ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಗೋವಾದಲ್ಲಿ ಉದ್ಘಾಟನೆಗೊಂಡ 29ನೇ ಇಂಧನ ತಂತ್ರಜ್ಞಾನ ಸಭೆಯಲ್ಲಿ ನಾವೀನ್ಯತೆ ಮತ್ತು ಭಾರತದ ಇಂಧನ ಭದ್ರತಾ ಆದ್ಯತೆಗಳ ಪ್ರಮುಖ ಪ್ರಸ್ತಾಪ


ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ ಇಟಿಎಂ 2026; ಇಂಧನ ನಾವೀನ್ಯತೆ ಮತ್ತು ವಾಣಿಜ್ಯೀಕರಣವನ್ನು ಮುನ್ನಡೆಸಲು ಒಂದೇ ವೇದಿಕೆಯಲ್ಲಿ 1500ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ

ಪ್ರಕಟಣಾ ದಿನಾಂಕ: 27 OCT 2026 9:33PM by PIB Bengaluru

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ ಇಂದು ಗೋವಾದ ಒಎನ್‌ಜಿಸಿ ಸುಧಾರಿತ ತರಬೇತಿ ಸಂಸ್ಥೆಯಲ್ಲಿ 29ನೇ ಇಂಧನ ತಂತ್ರಜ್ಞಾನ ಸಭೆ (ಇಟಿಎಂ 2026) ಅನ್ನು ಉದ್ಘಾಟಿಸಿದರು. ಮೂರು ದಿನಗಳ ಈ ಕಾರ್ಯಕ್ರಮವು ನೀತಿ ನಿರೂಪಕರು, ಉದ್ಯಮ ಮುಖಂಡರು, ಸಂಶೋಧಕರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಇಂಧನ ತಜ್ಞರನ್ನು ಒಗ್ಗೂಡಿಸಿ ಭಾರತದ ಇಂಧನ ಭವಿಷ್ಯವನ್ನು ರೂಪಿಸುವ ನಾವೀನ್ಯತೆಗಳ ಕುರಿತು ಚರ್ಚಿಸುತ್ತದೆ.

ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಆಶ್ರಯದಲ್ಲಿ ಉನ್ನತ ತಂತ್ರಜ್ಞಾನ ಕೇಂದ್ರ ಆಯೋಜಿಸಿರುವ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಹ-ಆಯೋಜಿಸಿರುವ ಈ ಸಭೆಯು "ಇಂಧನ ನಾವೀನ್ಯತೆ ವೇಗವರ್ಧನೆ: ಸಂಶೋಧನೆಯಿಂದ ವಾಣಿಜ್ಯೀಕರಣದವರೆಗೆ" ಎಂಬ ಘೋಷವಾಕ್ಯವನ್ನು ಹೊಂದಿದೆ. ಈ ವೇದಿಕೆಯು ಇಂಧನ ಮೌಲ್ಯ ಸರಣಿಯಾದ್ಯಂತ ಸಹಯೋಗವನ್ನು ಬಲಪಡಿಸುವ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ವಾಣಿಜ್ಯ ಅಳವಡಿಕೆ ವೇಗಗೊಳಿಸುವ ಗುರಿಯನ್ನು ಹೊಂದಿದೆ.

ಈವರೆಗಿನ ಅತಿದೊಡ್ಡ ಇಟಿಎಂ ಆವೃತ್ತಿಯಾಗಿದ್ದು, 2,500ಕ್ಕೂ ಅಧಿಕ ಪ್ರತಿನಿಧಿಗಳು, 250ಕ್ಕೂ ಹೆಚ್ಚು ಭಾಷಣಕಾರರು, 44 ತಾಂತ್ರಿಕ ಗೋಷ್ಠಿಗಳು ಮತ್ತು 220ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಹೊಂದಿದೆ.

ಕಾರ್ಯಕ್ರಮದಲ್ಲಿ ನಡೆದ ಸಂವಾದದ ಸಂದರ್ಭದಲ್ಲಿ, ಶ್ರೀ ಹರ್ ದೀಪ್ ಸಿಂಗ್ ಪುರಿ, ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆಗಳಿಗೆ ಭಾರತ ಹೇಗೆ ಪ್ರತಿಕ್ರಿಯಿಸಿತು ಮತ್ತು ಬಿಕ್ಕಟ್ಟಿನ ಸಂಪೂರ್ಣ ಪರಿಣಾಮದಿಂದ ಗ್ರಾಹಕರನ್ನು ರಕ್ಷಿಸಲು ಪ್ರಯತ್ನಿಸಿತು ಎಂಬುದನ್ನು ಚರ್ಚಿಸಿದರು. ದೇಶೀಯ ಉತ್ಪಾದನೆ, ಪರ್ಯಾಯ ಆಮದುಗಳು ಮತ್ತು ಕೊನೆಯ ಹಂತದ ವಿತರಣೆಯಲ್ಲಿ ಕಾರ್ಯನಿರ್ವಹಿಸುವ ಪ್ರಾಮುಖ್ಯತೆಯನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಮನೆಯ ಅಗತ್ಯಗಳನ್ನು ಬೆಂಬಲಿಸಲು ಎಲ್ ಪಿ ಜಿ ಉತ್ಪಾದನೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಉಲ್ಲೇಖಿಸಿದರು. ಅಗತ್ಯ ಇಂಧನ ಪೂರೈಕೆಗಳ ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ತೈಲ ಮತ್ತು ಅನಿಲ ಸಾರ್ವಜನಿಕ ವಲಯದ ಉದ್ಯಮಗಳು, ಸಂಸ್ಕರಣಾಗಾರಗಳು ಮತ್ತು ವಿತರಣಾ ಜಾಲಗಳಲ್ಲಿ ಸಮನ್ವಯದ ಪಾತ್ರವನ್ನು ಚರ್ಚೆಯು ಒತ್ತಿಹೇಳಿತು.

ವೈವಿಧ್ಯಮಯ ಪೂರೈಕೆ ಮೂಲಗಳು, ಹೆಚ್ಚಿನ ದೇಶೀಯ ಉತ್ಪಾದನೆ ಮತ್ತು ವಿಶಾಲವಾದ ಇಂಧನಗಳ ಮೂಲಕ ಭಾರತದ ದೀರ್ಘಕಾಲೀನ ಇಂಧನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವತ್ತಲೂ ಈ ಸಂವಾದ ಗಮನಹರಿಸಿತು. ರೈತರು ಮತ್ತು ಗ್ರಾಮೀಣ ಸಮುದಾಯಗಳಿಗೆ ಹೆಚ್ಚುವರಿ ಮೌಲ್ಯವನ್ನು ಸೃಷ್ಟಿಸುವಾಗ ಕೃಷಿ ಉಳಿಕೆ ಮತ್ತು ಸಾವಯವ ತ್ಯಾಜ್ಯವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಂಕುಚಿತ ಜೈವಿಕ ಅನಿಲದ ಸಾಮರ್ಥ್ಯವನ್ನು ಸಚಿವರು ಬಲವಾಗಿ ಪ್ರತಿಪಾದಿಸಿದರು. ಸುಸ್ಥಿರ ವಾಯುಯಾನ ಇಂಧನ ಮತ್ತು ಇತರ ಮುಂದಿನ ಪೀಳಿಗೆಯ ಜೈವಿಕ ಇಂಧನಗಳಲ್ಲಿನ ಅವಕಾಶಗಳನ್ನು ಸಹ ಚರ್ಚಿಸಲಾಯಿತು, ಜೊತೆಗೆ ದೇಶೀಯ ಸಂಶೋಧನೆ ಬಲಪಡಿಸುವ ಅಗತ್ಯತೆ, ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುವುದು ಮತ್ತು ಭಾರತೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮತ್ತು ಪೈಲಟ್ ಹಂತಗಳಿಂದ ವಾಣಿಜ್ಯ ನಿಯೋಜನೆಗೆ ತರುವ ಅಗತ್ಯತೆಯನ್ನೂ ಚರ್ಚಿಸಲಾಯಿತು.

ಜಾಗತಿಕ ಇಂಧನ ಪೂರೈಕೆಯಲ್ಲಿನ ಅಡಚಣೆಗಳಿಗೆ ಭಾರತದ ಪ್ರತಿಕ್ರಿಯೆ ಮತ್ತು ಇಂಧನ ಲಭ್ಯತೆಯನ್ನು ಕಾಯ್ದುಕೊಳ್ಳುವಲ್ಲಿ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಪಾತ್ರವನ್ನು ಅವರು ಚರ್ಚಿಸಿದರು. ಪಶ್ಚಿಮ ಏಷ್ಯಾ ಬಿಕ್ಕಟ್ಟನ್ನು ಒಎಂಸಿಗಳು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಿವೆ ಎಂಬುದನ್ನು ಅವರು ಪ್ರಸ್ತಾಪಿಸಿದರು, ಅಗತ್ಯ ಇಂಧನ ಪೂರೈಕೆಗಳ ನಿರಂತರತೆಯನ್ನು ಖಾತ್ರಿಪಡಿಸಿಕೊಳ್ಳಲು ಸಂಸ್ಕರಣಾಗಾರಗಳು, ಪೂರೈಕೆ ಜಾಲಗಳು ಮತ್ತು ವಿತರಣಾ ಮಾರ್ಗಗಳಲ್ಲಿ ಸಮನ್ವಯ ಸಾಧಿಸಿವೆ. ದೇಶೀಯ LPG ಉತ್ಪಾದನೆಯನ್ನು ಹೆಚ್ಚಿಸುವುದು, ಆಮದು ಮೂಲಗಳನ್ನು ವೈವಿಧ್ಯಗೊಳಿಸುವುದು ಮತ್ತು ಜಾಗತಿಕ ಪೂರೈಕೆ ಅಡಚಣೆಗಳ ಪರಿಣಾಮದಿಂದ ಗ್ರಾಹಕರನ್ನು ರಕ್ಷಿಸುವ ಕ್ರಮಗಳನ್ನು ಸಹ ಈ ಚರ್ಚೆಯು ಒಳಗೊಂಡಿತ್ತು.

ಭಾರತದ ಇಂಧನ ಮೂಲದ ನಿರ್ಧಾರಗಳು ಅದರ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಇಂಧನ ಅವಶ್ಯಕತೆಗಳಿಂದ ರೂಪಿಸಲ್ಪಟ್ಟಿವೆ ಎಂದು ಸಚಿವರು ಪ್ರಮುಖವಾಗಿ ಪ್ರಸ್ತಾಪಿಸಿದರು. ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಚಿಲ್ಲರೆ ಮಾರಾಟ ಮಳಿಗೆಗಳಿವೆ, ಆದರೆ ನಾವು ಒಂದೇ ಒಂದು ಸಂಸ್ಕರಣಾ ಘಟಕವನ್ನು (RO ಅನ್ನು) ಸಹ ಒಣಗಲು ಬಿಡಲಿಲ್ಲ ಎಂದು ಅವರು ಹೇಳಿದರು.

ದೇಶೀಯ ಉತ್ಪಾದನೆ ಹೆಚ್ಚಳ ಮಾಡುವುದು ಮತ್ತು ವೈವಿಧ್ಯಮಯ ಇಂಧನ ಮಿಶ್ರಣವನ್ನು ಅಳವಡಿಸಿಕೊಳ್ಳುವ ಮೂಲಕ ದೀರ್ಘಾವಧಿಯ ಇಂಧನ ಸ್ಥೈರ್ಯವನ್ನು ಬಲವರ್ಧನೆಗೊಳಿಸುವ ಮಾರ್ಗಗಳನ್ನೂ ಸಹ ಸಭೆಯಲ್ಲಿ ಚರ್ಚಿಸಲಾಯಿತು. ಸಂಕುಚಿತ ಜೈವ ಅನಿಲ (CBG), ಸುಸ್ಥಿರ ವಿಮಾನ ಇಂಧನ ಮತ್ತು ಮುಂದಿನ ತಲೆಮಾರಿನ ಜೈವ ಇಂಧನಗಳ ಕ್ಷೇತ್ರದಲ್ಲಿರುವ ಅವಕಾಶಗಳ ಕುರಿತು ವಿಚಾರ ವಿನಿಮಯ ನಡೆಯಿತು. ದೇಶೀಯವಾಗಿ ಅಭಿವೃದ್ಧಿಪಡಿಸಲಾಗುವ ಇಂಧನ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ವೇಗಗೊಳಿಸಲು ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನೂ ಒತ್ತಿಹೇಳಲಾಯಿತು.

ಕಾರ್ಯಕ್ರಮದಲ್ಲಿ ಪ್ರಮುಖ ಘೋಷಣೆಯಾಗಿ, ವಿವಿಧ ಹಂತಗಳಲ್ಲಿ ನಡೆದ ಸಮಗ್ರ ಸಮಾಲೋಚನೆಗಳ ಆಧಾರದ ಮೇಲೆ ರಾಷ್ಟ್ರೀಯ ತೈಲ ಮತ್ತು ಅನಿಲ ಸಂಶೋಧನೆ ಹಾಗೂ ಅಭಿವೃದ್ಧಿ ಮುನ್ನೋಟ ರೂಪಿಸಲಾಗುವುದು ಎಂದು ತಿಳಿಸಲಾಯಿತು. ಇದರ ಅನುಷ್ಠಾನಕ್ಕೆ ಬೆಂಬಲ ನೀಡಲು ಸರ್ಕಾರವು *ರಾಷ್ಟ್ರೀಯ ಹೈಡ್ರೋಕಾರ್ಬನ್ ತಂತ್ರಜ್ಞಾನ ಕೇಂದ್ರ (ಎನ್ ಎಚ್ ಟಿ ಎಚ್)ವನ್ನು ಸ್ಥಾಪಿಸುತ್ತಿದೆ. ಈ ಕೇಂದ್ರವು ಇಂಧನ ಕ್ಷೇತ್ರದಾದ್ಯಂತ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ವಿಸ್ತೃತ ಸಾಂಸ್ಥಿಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.

ಈ ಹೊಸ ಕೇಂದ್ರವು ಈಗಿರುವ ಸೆಂಟರ್ ಫಾರ್ ಹೈ ಟೆಕ್ನಾಲಜಿ ಒಳಗೆ ವಿಲೀನಗೊಳ್ಳಲಿದೆ. ಅದಕ್ಕೆ ಇನ್ನಷ್ಟು ವಿಶಾಲವಾದ ಜವಾಬ್ದಾರಿಗಳನ್ನು ನೀಡಲಾಗಿದ್ದು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು, ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಶೈಕ್ಷಣಿಕ ಸಂಸ್ಥೆಗಳು, ಶ್ರೇಷ್ಠತಾ ಕೇಂದ್ರಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲಿದೆ. ರಾಷ್ಟ್ರೀಯ ಆದ್ಯತೆಗಳ ಆಧಾರದ ಮೇಲೆ ಈ ಎಲ್ಲಾ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಮಾಡುವುದು NHTHಯ ಉದ್ದೇಶವಾಗಿದೆ. ಇದರಿಂದ ಸಂಶೋಧನಾ ಕಾರ್ಯಗಳಲ್ಲಿ ಉಂಟಾಗುವ ಪುನರಾವರ್ತನೆ ಕಡಿಮೆಯಾಗಲಿದ್ದು, ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬಲ್ಲ ದೇಶೀಯ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಬಳಕೆಯನ್ನು ವೇಗಗೊಳಿಸಲು ಸಾಧ್ಯವಾಗಲಿದೆ. ‘ಒಂದು ವಿಷನ್, ಒಂದು ಪರಿಸರ ವ್ಯವಸ್ಥೆ’ ಎಂಬ ಆಶಯದಡಿ ಇನ್ನಷ್ಟು ಸಂಪರ್ಕಿತ ಮತ್ತು ಸಮಗ್ರ ಇಂಧನ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಈ ಉಪಕ್ರಮದ ಗುರಿಯಾಗಿದೆ.

ಕಾರ್ಯಕ್ರಮದ ಅಂಗವಾಗಿ ಸಚಿವರು ಪ್ರದರ್ಶನ ಮಳಿಗೆಗೂ ಭೇಟಿ ನೀಡಿದರು. ಅಲ್ಲಿ ತಂತ್ರಜ್ಞಾನ ಪೂರೈಕೆದಾರರು, ಪ್ರಕ್ರಿಯೆ ಪರವಾನಗಿ ಸಂಸ್ಥೆಗಳು, ಎಂಜಿನಿಯರಿಂಗ್ ಕಂಪನಿಗಳು ಮತ್ತು ಇಂಧನ ವಲಯದ ವಿವಿಧ ಸಂಸ್ಥೆಗಳು ಕೆಳಹಂತದ ಹೈಡ್ರೋಕಾರ್ಬನ್ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ಪನ್ನಗಳು, ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸಿದವು. ಈ ಪ್ರದರ್ಶನವು ವಿವಿಧ ಪಾಲುದಾರರಿಗೆ ತಮ್ಮ ತಾಂತ್ರಿಕ ಪ್ರಗತಿಯನ್ನು ಪರಿಚಯಿಸಲು, ಜ್ಞಾನ ಹಂಚಿಕೊಳ್ಳಲು ಮತ್ತು ಇಂಧನ ವಲಯ ಎದುರಿಸುತ್ತಿರುವ ಹೊಸ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಅವಕಾಶ ಒದಗಿಸಿತು.

ಕಾರ್ಯಕ್ರಮದ ಉದ್ಘಾಟನಾ ಗೋಷ್ಠಿಯಲ್ಲಿ ಭಾರತದ ಇಂಧನ ಮಿಶ್ರಣವನ್ನು ವೈವಿಧ್ಯಗೊಳಿಸುವ ಹಾಗೂ ದೇಶೀಯ ಇಂಧನ ಉತ್ಪಾದನೆಯನ್ನು ಬಲಪಡಿಸುವ ಉದ್ದೇಶದ ಸರ್ಕಾರದ ವಿವಿಧ ಉಪಕ್ರಮಗಳನ್ನೂ ಪ್ರಸ್ತಾಪಿಸಲಾಯಿತು. ಗೋಬರ್ಧನ್‌ (GOBARdhan) ಯೋಜನೆಯಡಿ, ಸಂಕುಚಿತ ಜೈವ ಅನಿಲದ ಉತ್ಪಾದನೆ ವಿಸ್ತರಿಸಲು ಮತ್ತು ಚಲಾವಣೆಯಲ್ಲಿರುವ ಜೈವಿಕ ಆರ್ಥಿಕತೆಯನ್ನು ಬೆಂಬಲಿಸಲು 2026–27ರಿಂದ 2035–36ರ ಹಣಕಾಸು ವರ್ಷಗಳವರೆಗೆ 23,731 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈ ಯೋಜನೆಯು ಜೈವಿಕ ತ್ಯಾಜ್ಯವನ್ನು ಇಂಧನ ಮತ್ತು ಇತರ ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವ ಮೂಲಕ ಸುಸ್ಥಿರ ಇಂಧನ ವ್ಯವಸ್ಥೆಗೆ ಉತ್ತೇಜನ ನೀಡಲಿದೆ.  ಇದಕ್ಕೆ ಪೂರಕವಾಗಿ, ಸಮುದ್ರ ಮಂಥನ ಎಂಬ ರಾಷ್ಟ್ರೀಯ ಸಮುದ್ರದಡಿ ಅನ್ವೇಷಣಾ ಯೋಜನೆಗೆ 2030–31ರ ಹಣಕಾಸು ವರ್ಷದವರೆಗೆ 84,084 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಆಳ ಸಮುದ್ರ ಮತ್ತು ಅತಿ ಆಳ ಸಮುದ್ರ ಪ್ರದೇಶಗಳಲ್ಲಿ ತೈಲ ಹಾಗೂ ಅನಿಲ ಅನ್ವೇಷಣೆಯನ್ನು ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇದರ ಮೂಲಕ ಭಾರತದ ದೀರ್ಘಾವಧಿಯ ಇಂಧನ ಭದ್ರತೆಗೆ ಮತ್ತಷ್ಟು ಬಲ ದೊರೆಯಲಿದೆ.

ಸಚಿವರು ಪತ್ರಿಕಾಗೋಷ್ಠಿಯಲ್ಲಿಯೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ದೇಶದ ಇಂಧನ ಪರಿಸ್ಥಿತಿ, ಇಂಧನ ಲಭ್ಯತೆ, ಇಂಧನ ಭದ್ರತೆ, ಇಂಧನ ಪರಿವರ್ತನೆ ಹಾಗೂ ಇಂಧನ ಮೂಲಗಳನ್ನು ವೈವಿಧ್ಯಗೊಳಿಸುವ ಸರ್ಕಾರದ ಕ್ರಮಗಳ ಕುರಿತು ಅವರು ವಿವರಿಸಿದರು.

ಅಕ್ಟೋಬರ್ 29ರವರೆಗೆ ನಡೆಯಲಿರುವ ETM 2026 ಕಾರ್ಯಕ್ರಮದಲ್ಲಿ ತಾಂತ್ರಿಕ ಪ್ರಸ್ತುತಿಗಳು, ತಜ್ಞರ ಸಂವಾದಗಳು,  ಚರ್ಚೆಗಳು, ಪೋಸ್ಟರ್ ಪ್ರದರ್ಶನಗಳು ಮತ್ತು ಪ್ರದರ್ಶನ ಮಳಿಗೆಗಳು ಇರಲಿವೆ. ಹಸಿರು ಹೈಡ್ರೋಜನ್, ಸುಸ್ಥಿರ ವಿಮಾನ ಇಂಧನ, ಕಾರ್ಬನ್‌ ಹೊಸ ಸೂಸುವಿಕೆ, ಕಚ್ಚಾ ತೈಲದಿಂದ ರಾಸಾಯನಿಕ ಉತ್ಪಾದನೆ, ಜೈವಿಕ ಇಂಧನ, ಅನಿಲಾಧಾರಿತ ಇಂಧನ, ಶುದ್ಧೀಕರಣ ತಂತ್ರಜ್ಞಾನಗಳು ಮತ್ತು ಡಿಜಿಟಲೀಕರಣ ಪ್ರಮುಖ ಚರ್ಚಾ ವಿಷಯಗಳಾಗಿವೆ.

ಭಾರತ ಹಾಗೂ ವಿದೇಶಗಳ ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲಿದ್ದಾರೆ. ಕೈಗಾರಿಕಾ ಕ್ಷೇತ್ರದ ಅನುಭವಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ, ತಾಂತ್ರಿಕ ಪ್ರಗತಿಯನ್ನು ವಾಣಿಜ್ಯಿಕವಾಗಿ ಅನುಷ್ಠಾನಗೊಳಿಸಬಹುದಾದ ಪರಿಹಾರಗಳಾಗಿ ರೂಪಿಸುವ ಅವಕಾಶಗಳನ್ನೂ ಗುರುತಿಸಲಾಗುತ್ತದೆ.

ಕಾರ್ಯಕ್ರಮದಲ್ಲಿ ಭಾರತದ ಸ್ಟಾರ್ಟ್‌ಅಪ್‌ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಕುರಿತು MC² Ignite ಗೋಷ್ಠಿಗಳೂ ನಡೆಯಲಿವೆ. ಇಂಧನ ಕ್ಷೇತ್ರದಲ್ಲಿನ ತಾಂತ್ರಿಕ ಪ್ರಗತಿ ಮತ್ತು ನವೀನತೆಗಳನ್ನು ಗುರುತಿಸಲು ಸ್ಟಾರ್ಟ್‌ಅಪ್ ಪ್ರಶಸ್ತಿ ಹಾಗೂ ರಿಫೈನರಿ ಕಾರ್ಯಕ್ಷಮತೆ ಮತ್ತು ನವೀನತೆ ಪ್ರಶಸ್ತಿ ನೀಡಲಾಗುತ್ತದೆ. ಇದೇ ವೇಳೆ, ಫೆಡರೇಶನ್ ಆಫ್ ಇಂಡಿಯನ್ ಪೆಟ್ರೋಲಿಯಂ ಇಂಡಸ್ಟ್ರಿ ಆಯೋಜಿಸುವ ಆರ್‌ & ಡಿ ಸಮಾವೇಶದಲ್ಲಿ ಶೂನ್ಯ-ಉತ್ಸರ್ಜನಾ ಶುದ್ಧೀಕರಣ ಘಟಕಗಳು, ಇಂಧನ ದಕ್ಷತೆ, ಹಸಿರು ಹೈಡ್ರೋಜನ್, ಜೈವಿಕ ವಸ್ತುಗಳ ಮೌಲ್ಯವರ್ಧನೆ, ನೀರಿನ ನಿರ್ವಹಣೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಚರ್ಚೆ ನಡೆಯಲಿದೆ. ಈ ಸಮಾವೇಶವು ಭಾರತದ ಇಂಧನ ಕ್ಷೇತ್ರದ ವಿವಿಧ ಸಂಸ್ಥೆಗಳ ನಡುವೆ ಸಹಕಾರವನ್ನು ಉತ್ತೇಜಿಸುವುದರ ಜೊತೆಗೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೈಗಾರಿಕಾ ಅನ್ವಯಿಕತೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2329275) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English