್ ಮತ್ತು ಶ್ರೀಮತಿ ಸೋನಿಯಾ ಗಾಂಧಿ ಸೇರಿದಂತೆ ಸಂಸದರು; ಮಾಜಿ ಸಂಸದರು ಮತ್ತು ಇತರ ಗಣ್ಯರು ಈ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಮತ್ತು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪಿ. ಸಿ. ಮೋದಿ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸರ್ದಾರ್ ಪಟೇಲರಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲಿ ಗಣ್ಯರೊಂದಿಗೆ ಸೇರಿಕೊಂಡರು.

ಈ ಸಂದರ್ಭದಲ್ಲಿ ವಿವಿಧ ಕಾಲೇಜುಗಳು ಮತ್ತು ಶಾಲೆಗಳ ಯುವ ವಿದ್ಯಾರ್ಥಿಗಳು ಹಾಗೂ ಭಾಗವಹಿಸುವವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಬಿರ್ಲಾ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಮತ್ತು ಆದರ್ಶಗಳಿಂದ ಪ್ರೇರಣೆ ಪಡೆಯಲು ಹಾಗೂ ಭಾರತದ ರಾಷ್ಟ್ರೀಯ ಐಕ್ಯತೆ ಮತ್ತು ಸಮಗ್ರತೆಯನ್ನು ಬಲಪಡಿಸಲು ಮತ್ತು ವಿಕಸಿತ ರಾಷ್ಟ್ರವನ್ನು ನಿರ್ಮಿಸಲು ತಮ್ಮ ಸಾಮರ್ಥ್ಯ, ಆವಿಷ್ಕಾರ ಮತ್ತು ಸಾಮೂಹಿಕ ಶ್ರಮವನ್ನು ಸಮರ್ಪಿಸಲು ಯುವಜನತೆಗೆ ಕರೆ ನೀಡಿದರು.

ಆಧುನಿಕ ಭಾರತದ ರಾಷ್ಟ್ರೀಯ ಐಕ್ಯತೆಯ ಶಿಲ್ಪಿ, ಸರ್ದಾರ್ ಪಟೇಲ್ ಅವರ ಜೀವನವು ದೃಢ ಸಂಕಲ್ಪ, ಅಸಾಧಾರಣ ಸಾಂಸ್ಥಿಕ ಕೌಶಲ್ಯಗಳು, ದೂರದೃಷ್ಟಿ ಮತ್ತು ನಿರ್ಣಾಯಕ ನಾಯಕತ್ವಕ್ಕೆ ಉದಾಹರಣೆಯಾಗಿದೆ ಎಂದು ಶ್ರೀ ಬಿರ್ಲಾ ಹೇಳಿದರು. ರಾಷ್ಟ್ರೀಯ ಏಕೀಕರಣಕ್ಕೆ ಸರ್ದಾರ್ ಪಟೇಲರ ಗಮನಾರ್ಹ ಕೊಡುಗೆಯನ್ನು ಸ್ಮರಿಸಿದ ಅವರು, ಸ್ವಾತಂತ್ರ್ಯದ ನಂತರದ ಹಲವಾರು ಸವಾಲುಗಳು ಮತ್ತು ಬಾಧಕ ಪರಿಸ್ಥಿತಿಗಳ ಹೊರತಾಗಿಯೂ, ರಾಷ್ಟ್ರದ ಮೇಲಿನ ಅವರ ಅಚಲ ಬದ್ಧತೆಯು ಸುಮಾರು 560 ಸಂಸ್ಥಾನಗಳನ್ನು (princely states) ಭಾರತೀಯ ಒಕ್ಕೂಟದಲ್ಲಿ ವಿಲೀನಗೊಳಿಸಲು ಅವರಿಗೆ ಸಾಧ್ಯವಾಗಿಸಿತು ಎಂದು ಅವರು ಅಭಿಪ್ರಾಯಪಟ್ಟರು. ಇಂದು ನಾವು ನೋಡುತ್ತಿರುವ ಭಾರತದ ಐಕ್ಯತೆ ಮತ್ತು ಸಮಗ್ರತೆಯು ಅವರ ನಾಯಕತ್ವ ಮತ್ತು ದೃಷ್ಟಿಕೋನಕ್ಕೆ ಅಪಾರವಾಗಿ ಋಣಿಯಾಗಿದೆ. ಸಂವಾದದಲ್ಲಿ ತೊಡಗಿಸಿಕೊಳ್ಳುವ, ಅಗತ್ಯವಿದ್ದಾಗ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಸಾಮಾನ್ಯ ರಾಷ್ಟ್ರೀಯ ಉದ್ದೇಶದ ಅನ್ವೇಷಣೆಯಲ್ಲಿ ಪ್ರತಿಯೊಬ್ಬರನ್ನು ಒಟ್ಟಿಗೆ ಕೊಂಡೊಯ್ಯುವ ಸರ್ದಾರ್ ಪಟೇಲರ ಸಾಮರ್ಥ್ಯದ ಕುರಿತೂ ಅವರು ಒತ್ತಿ ಹೇಳಿದರು.

ಸೆಂಟ್ರಲ್ ಹಾಲ್‌ನಲ್ಲಿ ನೆರೆದಿದ್ದ ವಿದ್ಯಾರ್ಥಿಗಳನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ವಿದ್ಯಾರ್ಥಿಗಳ ಆಲೋಚನಾಶಕ್ತಿ, ಆತ್ಮವಿಶ್ವಾಸ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಆವಿಷ್ಕಾರದ ಶಕ್ತಿಯನ್ನು ಶ್ಲಾಘಿಸಿದರು. ದೇಶದ ವಿವಿಧ ಭಾಗಗಳ ಯುವಕರು ವ್ಯಕ್ತಪಡಿಸಿದ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳ ವೈವಿಧ್ಯತೆಯು ಭಾರತದ ಪ್ರಜಾಪ್ರಭುತ್ವದ ಅಂತರ್ಗತ ಶಕ್ತಿಯನ್ನು ಪ್ರತಿಫಲಿಸುತ್ತದೆ ಎಂದು ಅವರು ಗಮನಿಸಿದರು. ಸಂಸ್ಕೃತಿಗಳು, ಭಾಷೆಗಳು, ರಾಜಕೀಯ ವ್ಯವಸ್ಥೆಗಳು ಮತ್ತು ದೃಷ್ಟಿಕೋನಗಳು ಭಿನ್ನವಾಗಿದ್ದರೂ, ರಾಷ್ಟ್ರೀಯ ಐಕ್ಯತೆ ಮತ್ತು ದೇಶದ ವ್ಯಾಪಕ ಹಿತಾಸಕ್ತಿಗಳ ಮೇಲಿನ ಬದ್ಧತೆಯು ಸಾಮಾನ್ಯ ಮತ್ತು ಅತ್ಯುನ್ನತವಾಗಿ ಉಳಿಯಬೇಕು. ಸಂವಿಧಾನ ಸದನವು ಭಾರತದ ರಾಷ್ಟ್ರೀಯ ಪ್ರಯಾಣದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಇದು ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂವಿಧಾನ ರಚನೆಗೆ ಸಾಕ್ಷಿಯಾಗಿದೆ ಎಂದು ಲೋಕಸಭೆ ಸ್ಪೀಕರ್ ಉಲ್ಲೇಖಿಸಿದರು. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಹಾಗೂ ನವ ಭಾರತದ ನಿರ್ಮಾಣಕ್ಕೆ ಸಂಬಂಧಿಸಿದ ಚರ್ಚೆಗಳು ಮತ್ತು ನಿರ್ಧಾರಗಳ ತಾಣವೂ ಆಗಿದೆ. ಈ ಐತಿಹಾಸಿಕ ಸಂಸ್ಥೆಯಿಂದ ಪಡೆದ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಪ್ರೇರಣೆಯನ್ನು ಹೊತ್ತ ಯುವಕರು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ರಾಷ್ಟ್ರ ನಿರ್ಮಾಣದಲ್ಲಿ ಯುವ ಪೀಳಿಗೆಯ ಜವಾಬ್ದಾರಿಯ ಬಗ್ಗೆ ಒತ್ತಿಹೇಳಿದ ಶ್ರೀ ಬಿರ್ಲಾ, ಮಹಾನ್ ವ್ಯಕ್ತಿಗಳು ತಮ್ಮ ತ್ಯಾಗ ಮತ್ತು ಕೊಡುಗೆಗಳ ಮೂಲಕ ಸ್ವಾತಂತ್ರ್ಯವನ್ನು ತಂದುಕೊಟ್ಟು ನವ ಭಾರತದ ಅಡಿಪಾಯ ಹಾಕಿದ್ದರೆ, ಈಗ ರಾಷ್ಟ್ರವನ್ನು ಮುನ್ನಡೆಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಹೇಳಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿ, ಹೇರಳವಾದ ಜ್ಞಾನ, ಸಂಪನ್ಮೂಲಗಳು, ಆತ್ಮವಿಶ್ವಾಸ ಮತ್ತು ನವೀನ ಸಾಮರ್ಥ್ಯಗಳೊಂದಿಗೆ, ಭಾರತದ ಯುವ ಪೀಳಿಗೆಯು ವಿವಿಧ ಕ್ಷೇತ್ರಗಳಲ್ಲಿ ಅರ್ಥಪೂರ್ಣ ಕೊಡುಗೆಗಳನ್ನು ನೀಡಲು ಅಪಾರ ಅವಕಾಶಗಳನ್ನು ಹೊಂದಿದೆ. ಯುವಕರು ತಮ್ಮ ಸೃಜನಶೀಲತೆ, ಆಧ್ಯಾತ್ಮಿಕತೆ, ವೈಜ್ಞಾನಿಕ ಮನೋಭಾವ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ರಾಷ್ಟ್ರದ ಸೇವೆಗೆ ಜೋಡಿಸುವಂತೆ ಲೋಕಸಭೆ ಸ್ಪೀಕರ್ ಆಗ್ರಹಿಸಿದರು. ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರಿಗೆ ರಾಷ್ಟ್ರೀಯ ಹಿತಾಸಕ್ತಿಯೇ ಪ್ರಥಮ ಆದ್ಯತೆಯಾಗಿ ಉಳಿಯಬೇಕು ಮತ್ತು ದೇಶದ ನಾಯಕತ್ವ ಹಾಗೂ ಯುವಜನತೆಯ ಸಾಮೂಹಿಕ ಶ್ರಮವು ಜಗತ್ತನ್ನು ಮುನ್ನಡೆಸುವ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕವಾಗಲಿದೆ ಎಂದು ಅವರು ಪ್ರತಿಪಾದಿಸಿದರು.

ಯುವ ಭಾಗವಹಿಸುವವರು ಹಂಚಿಕೊಂಡ ಆಲೋಚನೆಗಳು ದೇಶಾದ್ಯಂತದ ಯುವಜನರಿಗೆ ನವೀಕರಿಸಿದ ಶಕ್ತಿ, ದಿಕ್ಸೂಚಿ, ವಿಶ್ವಾಸ ಮತ್ತು ಸಂಕಲ್ಪದೊಂದಿಗೆ ಪ್ರೇರಣೆ ನೀಡುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಶ್ರೀ ಬಿರ್ಲಾ ಅವರು, ಭಾರತದ ಯುವ ಪೀಳಿಗೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರದರ್ಶಿಸಿದ ದೃಷ್ಟಿಕೋನ, ಕಠಿಣ ಪರಿಶ್ರಮ, ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಈ ಗುಣಗಳು ಭಾರತವನ್ನು ಪರಿವರ್ತನಾತ್ಮಕ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲು ಮತ್ತು ಪ್ರಪಂಚವು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರಗಳನ್ನು ಕೊಡುಗೆಯಾಗಿ ನೀಡಲು ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಅದಕ್ಕೂ ಮುಂಚೆ, ಎಕ್ಸ್ ನಲ್ಲಿನ ತಮ್ಮ ಸಂದೇಶದಲ್ಲಿ ಶ್ರೀ ಬಿರ್ಲಾ ಅವರು, "ಭಾರತದ ಉಕ್ಕಿನ ಮನುಷ್ಯ ಮತ್ತು ಭಾರತ ರತ್ನ ಪುರಸ್ಕೃತ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿ ಅವರ ಜಯಂತಿಯಂದು, ತಮ್ಮ ದೃಢ ಸಂಕಲ್ಪ ಮತ್ತು ಅಸಾಧಾರಣ ನಾಯಕತ್ವದಿಂದ ನಮ್ಮ ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಹೊಸ ದಿಕ್ಸೂಚಿ ನೀಡಿದ ಮಹಾನ್ ದ್ರಷ್ಟಾರನಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಹಿಡಿದು ಸ್ವತಂತ್ರ ಭಾರತದ ಭವಿಷ್ಯವನ್ನು ರೂಪಿಸುವವರೆಗೆ, ರಾಷ್ಟ್ರಕ್ಕೆ ಸರ್ದಾರ್ ಪಟೇಲ್ ಅವರ ಕೊಡುಗೆಯು ಅಪ್ರತಿಮ ಮತ್ತು ಅವಿಸ್ಮರಣೀಯವಾಗಿ ಉಳಿದಿದೆ. ಸ್ವತಂತ್ರ ಭಾರತದ ಪ್ರಥಮ ಉಪ-ಪ್ರಧಾನಿ ಮತ್ತು ಗೃಹ ಸಚಿವರಾಗಿ, ಅವರು 562 ಕ್ಕೂ ಹೆಚ್ಚು ಸಂಸ್ಥಾನಗಳ ವಿಲೀನದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ನವ ಸ್ವತಂತ್ರ ರಾಷ್ಟ್ರವು ಎದುರಿಸುತ್ತಿದ್ದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದನ್ನು ಯಶಸ್ವಿಯಾಗಿ ಪರಿಹರಿಸಿದರು. ಅವರ ಅಸಾಧಾರಣ ನಾಯಕತ್ವ ಮತ್ತು ರಾಜಕೀಯ ದೂರದೃಷ್ಟಿಯು ಒಗ್ಗೂಡಿದ ಮತ್ತು ಶಕ್ತಿಯುತ ಭಾರತದ ಅಡಿಪಾಯವನ್ನು ಬಲಪಡಿಸಿತು.

ಸರ್ದಾರ್ ಪಟೇಲ್ ಅವರ ದೃಷ್ಟಿಕೋನವು ಸ್ವಾತಂತ್ರ್ಯ ಗಳಿಕೆಯನ್ನೂ ಮೀರಿ ವಿಸ್ತರಿಸಿತ್ತು; ವೈವಿಧ್ಯತೆಯು ನಮ್ಮ ಶಕ್ತಿಯಾಗುವ ಮತ್ತು ರಾಷ್ಟ್ರೀಯ ಐಕ್ಯತೆಯು ನಮ್ಮ ನಿರ್ಣಾಯಕ ಗುರುತಾಗುವ ಬಲವಾದ, ಸ್ವಾವಲಂಬಿ ಮತ್ತು ಒಗ್ಗೂಡಿದ ರಾಷ್ಟ್ರವನ್ನು ನಿರ್ಮಿಸಲು ಅವರು ಆಶಿಸಿದರು. ಅವರ ಜಯಂತಿಯನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುವುದು ನಮ್ಮ ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆಯನ್ನು ಕಾಯ್ದುಕೊಳ್ಳುವ ನಮ್ಮ ಸಾಮೂಹಿಕ ಜವಾಬ್ದಾರಿಯನ್ನು ನಮಗೆ ನೆನಪಿಸುತ್ತದೆ. ಅವರ ಆದ್ಯತೆಗಳಿಂದ ಪ್ರೇರಣೆ ಪಡೆಯೋಣ ಮತ್ತು ಬಲವಾದ, ಸಾಮರಸ್ಯದ ಮತ್ತು ವಿಕಸಿತ ಭಾರತವನ್ನು ನಿರ್ಮಿಸಲು ಪೂರ್ಣಹೃದಯದಿಂದ ಕೊಡುಗೆ ನೀಡಲು ಸಂಕಲ್ಪ ಮಾಡೋಣ." 

 

*****


(ಪ್ರಕಟಣೆ ಐ.ಡಿ.: 2331050) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English