ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (ಪಿ ಎಲ್‌ ಎಫ್‌ ಎಸ್) ಏಪ್ರಿಲ್ – ಜೂನ್, 2026ರ ತ್ರೈಮಾಸಿಕ ಬುಲೆಟಿನ್


ನಗರ ಪ್ರದೇಶಗಳಲ್ಲಿ ಪುರುಷರ ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್ ಎಫ್ ಪಿ ಆರ್) ಹೆಚ್ಚಳವಾಗಿದೆ

ನಗರ ನಿರುದ್ಯೋಗ ದರ (ಯುಆರ್) ಸ್ಥಿರವಾಗಿದೆ

ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ದ್ವಿತೀಯ ವಲಯದ ಉದ್ಯೋಗ ಪ್ರಮಾಣ ಹೆಚ್ಚಳ ದಾಖಲು

ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ

ಪ್ರಕಟಣಾ ದಿನಾಂಕ: 10 AUG 2026 4:00PM by PIB Bengaluru

ಪಿ ಎಲ್‌ ಎಫ್‌ ಎಸ್ ಏಪ್ರಿಲ್‌ - ಜೂನ್ 2026ರ ತ್ರೈಮಾಸಿಕ ಬುಲೆಟಿನ್‌ ನ ಮುಖ್ಯಾಂಶಗಳು:

  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಕಾರ್ಮಿಕ ಬಲದ ಭಾಗವಹಿಸುವಿಕೆ ದರ (ಎಲ್ ಎಫ್ ಪಿ ಆರ್) ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಶೇಕಡಾ 54.6 ರಷ್ಟಿತ್ತು, ಇದು ಹಿಂದಿನ ತ್ರೈಮಾಸಿಕದ ಶೇಕಡಾ 55.5 ರಷ್ಟಿತ್ತು.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಗರ ಎಲ್ ಎಫ್ ಪಿ ಆರ್ ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಬದಲಾಗದೆ ಶೇಕಡಾ 50.2 ರಷ್ಟೇ ಉಳಿದಿದೆ.
  • ನಗರ ಪ್ರದೇಶಗಳಲ್ಲಿನ ಪುರುಷರ ಎಲ್‌ ಎಫ್‌ ಪಿ ಆರ್ (15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 75.3 ಕ್ಕೆ ಸ್ವಲ್ಪ ಹೆಚ್ಚಾಗಿದೆ, ಇದು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 75.0 ರಷ್ಟಿತ್ತು.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ನಗರ ಪ್ರದೇಶದ ಕಾರ್ಮಿಕ ಜನಸಂಖ್ಯೆಯ ಅನುಪಾತ (ಡಬ್ಲ್ಯೂಪಿಆರ್) ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಶೇಕಡಾ 46.8 ರಷ್ಟಿದ್ದು ಸ್ಥಿರವಾಗಿ ಉಳಿದಿದೆ.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳ ಪಾಲು ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಹೆಚ್ಚಾಗಿದೆ; ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 15.5 ರಿಂದ ಶೇಕಡಾ 16.1 ಕ್ಕೆ ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ 48.9 ರಿಂದ ಶೇಕಡಾ 49.3 ಕ್ಕೆ ಏರಿಕೆಯಾಗಿದೆ.
  • ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ದ್ವಿತೀಯ ವಲಯದಲ್ಲಿನ ಉದ್ಯೋಗದ ಪಾಲು ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ಹೆಚ್ಚಾಗಿದೆ.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ತೃತೀಯ ವಲಯದಲ್ಲಿನ ಉದ್ಯೋಗದ ಪಾಲು ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಏರಿಕೆಯನ್ನು ದಾಖಲಿಸಿದೆ.
  • 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಗರ ನಿರುದ್ಯೋಗ ದರ (ಯುಆರ್) ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಶೇಕಡಾ 6.7 ರಷ್ಟಿದ್ದು ಸ್ಥಿರವಾಗಿ ಉಳಿದಿದೆ.

ಪರಿಚಯ

ಸಂಖ್ಯಾಶಾಸ್ತ್ರ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ ಎಸ್‌ ಒ) ನಡೆಸುವ ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯು (ಪಿ ಎಲ್‌ ಎಫ್‌ ಎಸ್) ಜನರ ಆರ್ಥಿಕ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆ ಹಾಗೂ ಉದ್ಯೋಗ-ನಿರುದ್ಯೋಗ ಸ್ಥಿತಿಗತಿಗಳ ಪ್ರಾಥಮಿಕ ಮಾಹಿತಿಯ ಮೂಲವಾಗಿದೆ. ಪ್ರಸ್ತುತ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯೂಎಸ್) ಚೌಕಟ್ಟಿನಡಿಯಲ್ಲಿ ಭಾರತದ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಕಾರ್ಮಿಕ ಬಲದ ಮಾಸಿಕ ಮತ್ತು ತ್ರೈಮಾಸಿಕ ಅಂದಾಜುಗಳನ್ನು ಒದಗಿಸಲು ಪಿ ಎಲ್‌ ಎಫ್‌ ಎಸ್ ಸಮೀಕ್ಷೆಯ ವಿಧಾನವನ್ನು ಜನವರಿ 2025 ರಿಂದ ಪರಿಷ್ಕರಿಸಲಾಗಿದೆ.

ವಿಶಾಲವಾದ ವ್ಯಾಪ್ತಿಯೊಂದಿಗೆ ಉನ್ನತ-ಆವರ್ತನದ ಕಾರ್ಮಿಕ ಬಲ ಸೂಚಕಗಳನ್ನು ಸೃಷ್ಟಿಸುವ ಅಗತ್ಯವನ್ನು ಪರಿಗಣಿಸಿ, ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (ಪಿ ಎಲ್‌ ಎಫ್‌ ಎಸ್) ಮಾದರಿ ವಿಧಾನವನ್ನು  ಜನವರಿ 2025 ರಿಂದ ಮರುವಿನ್ಯಾಸಗೊಳಿಸಲಾಗಿದೆ. ಮರುವಿನ್ಯಾಸಗೊಳಿಸಲಾದ ಪಿ ಎಲ್‌ ಎಫ್‌ ಎಸ್ ಕೆಳಗಿನ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ:

  • ಪ್ರಸ್ತುತ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯೂಎಸ್) ಯಡಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಪ್ರತಿ ತಿಂಗಳು ಪ್ರಮುಖ ಉದ್ಯೋಗ ಮತ್ತು ನಿರುದ್ಯೋಗ ಸೂಚಕಗಳನ್ನು – ಅಂದರೆ ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್ ಎಫ್ ಪಿ ಆರ್), ಕಾರ್ಮಿಕ ಜನಸಂಖ್ಯೆಯ ಅನುಪಾತ (ಡಬ್ಲ್ಯೂಪಿಆರ್) ಮತ್ತು ನಿರುದ್ಯೋಗ ದರ (ಯುಆರ್) – ಸೃಷ್ಟಿಸುವುದು.
  • ತ್ರೈಮಾಸಿಕ ಪಿ ಎಲ್‌ ಎಫ್‌ ಎಸ್ ಫಲಿತಾಂಶಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುವುದು, ಆ ಮೂಲಕ ಸಿಡಬ್ಲ್ಯೂಎಸ್ ಚೌಕಟ್ಟಿನಡಿಯಲ್ಲಿ ಗ್ರಾಮೀಣ ಮತ್ತು ನಗರ ಭಾರತ ಎರಡಕ್ಕೂ ಕಾರ್ಮಿಕ ಮಾರುಕಟ್ಟೆ ಸೂಚಕಗಳ ತ್ರೈಮಾಸಿಕ ಅಂದಾಜುಗಳನ್ನು ಸಿದ್ಧಪಡಿಸುವುದು.
  • ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಸಾಮಾನ್ಯ ಸ್ಥಿತಿ (ps+ss) ಮತ್ತು ಪ್ರಸ್ತುತ ಸಾಪ್ತಾಹಿಕ ಸ್ಥಿತಿ (ಸಿಡಬ್ಲ್ಯೂಎಸ್) ಎರಡರಲ್ಲೂ ಪ್ರಮುಖ ಉದ್ಯೋಗ ಮತ್ತು ನಿರುದ್ಯೋಗ ಸೂಚಕಗಳ ವಾರ್ಷಿಕ ಅಂದಾಜುಗಳನ್ನು ಒದಗಿಸುವುದು.

ಡಿಸೆಂಬರ್ 2024 ರವರೆಗೆ ಬಿಡುಗಡೆಯಾದ ಹಿಂದಿನ ಪಿ ಎಲ್‌ ಎಫ್‌ ಎಸ್ ತ್ರೈಮಾಸಿಕ ಬುಲೆಟಿನ್‌ ಗಳು ನಗರ ಪ್ರದೇಶಗಳಿಗೆ ಮಾತ್ರ ಕಾರ್ಮಿಕ ಮಾರುಕಟ್ಟೆ ಸೂಚಕಗಳನ್ನು ಪ್ರಸ್ತುತಪಡಿಸುತ್ತಿದ್ದವು. ಏಪ್ರಿಲ್ – ಜೂನ್ 2025 ರ ಬುಲೆಟಿನ್ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಿಗೆ ಅಂದಾಜುಗಳನ್ನು ಒದಗಿಸಿದ ಸರಣಿಯಲ್ಲಿ ಮೊದಲನೆಯದಾಗಿತ್ತು ಮತ್ತು ಪ್ರಸ್ತುತ ಏಪ್ರಿಲ್ – ಜೂನ್ 2026 ರ ಬುಲೆಟಿನ್ ಈ ಸರಣಿಯಲ್ಲಿ ಐದನೆಯದಾಗಿದೆ. ಈ ತ್ರೈಮಾಸಿಕ ಬುಲೆಟಿನ್‌ ನಲ್ಲಿ, ಉದ್ಯೋಗಿಗಳ ಸಂಖ್ಯೆಯನ್ನು ಸಂಪೂರ್ಣ ಸಂಖ್ಯೆಯಲ್ಲಿ ಒದಗಿಸಲು ಪ್ರಯತ್ನಿಸಲಾಗಿದೆ.

ಈ ತ್ರೈಮಾಸಿಕ ಬುಲೆಟಿನ್ ಪ್ರಸ್ತುತ ಸಾಪ್ತಾಹಿಕ ಸ್ಥಿತಿಯಲ್ಲಿ (ಸಿಡಬ್ಲ್ಯೂಎಸ್) ಪ್ರಮುಖ ಕಾರ್ಮಿಕ ಬಲ ಸೂಚಕಗಳ ಅಂದಾಜುಗಳನ್ನು ಪ್ರಸ್ತುತಪಡಿಸುತ್ತದೆ — ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್ ಎಫ್ ಪಿ ಆರ್), ಕಾರ್ಮಿಕ ಜನಸಂಖ್ಯೆಯ ಅನುಪಾತ (ಡಬ್ಲ್ಯೂಪಿಆರ್), ನಿರುದ್ಯೋಗ ದರ (ಯುಆರ್), ಮತ್ತು ಉದ್ಯೋಗದ ವಿಶಾಲ ಸ್ಥಿತಿ ಹಾಗೂ ಉದ್ಯಮದ ಆಧಾರದ ಮೇಲೆ ಕಾರ್ಮಿಕರ ಹಂಚಿಕೆ — ಅಖಿಲ ಭಾರತ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಇದರ ಜೊತೆಗೆ, ಆಯ್ಕೆ ಮಾಡಿದ ರಾಜ್ಯಗಳಿಗೆ ಸಿಡಬ್ಲ್ಯೂಎಸ್ ನಲ್ಲಿ ಎಲ್ ಎಫ್ ಪಿ ಆರ್, ಡಬ್ಲ್ಯೂಪಿಆರ್ ಮತ್ತು ಯುಆರ್ ನ ರಾಜ್ಯ-ಮಟ್ಟದ ಅಂದಾಜುಗಳನ್ನು ಸಹ ಒದಗಿಸಲಾಗಿದೆ.

ಸಿಡಬ್ಲ್ಯೂಎಸ್ ಪ್ರಕಾರ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳು:

  • ನಗರ ಕಾರ್ಮಿಕ ಬಲ ಭಾಗವಹಿಸುವಿಕೆ ದರ (ಎಲ್ ಎಫ್ ಪಿ ಆರ್) ದಲ್ಲಿ ಯಾವುದೇ ಬದಲಾವಣೆ ಆಗಿಲ್ಲ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಎಲ್ ಎಫ್ ಪಿ ಆರ್ ಏಪ್ರಿಲ್-ಜೂನ್ 2026 ರ ತ್ರೈಮಾಸಿಕದಲ್ಲಿ ಶೇಕಡಾ 54.6 ರಷ್ಟಿತ್ತು, ಇದು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 55.5 ರಷ್ಟಿತ್ತು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಗ್ರಾಮೀಣ ಎಲ್ ಎಫ್ ಪಿ ಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 56.9 ರಷ್ಟಿದ್ದು, ಹಿಂದಿನ ತ್ರೈಮಾಸಿಕದ ಶೇಕಡಾ 58.2 ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಎಲ್ ಎಫ್ ಪಿ ಆರ್ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಬದಲಾಗದೆ ಉಳಿದಿದೆ. ಒಟ್ಟಾರೆ ಮಹಿಳಾ ಎಲ್ ಎಫ್ ಪಿ ಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 33.2 ರಷ್ಟಿದ್ದು, ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 34.7 ರಷ್ಟಿತ್ತು. ನಗರ ಪ್ರದೇಶಗಳಲ್ಲಿ ಪುರುಷ ಎಲ್ ಎಫ್ ಪಿ ಆರ್ ಜನವರಿ-ಮಾರ್ಚ್ 2026 ರ ತ್ರೈಮಾಸಿಕದಲ್ಲಿದ್ದ ಶೇಕಡಾ 75.0 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 75.3 ಕ್ಕೆ ಸ್ವಲ್ಪ ಹೆಚ್ಚಾಗಿದೆ.

ಏಪ್ರಿಲ್-ಜೂನ್ 2026ರ ತ್ರೈಮಾಸಿಕದಲ್ಲಿ ಒಟ್ಟಾರೆ ಎಲ್ ಎಫ್ ಪಿ ಆರ್ ಏಪ್ರಿಲ್-ಜೂನ್ 2025 ಕ್ಕೆ ಹೋಲಿಸಿದರೆ ಶೇಕಡಾ 0.4 ರಷ್ಟು ಸಾಧಾರಣ ಕುಸಿತವನ್ನು ದಾಖಲಿಸಿದೆ. 2025 ರ ಇದೇ ತ್ರೈಮಾಸಿಕದಲ್ಲಿ ದಾಖಲಾದ ಶೇಕಡಾ 57.1 ಕ್ಕೆ ಹೋಲಿಸಿದರೆ ಪ್ರಸ್ತುತ ತ್ರೈಮಾಸಿಕದಲ್ಲಿ ಗ್ರಾಮೀಣ ಎಲ್ ಎಫ್ ಪಿ ಆರ್ ಶೇಕಡಾ 56.9 ರಷ್ಟಿದ್ದು ಬಹುತೇಕ ಸ್ಥಿರವಾಗಿದೆ, ಇದೇ ವೇಳೆ, ನಗರ ಎಲ್ ಎಫ್ ಪಿ ಆರ್ ಶೇಕಡಾ 0.4 ರಷ್ಟು ಕಡಿಮೆಯಾಗಿದೆ.

 

ಏಪ್ರಿಲ್-ಜೂನ್ 2026 ರಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ನಗರ ಎಲ್ ಎಫ್ ಪಿ ಆರ್ ಶೇಕಡಾ 50.2 ರಷ್ಟಿದ್ದು ಯಾವುದೇ ಬದಲಾವಣೆಯಾಗಿಲ್ಲ.

  • ನಗರ ಪ್ರದೇಶಗಳಲ್ಲಿನ ಕಾರ್ಮಿಕ-ಜನಸಂಖ್ಯೆ ಅನುಪಾತದಲ್ಲಿ ಸ್ಥಿರತೆ: 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಕಾರ್ಮಿಕ ಜನಸಂಖ್ಯೆಯ ಅನುಪಾತ (ಡಬ್ಲ್ಯೂಪಿಆರ್) ಏಪ್ರಿಲ್-ಜೂನ್ 2026 ರ ತ್ರೈಮಾಸಿಕದಲ್ಲಿ ಶೇಕಡಾ 51.7 ರಷ್ಟು ಅಂದಾಜಿಸಲಾಗಿದೆ, ಇದು ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 52.8 ರಷ್ಟಿತ್ತು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ನಗರ ಡಬ್ಲ್ಯೂಪಿಆರ್ ಜನವರಿ-ಮಾರ್ಚ್ 2026 ರ ಶೇಕಡಾ 46.9 ಕ್ಕೆ ಹೋಲಿಸಿದರೆ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 46.8 ರಷ್ಟಿದ್ದು ಸ್ಥಿರವಾಗಿತ್ತು. ನಗರ ಪ್ರದೇಶಗಳಲ್ಲಿ, ಪುರುಷರ ಡಬ್ಲ್ಯೂಪಿಆರ್ ಹಿಂದಿನ ತ್ರೈಮಾಸಿಕದ ಶೇಕಡಾ 70.6 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 70.7 ಕ್ಕೆ ಸ್ವಲ್ಪ ಹೆಚ್ಚಾಗಿದೆ, ಹಾಗೆಯೇ, ನಗರ ಮಹಿಳೆಯರ ಡಬ್ಲ್ಯೂಪಿಆರ್ ಹಿಂದಿನ ತ್ರೈಮಾಸಿಕದಲ್ಲಿದ್ದ ಶೇಕಡಾ 23.1 ಕ್ಕೆ ಹೋಲಿಸಿದರೆ ಶೇಕಡಾ 22.8 ರಷ್ಟಿದೆ.

ಏಪ್ರಿಲ್-ಜೂನ್ 2025 ರಿಂದ ಏಪ್ರಿಲ್-ಜೂನ್ 2026 ರವರೆಗೆ ಒಟ್ಟಾರೆ ಡಬ್ಲ್ಯೂಪಿಆರ್ ಶೇಕಡಾ 0.3 ರಷ್ಟು ಇಳಿಕೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ಪುರುಷರ ಡಬ್ಲ್ಯೂಪಿಆರ್ ಬಹುತೇಕ ಬದಲಾಗದೆ ಉಳಿದಿದೆ, ಆದರೆ ಮಹಿಳಾ ಡಬ್ಲ್ಯೂಪಿಆರ್ ಏಪ್ರಿಲ್-ಜೂನ್ 2025 ರ ಶೇಕಡಾ 31.6 ಕ್ಕೆ ಎದುರಾಗಿ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 31.3 ರಷ್ಟಿದೆ ಎಂದು ಅಂದಾಜಿಸಲಾಗಿದೆ.

 

ಏಪ್ರಿಲ್-ಜೂನ್ 2026 ರಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ನಗರ ಡಬ್ಲ್ಯೂಪಿಆರ್ ಶೇಕಡಾ 46.8 ರಷ್ಟಿದ್ದು ಸ್ಥಿರವಾಗಿದೆ.

 

  • ನಗರ ಪ್ರದೇಶಗಳಲ್ಲಿ ಒಟ್ಟಾರೆ ನಿರುದ್ಯೋಗ ದರ (ಯುಆರ್) ಸ್ಥಿರವಾಗಿದೆ: ನಗರ ಪ್ರದೇಶಗಳಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳ ಒಟ್ಟಾರೆ ಯುಆರ್ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 6.7 ರಷ್ಟಿದ್ದು ಸ್ಥಿರವಾಗಿದೆ (ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 6.6 ರಷ್ಟಿತ್ತು). ಗ್ರಾಮೀಣ ಪ್ರದೇಶಗಳಲ್ಲಿ ಇದು ಹಿಂದಿನ ತ್ರೈಮಾಸಿಕದ ಶೇಕಡಾ 4.3 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 4.8 ಕ್ಕೆ ಸ್ವಲ್ಪ ಹೆಚ್ಚಾಗಿದೆ. ಮಹಿಳೆಯರ ನಗರ ಯುಆರ್ ಕಳೆದ ತ್ರೈಮಾಸಿಕದ ಶೇಕಡಾ 9.1 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 8.7 ಕ್ಕೆ ಕಡಿಮೆಯಾಗಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಕ್ತಿಗಳ ಮಟ್ಟದ ಯುಆರ್ ಪ್ರಸ್ತುತ ತ್ರೈಮಾಸಿಕದಲ್ಲಿದ್ದಷ್ಟೇ (ಶೇಕಡಾ 4.8) ಉಳಿದಿದೆ. ಗ್ರಾಮೀಣ ಪುರುಷರ ಯುಆರ್ ಏಪ್ರಿಲ್-ಜೂನ್ 2025 ರ ಶೇಕಡಾ 5.0 ರಿಂದ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 4.8 ಕ್ಕೆ ಕಡಿಮೆಯಾಗಿದೆ. ನಗರ ಪ್ರದೇಶಗಳಲ್ಲಿ, ಹಿಂದಿನ ವರ್ಷದ ಅದೇ ಅವಧಿಯ ತ್ರೈಮಾಸಿಕ ಹೋಲಿಕೆಯು ಪುರುಷ ಮತ್ತು ಒಟ್ಟಾರೆ ವ್ಯಕ್ತಿಗಳ ಮಟ್ಟದ ಯುಆರ್ ನಲ್ಲಿ ಸ್ಥಿರತೆಯನ್ನು ತೋರಿಸುತ್ತದೆ, ಆದರೆ ಮಹಿಳೆಯರ ಯುಆರ್ ಶೇಕಡಾ 8.9 ರಿಂದ ಶೇಕಡಾ 8.7 ಕ್ಕೆ ಕಡಿಮೆಯಾಗಿದೆ.

  

ನಗರ ಯುಆರ್ (15+ ವರ್ಷ ವಯಸ್ಸಿನವರು) ಶೇಕಡಾ 6.7 ರಷ್ಟಿದ್ದು ಬಹುತೇಕ ಸ್ಥಿರವಾಗಿದೆ.

  • ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳ ಪ್ರಮಾಣದಲ್ಲಿ ಏರಿಕೆ: ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ನಿಯಮಿತ ವೇತನ/ಸಂಬಳದ ಉದ್ಯೋಗದಲ್ಲಿ ಕೆಲಸಗಾರರ ತೊಡಗಿಸಿಕೊಳ್ಳುವಿಕೆ ಹೆಚ್ಚಳವನ್ನು ತೋರಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಇದು ಹಿಂದಿನ ತ್ರೈಮಾಸಿಕದ ಶೇಕಡಾ 15.5 ರಿಂದ ಏಪ್ರಿಲ್-ಜೂನ್ 2026 ರ ಅವಧಿಯಲ್ಲಿ ಶೇಕಡಾ 16.1 ಕ್ಕೆ ಹೆಚ್ಚಾಗಿದೆ, ಆದರೆ ನಗರ ಪ್ರದೇಶಗಳಲ್ಲಿ ಇದು ಇದೇ ಅವಧಿಯಲ್ಲಿ ಶೇಕಡಾ 48.9 ರಿಂದ ಶೇಕಡಾ 49.3 ಕ್ಕೆ ಏರಿಕೆಯಾಗಿದೆ.

ಕಳೆದ ವರ್ಷದ ಇದೇ ಅವಧಿಯೊಂದಿಗಿನ ತ್ರೈಮಾಸಿಕ ಹೋಲಿಕೆಯು ಗ್ರಾಮೀಣ ಪ್ರದೇಶಗಳಲ್ಲಿ ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಗಳಲ್ಲಿ ಕಾರ್ಮಿಕರ ತೊಡಗಿಸಿಕೊಳ್ಳುವಿಕೆಯು ಏಪ್ರಿಲ್-ಜೂನ್ 2025 ರ ಶೇಕಡಾ 15.4 ರಿಂದ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 16.1ಕ್ಕೆ ಹೆಚ್ಚಿರುವುದನ್ನು ಸೂಚಿಸುತ್ತದೆ. ನಗರ ಪ್ರದೇಶಗಳಲ್ಲಿ, ನಿಯಮಿತ ವೇತನ/ಸಂಬಳದ ಉದ್ಯೋಗದಲ್ಲಿ ಕಾರ್ಮಿಕರ ತೊಡಗಿಸಿಕೊಳ್ಳುವಿಕೆ ಈ ಅವಧಿಯಲ್ಲಿ ಬಹುತೇಕ ಒಂದೇ ಮಟ್ಟದಲ್ಲಿದೆ (ಶೇಕಡಾ 49.4 ವಿರುದ್ಧ ಶೇಕಡಾ 49.3).

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಏಪ್ರಿಲ್-ಜೂನ್ 2026 ರ ತ್ರೈಮಾಸಿಕದಲ್ಲಿ ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳಲ್ಲಿ ನಿಯಮಿತ ವೇತನ/ಸಂಬಳ ಪಡೆಯುವ ಉದ್ಯೋಗಿಗಳು ಹೆಚ್ಚಾಗಿದ್ದಾರೆ.

  • ಗ್ರಾಮೀಣ ಪ್ರದೇಶಗಳಲ್ಲಿ ದ್ವಿತೀಯ ಮತ್ತು ತೃತೀಯ ವಲಯಗಳೆರಡರಲ್ಲೂ ಉದ್ಯೋಗ ಪ್ರಮಾಣ ಹೆಚ್ಚಳ: ವಲಯವಾರು ಉದ್ಯೋಗ ಹಂಚಿಕೆಯು ಒಂದೇ ರೀತಿಯ ರಚನೆಯನ್ನು ಮುಂದುವರಿಸಿದೆ, ಗ್ರಾಮೀಣ ಕಾರ್ಮಿಕರು ಹೆಚ್ಚಾಗಿ ಪ್ರಾಥಮಿಕ ವಲಯದಲ್ಲಿ ಮತ್ತು ನಗರ ಕಾರ್ಮಿಕರು ತೃತೀಯ ವಲಯದಲ್ಲಿ ಕೇಂದ್ರೀಕೃತರಾಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ, ಕೃಷಿಯಲ್ಲಿ ತೊಡಗಿರುವ ಕಾರ್ಮಿಕರ ಪಾಲು ಏಪ್ರಿಲ್ - ಜೂನ್ 2026 ರ ಅವಧಿಯಲ್ಲಿ ಶೇಕಡಾ 52.9 ರಷ್ಟಿದ್ದು, ಹಿಂದಿನ ತ್ರೈಮಾಸಿಕದ ಶೇಕಡಾ 55.8 ರಿಂದ ಕಡಿಮೆಯಾಗಿದೆ. ಆದರೆ ತೃತೀಯ ವಲಯದಲ್ಲಿನ ಉದ್ಯೋಗದ ಪಾಲು ಜನವರಿ - ಮಾರ್ಚ್ 2026 ರ ಶೇಕಡಾ 21.7 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 22.7 ಕ್ಕೆ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ದ್ವಿತೀಯ ವಲಯವು ಹಿಂದಿನ ತ್ರೈಮಾಸಿಕದ ಶೇಕಡಾ 22.6 ರಿಂದ ಪ್ರಸ್ತುತ ತ್ರೈಮಾಸಿಕದಲ್ಲಿ ಶೇಕಡಾ 24.4 ಕ್ಕೆ ಏರಿಕೆಯನ್ನು ಕಂಡಿದೆ. ನಗರ ಪ್ರದೇಶಗಳಲ್ಲಿ, ತೃತೀಯ ವಲಯದಲ್ಲಿನ ಉದ್ಯೋಗದ ಪಾಲು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ವ್ಯಾಪಕವಾಗಿ ಸ್ಥಿರವಾಗಿದೆ. ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ದ್ವಿತೀಯ ವಲಯದಲ್ಲಿ ಉದ್ಯೋಗದ ಪಾಲು ಶೇಕಡಾ 31.9 ಕ್ಕೆ ಹೆಚ್ಚಾಗಿದ್ದರೆ, ನಗರ ಪ್ರದೇಶಗಳಲ್ಲಿ ಕೃಷಿ ವಲಯವು ಶೇಕಡಾ 6.1 ಕ್ಕೆ ಕುಸಿತ ಕಂಡಿದೆ.

ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಗ್ರಾಮೀಣ ಪ್ರದೇಶಗಳಲ್ಲಿ ತೃತೀಯ ವಲಯದಲ್ಲಿನ ತೊಡಗಿಸಿಕೊಳ್ಳುವಿಕೆ ಏಪ್ರಿಲ್-ಜೂನ್ 2025 ರ ಶೇಕಡಾ 22.1 ರಿಂದ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 22.7 ಕ್ಕೆ ಹೆಚ್ಚಾಗಿದೆ. ನಗರ ಪ್ರದೇಶಗಳಲ್ಲಿ, ಅದೇ ಅವಧಿಯಲ್ಲಿ ತೃತೀಯ ವಲಯದಲ್ಲಿನ ತೊಡಗಿಸಿಕೊಳ್ಳುವಿಕೆ ಶೇಕಡಾ 61.7 ರಿಂದ ಶೇಕಡಾ 62.0 ಕ್ಕೆ ಹೆಚ್ಚಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ದ್ವಿತೀಯ ವಲಯದಲ್ಲಿ ಕಾರ್ಮಿಕರ ತೊಡಗಿಸಿಕೊಳ್ಳುವಿಕೆ ಹಿಂದಿನ ತ್ರೈಮಾಸಿಕದಲ್ಲಿದ್ದ ಶೇಕಡಾ 22.6 ರಿಂದ ಏಪ್ರಿಲ್-ಜೂನ್ 2026 ರಲ್ಲಿ ಶೇಕಡಾ 24.4 ಕ್ಕೆ ಹೆಚ್ಚಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಯೋಜಿತ ಜನಸಂಖ್ಯಾ ಅಂಕಿಅಂಶಗಳನ್ನು ಬಳಸಿಕೊಂಡು, 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಉದ್ಯೋಗಿಗಳ ಸಂಪೂರ್ಣ ಸಂಖ್ಯೆಯನ್ನು ಅಂದಾಜಿಸಲಾಗಿದೆ. ಏಪ್ರಿಲ್-ಜೂನ್ 2026 ರ ತ್ರೈಮಾಸಿಕದಲ್ಲಿ ದೇಶದಲ್ಲಿ ಸರಾಸರಿ 56.6 ಕೋಟಿ ವ್ಯಕ್ತಿಗಳು (15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಉದ್ಯೋಗದಲ್ಲಿದ್ದರು, ಅವರಲ್ಲಿ 40.2 ಕೋಟಿ ಪುರುಷರು ಮತ್ತು 16.4 ಕೋಟಿ ಮಹಿಳೆಯರಾಗಿದ್ದರು.

ಪ್ರದೇಶ / ವಿವರ

ಸಮೀಕ್ಷೆಗೊಳಪಟ್ಟ ವ್ಯಕ್ತಿಗಳ ಸಂಖ್ಯೆ

ನಗರ ಪ್ರದೇಶಗಳಲ್ಲಿ ಸಮೀಕ್ಷೆಗೊಳಪಟ್ಟ ವ್ಯಕ್ತಿಗಳು

2,40,881

ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆಗೊಳಪಟ್ಟ ವ್ಯಕ್ತಿಗಳು

3,18,792

ಅಖಿಲ ಭಾರತ ಮಟ್ಟದಲ್ಲಿ, ತ್ರೈಮಾಸಿಕ ಅಂದಾಜುಗಳು ಸಮೀಕ್ಷೆಗೊಳಪಟ್ಟ ಒಟ್ಟು 5,59,673 ವ್ಯಕ್ತಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ.

ಏಪ್ರಿಲ್-ಜೂನ್, 2026 ರ ತ್ರೈಮಾಸಿಕ ಬುಲೆಟಿನ್ ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mospi.gov.in) ಲಭ್ಯವಿದೆ.

ಪ್ರಕಟಣೆಗಳು/ವರದಿಗಳನ್ನು ವೀಕ್ಷಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.

Click here to see PDF

*****


(ಪ್ರಕಟಣೆ ಐ.ಡಿ.: 2297239) ವಿಸಿಟರ್ ಕೌಂಟರ್ : 98
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी