ರೈಲ್ವೇ ಸಚಿವಾಲಯ
azadi ka amrit mahotsav

ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ  ನೆರೆವೇರಿಸಿದರು

ಪ್ರಕಟಣಾ ದಿನಾಂಕ: 10 APR 2025 6:43PM by PIB Bengaluru

ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್‌ಗೆ ನಿಟ್ಟೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ತೋರಿಸಿದರು. ಇದು ಈ ಭಾಗದ ರೈಲು ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಮಹತ್ವದ ಹೆಜ್ಜೆಯಾಗಿದೆ.

ಸಮಾರಂಭದ ಭಾಗವಾಗಿ, ನಿಟ್ಟೂರು ಮತ್ತು ತಿಪಟೂರಿನಲ್ಲಿ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಪ್ರಾದೇಶಿಕ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಎರಡು ಪ್ರಮುಖ ರಸ್ತೆ ಮೇಲ್ಸೇತುವೆ (ROB) ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದರು. ಈ ಮೇಲ್ಸೇತುವೆಗಳು ನಿಟ್ಟೂರಿನ ಪುರ ಗ್ರಾಮದ LC ಗೇಟ್ ಸಂಖ್ಯೆ 58 ಮತ್ತು ತಿಪಟೂರಿನ ಶಾರದಾ ನಗರದಲ್ಲಿನ LC ಗೇಟ್ ಸಂಖ್ಯೆ 86 ನ್ನು ಬದಲಿಸುವ ಉದ್ದೇಶ ಹೊಂದಿವೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಈ ಮೇಲ್ಸೇತುವೆಗಳು ಈ ಭಾಗದ ಜನತೆ ನಿರೀಕ್ಷಿಸುತ್ತಿದ್ದ ಪ್ರಮುಖ ಸಂಪರ್ಕ ಮತ್ತು ಸುರಕ್ಷತೆ ಸುಧಾರಣೆಗೆ ಸಹಾಯಕವಾಗಲಿವೆ. ತುಮಕೂರು ವಲಯದ ಹಲವು ವರ್ಷಗಳ ಬೇಡಿಕೆಗಳು ಇಂದು ಈಡೇರಿವೆ," ಎಂದು ಹರ್ಷ ವ್ಯಕ್ತಪಡಿಸಿದರು.

ಪುರ ಗ್ರಾಮದ LC 58 ಮೇಲ್ಸೇತುವೆಯನ್ನು ₹50.57 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಶಿರಾ ಹಾಗೂ ಮಾಯಸಂದ್ರ ಪಟ್ಟಣಗಳನ್ನು ಸಂಪರ್ಕಿಸುತ್ತದೆ. ಶಾರದಾ ನಗರ ROB (LC 86) ₹89.32 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ಚಿಕ್ಕನಾಯಕನಹಳ್ಳಿ ಮತ್ತು ಹಾಸನ ನಡುವೆ ಉತ್ತಮ ಸಂಪರ್ಕ ಕಲ್ಪಿಸುತ್ತದೆ. ಈ ಯೋಜನೆಗಳು ನಿತ್ಯ ಪ್ರಯಾಣಿಕರಿಗೆ ಸುರಕ್ಷಿತ, ವೇಗದ ಮತ್ತು ಪರಿಣಾಮಕಾರಿ ಸಾರಿಗೆ ವ್ಯವಸ್ಥೆ ಒದಗಿಸುತ್ತವೆ.

ಶ್ರೀ ವಿ. ಸೋಮಣ್ಣ ಅವರು ಮಾತನಾಡುತ್ತ, ತುಮಕೂರು ಲೋಕಸಭಾ ಕ್ಷೇತ್ರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ಮಾದರಿಯನ್ನಾಗಿ ಮಾಡುವ ದೃಷ್ಟಿಕೋನವನ್ನು ಪುನರುಚ್ಚರಿಸಿದರು. ಪ್ರಸ್ತುತ ಕೈಗೊಳ್ಳಲಾಗಿರುವ 15 ROB/RUB ಸೇರಿ ವಿವಿಧ ಕೇಂದ್ರ ಸರ್ಕಾರ ಯೋಜನೆಗಳಿಗೆ  ಸುಮಾರು  ₹125 ಕೋಟಿ ಅನುದಾನ ಹಂಚಿಕೆ ಮಾಡಿದೆ ಎಂದು ಹೇಳಿದರು.  ಹೊಸ ಮೆಮು ರೈಲು ಸೇವೆ — ಹಾಸನ–ತಿಪಟೂರು–ನಿಟ್ಟೂರು–ತುಮಕೂರು–ಬೆಂಗಳೂರು ನಡುವಿನ ಮಾರ್ಗದಲ್ಲಿ — ಶೀಘ್ರದಲ್ಲೇ ಪರಿಗಣನೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ರಾಯದುರ್ಗ–ತುಮಕೂರು ಹೊಸ ರೈಲು ಮಾರ್ಗದಲ್ಲಿ ಈಗಾಗಲೇ 83 ಕಿ.ಮೀ. ಅಂತರದ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗದ ಕಾಮಗಾರಿ ತ್ವರಿತಗತಿಯಲ್ಲಿಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಇನ್ನು ತುಮಕೂರು–ದಾವಣಗೆರೆ ಹೊಸ ರೈಲು ಮಾರ್ಗವನ್ನು ಚಿತ್ರದುರ್ಗ ಮಾರ್ಗವಾಗಿ 2027 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಅವರು ವ್ಯಕ್ತಪಡಿಸಿದರು. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ, ತುಮಕೂರು ಮತ್ತು ಗುಬ್ಬಿ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ₹40 ಕೋಟಿ ವೆಚ್ಚದಲ್ಲಿ ವಿಶ್ವಮಟ್ಟದ ಸೌಲಭ್ಯಗಳೊಂದಿಗೆ ಆಧುನೀಕರಿಸಲಾಗುತ್ತದೆ. ರಾಜ್ಯದಾದ್ಯಂತ 61 ನಿಲ್ದಾಣಗಳಿಗೆ ಸುಮಾರು ₹1000 ಕೋಟಿಯಷ್ಟು ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಶ್ರೀ ಜ್ಯೋತಿ ಗಣೇಶ್ ಮಾನ್ಯ ಶಾಸಕರು ತುಮಕೂರು ನಗರ,(ಹಸಿರು ನಿಶಾನೆ ಕಾರ್ಯಕ್ರಮಕ್ಕೆ), ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಶ್ರೀ ಅಜಯ್ ಶರ್ಮಾ, ಮುಖ್ಯ ಇಂಜಿನಿಯರ್ ಶ್ರೀ ಪ್ರದೀಪ್ ಪುರಿ  ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಅಮಿತೇಶ್ ಕುಮಾರ್ ಸಿನ್ಹಾ (ನಿಟ್ಟೂರು ಮತ್ತುಹೆಚ್ಚುವರಿ ನಿಲುಗಡೆಗೆ ಹಸಿರು ನಿಶಾನೆ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು), ಮತ್ತು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ರೀ ಮುದಿತ್ ಮಿತ್ತಲ್ (ತಿಪಟೂರು ಶಾರದಾ ನಗರ ಕಾರ್ಯಕ್ರಮಕ್ಕೆ) ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2120888) ವಿಸಿಟರ್ ಕೌಂಟರ್ : 9