ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಪವನ ಶಕ್ತಿಯು ಭಾರತದ ಶುದ್ಧ ಇಂಧನ ಭವಿಷ್ಯ ಮತ್ತು ವಿಕಸಿತ ಭಾರತ ದೃಷ್ಟಿಕೋನವನ್ನು ಮುನ್ನಡೆಸಲಿದೆ: ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ


2025-26ರಲ್ಲಿ ಭಾರತವು 6 ಗಿಗಾ ವ್ಯಾಟ್ (GW) ಗೂ ಹೆಚ್ಚು ವಾರ್ಷಿಕ ಪವನ ಶಕ್ತಿ ಸಾಮರ್ಥ್ಯವನ್ನು ಸೇರ್ಪಡೆಗೊಳಿಸಿ ದಾಖಲೆ ನಿರ್ಮಿಸಿದೆ; 2030ರ ವೇಳೆಗೆ 100 ಗಿಗಾ ವ್ಯಾಟ್ ಪವನ ಶಕ್ತಿ ಸಾಮರ್ಥ್ಯದ ಗುರಿ: ಜೋಶಿ

प्रविष्टि तिथि: 15 JUN 2026 6:27PM by PIB Bengaluru

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಮಾತನಾಡಿ, ಭಾರತದ ಶುದ್ಧ ಇಂಧನ ಪರಿವರ್ತನೆಯು 'ವಿಕಸಿತ ಭಾರತ'ದ ಕಡೆಗಿನ ರಾಷ್ಟ್ರದ ಪಯಣವನ್ನು ಮುನ್ನಡೆಸುತ್ತಿದೆ ಮತ್ತು ದೇಶದ ಪವನ ಶಕ್ತಿ ವಲಯವು ನಾವೀನ್ಯತೆ, ರಫ್ತು ಮತ್ತು ಇಂಧನ ಭದ್ರತೆಯಿಂದ ಉತ್ತೇಜಿತವಾಗಿ ಜಾಗತಿಕ ನಾಯಕತ್ವದ ಹೊಸ ಯುಗವನ್ನು ಪ್ರವೇಶಿಸುತ್ತಿದೆ ಎಂದು ಹೇಳಿದರು.

ಗೋವಾದಲ್ಲಿ ನಡೆದ 'ಗ್ಲೋಬಲ್ ವಿಂಡ್ ಡೇ ಕಾನ್ಫರೆನ್ಸ್ 2026'ರ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಜೋಶಿ ಅವರು, ಕಳೆದ ಹನ್ನೆರಡು ವರ್ಷಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ನವೀಕರಿಸಬಹುದಾದ ಇಂಧನ ವಲಯವು ಸಾಧಿಸಿದ ಅದ್ಭುತ ಪ್ರಗತಿಯನ್ನು ಉಲ್ಲೇಖಿಸಿದರು.

ಗೋವಾ ರಾಷ್ಟ್ರೀಯ 'ಗ್ಲೋಬಲ್ ವಿಂಡ್ ಡೇ' ಆಚರಣೆಯನ್ನು ಆಯೋಜಿಸುತ್ತಿರುವುದು, ಭಾರತದ ನವೀಕರಿಸಬಹುದಾದ ಇಂಧನ ಪರಿವರ್ತನೆಯಲ್ಲಿ ರಾಜ್ಯದ ಬೆಳೆಯುತ್ತಿರುವ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ದೇಶದ ಹಸಿರು ಬೆಳವಣಿಗೆಯ ಕಾರ್ಯಸೂಚಿಯನ್ನು ಮುನ್ನಡೆಸುವಲ್ಲಿ ಗೋವಾ ಸರ್ಕಾರದ ಸಕ್ರಿಯ ಭಾಗವಹಿಸುವಿಕೆಯನ್ನು ಅವರು ಶ್ಲಾಘಿಸಿದರು.

ಭಾರತದ ಪವನ ಶಕ್ತಿ ವಲಯವು ಅಭೂತಪೂರ್ವ ಬೆಳವಣಿಗೆಯನ್ನು ಕಂಡಿದೆ ಎಂದು ಶ್ರೀ ಜೋಶಿ ಹೇಳಿದರು. ವಾರ್ಷಿಕ ಪವನ ಟರ್ಬೈನ್ ಉತ್ಪಾದನಾ ಸಾಮರ್ಥ್ಯವು 2014 ರಲ್ಲಿ 10 ಗಿಗಾ ವ್ಯಾಟ್ (GW) ಇದ್ದದ್ದು ಇಂದು 24 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ, ಇದು 'ಸ್ವಾವಲಂಬಿ ಭಾರತ' ಉಪಕ್ರಮದ ಯಶಸ್ಸನ್ನು ಪ್ರತಿಬಿಂಬಿಸುತ್ತದೆ. 2025-26 ರಲ್ಲಿ ಭಾರತವು ತನ್ನ ಅತ್ಯಧಿಕ ವಾರ್ಷಿಕ ಪವನ ಶಕ್ತಿ ಸಾಮರ್ಥ್ಯದ ಸೇರ್ಪಡೆಯನ್ನು ದಾಖಲಿಸಿದೆ, ಒಂದೇ ವರ್ಷದಲ್ಲಿ 6 ಗಿಗಾ ವ್ಯಾಟ್ ಗಡಿ ದಾಟಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 46 ಶೇಕಡಾ ಹೆಚ್ಚಳವನ್ನು ಪ್ರತಿನಿಧಿಸುತ್ತದೆ ಮತ್ತು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ಪವನ ಇಂಧನ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನವನ್ನು ಪುನರುಚ್ಚರಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.

ಬದಲಾಗುತ್ತಿರುವ ಇಂಧನ ಕ್ಷೇತ್ರದಲ್ಲಿ, ಪವನ ಶಕ್ತಿಯ ಮಹತ್ವವದ ಕುರಿತು ಒತ್ತಿಹೇಳಿದ ಸಚಿವರು, ಪವನ ಶಕ್ತಿಯು ಇನ್ನು ಕೇವಲ ವಿದ್ಯುತ್ ಉತ್ಪಾದನೆಯ ಮೂಲವಾಗಿ ಉಳಿದಿಲ್ಲ, ಬದಲಿಗೆ ಅದು ವಿಶ್ವಾಸಾರ್ಹ ಸಂಪನ್ಮೂಲವಾಗಿ ಹೊರಹೊಮ್ಮುತ್ತಿದೆ ಎಂದರು. ನವೀಕರಿಸಬಹುದಾದ ಇಂಧನದ ಭವಿಷ್ಯವು ಪವನ ಶಕ್ತಿ, ಸೌರಶಕ್ತಿ, ಇಂಧನ ಸಂಗ್ರಹಣೆ ಮತ್ತು ಸುಧಾರಿತ ಮುನ್ಸೂಚನಾ ತಂತ್ರಜ್ಞಾನಗಳನ್ನು ಸಂಯೋಜಿಸುವ ಸಮಗ್ರ ವ್ಯವಸ್ಥೆಗಳಲ್ಲಿದೆ, ಇದು ಕೈಗೆಟುಕುವ ಮತ್ತು ವಿಶ್ವಾಸಾರ್ಹ 24x7 ಶುದ್ಧ ಇಂಧನ ವನ್ನು ಒದಗಿಸುತ್ತದೆ ಎಂದು ಅವರು ಗಮನಸೆಳೆದರು.

ಶ್ರೀ ಜೋಶಿ ಅವರು ಪವನ-ಸಮೃದ್ಧ ವಿದ್ಯುತ್ ವ್ಯವಸ್ಥೆಯು ದೇಶಕ್ಕೆ ಸುಮಾರು ₹2.3 ಲಕ್ಷ ಕೋಟಿ ಉಳಿತಾಯ ಮಾಡಬಲ್ಲದು ಎಂದು ತಿಳಿಸಿದರು. ಇದು ಕೇವಲ ವಿದ್ಯುತ್ ಉತ್ಪಾದನೆಯನ್ನು ಮೀರಿ ಪವನ ಶಕ್ತಿಯು ನೀಡುವ ಆರ್ಥಿಕ ಪ್ರಯೋಜನಗಳನ್ನು ಸಾಬೀತುಪಡಿಸುತ್ತದೆ. ಭಾರತದ ಪವನ ಇಂಧನ ಸಾಮರ್ಥ್ಯವು ಅಗಾಧವಾಗಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗಿಲ್ಲ ಎಂದು ಅವರು ಒತ್ತಿ ಹೇಳಿದರು. 150 ಮೀಟರ್‌ ಹಬ್ ಎತ್ತರದಲ್ಲಿ, ದೇಶದ ಅಂದಾಜು ಪವನ ಶಕ್ತಿ ಸಾಮರ್ಥ್ಯವು ಸುಮಾರು 1,164 ಗಿಗಾ ವ್ಯಾಟ್ (GW) ನಷ್ಟಿದೆ. ಇದು ಭಾರತವನ್ನು ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಅವಕಾಶಗಳನ್ನು ಹೊಂದಿರುವ ದೇಶಗಳಲ್ಲಿ ಒಂದನ್ನಾಗಿ ಮಾಡಿದೆ. ಈ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮೂಲಕ, ಭಾರತವು ತನ್ನ ಇಂಧನ ಭದ್ರತೆಯನ್ನು ಬಲಪಡಿಸಲು ಮತ್ತು ಹಸಿರು ಆರ್ಥಿಕತೆಯತ್ತ ವೇಗವಾಗಿ ಸಾಗಲು ಸಾಧ್ಯವಾಗುತ್ತದೆ.

ಭಾರತವು 2030ರ ವೇಳೆಗೆ 100 ಗಿಗಾ ವ್ಯಾಟ್ ಮತ್ತು 2036ರ ವೇಳೆಗೆ 156 ಗಿಗಾ ವ್ಯಾಟ್ ಸ್ಥಾಪಿತ ಪವನ ಇಂಧನ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ, ಇದು ಪವನ ಶಕ್ತಿಯನ್ನು ದೇಶದ ಶುದ್ಧ ಇಂಧನ  ಪರಿವರ್ತನೆಯ ಪ್ರಮುಖ ಸ್ತಂಭವನ್ನಾಗಿ ಮಾಡಿದೆ ಎಂದು ಸಚಿವರು ತಿಳಿಸಿದರು.

ಮೋದಿ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಶ್ರೀ ಜೋಶಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಪ್ರಧಾನಮಂತ್ರಿಯಾಗಿದ್ದಾರೆ ಮತ್ತು ಪ್ರಮುಖ ಪ್ರಜಾಪ್ರಭುತ್ವಗಳಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದರು. ಕಳೆದ ಹನ್ನೆರಡು ವರ್ಷಗಳು ಎಲ್ಲಾ ವಲಯಗಳಲ್ಲಿ ವೇಗದ ಪರಿವರ್ತನೆಗೆ ಸಾಕ್ಷಿಯಾಗಿವೆ ಎಂದು ಅವರು ಒತ್ತಿ ಹೇಳಿದರು.

ವಿದ್ಯುತ್ ವಲಯದ ಪ್ರಮುಖ ಸಾಧನೆಗಳನ್ನು ಕುರಿತು ಪುನರುಚ್ಚರಿಸಿದ ಅವರು, ಭಾರತದ ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು ಮಾರ್ಚ್ 2024ರಲ್ಲಿ 442.85 ಗಿಗಾ ವ್ಯಾಟ್ ಇದ್ದದ್ದು 538 ಗಿಗಾ ವ್ಯಾಟ್ ಗೆ ಏರಿಕೆಯಾಗಿದೆ, ಅಂದರೆ ಕೇವಲ ಎರಡು ವರ್ಷಗಳಲ್ಲಿ ಸುಮಾರು 100 ಗಿಗಾ ವ್ಯಾಟ್ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು. ಇದೇ ಅವಧಿಯಲ್ಲಿ, ಪಳೆಯುಳಿಕೆ ರಹಿತ ಇಂಧನ ಆಧಾರಿತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಸುಮಾರು 198 ಗಿಗಾ ವ್ಯಾಟ್ ನಿಂದ 292 ಗಿಗಾ ವ್ಯಾಟ್ ಗಿಂತ ಹೆಚ್ಚು ಏರಿಕೆಯಾಗಿದ್ದು, ಸುಮಾರು 93 ಗಿಗಾ ವ್ಯಾಟ್ ನಷ್ಟು ಹೆಚ್ಚಳವಾಗಿದೆ.

ಕಳೆದ ಒಂದು ದಶಕದಲ್ಲಿ ಭಾರತವು "ಫ್ರ್ಯಾಜಿಲ್ ಫೈವ್" (Fragile Five) ಆರ್ಥಿಕತೆಗಳಲ್ಲಿ ಒಂದಾಗಿದ್ದ ಸ್ಥಿತಿಯಿಂದ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮತ್ತು ಪದೇ ಪದೇ ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದ ವಿದ್ಯುತ್-ಕೊರತೆಯ ರಾಷ್ಟ್ರದಿಂದ ವಿದ್ಯುತ್-ಉಪಲಬ್ಧ ರಾಷ್ಟ್ರವಾಗಿ ರೂಪಾಂತರಗೊಂಡಿದೆ ಎಂದು ಸಚಿವರು ಹೇಳಿದರು. ಭಾರತವು 2025 ರಲ್ಲಿ 50 ಶೇಕಡಾ ಪಳೆಯುಳಿಕೆ ರಹಿತ ಇಂಧನ ಸ್ಥಾಪಿತ ವಿದ್ಯುತ್ ಸಾಮರ್ಥ್ಯವನ್ನು ಸಾಧಿಸಿದೆ, ಇದು ತನ್ನ ರಾಷ್ಟ್ರೀಯ ನಿರ್ಧಾರಿತ ಕೊಡುಗೆಯ (NDC) ಗುರಿಯನ್ನು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮುಂಚಿತವಾಗಿಯೇ ತಲುಪಿದೆ ಎಂದು ಅವರು ಎತ್ತಿ ತೋರಿದರು.

ಭಾರತವು ಸಾಧ್ಯತೆಗಳ ಬಗ್ಗೆ ಚರ್ಚಿಸುವುದನ್ನು ಮೀರಿ ಅಳೆಯಬಹುದಾದ ಫಲಿತಾಂಶಗಳನ್ನು ನೀಡುವತ್ತ ಸಾಗಿದೆ ಮತ್ತು ಇಂದು ಶುದ್ಧ ಇಂಧನ  ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ಶ್ರೀ ಜೋಶಿ ಅವರು ಪುನರುಚ್ಚರಿಸಿದರು.

ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯಸ್ಸೋ ನಾಯಕ್, ಗೋವಾ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಸುದಿನ್ ಧವಳಿಕರ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಸಾರಂಗಿಯವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


 

*****


(रिलीज़ आईडी: 2273268) आगंतुक पटल : 17
इस विज्ञप्ति को इन भाषाओं में पढ़ें: English , Marathi