ಸಹಕಾರ ಸಚಿವಾಲಯ
azadi ka amrit mahotsav

ಕರ್ನಾಟಕದ ಬೆಳಗಾವಿಯಲ್ಲಿ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ್ ಮೊಹೋಲ್ ಮಾತನಾಡಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ದೂರದೃಷ್ಟಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದ ಸಹಕಾರ ಕ್ಷೇತ್ರವು ನಿರಂತರವಾಗಿ ಸಶಕ್ತಗೊಳ್ಳುತ್ತಿದೆ: ಶ್ರೀ ಮುರಳೀಧರ ಮೊಹೋಲ್

ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ಸಹಕಾರ ಕ್ಷೇತ್ರದಲ್ಲಿ 160ಕ್ಕೂ ಹೆಚ್ಚು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ; ಸುಮಾರು 80,000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪ್ಯಾಕ್ಸ್ - ಪಿಎಸಿಎಸ್) ಗಣಕೀಕರಣಕ್ಕಾಗಿಸುಮಾರು 3,000 ಕೋಟಿ ರೂ. ವೆಚ್ಚದ ಕೆಲಸಕ್ಕಾಗಿ ಚಾಲನೆ ನೀಡಲಾಗಿದೆ: ಶ್ರೀ ಮೊಹೋಲ್

ಸುಮಾರು 70,000 ಸಹಕಾರಿ ಸಂಸ್ಥೆಗಳು ರಾಷ್ಟ್ರ ಮಟ್ಟದ ಮೂರು ಬಹು-ರಾಜ್ಯ ಸಹಕಾರಿ ಸಂಘಗಳನ್ನು ಸೇರಿಕೊಂಡಿವೆ; ಗ್ರಾಮ ಮಟ್ಟದ ಸಹಕಾರಿ ಸಂಸ್ಥೆಗಳನ್ನು 25ಕ್ಕೂ ಹೆಚ್ಚು ರೀತಿಯ ವ್ಯವಹಾರ ಚಟುವಟಿಕೆಗಳಿಗೆ ಜೋಡಿಸಲಾಗಿದೆ

ನಗರ ಸಹಕಾರಿ ಬ್ಯಾಂಕುಗಳಿಗಾಗಿ ಪ್ರಧಾನ ಸಂಸ್ಥೆ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗಾಗಿ 'ಸಹಕಾರ್ ಸಾರಥಿ' ವೇದಿಕೆಯ ಮೂಲಕ ಸಹಕಾರಿ ಬ್ಯಾಂಕಿಂಗ್ ಹೊಸ ಶಕ್ತಿಯನ್ನು ಪಡೆಯುತ್ತಿದೆ

ಮುಂದಿನ 10 ವರ್ಷಗಳಲ್ಲಿ ಸಹಕಾರ ವಲಯಕ್ಕೆ ಸುಮಾರು 17 ಲಕ್ಷ ತರಬೇತಿ ಪಡೆದ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ; 'ತ್ರಿಭುವನ್' ಸಹಕಾರಿ ವಿಶ್ವವಿದ್ಯಾಲಯವು ಈ ನಿಟ್ಟಿನಲ್ಲಿ ಒಂದು ಪ್ರಮುಖ ಉಪಕ್ರಮವಾಗಿದೆ: ಶ್ರೀ ಮೊಹೋಲ್

ಶ್ವೇತ ಕ್ರಾಂತಿ, ಸಹಕಾರ್ ಬಿಮಾ ಮತ್ತು ಭಾರತ್ ಟ್ಯಾಕ್ಸಿಯಂತಹ ಹೊಸ ಉಪಕ್ರಮಗಳು ಸಹಕಾರದ ವ್ಯಾಪ್ತಿಯನ್ನು ನಿರಂತರವಾಗಿ ವಿಸ್ತರಿಸುತ್ತಿವೆ: ಶ್ರೀ ಮೊಹೋಲ್

ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಸುಮಾರು 4.60 ಲಕ್ಷ ಸದಸ್ಯರನ್ನು, ದೇಶಾದ್ಯಂತ 263 ಶಾಖೆಗಳನ್ನು ಮತ್ತು 9,000 ಕೋಟಿ ರೂ.ಗೂ ಹೆಚ್ಚಿನ ವಹಿವಾಟನ್ನು ಹೊಂದಿದೆ

ಪ್ರಕಟಣಾ ದಿನಾಂಕ: 19 SEP 2026 7:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 'ಸಹಕಾರದಿಂದ ಸಮೃದ್ಧಿ' ದೂರದೃಷ್ಟಿ ಮತ್ತು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದ ಸಹಕಾರ ಕ್ಷೇತ್ರವನ್ನು ಬಲಪಡಿಸಲು, ಆಧುನೀಕರಿಸಲು, ಪಾರದರ್ಶಕವಾಗಿಸಲು ಮತ್ತು ವಿಸ್ತರಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ.  ಇದರ ಭಾಗವಾಗಿ, ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಂದಿಯಲ್ಲಿ ಸ್ಥಾಪಿಸಲಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ (ಮಲ್ಟಿ-ಸ್ಟೇಟ್) ನ ನೂತನ ಪ್ರಧಾನ ಕಚೇರಿಯ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ ಮೊಹೋಲ್ ಇಂದು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಕರ್ನಾಟಕ ರಾಜ್ಯದ ಹಲವಾರು ಗಣ್ಯರು, ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಮತ್ತು ಅಪಾರ ಸಂಖ್ಯೆಯ ನಾಗರಿಕರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರಾದ ಶ್ರೀ ಮುರಳೀಧರ ಮೊಹೋಲ್, ಇಂದು ಕರ್ನಾಟಕದ ಸಹಕಾರ ಕ್ಷೇತ್ರಕ್ಕೆ ಅತ್ಯಂತ ಪ್ರಮುಖ ಮತ್ತು ಸಂತಸದ ದಿನವಾಗಿದೆ ಎಂದರು. ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಮತ್ತು ಕೇಂದ್ರ ಸಹಕಾರ ಸಚಿವಾಲಯದ ಪರವಾಗಿ ಶ್ರೀ ಮೊಹೋಲ್ ಅವರು ಸಂಸ್ಥೆಯ ಇಡೀ ತಂಡಕ್ಕೆ ಶುಭಾಶಯಗಳನ್ನು ಕೋರಿದರು.

ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಸುಮಾರು 4.60 ಲಕ್ಷ ಸದಸ್ಯರನ್ನು ಹೊಂದಿದ್ದು, ದೇಶಾದ್ಯಂತ 263 ಶಾಖೆಗಳನ್ನು   ಹಾಗೂ 9,000 ಕೋಟಿ ರೂ.ಗೂ ಹೆಚ್ಚಿನ ವಹಿವಾಟನ್ನು ಹೊಂದಿದೆ ಎಂದು ಕೇಂದ್ರ ರಾಜ್ಯ ಸಚಿವರು ತಿಳಿಸಿದರು. ಇಂದು ಈ ಸಂಸ್ಥೆಯ 36ನೇ ಸಂಸ್ಥಾಪನಾ ದಿನವೂ ಆಗಿದೆ ಎಂದು ಅವರು ಹೇಳಿದರು. ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸಹಕಾರ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಸಂಸ್ಥೆಯ ಇಡೀ ತಂಡವನ್ನು ಅವರು ಅಭಿನಂದಿಸಿದರು.

ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲಿ ಸಹಕಾರ ಕ್ಷೇತ್ರವು ಬೃಹತ್ ಪ್ರಮಾಣದಲ್ಲಿ ವಿಸ್ತರಿಸಿದೆ ಎಂದು ಶ್ರೀ ಮೊಹೋಲ್ ಹೇಳಿದರು. ಕರ್ನಾಟಕದ ಸಹಕಾರ ಕ್ಷೇತ್ರಕ್ಕೆ ಶ್ರೀ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಅವರ ಧರ್ಮಪತ್ನಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು. ಸಹಕಾರಿ ಸಕ್ಕರೆ ಕಾರ್ಖಾನೆಗಳು, ಸಹಕಾರಿ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಮಾಡಿರುವ ಕೆಲಸಗಳನ್ನು ಉಲ್ಲೇಖಿಸಿದ ಶ್ರೀ ಮೊಹೋಲ್, ಅವರ ಕೊಡುಗೆಯನ್ನು ಶ್ಲಾಘಿಸಿದರು.

ದೇಶದ ಸಹಕಾರ ವ್ಯವಸ್ಥೆಗೆ ಹೊಸ ದಿಕ್ಸೂಚಿ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದನಾರ್ಹರು ಎಂದು ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹೇಳಿದರು. ಇಂದು ದೇಶದಲ್ಲಿ 8.5 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳು ಮತ್ತು ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 32 ಕೋಟಿ ಜನರು ಈ ಸಹಕಾರಿ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಸುಮಾರು 20 ರಿಂದ 25 ಕೋಟಿ ಕುಟುಂಬಗಳು ಸಹಕಾರ ಕ್ಷೇತ್ರದೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಈ ಮೂಲಕ ದೇಶದ ಅರ್ಧದಷ್ಟು ಜನಸಂಖ್ಯೆಯು ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ವ್ಯವಸ್ಥೆಯ ಸದಸ್ಯರಾಗಿದ್ದಾರೆ  ಎಂದರು.

ಹಿಂದೆ ದೇಶದಲ್ಲಿ ಸಹಕಾರಕ್ಕೆ ಸಂಬಂಧಿಸಿದ ಕೆಲಸಗಳನ್ನು ಕೃಷಿ ಕ್ಷೇತ್ರದ ಜಂಟಿ ಕಾರ್ಯದರ್ಶಿ ಹಂತದ ಇಲಾಖೆಯಡಿ ನಿರ್ವಹಿಸಲಾಗುತ್ತಿತ್ತು ಎಂದು ಶ್ರೀ ಮೊಹೋಲ್ ಹೇಳಿದರು. ಸಹಕಾರ ಕ್ಷೇತ್ರದ ವ್ಯಾಪ್ತಿ ಮತ್ತು ಮಹತ್ವವನ್ನು ಗುರುತಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ಸ್ವತಂತ್ರ 'ಸಹಕಾರ ಸಚಿವಾಲಯ'ವನ್ನು ಸ್ಥಾಪಿಸಿದರು. ಕಳೆದ ಸುಮಾರು ಐದು ವರ್ಷಗಳಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ ದೇಶದ ಸಹಕಾರ ಕ್ಷೇತ್ರವು ಮೂಲಭೂತ ಪರಿವರ್ತನೆಗೆ ಒಳಪಟ್ಟಿದೆ ಎಂದು ಅವರು ತಿಳಿಸಿದರು.

ಗ್ರಾಮ ಮಟ್ಟದ ಸಂಘಗಳಿಂದ ಹಿಡಿದು ಜಿಲ್ಲಾ ಬ್ಯಾಂಕುಗಳು ಮತ್ತು ರಾಜ್ಯ ಮಟ್ಟದ ಸಹಕಾರಿ ಬ್ಯಾಂಕುಗಳವರೆಗೆ ಸಂಪೂರ್ಣ ಸಹಕಾರಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅಪಾರ ಅನುಭವ ಶ್ರೀ ಅಮಿತ್ ಶಾ ಅವರಿಗಿದೆ ಎಂದು ಶ್ರೀ ಮೊಹೋಲ್ ಹೇಳಿದರು. ದೇಶದ ಮೊದಲ ಸಹಕಾರ ಸಚಿವರಾಗಿ ಅವರ ನೇತೃತ್ವದಲ್ಲಿ ಭಾರತದಲ್ಲಿ ಸಹಕಾರ ಕ್ಷೇತ್ರವು ಹೊಸ ವೇಗವನ್ನು ಪಡೆಯಿತು ಮತ್ತು ದೇಶಾದ್ಯಂತ ಅದರ ಸಮಾನ ವಿಸ್ತರಣೆ ಮತ್ತು ಅಭಿವೃದ್ಧಿಗಾಗಿ ಕೆಲಸಗಳು ಪ್ರಾರಂಭವಾದವು.

ಶ್ರೀ ಅಮಿತ್ ಶಾ ಅವರ ಅಧಿಕಾರಾವಧಿಯಲ್ಲಿ ಸಹಕಾರ ಕ್ಷೇತ್ರಕ್ಕಾಗಿ 160ಕ್ಕೂ ಹೆಚ್ಚು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರು ತಿಳಿಸಿದರು. ಈ ನಿರ್ಧಾರಗಳ ಮೂಲಕ ದೇಶದ ಸಹಕಾರ ಚಳವಳಿಯನ್ನು ಬಲಪಡಿಸಲು ಮತ್ತು ಸಬಲೀಕರಣಗೊಳಿಸಲು ಶ್ರಮಿಸಲಾಗಿದೆ. ಸುಮಾರು 80,000 ಗ್ರಾಮ ಮಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಗಣಕೀಕರಣಕ್ಕಾಗಿ ಸುಮಾರು 3,000 ಕೋಟಿ ರೂ. ವೆಚ್ಚದ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಇದರ ಜೊತೆಗೆ, ಗ್ರಾಮ ಮಟ್ಟದ ಸಹಕಾರಿ ಸಂಸ್ಥೆಗಳ ಆರ್ಥಿಕ ಚಟುವಟಿಕೆಗಳು ಮತ್ತು ಆದಾಯದ ಮೂಲಗಳನ್ನು ವಿಸ್ತರಿಸಲು ಅವುಗಳನ್ನು 25 ವಿವಿಧ ರೀತಿಯ ವ್ಯವಹಾರಗಳೊಂದಿಗೆ ಸಂಯೋಜಿಸಲಾಗಿದೆ.

ರೈತರಿಗಾಗಿ ಸಮಗ್ರ ಸಹಕಾರಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೂರು ಬಹುರಾಜ್ಯ ಸಹಕಾರಿ ಸಂಘಗಳನ್ನು ರಚಿಸಲಾಗಿದ್ದು, ದೇಶಾದ್ಯಂತ ಸುಮಾರು 70,000 ಸಹಕಾರಿ ಸಂಸ್ಥೆಗಳು ಸದಸ್ಯರಾಗಿ ಸೇರಿಕೊಂಡಿವೆ ಎಂದು ಶ್ರೀ ಮೊಹೋಲ್ ಹೇಳಿದರು. ಇದರ ಮೂಲಕ ರೈತರಿಗೆ ಹಾಗೂ ಸಹಕಾರಿ ಸಂಸ್ಥೆಗಳಿಗೆ ಹೊಸ ಅವಕಾಶಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ದೇಶದಲ್ಲಿ 1,500ಕ್ಕೂ ಹೆಚ್ಚು ನಗರ ಸಹಕಾರಿ ಬ್ಯಾಂಕುಗಳಿವೆ ಎಂದು ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹೇಳಿದರು. ಈ ಬ್ಯಾಂಕುಗಳು ಎದುರಿಸುತ್ತಿರುವ ತೊಂದರೆಗಳು ಮತ್ತು ಸಮಸ್ಯೆಗಳನ್ನು ಅರ್ಥೈಸಿಕೊಳ್ಳಲು, ರಿಸರ್ವ್ ಬ್ಯಾಂಕ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಅವುಗಳ ವ್ಯವಹಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಹಿಂದೆ ಯಾವುದೇ ಸಾಮಾನ್ಯ ಸಂಸ್ಥೆ ಇರಲಿಲ್ಲ. ಈ ಉದ್ದೇಶಕ್ಕಾಗಿ ದೇಶದಲ್ಲಿ 'ಎನ್ ಯು ಸಿ ಎಫ್ ಡಿ ಸಿ' ಎಂಬ ಪ್ರಧಾನ (ಅಂಬ್ರೆಲಾ) ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಅದರ ಮೂಲಕ ನಗರ ಸಹಕಾರಿ ಬ್ಯಾಂಕುಗಳ ಸುಗಮ ಕಾರ್ಯನಿರ್ವಹಣೆಗೆ ನೆರವು ನೀಡಲಾಗುತ್ತಿದೆ ಎಂದರು.

ಗ್ರಾಮೀಣ ಸಹಕಾರಿ ಬ್ಯಾಂಕುಗಳಿಗಾಗಿ 'ಸಹಕಾರ್ ಸಾರಥಿ' ಎಂಬ ಸ್ವತಂತ್ರ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀ ಮೊಹೋಲ್ ಹೇಳಿದರು. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಸಹಕಾರವನ್ನು ದೇಶದ ಪ್ರತಿಯೊಂದು ಭಾಗಕ್ಕೂ ಕೊಂಡೊಯ್ಯುವ, ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ, ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಹೆಚ್ಚು ವ್ಯವಸ್ಥಿತ ಮತ್ತು ಪರಿಣಾಮಕಾರಿಯನ್ನಾಗಿಸುವ ಹಾಗೂ ಸಹಕಾರ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.

ಮುಂದಿನ ಸುಮಾರು 10 ವರ್ಷಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಸುಮಾರು 17 ಲಕ್ಷ ಜನರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದು ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರು ಹೇಳಿದರು. ಈ ಉದ್ದೇಶದಿಂದ ದೇಶದ ಮೊದಲ ಸಹಕಾರಿ ವಿಶ್ವವಿದ್ಯಾಲಯ 'ತ್ರಿಭುವನ್' ಸಹಕಾರಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿದ್ದು, ಇದು ಸಹಕಾರ ಕ್ಷೇತ್ರಕ್ಕೆ ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದರು.

ಶ್ವೇತ ಕ್ರಾಂತಿಯ ಕ್ಷೇತ್ರದಲ್ಲೂ ಹೊಸ ಚೈತನ್ಯದೊಂದಿಗೆ ಕೆಲಸಗಳು ಪ್ರಾರಂಭವಾಗಿವೆ ಎಂದು ಶ್ರೀ ಮೊಹೋಲ್ ಹೇಳಿದರು. ಇದರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ನೇತೃತ್ವದಲ್ಲಿ 'ಸಹಕಾರ್ ಬಿಮಾ' ಮತ್ತು 'ಭಾರತ್ ಟ್ಯಾಕ್ಸಿ'ಯಂತಹ ಹಲವಾರು ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಉಪಕ್ರಮಗಳ ಮೂಲಕ ದೇಶದ ಸಹಕಾರ ಕ್ಷೇತ್ರವು ನಿರಂತರವಾಗಿ ಸಶಕ್ತಗೊಳ್ಳುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ (ಎನ್ ಸಿ ಡಿ ಸಿ) ಪಾತ್ರದ ಬಗ್ಗೆ ಉಲ್ಲೇಖಿಸಿದ ಕೇಂದ್ರ ಸಹಕಾರ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವರು, ಎನ್ ಸಿಡಿಸಿ ದೇಶಾದ್ಯಂತ ಇರುವ ಸಹಕಾರಿ ಸಂಸ್ಥೆಗಳಿಗೆ ಸಹಾಯ ಮತ್ತು ಆರ್ಥಿಕ ನೆರವು ನೀಡುತ್ತದೆ ಎಂದರು. ಸಹಕಾರಿ ಸಂಸ್ಥೆಗಳಿಗೆ ಆರ್ಥಿಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುವಲ್ಲಿ ಎನ್ ಸಿ ಡಿ ಸಿಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಮೂಲಕ ಸಹಕಾರ ಚಳವಳಿಯು ಇದೇ ರೀತಿ ಮುನ್ನಡೆಯುತ್ತದೆ ಎಂಬ ಭರವಸೆಯನ್ನು ಶ್ರೀ ಮೊಹೋಳ್ ವ್ಯಕ್ತಪಡಿಸಿದರು. 'ಸಹಕಾರದಿಂದ ಸಮೃದ್ಧಿ' ಎಂಬ ಸಂಕಲ್ಪವನ್ನು ನಿಜವಾಗಿಯೂ ಸಾಕಾರಗೊಳಿಸುವಲ್ಲಿ ಮತ್ತು ಈಡೇರಿಸುವಲ್ಲಿ ಇಂತಹ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2312600) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Punjabi