ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತೀಯ ಅರಣ್ಯ ಸೇವೆಯ ಪ್ರೊಬೇಷನರ್ಸ್ ಗಳಿಗೆ ರಾಷ್ಟ್ರಪತಿ ಅವರ ಕರೆ


ನಿಸರ್ಗ ನಮಗೆ ಬಹಳ ಉದಾತ್ತ ಕೊಡುಗೆಗಳನ್ನು ನೀಡಿದೆ ಮತ್ತು ಪರಿಸರದ ಬಗ್ಗೆ ಸೂಕ್ಷ್ಮ ಮತ್ತು ಜವಾಬ್ದಾರಿಯುತವಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ: ರಾಷ್ಟ್ರಪತಿ ಮುರ್ಮು

Posted On: 21 DEC 2022 1:59PM by PIB Bengaluru

ಭಾರತೀಯ ಅರಣ್ಯ ಸೇವೆಯ ತರಬೇತಿ ನಿರತ ಅಧಿಕಾರಿಗಳನ್ನು ರಾಷ್ಟ್ರಪತಿ ಭವನದಲ್ಲಿ ಇಂದು (ಡಿಸೆಂಬರ್ 21, 2022) ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಭೇಟಿ ಮಾಡಿದರು.

ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ಅರಣ್ಯಗಳು ಆಧಾರವಾಗಿದೆ. ವನ್ಯಜೀವಿಗಳಿಗೆ ಆವಾಸಸ್ಥಾನಗಳನ್ನು ಒದಗಿಸುವುದರಿಂದ ಜೀವನೋಪಾಯದ ಮೂಲವಾಗಿರುವವರೆಗೆ, ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವುದರಿಂದ ದೊಡ್ಡ ಕಾರ್ಬನ್ ಹೀರುವಿಕೆಯ ಮೂಲವಾಗಿ ಕಾರ್ಯನಿರ್ವಹಿಸುವ ಅರಣ್ಯಗಳ  ಪಾತ್ರವು ವಿಭಿನ್ನವಾಗಿರುತ್ತದೆ. ಅವು ಪ್ರಪಂಚದ ಅನೇಕ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿವೆ. ಸಣ್ಣ ಅರಣ್ಯ ಉತ್ಪನ್ನವು ನಮ್ಮ ದೇಶದ 27 ಕೋಟಿಗೂ ಹೆಚ್ಚು ಜನರ ಜೀವನೋಪಾಯಕ್ಕೆ ಬೆನ್ನೆಲುಬಾಗಿದೆ. ಅರಣ್ಯಗಳು ಹೆಚ್ಚಿನ ಮೌಲ್ಯಯುತ ಔಷಧೀಯ ಸಂಪತ್ತನ್ನೂ ಹೊಂದಿವೆ.

ಅರಣ್ಯವಾಸಿ ಸಮುದಾಯಗಳ ಹಕ್ಕುಗಳಿಗೆ ಭಾರತ ವಿಶೇಷ ಗಮನ ಹರಿಸುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಬುಡಕಟ್ಟು ಸಮುದಾಯಗಳು ಸೇರಿದಂತೆ ಅರಣ್ಯವಾಸಿಗಳ ಸಹಜೀವನದ ಸಂಬಂಧವು ಈಗ ವ್ಯಾಪಕವಾಗಿ ಗುರುತಿಸಲ್ಪಟ್ಟಿದೆ ಮತ್ತು ನಮ್ಮ ಅಭಿವೃದ್ಧಿಯ ಆಯ್ಕೆಗಳಲ್ಲಿ ಸೇರಿಸಲಾಗಿದೆ. ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ರಕ್ಷಣೆಗಾಗಿ ಈ ಸಮುದಾಯಗಳಿಗೆ ಅವರ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವುದು ಭಾರತೀಯ ಅರಣ್ಯ ಸೇವಾ ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ನಾವು ಭಾರತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಅನೇಕ ದೊಡ್ಡ ಕಾಡ್ಗಿಚ್ಚುಗಳ ಬಗ್ಗೆ ಕೇಳುತ್ತಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು. ಅರಣ್ಯಗಳನ್ನು ಸಂರಕ್ಷಿಸುವುದು ಮಾತ್ರವಲ್ಲದೆ ಹವಾಮಾನ ಬದಲಾವಣೆಯೊಂದಿಗೆ ಹೊಂದಿಕೊಳ್ಳುವ ದೊಡ್ಡ ಸವಾಲು ನಮ್ಮ ಮುಂದಿದೆ. ಇಂದು ನಾವು ನಗರ ಅರಣ್ಯ, ಅರಣ್ಯೀಕರಣ, ಅರಣ್ಯದ ಅಪಾಯ ತಗ್ಗಿಸುವಿಕೆ, ದತ್ತಾಂಶ ಆಧಾರಿತ ಅರಣ್ಯ ನಿರ್ವಹಣೆ ಮತ್ತು ಕ್ಲೈಮೇಟ್-ಸ್ಮಾರ್ಟ್ ಅರಣ್ಯ ಆರ್ಥಿಕತೆಯ ಹೊಸ ತಂತ್ರಜ್ಞಾನಗಳು ಮತ್ತು ಪರಿಕಲ್ಪನೆಗಳನ್ನು ಹೊಂದಿದ್ದೇವೆ.  ಭಾರತದ ಅರಣ್ಯ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಹೊಸ ವಿಧಾನಗಳನ್ನು ಆವಿಷ್ಕರಿಸುವಂತೆ ಅವರು ಭಾರತೀಯ ಅರಣ್ಯ ಸೇವಾ ಅಧಿಕಾರಿಗಳನ್ನು ಆಗ್ರಹಿಸಿದರು. ಆರ್ಥಿಕ ಮತ್ತು ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಅಕ್ರಮ ಚಟುವಟಿಕೆಗಳಿಂದ ನಮ್ಮ ಕಾಡುಗಳನ್ನು ರಕ್ಷಿಸುವಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಬೇಕು ಎಂದು ಅವರು ಹೇಳಿದರು. 

ರಾಷ್ಟ್ರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅರಣ್ಯ ಅತ್ಯಗತ್ಯ ಎಂದು ರಾಷ್ಟ್ರಪತಿ ಹೇಳಿದರು. ನಾವು ನಮ್ಮ ಕಾಡುಗಳನ್ನು ಜೀವಂತವಾಗಿ ಮತ್ತು ಆರೋಗ್ಯಕರವಾಗಿ ಇಡಬೇಕು. ಅಭಿವೃದ್ಧಿ ಅತ್ಯಗತ್ಯ ಅದೇ ರೀತಿ ಸುಸ್ಥಿರತೆಯೂ ಅಗತ್ಯ. ಪ್ರಕೃತಿಯು ನಮಗೆ ಉದಾರವಾದ ಕೊಡುಗೆಗಳನ್ನು ನೀಡಿದೆ ಮತ್ತು ಪರಿಸರದ ಬಗ್ಗೆ ಸಂವೇದನಾಶೀಲರಾಗಿರುವುದು ಮತ್ತು ಜವಾಬ್ದಾರಿಯುತವಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ನಮ್ಮ ಮುಂದಿನ ಪೀಳಿಗೆಗೆ, ಪುನರುತ್ಪಾದಿತ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಸುಸ್ಥಿರ ಪರಿಸರ ವ್ಯವಸ್ಥೆಗಳುಳ್ಳ ಸುಂದರ ದೇಶವನ್ನು ಉಡುಗೊರೆಯಾಗಿ ನೀಡಬೇಕು.

ರಾಷ್ಟ್ರಪತಿಗಳ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ –

*****


(Release ID: 1885561) Visitor Counter : 149