ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ


ತಂತ್ರಜ್ಞಾನ ಕೇಂದ್ರವನ್ನು ₹156 ಕೋಟಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತರಬೇತಿ, ಉತ್ಪಾದನೆ ಮತ್ತು ವಸತಿ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ

ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇ ಎಸ್‌ ಡಿ ಎಮ್) ಕ್ಷೇತ್ರದ ಮೇಲೆ ಈ ಕೇಂದ್ರ ಗಮನಹರಿಸಲಿದ್ದು, ಕೈಗಾರಿಕೆಗೆ ಸಿದ್ಧವಾದ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಬಲಪಡಿಸಲಿದೆ

ಪ್ರಕಟಣಾ ದಿನಾಂಕ: 08 SEP 2026 5:44PM by PIB Bengaluru

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ ಎಸ್‌ ಎಂ ಇ) ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು 2026ರ ಸೆಪ್ಟೆಂಬರ್ 10ರಂದು ಕರ್ನಾಟಕದ ಬೆಂಗಳೂರಿನ ದೇವನಹಳ್ಳಿಯಲ್ಲಿ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಮತ್ತು ಸಣ್ಣ ಕೈಗಾರಿಕೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶ್ರೀ ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಎಂ ಎಸ್‌ ಎಂ ಇ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು, ಕೈಗಾರಿಕಾ ಪ್ರತಿನಿಧಿಗಳು ಹಾಗೂ ಇತರ ಸ್ಥಳೀಯ ಪಾಲುದಾರರು ಭಾಗವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಎಂ ಎಸ್‌ ಎಂ ಇ ಗಳು ಏರೋಸ್ಪೇಸ್ ಮತ್ತು ಇ ಎಸ್‌ ಡಿ ಎಮ್ ಕ್ಷೇತ್ರಗಳಿಗೆ ನೀಡುತ್ತಿರುವ ಕೊಡುಗೆಯನ್ನು ಪ್ರದರ್ಶಿಸುವ ವಸ್ತುಪ್ರದರ್ಶನವೂ ನಡೆಯಲಿದೆ.

ತಂತ್ರಜ್ಞಾನ ಕೇಂದ್ರಗಳ ಜಾಲ

ಎಂ ಎಸ್‌ ಎಂ ಇ ಗಳಿಗೆ ಅನುಕೂಲಕರ ವಾತಾವರಣವನ್ನು ಕಲ್ಪಿಸುವ ಹಾಗೂ ಅವುಗಳ ತಾಂತ್ರಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಎಂ ಎಸ್ ಎಂ ಇ  ಸಚಿವಾಲಯವು ದೇಶಾದ್ಯಂತ ತಂತ್ರಜ್ಞಾನ ಕೇಂದ್ರಗಳ ಜಾಲವನ್ನು ನಿರ್ವಹಿಸುತ್ತಿದೆ. ಕಳೆದ ಕೆಲವು ವರ್ಷಗಳ ಅವಧಿಯಲ್ಲಿ, ಈ ಕೇಂದ್ರಗಳು ತಂತ್ರಜ್ಞಾನ ಅಭಿವೃದ್ಧಿ, ಕೈಗಾರಿಕಾ ಗುಣಮಟ್ಟದ ತರಬೇತಿ, ವಿನ್ಯಾಸ, ಮಾದರಿ ಅಭಿವೃದ್ಧಿ, ಪರೀಕ್ಷೆ ಮತ್ತು ಎಂ ಎಸ್ ಎಂ ಇ ಗಳಿಗೆ ಉತ್ಪಾದನಾ ಬೆಂಬಲ ಒದಗಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ.

ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶೀಯ ಸಾಮರ್ಥ್ಯಗಳನ್ನು ನಿರ್ಮಿಸುವ ಹಾಗೂ ಈ ಉಪಕ್ರಮವನ್ನು ಮುನ್ನಡೆಸುವ ಕಾರ್ಯದಲ್ಲೂ ಅವು ಕೊಡುಗೆ ನೀಡುತ್ತಿವೆ. ಎಂ ಎಸ್ ಎಂ ಇ ಗಳಿಗೆ ಬೆಂಬಲ ನೀಡುವುದರ ಜೊತೆಗೆ, ತಾಂತ್ರಿಕ ಸ್ವಾವಲಂಬನೆ ಮತ್ತು ಸುಸ್ಥಿರ ಕೈಗಾರಿಕಾ ಬೆಳವಣಿಗೆಯ ರಾಷ್ಟ್ರೀಯ ಗುರಿಗಳು ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿಯೂ ಅವು ಪ್ರಮುಖ ಪಾತ್ರ ವಹಿಸುತ್ತಿವೆ.

ಬೆಂಗಳೂರು ತಂತ್ರಜ್ಞಾನ ಕೇಂದ್ರದ ಪ್ರಮುಖ ವೈಶಿಷ್ಟ್ಯಗಳು

ಬೆಂಗಳೂರಿನ ತಂತ್ರಜ್ಞಾನ ಕೇಂದ್ರವನ್ನು ಭಾರತ ಸರ್ಕಾರದ ಎಂ ಎಸ್ ಎಂ ಇ  ಸಚಿವಾಲಯವು ಕರ್ನಾಟಕ ಸರ್ಕಾರ ಒದಗಿಸಿದ 10 ಎಕರೆ ಜಮೀನಿನಲ್ಲಿ ₹156 ಕೋಟಿ ಹೂಡಿಕೆಯೊಂದಿಗೆ ಅಭಿವೃದ್ಧಿಪಡಿಸಿದೆ. ತರಬೇತಿ ಬ್ಲಾಕ್, ಉತ್ಪಾದನಾ ಬ್ಲಾಕ್, ಆಡಳಿತಾತ್ಮಕ ಬ್ಲಾಕ್, ಬಾಲಕರು ಮತ್ತು ಬಾಲಕಿಯರಿಗಾಗಿ ವಸತಿ ಸೌಲಭ್ಯಗಳು, ಸಿಬ್ಬಂದಿ ವಸತಿ, ಎಕ್ಸಿಕ್ಯೂಟಿವ್ ವಸತಿ ನಿಲಯ ಹಾಗೂ ಇತರ ಪೂರಕ ಸೌಲಭ್ಯಗಳನ್ನು ಒಳಗೊಂಡ ಆಧುನಿಕ ಮೂಲಸೌಕರ್ಯವನ್ನು ಈ ತಂತ್ರಜ್ಞಾನ ಕೇಂದ್ರವು ಹೊಂದಿದೆ.

ಈ ಕೇಂದ್ರದ ಪ್ರಮುಖ ವಲಯ ಎಲೆಕ್ಟ್ರಾನಿಕ್ಸ್ ಸಿಸ್ಟಂ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇ ಎಸ್‌ ಡಿ ಎಮ್) ಆಗಿದೆ. ಅತ್ಯಾಧುನಿಕ ಯಂತ್ರಗಳು ಮತ್ತು ಪ್ರಯೋಗಾಲಯಗಳನ್ನು ಹೊಂದಿರುವ ಈ ಕೇಂದ್ರವು ಸರ್ಫೇಸ್-ಮೌಂಟ್ ಟೆಕ್ನಾಲಜಿ (ಎಸ್‌ ಎಮ್‌ ಟಿ) ಲೈನ್, ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಸಿ ಎನ್‌ ಸಿ 5-ಆಕ್ಸಿಸ್ ಮತ್ತು 3-ಆಕ್ಸಿಸ್ ಯಂತ್ರಗಳು, ಎಲೆಕ್ಟ್ರಿಕ್ ಡಿಸ್ಚಾರ್ಜ್ ಮೆಷಿನ್ (ಇಡಿಎಮ್) ಸೇರಿದಂತೆ ಸುಧಾರಿತ ತಂತ್ರಜ್ಞಾನಗಳಿಗೆ ಎಂ ಎಸ್ ಎಂ ಇ ಗಳಿಗೆ ಪ್ರವೇಶಾವಕಾಶ ಒದಗಿಸಲಿದೆ. ಎಂ ಎಸ್ ಎಂ ಇ ಗಳು/ಕೈಗಾರಿಕೆಗಳ ತಾಂತ್ರಿಕ ಸಾಮರ್ಥ್ಯ, ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಪರೀಕ್ಷಾ ಪ್ರಯೋಗಾಲಯಗಳು, ವಿನ್ಯಾಸ ಸಹಾಯ ಹಾಗೂ ವ್ಯವಹಾರ ಮತ್ತು ತಾಂತ್ರಿಕ ಸಲಹಾ ಸೇವೆಗಳ ಮೂಲಕ ಸಮಗ್ರ ಬೆಂಬಲವನ್ನೂ ಇದು ಒದಗಿಸಲಿದೆ.

ಈ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಮಿತ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ, ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ ಎ ಎಲ್),‌ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರೀಸ್ (ಎನ್‌ ಎ ಎಲ್) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಏರ್‌ಬಸ್, ಬೋಯಿಂಗ್, ಫಿಲಿಪ್ಸ್, ವಿಪ್ರೊ, ಜಿಇ, ಸೆಂಟಮ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ಪ್ರಮುಖ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಬಲಿಷ್ಠ ಪರಿಸರ ವ್ಯವಸ್ಥೆಯಿದೆ. ಇದರ ಜೊತೆಗೆ ಏರೋಸ್ಪೇಸ್, ರಕ್ಷಣಾ ವಲಯ, ಸೆಮಿಕಂಡಕ್ಟರ್ ವಿನ್ಯಾಸ, ಕೈಗಾರಿಕಾ ಆಟೋಮೇಷನ್‌ ವ್ಯವಸ್ಥೆ ಮತ್ತು ಸುಧಾರಿತ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ತೊಡಗಿರುವ ಹಲವಾರು ಎಂ ಎಸ್ ಎಂ ಇ ಗಳೂ ಇಲ್ಲಿವೆ.

ಕೇಂದ್ರವು ಯುವಕರ ಕೌಶಲ್ಯಾಭಿವೃದ್ಧಿಗೂ ಕೊಡುಗೆ ನೀಡಲಿದ್ದು, ಎಂಬೆಡೆಡ್ ಸಿಸ್ಟಂ ವಿನ್ಯಾಸ, ಪಿಸಿಬಿ ವಿನ್ಯಾಸ ಮತ್ತು ಜೋಡಣೆ, ಆಟೋಮೇಷನ್‌ ವ್ಯವಸ್ಥೆ ಮತ್ತು ರೋಬೋಟಿಕ್ಸ್, ನಿರ್ವಹಣೆ ಮತ್ತು ದುರಸ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೈಗಾರಿಕಾ ಗುಣಮಟ್ಟದ ತರಬೇತಿಯನ್ನು  ಒದಗಿಸಲಿದೆ. ತಂತ್ರಜ್ಞಾನ ಕೇಂದ್ರವು ಪ್ರತಿವರ್ಷ 10,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರಿನ ತಂತ್ರಜ್ಞಾನ ಕೇಂದ್ರವನ್ನು ಸುಧಾರಿತ ವಿನ್ಯಾಸ, ಮಾದರಿ ಅಭಿವೃದ್ಧಿ, ಉತ್ಪಾದನೆ, ತರಬೇತಿ ಮತ್ತು ಸಲಹಾ ಸೇವೆಗಳ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿನ ಎಂ ಎಸ್ ಎಂ ಇ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಪ್ರಮುಖ ಸಂಸ್ಥೆಯಾಗಿ ರೂಪಿಸುವ ಉದ್ದೇಶ ಹೊಂದಲಾಗಿದೆ. ಕರ್ನಾಟಕದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಸುಸ್ಥಿರ ಜೀವನೋಪಾಯಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿಯೂ ಈ ಕೇಂದ್ರವು ಗಣನೀಯ ಕೊಡುಗೆ ನೀಡುವ ನಿರೀಕ್ಷೆಯಿದೆ.

 

******

 


(ಪ್ರಕಟಣೆ ಐ.ಡಿ.: 2307992) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी