ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಎಲೆಕ್ಟ್ರಾನಿಕ್ಸ್ ವ್ಯವಸ್ಥೆಯ ವಿನ್ಯಾಸ ಮತ್ತು ತಯಾರಿಕೆ
Posted On:
15 MAR 2023 7:20PM by PIB Bengaluru
ಭಾರತವು ಎಲೆಕ್ಟ್ರಾನಿಕ್ಸ್‌ನ ಜಾಗತಿಕ ಮೌಲ್ಯ ಸರಪಳಿಯಲ್ಲಿ ವಿಶ್ವಾಸಾರ್ಹ ಪಾತ್ರದಾರಿಯಾಗಿ ಹೊರಹೊಮ್ಮುತ್ತಿದೆ, ಜೊತೆಗೆ 2025-26ರ ವೇಳೆಗೆ 300 ಶತಕೋಟಿ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ, ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಮತ್ತು ಮಾಹಿತಿ ತಂತ್ರಜ್ಞಾನ ವಲಯವನ್ನು ವಿಸ್ತರಿಸಲು ಹಾಗೂ ಆಳಗೊಳಿಸಲು ಸರಕಾರ ವಿವಿಧ ಕಾರ್ಯತಂತ್ರದ ಕ್ರಮಗಳನ್ನು ಮತ್ತು ಉಪಕ್ರಮಗಳನ್ನು ಕೈಗೊಂಡಿದೆ. ಸೆಮಿಕಂಡಕ್ಟರ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ʻಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆʼಯಲ್ಲಿ (ಇಎಸ್‌ಡಿಎಂ) ಭಾರತವನ್ನು ಜಾಗತಿಕ ಕೇಂದ್ರವಾಗಿ ಮಾಡಲು ಜೊತೆಗೆ ಜಾಗತಿಕವಾಗಿ ಭಾರತವು ಪ್ರಬಲವಾಗಿ ಸ್ಪರ್ಧಿಸುವಂತಾಗಲು, ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಸರಕಾರ ಕೈಗೊಂಡ ಕ್ರಮಗಳನ್ನು ಕೆಳಗೆ ನೀಡಲಾಗಿದೆ:
ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ-2019: ʻಎಲೆಕ್ಟ್ರಾನಿಕ್ಸ್ ಕುರಿತ ರಾಷ್ಟ್ರೀಯ ನೀತಿ- 2019ʼ (ಎನ್‌ಪಿಇ-2019) ಅನ್ನು ಫೆಬ್ರವರಿ 25, 2019 ರಂದು ಜಾರಿಗೊಳಿಸಲಾಗಿದೆ. ಚಿಪ್‌ಸಟ್‌ಗಳು ಸೇರಿದಂತೆ ಪ್ರಮುಖ ಘಟಕಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಲು ಸಾಮರ್ಥ್ಯವರ್ಧನೆಗೆ ಉತ್ತೇಜಿಸುವುದು ಮತ್ತು ಉದ್ಯಮಕ್ಕೆ ಜಾಗತಿಕವಾಗಿ ಸ್ಪರ್ಧಿಸಲು ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸುವ ಮೂಲಕ ಭಾರತವನ್ನು ʻಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆಯಲ್ಲಿʼನಲ್ಲಿ (ಇಎಸ್‌ಡಿಎಂ) ಜಾಗತಿಕ ಕೇಂದ್ರವಾಗಿ ಮಾಡುವುದು ʻಎನ್‌ಪಿಇ-2019ʼ ಆಶಯವಾಗಿದೆ.
ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉತ್ತೇಜಿಸಲು ಹಾಗೂ ರಫ್ತುಗಳನ್ನು ಉತ್ತೇಜಿಸಲು, ʻಎನ್‌ಇಪಿ-2019ʼ ಅಡಿಯಲ್ಲಿ ಈ ಕೆಳಗಿನ ಮೂರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ:
ಅಸೆಂಬ್ಲಿ, ಟೆಸ್ಟಿಂಗ್, ಮಾರ್ಕಿಂಗ್ ಮತ್ತು ಪ್ಯಾಕೇಜಿಂಗ್ (ಎಟಿಎಂಪಿ) ಘಟಕಗಳು ಸೇರಿದಂತೆ ನಿರ್ದಿಷ್ಟ ಎಲೆಕ್ಟ್ರಾನಿಕ್ ಘಟಕಗಳ ಉತ್ಪಾದನೆಯಲ್ಲಿ ತೊಡಗಿರುವ ಹಾಗೂ ಮೊಬೈಲ್ ಫೋನ್ ತಯಾರಿಕೆ ಮತ್ತು ಉತ್ಪಾದನೆಯಲ್ಲಿ ತೊಡಗಿರುವ ಸಂಸ್ಥೆಗಳಿಗೆ ಮಾರಾಟದಲ್ಲಿ ಹೆಚ್ಚಳದ (ಮೂಲ ವರ್ಷಕ್ಕೆ ಹೋಲಿಸಿದರೆ) ಅರ್ಹತೆ ಪರಿಗಣಿಸಿ ಶೇಕಡಾ 4 ರಿಂದ 6 ರಷ್ಟು ಪ್ರೋತ್ಸಾಹ ಧನವನ್ನು ಒದಗಿಸುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ (ಪಿಎಲ್ಐ) ಅನ್ನು ಏಪ್ರಿಲ್ 01, 2020 ರಂದು ಜಾರಿಗೊಳಿಸಲಾಗಿದೆ.
ಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನೆ ಆಧರಿತ ಪ್ರೋತ್ಸಾಹಧನ ಯೋಜನೆ (ಪಿಎಲ್ಐ) ಅನ್ನು ಮಾರ್ಚ್ 03, 2021 ರಂದು ಜಾರಿಗೊಳಿಸಲಾಗಿದೆ. ಭಾರತದಲ್ಲಿ ತಯಾರಿಸಿದ ಮತ್ತು ಗುರಿ ವಿಭಾಗದ ಅಡಿಯಲ್ಲಿ ಬರುವ ಸರಕುಗಳ ಮಾರಾಟದಲ್ಲಿ ನಿವ್ವಳ ಹೆಚ್ಚಳದ ಆಧಾರದ ಮೇಲೆ (ಮೂಲ ವರ್ಷಕ್ಕೆ ಹೋಲಿಸಿದರೆ) ಅರ್ಹ ಕಂಪನಿಗಳಿಗೆ ನಾಲ್ಕು ವರ್ಷಗಳ ಅವಧಿಗೆ ಶೇಕಡಾ 4 ರಿಂದ 2 ಅಥವಾ 1 ರಷ್ಟು ಪ್ರೋತ್ಸಾಹ ಧನವನ್ನು ನೀಡಲಾಗುವುದು. ʻಪಿಎಲ್ಐʼ ಯೋಜನೆಯಡಿ ಗುರಿ ವಿಭಾಗವು (i) ಲ್ಯಾಪ್‌ಟಾಪ್‌ಗಳು (ii) ಟ್ಯಾಬ್ಲೆಟ್‌ಗಳು (iii) ಆಲ್-ಇನ್-ಒನ್ ಪಿಸಿಗಳು ಮತ್ತು (iv) ಸರ್ವರ್ಗಳನ್ನು ಒಳಗೊಂಡಿದೆ.
ಎಲೆಕ್ಟ್ರಾನಿಕ್ ಬಿಡಿಭಾಗಗಳು ಮತ್ತು ಅರೆವಾಹಕಗಳ ಉತ್ಪಾದನೆಯನ್ನು ಉತ್ತೇಜಿಸುವ ಯೋಜನೆಯನ್ನು (ಸ್ಪೆಕ್ಸ್) ಏಪ್ರಿಲ್ 01, 2020ರಂದು ಜಾರಿಗೊಳಿಸಲಾಗಿದೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ಮೌಲ್ಯ ಸರಪಳಿಗೆ ಸೇರುವ, ಗುರುತಿಸಲಾದ ಸರಕುಗಳ ಪಟ್ಟಿಯಲ್ಲಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಬಂಡವಾಳ ವೆಚ್ಚದ ಮೇಲೆ ಶೇಕಡಾ 25 ರಷ್ಟು ಪ್ರೋತ್ಸಾಹಧನವನ್ನು ಒದಗಿಸಲಾಗುತ್ತದೆ. ಅಂತಹ ವಸ್ತುಗಳೆಂದರೆ, ಎಲೆಕ್ಟ್ರಾನಿಕ್ ಘಟಕಗಳು, ಸೆಮಿ ಕಂಡಕ್ಟರ್ಸ್/ಪ್ರದರ್ಶನ ಫ್ಯಾಬ್ರಿಕೇಷನ್ ಘಟಕಗಳು, ʻಎಟಿಎಂಪಿʼ ಘಟಕಗಳು, ವಿಶೇಷ ಉಪ-ಜೋಡಣೆಗಳು ಮತ್ತು ಮೇಲೆ ತಿಳಿಸಿದ ಸರಕುಗಳ ತಯಾರಿಕೆಗಾಗಿ ಬಂಡವಾಳ ಸರಕುಗಳು.
ಮಾರ್ಪಡಿಸಿದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಸ್ (ಇಎಂಸಿ 2.0) ಯೋಜನೆಯನ್ನು ಏಪ್ರಿಲ್ 01, 2020 ರಂದು ಜಾರಿಗೊಳಿಸಲಾಗಿದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ತಯಾರಕರನ್ನು ತಮ್ಮ ಉತ್ಪನ್ನ ಪೂರೈಕೆ ಸರಪಳಿಯೊಂದಿಗೆ ಭಾರತದಲ್ಲಿ ಘಟಕಗಳನ್ನು ಸ್ಥಾಪಿಸಲು ಆಕರ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಪ್ರಮುಖ ʻರೆಡಿ ಬಿಲ್ಟ್ ಫ್ಯಾಕ್ಟರಿʼ (ಆರ್‌ಬಿಎಫ್) ಶೆಡ್‌ಗಳು/ ʻಪ್ಲಗ್ ಆಂಡ್ ಪ್ಲೇʼ ಘಟಕಗಳು ಸೇರಿದಂತೆ ಸಾಮಾನ್ಯ ಘಟಕಗಳು ಮತ್ತು ಸೌಲಭ್ಯಗಳೊಂದಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ಸೃಷ್ಟಿಸಲು ಬೆಂಬಲ ಒದಗಿಸಲಾಗುತ್ತದೆ. ದೇಶಾದ್ಯಂತ ʻಇಎಂಸಿʼ ಯೋಜನೆಗಳು ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು (ಸಿಎಫ್‌ಸಿ) ಸ್ಥಾಪಿಸಲು ಸಹ ಈ ಯೋಜನೆಯು ಆರ್ಥಿಕ ಸಹಾಯವನ್ನು ಒದಗಿಸುತ್ತದೆ.
ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿ ಯೋಜನೆ: ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ವಿಸ್ತರಿಸಲು ಮತ್ತು ಆಳಗೊಳಿಸಲು, ಕೇಂದ್ರ ಸಚಿವ ಸಂಪುಟವು 2021ರ ಡಿಸೆಂಬರ್ 15ರಂದು ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇ ಉತ್ಪಾದನಾ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ 76,000 ಕೋಟಿ ರೂ.ಗಳ ಸಮಗ್ರ ಯೋಜನೆಗೆ ಅನುಮೋದನೆ ನೀಡಿತು. ಸಚಿವ ಸಂಪುಟದ ಅನುಮೋದನೆಯೊಂದಿಗೆ, ಈ ಯೋಜನೆಯನ್ನು ಇತ್ತೀಚೆಗೆ ಸೆಪ್ಟೆಂಬರ್ 21, 2022 ರಂದು ಮಾರ್ಪಡಿಸಲಾಗಿದೆ. ಮಾರ್ಪಡಿಸಿದ ಯೋಜನೆಯು ಎಲ್ಲಾ `ಟೆಕ್ನಾಲಜಿ ನೋಡ್ʼಗಳಿಗೂ(Technology nodes) ಅನ್ವಯವಾಗುವಂತೆ ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್, ಸಂಯುಕ್ತ ಸೆಮಿಕಂಡಕ್ಟರ್ , ಪ್ಯಾಕೇಜಿಂಗ್ ಮತ್ತು ಇತರ ಸೆಮಿ ಕಂಡಕ್ಟರ್ ಘಟಕಗಳಿಗೆ ಏಕರೂಪವಾಗಿ ಯೋಜನಾ ವೆಚ್ಚದ 50 ಪ್ರತಿಶತದಷ್ಟು ಹಣಕಾಸಿನ ಬೆಂಬಲವನ್ನು ನೀಡಲಾಗುತ್ತದೆ.
ಅರ್ಹ ಅರ್ಜಿದಾರರಿಗೆ ಈ ಕೆಳಗಿನ ಹಣಕಾಸಿನ ಪ್ರೋತ್ಸಾಹಗಳು ಈಗ ಲಭ್ಯವಿವೆ:
ಸೆಮಿಕಂಡಕ್ಟರ್ ಫ್ಯಾಬ್ಸ್ ಸ್ಥಾಪನೆಗೆ ಮಾರ್ಪಡಿಸಿದ ಯೋಜನೆ: ಇದು ದೇಶದಲ್ಲಿ ಸೆಮಿಕಂಡಕ್ಟರ್ ವೇಫರ್ ಫ್ಯಾಬ್ರಿಕೇಷನ್ ಸೌಲಭ್ಯಗಳನ್ನು ಸ್ಥಾಪಿಸಲು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಎಲ್ಲಾ ʻಟೆಕ್ನಾಲಜಿ ನೋಡ್ʼಗಳಲ್ಲಿ ಸಿಲಿಕಾನ್ ಆಧಾರಿತ ಸೆಮಿಕಂಡಕ್ಟರ್ ಫ್ಯಾಬ್‌ಗಳನ್ನು ಸ್ಥಾಪಿಸಲು ಯೋಜನಾ ವೆಚ್ಚದ 50 ಪ್ರತಿಶತದಷ್ಟು ಹಣಕಾಸಿನ ಬೆಂಬಲ ಲಭ್ಯವಿದೆ.
ಡಿಸ್‌ಪ್ಲೇ ಫ್ಯಾಬ್ಸ್ ಸ್ಥಾಪನೆಗೆ ಮಾರ್ಪಡಿಸಿದ ಯೋಜನೆ: ಇದು ಟಿಎಫ್‌ಟಿ ಎಲ್‌ಸಿಡಿ / ಅಮೋಲೆಡ್ ಆಧಾರಿತ ಡಿಸ್‌ಪ್ಲೇ ಫ್ಯಾಬ್ರಿಕೇಷನ್ ಘಟಕಗಳನ್ನು ಸ್ಥಾಪಿಸಲು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ. ಇದು ಯೋಜನಾ ವೆಚ್ಚದ 50 ಪ್ರತಿಶತದಷ್ಟು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.
ಭಾರತದಲ್ಲಿ ಸಂಯುಕ್ತ ಸೆಮಿಕಂಡಕ್ಟರ್‌ಗಳು/ ಸಿಲಿಕಾನ್ ಫೋಟಾನಿಕ್ಸ್ / ಸೆನ್ಸರ್ಸ್ ಫ್ಯಾಬ್ / ಡಿಸ್ಕ್ರೀಟ್ ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಎಂಪಿ / ಒಎಸ್‌ಎಟಿ ಘಟಕಗಳನ್ನು ಸ್ಥಾಪಿಸಲು ಮಾರ್ಪಡಿಸಿದ ಯೋಜನೆ: ಇದು ಭಾರತದಲ್ಲಿ ಕಾಂಪೌಂಡ್ ಸೆಮಿಕಂಡಕ್ಟರ್‌ಗಳು / ಸಿಲಿಕಾನ್ ಫೋಟೋನಿಕ್ಸ್ (ಎಸ್‌ಐಪಿಎಚ್) / ಸೆನ್ಸರ್‌ಗಳು (ಎಂಇಎಂಎಸ್ ಸೇರಿದಂತೆ) ಫ್ಯಾಬ್ / ಡಿಸ್ಕ್ರೀಟ್ ಸೆಮಿಕಂಡಕ್ಟರ್ ಫ್ಯಾಬ್ಸ್ ಮತ್ತು ಸೆಮಿಕಂಡಕ್ಟರ್ ಎಟಿಪಿ / ಒಎಸ್‌ಎಟಿ ಘಟಕಗಳಣ್ನು ಸ್ಥಾಪಿಸಲು ಅರ್ಹ ಅರ್ಜಿದಾರರಿಗೆ ಬಂಡವಾಳ ವೆಚ್ಚದ ಶೇಕಡಾ 50 ರಷ್ಟು ಹಣಕಾಸಿನ ಬೆಂಬಲವನ್ನು ಒದಗಿಸುತ್ತದೆ.
ವಿನ್ಯಾಸ ಆಧರಿತ ಪ್ರೋತ್ಸಾಹಧನ ಯೋಜನೆ: ಇದು ಐಸಿಗಳು, ಚಿಪ್‌ಸೆಟ್‌ಗಳು, ಎಸ್ಒಸಿಗಳು, ಸಿಸ್ಟಮ್ಸ್ ಮತ್ತು ಐಪಿ ಕೋರ್‌ಗಳು ಹಾಗೂ ಸೆಮಿಕಂಡಕ್ಟರ್ ಆಧರಿತ ವಿನ್ಯಾಸಕ್ಕಾಗಿ ಉತ್ಪಾದನೆಯ ವಿವಿಧ ಹಂತಗಳಲ್ಲಿ ಆರ್ಥಿಕ ಪ್ರೋತ್ಸಾಹ, ವಿನ್ಯಾಸ ಮೂಲಸೌಕರ್ಯ ಬೆಂಬಲವನ್ನು ನೀಡುತ್ತದೆ. ಈ ಯೋಜನೆಯು "ಉತ್ಪನ್ನ ವಿನ್ಯಾಸ ಆಧರಿತ ಪ್ರೋತ್ಸಾಹಧನ" ಮತ್ತು "ನಿಯೋಜನೆ ಆಧರಿತ ಪ್ರೋತ್ಸಾಹಧನ" ಎರಡನ್ನೂ ಒದಗಿಸುತ್ತದೆ.
100% ವಿದೇಶಿ ನೇರ ಹೂಡಿಕೆ: ಅಸ್ತಿತ್ವದಲ್ಲಿರುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯ ಪ್ರಕಾರ, ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ (ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳನ್ನು ಹೊರತುಪಡಿಸಿ) ಸ್ವಯಂಚಾಲಿತ ಮಾರ್ಗದಲ್ಲಿ ಶೇಕಡಾ 100 ರಷ್ಟು ಎಫ್‌ಡಿಐಗೆ ಅನುಮತಿಸಲಾಗಿದೆ.
ಮಾರ್ಪಡಿಸಿದ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಯೋಜನೆ (ಎಂ-ಎಸ್ಐಪಿಎಸ್): ಈ ಯೋಜನೆಯನ್ನು ಜುಲೈ 27, 2012 ರಂದು ಜಾರಿಗೊಳಿಸಲಾಯಿತು. ಕುಂದುಕೊರತೆಗಳನ್ನು ಸರಿದೂಗಿಸಲು ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಆರ್ಥಿಕ ಪ್ರೋತ್ಸಾಹವನ್ನು ಒದಗಿಸುವುದು ಈ ಯೋಜನೆಯ ಉದ್ದೇಶ. ಯೋಜನೆಯ ಅವಧಿಯನ್ನು ವಿಸ್ತರಿಸಲು, ಇನ್ನೂ 15 ಉತ್ಪನ್ನ ವಿಭಾಗಗಳನ್ನು ಸೇರಿಸುವ ಮೂಲಕ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಇದನ್ನು ಆಗಸ್ಟ್ 2015 ರಲ್ಲಿ ತಿದ್ದುಪಡಿ ಮಾಡಲಾಯಿತು. ಹೂಡಿಕೆಗಳನ್ನು ತ್ವರಿತಗೊಳಿಸಲು ಈ ಯೋಜನೆಯನ್ನು ಜನವರಿ, 2017 ರಲ್ಲಿ ಮತ್ತಷ್ಟು ತಿದ್ದುಪಡಿ ಮಾಡಲಾಯಿತು. ಈ ಯೋಜನೆಯು ವಿಶೇಷ ಆರ್ಥಿಕ ವಲಯಗಳಲ್ಲಿ (ಎಸ್ಇಜೆಡ್) ಹೂಡಿಕೆಗೆ ಶೇಕಡಾ 20 ರಷ್ಟು ಮತ್ತು ಎಸ್ಇಜೆಡ್ ಅಲ್ಲದ ಹೂಡಿಕೆಗಳಿಗೆ ಶೇಕಡಾ 25 ರಷ್ಟು ಬಂಡವಾಳ ವೆಚ್ಚಕ್ಕೆ ಸಬ್ಸಿಡಿ ನೀಡುತ್ತದೆ. ಸಂಪೂರ್ಣ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಮೌಲ್ಯ ಸರಪಳಿಯನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಘಟಕಗಳ 44 ವಿಭಾಗಗಳು / ವರ್ಗಗಳಿಗೆ ಪ್ರೋತ್ಸಾಹಕಗಳು ಲಭ್ಯವಿದೆ. ಈ ಯೋಜನೆಯು ಡಿಸೆಂಬರ್ 31, 2018ರವರೆಗೆ ಅರ್ಜಿಗಳನ್ನು ಸ್ವೀಕರಿಸಲು ಮುಕ್ತವಾಗಿತ್ತು, ಪ್ರಸ್ತುತ ಅನುಷ್ಠಾನ ಹಂತದಲ್ಲಿದೆ.
ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಸ್ (ಇಎಂಸಿ) ಯೋಜನೆ: ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಾಮಾನ್ಯ ಸೌಕರ್ಯ-ಸೌಲಭ್ಯಗಳೊಂದಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳ ಸೃಷ್ಟಿಸಲು ಬೆಂಬಲ ನೀಡಲು ʻಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಸ್ ಯೋಜನೆʼಯನ್ನು ಅಕ್ಟೋಬರ್ 22, 2012 ರಂದು ಜಾರಿಗೊಳಿಸಲಾಯಿತು.
ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಫಂಡ್ (ಇಡಿಎಫ್) : ಎಲೆಕ್ಟ್ರಾನಿಕ್ಸ್ ಡೆವಲಪ್ಮೆಂಟ್ ಫಂಡ್ (ಇಡಿಎಫ್) ಅನ್ನು ವೃತ್ತಿಪರವಾಗಿ ನಿರ್ವಹಿಸುವ "ಡಾಟರ್ ಫಂಡ್ಸ್"ನಲ್ಲಿ ಭಾಗವಹಿಸಲು "ನಿಧಿಗಳ ನಿಧಿ" ಯಾಗಿ ಸ್ಥಾಪಿಸಲಾಗಿದೆ. ಇದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನವೋದ್ಯಮಗಳು ಮತ್ತು ಕಂಪನಿಗಳಿಗೆ ಅಪಾಯ ಎದುರಿಸಲು ಬಂಡವಾಳವನ್ನು ಒದಗಿಸುತ್ತದೆ. ಈ ನಿಧಿಯು ಈ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. 2,626 ಕೋಟಿ ರೂ.ಗಳ ಉದ್ದೇಶಿತ ನಿಧಿಯೊಂದಿಗೆ ಒಂಬತ್ತು ʻಡಾಟರ್ ಫಂಡ್ʼಗಳಿಗೆ ʻಇಡಿಎಫ್ʼ ಮೂಲಕ 409 ಕೋಟಿ ರೂ. ಬದ್ಧತೆ ಒದಗಿಸಲಾಗಿದೆ.
ಮೊಬೈಲ್ ಫೋನ್‌ಗಳು ಮತ್ತು ಅವುಗಳ ಉಪ-ಜೋಡಣೆಗಳು / ಭಾಗಗಳ ಉತ್ಪಾದನೆಯಲ್ಲಿ ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸಲು ಹಂತ ಹಂತದ ಉತ್ಪಾದನಾ ಕಾರ್ಯಕ್ರಮವನ್ನು (ಪಿಎಂಪಿ) ಜಾರಿಗೊಳಿಸಲಾಗಿದೆ. ಇದರ ಪರಿಣಾಮವಾಗಿ, ಭಾರತವು ಈ ವಲಯಕ್ಕೆ ವೇಗವಾಗಿ ಹೂಡಿಕೆಗಳನ್ನು ಆಕರ್ಷಿಸಲು ಪ್ರಾರಂಭಿಸಿದೆ ಮತ್ತು ದೇಶದಲ್ಲಿ ಗಮನಾರ್ಹ ಉತ್ಪಾದನಾ ಸಾಮರ್ಥ್ಯಗಳನ್ನು ಸ್ಥಾಪಿಸಲಾಗಿದೆ. ಮೊಬೈಲ್ ಫೋನ್‌ಗಳ ಉತ್ಪಾದನೆಯು ʻಸೆಮಿ ನಾಕ್ಡ್ ಡೌನ್ʼ(ಎಸ್ ಕೆಡಿ) ಮಟ್ಟದಿಂದ ʻಕಂಪ್ಲೀಟ್ ನಾಕ್ಡ್ ಡೌನ್ʼ(ಸಿಕೆಡಿ) ಮಟ್ಟಕ್ಕೆ ಸ್ಥಿರವಾಗಿ ಚಲಿಸುತ್ತಿದೆ, ಇದರಿಂದಾಗಿ ದೇಶೀಯ ಮೌಲ್ಯವರ್ಧನೆಯನ್ನು ಕ್ರಮೇಣ ಹೆಚ್ಚುತ್ತಿದೆ.
ಸೆಲ್ಯುಲಾರ್ ಮೊಬೈಲ್ ಫೋನ್‌ಗಳು, ಟಿವಿಗಳು, ಎಲೆಕ್ಟ್ರಾನಿಕ್ ಘಟಕಗಳು, ಟಿವಿಗಾಗಿ ಸೆಟ್ ಟಾಪ್ ಬಾಕ್ಸ್‌ಗಳು, ಎಲ್ಇಡಿ ಉತ್ಪನ್ನಗಳು ಮತ್ತು ವೈದ್ಯಕೀಯ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೇರಿದಂತೆ ಎಲೆಕ್ಟ್ರಾನಿಕ್ ಸರಕುಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸುಂಕ ರಚನೆಯನ್ನು ತರ್ಕಬದ್ಧಗೊಳಿಸಲಾಗಿದೆ.
ಬಂಡವಾಳ ಸರಕುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿ: ನಿರ್ದಿಷ್ಟ ಎಲೆಕ್ಟ್ರಾನಿಕ್ ಸರಕುಗಳ ತಯಾರಿಕೆಗಾಗಿ ಅಧಿಸೂಚಿತ ಬಂಡವಾಳ ಸರಕುಗಳನ್ನು "ಶೂನ್ಯ" ಮೂಲ ಕಸ್ಟಮ್ಸ್ ಸುಂಕದೊಂದಿಗೆ ಆಮದು ಮಾಡಿಕೊಳ್ಳಲು ಅನುಮತಿಸಲಾಗಿದೆ.
ಬಳಸಿದ ಘಟಕ ಮತ್ತು ಯಂತ್ರೋಪಕರಣಗಳ ಸರಳೀಕೃತ ಆಮದು: ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ಯಮದ ಬಳಕೆಗಾಗಿ ಕನಿಷ್ಠ ಐದು ವರ್ಷಗಳ ಉಳಿಕೆ ಜೀವಿತಾವಧಿಯನ್ನು ಹೊಂದಿರುವ ಬಳಸಿದ ಸ್ಥಾವರ ಮತ್ತು ಯಂತ್ರೋಪಕರಣಗಳ ಆಮದಿಗೆ ಸರಕಾರ ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ 2018 ಜೂನ್ 11ರ ಅಧಿಸೂಚನೆಯ ಮೂಲಕ ʻಅಪಾಯಕಾರಿ ಮತ್ತು ಇತರ ತ್ಯಾಜ್ಯಗಳ (ನಿರ್ವಹಣೆ ಮತ್ತು ಗಡಿಯಾಚೆಗಿನ ಚಲನೆ) ನಿಯಮಗಳು, 2016ʼಕ್ಕೆ ತಿದ್ದುಪಡಿ ತಂದು ಈ ಕುರಿತ ನಿಯಮಗಳನ್ನು ಸರಳೀಕರಿಸಲಾಗಿದೆ.
ಏಜಿಂಗ್ ನಿರ್ಬಂಧವನ್ನು ಸಡಿಲಿಸುವುದು: ಕಂದಾಯ ಇಲಾಖೆಯು ಅಧಿಸೂಚನೆ ಸಂಖ್ಯೆ 60/2018-ಕಸ್ಟಮ್ಸ್, ದಿನಾಂಕ ಸೆಪ್ಟೆಂಬರ್ 11, 2018 ರ ಮೂಲಕ ನವೆಂಬರ್ 14, 1995ರ ಅಧಿಸೂಚನೆ ಸಂಖ್ಯೆ 158/95-ಕಸ್ಟಮ್ಸ್ ಅನ್ನು ತಿದ್ದುಪಡಿ ಮಾಡಿದೆ. ಆ ಮೂಲಕ ಭಾರತದಲ್ಲಿ ತಯಾರಿಸಿದ ಮತ್ತು ದುರಸ್ತಿ ಅಥವಾ ಮರುಸ್ಥಾಪನೆಗಾಗಿ ಭಾರತಕ್ಕೆ ಮರು ಆಮದು ಮಾಡಿಕೊಳ್ಳುವ ನಿರ್ದಿಷ್ಟ ಎಲೆಕ್ಟ್ರಾನಿಕ್ ಸರಕುಗಳಿಗೆ ವಯಸ್ಸಿನ ನಿರ್ಬಂಧವನ್ನು ಮೂರರಿಂದ ಏಳು ವರ್ಷಗಳವರೆಗೆ ಸಡಿಲಿಸಲಾಗಿದೆ.
ಸಾರ್ವಜನಿಕ ಸಂಗ್ರಹಣೆ (ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ) ಆದೇಶ 2017: 'ಮೇಕ್ ಇನ್ ಇಂಡಿಯಾ'ವನ್ನು ಉತ್ತೇಜಿಸಲು ಹಾಗೂ ಆದಾಯ ಮತ್ತು ಉದ್ಯೋಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತದಲ್ಲಿ ಸರಕು ಮತ್ತು ಸೇವೆಗಳ ತಯಾರಿಕೆ ಹಾಗೂ ಉತ್ಪಾದನೆಯನ್ನು ಉತ್ತೇಜಿಸಲು ಸರಕಾರವು ಜೂನ್ 15ರಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಆದೇಶದ ಮೂಲಕ ʻಸಾರ್ವಜನಿಕ ಸಂಗ್ರಹಣೆ (ಮೇಕ್ ಇನ್ ಇಂಡಿಯಾಕ್ಕೆ ಆದ್ಯತೆ) ಆದೇಶ 2017ʼ ಹೊರಡಿಸಿದೆ. ಕ್ರಮವಾಗಿ ಮೇ 28, 2018, ಮೇ 29, 2019, ಜೂನ್ 04, 2020 ಮತ್ತು ಸೆಪ್ಟೆಂಬರ್ 16, 2020ರ ಆದೇಶಗಳ ಮೂಲಕ ಇದಕ್ಕೆ ಪರಿಷ್ಕರಣೆಗಳನ್ನು ಮಾಡಲಾಗಿದೆ. ಮೇಲೆ ತಿಳಿಸಿದ ಆದೇಶದ ಮುಂದುವರಿಕೆಗಾಗಿ, ಎಲೆಕ್ಟ್ರಾಕಿನ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 13 ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಸ್ಥಳೀಯ ವಸ್ತುವಿಷಯವನ್ನು(ಕಂಟೆಂಟ್) ಲೆಕ್ಕಹಾಕುವ ಕಾರ್ಯವಿಧಾನವನ್ನು ಸೂಚಿಸಿದೆ, ಅವುಗಳೆಂದರೆ( i) ಡೆಸ್ಕ್ ಟಾಪ್ ಕಂಪ್ಯೂಟರ್‌ಗಳು, (ii) ಥಿನ್ ಕ್ಲೈಂಟ್‌ಗಳು, (iii) ಕಂಪ್ಯೂಟರ್ ಮಾನಿಟರ್‌ಗಳು, (iv) ಲ್ಯಾಪ್ ಟಾಪ್ ಪಿಸಿಗಳು, (v) ಟ್ಯಾಬ್ಲೆಟ್ ಪಿಸಿಗಳು, (vi) ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್‌ಗಳು, (vii) ಸಂಪರ್ಕ ಮತ್ತು ಸಂಪರ್ಕವಿಲ್ಲದ ಸ್ಮಾರ್ಟ್ ಕಾರ್ಡ್‌ಗಳು, (viii) ಎಲ್.ಇಡಿ. ಉತ್ಪನ್ನಗಳು, (ix) ಬಯೋಮೆಟ್ರಿಕ್ ಪ್ರವೇಶ ನಿಯಂತ್ರಣ / ದೃಢೀಕರಣ ಸಾಧನಗಳು, (x) ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ ಸೆನ್ಸರ್‌ಗಳು. (xi) ಬಯೋಮೆಟ್ರಿಕ್ ಐರಿಸ್ ಸೆನ್ಸರ್‌ಗಳು, (xii) ಸರ್ವರ್‌ಗಳು, ಮತ್ತು (xiii) ಸೆಲ್ಯುಲಾರ್ ಮೊಬೈಲ್ ಫೋನ್‌ಗಳು.
ಕಡ್ಡಾಯ ನೋಂದಣಿ ಆದೇಶ (ಸಿಆರ್‌ಒ): ಭಾರತಕ್ಕೆ ಕಳಪೆ ಗುಣಮಟ್ಟದ ಮತ್ತು ಅಸುರಕ್ಷಿತ ಎಲೆಕ್ಟ್ರಾನಿಕ್ ಸರಕುಗಳ ಆಮದನ್ನು ತಡೆಯುವ ಮೂಲಕ ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯ ಅನುಸರಣೆಗಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು "ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸರಕುಗಳ (ಕಡ್ಡಾಯ ನೋಂದಣಿ) ಆದೇಶ, 2012" ಅನ್ನು ಜಾರಿಗೊಳಿಸಿದೆ. ʻಸಿಆರ್‌ಒʼ ಅಡಿಯಲ್ಲಿ ಅರವತ್ತಮೂರು ಉತ್ಪನ್ನ ವಿಭಾಗಗಳನ್ನು ಅಧಿಸೂಚಿಸಲಾಗಿದ್ದು, ಈ ಆದೇಶವು 63 ಉತ್ಪನ್ನ ವರ್ಗಗಳಿಗೆ ಅನ್ವಯಿಸುತ್ತದೆ.
ಗ್ಯಾಲಿಯಂ ನೈಟ್ರೈಡ್ (ಜಿಎಎನ್) ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಕೇಂದ್ರ ಮತ್ತು ಇನ್ಕ್ಯುಬೇಟರ್ ಸ್ಥಾಪನೆ: "ಗ್ಯಾಲಿಯಂ ನೈಟ್ರೈಡ್ (ಜಿಎಎನ್) ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಕೇಂದ್ರ ಮತ್ತು ಹೈ ಪವರ್ ಮತ್ತು ಹೈ ಫ್ರೀಕ್ವೆನ್ಸಿ ಎಲೆಕ್ಟ್ರಾನಿಕ್ಸ್‌ಗಾಗಿ ಇನ್ಕ್ಯುಬೇಟರ್ ಸ್ಥಾಪನೆ" ಯೋಜನೆಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ʻಸೊಸೈಟಿ ಫಾರ್ ಇನ್ನೋವೇಷನ್ ಆಂಡ್ ಡೆವಲಪ್‌ಮೆಂಟ್ʼ(ಎಸ್‌ಐಡಿ) ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಭಾಗವಾಗಿ ಯೋಜನೆಯನ್ನು ʻಸೆಂಟರ್ ಫಾರ್ ನ್ಯಾನೊ ಸೈನ್ಸ್ ಅಂಡ್ ಎಂಜಿನಿಯರಿಂಗ್ʼ (ಸಿಇಎನ್ಎಸ್ಇ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಆಶ್ರಯದಲ್ಲಿ "ಫೌಂಡೇಶನ್ ಫಾರ್ ಸೈನ್ಸ್, ಇನ್ನೋವೇಶನ್ ಅಂಡ್ ಡೆವಲಪ್‌ಮೆಂಟ್" ಹೆಸರಿನ ಸೆಕ್ಷನ್ 8 ಕಂಪನಿಯಾಗಿ ಪರಿವರ್ತಿಸಲಾಗಿದೆ.
ʻಡಿಜಿಟಲ್ ಇಂಡಿಯಾ ಮಿಷನ್ʼ ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯನ್ನಾಗಿ ಪರಿವರ್ತಿಸುವ ಒಂದು ಉಪಕ್ರಮವಾಗಿದೆ. ಈ ಸಂಯುಕ್ತ ಯೋಜನೆಯು ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ಪ್ರಮುಖವಾಗಿದೆ. ʻಡಿಜಿಟಲ್ ಇಂಡಿಯಾ ಮಿಷನ್ʼ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಈ ಯೋಜನೆಯ ಭಾಗವಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹಲವಾರು ಗಮನಾರ್ಹ ಯೋಜನೆಗಳನ್ನು ಪ್ರಾರಂಭಿಸಿದೆ. ಇದರಿಂದ ದೇಶದ ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ಬೆಳವಣಿಗೆಗೆ ವೇಗವರ್ಧನೆ ದೊರೆತಿದೆ. ಈ ನಿಟ್ಟಿನಲ್ಲಿ, ಡಿಸೆಂಬರ್ 2022 ರವರೆಗೆ, ʻದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನೆ ಆಧೃಇತ ಪ್ರೋತ್ಸಾಹಧನ ಯೋಜನೆʼ ಅಡಿಯಲ್ಲಿ 52,509 ನೇರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಅಂತೆಯೇ, ʻಐಟಿ ಹಾರ್ಡ್‌ವೇರ್‌ಗಾಗಿ ಉತ್ಪಾದನಾ ಆಧರಿತ ಪ್ರೋತ್ಸಾಹಧನ ಯೋಜನೆʼ ಅಡಿಯಲ್ಲಿ, 504 ನೇರ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ. ಇದಲ್ಲದೆ, ʻಇಎಸ್‌ಡಿಎಂʼ ವಲಯದಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಈ ಕೆಳಗಿನ ಎರಡು ಯೋಜನೆಗಳನ್ನು ಸಚಿವಾಲಯವು ಅನುಮೋದಿಸಿದೆ, ಅವುಗಳೆಂದರೆ:
"ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆʼ (ಇಎಸ್‌ಡಿಎಂ) ವಲಯದಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಆಯ್ದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ನೆರವು ಯೋಜನೆ" (ಯೋಜನೆ -1) ಮತ್ತು "ಡಿಜಿಟಲ್ ಇಂಡಿಯಾಕ್ಕಾಗಿ ʻಇಎಸ್‌ಡಿಎಂʼನಲ್ಲಿ ಕೌಶಲ್ಯ ಅಭಿವೃದ್ಧಿ" (ಯೋಜನೆ -2). ಇಡೀ ದೇಶದಲ್ಲಿ ʻಇಎಸ್‌ಡಿಎಂʼ ವಲಯದ ಅಭಿವೃದ್ಧಿಗೆ ಪರಿಸರ ವ್ಯವಸ್ಥೆಯನ್ನು ರಚಿಸಲು ಅನುಕೂಲ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಮೇಲಿನ ಎರಡೂ ಯೋಜನೆಗಳನ್ನು ಏಕಕಾಲದಲ್ಲಿ ನಡೆಸಲಾಗುತ್ತಿದೆ; ಜೊತೆಗೆ, ಪ್ರಮುಖ ಅನುಷ್ಠಾನ ಏಜೆನ್ಸಿಗಳಿಗೆ (ESSCI/NIELIT/TSSC/HSSC) ಸಂಯೋಜಿತವಾಗಿರುವ ತರಬೇತಿ ಪಾಲುದಾರರಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಎರಡೂ ಯೋಜನೆಗಳ ಸಂಚಿತ ಗುರಿ 4,18,000 ಆಗಿದೆ.
ಎರಡೂ ಯೋಜನೆಯಡಿ, ಮಾರ್ಚ್ 01, 2023ರ ಹೊತ್ತಿಗೆ ಒಟ್ಟು 4,35,165 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಮತ್ತು 4,28,540 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಪೈಕಿ 3,11,862 ಅಭ್ಯರ್ಥಿಗಳಿಗೆ ಪ್ರಮಾಣೀಕರಣ ನೀಡಲಾಗಿದೆ. ಇದಲ್ಲದೆ, ʻವಿಎಲ್ಎಸ್ಐʼ ಮತ್ತು ʻಎಂಬೆಡೆಡ್ ಸಿಸ್ಟಮ್ ಡಿಸೈನ್ʼ ಕ್ಷೇತ್ರದಲ್ಲಿ ಪರಿಣತಿ ಪಡೆದ 85,000 ಉದ್ಯಮ-ಸನ್ನದ್ಧ ಮಾನವಶಕ್ತಿಯನ್ನು ಉತ್ಪಾದಿಸುವ ಉದ್ದೇಶದಿಂದ ʻಸಿ2 ಎಸ್ʼ ಕಾರ್ಯಕ್ರಮವನ್ನು ಸಚಿವಾಲಯವು ಪ್ರಾರಂಭಿಸಿದೆ. ಈ ಕಾರ್ಯಕ್ರಮವು ಬಿಟೆಕ್, ಎಂಟೆಕ್ ಮತ್ತು ಪಿಎಚ್‌ಡಿ ಮಟ್ಟದಲ್ಲಿ ಚಿಪ್ / ಸಿಸ್ಟಮ್-ಆನ್-ಚಿಪ್ (ಎಸ್ಒಸಿ) / ಸಿಸ್ಟಮ್ ಲೆವೆಲ್ ಡಿಸೈನ್ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ತಯಾರಿಕೆ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಲು ಸಹಾಯ ಮಾಡುತ್ತದೆ. ಜೊತೆಗೆ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ತೊಡಗಿರುವ ನವೋದ್ಯಮಗಳ ಬೆಳವಣಿಗೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ದೇಶದಲ್ಲಿ ಚಿಪ್ ವಿನ್ಯಾಸ ಪ್ರದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ.
ಎಲೆಕ್ಟ್ರಾನಿಕ್ಸ್ ಉತ್ಪಾದನಾ ಉದ್ದೇಶಗಳಿಗಾಗಿ ಅಗತ್ಯವಿರುವ ಕಚ್ಚಾ ವಸ್ತುಗಳಲ್ಲಿ ಲೋಹಗಳು (ಉದಾಹರಣೆಗೆ, ತಾಮ್ರ, ಅಲ್ಯೂಮಿನಿಯಂ, ಮಾಲಿಬ್ಡಿನಮ್), ಗ್ರ್ಯಾಫೈಟ್, ಪ್ಲಾಸ್ಟಿಕ್, ರಬ್ಬರ್, ತಂತಿಗಳು ಹಾಗೂ ನಿರ್ದಿಷ್ಟ ಮತ್ತು ಸೂಕ್ಷ್ಮ ವಿದ್ಯುತ್, ರಾಸಾಯನಿಕ ಮತ್ತು ಲೋಹಶಾಸ್ತ್ರೀಯ ಗುಣಲಕ್ಷಣಗಳನ್ನು ಹೊಂದಿರುವ ಇನ್ಸುಲೇಷನ್, ವಾಹಕ ಇತ್ಯಾದಿಗಳಿಗೆ ಬಳಸುವ ಇತರ ವಿಶೇಷ ವಸ್ತುಗಳು ಸೇರಿವೆ. ವಿದ್ಯುನ್ಮಾನ ಉತ್ಪಾದನೆಯಲ್ಲಿ ಬಳಸುವ ಪ್ರಮುಖ ಕಚ್ಚಾ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಉದ್ಯಮದ ಅಂದಾಜಿನ ಪ್ರಕಾರ, ಕೆಲವನ್ನು ಹೊರತುಪಡಿಸಿ, ಈ ಎಲ್ಲಾ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.
ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಬಳಸುವ ಪ್ರಮುಖ ಕಚ್ಚಾ ವಸ್ತುಗಳು:
ಕ್ರಮ ಸಂಖ್ಯೆ.
|
ಸಾಧನಗಳು
|
ಕಚ್ಚಾ ಸಾಮಗ್ರಿ
|
1.
|
ಕೆಪಾಸಿಟರ್‌ಗಳು
|
ಬಿಒಪಿಪಿ ಫಿಲ್ಮ್ ಮತ್ತು ಮೆಟಲೈಸ್ಡ್ ಫಿಲ್ಮ್ ಪಿಪಿ ಫಿಲ್ಮ್,
ಎಲೆಕ್ಟ್ರೋಪ್ಲೇಟಿಂಗ್ ಹೊಂದಿರುವ ಲೆಡ್ ವೈರ್,
ರಾಸಾಯನಿಕ ಶೇಖರಣೆ, ಮತ್ತು ಎನಾಮೆಲಿಂಗ್ ಪ್ರಕ್ರಿಯೆ, ಕ್ಯಾನ್ ಗಳು, ಕೆತ್ತಲಾದ ಮತ್ತು ರೂಪುಗೊಂಡ ಫಾಯಿಲ್
|
2.
|
ರೆಸಿಸ್ಟರ್
|
ಎಪಾಕ್ಸಿ, ಕಾಪರ್
|
3.
|
ಸೆಮಿ ಕಂಡಕ್ಟರ್
|
ಲೆಡ್ ಫ್ರೇಮ್‌ಗಳು, ಮೌಲ್ಡಿಂಗ್ ಸಂಯುಕ್ತಗಳು, ಚಿನ್ನದ ತಂತಿ, ವಿಶೇಷ ಅನಿಲಗಳು ಮತ್ತು ರಾಸಾಯನಿಕಗಳು
|
4.
|
ʻಪಿಸಿಬಿʼಗಳು
|
ಸಿಸಿ ಲ್ಯಾಮಿನೇಟ್‌ಗಳು, ಪ್ರಿಪ್ರೆಗ್‌ಗಳು, ರಾಸಾಯನಿಕಗಳು
|
5.
|
ಟ್ರಾನ್ಸ್ ಫಾರ್ಮರ್ ಗಳು ಮತ್ತು ಇಂಡಕ್ಟರ್ ಗಳು
|
ಫೈನ್ ಕಾಪರ್ ವೈಂಡಿಂಗ್ ವೈರ್
|
6.
|
ಎಲ್‌ಸಿಡಿ ಫಲಕಗಳು & ಡಿಸ್‌ಪ್ಲೇ
|
ಸಿಲಿಕಾನ್ ಡೈಆಕ್ಸೈಡ್, ಇಂಡಿಯಂ ಟಿನ್ ಆಕ್ಸೈಡ್ ಮತ್ತು ಗ್ಲಾಸ್
|
7.
|
ಎಲ್‌ಇಡಿ ಲೈಟಿಂಗ್
|
ಇಂಡಿಯಮ್-ಗ್ಯಾಲಿಯಂ-ನೈಟ್ರೇಟ್
|
8.
|
ಇನ್ಸುಲೇಟರ್
|
ಸೆರಾಮಿಕ್, ಸಿಲಿಕಾನ್, ಗ್ಲಾಸ್, ಪಾಲಿಮರ್ಸ್ (ಪಾಲಿವಿನೈಲ್ಕ್ಲೋರೈಡ್, ಪಾಲಿಪ್ರೊಪಿಲೀನ್, ಪಾಲಿಥಿಲೀನ್)
|
9.
|
ಪ್ರತ್ಯಾಮ್ಲ ಲೋಹಗಳು/ನಾನ್-ಫೆರಸ್ ಲೋಹಗಳು
|
ತಾಮ್ರ, ಅಲ್ಯೂಮಿನಿಯಂ, ಚಿನ್ನ, ಬೆಳ್ಳಿ
|
10.
|
ಬಳಕೆಯ ವಸ್ತುಗಳು
|
ಸಾಲ್ಡರ್ ಫ್ಲಕ್ಸ್ / ಪೇಸ್ಟ್, ಅಂಟುಗಳು, ಎಲೆಕ್ಟ್ರೋ ಲ್ಯೂಬ್ಸ್, ಕ್ಲೀನಿಂಗ್ ಏಜೆಂಟ್‌ಗಳು
|
11.
|
ಆಧುನಿಕ ಸಾಮಗ್ರಿಗಳು
|
ನ್ಯಾನೊ ಎಲೆಕ್ಟ್ರಾನಿಕ್ (ನ್ಯಾನೊವೈರ್, ನ್ಯಾನೊಕ್ಯೂಬ್, ಗ್ರ್ಯಾಫೀನ್, ನ್ಯಾನೊರೋಡ್), ಸೂಪರ್ ಕಂಡಕ್ಟರ್‌ಗಳು
ಇಂಡಿಯಮ್ ಮತ್ತು ಗ್ಯಾಲಿಯಂ)
|
ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಕರನ್ನು ಆಕರ್ಷಿಸಲು ʻರೆಡಿ ಬಿಲ್ಟ್ʼ ಫ್ಯಾಕ್ಟರಿ ಶೆಡ್ ಗಳು / ʻಪ್ಲಗ್ & ಪ್ಲೇʼ ಮೂಲಸೌಕರ್ಯ ಸೇರಿದಂತೆ ಸಾಮಾನ್ಯ ಸೌಕರ್ಯಗಳೊಂದಿಗೆ ವಿಶ್ವದರ್ಜೆಯ ಮೂಲಸೌಕರ್ಯಗಳ ಸೃಷ್ಟಿಗೆ ಬೆಂಬಲವನ್ನು ಒದಗಿಸಲು ಸಚಿವಾಲಯವು ಪರಿಷ್ಕೃತ ʻಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ಸ್ʼ(ಇಎಂಸಿ 2.0) ಯೋಜನೆಯನ್ನು ಜಾರಿಗೆ ತರುತ್ತಿದೆ. ಸಚಿವಾಲಯವು ಯಾವುದೇ ಸ್ಥಳವನ್ನು ಗುರುತಿಸದಿದ್ದರೂ, ಉತ್ತರಾಖಂಡ್ ರಾಜ್ಯದ ಕಾಶಿಪುರ ಉಧಮ್ ಸಿಂಗ್ ನಗರ ಜಿಲ್ಲೆಯ ʻಇಂಟಿಗ್ರೇಟೆಡ್ ಇಂಡಸ್ಟ್ರಿಯಲ್ ಎಸ್ಟೇಟ್ʼನಲ್ಲಿ (ಐಐಇ) 133.82 ಎಕರೆ ಪ್ರದೇಶದಲ್ಲಿ ʻಇಎಂಸಿʼ ಯೋಜನೆಯನ್ನು ಜಾರಿಗೊಳಿಸಲು ಮೆಸರ್ಸ್ ʻಸ್ಟೇಟ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ʼ (ಎಸ್ಐಐಡಿಸಿಯುಎಲ್) ಅರ್ಜಿ ಸಲ್ಲಿಸಿದೆ. ಇದರಲ್ಲಿ 57.78 ಕೋಟಿ ರೂ.ಗಳ ಕೇಂದ್ರ ಸರಕಾರದ ಅನುದಾನವೂ ಸೇರಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
*****
(Release ID: 1907578)
Visitor Counter : 220