ಲೋಕಸಭಾ ಸಚಿವಾಲಯ
ಒಂದು ರಾಷ್ಟ್ರ, ಒಂದು ತೆರಿಗೆ ಪದ್ಧತಿಯಿಂದ ದೇಶದಾದ್ಯಂತದ ತೆರಿಗೆ ರಚನೆ ಸರಳ ಮತ್ತು ಹೆಚ್ಚು ಪಾರದರ್ಶಕವಾಗಿದೆ: ಲೋಕಸಭಾಧ್ಯಕ್ಷರು
ನಾಗರಿಕ ಸೇವೆಗಳಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆಯಲ್ಲಿ ಹೆಚ್ಚಳವು ಭಾರತದ ಬೆಳವಣಿಗೆ ಮತ್ತು ಆಕಾಂಕ್ಷೆಯ ಪ್ರತಿಬಿಂಬ: ಲೋಕಸಭಾಧ್ಯಕ್ಷರು
ಸಂಸತ್ ಭವನದ ಸಂಕೀರ್ಣದಲ್ಲಿ ಭಾರತೀಯ ಕಂದಾಯ ಸೇವೆಯ (ಸಿ & ಐಟಿ) 76ನೇ ತರಬೇತುದಾರ ಅಧಿಕಾರಿಗಳ ಬ್ಯಾಚ್ ಉದ್ದೇಶಿಸಿ ಲೋಕಸಭಾಧ್ಯಕ್ಷರು ಭಾಷಣ
Posted On:
27 NOV 2025 6:56PM by PIB Bengaluru
ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಯಡಿ "ಒಂದು ರಾಷ್ಟ್ರ, ಒಂದು ತೆರಿಗೆ" ಚೌಕಟ್ಟಿನೊಂದಿಗೆ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿನ ಸುಧಾರಣೆಗಳೊಂದಿಗೆ ರಾಷ್ಟ್ರದ ತೆರಿಗೆ ರಚನೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕವಾಗಿಸುತ್ತಾ, ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಿವೆ ಎಂದು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಇಂದು ಪ್ರತಿಪಾದಿಸಿದ್ದಾರೆ. ಈ ಪಾರದರ್ಶಕ ವ್ಯವಸ್ಥೆಯನ್ನು ನಿರ್ವಹಿಸುವುದು ಮತ್ತು ಬಲಪಡಿಸುವುದು ಕಂದಾಯ ಸೇವಾ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸಂಸತ್ ಭವನದ ಸಂಕೀರ್ಣದಲ್ಲಿ ಸಂಸದೀಯ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (PRIDE) ಆಯೋಜಿಸಿದ್ದ ಸಂಸದೀಯ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳ ಮೌಲ್ಯವರ್ಧನೆಯ ಕೋರ್ಸ್ ನಲ್ಲಿ ಭಾಗಿಯಾಗಿರುವ ಭಾರತೀಯ ಕಂದಾಯ ಸೇವೆಯ (IRS–C&IT) 76ನೇ ಬ್ಯಾಚ್ ನ ತರಬೇತಿ ಅಧಿಕಾರಿಗಳನ್ನು ಉದ್ದೇಶಿಸಿ ಶ್ರೀ ಬಿರ್ಲಾ ಅವರು ಮಾತನಾಡಿದರು.
ವಿವಿಧ ಕೇಂದ್ರೀಯ ಮತ್ತು ಅಖಿಲ ಭಾರತ ಸೇವೆಗಳಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀ ಬಿರ್ಲಾ ಅವರು, ಮಹಿಳಾ ಅಧಿಕಾರಿಗಳ ಸಂಖ್ಯೆಯಲ್ಲಿನ ಹೆಚ್ಚಳವು ಭಾರತದ ಬೆಳವಣಿಗೆ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸಿದೆ ಎಂದು ಹೇಳಿದರು.
ರಾಷ್ಟ್ರ ನಿರ್ಮಾಣಕ್ಕಾಗಿ ಸುಧಾರಿತ ತಂತ್ರಜ್ಞಾನ, ಸಂಶೋಧನೆ ಮತ್ತು ನಾವಿನ್ಯತೆಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಇಂದಿನ ಯುವಕರ ತಾಂತ್ರಿಕ ಕೌಶಲ್ಯ ಮತ್ತು ಜ್ಞಾನವನ್ನು ಶ್ರೀ ಬಿರ್ಲಾ ಅವರು ಶ್ಲಾಘಿಸಿದರು. ಯುವ ತರಬೇತಿದಾರರ ಅಧಿಕಾರಿಗಳ ದಿಟ್ಟ, ಆತ್ಮವಿಶ್ವಾಸದ ಮತ್ತು ನವೀನ ದೃಷ್ಟಿಕೋನಗಳು ಭಾರತವು ಜಾಗತಿಕ ನಾಯಕತ್ವದತ್ತ ಮುನ್ನಡೆಯಲು ಪೂರಕವಾಗಿವೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪರಿಕಲ್ಪನೆಯ ವಿಕಸಿತ ಭಾರತದ ಗುರಿಯನ್ನು ಸಾಧಿಸಲು ಅವರ ಕೊಡುಗೆಗಳು ಗಮನಾರ್ಹವಾಗಿ ಪೂರಕವಾಗಲಿವೆ ಎಂದು ಬಿರ್ಲಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಿರ್ಲಾ ಅವರು, ʼಭಾರತದ ಸಂಸತ್ತುʼ ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ನೀತಿ ನಿರೂಪಣೆಯ ಕೇಂದ್ರವಾಗಿದೆ ಎಂದು ತಿಳಿಸಿದರು. ಮುಂಬರುವ ವರ್ಷಗಳಲ್ಲಿ ಐ.ಆರ್.ಎಸ್ ಅಧಿಕಾರಿಗಳು ಭಾರತದ ಆರ್ಥಿಕ ದೃಢತೆಯ ಪ್ರಮುಖ ಆಧಾರಸ್ತಂಭವಾಗಲಿದ್ದಾರೆ ಎಂದು ಅವರು ಹೇಳಿದರು.
ತೆರಿಗೆ ಸಂಗ್ರಹದ ಜೊತೆಗೆ, ಪ್ರಾಮಾಣಿಕ ತೆರಿಗೆದಾರರನ್ನು ಗೌರವಿಸುವಲ್ಲಿ, ವ್ಯವಹಾರವನ್ನು ಸುಗಮಗೊಳಿಸುವಲ್ಲಿ, ಅಕ್ರಮ ವ್ಯಾಪಾರ ಮತ್ತು ಹಣ ವರ್ಗಾವಣೆಯನ್ನು ತಡೆಗಟ್ಟುವಲ್ಲಿ ಮತ್ತು ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಐ.ಆರ್.ಎಸ್ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುರು ಎಂದು ಶ್ರೀ ಬಿರ್ಲಾ ಅವರು ತಿಳಿಸಿದ್ದಾರೆ.
ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದು ಮತ್ತು ಸುಗಮಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಪುನರುಚ್ಚರಿಸುತ್ತಾ, ಇದರಿಂದಾಗಿ ನಾಗರಿಕರು ದೇಶದ ಬೆಳವಣಿಗೆ ಮತ್ತು ಸಮೃದ್ಧಿಯೊಂದಿಗೆ ಸಂಪರ್ಕ ಹೊಂದಿರುವ ಭಾವವನ್ನು ಪಡೆಯಬಹುದಾಗಿದೆ ಎಂದರು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು ಮತ್ತು ಕಾನೂನಿನ ಅನುಸಾರವಾಗಿ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸುವುದು ಪ್ರಮುಖ ಗುರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ನಿಟ್ಟಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು.
ಡಿಜಿಟಲ್ ತೆರಿಗೆ ವ್ಯವಸ್ಥೆ, ಕೃತಕ ಬುದ್ಧಿಮತ್ತೆ ಆಧಾರಿತ ಮೌಲ್ಯಮಾಪನಗಳು ಮತ್ತು ದತ್ತಾಂಶ ವಿಶ್ಲೇಷಣೆಯಂತಹ ಆಧುನಿಕ ಸಾಧನಗಳು ತೆರಿಗೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂದು ಶ್ರೀ ಬಿರ್ಲಾ ಅವರು ಗಮನಿಸಿದರು. ಯುವ ತರಬೇತುದಾರ ಅಧಿಕಾರಿಗಳು (ಒಟಿಗಳು) ತಮ್ಮ ಕಠಿಣ ಪರಿಶ್ರಮ, ಸಾಮರ್ಥ್ಯ ಮತ್ತು ನಾವಿನ್ಯತೆಯ ಮೂಲಕ ಕೊಡುಗೆ ನೀಡಬೇಕೆಂದು ಅವರು ಕರೆ ನೀಡಿದರು.
ಕಾನೂನಿನ ಅರ್ಥ ಮತ್ತು ಚೈತನ್ಯವನ್ನು ಅರ್ಥಮಾಡಿಕೊಳ್ಳಲು ತೆರಿಗೆ ಕಾನೂನುಗಳು, ಸಂಸದೀಯ ಚರ್ಚೆಗಳು ಮತ್ತು ಇತ್ತೀಚಿನ ಶಾಸನಗಳ ಆಳವಾದ ಅಧ್ಯಯನವನ್ನು ಕೈಗೊಳ್ಳುವಂತೆ ಅವರು ತರಬೇತುದಾರ ಅಧಿಕಾರಿ (ಒಟಿ) ಗಳನ್ನು ಪ್ರೋತ್ಸಾಹಿಸಿದರು. ಯುವ ಐ ಆರ್ ಎಸ್ ಅಧಿಕಾರಿಗಳ ಬ್ಯಾಚ್, ತಮ್ಮ ಸಮರ್ಪಣೆ, ಸಾಮರ್ಥ್ಯ ಮತ್ತು ತಾಂತ್ರಿಕ ಪರಿಣತಿಯೊಂದಿಗೆ, ಭಾರತದ ತೆರಿಗೆ ಆಡಳಿತವನ್ನು ಮತ್ತಷ್ಟು ಬಲಪಡಿಸಲಿದ್ದು, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಐ ಆರ್ ಎಸ್–ಸಿ & ಐಟಿಯ 76ನೇ ಬ್ಯಾಚ್ ನಲ್ಲಿ ಭೂತಾನ್ ನ ಐವರು ಸೇರಿದಂತೆ 79 ತರಬೇತುದಾರ ಅಧಿಕಾರಿಗಳಿದ್ದು, ಬ್ಯಾಚ್ ನಲ್ಲಿ ಶೇಕಡ 40% ಮಹಿಳೆಯರಿದ್ದು, ಶೇಕಡ 32% ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಬ್ಯಾಚ್ ನ ಸರಾಸರಿ ವಯಸ್ಸು 28 ವರ್ಷಗಳು ಮತ್ತು 51 ತರಬೇತುದಾರ ಅಧಿಕಾರಿಗಳು ಈಗಾಗಲೇ ಕೆಲಸದ ಅನುಭವವನ್ನು ಹೊಂದಿದ್ದಾರೆ.
ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಶ್ರೀ ಉತ್ಪಲ್ ಕುಮಾರ್ ಸಿಂಗ್ ಅವರು ಸ್ವಾಗತ ಭಾಷಣ ಮಾಡಿದರು.
*****
(Release ID: 2195671)
Visitor Counter : 3