ರೈಲ್ವೇ ಸಚಿವಾಲಯ
ಬನಾರಸ್ ಲೋಕೋಮೋಟಿವ್ ವರ್ಕ್ಸ್ ಗೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಭೇಟಿ
ಬಿ ಎಲ್ ಡಬ್ಲ್ಯು ಭೇಟಿ: 'ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್' ಕಡೆಗೆ ಒಂದು ಪ್ರಮುಖ ಹೆಜ್ಜೆ
Posted On:
24 JAN 2025 5:32PM by PIB Bengaluru
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರು 2025ರ ಜನವರಿ 24 ರಂದು ಬನಾರಸ್ ಲೋಕೋಮೋಟಿವ್ ವರ್ಕ್ಸ್ (BLW) ಗೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಅವರು, ಬಿ ಎಲ್ ಡಬ್ಲ್ಯು ನ ನಾವಿನ್ಯತೆಗಳು, ರೈಲ್ವೆ ಎಂಜಿನ್ (ಚಲನಶೀಲ) ಉತ್ಪಾದನಾ ಸಾಮರ್ಥ್ಯಗಳು ಹಾಗೂ ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಅದರ ಮಹತ್ವದ ಜಾಗತಿಕ ಕೊಡುಗೆಗಳನ್ನು ಶ್ಲಾಘಿಸಿದರು.

ಬಿ ಎಲ್ ಡಬ್ಲ್ಯು ಗೆ ಭೇಟಿ ನೀಡಿದ ಶ್ರೀ ಸೋಮಣ್ಣ ಅವರನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ ನರೇಶ್ ಪಾಲ್ ಸಿಂಗ್ ಅವರು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಾಗಾರ (ವರ್ಕ್ ಶಾಪ್) ವೀಕ್ಷಣೆ ವೇಳೆ ಸಚಿವರು ಹೊಸ ಲೋಕೋ ಫ್ರೇಮ್ ಶಾಪ್, ಲೋಕೋ ಅಸೆಂಬ್ಲಿ ಶಾಪ್, ಟ್ರಾಕ್ಷನ್ ಅಸೆಂಬ್ಲಿ ಶಾಪ್, ಟ್ರಕ್ ಮಷೀನ್ ಶಾಪ್ ಮತ್ತು ಲೋಕೋ ಟೆಸ್ಟ್ ಶಾಪ್ ಅನ್ನು ಪರಿಶೀಲಿಸಿದರು. ಸಚಿವರು ಎಲೆಕ್ಟ್ರಿಕ್ ಇಂಜಿನ್ ಅನ್ನು ಪರೀಕ್ಷಿಸಿದರು ಮತ್ತು ಚಾಲಕರ ಆಸನದಲ್ಲಿ ಕುಳಿತು ಅದರ ತಾಂತ್ರಿಕ ಲಕ್ಷಣಗಳ ಅನುಭವ ಪಡೆದರು. ವರ್ಕ್ ಶಾಪ್ ಭೇಟಿ ಬಳಿಕ ಆಡಳಿತ ಭವನದ ಆವರಣದಲ್ಲಿ ಸಸಿ ನೆಟ್ಟು ಹಸಿರು ಪರಿಸರದ ಸಂದೇಶ ಸಾರಿದರು.
ನಂತರ, ಪ್ರಧಾನ ವ್ಯವಸ್ಥಾಪಕ ಶ್ರೀ ನರೇಶ್ ಪಾಲ್ ಸಿಂಗ್ ಅವರು ಆಡಳಿತ ಕಟ್ಟಡದಲ್ಲಿರುವ ಹಾಲ್ ಆಫ್ ಫೇಮ್‌ನಲ್ಲಿ ನಡೆದ ಸಭೆಯಲ್ಲಿ ಸಸಿಯೊಂದಿಗೆ ಸಚಿವರನ್ನು ಸ್ವಾಗತಿಸಿದರು. ಪ್ರಧಾನ ಮುಖ್ಯ ಎಲೆಕ್ಟ್ರಿಕಲ್ ಇಂಜಿನಿಯರ್ ಶ್ರೀ ಸುಶೀಲ್ ಕುಮಾರ್ ಶ್ರೀವಾಸ್ತವ ಅವರು BLW ನ ಐತಿಹಾಸಿಕ ಸಾಧನೆಗಳು, ತಾಂತ್ರಿಕ ಪರಿಣತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ವಿವರವಾದ ಮಾಹಿತಿಯನ್ನು ಪ್ರಸ್ತುತಪಡಿಸಿದರು. ಸಭೆ ಮುಕ್ತಾಯಗೊಂಡಾಗ, ಮಾನ್ಯ ಸಚಿವರಿಗೆ ಪ್ರಧಾನ ವ್ಯವಸ್ಥಾಪಕರು ಸ್ಮರಣಿಕೆಯನ್ನು ನೀಡಿದರು.
“ಬಿ ಎಲ್ ಡಬ್ಲ್ಯು ನ ಉತ್ಪಾದನಾ ವ್ಯವಸ್ಥೆಯು ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಗುಣಮಟ್ಟಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ. ಬಿ ಎಲ್ ಡಬ್ಲ್ಯು, ಆತ್ಮನಿರ್ಭರ ಭಾರತ ಅಭಿಯಾನದ ಪ್ರಮುಖ ಆಧಾರಸ್ತಂಭವಾಗಿದೆ. ಇಲ್ಲಿನ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬದ್ಧತೆ ಮತ್ತು ಪರಿಶ್ರಮ ಭಾರತಕ್ಕೆ ಜಾಗತಿಕ ಮನ್ನಣೆ ತಂದುಕೊಡುತ್ತಿದೆ” ಎಂದು ಶ್ರೀ ಸೋಮಣ್ಣ ಅವರು ತಮ್ಮ ಭಾಷಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಮೊಜಾಂಬಿಕ್, ಸುಡಾನ್, ಮಲೇಷ್ಯಾ ಸೇರಿದಂತೆ 11 ದೇಶಗಳಿಗೆ BLW ಇಂಜಿನ್‌ಗಳ ಯಶಸ್ವಿ ರಫ್ತನ್ನು ಸಚಿವರು ಶ್ಲಾಘಿಸಿ, ಇದು ಭಾರತದಲ್ಲಿ ತಯಾರಿಸಿ – ವಿಶ್ವಕ್ಕಾಗಿ ತಯಾರಿಸಿ ('ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್') ಉಪಕ್ರಮದತ್ತ ಮಹತ್ವದ ಹೆಜ್ಜೆ ಎಂದು ವಿವರಿಸಿದರು.

ಜಂಟಿ ಕಾರ್ಯದರ್ಶಿ ಶ್ರೀ ಶ್ರೀಕಾಂತ್ ಯಾದವ್ ನೇತೃತ್ವದ ಬಿ ಎಲ್ ಡಬ್ಲ್ಯು ಉದ್ಯೋಗಿಗಳ ಮಂಡಳಿ ಮತ್ತು ಅಧ್ಯಕ್ಷ ಶ್ರೀ ಸಂಜಯ್ ಆನಂದ್ ನೇತೃತ್ವದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಸನ್ಮಾನ್ಯ ಸಚಿವರಿಗೆ ಜ್ಞಾಪನಾ ಪತ್ರಗಳನ್ನು ಸಲ್ಲಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಸೋಮಣ್ಣ ಅವರು ನೌಕರರ ಪ್ರತಿನಿಧಿಗಳಿಂದ ಸಮಸ್ಯೆಗಳನ್ನು ಆಲಿಸಿ ಸಮಸ್ಯೆ ಪರಿಹಾರಕ್ಕೆ ಎಲ್ಲ ಸಾಧ್ಯ ಪ್ರಯತ್ನಗಳನ್ನು ಮಾಡುವ ಭರವಸೆ ನೀಡಿದರು.
"ಬಿ ಎಲ್ ಡಬ್ಲ್ಯು ಭಾರತೀಯ ರೈಲ್ವೆಯ ಪ್ರಮುಖ ಎಂಜಿನ್ ಉತ್ಪಾದನಾ ಘಟಕವಾಗಿದ್ದು, ಇಲ್ಲಿಯವರೆಗೆ 10,500 ಎಂಜಿನ್ ಗಳನ್ನು ತಯಾರಿಸಲಾಗಿದ್ದು, ಭಾರತೀಯ ರೈಲ್ವೆಯನ್ನು ಶ್ರೇಷ್ಠತೆಯ ಹೊಸ ಎತ್ತರಕ್ಕೆ ಕೊಂಡೊಯ್ಯಲಾಗಿದೆ" ಎಂದು ಪ್ರಧಾನ ವ್ಯವಸ್ಥಾಪಕರಾದ ಶ್ರೀ ನರೇಶ್ ಪಾಲ್ ಸಿಂಗ್ ಹೇಳಿದರು. ಸಚಿವರ ಪ್ರೇರಣಾದಾಯಕ ಭೇಟಿಯು ಬಿ ಎಲ್ ಡಬ್ಲ್ಯು ಗೆ ನವೀಕೃತ ಶಕ್ತಿಯ ಸೆಲೆಯಾಗಿದೆ ಎಂದು ಅವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಇಲಾಖಾ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಉತ್ಪಾದನೆ ಮತ್ತು ಮಾರ್ಕೆಟಿಂಗ್ ವಿಭಾಗದ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಶ್ರೀ ಸುನಿಲ್ ಕುಮಾರ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
*****
(Release ID: 2095870)
Visitor Counter : 34