ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿ.ಆರ್.ಪಿ.ಎಫ್.) ಯೋಧರಿಂದ ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದ “ಸಿರಿಧಾನ್ಯ ಮತ್ತು ಸಾವಯವ ಮೇಳ 2025"
Posted On:
11 MAR 2025 2:30PM by PIB Bengaluru
ಬೆಂಗಳೂರಿನ ಯಲಹಂಕದಲ್ಲಿರುವ ಗ್ರೂಪ್ ಸೆಂಟರ್ ಸಿ.ಆರ್.ಪಿ.ಎಫ್. ಕರ್ನಾಟಕ ಇವರು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯ ಸಹಯೋಗದೊಂದಿಗೆ ಮಾರ್ಚ್ 09 ರಿಂದ ಮಾರ್ಚ್ 10, 2025 ರವರೆಗೆ ಎರಡು ದಿನಗಳ ಸಿರಿಧಾನ್ಯ ಮೇಳ " ಸಿರಿಧಾನ್ಯ ಮತ್ತು ಸಾವಯವ ಮೇಳ 2025" ಅನ್ನು ಯಶಸ್ವಿಯಾಗಿ ಆಯೋಜಿಸಿದೆ.

ವಿಶ್ವಸಂಸ್ಥೆಯು "ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ -2023" ಘೋಷಣೆಯ ಅನುಸರಣೆಯಾಗಿ, ಭಾರತ ಸರ್ಕಾರವು ಎಲ್ಲಾ ಪಾಕವ್ಯವಸ್ಥೆಗಳಲ್ಲಿ ಸಿರಿಧಾನ್ಯಗಳನ್ನು ಸೇರಿಸಲು ಹಾಗೂ ಕನಿಷ್ಟ 30%ರಷ್ಟು ಸಿರಿಧಾನ್ಯ ಆಹಾರ ಮೆನುಗಳನ್ನು ಪರಿಚಯಿಸಲು ಸಿ.ಎ.ಪಿ.ಎಫ್. ಗಳಿಗೆ ನಿರ್ದೇಶನಗಳನ್ನು ನೀಡಿತ್ತು.
ಯಲಹಂಕದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಕ್ರಮವು ಸಿರಿಧಾನ್ಯ ಆಧಾರಿತ ಉತ್ಪನ್ನಗಳು ಮತ್ತು ಸಾವಯವ ಆಹಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಪ್ರದರ್ಶನ ಮೇಳದಲ್ಲಿ ಒಟ್ಟು 47 ಮಳಿಗೆಗಳಿದ್ದವು. ಸಿರಿಧಾನ್ಯ ಆಧಾರಿತ ಆಹಾರ ಪದಾರ್ಥಗಳು, ಸಾವಯವ ಉತ್ಪನ್ನಗಳು ಮತ್ತು ತ್ವರಿತ ಆಹಾರಗಳ ರುಚಿಕರವಾದ ಶ್ರೇಣಿಯನ್ನು ನೀಡಿತು. ಉತ್ಸಾಹಭರಿತ - ರುಚಿಕರ ಆಹಾರ ವ್ಯವಸ್ಥೆಯ ಪ್ರದರ್ಶನವು ಮನೋಚೇತೋಹಾರಿ ಉಲ್ಲಾಸಕರ ವಾತಾವರಣಕ್ಕೆ ಕಾರಣವಾಯಿತು, ಇದು ಎಲ್ಲಾ ಸಂದರ್ಶಕರಿಗೆ ಆಕರ್ಷಕ ಹಾಗೂ ವಿಶೇಷ ಅನುಭವವನ್ನು ನೀಡಿತು.
ಉದ್ಘಾಟನಾ ಸಮಾರಂಭದ ಭಾಗವಾಗಿ, ಕರ್ನಾಟಕ ಮತ್ತು ಕೇರಳ ವಲಯದ ಸಿ.ಆರ್.ಪಿ.ಎಫ್.ನ ಶ್ರೀ ಟಿ. ವಿಕ್ರಮ್, ಐ.ಪಿ.ಎಸ್.; ಬಿ.ಎಸ್.ಎಫ್.ನ ಶ್ರೀ ದಿನೇಶ್ ಕುಮಾರ್ ಯಾದವ್, ಐ.ಪಿ.ಎಸ್; ಆರ್.ವಿ.ಎಸ್.ನ ಕಾರ್ಯನಿರ್ವಾಹಕ ಮಹಾನಿರ್ದೇಶಕ ಡಾ. ಬಲದೇವ್ ಸಿಂಗ್ ಗುಲಾಟಿ; ಸಿ.ಆರ್.ಪಿ.ಎಫ್.ನ ಡಿಐಜಿ ಶ್ರೀ ಪದ್ಮ ಕುಮಾರ್; ಕೃಷಿ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶ್ರೀ ಟಿ. ವಿಶ್ವನಾಥ್, ಕಮಾಂಡೆಂಟ್ ಶ್ರೀಮತಿ ರೂಪ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀ ರಾಜು ಸೇರಿದಂತೆ ಪ್ರಮುಖ ಭಾಷಣಕಾರರು ತಮ್ಮ ಪರಿಣತಿ ಮತ್ತು ಅನುಭವವನ್ನು ಸಮಾರಂಭದ ವಿವಿಧ ಕಾರ್ಯಕ್ರಮಗಳಲ್ಲಿ ಹಂಚಿಕೊಂಡರು.

ಉದ್ಘಾಟನಾ ಸಮಾರಂಭವು ಸಿರಿಧಾನ್ಯಗಳ ಹಲವಾರು ಪೌಷ್ಟಿಕಾಂಶದ ಪ್ರಯೋಜನಗಳು, ಸುಸ್ಥಿರ ಕೃಷಿಯಲ್ಲಿ ಅವುಗಳ ಪಾತ್ರ ಮತ್ತು ಸಿರಿಧಾನ್ಯ ಕೃಷಿ ಮತ್ತು ಬಳಕೆಯನ್ನು ಉತ್ತೇಜಿಸಲು ಸರ್ಕಾರದ ಉಪಕ್ರಮಗಳ ಬಗ್ಗೆ ಒತ್ತಿಹೇಳಿತು. ತಜ್ಞರು ಸಿರಿಧಾನ್ಯ ಆಧಾರಿತ ಉತ್ಪನ್ನಗಳಲ್ಲಿನ ನಾವೀನ್ಯತೆಗಳು ಮತ್ತು ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಹೆಚ್ಚಿಸುವ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು.
ನಂತರ, ಎಲ್ಲಾ ಗಣ್ಯ ಅತಿಥಿಗಳು ಸಿರಿಧಾನ್ಯ ಮೇಳದಲ್ಲಿ ಸ್ಥಾಪಿಸಲಾದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದರು. ಪ್ರದರ್ಶಕರೊಂದಿಗೆ ಸಂವಾದ ನಡೆಸಿದರು ಮತ್ತು ಪ್ರದರ್ಶನದಲ್ಲಿರುವ ಸಿರಿಧಾನ್ಯ ಆಧರಿತ ಮತ್ತು ಸಾವಯವ ಉತ್ಪನ್ನಗಳ ವೈವಿಧ್ಯಮಯ ಶ್ರೇಣಿಯ ಬಗ್ಗೆ ಚರ್ಚಿಸಿದರು , ಅವರುಗಳ ಅನುಭವ ಹಾಗೂ ಒಳನೋಟಗಳನ್ನು ಪಡೆದುಕೊಂಡರು.
ಸಿರಿಧಾನ್ಯ ಮೇಳದ ಭಾಗವಾಗಿ, ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸುವ ವೈವಿದ್ಯಮಯ ವಸ್ತು ಪ್ರದರ್ಶನಗಳನ್ನು ಹಾಗೂ ಕಲಾ ಸಾಂಸ್ಕೃತಿಕ ಚಟುವಟಿಕೆಗಳ ಪ್ರದರ್ಶನಗಳನ್ನು ಒಳಗೊಂಡ ಸಾಂಸ್ಕೃತಿಕ ಸಂಜೆಯನ್ನು ಸಹ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ ಇಲಾಖೆಗಳು, ಭದ್ರತಾ ಪಡೆಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಂದರ್ಶಕರುಗಳ ಜೊತೆಗೆ ಯೋಧರು ಮತ್ತು ಅವರ ಕುಟುಂಬಗಳು ಕೂಡಾ ಬಹಳಷ್ಟು ಉತ್ಸಾಹದಿಂದ ಭಾಗವಹಿಸಿದರು.
*****
(Release ID: 2110188)
Visitor Counter : 38