ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

​​​​​​​ಮೈಸೂರಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಯಶಸ್ವಿ ಮುಕ್ತಾಯ

​​​​​​​
ನವೆಂಬರ್ 15ರಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿರಂತರ ಅಭಿಯಾನ, ಜನರಿಗೆ ಮಾಹಿತಿ

प्रविष्टि तिथि: 12 JAN 2024 5:26PM by PIB Bengaluru

ದೇಶಾದ್ಯಂತ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನವು ಮೈಸೂರಿನಲ್ಲೂ ಬುಡಕಟ್ಟು, ಗ್ರಾಮೀಣ, ನಗರ ಪ್ರದೇಶಗಳಲ್ಲಿ ಆಯೋಜನೆಗೊಂಡು ಇಂದು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳಿಂದ ಯಾವೊಬ್ಬ ನಾಗರಿಕನೂ ವಂಚಿತರಾಗಬಾರದೆಂಬ ಉದ್ದೇಶದಿಂದ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಜನರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಮಾಹಿತಿ ನೀಡಲಾಯಿತು.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವತಿಯಿಂದ ಪ್ರತಿಯೊಂದು ಯೋಜನೆಗಳ ಕುರಿತು ಜನರಿಗೆ ಮಾಹಿತಿಯನ್ನು ತಲುಪಿಸುವುದು ಹಾಗೂ ಈ ಯೋಜನೆಗಳ ಫಲಾನುಭವಿಗಳಾಗಲು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರಿನಲ್ಲಿ ನವೆಂಬರ್ 15, 2023ರಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿದರು. ಅಲ್ಲಿಂದ ಹೊರಟ ಈ ರಥಯಾತ್ರೆಯು ಜಿಲ್ಲೆಯ ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ತಲುಪುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಹೆಚ್ಚಿನ ಕಾರ್ಯಕ್ರಮವನ್ನು ನಡೆಸಲಾಯಿತು. 

ಕೃಷಿ, ಆರೋಗ್ಯ, ಕ್ರೀಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬ್ಯಾಂಕ್ಗಳು, ಬುಡಕಟ್ಟು ಸಚಿವಾಲಯ ಹೀಗೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳಿಂದ ಯಾವೆಲ್ಲ ಯೋಜನೆಗಳು ಜನರನ್ನು ತಲುಪುತ್ತಿವೆ ಎಂಬ ಕುರಿತು ಮಾಹಿತಿಯನ್ನು ನೀಡಲಾಯಿತು.

ಬುಡಕಟ್ಟು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಿಕಲ್ ಸೆಲ್ ಅನಿಮೀಯದಂತಹ ಆರೋಗ್ಯ ಸಮಸ್ಯೆಗೆ ಉಚಿತ ಆರೋಗ್ಯ ಶಿಬಿರಗಳನ್ನು ಆ ಪ್ರದೇಶಗಳಲ್ಲಿ ನಡೆಸಲಾಯಿತು.

ಗ್ರಾಮೀಣ ಪ್ರದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ಪರಿಚಯಿಸಿರುವ ಕಿಸಾನ್ ಕ್ರೆಡಿಟ್ ಕಾರ್ಡ್, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ವಿಶ್ವಕರ್ಮ, ಪ್ರತಿ ಮನೆಗೂ ನಲ್ಲಿ, (ಹರ್ ಘರ್ ಜಲ್- ಜಲಜೀವನ್ ಮಿಷನ್), ನ್ಯಾನೋ ರಸಗೊಬ್ಬರ, ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಸೇರಿದಂತೆ ಒಟ್ಟು 17 ಕೇಂದ್ರ ಸರ್ಕಾರದ ಯೋಜನೆಗಳನ್ನು ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಜಾಗೃತಿ ಮೂಡಿಸಲಾಯಿತು.

ಮೈಸೂರು ಜಿಲ್ಲೆಯಾದ್ಯಂತ ಪ್ರತಿ ದಿನ ಎರಡು ಗ್ರಾಮ ಪಂಚಾಯಿತಿಯನ್ನು ಒಳಗೊಂಡಂತೆ ಒಟ್ಟು 256 ಗ್ರಾಮ ಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಸಲಾಯಿತು. ಕೇಂದ್ರದ ರಾಜ್ಯ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ, ಸಂಸದರಾದ ಶ್ರೀ ಪ್ರತಾಪ್ ಸಿಂಹ, ಶಾಸಕರಾದ ಶ್ರೀವತ್ಸ ಸೇರಿದಂತೆ ಹಲವು ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳಾದ ಪಿಐಬಿ, ಬೆಂಗಳೂರು ಶಾಖೆಯ ಹೆಚ್ಚುವರಿ ಮಹಾ ನಿರ್ದೇಶಕರಾದ ಶ್ರೀ ಎಸ್.ಜಿ. ರವೀಂದ್ರ ಹಾಗೂ ಇತರೆ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮೈಸೂರು ನಗರ ಪ್ರದೇಶದಲ್ಲಿ ಡಿಸೆಂಬರ್ ೧೬ರಂದು ಆರಂಭವಾದ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಒಟ್ಟು 54 ನಗರ ಪ್ರದೇಶ ಹಾಗೂ ಬಡಾವಣೆಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಯಿತು.

ನಗರವಾಸಿಗಳಿಗೆ ಪರಿಚಯಿಸಿರುವ ಕೇಂದ್ರ ಸರ್ಕಾರದ ಯೋಜನೆಗಳಾದ ಪಿಎಂ ಸ್ವನಿಧಿ, ಪಿಎಂ ಮುದ್ರಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ವಚ್ಚ ಭಾರತ ಅಭಿಯಾನ, ಡಿಜಿಟಲ್ ಪಾವತಿ ಮೂಲ ಸೌಕರ್ಯ, ಖೇಲೋ ಇಂಡಿಯಾ, ಉಡಾನ್, ವಂದೇ ಭಾರತ್ ರೈಲು ವ್ಯವಸ್ಥೆ ಮುಂತಾದ ಒಟ್ಟು 17 ಕೇಂದ್ರ ಸರ್ಕಾರದ ಯೋಜನೆಗಳ ಈ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮಾಹಿತಿ ನೀಡಲಾಯಿತು.

ಬ್ಯಾಂಕ್ ಮೂಲಕ ಜನರಿಗೆ ಲಭ್ಯವಾಗುತ್ತಿರುವ ಜೀವನ ಜ್ಯೋತಿ ಹಾಗೂ ಸುರಕ್ಷಾ ವಿಮೆ ಯೋಜನೆಗಳು, ಅಟಲ್ ಪಿಂಚಣಿ ಯೋಜನೆ, ಜನ್ಧನ್ ಯೋಜನೆ ಸಾಕಷ್ಟು ಜನರ ಬದುಕನ್ನು ಕಟ್ಟಿಕೊಟ್ಟಿದೆ ಎಂದು ಮೈಸೂರಿನ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ನಾಗೇಶ್ ವಿ.ಎನ್. ಅವರು ತಿಳಿಸಿದರು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಮೈಸೂರಿನ ಪ್ರತಿಯೊಂದು ಕಡೆ ಸಂಚರಿಸುತ್ತಿದ್ದ ಎಲ್ಇಡಿ ಸ್ಕ್ರೀನ್ ಹೊಂದಿರುವ ಮಾಹಿತಿ ವಾಹನವು ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಸಂದೇಶವನ್ನು ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಯಾವೆಲ್ಲ ವರ್ಗದವರಿಗೆ ಲಭ್ಯವಿವೆ ಎಂಬ ಮಾಹಿತಿ ಇರುವ ವೀಡಿಯೋಗಳನ್ನು ಪ್ರತಿ ಕಾರ್ಯಕ್ರಮದಲ್ಲೂ ಪ್ರಸಾರ ಮಾಡಲಾಯಿತು.

ಸೌದೆ ಒಲೆಯಿಂದ ಮಹಿಳೆಯರಿಗೆ ಮುಕ್ತಿ ಕೊಡುವ ಉಚಿತ ಗ್ಯಾಸ್ ಸಿಲಿಂಡರ್ ಒದಗಿಸುವ “ಉಜ್ವಲ” ಯೋಜನೆ ಮಳಿಗೆ ತೆರೆದು, ನೋಂದಣಿ ಮಾಡಿಸಿ ವಿತರಿಸಲಾಯಿತು. ಹಲವು ಕಡೆಗಳಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಭಾರತ್ ಯೋಜನೆಯ ಕಾರ್ಡ್ ಮಾಡಿಸಲಾಯಿತು. ಕೆಲವು ಕಡೆಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿದರು. ಹಲವು ಪ್ರದೇಶಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಕೂಡ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ನೆರವೇರಿತು.

ರೈತರಿಗೆ ಮಣ್ಣು ಸಂರಕ್ಷಣೆ ಕುರಿತು ಮಾಹಿತಿ ನೀಡುವುದರ ಜೊತೆಗೆ ಆರ್‌ ಸಿ ಎಫ್‌ (ರಾಷ್ಟ್ರೀಯ ಕೆಮಿಕಲ್ ಅಂಡ್ ಫರ್ಟಿಲೈಸರ್ಸ್) ವತಿಯಿಂದ ಡ್ರೋನ್ ಮೂಲಕ ರಸಗೊಬ್ಬರ ಸಿಂಪರಣೆ ಮಾಡುವ ಪ್ರಾತ್ಯಕ್ಷಿಕೆ ನೀಡಲಾಯಿತು. ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಗರಿಕರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ನೀಡುವ ಕಿರು ಪುಸ್ತಕ, 2024ರ ನೂತನ ವರ್ಷದ ಕ್ಯಾಲೆಂಡರ್ ನೀಡಲಾಯಿತು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹೆಚ್ಚಿನವರು ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಭಾವಚಿತ್ರ ಇರುವ ಸೆಲ್ಫಿ ಸ್ಟ್ಯಾಂಡ್ ಬಳಿ ನಿಂತು ಭಾವಚಿತ್ರ ತೆಗೆಸಿಕೊಂಡು ಸಂಭ್ರಮಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವರ್ಚ್ಯುಯಲ್ ಮೂಲಕ ಫಲಾನುಭವಿಗಳೊಂದಿಗೆ ನೇರ ಸಂವಾದ ನಡೆಸಿದ ಕಾರ್ಯಕ್ರಮವೂ ಮೈಸೂರಿನಲ್ಲಿ ನಡೆಯಿತು.

ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳು ತಮಗೆ ಸಿಕ್ಕ ಯೋಜನೆಗಳಿಂದ ಬದುಕು ಬದಲಾಗಿರುವ ಕುರಿತು ಅಭಿಪ್ರಾಯ ಹಂಚಿಕೊಂಡರು.

ಒಟ್ಟಾರೆಯಾಗಿ ನಾಲ್ಕು ಮಾಹಿತಿ ವಾಹನವನ್ನು ಹೊತ್ತ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಮೈಸೂರು ಜಿಲ್ಲೆಯಾದ್ಯಂತ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿರುವ ಒಂದು ಯಶಸ್ವಿ ಅಭಿಯಾನವಾಗಿ ಎಂಬ ಅಭಿಪ್ರಾಯ ಎಲ್ಲ ಜನರಲ್ಲಿ ಮೂಡಿಬಂತು.

*****


(रिलीज़ आईडी: 1995562) आगंतुक पटल : 30