ಪ್ರಕಟಣಾ ದಿನಾಂಕ:
17 AUG 2023 2:43PM by PIB Bengaluru
ದೇಶದ ಮೊದಲ 3ಡಿ ಮುದ್ರಣ ತಂತ್ರಜ್ಞಾನದ ಮೊದಲ ಕಟ್ಟಡವನ್ನು ಕರ್ನಾಟಕ ಅಂಚೆ ವೃತ್ತದಿಂದ ನಿರ್ಮಿಸಿದ್ದು, ಅಂಚೆ ಇಲಾಖೆಯಿಂದ ಬೆಂಗಳೂರಿನಲ್ಲಿ ನಾಳೆ ವಿದ್ಯುಕ್ತವಾಗಿ ಉದ್ಘಾಟಿಸಲಾಗುತ್ತಿದೆ.
ಕೇಂದ್ರ ರೈಲ್ವೆ, ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಆಶ್ವಿನಿ ವೈಷ್ಣವ್ ಅವರು ಕೇಂಬ್ರಿಡ್ಜ್ ಬಡಾವಣೆಯಲ್ಲಿ ನಾಳೆ ಬೆಳಿಗ್ಗೆ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಂತರ ಕಟ್ಟಡದ 3ಡಿ ಮುದ್ರಣದ ವಿಶೇಷ ಲಕೋಟೆಯನ್ನು ಸಚಿವರು ಬಿಡುಗಡೆ ಮಾಡಲಿದ್ದಾರೆ.
ಹೊಸ ಕಟ್ಟಡವನ್ನು 1021 ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಅಂಚೆ ಇಲಾಖೆಗೆ ಈ ಯೋಜನೆ ಜಾರಿಗೊಳಿಸಲು ಮದ್ರಾಸ್ ನ ಐಐಟಿ ತಾಂತ್ರಿಕ ನೆರವು ಒದಗಿಸಿದೆ. 3ಡಿ ಕಾಂಕ್ರಿಟ್ ಪ್ರಿಂಟಿಂಗ್ ಮೂಲಕ ಇದನ್ನು ನಿರ್ಮಾಣ ಮಾಡಲಾಗಿದ್ದು, ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡವಾಗಿದೆ. ಅನುಮೋದಿತ ವಿನ್ಯಾಸದ ಪ್ರಕಾರ ರೊಬೊಟಿಕ್ ಕಾಂಕ್ರಿಟ್ ಪದರದಿಂದ ಪದರದವರೆಗೆ ಹಾಕಲಾಗಿದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ ಗಟ್ಟಿಯಾಗುವ ವಿಶೇಷ ದರ್ಜೆಯ ಕಾಂಕ್ರಿಟ್ ಬಳಕೆ ಮಾಡಲಾಗಿದೆ.
ಸಾಂಪ್ರದಾಯಕ ವಿಧಾನದಡಿ 6 ರಿಂದ 8 ತಿಂಗಳು ತೆಗೆದುಕೊಳ್ಳುವ ಈ ಸಂಪೂರ್ಣ ಕಟ್ಟಡದ ನಿರ್ಮಾಣ ಚಟುವಟಿಕೆಯನ್ನು 45 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ವೆಚ್ಚ ಮತ್ತು ಸಮಯದ ಉಳಿತಾಯದ 3ಡಿ ಕಾಂಕ್ರಿಟ್ ಮುದ್ರಣ ತಂತ್ರಜ್ಞಾನ ಸಾಂಪ್ರದಾಯಿಕ ಕಟ್ಟಡ ಪದ್ಧತಿಗಳಿಗೆ ಕಾರ್ಯಸಾಧ್ಯವಾದ ಪರ್ಯಾಯ ವ್ಯವಸ್ಥೆಯಾಗಿದೆ.
*****