ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

`ರಾಷ್ಟ್ರೀಯ ಶಿಕ್ಷಣ ನೀತಿ-2020’ ಮಹತ್ವಾಕಾಂಕ್ಷೆಯ ನವೋದ್ಯಮಗಳಿಗೆ ಅವಕಾಶಗಳನ್ನು ಒದಗಿಸುತ್ತದೆ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್


`ರಾಷ್ಟ್ರೀಯ ಶಿಕ್ಷಣ ನೀತಿ-2020’ ಭಾರತವು ಹಲವಾರು ದಶಕಗಳಿಂದ ಕಾಯುತ್ತಿದ್ದ ಮಹತ್ತರ ಬೆಳವಣಿಗೆ: ಡಾ. ಜಿತೇಂದ್ರ ಸಿಂಗ್

ನೀವು ಬೆಳೆಯಬೇಕಾದರೆ, ನೀವು ಸಹಯೋಗದೊಂದಿಗೇ ಬೆಳೆಯಬೇಕು. ಪ್ರತ್ಯೇಕವಾಗಿ ಅಥವಾ ಒಂಟಿಯಾಗಿ ಬೆಳೆಯುವ ಕಾಲ ಮುಗಿದಿದೆ. ಅದೊಂದು ಸಮಗ್ರ ಪ್ರಯತ್ನವಾಗಬೇಕು: ಡಾ. ಜಿತೇಂದ್ರ ಸಿಂಗ್

Posted On: 13 MAR 2023 7:24PM by PIB Bengaluru

ಮಹತ್ವಾಕಾಂಕ್ಷೆಯ ನವೋದ್ಯಮಗಳಿಗೆ ʻರಾಷ್ಟ್ರೀಯ ಶಿಕ್ಷಣ ನೀತಿ-2020ʼ ಅವಕಾಶಗಳನ್ನು ಒದಗಿಸುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ದಿಲ್ಲಿ ವಿಶ್ವವಿದ್ಯಾಲಯದ ʻಕ್ಲಸ್ಟರ್ ಇನ್ನೋವೇಶನ್ ಸೆಂಟರ್ʼನಲ್ಲಿ(ಸಿಐಸಿ) "ಉನ್ನತ ಶಿಕ್ಷಣದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿ ಮೂಲಕ ಶಿಕ್ಷಣದಲ್ಲಿ ನಾವೀನ್ಯತೆ" ಕುರಿತ 5- ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಅಧಿವೇಶನವನ್ನುದ್ದೇಶಿಸಿ ಅವರು ಮಾತನಾಡಿದರು.  ʻಎನ್ಇಪಿ-2020ʼ, ಸಂಭಾವ್ಯ ನವೋದ್ಯಮಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಆಕಾಂಕ್ಷೆಗಳಿಗೆ ಅವಕಾಶ ನೀಡುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು. ಉದ್ಯಮದ ಅಗತ್ಯತೆಗಳು  ಮತ್ತು ಅವುಗಳನ್ನು ಸುಸ್ಥಿರವಾಗಿಸಲು ಮಾರುಕಟ್ಟೆ ಶಕ್ತಿಗಳ ಆಧಾರದ ಮೇಲೆ ನವೋದ್ಯಮಗಳ ಉಪಕ್ರಮಗಳ ಹೊಸ ಮಾರ್ಗಗಳನ್ನು ನಿರ್ಧರಿಸಬೇಕು ಎಂದು ಅವರು ಹೇಳಿದರು.

ʻನೂತನ ರಾಷ್ಟ್ರೀಯ ಶಿಕ್ಷಣ ನೀತಿʼಯು ಭಾರತವು ಹಲವಾರು ದಶಕಗಳಿಂದ ಕಾಯುತ್ತಿರುವ ವಿಷಯವಾಗಿದೆ ಎಂದು ಸಚಿವರು ಹೇಳಿದರು. ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡುವುದು ದೊಡ್ಡ ಬದಲಾವಣೆಯಾಗಿದೆ. ಎರಡನೆಯದಾಗಿ, ʻಎನ್ಇಪಿ 2020ʼ ಬರುವ ಮೊದಲು, ಮೆಕಾಲೆ ರೂಪಿಸಿದ ಶಿಕ್ಷಣ ನೀತಿಯನ್ನು ನಾವು ಹೆಚ್ಚಾಗಿ ಅನುಸರಿಸುತ್ತಿದ್ದೆವು. "ನಾವು 65 ವರ್ಷಗಳಿಂದ ಅನುಸರಿಸಿದ ಶಿಕ್ಷಣ ನೀತಿಯಿಂದ ದೇಶಕ್ಕೆ ಆಗಿರುವ ಅತಿದೊಡ್ಡ ಹಾನಿಯೆಂದರೆ ನಾವು ವಿದ್ಯಾವಂತ ನಿರುದ್ಯೋಗಿ ಎಂದು ಕರೆಯಲ್ಪಡುವ ಹೊಸ ಪ್ರಕಾರದ ಜನಸಂಖ್ಯೆಯನ್ನು ಸೃಷ್ಟಿಸಿದ್ದೇವೆ," ಎಂದು ಅವರು ಹೇಳಿದರು.

ನಾವು ಕೆಲವು ತಳಮಟ್ಟದ ತಪ್ಪು ಕಲ್ಪನೆಗಳನ್ನು ಸರಿಪಡಿಸದ ಹೊರತು, ನಾವು ಮುಂದೆ ಸಾಗಲು ಸಾಧ್ಯವಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು. ಈ ʻರಾಷ್ಟ್ರೀಯ ಶಿಕ್ಷಣ ನೀತಿ-2020ʼ ನಾವು ಎಲ್ಲಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಕೆಲಸ ಮಾಡಲು ನಮಗೆ ಸುಳಿವು ನೀಡಿದೆ. ಈ ಮೊದಲು ನಮಗೆ ಯಾವುದೇ ಸುಳಿವು ಇರಲಿಲ್ಲ ಎಂದು ಅವರು ಹೇಳಿದರು. ಜೀವನೋಪಾಯದೊಂದಿಗೆ ಶಿಕ್ಷಣದ ಅಸಮಂಜಸತೆಯನ್ನು ಈ ಮೂಲಕ ಸರಿಪಡಿಸಲು ಪ್ರಯತ್ನಿಸಲಾಗುವುದು. "ಇಲ್ಲಿ ʻಪಿಪಿಪಿʼ ಮಾದರಿಯ ವಿಷಯವೂ ಬರುತ್ತದೆ. ಶಿಕ್ಷಣವನ್ನು ಪದವಿಯೊಂದಿಗೆ ಬೇರ್ಪಡಿಸಿ, ಜೀವನೋಪಾಯದ ಮೂಲಗಳೊಂದಿಗೆ ಸಂಪರ್ಕಿಸಬೇಕಿದೆ" ಎಂದು ಅವರು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ʻನಿರ್ಗಮನ ಮತ್ತು ಪ್ರವೇಶʼ ಅವಕಾಶವು ಅದರ ಸುಂದರವಾದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ನೀವು ವಿಷಯಗಳ ಸಂಯೋಜನೆಯನ್ನು ಹೊಂದಬಹುದು ಮತ್ತು ಅವುಗಳನ್ನು ಬದಲಾಯಿಸಬಹುದು ಎಂದು ಅವರು ತಿಳಿಸಿದರು. "ನಿಮ್ಮ ಯೋಗ್ಯತೆ, ಸಾಮರ್ಥ್ಯ ಮತ್ತು ಅವಕಾಶಗಳಿಗೆ ತಕ್ಕಂತೆ ನಿಮ್ಮಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಬೆಳೆಸಲಾಗುತ್ತದೆ. ಹಿಂದಿನ ನೀತಿಯು ಪ್ರತಿ ವರ್ಷ ವಿದ್ಯಾರ್ಥಿಗಳು ಉತ್ತೀರ್ಣರಾದಾಗಲೂ ಅವರನ್ನು ಹೆಚ್ಚು ಬಂಧಿತರನ್ನಾಗಿಸುತ್ತಿತ್ತು," ಎಂದು ಅವರು ಹೇಳಿದರು.

ಹಿಂದಿನ ಶಿಕ್ಷಣ ವ್ಯವಸ್ಥೆಯು ನಮಗೆ ಒಂದು ರೀತಿಯ ವಿಕೃತ ಅರ್ಹತೆಯನ್ನು ನೀಡುತ್ತಿತ್ತು ಎಂದು ಸಚಿವರು ಅಭಿಪ್ರಾಯಪಟ್ಟರು. ಹೊಸ ಶಿಕ್ಷಣ ನೀತಿಯು ಶಾಲೆಯಿಂದ ಹೊರಗುಳಿಯುವಿಕೆಯನ್ನು (ಡ್ರಾಪ್‌ಔಟ್‌) ತೊಡೆದುಹಾಕುತ್ತದೆ. ಇದು ವಿದ್ಯಾರ್ಥಿಗಳಿಗೆ ಅವರು ಈಗ ಪ್ರಯತ್ನಿಸಲು ಬಯಸುವ ಕೌಶಲ್ಯ, ನಾವೀನ್ಯತೆ ಅಥವಾ ಕಲ್ಪನೆಯನ್ನು ಕಲಿಯಲು ಅವಕಾಶ ನೀಡುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ರಂಗದಲ್ಲಿ  ನೀವು ಬೆಳೆಯಬೇಕಾದರೆ, ನೀವು ಸಂಯೋಜನೆ ಅಥವಾ ಸಹಯೋಗದೊಂದಿಗೆ ಬೆಳೆಯಬೇಕು ಎಂದು ಡಾ. ಜಿತೇಂದ್ರ ಸಿಂಗ್ ಅವರು ಒತ್ತಿ ಹೇಳಿದರು. ಒಂಟಿಯಾಗಿ ಬೆಳೆಯುವ ಕಾಲ ಮುಗಿದಿದೆ. ಇದು ಸಮಗ್ರ ಪ್ರಯತ್ನವಾಗಿರಬೇಕು. 20 ವರ್ಷಗಳ ನಂತರ, ಎಲ್ಲವೂ ʻಖಾಸಗಿ-ಸಾರ್ವಜನಿಕʼವಾಗಿರುತ್ತದೆ ಮತ್ತು ಎಲ್ಲವೂ ಜಾಗತಿಕವಾಗಿರುತ್ತದೆ. ಈಗ ಭಾರತದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಇತರ ದೇಶದಲ್ಲಿ ಸಾರ್ವಜನಿಕ ಮತ್ತು ಖಾಸಗಿಯೊಂದಿಗೆ ಸಹಕರಿಸುವ ಸಮಯ ಬಂದಿದೆ. "ನಾವು ಈಗ ಜಾಗತಿಕ ಪ್ರಪಂಚದ ಭಾಗವಾಗಿದ್ದೇವೆ. ಆದ್ದರಿಂದ ಈ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಅನಿವಾರ್ಯವಾಗಿದೆ," ಎಂದು ಅವರು ಹೇಳಿದರು.

ಸರಕಾರವು ಅನೇಕ ಕಾರ್ಯಕ್ರಮಗಳನ್ನು ಹೊಂದಿದ್ದು, ಅವುಗಳು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಸಚಿವರು ಹೇಳಿದರು. "ನಮ್ಮ ಬಳಿಗೆ ಬಂದವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ಆದರೆ, ಉತ್ತಮವಾದದ್ದನ್ನು ಮಾಡಬಲ್ಲವರನ್ನು ನಾವು ತಲುಪುವುದು ಹೇಗೆ?  ಈ ಹಂತದಲ್ಲಿಯೇ ಅಲ್ಲಿಯೇ ವಿಶ್ವವಿದ್ಯಾಲಯಗಳು ಮಹತ್ವ ಪಡೆಯುತ್ತವೆ,ʼʼ ಎಂದು ಅವರು ಹೇಳಿದರು.

ಸರ್ಕಾರಿ ಉದ್ಯೋಗಗಳ ಗೀಳಿನ ಮನಸ್ಥಿತಿಯನ್ನು ಬದಲಾಯಿಸುವುದು ಸಹ ಸದ್ಯದ ಮತ್ತೊಂದು ಅಗತ್ಯವಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಸರಕಾರಿ ಉದ್ಯೋಗಕ್ಕಿಂತ ಹೆಚ್ಚು ಲಾಭದಾಯಕ ಮಾರ್ಗಗಳಿವೆ. ಅದರ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಮನಸ್ಥಿತಿಯನ್ನು ಬದಲಾಯಿಸಲು ವಿಶ್ವವಿದ್ಯಾಲಯಗಳು ಪ್ರಯತ್ನಿಸುವುದು ಇಲ್ಲಿ ಮುಖ್ಯ ಎಂದು ಸಚಿವರು ಹೇಳಿದರು. 

ವಿದ್ಯಾವಂತರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಬೇಕು ಎಂಬ ಮನಸ್ಥಿತಿಯಿಂದ ಹೊರಬರುವುದು ಮತ್ತೊಂದು ಅಗತ್ಯವಾಗಿದೆ ಎಂದು ಸಚಿವರು ಹೇಳಿದರು. ʻಕೃಷಿ ತಾಂತ್ರಿಕ (ಅಗ್ರಿ-ಟೆಕ್‌) ನವೋದ್ಯಮಗಳ ಈ ದೇಶದಲ್ಲಿ ನಮಗೆ ಅಪಾರ ಸಾಮರ್ಥ್ಯವಿದೆ. ಅವುಗಳ ಸ್ಥಾಪಕರಲ್ಲಿ ಹೆಚ್ಚಿನವರು ಪದವೀಧರರೂ ಅಲ್ಲ. ಆವಿಷ್ಕಾರವು ವಿಜ್ಞಾನ, ಶಿಕ್ಷಣ ಮತ್ತು ಪದವಿಯಿಂದ ಮುಕ್ತವಾಗಿದೆ. "ನೇರಳೆ ಕ್ರಾಂತಿ ಎಂದೂ ಜನಪ್ರಿಯವಾಗಿ ಕರೆಯಲ್ಪಡುವ ದೇಶದಲ್ಲಿ ಈಗ ʻಸುವಾಸನೆ ಯೋಜನೆʼ (ಅರೋಮಾ ಮಿಷನ್) ಜಾರಿಗೊಳಿಸಲಾಗುತ್ತಿದೆ. ನಾವು ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತಿದ್ದೇವೆ ಮತ್ತು ಅವರು ಭಾರಿ ಲಾಭವನ್ನು ಗಳಿಸುತ್ತಿದ್ದಾರೆ. ವಿಶೇಷವೆಂದರೆ, ಇವರಲ್ಲಿ ಹೆಚ್ಚಿನವರು ಪದವೀಧರರೂ ಅಲ್ಲ," ಎಂದು ಅವರು ಹೇಳಿದರು.

ಶಿಕ್ಷಣವೆಂದರೆ ಸಾಕ್ಷರತೆ ಎಂದರ್ಥವಲ್ಲ. ಪದವೀಧರರಾಗದೆ ನೀವು ಶಿಕ್ಷಣ ಪಡೆಯಬಹುದು. ಕಾಲೇಜಿಗೆ ಹೋಗದೆ ನೀವು ನವೀನವಾಗಿರಬಹುದು. ಆ ಪ್ರಕಾರವು ಈಗ ಕ್ರಮೇಣ ಹೊರಹೊಮ್ಮುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮನ್ನು ಎಲ್ಲಾ ಅನಗತ್ಯ ಅರ್ಹತೆಗಳಿಂದ ಮುಕ್ತಗೊಳಿಸಿದೆ. ಜೊತೆಗೆ ಶಿಕ್ಷಣವನ್ನು ಜೀವನೋಪಾಯವಷ್ಟೇ ಅಲ್ಲದೆ, ಸುಗಮ ಜೀವನದ ಸಾಧನವನ್ನಾಗಿ ಮಾಡಿದೆ ಎಂದು ಡಾ. ಜಿತೇಂದ್ರ ಸಿಂಗ್ ಅವರು ಹೇಳಿದರು. "ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ʻಸ್ಟಾರ್ಟಪ್‌ ಇಂಡಿಯಾʼ ಮತ್ತು ʻಸ್ಟ್ಯಾಂಡ್ ಅಪ್ ಇಂಡಿಯಾʼ ಬಗ್ಗೆ ಈ ದೇಶದಲ್ಲಿ ಹೊಸ ಜಾಗೃತಿ ಮೂಡಿದೆ. ಇದರ ಪರಿಣಾಮವಾಗಿ ಕೇವಲ 350 ನವೋದ್ಯಮಗಳಿಂದ ನಾವು 90,000ಕ್ಕೂ ಹೆಚ್ಚು ನವೋದ್ಯಮಗಳು ಮತ್ತು 100ಕ್ಕೂ ಹೆಚ್ಚು ಯುನಿಕಾರ್ನ್‌ಗಳ ಹಂತಕ್ಕೆ ಬೆಳೆದಿದ್ದೇವೆ. ನಮ್ಮ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಮತ್ತು ಭಾರತವನ್ನು ವಿಶ್ವದ 3ನೇ ಅತ್ಯುತ್ತಮ ನವೋದ್ಯಮ ಪರಿಸರ ವ್ಯವಸ್ಥೆ ಎಂದು ಗುರುತಿಸಲಾಗಿದೆ. ದೊಡ್ಡ ಬದಲಾವಣೆ ಸಂಭವಿಸಲು ಸಾಕಷ್ಟು ಸಾಧ್ಯತೆಗಳಿದ್ದವು, ಪ್ರಧಾನ ಮಂತ್ರಿಗಳು ಅದಕ್ಕೆ ಅವಕಾಶವನ್ನು ನೀಡಿದ್ದಾರೆ, "ಎಂದು ಹೇಳುವ ಮೂಲಕ ಸಚಿವರು ಮಾತು ಮುಗಿಸಿದರು. 


**



(Release ID: 1906731) Visitor Counter : 103


Read this release in: English