ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸುತ್ತಿರುವ ಐದು ಸ್ತಂಭಗಳನ್ನು ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ವಿವರಿಸಿದ್ದಾರೆ


ಭಾರತವು ಪಿಪಿಎ, ಸಂಗ್ರಹಣೆ, ತಯಾರಿಕೆ, ಭೂ ಬಳಕೆ ಮತ್ತು ಹಣಕಾಸಿನ ಮೇಲೆ ಕೇಂದ್ರೀಕರಿಸಿ ಇಂಧನ ಪರಿವರ್ತನೆಯನ್ನು ವೇಗವಾಗಿ ಅನುಸರಿಸುತ್ತಿದೆ

Posted On: 24 JUL 2025 7:45PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ಭಾರತ ಸರ್ಕಾರದ ಸ್ಥಿತಿಸ್ಥಾಪಕ ಮತ್ತು ಸ್ವಾವಲಂಬಿ ನವೀಕರಿಸಬಹುದಾದ ಇಂಧನ ವಲಯಕ್ಕಾಗಿ ಕೇಂದ್ರೀಕೃತ ಪ್ರಯತ್ನಗಳನ್ನು ಎತ್ತಿ ತೋರಿಸಿದರು ಮತ್ತು ಭಾರತದ ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸುತ್ತಿರುವ ಐದು ಪ್ರಮುಖ ಆದ್ಯತೆಗಳನ್ನು - ಬಲವಾದ ವಿದ್ಯುತ್ ಖರೀದಿ ಒಪ್ಪಂದಗಳು (ಪಿಪಿಎ), ದೃಢವಾದ ಗ್ರಿಡ್‌ ಮತ್ತು ಶೇಖರಣಾ ವ್ಯವಸ್ಥೆಗಳು, ದೇಶೀಯ ತಯಾರಿಕೆ, ಅತ್ಯುತ್ತಮ ಭೂ ಬಳಕೆ ಮತ್ತು ಹಣಕಾಸಿನ ಸುಧಾರಿತ ಲಭ್ಯತೆ – ವಿವರಿಸಿದರು.

ನವದೆಹಲಿಯಲ್ಲಿ ನಡೆದ ಮೆರ್ಕಾಮ್ ಇಂಡಿಯಾ ನವೀಕರಿಸಬಹುದಾದ ಇಂಧನ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಈ ಕಾರ್ಯತಂತ್ರದ ಸುಧಾರಣೆಗಳು ಭಾರತವನ್ನು 2030 ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯತ್ತ ಮುನ್ನಡೆಸುತ್ತಿವೆ ಎಂದು ಹೇಳಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ತನ್ನ ಬದ್ಧತೆಗಳನ್ನು ಪೂರೈಸುವುದಲ್ಲದೆ ಅವುಗಳನ್ನು ವೇಗಗೊಳಿಸುತ್ತಿದೆ ಎಂದು ಶ್ರೀ ಜೋಶಿ ಹೇಳಿದರು.

ರಾಷ್ಟ್ರೀಯವಾಗಿ ನಿರ್ಧರಿಸಲ್ಪಟ್ಟ ಕೊಡುಗೆ (ಎನ್‌ ಡಿ ಸಿ) ಗಡುವುಗಿಂತ ಐದು ವರ್ಷಗಳ ಮೊದಲೇ ಭಾರತವು ತನ್ನ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಶೇ.50 ರಷ್ಟನ್ನು ಪಳೆಯುಳಿಕೆಯೇತರ ಮೂಲಗಳಿಂದ ಸಾಧಿಸಿದೆ ಎಂದು ಸಚಿವರು ಹೇಳಿದರು. ಪ್ರಸ್ತುತ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 245 ಗಿಗಾವ್ಯಾಟ್‌ ಗಿಂತ ಹೆಚ್ಚಿದ್ದು, ಇದರಲ್ಲಿ 116 ಗಿಗಾವ್ಯಾಟ್‌ ಸೌರಶಕ್ತಿ ಮತ್ತು 52 ಗಿಗಾವ್ಯಾಟ್‌ ಪವನಶಕ್ತಿ ಸೇರಿವೆ. ಅಂತರರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ (ಐ ಆರ್‌ ಇ ಎನ್‌ ಎ) ನಡೆಸಿದ ಇತ್ತೀಚಿನ ಅಧ್ಯಯನವನ್ನು ಉಲ್ಲೇಖಿಸಿದ ಸಚಿವರು, 2024 ರ ವೇಳೆಗೆ ಭಾರತದ ನವೀಕರಿಸಬಹುದಾದ ಇಂಧನ ವಿಸ್ತರಣೆಯು ಪಳೆಯುಳಿಕೆ ಇಂಧನ ಆಮದು ಮತ್ತು ಮಾಲಿನ್ಯ-ಸಂಬಂಧಿತ ವೆಚ್ಚಗಳನ್ನು ತಪ್ಪಿಸುವ ಮೂಲಕ ದೇಶಕ್ಕೆ ಸುಮಾರು ₹4 ಲಕ್ಷ ಕೋಟಿ ಉಳಿತಾಯ ಮಾಡಲು ಸಹಾಯ ಮಾಡಿದೆ ಎಂದು ಮಾಹಿತಿ ನೀಡಿದರು. ಇದರಲ್ಲಿ 14.9 ಬಿಲಿಯನ್ ಡಾಲರ್‌ ಪಳೆಯುಳಿಕೆ ಇಂಧನ ಉಳಿತಾಯ, 410.9 ಮಿಲಿಯನ್ ಟನ್ ಇಂಗಾಲ ಹೊರಸೂಸುವಿಕೆ ಕಡಿತ ಮತ್ತು 31.7 ಬಿಲಿಯನ್ ಡಾಲರ್‌ ಆರೋಗ್ಯ ಮತ್ತು ವಾಯು ಮಾಲಿನ್ಯ ಪ್ರಯೋಜನಗಳು ಸೇರಿವೆ ಎಂದು ಅವರು ಹೇಳಿದರು.

ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯಂತಹ ಮಹತ್ವದ ಉಪಕ್ರಮಗಳ ಮೂಲಕ ಈ ಬೆಳವಣಿಗೆಗೆ ಅನುಕೂಲ ಮಾಡಿಕೊಡುತ್ತಿದೆ, ಈ ಯೋಜನೆಗೆ 58.7 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಮತ್ತು 17.2 ಲಕ್ಷ ಮೇಲ್ಛಾವಣಿ ಸೌರ ವಿದ್ಯುತ್ ಘಟಕಗಳು ಪೂರ್ಣಗೊಂಡಿವೆ. ಈ ವಲಯದಲ್ಲಿ ಹಣಕಾಸು ಮತ್ತು ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು, 30 ಗಿಗಾವ್ಯಾಟ್ ಗಂಟೆಗಳ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಗಳಿಗೆ (ಬಿ ಇ‌ ಎಸ್‌ ಎಸ್) ₹5,400 ಕೋಟಿ ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್) ಯೋಜನೆಯನ್ನು ಪ್ರಾರಂಭಿಸಲಾಗಿದೆ, ಇದು ₹33,000 ಕೋಟಿ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದೆ.‌

2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಸಾಮರ್ಥ್ಯವನ್ನು ಸಾಗಿಸಲು ವಿದ್ಯುತ್ ಸಚಿವಾಲಯ, ಸಿಇಎ, ಸಿಟಿಯು ಮತ್ತು ಪವರ್ ಗ್ರಿಡ್‌ ಗಳ ಸಹಯೋಗದೊಂದಿಗೆ ಸಮಗ್ರ ಪ್ರಸರಣ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಜೂನ್ 2026 ರಿಂದ ಸೌರ ಪಿವಿ ಕೋಶಗಳಿಗಾಗಿ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ (ಎ ಎಲ್‌ ಎಂ ಎಂ) ವಿಸ್ತರಣೆ ಮತ್ತು ಮುಂಬರುವ ಪಟ್ಟಿ-II ಅನುಷ್ಠಾನವನ್ನು ಸಚಿವರು ಘೋಷಿಸಿದರು. ₹24,000 ಕೋಟಿ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿ ಎಲ್‌ ಐ) ಯೋಜನೆಯು ಭಾರತವು ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ಅನುವು ಮಾಡಿಕೊಡುತ್ತಿದೆ.

ನಾವೀನ್ಯತೆ ಮತ್ತು ಜವಾಬ್ದಾರಿಯುತ ಭೂ ಬಳಕೆಯನ್ನು ಉತ್ತೇಜಿಸಲು, ಸಚಿವಾಲಯವು ತೇಲುವ ಸೌರಶಕ್ತಿ, ಕಾಲುವೆ-ಮೇಲಿನ ಸೌರಶಕ್ತಿ, ಅಗ್ರಿವೋಲ್ಟಾಯಿಕ್ಸ್‌ ಮತ್ತು ಬುಡಕಟ್ಟು ಮತ್ತು ದೂರದ ಪ್ರದೇಶಗಳಲ್ಲಿ ಯೋಜನೆಗಳನ್ನು ಬೆಂಬಲಿಸುತ್ತಿದೆ. ಶುದ್ಧ ಇಂಧನ ನಾವೀನ್ಯತೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಎಂ ಎಸ್‌ ಎಂ ಇ ಗಳು ಮತ್ತು ನವೋದ್ಯಮಗಳನ್ನು ಸಹ ಸಬಲೀಕರಣಗೊಳಿಸಲಾಗುತ್ತಿದೆ. ಇದರ ಜೊತೆಗೆ, ₹19,744 ಕೋಟಿ ವೆಚ್ಚದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, 3,000 ಮೆಗಾವ್ಯಾಟ್‌ ಎಲೆಕ್ಟ್ರೋಲೈಸರ್ ಸಾಮರ್ಥ್ಯದ ಹಂಚಿಕೆ ಮತ್ತು ವರ್ಷಕ್ಕೆ 8.6 ಲಕ್ಷ ಟನ್‌ ಗಳಿಗಿಂತ ಹೆಚ್ಚು ಹಸಿರು ಹೈಡ್ರೋಜನ್ ಉತ್ಪಾದನೆಗೆ ಅನುಮೋದನೆ ನೀಡಲಾಗಿದೆ.

ಮೆರ್ಕಾಮ್ ನವೀಕರಿಸಬಹುದಾದ ಇಂಧನ ಶೃಂಗಸಭೆಯ ಬಗ್ಗೆ

ಮೆರ್ಕಾಮ್ ಇಂಡಿಯಾ ನವೀಕರಿಸಬಹುದಾದ ಇಂಧನ ಶೃಂಗಸಭೆಯು ನವೀಕರಿಸಬಹುದಾದ ಇಂಧನ ವಲಯದ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸುವ ಒಂದು ವಿಶೇಷ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಸೌರಶಕ್ತಿ ನಿಗಮ, ಹಸಿರು ಇಂಧನ ಉದ್ಯೋಗಗಳ ಕೌಶಲ್ಯ ಮಂಡಳಿ, ಭಾರತದ ಇಂಧನ ಶೇಖರಣಾ ಒಕ್ಕೂಟ, ಭಾರತದ ನವೀಕರಿಸಬಹುದಾದ ಇಂಧನ ಸೊಸೈಟಿ, ಡಿಜಿಟಲ್ ಮೂಲಸೌಕರ್ಯ ಪೂರೈಕೆದಾರರ ಸಂಘ ಮತ್ತು ಭಾರತೀಯ ಸೌರ ತಯಾರಕರ ಸಂಘಗಳು ಬೆಂಬ ನೀಡಿವೆ.

 

*****


(Release ID: 2148106)
Read this release in: English , Hindi