ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (ಎಸ್.ಆರ್.ಸಿ.ಸಿ) ಶತಮಾನೋತ್ಸವ ಸಂಭ್ರಮ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 05 SEP 2026 9:17PM by PIB Bengaluru

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಪ್ರಹ್ಲಾದ್ ಜೋಶಿ ಜೀ, ಡಿಯು ಉಪಕುಲಪತಿ ಯೋಗೇಶ್ ಸಿಂಗ್ ಜೀ, ಎಸ್‌ಆರ್‌ಸಿಸಿ ಪ್ರಾಂಶುಪಾಲರಾದ ಸಿಮ್ರಿತ್ ಕೌರ್ ಜೀ, ಅಜಯ್ ಜೀ, ಮಲ್ಲಿಕಾ ಜೀ, ರಜತ್ ಜೀ, ಎಸ್‌ಆರ್‌ಸಿಸಿಯೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಸಂಗಾತಿಗಳೇ, ಅಧ್ಯಾಪಕರು, ಸಿಬ್ಬಂದಿ, ಎಸ್‌ಆರ್‌ಸಿಸಿ ಹಳೆಯ ವಿದ್ಯಾರ್ಥಿಗಳು ಮತ್ತು ನನ್ನ ಯುವ ಸ್ನೇಹಿತರೇ!

ನಾನು ಆರನೇ ಆಟಗಾರ. ಇಂದಿನ ಸಂದರ್ಭವು ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ಗೆ ಬಹಳ ಐತಿಹಾಸಿಕವಾದುದಾಗಿದೆ ಮತ್ತು ದೇಶದ ಶಿಕ್ಷಣ ಜಗತ್ತಿಗೆ ಅಷ್ಟೇ ಪ್ರಮುಖವಾದುದಾಗಿದೆ. ಇಲ್ಲಿ, ಎಸ್‌ಆರ್‌ಸಿಸಿಯ ಭಾಗವಾಗಿರುವ ಅನೇಕ ತಲೆಮಾರುಗಳು ಒಟ್ಟುಗೂಡಿವೆ. ಎಸ್‌ಆರ್‌ಸಿಸಿಯ ಈ ಶತಮಾನೋತ್ಸವ ಆಚರಣೆಗೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದರ ಸ್ಥಾಪಕ ಸರ್ ಶ್ರೀ ರಾಮ್ ಜೀ ಅವರಿಗೆ ನಾನು ಗೌರವಯುತವಾಗಿ ಗೌರವ ಸಲ್ಲಿಸುತ್ತೇನೆ ಮತ್ತು ಅವರ ದೃಷ್ಟಿಕೋನಕ್ಕೆ ನಮಸ್ಕರಿಸುತ್ತೇನೆ.

ಸ್ನೇಹಿತರೇ,

ಒಬ್ಬ ವ್ಯಕ್ತಿ 100 ವರ್ಷ ಬದುಕಿದಾಗ, ಅವನನ್ನು ಅನುಭವಗಳ ಸಾಗರವೆಂದು ಪರಿಗಣಿಸಲಾಗುತ್ತದೆ. ಮತ್ತು ಒಂದು ಸಂಸ್ಥೆ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ಅದು ಸಾಧನೆಗಳು ಮತ್ತು ಸ್ಫೂರ್ತಿಗಳ ಸಾಗರವಾಗುತ್ತದೆ. ತನ್ನ 100 ವರ್ಷಗಳ ಪ್ರಯಾಣದಲ್ಲಿ, ಎಸ್.ಆರ್.ಸಿ.ಸಿ. ಪೀಳಿಗೆಗಳನ್ನು ರೂಪಿಸಿದೆ, ಅವರನ್ನು ಉಜ್ವಲ ಭವಿಷ್ಯಕ್ಕೆ ಸಂಪರ್ಕಿಸಿದೆ. ಅಧ್ಯಯನ ಮಾಡಲು ಬಂದು ಬಳಿಕ ಹೊರಟುಹೋದವರು ಯೋಗ್ಯ ವ್ಯಕ್ತಿಗಳಾಗಿ ರೂಪುಗೊಂಡರು. ಈ ಕಾಲೇಜಿನ ಪ್ರಯಾಣವು ದರಿಯಾಗಂಜ್‌ನಲ್ಲಿ ಒಂದು ಸಣ್ಣ ಸ್ಥಳದಲ್ಲಿ ಪ್ರಾರಂಭವಾಯಿತು, ಮತ್ತು ಇಂದು ಆ ಸಣ್ಣ ಕಾಲೇಜು ಒಂದು ದೊಡ್ಡ ಮರವಾಗಿ ಬೆಳೆದಿದೆ. ಅನೇಕ ತಲೆಮಾರುಗಳಿಗೆ ನೆರಳು ನೀಡಿದ ಮತ್ತು ತನ್ನ ತಂಪಿನಿಂದ ಅವರನ್ನು ಶ್ರೀಮಂತಗೊಳಿಸಿದ ಮರ ಇದು. ಇಂದಿಗೂ ಡಿ.ಯು.ನಲ್ಲಿ, ಯಾರಾದರೂ ಯಾವ ಕಾಲೇಜು ಎಂದು ಕೇಳಿದಾಗ, ಎಸ್.ಆರ್.ಸಿ.ಸಿ.ಎಂದು ಹೇಳುವುದೆಂದರೆ  ಸ್ವತಃ ಅದೊಂದು  ಫ್ಲೆಕ್ಸ್ ಇದ್ದಂತೆ.

ಸ್ನೇಹಿತರೇ,

ಎಸ್.ಆರ್.ಸಿ.ಸಿ.ಯ ಹಳೆಯ ವಿದ್ಯಾರ್ಥಿಗಳು ಸಹ ಬಹಳ ವಿಶೇಷತೆಯನ್ನು ಹೊಂದಿರುವವರು. ನಿಮ್ಮ ಭಾಷೆಯಲ್ಲಿ ಹೇಳುವುದಾದರೆ, ಇಲ್ಲಿನ ಹಳೆಯ ವಿದ್ಯಾರ್ಥಿಗಳು ಎಸ್.ಆರ್.ಸಿ.ಸಿ.ಯ  ಹೆಸರನ್ನು ಪ್ರಪಂಚದಾದ್ಯಂತ ಪಸರಿಸಿರುವ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿರುವ ಒ.ಜಿ. ಗಳು. ರಜತ್ ಜೀ ಒಂದು ದೊಡ್ಡ ಪಟ್ಟಿಯನ್ನು ಉಲ್ಲೇಖಿಸಿದ್ದಾರೆ. ಮತ್ತು ನನಗೂ ಅವರಲ್ಲಿ ಕೆಲವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಮ್ಮ ಅರುಣ್ ಜೇಟ್ಲಿ ಜೀ ಇಲ್ಲಿ ಅಧ್ಯಯನ ಮಾಡಿದರು. ಮತ್ತು ಬಹುಶಃ ಅವರು ಎಸ್.ಆರ್.ಸಿ.ಸಿ.ಯ  ಕೆಲವು ಘಟನೆಗಳನ್ನು ವಿವರಿಸದ ಸಭೆ ಎಂದಿಗೂ ಇರಲಿಲ್ಲ ಎಂದು ನಾನು ಹೇಳಬಲ್ಲೆ. ಕೆಲವೊಮ್ಮೆ ನಾನು ಸುಸ್ತಾಗುತ್ತಿದ್ದೆ, ಏಕೆಂದರೆ ಅವರು ಅದೇ ಘಟನೆಯನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಿದ್ದರು. ಇಂದು ನನ್ನ ತಂಡದಲ್ಲಿರುವ, ಸಹೋದರ ಸಂಜೀವ್ ಸನ್ಯಾಲ್ ಕೂಡ ಇಲ್ಲಿ ಅಧ್ಯಯನ ಮಾಡಿದವರು. ಇತರ ಅನೇಕ ಸಂಗಾತಿಗಳು ಸಹ ಇಲ್ಲಿದ್ದಾರೆ. ಮತ್ತು ಅರ್ಥಶಾಸ್ತ್ರ ಪ್ರಪಂಚದ ಜನರಷ್ಟೇ ಇಲ್ಲಿಂದ ಹೊರಬಂದಿದ್ದಾರೆ ಎಂದಲ್ಲ - ಅನೇಕ ಕಲಾವಿದರು, ನಾಯಕರು, ವಕೀಲರು, ನ್ಯಾಯಾಧೀಶರು ಸಹ ಇಲ್ಲಿಂದ ಬಂದಿದ್ದಾರೆ. ಅಂದರೆ, ಎಸ್.ಆರ್.ಸಿ.ಸಿ.ಯ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ಸಂಚಲನ ಸೃಷ್ಟಿಸಿದ್ದಾರೆ. ಅವರೆಲ್ಲರೂ ದೈತ್ಯ ಪ್ರತಿಭೆಯವರಲ್ಲದಿರಬಹುದು, ಆದರೆ ಅವರು ಖಂಡಿತವಾಗಿಯೂ ಸಂಚಲನ ಸೃಷ್ಟಿಸಿದ್ದಾರೆ.

ಸ್ನೇಹಿತರೇ,

ಕಳೆದ ಕೆಲವು ದಿನಗಳಿಂದ, ಈ ಕಾರ್ಯಕ್ರಮವು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಜನರು ನನ್ನ 2013 ರ ಭಾಷಣವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಜನರು ಅದನ್ನು ಮತ್ತೆ ಕೇಳಿದ್ದಾರೆ, ಮತ್ತೆ ಓದಿದ್ದಾರೆ. ಹೊಸ ಪೀಳಿಗೆಯೂ ಸಹ ಅದನ್ನು ಪುನಃ ನೋಡಿರುವ ಸಾಧ್ಯತೆಯಿದೆ. ಆ ಭಾಷಣವು ಒಂದು ಅಲೆಯಾಗಿ, ಒಂದು ಚಳುವಳಿಯಾಗಿ ಮಾರ್ಪಟ್ಟಿದೆ ಎಂದು ನಾನು ಹೇಳಬಲ್ಲೆ. ಮತ್ತು ಇಂದಿಗೂ, 13-14 ವರ್ಷಗಳ ನಂತರವೂ, ಆ ಸಭೆಯ, ಆ ಭಾಷಣದ ಪ್ರಭಾವ ಉಳಿದಿದೆ.

ಸ್ನೇಹಿತರೇ,

ಆಗ, ನಿಮ್ಮ ಸ್ಥಾನದಲ್ಲಿ, ನಿಮ್ಮ ಹಿರಿಯರು ಕುಳಿತಿದ್ದರು. ಮತ್ತು ನಾನು ಆಗ ಮುಖ್ಯಮಂತ್ರಿಯಾಗಿದ್ದೆ, ಆದರೆ ದೇಶದ ಪ್ರಮುಖ ವಿರೋಧ ಪಕ್ಷದ ಸದಸ್ಯನೂ ಆಗಿದ್ದೆ. ಮತ್ತು ಬಹುಶಃ ಜನರು ಆಗ ನಾನು ಆ ಕಾಲದ ಕೇಂದ್ರ ಸರ್ಕಾರದ ಮೇಲೆ ದೀರ್ಘ ದಾಳಿ ಮಾಡುತ್ತೇನೆ, ಆರೋಪಗಳನ್ನು ಸುರಿಸುತ್ತೇನೆ ಎಂದು ನಿರೀಕ್ಷಿಸಿದ್ದರು.

ಆದರೆ ಸ್ನೇಹಿತರೇ,

ವಿರೋಧ ಪಕ್ಷದಲ್ಲಿದ್ದಾಗಲೂ, ಅಂದಿನ ಸರ್ಕಾರದ ವಿಮರ್ಶಕನಾಗಿದ್ದಾಗಲೂ, ನಾನು ಅದಕ್ಕಾಗಿ ಆ ವೇದಿಕೆಯನ್ನು ಬಳಸಲಿಲ್ಲ. ನಾನು ಒಂದು ದೃಷ್ಟಿಕೋನವನ್ನು ಇರಿಸಿದೆ, ಸಕಾರಾತ್ಮಕ ವಿಷಯಗಳನ್ನು ಮಾತನಾಡಿದೆ. ಆಗ ನಾನು ಏನು ಹೇಳಿದ್ದೆನೋ ಅದು ನನ್ನ ದೃಢನಿಶ್ಚಯವಾಗಿತ್ತು. ನಾನು ಸದಾ ಆ ಮಾತುಗಳನ್ನು ಅನುಸರಿಸಿ, ಆ ಕನಸುಗಳನ್ನು ಬೆಂಬತ್ತಿ ಬದುಕಿದ್ದೇನೆ. ನಾನು ಸದಾ ಆ ಹಾದಿಯಲ್ಲಿ ನಡೆದಿದ್ದೇನೆ - ದೇಶಕ್ಕಾಗಿ ನನ್ನನ್ನು ಪೂರ್ಣ ಹೃದಯದಿಂದ ಅರ್ಪಿಸಿಕೊಂಡು, ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮನೋಭಾವದಿಂದ ಬದುಕುತ್ತಿದ್ದೇನೆ. ನನ್ನ ಆ ಆಂತರಿಕ ಜಗತ್ತು, ಆ ಭಾವನಾತ್ಮಕ ವಿಶ್ವ, 2013 ರಲ್ಲಿ ಆ ದಿನದಂದು, ಈ ವೇದಿಕೆಯಿಂದ, ಪದಗಳ ಹಾರದಲ್ಲಿ ಒಂದೊಂದಾಗಿ ಹೊರಬಂದಿತು. ಮತ್ತು ನಾನು ದೀರ್ಘವಾಗಿ ಮಾತನಾಡಿದೆ. ನಂತರ ನಾನು ಮುಂದುವರಿಯಬೇಕೇ ಎಂದು ವಿದ್ಯಾರ್ಥಿಗಳನ್ನು ಕೇಳಿದೆ, ಮತ್ತು ಅವರು ಜೋರಾಗಿ, "ಹೌದು, ಮುಂದುವರಿಸಿ" ಎಂದು ಹೇಳಿದರು.

ಸ್ನೇಹಿತರೇ,

ಆ ದಿನ ನಾನು ಒಂದು ಲೋಟ ನೀರಿನ ಉದಾಹರಣೆ ನೀಡಿದ್ದೆ, ಮತ್ತು ಅದು ದೇಶದಲ್ಲಿ ಹೆಚ್ಚು ಚರ್ಚೆಯಾಯಿತು. ಅರ್ಧ ನೀರಿನಿಂದ ತುಂಬಿದ ಲೋಟವನ್ನು ನೋಡುವ ಮೂರು ದೃಷ್ಟಿಕೋನಗಳನ್ನು ನಾನು ವಿವರಿಸಿದೆ. ಒಂದು, ಗಾಜಿನ ಲೋಟವನ್ನು ಅರ್ಧ ನೀರಿನಿಂದ ತುಂಬಿರುವಂತೆ ನೋಡುವವರು. ಎರಡನೆಯದಾಗಿ, ಗಾಜಿನ ಲೋಟವನ್ನು ಅರ್ಧ ಖಾಲಿಯಾಗಿರುವಂತೆ ನೋಡುವವರು. ಮತ್ತು ಮೂರನೆಯದಾಗಿ, ಗಾಜಿನ ಲೋಟವನ್ನು ಸಂಪೂರ್ಣವಾಗಿ ತುಂಬಿರುವಂತೆ ನೋಡುವವರು - ಅರ್ಧ ನೀರಿನಿಂದ ಮತ್ತು ಅರ್ಧ ಗಾಳಿಯಿಂದ ಎಂಬುದಾಗಿ ವಿವರಿಸಿದೆ.

ಸ್ನೇಹಿತರೇ,

ದೇಶವು ಹತಾಶೆಯ ಜೌಗು ಪ್ರದೇಶದಲ್ಲಿ ಮುಳುಗಿದ್ದ ಸಮಯವದು. ಆಗಲೂ ನಾನು ಹೇಳಿದ್ದೆ, ನಾನು ಗಾಜನ್ನು ಅರ್ಧ ಎಂದು ನೋಡುವುದಿಲ್ಲ, ನಾನು ಅದನ್ನು ಅಪೂರ್ಣವೆಂದು ನೋಡುವುದಿಲ್ಲ - ನಾನು ಗಾಜನ್ನು ಸಂಪೂರ್ಣವಾಗಿ ತುಂಬಿರುವಂತೆ ನೋಡುತ್ತೇನೆ. ಅರ್ಧ ನೀರಿನಿಂದ, ಅರ್ಧ ಗಾಳಿಯಿಂದ ತುಂಬಿದೆ ಎಂಬಂತೆ. ಮತ್ತು ಆ ಸಮಯದಲ್ಲಿ ನೀವೆಲ್ಲರೂ ಶಾಲೆಯಲ್ಲಿದ್ದಿರಬೇಕು, ಆದರೆ ಇಂದು ನೀವು ಇಂಟರ್ನೆಟ್‌ಗೆ ಹೋಗಿ 2013 ರ ಮತ್ತು ಆ ಅವಧಿಯಲ್ಲಿನ ಸುದ್ದಿಗಳನ್ನು ಓದಿದರೆ, ಪರಿಸ್ಥಿತಿ ಏನೆಂದು ನಿಮಗೆ ಅರಿವಾಗುತ್ತದೆ. ಮತ್ತು ನಾನು ಯುವಜನರನ್ನು ಒತ್ತಾಯಿಸುತ್ತೇನೆ - 2013 ರ ಆ ಅವಧಿಯನ್ನು ಇಂಟರ್ನೆಟ್‌ನಲ್ಲಿ ಒಮ್ಮೆ ನೋಡಿ, ಆಗ ನನ್ನ ಭಾಷಣದ ಸುತ್ತಲಿನ ಮುಖ್ಯಾಂಶಗಳು. ಅದು ಪತ್ರಿಕೆಗಳಾಗಲಿ ಅಥವಾ ಟಿವಿ ಚಾನೆಲ್‌ಗಳಾಗಲಿ, ಆಗ ಮುಖ್ಯಾಂಶಗಳು ಏನಾಗಿದ್ದವು? ಆ ಮುಖ್ಯಾಂಶಗಳ ಒಂದು ನೋಟವನ್ನು ನಾನು ನಿಮಗೆ ನೀಡುತ್ತೇನೆ. ಈಗ ನನ್ನ ಮಾತುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನನ್ನ ಖಾತೆಯಲ್ಲಿ ಹಾಕುವ ಒಂದು ಗ್ಯಾಂಗ್ ಇದೆ, ಆದ್ದರಿಂದ ನಾನು ನಿಮಗೆ ಮೊದಲೇ ಎಚ್ಚರಿಸುತ್ತೇನೆ, ನಾನು ನಿಮಗೆ ಏನು ಹೇಳುತ್ತಿದ್ದೇನೆ ಎಂದರೆ 2013 ರಲ್ಲಿ ಮಾಧ್ಯಮದಲ್ಲಿ ಮುಖ್ಯಾಂಶವಾಗಿ ಏನಿತ್ತು ಎಂಬುದನ್ನು, ಅದು ಹೀಗಿತ್ತು:

  • ಎಲ್‌ಒಸಿಯಲ್ಲಿ ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ - ಇಂದಿನ ಪೀಳಿಗೆಗೆ ಅಂತಹ ವಿಷಯಗಳು ನಡೆದಿರುವುದು ವಿಚಿತ್ರವೆನಿಸಬಹುದು, ಆದರೆ ಅವು ಸಂಭವಿಸಿವೆ.
  • ವಿಶ್ವ ಬ್ಯಾಂಕ್ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಕಡಿಮೆ ಮಾಡಿದೆ.
  • ಚಾಲ್ತಿ ಖಾತೆ ಕೊರತೆಯು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ.
  • ಹಣದುಬ್ಬರ ದರ ಸುಮಾರು ಹತ್ತು ಪ್ರತಿಶತ.
  • ಕೈಗಾರಿಕಾ ವಲಯವು ಆರ್ಥಿಕ ಹಿಂಜರಿತದಲ್ಲಿ ಸಿಲುಕಿದೆ.
  • ಹೆಲಿಕಾಪ್ಟರ್ ಒಪ್ಪಂದದ ಲಂಚ/ಭ್ರಷ್ಟಾಚಾರ ಬಹಿರಂಗ.
  • ಹೈದರಾಬಾದ್‌ನಲ್ಲಿ ಬಾಂಬ್ ಸ್ಫೋಟಗಳು.

ಇವು ಆ ಕಾಲದ ಮುಖ್ಯಾಂಶಗಳಾಗಿದ್ದವು. ಇಂದಿನ ವಿದ್ಯಾರ್ಥಿಗಳಿಗೆ ಇದೆಲ್ಲವೂ ತಿಳಿದಿಲ್ಲ ಎಂದು ನನಗೆ ಖಚಿತವಾಗಿದೆ. ಈ ವಿಷಯಗಳು ಆಗ ದೇಶದ ಸ್ಥಿತಿ ಹೇಗಿತ್ತು ಎಂಬುದನ್ನು ತೋರಿಸುತ್ತವೆ. ಬೆಳವಣಿಗೆ ನೆಲಮಟ್ಟದಲ್ಲಿತ್ತು ಮತ್ತು ಹಣದುಬ್ಬರವು ಮಿತಿಯನ್ನು ಮೀರಿತ್ತು. ಹಗರಣಗಳು ಉತ್ತುಂಗದಲ್ಲಿದ್ದವು ಮತ್ತು ಭ್ರಷ್ಟರು ನಿರ್ಭಯವಾಗಿ ಅಲೆದಾಡುತ್ತಿದ್ದರು. ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿತ್ತು, ಎಲ್ಲೆಡೆ ನೀತಿ ಪಕ್ಷವಾತದ/ಪಾರ್ಶ್ವವಾಯುವಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ಜಗತ್ತು ಭಾರತವನ್ನು "ದುರ್ಬಲ ಐದು" ದೇಶಗಳ ಪಟ್ಟಿಯಲ್ಲಿ ಸೇರಿಸಿತ್ತು. ಭಯೋತ್ಪಾದಕರನ್ನು ನಿಯಂತ್ರಿಸಲಾಗುತ್ತಿರಲಿಲ್ಲ ಮತ್ತು ಪಾಕಿಸ್ತಾನವೂ ಅಂಕೆ ಮೀರಿತ್ತು. ಅಂದರೆ, ಆಗ ನಿರಾಶೆ ಮತ್ತು ಹತಾಶೆ ಬಿಟ್ಟರೆ ಬೇರೇನೂ ಇರಲಿಲ್ಲ.

ಸ್ನೇಹಿತರೇ,

ಆ ದಿನ ದೇಶವು ಎಲ್ಲಾ ರಂಗಗಳಲ್ಲಿಯೂ ಹೋರಾಡುತ್ತಿದ್ದ ದಿನ, ಮತ್ತು ಇಂದು - ಇಂದು ಭಯೋತ್ಪಾದನೆಯನ್ನು ಹರಡುವವರನ್ನು ನಿಗ್ರಹಿಸಲಾಗುತ್ತಿದೆ. ಪಾಕಿಸ್ತಾನ ಯಾವುದೇ ದುಷ್ಕೃತ್ಯ ಎಸಗಿದರೆ, ಭಾರತದ ಪಡೆಗಳು ಅವರ ಮನೆಗೆ ನುಗ್ಗಿ ದಾಳಿ ಮಾಡುತ್ತವೆ. ಜಮ್ಮು ಮತ್ತು ಕಾಶ್ಮೀರದಿಂದ ಈಶಾನ್ಯದವರೆಗೆ ಶಾಂತಿ ಬಲವಾಗಿದೆ. ಮಾವೋವಾದಿ ಭಯೋತ್ಪಾದನೆ, ನಕ್ಸಲಿಸಂ ಮುರಿದುಹೋಗಿದೆ. ಅಂದು ಭಾರತದಲ್ಲಿ ನೀತಿ ಪಾರ್ಶ್ವವಾಯು ಬಗ್ಗೆ ಜಗತ್ತು ಚಿಂತೆಗೀಡಾಗಿತ್ತು. ಇಂದು ಅದು ಭಾರತದ ನೀತಿ ಚೈತನ್ಯದ ಬಗ್ಗೆ ಮಾತನಾಡುತ್ತದೆ. ಆಗ ಜಗತ್ತು ಭಾರತವನ್ನು ದುರ್ಬಲ ಐದರ ಭಾಗವೆಂದು ಕರೆದಿತ್ತು, ಇಂದು ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗುತ್ತಿದೆ ಎಂಬುದನ್ನು ಜಗತ್ತು ನೋಡುತ್ತಿದೆ. ಕಳೆದ ವಾರವಷ್ಟೇ, ಭಾರತದ ಆರ್ಥಿಕತೆಯ ಬಗ್ಗೆ ಅನೇಕ ಸಕಾರಾತ್ಮಕ ಸುದ್ದಿಗಳು ಬಂದಿವೆ. ಶೇಕಡಾ 7.8 ತ್ರೈಮಾಸಿಕ ಬೆಳವಣಿಗೆಯು ದೇಶದ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಅದೇ ಅವಧಿಯಲ್ಲಿ ಜಪಾನಿನ ಕ್ರೆಡಿಟ್ ರೇಟಿಂಗ್ ಏಜೆನ್ಸಿಯು ಭಾರತದ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿದೆ.

ಮತ್ತು ಸ್ನೇಹಿತರೇ

ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿರುವ ಸಮಯದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದ ಹಲವು ಅಡೆತಡೆಗಳು ಇರುವ ಸಮಯದಲ್ಲಿ ಈ 7.8 ಪ್ರತಿಶತ ಬೆಳವಣಿಗೆ ಬಂದಿದೆ. ಅಂತಹ ಸಮಯದಲ್ಲಿ ಇಂತಹ ಬೆಳವಣಿಗೆಯನ್ನು ಸಾಧಿಸುವುದು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ.

ಸ್ನೇಹಿತರೇ,

ನನಗೆ ಗೊತ್ತು, ನಿಮಗೂ ಗೊತ್ತು, ಭಾರತವನ್ನು ಐದು ರಾಷ್ಟ್ರಗಳ ದುರ್ಬಲ ರಾಷ್ಟ್ರಗಳ ಗುಂಪಿಗೆ ತಳ್ಳಿದ ಕುಖ್ಯಾತರಿಗೆ, ಈ ಅಂಕಿಅಂಶಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನೀವೆಲ್ಲರೂ ಸಂಖ್ಯೆಗಳನ್ನು ಗಂಭೀರವಾಗಿ ಅರ್ಥಮಾಡಿಕೊಂಡಿದ್ದೀರಿ. ಏಪ್ರಿಲ್ ಮತ್ತು ಜೂನ್ ನಡುವೆ, ವಿದ್ಯುತ್ ಉತ್ಪಾದನೆಯು ಶೇಕಡಾ 9 ರಷ್ಟು ಹೆಚ್ಚಾಗಿದೆ, ವಾಹನ ಮಾರಾಟವು ಶೇಕಡಾ 20 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಅದರಲ್ಲಿಯೂ, ದ್ವಿಚಕ್ರ ವಾಹನಗಳು ಶೇಕಡಾ 20 ರಷ್ಟು ಮತ್ತು ತ್ರಿಚಕ್ರ ವಾಹನಗಳು ಸುಮಾರು 30 ರಷ್ಟು ಹೆಚ್ಚಿವೆ. ಅಂದರೆ ಗ್ರಾಹಕರ ಬೇಡಿಕೆ ಚಾಲನೆಯಲ್ಲಿದೆ ಮತ್ತು ವಾಣಿಜ್ಯ ಚಟುವಟಿಕೆಗಳು ಬಲವಾಗಿವೆ. ಉಕ್ಕು ಮತ್ತು ಸಿಮೆಂಟ್ ಬಳಕೆಯಲ್ಲಿ ಬೆಳವಣಿಗೆ ಶೇಕಡಾ 8 ರಷ್ಟು ಹೆಚ್ಚಾಗಿದೆ. ಅಂದರೆ ನಿರ್ಮಾಣ, ವಸತಿ, ಮೂಲಸೌಕರ್ಯ ಮತ್ತು ಕೈಗಾರಿಕಾ ಚಟುವಟಿಕೆಗಳು ಹೆಚ್ಚುತ್ತಿವೆ. ಅಂದರೆ ಭಾರತ ಬೆಳೆಯುತ್ತಿದೆ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸಹ ಸೃಷ್ಟಿಸುತ್ತಿದೆ. ಇದರ ಹೊರತಾಗಿಯೂ, 2013 ರಲ್ಲಿ ಗಾಜಿನ ಅರ್ಧ ಖಾಲಿಯನ್ನು ನೋಡಿದವರಿಗೆ, ಅವರ ಆಲೋಚನೆ ಇಂದಿಗೂ ಹಾಗೆಯೇ ಉಳಿದಿದೆ. ಅವರಿಗೆ ಗಾಜು ಯಾವಾಗಲೂ ಅರ್ಧ ಖಾಲಿಯಾಗಿರುತ್ತದೆ. ನಾನು ಗಾಜಿನ ಬಗ್ಗೆ ಮಾತನಾಡುವಾಗ, ನಾನು ಯಾವುದೂ ಖಾಲಿಯಾಗಿರುವ ಬಗ್ಗೆ ಮಾತನಾಡುವುದಿಲ್ಲ.

ಸ್ನೇಹಿತರೇ,

2013ರಲ್ಲಿ, ಎಸ್.ಆರ್.ಸಿ.ಸಿ. ಯಲ್ಲಿ ಮಾತನಾಡುತ್ತಾ, ನಾನು P2G2 - ಪ್ರೊ ಪೀಪಲ್ ಗುಡ್ ಗವರ್ನನ್ಸ್ ಬಗ್ಗೆಯೂ ಮಾತನಾಡಿದ್ದೆ. ದೀರ್ಘಕಾಲ ಸರ್ಕಾರಗಳನ್ನು ನಡೆಸಿದವರು ಒಂದು ಶೈಲಿಯನ್ನು ಹೊಂದಿದ್ದರು - ಬೆಂಕಿ ಬಿದ್ದಾಗ ಮಾತ್ರ ಎಚ್ಚರಗೊಳ್ಳಿ, ಬರ ಬಂದಾಗ ಮಾತ್ರ ಬಾವಿ ತೋಡುವ  ಶೈಲಿ ಅದು. ನಾನು ಈ ವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡಿದ್ದೆ. ಮತ್ತು 2014 ರಲ್ಲಿ ಸರ್ಕಾರ ರಚಿಸಿದ ನಂತರ, ನಾವು ಇದನ್ನು ಕಾರ್ಯರೂಪದಲ್ಲಿ ತೋರಿಸಿದ್ದೇವೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ.

ಸ್ನೇಹಿತರೇ,

ಇತ್ತೀಚೆಗೆ, ಜನ್ ಧನ್ ಯೋಜನೆ 12 ವರ್ಷಗಳನ್ನು ಪೂರೈಸಿದೆ. ಇಂದು ನೀವು ಸಂಪೂರ್ಣವಾಗಿ ವಿಭಿನ್ನವಾದ ಫಿನ್‌ಟೆಕ್ ಯುಗದಲ್ಲಿ ವಾಸಿಸುತ್ತಿದ್ದೀರಿ, ಆದರೆ ಅವು 2013 ರ ದಿನಗಳು, ಆಗ ಹಳ್ಳಿಗಳು ಅಥವಾ ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳು ಉಳಿತಾಯ ಬ್ಯಾಂಕ್ ಖಾತೆಗಳನ್ನು ತೆರೆಯಲು ಸಹ ಸಾಕಷ್ಟು ಕಷ್ಟಪಡಬೇಕಾಯಿತು. ಆ ಸಮಯದಲ್ಲಿ ನಮ್ಮ ಜನಸಂಖ್ಯೆ 1.25 ಬಿಲಿಯನ್ ದಾಟಿತ್ತು, ಆದರೆ ಮಾರ್ಚ್ 2014 ರ ಹೊತ್ತಿಗೆ, ದೇಶದ ಜನಸಂಖ್ಯೆಯ ಶೇಕಡಾ 50 ಕ್ಕಿಂತ ಹೆಚ್ಚು ಜನರು ಬ್ಯಾಂಕ್ ಖಾತೆಗಳನ್ನು ಹೊಂದಿರಲಿಲ್ಲ. ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಹೊರಗೆ ಹೆಚ್ಚಾಗಿ ಬಡವರು, ಮಹಿಳೆಯರು, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಇದ್ದರು. ಅದಕ್ಕಾಗಿಯೇ ನಾವು ಜನ್ ಧನ್ ಯೋಜನೆಯನ್ನು ತಂದಿದ್ದೇವೆ ಮತ್ತು ಕಳೆದ 12 ವರ್ಷಗಳಲ್ಲಿ, ಜನ್ ಧನ್ ಯೋಜನೆಯ ಕಾರಣದಿಂದಾಗಿ, ಸುಮಾರು 600 ಮಿಲಿಯನ್ ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಇಂದು ದೇಶದ ಬಹುತೇಕ ಪ್ರತಿಯೊಂದು ಕುಟುಂಬವು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕ ಹೊಂದಿದೆ. ಇದು ಭಾರತದ ಫಿನ್‌ಟೆಕ್ ಕ್ರಾಂತಿಯ ಅಡಿಪಾಯವಾಯಿತು.

ಸ್ನೇಹಿತರೇ,

ಈಗ ಲಕ್ಷಾಂತರ ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಸಂಪರ್ಕಿಸುವುದನ್ನು ವಿರೋಧಿಸಿದ ಜನರ ಬಗ್ಗೆಯೂ ಯೋಚಿಸಿ. ವಾಸ್ತವವಾಗಿ, ಅಂತಹ ಜನರು ಲೋಟ ಅರ್ಧ ತುಂಬಿದಾಗ ಮಾತ್ರ ಆನಂದಿಸುತ್ತಿದ್ದರು, ಆದ್ದರಿಂದ ಬಡ ಸಾಮಾನ್ಯ ನಾಗರಿಕರು ಅವರ ಸುತ್ತಲೂ ಸುತ್ತುತ್ತಿದ್ದರು. ಅವರು ದಶಕಗಳಿಂದ ಈ "ಮೈ ಬಾಪ್" ಸಂಸ್ಕೃತಿಯನ್ನು ಮುಂದುವರೆಸಿದ್ದರು. ಆದರೆ ಇದು ಮೋದಿ - ಮೈ ಬಾಪ್ ಸಂಸ್ಕೃತಿಯನ್ನು ಇಷ್ಟಪಡುವವರ ಮುಂದೆ ಬಂಡೆಯಂತೆ ನಿಂತಿರುವುದು.

ಸ್ನೇಹಿತರೇ,

ಒಂದು ಹಳೆಯ ಮಾತಿದೆ: ಸತ್ಯವು ಬೆಂಕಿಗೆ ಹೆದರುವುದಿಲ್ಲ. ನನಗೆ ಧೈರ್ಯವಿದೆ, ಮತ್ತು ಅದಕ್ಕಾಗಿಯೇ ನಾನು ಆ ದಿನ ನನ್ನ ವರದಿ/ಪ್ರಗತಿ ವರದಿಯ ಕಾರ್ಡ್ ಅನ್ನು ನಿಮ್ಮ ಮುಂದೆ ತರುತ್ತಾ ಹೇಳಿದ್ದನ್ನು ನಿಮಗೆ ನೆನಪಿಸುತ್ತಿದ್ದೇನೆ. ಸತ್ಯದ ಘರ್ಜನೆಯ ಮುಂದೆ, ಸುಳ್ಳಿನ ಪ್ರತಿಧ್ವನಿ ನಿಲ್ಲಲು ಸಾಧ್ಯವಿಲ್ಲ ಎಂಬುದು ನನಗೆ ತಿಳಿದಿದೆ.

ಸ್ನೇಹಿತರೇ,

2013 ರ ಆ ಕಾರ್ಯಕ್ರಮದಲ್ಲಿಯೇ, ನಾವು ಮೇಡ್ ಇನ್ ಇಂಡಿಯಾದಲ್ಲಿ ಕೆಲಸ ಮಾಡಬೇಕು ಎಂದು ನಾನು ಹೇಳಿದಾಗ, ಆ ಕಾಲದ ಹಳೆಯ ಪರಿಸರ ವ್ಯವಸ್ಥೆಯ ಜನರಿಗೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಆ ಹತಾಶೆಯ ಯುಗದಲ್ಲಿ, ಮೇಡ್ ಇನ್ ಇಂಡಿಯಾ ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು! ಮತ್ತು ಆ ಚಿಂತನೆಯಲ್ಲಿ ಬೆಳೆದವರು ಇನ್ನೂ ಮೇಡ್ ಇನ್ ಇಂಡಿಯಾವನ್ನು ಅಣಕಿಸುತ್ತಾರೆ.

ಆದರೆ ಸ್ನೇಹಿತರೇ,

ಇಂದು ನೀವು ಮೇಕ್ ಇನ್ ಇಂಡಿಯಾದ ಬ್ರಾಂಡ್ ಮೌಲ್ಯವನ್ನು ನೋಡುತ್ತಿದ್ದೀರಿ. ನಾನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. ಇಂದು ಪ್ರತಿಯೊಂದು ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ವಿಶ್ವದ ಅತಿದೊಡ್ಡ ಫೋನ್ ಬ್ರ್ಯಾಂಡ್‌ಗಳು ಭಾರತವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಳ್ಳುತ್ತಿವೆ. ಮೇಡ್ ಇನ್ ಇಂಡಿಯಾ ಸ್ಮಾರ್ಟ್‌ಫೋನ್‌ಗಳು ಪ್ರಪಂಚದ ಮೂಲೆ ಮೂಲೆಯನ್ನು ತಲುಪುತ್ತಿವೆ. 2014 ರಲ್ಲಿ, ಭಾರತವು ತನ್ನ ಹೆಚ್ಚಿನ ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಂಡಿದೆ. ಇಂದು ಭಾರತವು 2.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುತ್ತಿದೆ.

ಸ್ನೇಹಿತರೇ,

ನಾನು ಸಣ್ಣ ಮತ್ತು ಸುಲಭ ಗುರಿಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಲ್ಲ. ನಾನು ದೇಶಕ್ಕಾಗಿ ದೊಡ್ಡ ಗುರಿಗಳನ್ನು ಹೊಂದಿದ್ದೇನೆ ಮತ್ತು ಅವುಗಳನ್ನು ಸಾಧಿಸಲು ನನ್ನ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ರಕ್ಷಣಾ ವಲಯವನ್ನು ನೋಡಿ. ಮೊದಲು, ಭಾರತದ ಸಶಸ್ತ್ರ ಪಡೆಗಳಿಗೆ ಹೆಚ್ಚಿನ ವಸ್ತುಗಳನ್ನು ವಿದೇಶದಿಂದ ಖರೀದಿಸಲಾಗುತ್ತಿತ್ತು. ನಾನು ಬಂದ ತಕ್ಷಣ, ನಾನು ರಕ್ಷಣಾ ಅಧಿಕಾರಿಗಳಿಗೆ ಹೇಳಿದೆ - ನಕಾರಾತ್ಮಕ ಪಟ್ಟಿಯನ್ನು ಮಾಡಿ. ಮೊದಲು ಅವರು 500 ವಸ್ತುಗಳ ಪಟ್ಟಿಯನ್ನು ಮಾಡಿದರು, ಇವುಗಳನ್ನು ನಾವು ಹೊರಗಿನಿಂದ ತರುವುದಿಲ್ಲ ಎಂದು ಹೇಳಿದರು. ನಂತರ ಅವರು 1,000, ನಂತರ 3,000 ಮಾಡಿದರು. ಭೂ ಸೇನೆ, ನೌಕಾಪಡೆ, ವಾಯುಪಡೆ – ಇವು ಅನೇಕ ಬಾರಿ ಸಣ್ಣ ಉಪಕರಣಗಳಿಗೆ ಸಹ  ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ನಾವು ಸಶಸ್ತ್ರ ಪಡೆಗಳೊಂದಿಗೆ ಒಟ್ಟಾಗಿ ಒಂದು ಯೋಜನೆಯನ್ನು ರೂಪಿಸಿದ್ದೇವೆ, ವಸ್ತುಗಳ ಪಟ್ಟಿಗಳನ್ನು ಮಾಡಿದ್ದೇವೆ, ನಂತರ ಭಾರತೀಯ ಕಂಪನಿಗಳಿಗೆ ಇವೆಲ್ಲವನ್ನೂ ತಯಾರಿಸಲು ಹೇಳಿದ್ದೇವೆ. ಮತ್ತು ಇಂದು ನೀವು ನೋಡಿ, ದೇಶದ ರಕ್ಷಣಾ ಉತ್ಪಾದನೆಯು ಅತ್ಯುನ್ನತ ಮಟ್ಟದಲ್ಲಿದೆ. ಇಂದು ಭಾರತ ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ಉತ್ಪಾದಿಸುತ್ತಿದೆ. 2013–14ರಲ್ಲಿ, ನಾವು 600–700 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉಪಕರಣಗಳನ್ನು ರಫ್ತು ಮಾಡಿದ್ದೇವೆ. ಇಂದು ಈ ಅಂಕಿ ಅಂಶವು ಸುಮಾರು 40,000 ಕೋಟಿ ರೂಪಾಯಿಗಳನ್ನು ತಲುಪಿದೆ. ಮತ್ತು ಈ ಸಾಧನೆಗಳು ಇಂದು ದೇಶದಲ್ಲಿ ಒಂದು ರೋಮಾಂಚಕ ರಕ್ಷಣಾ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತಿರುವುದರಿಂದ ಸಾಧ್ಯವಾಗಿವೆ.

ಸ್ನೇಹಿತರೇ,

ನನಗೆ ದೇಶದ ಮೇಲೆ ನಂಬಿಕೆ ಇದೆ, ದೇಶದ ಸಾಮರ್ಥ್ಯದ ಮೇಲೆ ನಂಬಿಕೆ ಇದೆ, ನಿಮ್ಮ ಮೇಲೆ,ಯುವಜನರ ಮೇಲೆ ನಂಬಿಕೆ ಇದೆ. ಮತ್ತು ಈ ನಂಬಿಕೆಯ ಆಧಾರದ ಮೇಲೆ ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುತ್ತೇನೆ. ನಾವು 1.4 ಬಿಲಿಯನ್ ಭಾರತೀಯರು ಒಟ್ಟಾಗಿ ನಮ್ಮ ದೇಶವನ್ನು ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿಯನ್ನಾಗಿ ಮಾಡುತ್ತೇವೆ ಎಂದು ನನಗೆ ವಿಶ್ವಾಸವಿದೆ.

• ಮುಂಬರುವ ಸಮಯದಲ್ಲಿ, ಭಾರತವು ಉತ್ಪಾದನಾ ಕೇಂದ್ರವಾಗಲಿದೆ.

• ಮುಂಬರುವ ಸಮಯದಲ್ಲಿ, ಹಿಂದೂಸ್ತಾನ್ ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವಾಗಲಿದೆ.

• ಭಾರತವು ಕೃಷಿ ರಫ್ತಿನಲ್ಲಿ ಸೂಪರ್ ಪವರ್ ಆಗಲಿದೆ.

ನನ್ನ ಯುವ ಸ್ನೇಹಿತರೇ,

• ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಹೊಂದಲಿದೆ.

ಮತ್ತು ಭಾರತವು ಒಲಿಂಪಿಕ್ಸ್ ಆಯೋಜಿಸುವ ದಿನವನ್ನೂ ನೀವು ನೋಡುತ್ತೀರಿ, ಅದು ಜಗತ್ತನ್ನು ವಿಸ್ಮಯದಿಂದ ನೋಡುವಂತೆ ಮಾಡುತ್ತದೆ.

ಮತ್ತು ಇವು ಕೇವಲ ಪದಗಳಲ್ಲ, ಇವು ನಮ್ಮ ನಿರ್ಣಯಗಳು. ಮತ್ತು ಈ ನಿರ್ಣಯಗಳನ್ನು ವಾಸ್ತವಕ್ಕೆ ತಿರುಗಿಸಲು, ದೇಶದಲ್ಲಿ ನಿರಂತರ ಕೆಲಸ ನಡೆಯುತ್ತಿದೆ.

ಸ್ನೇಹಿತರೇ,

ಈಗ ನಿಮ್ಮ ಜೀವನ ಎಸ್.ಆರ್.ಸಿ.ಸಿ. ಮೋಡ್‌ನಲ್ಲಿ ಸಾಗುತ್ತಿದೆ. ಅದು ಕೋ-ಆಪ್‌ನಲ್ಲಿ ಚಹಾ ಆಗಿರಲಿ, ಕೋಲ್ಡ್ ಕಾಫಿಯ ಚರ್ಚೆಯಾಗಿರಲಿ, ಪರೀಕ್ಷೆಗಳಿಗೆ ಕೊನೆಯ ನಿಮಿಷದ ಟಿಪ್ಪಣಿಗಳಾಗಿರಲಿ, ಪ್ರಿಂಟ್‌ಔಟ್‌ಗಳಿಗಾಗಿ ಓಡುವುದಿರಲಿ, ಅಥವಾ ಕ್ರಾಸ್‌ರೋಡ್ಸ್ ಮತ್ತು ಬಿಸಿನೆಸ್ ಕಾನ್ಕ್ಲೇವ್‌ನಲ್ಲಿ ಹಾಕಿದ ಕಠಿಣ ಪರಿಶ್ರಮವಾಗಲಿ - ನೀವು ಇಲ್ಲಿನ ಪ್ರತಿ ಕ್ಷಣವನ್ನು ನಿಮ್ಮ ಜೀವನದ ನೆನಪಾಗಿ ಮಾಡಿಕೊಂಡಿದ್ದೀರಿ. ಆದರೆ ಈ ಕ್ಯಾಂಪಸ್‌ನ ಹೊರಗೆ, ಹೊಸ ಜಗತ್ತು ನಿಮಗಾಗಿ ಕಾಯುತ್ತಿದೆ. ನೀವು ಎರಡು ರೀತಿಯ ಜನರನ್ನು ಭೇಟಿಯಾಗುತ್ತೀರಿ. ಒಂದು, ಸಮಾಜದ ಶಕ್ತಿಯನ್ನು ರಾಷ್ಟ್ರದ ಶಕ್ತಿಯಾಗಿ ಸಕಾರಾತ್ಮಕವಾಗಿ ಪರಿವರ್ತಿಸುವವರು. ಎರಡನೆಯ ಜಾತಿಯೆಂದರೆ, ಯಾವುದೇ ಕೆಲಸ ಪ್ರಾರಂಭವಾದಾಗಲೆಲ್ಲಾ "ಕೋಪಗೊಂಡ ಚಿಕ್ಕಪ್ಪ" ಆಗುವವರು. ಅವರ ನೆಚ್ಚಿನ ಕೆಲಸವೆಂದರೆ ಎಲ್ಲವನ್ನೂ ವಿರೋಧಿಸುವುದು. ಅವರ ಶಾಶ್ವತ ತಕರಾರು: "ಇದರ ಅವಶ್ಯಕತೆ ಏನು? ಇದರ ಅವಶ್ಯಕತೆ ಏನು?". ಅದು ಅಂತಹ ಪ್ರತಿಯೊಬ್ಬ ಚಿಕ್ಕಪ್ಪನ ಶಾಶ್ವತ ಪ್ರಶ್ನೆಯಾಗಿರುತ್ತದೆ. ನಾವು ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಿಸುವಾಗ, ಈ ಚಿಕ್ಕಪ್ಪರು ತಮ್ಮ ಬೆಲ್ಟ್ಗಳನ್ನು ಬಿಗಿದುಕೊಂಡು, "ಇದರ ಅವಶ್ಯಕತೆ ಏನು?" ಎಂದು ಹೇಳಿದರು. ನಾವು ಹೈ ಸ್ಪೀಡ್ ರೈಲಿನ ಕೆಲಸವನ್ನು ಪ್ರಾರಂಭಿಸಿದಾಗ, ಅವರು ಮತ್ತೆ, "ಇದರ ಅವಶ್ಯಕತೆ ಏನು?" ಎಂದು ಕೇಳಿದರು. ನಾವು ಯು.ಪಿ.ಐ.  ತಂದಾಗ, ಇದೇ ಜನರು, "ಯು.ಪಿ.ಐ. ಏಕೆ? ಯು.ಪಿ.ಐ.  ಏನು ಅಗತ್ಯ?" ಎಂದು ಕೇಳಿದರು. ನಾವು ಚಿಪ್  ತಯಾರಿಸುವ ಬಗ್ಗೆ ಮಾತನಾಡಿದಾಗ, ಅವರು ಮತ್ತೆ ಕೇಳಿದರು, "ಇದರ ಅವಶ್ಯಕತೆ ಏನು?" ನಾವು ಹೊಸ ಸಂಸತ್ತು ಕಟ್ಟಡವನ್ನು ನಿರ್ಮಿಸಿದಾಗ, ಅವರು ಕೇಳಿದರು, "ಇದರ ಅವಶ್ಯಕತೆ ಏನು?" ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿದ ನಮ್ಮ ಧೈರ್ಯಶಾಲಿ ಮಿಲಿಟರಿ ಕಮಾಂಡರ್‌ಗಳಿಗೆ ನಾವು ಸ್ಮಾರಕವನ್ನು ನಿರ್ಮಿಸಿದಾಗ, ಅವರು ಮತ್ತೆ ಕೇಳಿದರು, "ಇದರ ಅವಶ್ಯಕತೆ ಏನಿತ್ತು?" ಆದರೆ ಭಾರತವು ಅಂತಹ ಎಲ್ಲಾ ಚಿಕ್ಕಪ್ಪಂದಿರಿಗೆ ಉತ್ತರಿಸಿದೆ - ದೇಶಕ್ಕೆ ಏನು ಅಗತ್ಯವೋ, ಅದನ್ನು ಭಾರತ ಮಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ..

ಸ್ನೇಹಿತರೇ,

ಇಂದು ಭಾರತ ವಿಭಿನ್ನ ಮನೋಭಾವದಿಂದ ಮುಂದುವರಿಯುತ್ತಿದೆ. ಮೊದಲು ದಶಕಗಳನ್ನು ತೆಗೆದುಕೊಂಡ ಕೆಲಸ ಈಗ ಕೆಲವೇ ವರ್ಷಗಳಲ್ಲಿ ಸಾಕಾರಗೊಳ್ಳುತ್ತಿದೆ. ಪೂರ್ಣ ಸಂಗತಿಗಳೊಂದಿಗೆ ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ನೀಡುತ್ತೇನೆ. ಭಾರತದ ಮೊದಲ ವಿದ್ಯುತ್ ರೈಲು 1925 ರಲ್ಲಿ ಓಡಿತು. ನಿಮ್ಮ ಕಾಲೇಜು 1926 ರಲ್ಲಿ ಪ್ರಾರಂಭವಾಯಿತು, ಆದರೆ ರೈಲು 1925 ರಲ್ಲಿ ಓಡಿತು. ಅದರ ನಂತರ, 2014 ರವರೆಗೆ - ಅಂದರೆ, 90 ವರ್ಷಗಳಲ್ಲಿ - ಶೇಕಡಾ 30 ಕ್ಕಿಂತ ಕಡಿಮೆ ರೈಲ್ವೆ ಮಾರ್ಗಗಳು ವಿದ್ಯುದ್ದೀಕರಿಸಲ್ಪಟ್ಟವು. ಕೇವಲ 12 ವರ್ಷಗಳಲ್ಲಿ, ನಾವು ರೈಲ್ವೆ ಮಾರ್ಗಗಳ ಸುಮಾರು 100 ಪ್ರತಿಶತ ವಿದ್ಯುದ್ದೀಕರಣವನ್ನು ತೋರಿಸಿದ್ದೇವೆ.

ಸ್ನೇಹಿತರೇ,

ಭಾರತದ ನೀತಿ ನಿರ್ಧಾರಗಳಲ್ಲಿನ ಈ ವೇಗವನ್ನು ಪ್ರಪಂಚದ ಉಳಿದ ಭಾಗಗಳು ನೋಡುತ್ತಿವೆ ಮತ್ತು ಅರ್ಥಮಾಡಿಕೊಳ್ಳುತ್ತಿವೆ. ಅದಕ್ಕಾಗಿಯೇ ಅವರು ಭಾರತದೊಂದಿಗೆ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸುತ್ತಿದ್ದಾರೆ. ಕಳೆದ ದಶಕದಲ್ಲಿ, ಸುಮಾರು 40 ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳು ಮತ್ತು ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದರಿಂದಾಗಿ, ಚರ್ಮ, ಜವಳಿ, ಹಣ್ಣುಗಳು ಮತ್ತು ತರಕಾರಿಗಳು, ನಮ್ಮ ಸಂಸ್ಕರಿಸಿದ ಆಹಾರ, ಸಿಗಡಿ ಮತ್ತು ಇತರ ಹಲವು ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳು ತೆರೆಯುತ್ತಿವೆ. ಹೊಸ ಮಾರುಕಟ್ಟೆಗಳು ತೆರೆದಾಗ, ಭಾರತದ ಸರಕು ಮತ್ತು ಸೇವೆಗಳಿಗೆ ಸುಂಕಗಳು ಕಡಿಮೆಯಾದಾಗ ಅದರ ಅರ್ಥವೇನೆಂದು ನಿಮಗಿಂತ ಚೆನ್ನಾಗಿ ಯಾರು ತಿಳಿಯಬಲ್ಲರು. ಇದು ಭಾರತದ ಯುವಜನರಿಗೆ ಅವಕಾಶಗಳ ಹೊಸ ಆಕಾಶವನ್ನು ಸೃಷ್ಟಿಸುತ್ತದೆ.

ಸ್ನೇಹಿತರೇ,

ಇಂದು, 2013 ಕ್ಕೆ ಹೋಲಿಸಿದರೆ, ದೇಶವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚು ಸುರಕ್ಷಿತವಾಗಿದೆ. ಆದರೆ ಇದನ್ನು ನೋಡಿದಾಗ, ಕೆಲವು ಜನರ ಅಶಾಂತಿ ಮತ್ತು ಹತಾಶೆ ಹೆಚ್ಚುತ್ತಿದೆ. ನೀವು ಆಗಸ್ಟ್ 15 ರಂದು ನನ್ನ ಭಾಷಣವನ್ನು ಕೇಳಿರಬೇಕು. ಅಂತಹ ಜನರಿಗೆ, ನಾನು ಕೆಂಪು ಕೋಟೆಯಿಂದ ಹೋಮಿಯೋಪತಿಯ ಒಂದು ಡೋಸ್ ಅನ್ನು ನೀಡಿದ್ದೇನೆ - ಒಂದು ಸಣ್ಣ ಹೋಮಿಯೋಪತಿ ಮಾತ್ರೆ. ಮತ್ತು ನಿಮಗೆ ಗೊತ್ತಿರಬಹುದು, ಹೋಮಿಯೋಪತಿಯ ಸ್ವರೂಪವೆಂದರೆ ನೀವು ಔಷಧವನ್ನು ಪ್ರಾರಂಭಿಸಿದಾಗ, ಮೊದಲಿಗೆ ಅನಾರೋಗ್ಯವು ಇನ್ನಷ್ಟು ಉಲ್ಬಣಗೊಳ್ಳುತ್ತದೆ ಎಂದು ಅವರು ಹೇಳುತ್ತಾರೆ. ಅದು ಹೋಮಿಯೋಪತಿಯ ಸ್ವರೂಪ. ಆದ್ದರಿಂದ ಕೆಂಪು ಕೋಟೆಯಿಂದ ನಾನು ಹೋಮಿಯೋಪತಿ ಮಾತ್ರೆ ನೀಡಿದ್ದೇನೆ - "ಮಾನಸಿಕ ನಕ್ಸಲ್." ಈ ಮಾನಸಿಕ ನಕ್ಸಲ್ ಚಿಕಿತ್ಸೆ, ನಾನು ಹೇಳಿದಂತೆ, ಮೊದಲು ಸ್ವಲ್ಪ ಸಮಯದವರೆಗೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ ಮತ್ತು ನಂತರ ಚಿಕಿತ್ಸೆ ಪ್ರಾರಂಭವಾಗುತ್ತದೆ. ಅದೇ ರೀತಿಯಲ್ಲಿ, ನಾನು ಮಾನಸಿಕ ನಕ್ಸಲ್ ಮಾತ್ರೆ ನೀಡಿದ ತಕ್ಷಣ, ಎಲ್ಲಾ ಮಾನಸಿಕ ನಕ್ಸಲ್‌ಗಳು ಹೊರಬರಲು ಪ್ರಾರಂಭಿಸಿದರು. ಮತ್ತು ಈ ಅನಾರೋಗ್ಯವನ್ನು ಪ್ರಚಾರ ಮಾಡುತ್ತಿರುವವರನ್ನು, ಈಗ ಸಾರ್ವಜನಿಕರು ಅವರ ನಿಜವಾದ ಬಣ್ಣಗಳೊಂದಿಗೆ  ನೋಡುತ್ತಿದ್ದಾರೆ.

ಸ್ನೇಹಿತರೇ,

ನಾನು ತುಂಬಾ ಹೇಳಿದ್ದೇನೆ, ಕೆಲವರು ಯೋಚಿಸಬಹುದು - ಓಹ್, ಇದು ಏನು ದೊಡ್ಡ ವಿಷಯ, ಅದು 1.4 ಬಿಲಿಯನ್ ಜನರ ದೇಶವಾಗಿತ್ತು, ಅದು ಸುಲಭವಾಗಿತ್ತು, ಮೋದಿ ಏನು ಹೊಸತನ್ನು ಮಾಡಿದರು? ಆದರೆ ಅದು ನಿಜವಾಗಿಯೂ ಅಷ್ಟು ಸುಲಭವೇ? ನಾನು ನಿಮ್ಮನ್ನು ಮತ್ತೊಮ್ಮೆ ಹಳೆಯ ದಿನಗಳಿಗೆ ಕರೆದೊಯ್ಯುತ್ತೇನೆ. ನೀವು ಶಾಲೆಯಲ್ಲಿದ್ದಾಗ ನೆನಪಿಡಿ. 2013 ರಲ್ಲಿ, ಕೇದಾರನಾಥದಲ್ಲಿ ವಿಪತ್ತು ಸಂಭವಿಸಿದಾಗ, ಇಡೀ ಸರ್ಕಾರವೇ ನಡುಗಿತು. ಅವರಿಗೆ ಏನು ಮಾಡಬೇಕೆಂದು, ಹೇಗೆ ಮಾಡಬೇಕೆಂದು ತಿಳಿದಿರಲಿಲ್ಲ. 2008 ರಲ್ಲಿ, ಬ್ಯಾಂಕಿಂಗ್ ಬಿಕ್ಕಟ್ಟು ಬಂದಾಗ, ಅಂದಿನ ಸರ್ಕಾರವು 2014 ರವರೆಗೆ ಆ ಬಿಕ್ಕಟ್ಟಿನ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸಿತು, ಅದನ್ನು ಮುಟ್ಟಲು ಸಹ ಧೈರ್ಯ ಮಾಡಲಿಲ್ಲ. ಭಾರತದ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನು ಕುಸಿತದ ಅಂಚಿಗೆ ತರಲಾಯಿತು. 2008 ರಲ್ಲಿಯೇ, ಮುಂಬೈನಲ್ಲಿ ಭಯಾನಕ ಭಯೋತ್ಪಾದಕ ದಾಳಿ ನಡೆದಾಗ, ಸರ್ಕಾರವು ಬಾಹ್ಯ ಒತ್ತಡಕ್ಕೆ ಒಳಗಾಯಿತು, ಆದರೆ ಪಾಕಿಸ್ತಾನಕ್ಕೆ ಪಾಠ ಕಲಿಸುವ ಧೈರ್ಯವನ್ನು ಸಹ ತೋರಿಸಲಿಲ್ಲ.

ಸ್ನೇಹಿತರೇ,

ಕಳೆದ 12 ವರ್ಷಗಳಲ್ಲಿ, ದೇಶಕ್ಕೆ ಅನೇಕ ವಿಪತ್ತುಗಳು ಅಪ್ಪಳಿಸಿವೆ, ನಾವು ದೊಡ್ಡ ಚಂಡಮಾರುತಗಳನ್ನು ಎದುರಿಸಿದ್ದೇವೆ, ರಾಷ್ಟ್ರವು ಅವುಗಳನ್ನು ಬಲವಾಗಿ ಎದುರಿಸಿದೆ. ಕಳೆದ 6 ವರ್ಷಗಳಲ್ಲಿ, ಬಹಳ ದೊಡ್ಡ ಬಿಕ್ಕಟ್ಟುಗಳು ಬಂದಿವೆ. ಮೊದಲು ಇಡೀ ಜಗತ್ತನ್ನು ಸ್ಥಗಿತಗೊಳಿಸಿದ ಕರೋನಾ ಸಾಂಕ್ರಾಮಿಕ ರೋಗ. ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾಯಿತು. ಅದರ ನಂತರ, ವ್ಯಾಪಾರ ಮತ್ತು ಪೂರೈಕೆ ಸರಪಳಿಗಳನ್ನು ಶಸ್ತ್ರಸಜ್ಜಿತಗೊಳಿಸುವ ಯುಗ ಪ್ರಾರಂಭವಾಯಿತು. ನಂತರ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಬಂದಿತು. ಪ್ರತಿ ಬಾರಿ ಭಾರತವು ಈಗ ಬದುಕುಳಿಯುವುದಿಲ್ಲ ಎಂದು ಹೇಳಲಾಗುತ್ತಿತ್ತು. ಮತ್ತು ನನ್ನ "ವಿಶೇಷ ಅಭಿಮಾನಿಗಳು" ಸಂತೋಷದಿಂದ ಯೋಚಿಸುತ್ತಿದ್ದರು - ಈಗ ಮೋದಿ ಸಿಕ್ಕಿಬಿದ್ದಿದ್ದಾರೆ, ಈಗ ಮೋದಿ ಬೀಳುತ್ತಾರೆ, ಈಗ ಅವರು ಪುಡಿಪುಡಿಯಾಗುತ್ತಾರೆ. ಆದರೆ ನನ್ನ ದೇಶದ ಜನರ ಆಶೀರ್ವಾದಗಳು ಎಷ್ಟು ಬಲ, ಎಷ್ಟು ಬಲವನ್ನು ಹೊಂದಿವೆ ಎಂದರೆ ಭಾರತದ ಪತನವನ್ನು ಬಯಸಿದವರ ಪ್ರತಿಯೊಂದು ಆಸೆಯೂ ಈಡೇರದೆ ಉಳಿದಿದೆ.

ಸ್ನೇಹಿತರೇ,

ಈಗ 21ನೇ ಶತಮಾನದಲ್ಲಿ, ಹೊಸ ಅವಕಾಶಗಳ ಜಗತ್ತು ನಮ್ಮ ಮುಂದೆ ಇದೆ. ನೀವು ಮಹತ್ವಾಕಾಂಕ್ಷೆಯುಳ್ಳವರು ಎಂಬುದರಿಂದ ನನಗೆ ಸಂತೋಷವಾಗಿದೆ, ಏಕೆಂದರೆ ಮಹತ್ವಾಕಾಂಕ್ಷೆಯನ್ನು ಪಠ್ಯಪುಸ್ತಕದಿಂದ ಕಲಿಸಲಾಗುವುದಿಲ್ಲ. ಮಹತ್ವಾಕಾಂಕ್ಷೆಯು ನಿಮ್ಮನ್ನು ದೊಡ್ಡ ಕನಸು ಕಾಣಲು ಪ್ರೇರೇಪಿಸುವ ಪರಿಸರದಿಂದ ಬರುತ್ತದೆ. ಇಂದು ನಮ್ಮ ಯುವ ಸಹಚರರು ಹೇಳುತ್ತಾರೆ - ನಾನು ಏನಾದರೂ ಮಾಡುವುದಾದರೆ, ನಾನು ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸುತ್ತೇನೆ, ನಾನು ಕಂಪನಿಯನ್ನು ಪ್ರಾರಂಭಿಸಿದರೆ, ನಾನು ಅದನ್ನು ಯುನಿಕಾರ್ನ್ ಮಾಡುತ್ತೇನೆ. ನಾನು ಬಾಹ್ಯಾಕಾಶ ಮತ್ತು ಡ್ರೋನ್‌ಗಳಂತಹ ವಲಯಗಳಿಗೆ ಸೇರುತ್ತೇನೆ, ನಾನು ದೊಡ್ಡದಾದುದನ್ನು ಮಾಡುತ್ತೇನೆ. ನಾನು ಅತ್ಯಾಧುನಿಕ ಎ.ಐ. ಪರಿಹಾರಗಳನ್ನು ನಿರ್ಮಿಸುತ್ತೇನೆ, ನಾನು ಕೃಷಿಯಲ್ಲಿ ನಾವೀನ್ಯತೆಯನ್ನು ತರುತ್ತೇನೆ. ಹದಿಮೂರು ವರ್ಷಗಳ ಹಿಂದೆ, ನಿಮ್ಮ ಹಿರಿಯರಿಗೆ ಅಂತಹ ಕನಸುಗಳನ್ನು ಕನಸು ಕಾಣಲು ಸಹ ಸಾಧ್ಯವಾಗಿಲ್ಲ. ಆದರೆ ಇಂದು ನೀವು ಅವುಗಳ ಕನಸು ಕಾಣುತ್ತಿದ್ದೀರಿ, ಏಕೆಂದರೆ ಇಂದಿನ ಭಾರತದಲ್ಲಿ ಆ ಕನಸುಗಳನ್ನು ಬೆಂಬಲಿಸಲು ಪರಿಸರ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಸ್ನೇಹಿತರೇ,

ಈಗ ದೊಡ್ಡ ಗುರಿಗಳನ್ನು ಹೊಂದಿಸಿ ಅವುಗಳನ್ನು ಸಾಧಿಸುವ ಸಮಯ. ಇತ್ತೀಚೆಗೆ ಕೆಂಪು ಕೋಟೆಯಿಂದ ನಾನು ಕೆಲವು ವಿಷಯಗಳನ್ನು ಹೇಳಿದ್ದೇನೆ. ನಾನು ಅವುಗಳನ್ನು ನಿಮ್ಮಲ್ಲಿ ಪುನರಾವರ್ತಿಸಲು ಬಯಸುತ್ತೇನೆ. ಒಂದು ಪ್ರತಿಜ್ಞೆ ತೆಗೆದುಕೊಳ್ಳಿ - ಭಾರತವು ಜಾಗತಿಕ ಸಲಹಾ ಸಂಸ್ಥೆಗಳನ್ನು  ಹೊಂದಲು ಏಕೆ ಸಾಧ್ಯವಿಲ್ಲ? ನಮ್ಮ ಲೆಕ್ಕಪತ್ರ ಸಂಸ್ಥೆಗಳು, ನಮ್ಮ ಕಾನೂನು ಸಂಸ್ಥೆಗಳು, ನಮ್ಮ ಹಣಕಾಸು ಸಂಸ್ಥೆಗಳು ಜಾಗತಿಕ ನಾಯಕರಾಗಲು ಏಕೆ ಸಾಧ್ಯವಿಲ್ಲ? ಇಂದು ಭಾರತೀಯರು ವಿಶ್ವದ ಉನ್ನತ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಭಾರತೀಯರು ವಿಶ್ವದ ಉನ್ನತ ಕಂಪನಿಗಳನ್ನು ಮುನ್ನಡೆಸುತ್ತಿದ್ದರೆ, ಭಾರತೀಯರಿಂದ ರಚಿಸಲ್ಪಟ್ಟ ಕಂಪನಿಗಳು ಜಗತ್ತನ್ನು  ಮುನ್ನಡೆಸಲು ಏಕೆ  ಸಾಧ್ಯವಿಲ್ಲ?

ಸ್ನೇಹಿತರೇ,

ಇದೆಲ್ಲವೂ ಸಾಧ್ಯ. ಇದಕ್ಕಾಗಿ ನೀವು ನೆಟ್‌ವರ್ಕ್‌ಗಳು ಮತ್ತು ಜ್ಞಾನ ಎರಡನ್ನೂ ಹೊಂದಿದ್ದೀರಿ.

ಸ್ನೇಹಿತರೇ

ನಮ್ಮ ಸ್ಫೂರ್ತಿ, ನಿಮ್ಮ ಸ್ಫೂರ್ತಿ ಕೂಡ ಎಸ್.ಆರ್.ಸಿ.ಸಿ. ಕಾಲೇಜಿನ ಹೆಮ್ಮೆ ಆಗಿದೆ. ಇದು ಎರಡು ಸುಂದರವಾದ ಸಂಕೇತಗಳನ್ನು ಹೊಂದಿದೆ. ಒಂದು ಉದಯಿಸುತ್ತಿರುವ ಸೂರ್ಯ, ಮತ್ತು ಇನ್ನೊಂದು ಸಮುದ್ರದಲ್ಲಿ ಮುಂದೆ ಚಲಿಸುವ ಹಡಗು. ದಿಕ್ಕನ್ನು ತೋರಿಸುವ ಸೂರ್ಯ, ಮತ್ತು ಆ ದಿಕ್ಕಿನಲ್ಲಿ ಮುಂದೆ ಚಲಿಸುವ ಹಡಗು. ನಾವು ಅಂತಹ ಹೊಸ ಹಾದಿಗಳಲ್ಲಿ ನಡೆಯಬೇಕು, ಅಲ್ಲಿ ಸೂರ್ಯ ನಮ್ಮದು, ಸಮುದ್ರ ನಮ್ಮದು. ದೋಣಿ ನಮ್ಮದು, ನಾವಿಕರೂ ನಮ್ಮವರೇ. ಅಲೆಗಳ ಮೇಲೆ ವಿಜಯ ಬರೆಯುವ ಧೈರ್ಯ ನಮ್ಮದು. ಹಾರಾಟ ನಮ್ಮದು, ಆಕಾಶ ನಮ್ಮದು. ಬಲವಾದ ಗಾಳಿಯನ್ನು ಎದುರಿಸುವ ಮನೋಭಾವ ನಮ್ಮದು. ಕನಸು ನಮ್ಮದು, ಸಂಕಲ್ಪ ನಮ್ಮದು, ಸ್ವಾವಲಂಬಿ ಭಾರತದ ಧ್ವಜ ನಮ್ಮದು. ಅಭಿವೃದ್ಧಿ ಹೊಂದಿದ ಭಾರತದ ಹಾದಿಯಲ್ಲಿ, ವೇಗವಾಗಿ ಏರುವ ಪ್ರತಿಯೊಂದು ಹೆಜ್ಜೆಯೂ ನಮ್ಮದು. ಮತ್ತೊಮ್ಮೆ, ಈ ವಿಶೇಷ ಸಂದರ್ಭದಲ್ಲಿ, ಎಸ್.ಆರ್.ಸಿ.ಸಿ. ಯೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ನನ್ನ ಅನೇಕ ಶುಭಾಶಯಗಳನ್ನು ಹೇಳುತ್ತೇನೆ.

ವಂದೇ ಮಾತರಂ.

 

*****


(ಪ್ರಕಟಣೆ ಐ.ಡಿ.: 2307407) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Bengali , Bengali-TR , Manipuri , Assamese , Punjabi , Gujarati