ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಬೆಂಗಳೂರಿನ ಪೀಣ್ಯದಲ್ಲಿ ಎನ್‌ಎಸ್‌ಐಸಿ (NSIC) ತಂತ್ರಜ್ಞಾನ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆ (TCFC) ಶಂಕುಸ್ಥಾಪನೆ
ದೇಶಾದ್ಯಂತ ಆಧುನಿಕ ತಂತ್ರಜ್ಞಾನ ಕೇಂದ್ರಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ: ಶ್ರೀ ಜಿತನ್ ರಾಮ್ ಮಾಂಝಿ
ಪ್ರಸ್ತಾವಿತ ಕೇಂದ್ರವು ಕರ್ನಾಟಕ ಮತ್ತು ನೆರೆಯ ಪ್ರದೇಶಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ, ಕೌಶಲ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ: ಎಂಎಸ್ಎಂಇ ರಾಜ್ಯ ಸಚಿವರು
ತಂತ್ರಜ್ಞಾನದ ಅಭಿವೃದ್ಧಿ, ಡಿಜಿಟಲ್ ಪರಿವರ್ತನೆ, ಗುಣಮಟ್ಟ ವರ್ಧನೆ ಮತ್ತು ಎಂಎಸ್ಎಂಇಗಳ ನಾವೀನ್ಯತೆ ಆಧಾರಿತ ಬೆಳವಣಿಗೆಯತ್ತ ಸಚಿವಾಲಯವು ನಿರಂತರವಾಗಿ ಗಮನಹರಿಸುತ್ತಿದೆ: ಶ್ರೀ ಭರತ್ ಖೇರಾ, ಕಾರ್ಯದರ್ಶಿಗಳು, ಎಂಎಸ್ಎಂಇ ಸಚಿವಾಲಯ
ಪ್ರಕಟಣಾ ದಿನಾಂಕ:
12 MAY 2026 6:47PM by PIB Bengaluru
ಕರ್ನಾಟಕದ ಎಂಎಸ್ಎಂಇ ಪರಿಸರ ವ್ಯವಸ್ಥೆ ಮತ್ತು ಉತ್ಪಾದನಾ ವಲಯಕ್ಕೆ ಮಹತ್ವದ ಉತ್ತೇಜನ ನೀಡುವ ನಿಟ್ಟಿನಲ್ಲಿ, ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಎನ್‌ಎಸ್‌ಐಸಿ ತಂತ್ರಜ್ಞಾನ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆ (TCFC) ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಕೇಂದ್ರ ಎಂಎಸ್ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಮತ್ತು ಎಂಎಸ್ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು, ಎಂಎಸ್ಎಂಇ ಸಚಿವಾಲಯದ ಕಾರ್ಯದರ್ಶಿಗಳು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು, ಎನ್‌ಎಸ್‌ಐಸಿ ಅಧಿಕಾರಿಗಳು, ಕೈಗಾರಿಕಾ ಸಂಘಗಳು, ಎಂಎಸ್ಎಂಇ ಉದ್ಯಮಿಗಳು, ಬ್ಯಾಂಕರ್‌ಗಳು ಮತ್ತು ಇತರ ಪಾಲುದಾರರ ಸಮ್ಮುಖದಲ್ಲಿ ಈ ಶಂಕುಸ್ಥಾಪನೆಯನ್ನು ನೆರವೇರಿಸಿದರು.


ಪ್ರಸ್ತಾವಿತ ಅತ್ಯಾಧುನಿಕ ಕೇಂದ್ರವನ್ನು ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮವನ್ನು (NSIC), ಎಂಎಸ್ಎಂಇ ಸಚಿವಾಲಯದ ಬೆಂಬಲದೊಂದಿಗೆ ಸ್ಥಾಪಿಸಲಾಗುತ್ತಿದೆ. ಈ ವಲಯದ ಎಂಎಸ್ಎಂಇಗಳಿಗೆ ತಂತ್ರಜ್ಞಾನದ ಲಭ್ಯತೆ, ಪರೀಕ್ಷಾ ಸೌಲಭ್ಯಗಳು, ಕೌಶಲ್ಯ ಅಭಿವೃದ್ಧಿ, ನಾವೀನ್ಯತೆ ಮತ್ತು ಉದ್ಯಮದ ಸ್ಪರ್ಧಾತ್ಮಕತೆಯನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಂಎಸ್ಎಂಇ ಸಚಿವರಾದ ಶ್ರೀ ಜಿತನ್ ರಾಮ್ ಮಾಂಝಿ ಅವರು, ಜಾಗತಿಕವಾಗಿ ಸ್ಪರ್ಧಾತ್ಮಕ ಎಂಎಸ್ಎಂಇಗಳನ್ನು ಸೃಷ್ಟಿಸಲು ಮತ್ತು ಭಾರತದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರವು ದೇಶಾದ್ಯಂತ ಆಧುನಿಕ ತಂತ್ರಜ್ಞಾನ ಕೇಂದ್ರಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಲು ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು. ಇಂತಹ ಕೇಂದ್ರಗಳು ಎಂಎಸ್ಎಂಇಗಳಿಗೆ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು, ಉತ್ಪನ್ನದ ಗುಣಮಟ್ಟ ಸುಧಾರಿಸಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು.

ಎಂಎಸ್ಎಂಇ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಪೀಣ್ಯ ಪ್ರದೇಶವು ದೇಶದ ಅತಿದೊಡ್ಡ ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ ಒಂದಾಗಿದ್ದು, ಎಂಎಸ್ಎಂಇಗಳ ವಿಕಸನಗೊಳ್ಳುತ್ತಿರುವ ತಾಂತ್ರಿಕ ಅಗತ್ಯಗಳನ್ನು ಪೂರೈಸಲು ಸುಧಾರಿತ ಸಾಂಸ್ಥಿಕ ಬೆಂಬಲ ಮೂಲಸೌಕರ್ಯಗಳ ಅಗತ್ಯವಿದೆ ಎಂದು ಹೈಲೈಟ್ ಮಾಡಿದರು. ಪ್ರಸ್ತಾವಿತ ಕೇಂದ್ರವು ಕರ್ನಾಟಕ ಮತ್ತು ನೆರೆಯ ಪ್ರದೇಶಗಳಲ್ಲಿ ನಾವೀನ್ಯತೆ, ಉದ್ಯಮಶೀಲತೆ, ಕೌಶಲ್ಯ ಮತ್ತು ಕೈಗಾರಿಕಾ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಗಮನಿಸಿದರು. ಈ ಕ್ಲಸ್ಟರ್‌ನಲ್ಲಿ ಕೌಶಲ್ಯ ಮತ್ತು ತಂತ್ರಜ್ಞಾನದಲ್ಲಿರುವ ಅಸ್ತಿತ್ವದಲ್ಲಿರುವ ವ್ಯವಸ್ಥಿತ ಕೊರತೆಗಳನ್ನು ನೀಗಿಸುವಲ್ಲಿ ದೀರ್ಘಕಾಲದವರೆಗೆ ನೆರವಾಗುವ ಈ ಸಮಯೋಚಿತ ಉಪಕ್ರಮಕ್ಕಾಗಿ ಅವರು ಎನ್‌ಎಸ್‌ಐಸಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂಎಸ್ಎಂಇ ಸಚಿವಾಲಯದ ಕಾರ್ಯದರ್ಶಿ ಶ್ರೀ ಭರತ್ ಖೇರಾ ಅವರು, ಸಚಿವಾಲಯವು ತಂತ್ರಜ್ಞಾನದ ಅಭಿವೃದ್ಧಿ, ಡಿಜಿಟಲ್ ಪರಿವರ್ತನೆ, ಗುಣಮಟ್ಟ ವರ್ಧನೆ ಮತ್ತು ಎಂಎಸ್ಎಂಇಗಳ ನಾವೀನ್ಯತೆ ಆಧಾರಿತ ಬೆಳವಣಿಗೆಯತ್ತ ನಿರಂತರವಾಗಿ ಗಮನಹರಿಸುತ್ತಿದೆ ಎಂದು ಹೇಳಿದರು. ಪ್ರಸ್ತಾವಿತ ಕೇಂದ್ರವು ಈ ಪ್ರದೇಶದ ಕೈಗಾರಿಕೆಗಳಿಗೆ ಒಂದೇ ಸೂರಿನಡಿ ಸಮಗ್ರ ತಂತ್ರಜ್ಞಾನ ಬೆಂಬಲ ಸೇವೆಗಳು, ಸಾಮಾನ್ಯ ಸೌಲಭ್ಯ ಮೂಲಸೌಕರ್ಯ ಮತ್ತು ಇನ್ಕ್ಯುಬೇಶನ್ (incubation) ಬೆಂಬಲವನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಸುಮಾರು 46 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಪೀಣ್ಯದಲ್ಲಿ ನಿರ್ಮಾಣವಾಗಲಿರುವ ಈ ಪ್ರಸ್ತಾವಿತ ಘಟಕವು ಸುಧಾರಿತ ವಸ್ತು ಪರೀಕ್ಷಾ ಪ್ರಯೋಗಾಲಯಗಳು, ತಂತ್ರಜ್ಞಾನ ಆಧಾರಿತ ಸಾಮಾನ್ಯ ಸೌಲಭ್ಯಗಳು, ಕೌಶಲ್ಯ ಮತ್ತು ತರಬೇತಿ ಮೂಲಸೌಕರ್ಯ ಹಾಗೂ ಎಂಎಸ್ಎಂಇ ಗಳಿಗಾಗಿ ನಾವೀನ್ಯತೆಗೆ ಪ್ರೋತ್ಸಾಹ ನೀಡುವಂತಹ ಸೇವೆಗಳನ್ನು ಹೊಂದಿರಲಿದ್ದು, ಇವುಗಳು ಇಂಡಸ್ಟ್ರಿ 4.0 ಪರಿಹಾರಗಳು, ಸುಧಾರಿತ ಡ್ರೋನ್ ತಂತ್ರಜ್ಞಾನ ಮತ್ತು ಇತರ ಸುಧಾರಿತ ಕೈಗಾರಿಕಾ ಆಟೊಮೇಷನ್ ಮೂಲಸೌಕರ್ಯಗಳನ್ನು ಒಳಗೊಂಡಿರಲಿವೆ.

ಪ್ರಮುಖ ಕೈಗಾರಿಕಾ ಸಂಘಗಳ ಪ್ರತಿನಿಧಿಗಳು ಈ ಉಪಕ್ರಮವನ್ನು ಸ್ವಾಗತಿಸಿದರು ಮತ್ತು ಪೀಣ್ಯ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಉತ್ಪಾದನಾ ಕ್ಲಸ್ಟರ್‌ಗಳಲ್ಲಿ ಸುಲಭವಾಗಿ ಲಭ್ಯವಿರುವ ಮತ್ತು ಉತ್ತಮ ಗುಣಮಟ್ಟದ ತಂತ್ರಜ್ಞಾನ ಬೆಂಬಲ ಮೂಲಸೌಕರ್ಯಗಳ ದೀರ್ಘಕಾಲದ ಅಗತ್ಯವನ್ನು ಈ ಕೇಂದ್ರವು ಪೂರೈಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಎನ್‌ಎಸ್‌ಐಸಿ (NSIC), ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಗಳ ಉನ್ನತ ಮಟ್ಟದ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು, ಹಿರಿಯ ಬ್ಯಾಂಕರ್‌ಗಳು, ವಿವಿಧ ಪ್ರಮುಖ ಕೈಗಾರಿಕಾ ಸಂಘಗಳು, ಎಂಎಸ್ಎಂಇ (MSME) ಉದ್ಯಮಿಗಳು ಮತ್ತು ಇತರ ಪಾಲುದಾರರು ಭಾಗವಹಿಸಿದ್ದರು.
ಪೀಣ್ಯದಲ್ಲಿ ಪ್ರಾರಂಭವಾಗಲಿರುವ ಎನ್‌ಎಸ್‌ಐಸಿ ತಂತ್ರಜ್ಞಾನ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವು ತಾಂತ್ರಿಕ ಪ್ರಗತಿ, ನಾವೀನ್ಯತೆ, ಕೌಶಲ್ಯ ಅಭಿವೃದ್ಧಿ ಮತ್ತು ಎಂಎಸ್‌ಎಂಇ ಸಬಲೀಕರಣದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ, ಇದು ಆತ್ಮನಿರ್ಭರ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ.
*****
(ಪ್ರಕಟಣೆ ಐ.ಡಿ.: 2260453)
ವಿಸಿಟರ್ ಕೌಂಟರ್ : 8