ಬುಡಕಟ್ಟು ವ್ಯವಹಾರಗಳ ಸಚಿವಾಲಯ
azadi ka amrit mahotsav

ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನದ ಕುರಿತು ಮೊದಲ ಪ್ರಾದೇಶಿಕ ಪರಿಶೀಲನಾ ಸಮ್ಮೇಳನ ಬೆಂಗಳೂರಿನಲ್ಲಿ ಆಯೋಜನೆ


ಹಕ್ಕುಗಳ ವಿಲೇವಾರಿ, ಸಮುದಾಯ ಅರಣ್ಯ ಹಕ್ಕುಗಳು ಮತ್ತು ಆವಾಸಸ್ಥಾನದ ಹಕ್ಕುಗಳ ಮಾನ್ಯತೆಯಲ್ಲಿನ ಪ್ರಗತಿಯ ಕುರಿತು ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ನೀಡಿದ ದಕ್ಷಿಣದ ರಾಜ್ಯಗಳು; ಕಾಲಮಿತಿಯ ಮಾರ್ಗಸೂಚಿಗೆ ಕರೆ

ಪ್ರಕಟಣಾ ದಿನಾಂಕ: 10 SEP 2026 7:39PM by PIB Bengaluru

ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು (MoTA) ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ, 2006 (FRA) ರ ಅನುಷ್ಠಾನದ ಕುರಿತು ಮೊದಲ ಪ್ರಾದೇಶಿಕ ಪರಿಶೀಲನಾ ಸಮ್ಮೇಳನವನ್ನು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ನಡೆಸಿತು. ದಕ್ಷಿಣದ ಐದು ರಾಜ್ಯಗಳಾದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದ ಬುಡಕಟ್ಟು ಕಲ್ಯಾಣ, ಕಂದಾಯ ಮತ್ತು ಅರಣ್ಯ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಈ ಸಮ್ಮೇಳನವು ಒಂದೇ ವೇದಿಕೆಗೆ ತಂದು, ಕಾಯ್ದೆಯ ಅನುಷ್ಠಾನದ ಸ್ಥಿತಿಗತಿಗಳನ್ನು ಪರಿಶೀಲಿಸಿತು ಹಾಗೂ ಸಂಯೋಜಿತ ರೀತಿಯಲ್ಲಿ ಮುನ್ನಡೆಯುವ ಕುರಿತು ಸುದೀರ್ಘ ಚರ್ಚೆ ನಡೆಸಿತು.

ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಅವರು ಸಮ್ಮೇಳನದ ಉದ್ದೇಶಗಳನ್ನು ಸಭೆಗೆ ವಿವರಿಸಿದರು ಮತ್ತು ಗಣ್ಯರು ಹಾಗೂ ಪ್ರತಿನಿಧಿಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು. ತದನಂತರ ಕರ್ನಾಟಕದ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಕಲಾವಿದರಿಂದ ಸಾಂಪ್ರದಾಯಿಕ ಬುಡಕಟ್ಟು ನೃತ್ಯ ಪ್ರದರ್ಶನ ನಡೆಯಿತು. ಇದರ ನಂತರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ದಿಕ್ಸೂಚಿ ಭಾಷಣ ಮತ್ತು ಸಚಿವಾಲಯದ ಕಾರ್ಯದರ್ಶಿಗಳ ವಿಶೇಷ ಭಾಷಣ ನೆರವೇರಿತು. 2026 ರ ಜೂನ್ 30 ರವರೆಗೆ ರಾಷ್ಟ್ರಮಟ್ಟದಲ್ಲಿ 54 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಅರಣ್ಯ ಹಕ್ಕುಗಳ (IFR) ಹಕ್ಕುಸ್ವಾಮ್ಯ ಕೋರಿಕೆಗಳು/ಅರ್ಜಿಗಳು ಸ್ವೀಕೃತವಾಗಿದ್ದು, ಸುಮಾರು 238 ಲಕ್ಷ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಮೇಲೆ ಸರಿಸುಮಾರು 25.42 ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗಿದೆ, ಆದರೆ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ ಮತ್ತು 19,845 ಸಮುದಾಯ ಅರಣ್ಯ ಹಕ್ಕುಗಳನ್ನು (CFR) ಮಾನ್ಯ ಮಾಡಲಾಗಿದೆ ಎಂದು ಜಂಟಿ ಕಾರ್ಯದರ್ಶಿಗಳು ಸಮ್ಮೇಳನಕ್ಕೆ ತಿಳಿಸಿದರು; ಬಾಕಿ ಇರುವ ಅರ್ಜಿಗಳ ಕಾಲಮಿತಿಯ ವಿಲೇವಾರಿ, ವಿಶೇಷವಾಗಿ ನಿಕೃಷ್ಟ ಸ್ಥಿತಿಯಲ್ಲಿರುವ ಬುಡಕಟ್ಟು ಗುಂಪುಗಳ (PVTGs) ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳು ಮತ್ತು ಆವಾಸಸ್ಥಾನದ ಹಕ್ಕುಗಳ (Habitat Rights) ಮಾನ್ಯತೆ ಹಾಗೂ ಗುರುತಿಸಲಾದ ಹಕ್ಕುಗಳನ್ನು ಜಮೀನು ದಾಖಲೆಗಳಲ್ಲಿ ಸೇರ್ಪಡೆಗೊಳಿಸುವುದಕ್ಕೆ ಆದ್ಯತೆ ನೀಡುವಂತೆ ದಕ್ಷಿಣದ ರಾಜ್ಯಗಳಿಗೆ ಕರೆ ನೀಡಲಾಯಿತು. ತಮ್ಮ ವಿಶೇಷ ಭಾಷಣದಲ್ಲಿ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು, ಹಕ್ಕುಗಳ ಮಾನ್ಯತೆಯು ಭೂಮಿಯ ಒಡೆತನದ ಭದ್ರತೆ, ಸುಸ್ಥಿರ ಜೀವನೋಪಾಯ ಮತ್ತು ಅಭಿವೃದ್ಧಿ ಯೋಜನೆಗಳೊಂದಿಗೆ ಸಂಯೋಜನೆಗೊಳ್ಳುವುದಕ್ಕೆ ಪರಿವರ್ತನೆಯಾಗಬೇಕು, ಇದು ಬುಡಕಟ್ಟು ಸಮುದಾಯಗಳ ಸಬಲೀಕರಣಕ್ಕೆ ನಾಂದಿ ಹಾಡುತ್ತದೆ ಎಂದು ಒತ್ತಿಹೇಳಿದರು. ಗ್ರಾಮಸಭಾ-ಚಾಲಿತ ಅರಣ್ಯ ಆಡಳಿತ ಮತ್ತು ಸಮುದಾಯ-ಆಧಾರಿತ ಜೀವನೋಪಾಯವನ್ನು ಬಲಪಡಿಸುವ ಸಾಮರ್ಥ್ಯವನ್ನು ಗುರುತಿಸಿ, ಸಮುದಾಯ ಅರಣ್ಯ ಹಕ್ಕುಗಳು ಮತ್ತು ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಕಾರ್ಯದರ್ಶಿಗಳು ಕರೆ ನೀಡಿದರು. ಜೊತೆಗೆ, ಅರಣ್ಯ ಇಲಾಖೆಯ ಕಾರ್ಯಾಚರಣೆ ಮತ್ತು ನಿರ್ವಹಣಾ ಯೋಜನೆಗಳೊಂದಿಗೆ ಸಮುದಾಯ ಅರಣ್ಯ ಸಂಪನ್ಮೂಲ ನಿರ್ವಹಣಾ ಯೋಜನೆಗಳ ಸಂಯೋಜನೆಯನ್ನು ಸುಗಮಗೊಳಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಜಂಟಿ ಸಲಹೆಯನ್ನು ಉಲ್ಲೇಖಿಸಿದರು. ಪವಿತ್ರ ಆವಾಸಸ್ಥಾನದ ಹಕ್ಕುಗಳು (Habitat rights) ವಿಶೇಷವಾಗಿ ನಿಕೃಷ್ಟ ಸ್ಥಿತಿಯಲ್ಲಿರುವ ಬುಡಕಟ್ಟು ತಂಡಗಳ (PVTGs) ಸಂಸ್ಕೃತಿ, ಜೀವನೋಪಾಯ ಮತ್ತು ಸಾಂಪ್ರದಾಯಿಕ ಜ್ಞಾನದ ಜೀವಂತ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ ಎಂಬುದನ್ನು ಎತ್ತಿಹಿಡಿದ ಕಾರ್ಯದರ್ಶಿಗಳು, ಅವುಗಳ ಮಾನ್ಯತೆಯನ್ನು ಸೂಕ್ಷ್ಮತೆಯಿಂದ ಮತ್ತು ಸಮುದಾಯದ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ಕೈಗೊಳ್ಳಬೇಕೆಂದು ಕರೆ ನೀಡಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ (MoTA) ಅರಣ್ಯ ಹಕ್ಕುಗಳ ಕಾಯ್ದೆಯ (FRA) ನಿರ್ದೇಶಕರು ದಕ್ಷಿಣದ ರಾಜ್ಯಗಳು ಸಾಧಿಸಿದ ಪ್ರಗತಿಯ ಮೇಲೆ ವಿಶೇಷ ಗಮನ ಹರಿಸಿ, ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನದ ರಾಷ್ಟ್ರೀಯ ಸನ್ನಿವೇಶವನ್ನು ಸಮ್ಮೇಳನಕ್ಕೆ ವಿವರಿಸಿದರು. ಹಕ್ಕುಸ್ವಾಮ್ಯ ಅರ್ಜಿಗಳ ಬಾಕಿ ಉಳಿಕೆ, ಹಕ್ಕುಗಳ ದಾಖಲೆಗಳ (RoR) ಸೇರ್ಪಡೆ, ಆವಾಸಸ್ಥಾನದ ಹಕ್ಕುಗಳ ಮಾನ್ಯತೆ, ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳ (CFRR) ಮಾನ್ಯತೆ ಮತ್ತು ಈ ನಿಟ್ಟಿನಲ್ಲಿ ಸಚಿವಾಲಯವು ನೀಡುತ್ತಿರುವ ಬೆಂಬಲ ಸೇರಿದಂತೆ ಪ್ರಮುಖ ವಿಷಯಗಳನ್ನು ಅವರು ಒಳಗೊಂಡಿದ್ದರು. ತದನಂತರ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿಗಳು ಅರಣ್ಯ ಹಕ್ಕುಗಳ ಕಾಯ್ದೆಯ ದಾಖಲೆಗಳ ಡಿಜಿಟಲೀಕರಣದ ಅಗತ್ಯವನ್ನು ಸಮ್ಮೇಳನಕ್ಕೆ ಮನವರಿಕೆ ಮಾಡಿಕೊಟ್ಟರು ಮತ್ತು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ರಾಷ್ಟ್ರ ಮಟ್ಟದ 'ಎಫ್‌ಆರ್‌ಎ ಪೋರ್ಟಲ್' (FRA Portal) ಅನ್ನು ಪರಿಚಯಿಸಿದರು. ಈ ಪೋರ್ಟಲ್ ಅನ್ನು ಬಳಸಿಕೊಳ್ಳಲು ಹಾಗೂ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್ (API) ಮೂಲಕ ತಮ್ಮ ಚಾಲ್ತಿಯಲ್ಲಿರುವ ಎಫ್‌ಆರ್‌ಎ ದಾಖಲೆಗಳನ್ನು ಸಂಯೋಜಿಸಲು ಅವರು ರಾಜ್ಯಗಳಿಗೆ ಆಗ್ರಹಿಸಿದರು.

ರಾಜ್ಯವಾರು ವಿವರಣೆಗಳು

ದಕ್ಷಿಣದ ಐದು ರಾಜ್ಯಗಳ ಅಧಿಕಾರಿಗಳು, ನಂತರ ತಮ್ಮ- ತಮ್ಮ ರಾಜ್ಯಗಳಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯ ಅನುಷ್ಠಾನದ ಸ್ಥಿತಿಗತಿಯನ್ನು ಸಮ್ಮೇಳನಕ್ಕೆ ವಿವರಿಸಿದರು, ಅದರ ಮುಖ್ಯಾಂಶಗಳು ಕೆಳಗಿನಂತಿವೆ:

ಕರ್ನಾಟಕ: ಸ್ವೀಕರಿಸಲಾದ 2,95,176 ಅರ್ಜಿಗಳಲ್ಲಿ 16,700 ಅರಣ್ಯ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, 15,553 ಅರ್ಜಿಗಳು ಪರಿಶೀಲನೆಯ ಹಂತದಲ್ಲಿ ಬಾಕಿ ಇವೆ; ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ರಚನೆಯಲ್ಲಿ ಉಂಟಾದ ವಿಳಂಬವು ಉಪ-ವಿಭಾಗೀಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ತಿರಸ್ಕೃತಗೊಂಡ ಅರ್ಜಿಗಳ ಮರು-ಪರಿಶೀಲನೆಯು 'ಮಹಜರು' ಸಮಿತಿಗಳ ಮೂಲಕ ಪ್ರಗತಿಯಲ್ಲಿದ್ದು, ಯೋಜನೆಗಳ ಸಂಯೋಜನೆಗಾಗಿ ಅರಣ್ಯ ಹಕ್ಕುಗಳ ಕಾಯ್ದೆಯ ಫಲಾನುಭವಿಗಳ ದತ್ತಾಂಶವನ್ನು ರಾಜ್ಯದ 'ಫ್ರೂಟ್ಸ್' (FRUITS) ಮತ್ತು 'ಭೂಮಿ' ಪೋರ್ಟಲ್‌ಗಳೊಂದಿಗೆ ಸಂಯೋಜಿಸಲಾಗುತ್ತಿದೆ.

ತಮಿಳುನಾಡು: ಮೊದಲ ಹಂತದಲ್ಲಿ ನೀಡಲಾದ 15,838 ಹಕ್ಕುಪತ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ, ಹಾಗೂ ಎರಡನೇ ಹಂತದಲ್ಲಿ ಸ್ವೀಕರಿಸಲಾದ 41,692 ಹೊಸ ಅರ್ಜಿಗಳು ಪರಿಶೀಲನೆಯಲ್ಲಿದ್ದು, ರಾಜ್ಯಾದ್ಯಂತ 'ಎಫ್‌ಆರ್‌ಎ ಅಟ್ಲಾಸ್' (FRA Atlas), ನಿಗದಿತ ಜಿಲ್ಲಾ ಎಫ್‌ಆರ್‌ಎ ಘಟಕಗಳು ಮತ್ತು ಅರಣ್ಯ ಹಕ್ಕು ಸಮಿತಿಗಳ ರಚನಾತ್ಮಕ ಸಾಮರ್ಥ್ಯ ವರ್ಧನೆಯ ಬೆಂಬಲದೊಂದಿಗೆ ಈ ಪ್ರಕ್ರಿಯೆ ನಡೆಯುತ್ತಿದೆ.

ಆಂಧ್ರಪ್ರದೇಶ: 2026 ರ ಆಗಸ್ಟ್ 31 ರವರೆಗೆ ಸ್ವೀಕರಿಸಲಾದ 2,90,874 ಅರ್ಜಿಗಳ ಪೈಕಿ 2,27,300 ವೈಯಕ್ತಿಕ ಮತ್ತು 1,225 ಸಮುದಾಯ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. 'ಗಿರಿಭೂಮಿ ಎಫ್‌ಆರ್‌ಎ ಪೋರ್ಟಲ್' ಅನ್ನು ರಾಜ್ಯದ ಕಂದಾಯ ಮತ್ತು ಬ್ಯಾಂಕಿಂಗ್ ವ್ಯವಸ್ಥೆಗಳೊಂದಿಗೆ ಜೋಡಿಸುವ ಸಮಗ್ರ ಭೂ-ದಾಖಲೆ ಮತ್ತು ಕಲ್ಯಾಣ-ವಿತರಣಾ ಮಾದರಿಯನ್ನು ಇಲ್ಲಿ ಅಳವಡಿಸಲಾಗಿದೆ.

ತೆಲಂಗಾಣ: ಸ್ವೀಕರಿಸಲಾದ 6,55,249 ಅರ್ಜಿಗಳ ಪೈಕಿ 2,30,735 ವೈಯಕ್ತಿಕ ಮತ್ತು 102 ಸಮುದಾಯ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. 'ಭೂಭಾರತಿ' ಕಂದಾಯ ಪೋರ್ಟಲ್‌ನೊಂದಿಗೆ ಸಂಯೋಜಿತಗೊಂಡ ಸಂಪೂರ್ಣ ಡಿಜಿಟಲೀಕೃತ 'ಆನ್‌ಲೈನ್ ಆರ್‌ಒಎಫ್‌ಆರ್ ಹಕ್ಕುಪತ್ರ ಮಂಜೂರಾತಿ ವ್ಯವಸ್ಥೆ' ಇದಕ್ಕೆ ಬೆಂಬಲವಾಗಿದ್ದು, ಈ ವ್ಯವಸ್ಥೆಗೆ ಸ್ಕೋಚ್ ಎಕ್ಸಲೆನ್ಸ್ ಪ್ರಶಸ್ತಿ (ಚಿನ್ನ, 2024) ಲಭಿಸಿದೆ.

ಕೇರಳ: 29,545 ವೈಯಕ್ತಿಕ ಮತ್ತು 286 ಸಮುದಾಯ ಹಕ್ಕುಪತ್ರಗಳನ್ನು ಮಾನ್ಯ ಮಾಡಲಾಗಿದೆ. ಪ್ರಮುಖವಾಗಿ ಸರ್ವೇ ಮತ್ತು ಪರಿಶೀಲನಾ ಪ್ರಕ್ರಿಯೆಗಳಿಂದಾಗಿ 1,616 ವೈಯಕ್ತಿಕ ಮತ್ತು 108 ಸಮುದಾಯ ಅರ್ಜಿಗಳು ಬಾಕಿ ಉಳಿದಿದ್ದು, ಆರು ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ.

ಮುಂದಿನ ಮಾರ್ಗಸೂಚಿ

ಬಾಕಿ ಇರುವ ಮತ್ತು ತಿರಸ್ಕರಿಸಲ್ಪಟ್ಟ ಅರ್ಜಿಗಳ ಕಾಲಮಿತಿಯ ವಿಲೇವಾರಿ ಹಾಗೂ ಮರುಸಂಯೋಜನೆಯನ್ನು ಖಚಿತಪಡಿಸಿಕೊಳ್ಳಲು, ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳು ಮತ್ತು ನಿಕೃಷ್ಟ ಸ್ಥಿತಿಯಲ್ಲಿರುವ ಬುಡಕಟ್ಟು ತಂಡಗಳ (PVTG) ಆವಾಸಸ್ಥಾನದ ಹಕ್ಕುಗಳ ಮಾನ್ಯತೆಯನ್ನು ವೇಗಗೊಳಿಸಲು, ಕಂದಾಯ ಮತ್ತು ಅರಣ್ಯ ದಾಖಲೆಗಳಲ್ಲಿ ಮಾನ್ಯ ಮಾಡಲಾದ ಹಕ್ಕುಗಳ ಸೇರ್ಪಡೆಯನ್ನು ಪೂರ್ಣಗೊಳಿಸಲು, ಹಾಗೂ ಜೀವನಾಧಾರ ಮತ್ತು ಕಲ್ಯಾಣ ಯೋಜನೆಗಳೊಂದಿಗೆ ಸಂಯೋಜನೆಯನ್ನು ಬಲಪಡಿಸಲು ಸಂಬಂಧಪಟ್ಟ ರಾಜ್ಯಗಳು ಸಿದ್ಧಪಡಿಸಿದ ರಾಜ್ಯ-ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ಕಾಲಮಿತಿಯೊಂದಿಗೆ ಮುನ್ನಡೆಯುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ದಕ್ಷಿಣದ ರಾಜ್ಯಗಳಿಗೆ ಕರೆ ನೀಡಿತು.

 

*****


(ಪ್ರಕಟಣೆ ಐ.ಡಿ.: 2308960) ವಿಸಿಟರ್ ಕೌಂಟರ್ : 11
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी