ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಹಲವಾರು ದಶಕಗಳಿಂದ ಆಡಳಿತದ ವ್ಯಾಪ್ತಿಯಿಂದ ಹೊರಗುಳಿದಿರುವ ಜನರ ಸೇರ್ಪಡೆಗೆ ತಂತ್ರಜ್ಞಾನ ಮತ್ತು ನಾವೀನ್ಯತೆ ಪ್ರಮುಖ ಸಾಧನಗಳಾಗಿವೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಓಪನ್ ಸೋರ್ಸ್ ಎಪಿಐಗಳ ಆಧಾರದ ಮೇಲೆ ಪಾಲುದಾರಿಕೆಯನ್ನು ನಿರ್ಮಿಸುವುದು, ಸೃಜನಶೀಲ ನಾವೀನ್ಯತೆ ಪೂರಕ ವ್ಯವಸ್ಥೆಯನ್ನು ರಚಿಸುವುದು ಮತ್ತು ಟೆಕ್ ಏಡ್ ನಲ್ಲಿನ ಯಶಸ್ಸಿಗೆ ಅಗತ್ಯವಿರುವ ಡಿಜಿಟಲ್ ಕೌಶಲ್ಯಗಳನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುವುದು ಜಗತ್ತಿಗೆ ಭಾರತದ ಸಂದೇಶವಾಗಿದೆ
ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ (ಡಿಐಎ) ಶೃಂಗಸಭೆಗೆ ಇಂದು ಚಾಲನೆ
Posted On:
17 AUG 2023 8:12PM by PIB Bengaluru
ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಕಾರ್ಯಕ್ರಮವನ್ನು ಎಲೆಕ್ಟ್ರಾನಿಕ್ಸ್ ಸಚಿವಾಲಯವು ಪ್ರಾರಂಭಿಸಿದೆ ಮತ್ತು ಆಗಸ್ಟ್ 17 ರಿಂದ 19, 2023 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಜಾಗತಿಕ ಶೃಂಗಸಭೆಗೆ ಇಂದು ಚಾಲನೆ ದೊರೆಯಿತು. ಈ ಪ್ರತಿಷ್ಠಿತ ಉಪಕ್ರಮದಲ್ಲಿ 29 ದೇಶಗಳ ನವೋದ್ಯಮಗಳು ಭಾಗವಹಿಸಿವೆ. ಇವು ವಿಶ್ವದ ಅತ್ಯಂತ ಕಠಿಣ ಸವಾಲುಗಳನ್ನು ಪರಿಹರಿಸಲು ತಮ್ಮ ಪರಿಹಾರಗಳನ್ನು ಪ್ರಸ್ತುತಪಡಿಸುತ್ತಿವೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಶೃಂಗಸಭೆಯನ್ನು ಉದ್ಘಾಟಿಸಿದರು. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ, ಜಂಟಿ ಕಾರ್ಯದರ್ಶಿ ಶ್ರೀ ಆಕಾಶ್ ತ್ರಿಪಾಠಿ ಮತ್ತು ನಾಸ್ಕಾಂ ಅಧ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀ ರಾಜೀವ್ ಚಂದ್ರಶೇಖರ್, "ಇತ್ತೀಚಿನವರೆಗೆ, ತಂತ್ರಜ್ಞಾನದ ಕೇಂದ್ರವು ಕೆಲವು ದೇಶಗಳಲ್ಲಿ ಮತ್ತು ಕೆಲವು ಕಾರ್ಪೊರೇಟ್ ಗಳಲ್ಲಿ ಮಾತ್ರ ಇತ್ತು, ಆದರೆ ಈಗ ಅದು ತೆರೆದ ಮೂಲ ತಂತ್ರಜ್ಞಾನಗಳಿಗೆ (ಓಪನ್ ಸೋರ್ಸ್) ಚಲಿಸುತ್ತಿದೆ ಮತ್ತು ನಮ್ಮ ಯುವ ನವೋದ್ಯಮಗಳು ನಾವೀನ್ಯತೆಗೆ ವೇಗವನ್ನು ನೀಡುತ್ತಿವೆ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸಲಿವೆ" ಎಂದು ಹೇಳಿದರು.

"ಇಂದು ಭಾರತವು ಪ್ರಪಂಚದ ಇತರ ಭಾಗಗಳಿಗೆ ಒಂದು ಅಧ್ಯಯನ ವಸ್ತುವಾಗುತ್ತಿದೆ. ನಾವು ಇಂಡಿಯಾಸ್ಟಾಕ್ ನಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೇಗೆ ರಚಿಸಿದ್ದೇವೆ ಮತ್ತು 1,00,000 ಕ್ಕೂ ಹೆಚ್ಚು ನವೋದ್ಯಮಗಳು ಮತ್ತು 100 ಯುನಿಕಾರ್ನ್ ಗಳೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾವೀನ್ಯತೆ ಪೂರಕ ವ್ಯವಸ್ಥೆಯನ್ನು ಹೇಗೆ ರೂಪಿಸಿದ್ದೇವೆ. ನಮ್ಮ ದೇಶದಲ್ಲಿ ಜೀವನ, ಆಡಳಿತ ಮತ್ತು ಪ್ರಜಾಪ್ರಭುತ್ವವನ್ನು ಪರಿವರ್ತಿಸಲು ತಂತ್ರಜ್ಞಾನದ ಬಳಕೆಯಲ್ಲಿ ಭಾರತವು ಹೇಗೆ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂಬುದು ಜಗತ್ತಿಗೆ ಅಧ್ಯಯನ ವಸ್ತುವಾಗಿದೆ " ಎಂದು ಅವರು ಒತ್ತಿ ಹೇಳಿದರು.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲ್ಕೇಶ್ ಕುಮಾರ್ ಶರ್ಮಾ, ಜಿ-20 ಡಿಐಎ ಮಹತ್ವವನ್ನು ಒತ್ತಿಹೇಳಿದರು, ಸುಮಾರು 107 ಯುನಿಕಾರ್ನ್ ಗಳು ಮತ್ತು 100,000 ಕ್ಕೂ ಹೆಚ್ಚು ನವೋದ್ಯಮಗಳನ್ನು ಹೊಂದಿರುವ ಭಾರತವು ಈಗ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನವೋದ್ಯಮ ಪೂರಕ ವ್ಯವಸ್ಥೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
ಡಿಜಿಟಲ್ ಇಂಡಿಯಾ ಭಾರತಕ್ಕೆ ಪರಿವರ್ತನೆಯ ಪ್ರಯಾಣವಾಗಿದೆ. ಇದು ಡಿಜಿಟಲ್ ಅಂತರವನ್ನು ಬೆಸೆದ, ಕೊನೆಯ ಮೈಲಿಯನ್ನು ತಲುಪಿದ ಅಂತರ್ಗತ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.
ನಾಸ್ಕಾಂ ಅಧ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್, "ಜಾಗತಿಕ ಮೈತ್ರಿಯೊಂದಿಗೆ, ನಾವು ಒಟ್ಟಾಗಿ ಕೆಲಸ ಮಾಡುವವರು, ಸಮಸ್ಯೆಗಳನ್ನು ಪರಿಹರಿಸುವವರು ಮತ್ತು ಯುವ ಸಾಧಕರ ಜಗತ್ತನ್ನು ನಿರ್ಮಿಸಬಹುದು. ಉದ್ಯಮಶೀಲತೆಯ ಚೈತನ್ಯವು ಜಗತ್ತು ಮುಂದುವರಿಯಲು ಅಗತ್ಯವಿದೆ” ಎಂದರು.

ಶೃಂಗಸಭೆಯು ಭಾರತೀಯ ಯುನಿಕಾರ್ನ್ ಸಂಸ್ಥಾಪಕರು, ಉದ್ಯಮದ ತಜ್ಞರು, ನೀತಿ ನಿರೂಪಕರು, ಹೂಡಿಕೆದಾರರು ಮತ್ತು ಪ್ರಭಾವಿ ಚಿಂತಕರ ಪ್ರಬುದ್ಧ ಅಧಿವೇಶನಗಳನ್ನು ಒಳಗೊಂಡಿತ್ತು. ಈ ಅಧಿವೇಶನಗಳು ಕಾರ್ಯತಂತ್ರದ ಪಾಲುದಾರಿಕೆಗಳ ರಚನೆಯನ್ನು ಸುಗಮಗೊಳಿಸಿದವು ಮತ್ತು ಸಕ್ರಿಯಗೊಳಿಸಿದವು ಮತ್ತು ಜಾಗತಿಕವಾಗಿ ನವೋದ್ಯಮಗಳ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವು.
ಈ ಕಾರ್ಯಕ್ರಮದಲ್ಲಿ, ನವೋದ್ಯಮಗಳು ಆರು ಪ್ರಮುಖ ವಿಷಯಗಳಲ್ಲಿ ತಮ್ಮ ಪರಿಹಾರಗಳನ್ನು ಪ್ರದರ್ಶಿಸಿದವು ಅವುಗಳೆಂದರೆ: ಶಿಕ್ಷಣ, ಅಗ್ರಿಟೆಕ್, ಫಿನ್ಟೆಕ್, ಹೆಲ್ತ್ಕೇರ್, ಡಿಜಿಟಲ್ ಮೂಲಸೌಕರ್ಯ ಮತ್ತು ಮರುಬಳಕೆ ಆರ್ಥಿಕತೆ. ಇದಲ್ಲದೆ, ನವೋದ್ಯಮಗಳು ಜಿ-20 ದೇಶಗಳು ಮತ್ತು 9 ಆಹ್ವಾನಿತ ಅತಿಥಿ ದೇಶಗಳ ಹೂಡಿಕೆದಾರರಿಗೆ ಪ್ರಸ್ತುತಿಗಳು, ಮಾರ್ಗದರ್ಶನ ಅಧಿವೇಶನಗಳು ಮತ್ತು ಉದ್ಯಮದ ವೃತ್ತಿಪರರೊಂದಿಗೆ ನೆಟ್ ವರ್ಕ್ ಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶವನ್ನು ಹೊಂದಿದ್ದವು.
ಶೃಂಗಸಭೆಯು ಜಿ-20 ದೇಶಗಳ ನಡುವೆ ಆರ್ಥಿಕ ಪ್ರಗತಿ ಮತ್ತು ಸಕಾರಾತ್ಮಕ ಸಹಯೋಗದ ಚೌಕಟ್ಟಿಗೆ ಪ್ರಮುಖ ವೇಗವರ್ಧಕಗಳಾಗಿ ನವೋದ್ಯಮಗಳನ್ನು ಗುರುತಿಸುತ್ತದೆ. ಜಿ-20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯು ನಾವೀನ್ಯತೆ ಮತ್ತು ಉದ್ಯಮಶೀಲತೆಯ ಮನೋಭಾವವನ್ನು ಬೆಳೆಸುವ ವಾತಾವರಣವನ್ನು ಪೋಷಿಸುವ ಮೂಲಕ ಜಾಗತಿಕ ಆರ್ಥಿಕತೆಗಳಿಗೆ ಡಿಜಿಟಲ್ ನಾವೀನ್ಯತೆಗಳನ್ನು ಒದಗಿಸಲು ನವೋದ್ಯಮಗಳ ಅಪರಿಮಿತ ಸಾಮರ್ಥ್ಯಗಳನ್ನು ಹೊರಹೊಮ್ಮಿಸುತ್ತದೆ.
****
(Release ID: 1949988)