ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಸೇವಾ ದಿವಸ್ ಅಂಗವಾಗಿ ಕೇಂದ್ರ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರಿಂದ 'ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಬೆಳಗಿಸುವ ಕಾರ್ಯಕ್ರಮ
`ಸೇವಾ ಸಂಕಲ್ಪ ಅಭಿಯಾನದ’ ಅಡಿಯಲ್ಲಿ ನಡೆದ ಸಮಾರಂಭವು, ಮಾದಕ ದ್ರವ್ಯ ವ್ಯಸನದಿಂದ ಬಾಧಿತರಾದ ವ್ಯಕ್ತಿಗಳ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಮಾಜಕ್ಕೆ ಮರು ಸೇರ್ಪಡೆಗೆ ಸರ್ಕಾರದ ಬದ್ಧತೆಯನ್ನು ಎತ್ತಿಹಿಡಿಯುತ್ತದೆ
ಪ್ರಕಟಣಾ ದಿನಾಂಕ:
17 SEP 2026 9:46PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಇಂದು ರಾಜಧಾನಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸೇವಾ ದಿವಸ್ (ಸೇವಾ ದಿನ) ಅಂಗವಾಗಿ ‘ಸೇವಾ ಸಂಕಲ್ಪ ಅಭಿಯಾನ’ದ ಅಡಿಯಲ್ಲಿ ವಿಶೇಷ ಸಮಾರಂಭವನ್ನು ಆಯೋಜಿಸಿತ್ತು.
'ಆಶೀರ್ವಾದ್ ಕಾ ದಿಯಾ' (ಆಶೀರ್ವಾದದ ದೀಪ) ಉಪಕ್ರಮದ ಭಾಗವಾಗಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಡಾ. ವೀರೇಂದ್ರ ಕುಮಾರ್ ಅವರು ಮಾದಕ ದ್ರವ್ಯ ವ್ಯಸನಕ್ಕೆ ಯಶಸ್ವಿಯಾಗಿ ಚಿಕಿತ್ಸೆ ಮತ್ತು ಪುನರ್ವಸತಿ ಪಡೆದ ವ್ಯಕ್ತಿಗಳೊಂದಿಗೆ ಸೇರಿ ಸಾಂಕೇತಿಕ ದೀಪವನ್ನು ಬೆಳಗಿಸಿದರು.
ಈ ಸಮಾರಂಭವು ಮಾದಕ ದ್ರವ್ಯ ವ್ಯಸನದಿಂದ ಬಾಧಿತರಾದ ವ್ಯಕ್ತಿಗಳು ಮತ್ತು ಅವರ ಕುಟುಂಬಗಳಿಗೆ ಭರವಸೆ, ಘನತೆ, ಸ್ಥಿರತೆ ಮತ್ತು ಚೇತರಿಕೆಯ ಬಲವಾದ ಸಂದೇಶವನ್ನು ರವಾನಿಸಿತು. ಜೊತೆಗೆ, ಮಾದಕ ದ್ರವ್ಯಗಳ ಬೇಡಿಕೆಯನ್ನು ಕಡಿಮೆ ಮಾಡುವ ಹಾಗೂ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಮಾಜಕ್ಕೆ ಮರುಸೇರ್ಪಡಿಸುವ ಪ್ರಯತ್ನಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು.

ದೆಹಲಿ-ಎನ್ ಸಿಆರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಅನುದಾನಿತ ಸಂಸ್ಥೆಗಳ ಮೂಲಕ ಚಿಕಿತ್ಸೆ ಮತ್ತು ಪುನರ್ವಸತಿ ಬೆಂಬಲವನ್ನು ಪಡೆದ ಸುಮಾರು 250 ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳು ಈ ಸಮಾರಂಭದಲ್ಲಿ ಕೇಂದ್ರ ಸಚಿವರೊಂದಿಗೆ ಭಾಗವಹಿಸಿದ್ದರು.
ಅವರ ಭಾಗವಹಿಸುವಿಕೆಯು ಚೇತರಿಕೆ ಮತ್ತು ಮರು-ಸೇರ್ಪಡೆಯ ಸಾಧ್ಯತೆಗಳನ್ನು ತೋರಿಸಿತು. ಮಾದಕ ದ್ರವ್ಯ ವ್ಯಸನದಿಂದ ಬಾಧಿತರಾದ ವ್ಯಕ್ತಿಗಳು ಗೌರವದಿಂದ ತಮ್ಮ ಜೀವನವನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಮತ್ತು ಸಮಾಜದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಮಯೋಚಿತ ವೃತ್ತಿಪರ ಚಿಕಿತ್ಸೆ, ಸುಸ್ಥಿರ ಪುನರ್ವಸತಿ, ಕುಟುಂಬದ ಬೆಂಬಲ ಮತ್ತು ಸಮುದಾಯದ ಭಾಗವಹಿಸುವಿಕೆ ಎಷ್ಟು ಮುಖ್ಯ ಎಂಬುದನ್ನು ಇದು ಉಲ್ಲೇಖಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ವೀರೇಂದ್ರ ಕುಮಾರ್ ಅವರು, ಮಾದಕ ದ್ರವ್ಯ ವ್ಯಸನದ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಮಾಜಕ್ಕೆ ಮರು ಸೇರ್ಪಡೆಯ ಪ್ರಯತ್ನಗಳನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಚೇತರಿಕೆಯ ಪ್ರಯಾಣವು ಭರವಸೆ, ಧೈರ್ಯ ಮತ್ತು ಹೊಸ ಆರಂಭದ ಪ್ರಯಾಣವಾಗಿದೆ. 'ಆಶೀರ್ವಾದದ ದೀಪ'ದಂತಹ ಉಪಕ್ರಮಗಳ ಮೂಲಕ, ಮಾದಕ ದ್ರವ್ಯ ವ್ಯಸನವನ್ನು ಗೆದ್ದ ವ್ಯಕ್ತಿಗಳು ಘನತೆ, ಸ್ವೀಕಾರ ಮತ್ತು ತಮ್ಮ ಜೀವನವನ್ನು ಪುನರ್ ನಿರ್ಮಾಣ ಮಾಡಿಕೊಳ್ಳಲು ಪ್ರತಿಯೊಂದು ಅವಕಾಶಕ್ಕೂ ಅರ್ಹರು ಎಂಬ ಸಂದೇಶವನ್ನು ಬಲಪಡಿಸಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.
ವೃತ್ತಿಪರ ಚಿಕಿತ್ಸೆ ಮತ್ತು ಸುಸ್ಥಿರ ಪುನರ್ವಸತಿಯೊಂದಿಗೆ ಬೆಂಬಲ ನೀಡುವ ಕುಟುಂಬ ಮತ್ತು ಸಮುದಾಯದ ವಾತಾವರಣವು ಚೇತರಿಕೆ ಮತ್ತು ಸಮಾಜಕ್ಕೆ ಮರು ಸೇರ್ಪಡೆಯಡೆಗೆ ಸಾಗುವ ಪ್ರಯಾಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಡಾ. ಕುಮಾರ್ ಹೇಳಿದರು.
ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ಅವರ ಕುಟುಂಬಗಳು ಮತ್ತು ಸಮುದಾಯಗಳು ಬೆಂಬಲ ನೀಡುವ ಹಾಗೂ ಅವರು ಗೌರವಾನ್ವಿತ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅವಕಾಶಗಳನ್ನು ಒದಗಿಸುವಂತಹ ಅನುಕೂಲಕರ ಮತ್ತು ಕಳಂಕ-ರಹಿತ ವಾತಾವರಣವನ್ನು ನಿರ್ಮಿಸುವುದರ ಪ್ರಾಮುಖ್ಯತೆಯನ್ನು ಸಚಿವರು ಒತ್ತಿಹೇಳಿದರು.

ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳ ಜೊತೆಗೂಡಿ ‘ಆಶೀರ್ವಾದದ ದೀಪ’ ಬೆಳಗಿಸಿದ್ದು ಭರವಸೆ, ನವೀಕರಣ ಮತ್ತು ಹೊಸ ಆರಂಭದ ಸಾಂಕೇತಿಕ ಅಭಿವ್ಯಕ್ತಿಯಾಗಿ ಸೇವೆ ಸಲ್ಲಿಸಿತು. ಚೇತರಿಕೆ ಸಾಧ್ಯವಿದೆ ಮತ್ತು ನಿರಂತರ ಆರೈಕೆ, ವೃತ್ತಿಪರ ಸಹಾಯ, ಕುಟುಂಬದ ಬೆಂಬಲ ಮತ್ತು ಸಾಮೂಹಿಕ ಸಮುದಾಯದ ಕ್ರಿಯೆಯು ಪುನರ್ವಸತಿ ಪ್ರಕ್ರಿಯೆಯ ಪ್ರಮುಖ ಅಂಶಗಳಾಗಿವೆ ಎಂಬ ಸಂದೇಶವನ್ನು ಇದು ಪ್ರತಿಪಾದಿಸಿತು.

ಈ ಸಮಾರಂಭವು ಸೇವಾ ದಿವಸ್ (ಸೇವಾ ದಿನ) ಅಂಗವಾಗಿ ದೇಶಾದ್ಯಂತ ಕೈಗೊಳ್ಳಲಾಗುತ್ತಿರುವ ವ್ಯಾಪಕವಾದ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿತ್ತು. ಈ ಉಪಕ್ರಮವು ಸೇವಾ ಆಧಾರಿತ, ಒಳಗೊಳ್ಳುವಿಕೆಯ ಮತ್ತು ಜನಕೇಂದ್ರಿತ ಆಡಳಿತದ ಮೇಲೆ ಸರ್ಕಾರದ ಒತ್ತು ನೀಡುವುದನ್ನು ಪ್ರತಿಬಿಂಬಿಸುತ್ತದೆ.
ಕಾರ್ಯಕ್ರಮದ ಸಂದರ್ಭದಲ್ಲಿ, ಡಾ. ವೀರೇಂದ್ರ ಕುಮಾರ್ ಅವರು ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೀವನ ಮತ್ತು ಪ್ರಯಾಣವನ್ನು ಬಿಂಬಿಸುವ ಮೂಲ ವರ್ಣಚಿತ್ರಗಳ ವಿಶೇಷ ಪ್ರದರ್ಶನಕ್ಕೂ ಭೇಟಿ ನೀಡಿದರು.
ಪ್ರಧಾನಮಂತ್ರಿಯವರ ಸಾರ್ವಜನಿಕ ಜೀವನದ ವಿವಿಧ ಆಯಾಮಗಳು ಮತ್ತು ಮೈಲಿಗಲ್ಲುಗಳನ್ನು ಬಿಂಬಿಸುವ 76 ಮೂಲ ಕಲಾಕೃತಿಗಳ ಸಂಗ್ರಹದ ಮೂಲಕ ಅವರ ಪ್ರಯಾಣವನ್ನು ಪ್ರಸ್ತುತಪಡಿಸುವ ಈ ಪ್ರದರ್ಶನವು ಆರು ದಿನಗಳ ಕಾಲ ನಡೆಯಲಿದ್ದು, ಈ ತಿಂಗಳ 20 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ. ಸಂದೀಪ್ ಆರ್. ರಾಥೋಡ್, ನಿರ್ದೇಶಕ ಶ್ರೀ ಆಸ್ತಿಕ್ ಕುಮಾರ್ ಪಾಂಡೆ, ಡಿಎಐಸಿ ನಿರ್ದೇಶಕ ಶ್ರೀ ಆಕಾಶ್ ಪಾಟೀಲ್, ಸಚಿವಾಲಯದ ಹಿರಿಯ ಅಧಿಕಾರಿಗಳು, ವಿವಿಧ ವರ್ಗದ ಜನರು, ನಾಗರಿಕ ಸಮಾಜದ ಸದಸ್ಯರು ಮತ್ತು ಇತರ ಪಾಲುದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ, ಚಿಕಿತ್ಸೆ, ಪುನರ್ವಸತಿ ಮತ್ತು ಸಮಾಜಕ್ಕೆ ಮರು ಸೇರ್ಪಡೆಗಾಗಿ ತನ್ನ ಕಾರ್ಯಕ್ರಮಗಳ ಮೂಲಕ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಮಾದಕ ದ್ರವ್ಯ ವ್ಯಸನದಿಂದ ಬಾಧಿತರಾದ ವ್ಯಕ್ತಿಗಳಿಗೆ ಸಾಂಸ್ಥಿಕ ಬೆಂಬಲವನ್ನು ಬಲಪಡಿಸಲು ಮತ್ತು ಅವರು ಘನತೆಯುಕ್ತ ಹಾಗೂ ಫಲಪ್ರದದಾಯಕ ಉತ್ಪಾದಕ ಜೀವನಕ್ಕೆ ಹಿಂತಿರುಗಲು ಅನುಕೂಲ ಮಾಡಿಕೊಡಲು ನಿರಂತರವಾಗಿ ಶ್ರಮಿಸುತ್ತಿದೆ.
*****
(ಪ್ರಕಟಣೆ ಐ.ಡಿ.: 2311739)
ವಿಸಿಟರ್ ಕೌಂಟರ್ : 5