ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಬೆಂಗಳೂರಿನಲ್ಲಿ ನಡೆದ ಜಿ-20 ಸಭೆಯು ಜಿ-20 ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ತಂತ್ರಜ್ಞಾನ ಸಹಕಾರ ಕುರಿತು ಚರ್ಚೆ ನಡೆಸಿತು

ಜಿ-20 ಸಭೆಯು ಸಮೃದ್ಧ ಮತ್ತು ಎಲ್ಲರನ್ನೂ ಒಳಗೊಂಡ ಭವಿಷ್ಯಕ್ಕಾಗಿ ದಾರಿ ಮಾಡಿಕೊಡಲು ವ್ಯಾಪಾರ ಮತ್ತು ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಎತ್ತಿ ತೋರಿಸಿತು: ಮಾನದಂಡಗಳ ಮೇಲೆ ಹೆಚ್ಚಿನ ಸಹಯೋಗ, ಡಿಜಿಟಲ್ ಮೂಲಸೌಕರ್ಯದ ಪರಸ್ಪರ ಕಾರ್ಯಸಾಧ್ಯತೆಯ ಕಡೆಗೆ ಚಲನೆ ಮತ್ತು ವ್ಯವಹಾರ ಪರಿಸರ ವ್ಯವಸ್ಥೆಗಳ ಗಾಢವಾದ ಸಹಕಾರ ಮತ್ತು ಪಾಲುದಾರಿಕೆಗೆ ಕರೆ

Posted On: 23 MAY 2023 6:48PM by PIB Bengaluru

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇಂದು ಬೆಂಗಳೂರಿನಲ್ಲಿ ವ್ಯಾಪಾರ ಮತ್ತು ತಂತ್ರಜ್ಞಾನದ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತು.

ನಗರದಲ್ಲಿ ನಡೆಯುತ್ತಿರುವ 2ನೇ ಜಿ-20 ವ್ಯಾಪಾರ ಮತ್ತು ಹೂಡಿಕೆ ಕಾರ್ಯಕಾರಿ ಗುಂಪು (ಟಿಐಡಬ್ಲ್ಯುಜಿ) ಸಭೆಯ ಸಂದರ್ಭದಲ್ಲಿ ನಾಸ್ಕಾಮ್ ಮತ್ತು ಇಇಪಿಸಿ ಇಂಡಿಯಾ ಸಹಯೋಗದಲ್ಲಿ ವಾಣಿಜ್ಯ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಚನಾತ್ಮಕ ಸಂವಾದ ಮತ್ತು ವಿಚಾರ ವಿನಿಮಯದಲ್ಲಿ ತೊಡಗಿಸಿಕೊಳ್ಳಲು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು, ಉದ್ಯಮ ಮತ್ತು ಪ್ರಪಂಚದಾದ್ಯಂತದ ಶೈಕ್ಷಣಿಕ ತಜ್ಞರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಶ್ರೀ ಸೋಮ್ ಪ್ರಕಾಶ್ ಅವರು ತಮ್ಮ ಮುಖ್ಯ ಭಾಷಣದಲ್ಲಿ ಒಟ್ಟಾರೆ ಚರ್ಚೆಗಳಿಗೆ ನಾಂದಿ ಹಾಡಿದರು. ಒಟ್ಟಾಗಿ ಕೆಲಸ ಮಾಡುವ ಮೂಲಕ ನಾವು ಸವಾಲುಗಳನ್ನು ಜಯಿಸಬಹುದು, ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಮತ್ತು ಎಲ್ಲರಿಗೂ ಸಮೃದ್ಧ ಭವಿಷ್ಯವನ್ನು ನಿರ್ಮಿಸಬಹುದು ಎಂದು ಅವರು ಒತ್ತಿ ಹೇಳಿದರು.

ವಾಣಿಜ್ಯ ಕಾರ್ಯದರ್ಶಿ, ಶ್ರೀ ಸುನಿಲ್ ಬರ್ತ್ವಾಲ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ತಂತ್ರಜ್ಞಾನದ ತ್ವರಿತ ಪ್ರಗತಿಯು ಅಂತರರಾಷ್ಟ್ರೀಯ ವ್ಯಾಪಾರದ ಚಿತ್ರಣವನ್ನು ಮರುರೂಪಿಸುತ್ತಿದೆ ಎಂದು ಹೇಳಿದರು; ಈ ತಾಂತ್ರಿಕ ಪರಿವರ್ತನೆಯಲ್ಲಿ ಭಾರತದ ಸ್ಥಾನದ ಬಗ್ಗೆ ಪ್ರಸ್ತಾಪಿಸಿದರು; ಗಡಿಯಾಚೆಗಿನ ವ್ಯಾಪಾರ ದಾಖಲಾತಿಗಳ ಡಿಜಿಟಲ್ ವಿನಿಮಯ ಸೇರಿದಂತೆ ವ್ಯಾಪಾರದ ಅನುಕೂಲತೆಯನ್ನು ಹೆಚ್ಚಿಸಲು ಸಹಯೋಗವನ್ನು ವೃದ್ಧಿಸುವ ಕುರಿತು ಮಾತನಾಡಿದರು; ಮತ್ತು ನಮ್ಮ ಆರ್ಥಿಕತೆಗಳು ಮತ್ತು ಸಮಾಜಗಳ ಪ್ರಯೋಜನಕ್ಕಾಗಿ ವ್ಯಾಪಾರ ಮತ್ತು ತಂತ್ರಜ್ಞಾನದ ಪರಿವರ್ತಕ ಶಕ್ತಿಯನ್ನು ಬಳಸಿಕೊಳ್ಳಲು ಗಾಢವಾದ ಜಿ-20 ಸಹಯೋಗಕ್ಕಾಗಿ ಒತ್ತಾಯಿಸಿದರು.

ಆರಂಭಿಕ ಅಧಿವೇಶನದಲ್ಲಿ ನಾಸ್ಕಾಮ್ ಅಧ್ಯಕ್ಷೆ ಶ್ರೀಮತಿ ದೇಬ್ಜಾನಿ ಘೋಷ್ ಮತ್ತು ಇಇಪಿಸಿ ಇಂಡಿಯಾದ ಅಧ್ಯಕ್ಷ ಶ್ರೀ ಅರುಣ್ ಕುಮಾರ್ ಗರೋಡಿಯಾ ಭಾಗವಹಿಸಿದ್ದರು.

ಅಂತರರಾಷ್ಟ್ರೀಯ ತಜ್ಞರನ್ನು ಒಳಗೊಂಡ ಕಾರ್ಯಕ್ರಮದ ಭಾಗವಾಗಿ ಎರಡು ತಂಡ ಚರ್ಚೆಗಳನ್ನು ಆಯೋಜಿಸಲಾಗಿತ್ತು. "ತಂತ್ರಜ್ಞಾನ ಮರುರೂಪಿಸಿದ ವ್ಯಾಪಾರ" ಎಂಬ ಶೀರ್ಷಿಕೆಯ ಮೊದಲ ಚರ್ಚೆಯು ಅಂತರರಾಷ್ಟ್ರೀಯ ವ್ಯಾಪಾರದಲ್ಲಿನ ಸದ್ಯದ ಪ್ರವೃತ್ತಿಗಳು, ಅದರ ಮೇಲೆ ತಂತ್ರಜ್ಞಾನದ ಪ್ರಭಾವ ಮತ್ತು ಮುಂಬರುವ ವರ್ಷಗಳ ಬಗೆಗಿನ ನಿರೀಕ್ಷಣೆಗಳ ಬಗ್ಗೆ ನಡೆಯಿತು. ಅನಿಶ್ಚಿತ ಸಮಯದಲ್ಲಿ ದೇಶಗಳು, ಕಂಪನಿಗಳು ನ್ಯಾವಿಗೇಟ್ ಮಾಡಲು ಮತ್ತು ಉದಯೋನ್ಮುಖ ಅವಕಾಶಗಳ ಲಾಭವನ್ನು ಪಡೆಯಲು ಸಾಧ್ಯವಾಗುವಂತೆ ಮಾಡುವ ಆದ್ಯತೆಗಳು ಮತ್ತು ಕಾರ್ಯ ಯೋಜನೆಗಳ ಬಗ್ಗೆ ಅವರು ಚರ್ಚಿಸಿದರು. ವರ್ಧಿತ ಸಹಯೋಗದ ಗುಣಮಟ್ಟ, ಡಿಜಿಟಲ್ ಮೂಲಸೌಕರ್ಯದ ಪರಸ್ಪರ ಕಾರ್ಯಸಾಧ್ಯತೆಯ ಕಡೆಗೆ ಚಲನೆ ಮತ್ತು ವ್ಯವಹಾರ ಪರಿಸರ ವ್ಯವಸ್ಥೆಗಳ ಗಾಢವಾದ ಸಹಕಾರ ಮತ್ತು ಪಾಲುದಾರಿಕೆಯನ್ನು ಚರ್ಚೆಯಲ್ಲಿ ಪಾಲ್ಗೊಂಡವರು ಶಿಫಾರಸು ಮಾಡಿದರು.

"ಉತ್ಪಾದನೆ ಮತ್ತು ವ್ಯಾಪಾರವನ್ನು ಕ್ರಾಂತಿಗೊಳಿಸುವ ಪರಿವರ್ತಕ ಸಾಧನಗಳು" ಶೀರ್ಷಿಕೆಯ ಎರಡನೇ ಪ್ಯಾನಲ್ ಚರ್ಚೆಯು ಜಿ-20 ರಾಷ್ಟ್ರಗಳ ನಡುವೆ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪಾತ್ರದ ಬಗ್ಗೆ ಗಮನ ಕೇಂದ್ರೀಕರಿಸಿತು. ಉದಯೋನ್ಮುಖ ಆರ್ಥಿಕತೆಗಳಲ್ಲಿ ರಕ್ಷಣೆ, ಏರೋಸ್ಪೇಸ್, ಆರೋಗ್ಯ ರಕ್ಷಣೆ ಮತ್ತು ಇಂಧನ ದಕ್ಷತೆಯಂತಹ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಪ್ರಾಮುಖ್ಯತೆ; ಪೂರೈಕೆ ಸರಪಳಿ ನಿರ್ವಹಣೆ ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಸುಧಾರಿಸುವ ಮಾರ್ಗಗಳು; ವ್ಯಾಪಾರವನ್ನು ವೃದ್ಧಿಸಲು ವೆಚ್ಚದ ಸ್ಪರ್ಧಾತ್ಮಕತೆಯನ್ನು ನಿರ್ಮಿಸುವ ವಿಧಾನಗಳು; ಯಾವುದೇ ಅಂತರವನ್ನು ಪರಿಹರಿಸಲು ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಗಳಲ್ಲಿ ಸ್ಟಾರ್ಟ್-ಅಪ್‌ಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತಮ ಏಕೀಕರಣ; ಮತ್ತು ಸಹಯೋಗದ ಪ್ರಮುಖ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಿತು.

ಸಂಯೋಜಕ ಉತ್ಪಾದನೆ, ಜನರೇಟಿವ್ ಎಐ, ಇಂಟರ್ನೆಟ್ ಆಫ್ ಥಿಂಗ್ಸ್, ಬ್ಲಾಕ್‌ಚೇನ್, ಚಾಲಕರಹಿತ ವಾಹನಗಳು ಮತ್ತು ಡ್ರೋನ್‌ಗಳು ಮತ್ತು ವರ್ಧಿತ/ವರ್ಚುವಲ್ ರಿಯಾಲಿಟಿ ಸೇರಿದಂತೆ ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳ ಕುರಿತು ಅಧಿವೇಶನವು ಚರ್ಚಿಸಿತು. ಈ ತಂತ್ರಜ್ಞಾನಗಳು ಸಾಂಪ್ರದಾಯಿಕ ಉತ್ಪಾದನಾ ಪ್ರಕ್ರಿಯೆಗಳು ಮತ್ತು ಪೂರೈಕೆ ಸರಪಳಿಗಳನ್ನು ಪರಿವರ್ತಿಸುತ್ತಲೇ ಸರಕುಗಳ ಜಾಗತಿಕ ವ್ಯಾಪಾರವನ್ನು ಪರಿವರ್ತಿಸುವ ಪ್ರಮುಖ ಸಾಮರ್ಥ್ಯವನ್ನು ಹೊಂದಿವೆ.

*****



(Release ID: 1926758) Visitor Counter : 128


Read this release in: English