ಭೂವಿಜ್ಞಾನ ಸಚಿವಾಲಯ
azadi ka amrit mahotsav

`ಸ್ವಚ್ಛ ಸಾಗರ ಸುರಕ್ಷಿತ ಸಾಗರ’ವು ಸ್ವಚ್ಛ ಕರಾವಳಿ ಮತ್ತು ಸುರಕ್ಷಿತ ಸಮುದ್ರಗಳಿಗಾಗಿ ಇಡೀ ಸರ್ಕಾರ ಮತ್ತು ಇಡೀ ಸಮಾಜದ ಆಂದೋಲನವಾಗಿ ರೂಪುಗೊಂಡಿದೆ: ಡಾ. ಜಿತೇಂದ್ರ ಸಿಂಗ್


ಅಂತಾರಾಷ್ಟ್ರೀಯ ಕರಾವಳಿ ನೈರ್ಮಲ್ಯ ದಿನದ ಮುನ್ನಾದಿನದಂದು ಜುಹು ಬೀಚ್ ನಲ್ಲಿ ಕರಾವಳಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್, ಭಾರತದ ಇನ್ನೂ ಶೋಧಿಸದ ಸಾಗರ ಸಂಪತ್ತನ್ನು ಉಲ್ಲೇಖಿಸಿದರು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ ‘ದೀಪ್ ಓಷನ್ ಮಿಷನ್’ (ಆಳ ಸಾಗರ ಮಿಷನ್) ಭಾರತದ ನೀಲಿ ಅರ್ಥವ್ಯವಸ್ಥೆಯ ಮುಂಚೂಣಿ ಮಾರ್ಗದರ್ಶಕ ಎಂದು ಹೇಳಿದರು

ಭಾರತದ ಕರಾವಳಿ ಸ್ವಚ್ಛತಾ ಅಭಿಯಾನವು ಸ್ವಚ್ಛ ಸಮುದ್ರಗಳಿಗಾಗಿ ಸರ್ಕಾರ, ನಾಗರಿಕರು ಮತ್ತು ಸಾರ್ವಜನಿಕ ಗಣ್ಯರನ್ನು ಒಂದೇ ವೇದಿಕೆಗೆ ತಂದಿದೆ: ಡಾ. ಜಿತೇಂದ್ರ ಸಿಂಗ್

75 ದಿನಗಳ ಅಭಿಯಾನದಿಂದ ದೇಶವ್ಯಾಪಿ ಆಂದೋಲನದವರೆಗೆ: ʻಸ್ವಚ್ಛ ಸಾಗರ ಸುರಕ್ಷಿತ ಸಾಗರʼವು ಕಡಲಿನ ಸಂರಕ್ಷಣೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ವಿಸ್ತರಿಸಿದೆ: ಡಾ. ಜಿತೇಂದ್ರ ಸಿಂಗ್

ಈ ಅಭಿಯಾನವು ದೇಶಾದ್ಯಂತ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸಂಸ್ಥೆಗಳು, ವಿದ್ಯಾರ್ಥಿಗಳು, ಸ್ವಯಂಸೇವಕರು, ಎನ್ ಜಿ ಒಗಳು, ಚಲನಚಿತ್ರ ಮತ್ತು ಕ್ರೀಡಾ ಗಣ್ಯರನ್ನು ಒಗ್ಗೂಡಿಸಿದೆ

ಪ್ರಕಟಣಾ ದಿನಾಂಕ: 18 SEP 2026 4:39PM by PIB Bengaluru

ನಾಳೆ ಪ್ರಪಂಚದಾದ್ಯಂತ ಆಚರಿಸಲಾಗುತ್ತಿರುವ "ಅಂತಾರಾಷ್ಟ್ರೀಯ ಕರಾವಳಿ ನೈರ್ಮಲ್ಯ ದಿನ"ದ ಮುನ್ನಾದಿನದಂದು ಜುಹು ಬೀಚ್ ನಲ್ಲಿ ಕರಾವಳಿ ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ರಾಜ್ಯ ಸಚಿವರು (ಸ್ವತಂತ್ರ), ಮತ್ತು ಪ್ರಧಾನಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ರಾಜ್ಯ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು, ಭಾರತದ ಇನ್ನೂ ಶೋಧಿಸದ ಸಾಗರ ಸಂಪತ್ತಿನ ಮಹತ್ವದ ಬಗ್ಗೆ ಹೇಳಿದರು. ಅಲ್ಲದೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದ 'ದೀಪ್ ಓಷನ್ ಮಿಷನ್' ಭಾರತದ ನೀಲಿ ಅರ್ಥವ್ಯವಸ್ಥೆಯ ಮುಂಚೂಣಿ ಮಾರ್ಗದರ್ಶಕ ಎಂದು ಬಣ್ಣಿಸಿದರು.

ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಆಚರಣೆಯ ಸಂದರ್ಭದಲ್ಲಿ 2022ರಲ್ಲಿ ಪ್ರಾರಂಭಿಸಲಾದ 'ಸ್ವಚ್ಛ ಸಾಗರ ಸುರಕ್ಷಿತ ಸಾಗರ' ಅಭಿಯಾನವು, ಸ್ವಚ್ಛ ಕರಾವಳಿ ಮತ್ತು ಸುರಕ್ಷಿತ ಸಮುದ್ರಗಳಿಗಾಗಿ ಇಡೀ ಸರ್ಕಾರ ಹಾಗೂ ಇಡೀ ಸಮಾಜದ ಆಂದೋಲನವಾಗಿ ರೂಪುಗೊಂಡಿದೆ ಎಂದು ಸಚಿವರು ಹೇಳಿದರು.

75 ದಿನಗಳ ಅಂತರ ಸಚಿವಾಲಯಗಳ ಅಭಿಯಾನವಾಗಿ ಪ್ರಾರಂಭವಾದದ್ದು, ಸೆಪ್ಟೆಂಬರ್ ಮೂರನೇ ಶನಿವಾರದಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಕರಾವಳಿ ನೈರ್ಮಲ್ಯ ದಿನದ ಸುತ್ತಲಿನ ಸಾಪ್ತಾಹಿಕ ದೇಶವ್ಯಾಪಿ ಉಪಕ್ರಮವಾಗಿ ಬೆಳೆದಿದೆ. ಇದು ಭಾರತದ ಕರಾವಳಿ ಮತ್ತು ಸಾಗರ ಪರಿಸರವನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ನಾಗರಿಕರನ್ನು ಒಂದೇ ವೇದಿಕೆಗೆ ತಂದಿದೆ. 2026ರ ಅಭಿಯಾನವನ್ನು ಸೆಪ್ಟೆಂಬರ್ 12 ರಿಂದ 19 ರವರೆಗೆ ನಡೆಸಲಾಗುತ್ತಿದೆ.

ಅಂತಾರಾಷ್ಟ್ರೀಯ ಕರಾವಳಿ ನೈರ್ಮಲ್ಯ ದಿನದ ಮುನ್ನಾದಿನದಂದು ಮುಂಬೈನ ಜುಹು ಬೀಚಿನಲ್ಲಿ ಆಯೋಜಿಸಲಾದ ಕರಾವಳಿ ಸ್ವಚ್ಛತಾ ಕಾರ್ಯಕ್ರಮದ ನೇತೃತ್ವವನ್ನು ಡಾ. ಜಿತೇಂದ್ರ ಸಿಂಗ್ ವಹಿಸಿದ್ದರು. ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಟಿ. ಶ್ರೀನಿವಾಸ ಕುಮಾರ್ ತುಮ್ಮಲ ಮತ್ತು ಬಿಸಿಸಿಐ ಅಧ್ಯಕ್ಷರಾದ ಮಿಥುನ್ ಮನ್ಹಾಸ್, ಭೂ ವಿಜ್ಞಾನ ಸಚಿವಾಲಯ ಮತ್ತು ಅದರ ಸಂಸ್ಥೆಗಳ ನಿರ್ದೇಶಕರು ಮತ್ತು ಹಿರಿಯ ಅಧಿಕಾರಿಗಳು, ಸಾರ್ವಜನಿಕ ಪ್ರತಿನಿಧಿಗಳು, ಗಣ್ಯರು, ಸ್ವಯಂಸೇವಕರು ಹಾಗೂ ಇತರ ಭಾಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕ 'ಸಾಗರ ಪ್ರತಿಜ್ಞೆ' ಯನ್ನು ಮಾಡಲಾಯಿತು, ನಂತರ ಡಾ. ಜಿತೇಂದ್ರ ಸಿಂಗ್ ಅವರು ಅಧಿಕಾರಿಗಳು ಮತ್ತು ಸ್ವಯಂಸೇವಕರೊಂದಿಗೆ ಸೇರಿ ದಂಡೆಯಿಂದ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯವನ್ನು ತೆಗೆದುಹಾಕುವ ಸ್ವಚ್ಛತಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

ಈ ಅಭಿಯಾನವು ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು, ಭಾರತೀಯ ಕರಾವಳಿ ಪಡೆ, ಭಾರತೀಯ ನೌಕಾಪಡೆ, ವಿದ್ಯಾರ್ಥಿಗಳು, ಎನ್ ಜಿ ಒಗಳು, ಸ್ವಯಂಸೇವಕರು ಮತ್ತು ಸ್ಥಳೀಯ ಸಮುದಾಯಗಳನ್ನು ಒಗ್ಗೂಡಿಸಿದೆ. ಚಲನಚಿತ್ರ ಗಣ್ಯರು, ಸಾರ್ವಜನಿಕ ಪ್ರತಿನಿಧಿಗಳು ಮತ್ತು ಕ್ರೀಡಾಪಟುಗಳು ಕೂಡ ಈ ಉಪಕ್ರಮದಲ್ಲಿ ಸೇರಿಕೊಂಡಿದ್ದು, ಅಭಿಯಾನಕ್ಕೆ ವಿಶಾಲವಾದ ಸಾಮಾಜಿಕ ವ್ಯಾಪ್ತಿಯನ್ನು ನೀಡಿದ್ದಾರೆ. ಈ ವರ್ಷ ಜುಹು ಬೀಚಿನಲ್ಲಿ ಬಿಸಿಸಿಐ ಅಧ್ಯಕ್ಷರಾದ ಮಿಥುನ್ ಮನ್ಹಾಸ್ ಅವರ ಭಾಗವಹಿಸುವಿಕೆಯು ಸಾಗರ ಸಂರಕ್ಷಣೆಗಾಗಿ ಸಮಾಜದ ವಿವಿಧ ವರ್ಗಗಳನ್ನು ಒಂದೆಡೆ ತರುವ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ.

ಈ ಉಪಕ್ರಮವು ಭಾರತವು ತನ್ನ ವಿಶಾಲವಾದ ಸಮುದ್ರದ ವಲಯದೊಂದಿಗೆ ಹೊಂದಿರುವ ಹೆಚ್ಚುತ್ತಿರುವ ತೊಡಗಿಸಿಕೊಳ್ಳುವಿಕೆಯಲ್ಲಿ ಬೇರೂರಿದೆ. ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ದೀಪ್ ಓಷನ್ ಮಿಷನ್' ಘೋಷಿಸಿದ ನಂತರ, ಭಾರತವು ಆಳವಾದ ಸಾಗರವನ್ನು ಪರಿಶೋಧಿಸಲು ಮತ್ತು ಅದರ ಸಂಪನ್ಮೂಲಗಳು ಹಾಗೂ ಪರಿಸರ ವ್ಯವಸ್ಥೆಗಳನ್ನು ಅರಿಯಲು ತನ್ನ ವೈಜ್ಞಾನಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುತ್ತಿದೆ. ಲೋಹಗಳು, ಖನಿಜಗಳು, ಮೀನುಗಾರಿಕೆ, ಸಾಗರ ಜೀವವೈವಿಧ್ಯತೆ ಮತ್ತು ಜೈವಿಕ ಸಂಪನ್ಮೂಲಗಳ ವಿಷಯದಲ್ಲಿ ಸಾಗರಗಳು ಮಹತ್ವದ ಸಾಮರ್ಥ್ಯವನ್ನು ಹೊಂದಿವೆ. ಹೀಗಾಗಿ ಸಾಗರ ಸಂಪನ್ಮೂಲಗಳ ವೈಜ್ಞಾನಿಕ ಶೋಧನೆ, ಜವಾಬ್ದಾರಿಯುತ ಬಳಕೆ ಮತ್ತು ಸಂರಕ್ಷಣೆಯು ಭಾರತದ ದೀರ್ಘಾವಧಿಯ ಅಭಿವೃದ್ಧಿಗೆ ಅತ್ಯಂತ ಮುಖ್ಯವಾಗಿದೆ.

ಸಾಗರ ಪರಿಸರ ವ್ಯವಸ್ಥೆಯ ಆರೋಗ್ಯದ ರಕ್ಷಣೆಯೊಂದಿಗೆ ಮಾತ್ರ ಭಾರತದ ಕಡಲ ಸಂಪನ್ಮೂಲಗಳ ಪ್ರಯೋಜನಗಳನ್ನು ಪಡೆಯಬಹುದು ಎಂದು ಸಚಿವರು ಹೇಳಿದರು. ಆದ್ದರಿಂದ ಸ್ವಚ್ಛವಾದ ಕಡಲತೀರಗಳು, ಪ್ಲಾಸ್ಟಿಕ್ ಮಾಲಿನ್ಯದ ಕಡಿತಗೊಳಿಸುವಿಕೆ ಮತ್ತು ಹೆಚ್ಚಿನ ಸಾರ್ವಜನಿಕ ಜಾಗೃತಿಯು ಆರೋಗ್ಯಕರ ಸಾಗರಗಳನ್ನು ನಿರ್ವಹಿಸಲು ಮತ್ತು ಸಾಗರ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯವಾಗಿದೆ. ಈ ಅಭಿಯಾನವು ಈ ಜಾಗೃತಿಯನ್ನು ನಿರಂತರ ನಾಗರಿಕ ಭಾಗವಹಿಸುವಿಕೆ ಮತ್ತು ಸಾಮೂಹಿಕ ಕಾರ್ಯವೈಖರಿಯಾಗಿ ಪರಿವರ್ತಿಸಲು ಶ್ರಮಿಸುತ್ತದೆ.

ಸುಮಾರು 11,098 ಕಿಮೀ ಉದ್ದದ ಭಾರತದ ಕರಾವಳಿಯು ತನ್ನ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವ್ಯಾ;ಪಿಸಿದೆ ಮತ್ತು ವೈವಿಧ್ಯಮಯ ಪರಿಸರ ವ್ಯವಸ್ಥೆಗಳು, ಸಮುದಾಯಗಳು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತದೆ. ಸಾಗರ ತ್ಯಾಜ್ಯವನ್ನು ನಿರ್ವಹಿಸಲು ಮತ್ತು ಸೂಕ್ಷ್ಮ ಕರಾವಳಿ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸರ್ಕಾರಗಳು, ವೈಜ್ಞಾನಿಕ ಸಂಸ್ಥೆಗಳು, ಕರಾವಳಿ ಸಮುದಾಯಗಳು ಮತ್ತು ನಾಗರಿಕರು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕಾದ ತುರ್ತು ಅಗತ್ಯವಿದೆ.

ಸೆಪ್ಟೆಂಬರ್ 12 ರಿಂದ 19 ರವರೆಗೆ ನಡೆಯುತ್ತಿರುವ 'ಸ್ವಚ್ಛ ಸಾಗರ ಸುರಕ್ಷಿತ ಸಾಗರ'ದ 2026ರ ಆವೃತ್ತಿಯು ದೇಶಾದ್ಯಂತ ಕರಾವಳಿ ಸ್ವಚ್ಛತಾ ಅಭಿಯಾನಗಳು ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ. ಸಾಗರ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪರಿಸರ ಅಭ್ಯಾಸಗಳನ್ನು ಉತ್ತೇಜಿಸುವ ದೇಶವ್ಯಾಪಿ ಪ್ರಯತ್ನದ ಭಾಗವಾಗಿ ಈ ಅಭಿಯಾನವು ನಾಗರಿಕರು, ವಿದ್ಯಾರ್ಥಿಗಳು, ಕರಾವಳಿ ಸಮುದಾಯಗಳು, ಶಿಕ್ಷಣ ಸಂಸ್ಥೆಗಳು, ಎನ್ಜಿಒಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರುತ್ತಿದೆ. ಭೂ ವಿಜ್ಞಾನ ಸಚಿವಾಲಯ ಮತ್ತು ಅದರ ಸಂಸ್ಥೆಗಳು ಸಾಗರ ತ್ಯಾಜ್ಯ ಮತ್ತು ಕರಾವಳಿ ಪರಿಸರ ರಕ್ಷಣೆಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಸಾರ್ವಜನಿಕ ಸಂಪರ್ಕ ಉಪಕ್ರಮಗಳ ಮೂಲಕ ಅಭಿಯಾನಕ್ಕೆ ಬೆಂಬಲ ನೀಡುತ್ತಿವೆ.

'ಸಾಗರ ಪ್ರಹರಿ' ವೇದಿಕೆ ಮೂಲಕ ನಾಗರಿಕರ ಭಾಗವಹಿಸುವಿಕೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದ್ದು, ಇದು ಅಭಿಯಾನದಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಸಾಗರ ತ್ಯಾಜ್ಯದ ದಾಖಲೆಯನ್ನು ರಚಿಸಿವುದಕ್ಕೆ ಬೆಂಬಲ ನೀಡುತ್ತದೆ. ಈ ಉಪಕ್ರಮವು ಸಾಗರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮತ್ತು ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸುವಲ್ಲಿ ವೈಜ್ಞಾನಿಕ ತಿಳುವಳಿಕೆಯನ್ನು ಸಾರ್ವಜನಿಕ ಭಾಗವಹಿಸುವಿಕೆಯೊಂದಿಗೆ ಸಂಯೋಜಿಸುವ ದೊಡ್ಡ ಉದ್ದೇಶಕ್ಕೆ ಪೂರಕವಾಗಿದೆ.

ಜುಹು ಬೀಚ್ ಕಾರ್ಯಕ್ರಮವು ಭಾರತದ ಕರಾವಳಿಯನ್ನು ರಕ್ಷಿಸುವ ಜಂಟಿ ಪ್ರಯತ್ನದಲ್ಲಿ ಸರ್ಕಾರಿ ಪ್ರತಿನಿಧಿಗಳು, ಕ್ರೀಡಾಪಟುಗಳು, ಸಾರ್ವಜನಿಕ ಗಣ್ಯರು, ಸ್ವಯಂಸೇವಕರು ಮತ್ತು ನಾಗರಿಕರು ಒಂದಾಗುವಂತೆ ಮಾಡಿದೆ. ಸಾಮೂಹಿಕ ಪ್ರತಿಜ್ಞೆ ಮತ್ತು ಸ್ವಚ್ಛತಾ ಚಟುವಟಿಕೆಯು ಭಾರತದ ತೀರಗಳನ್ನು ಸ್ವಚ್ಛವಾಗಿಡುವುದು ಮತ್ತು ಅದರ ಸಮುದ್ರಗಳನ್ನು ಸುರಕ್ಷಿತವಾಗಿಡುವುದು ಪ್ರತಿಯೊಬ್ಬರ ಹಂಚಿಕೆಯ ಜವಾಬ್ದಾರಿಯಾಗಿದೆ ಹಾಗೂ ಇದು ಒಂದೇ ದಿನಕ್ಕೆ ಅಥವಾ ಅಭಿಯಾನಕ್ಕೆ ಸೀಮಿತವಾಗದೆ ನಿರಂತರವಾಗಿ ಮುಂದುವರಿಯಬೇಕು ಎಂಬ ಸಂದೇಶವನ್ನು ಸ್ಪಷ್ಟವಾಗಿ ಬಲಪಡಿಸಿತು.

'ಸ್ವಚ್ಛ ಸಾಗರ ಸುರಕ್ಷಿತ ಸಾಗರ' ಅಭಿಯಾನವು ಭಾರತದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಪ್ರಾರಂಭವಾದ ಸಾಮೂಹಿಕ ಕ್ರಿಯೆಯ ಸ್ಪೂರ್ತಿಯ ಆಧಾರದ ಮೇಲೆ ಬೆಳೆಯುತ್ತಿದ್ದು, ಸ್ವಚ್ಛ ಕಡಲತೀರಗಳು, ಆರೋಗ್ಯಕರ ಸಾಗರಗಳು ಮತ್ತು ಹೆಚ್ಚು ಸುಸ್ಥಿರ ಕಡಲ ಭವಿಷ್ಯಕ್ಕಾಗಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಬಲಪಡಿಸುತ್ತಿದೆ.

ಚಿತ್ರ - ಶುಕ್ರವಾರ ಮುಂಬೈನ ಜುಹು ಬೀಚ್‌ನಲ್ಲಿ ಕರಾವಳಿ ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್.

 

*****


(ಪ್ರಕಟಣೆ ಐ.ಡಿ.: 2312151) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English