ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಮತ್ತು ಗಣಿ ವಲಯಗಳಲ್ಲಿನ ಸರ್ಕಾರದ ಸುಧಾರಣೆಗಳು ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಿವೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ


 
ಭಾರತವು ಕಲ್ಲಿದ್ದಲಿನ ಅತಿದೊಡ್ಡ ಉತ್ಪಾದಕ ಮತ್ತು ಆಮದುದಾರ ರಾಷ್ಟ್ರವಾಗಿದೆ; ಹೆಚ್ಚುತ್ತಿರುವ ಇಂಧನ ಭದ್ರತೆಯ ಅಗತ್ಯಗಳನ್ನು ಪೂರೈಸಲು ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ
 
ಬೆಂಗಳೂರಿನಲ್ಲಿ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಕುರಿತ ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆಯನ್ನು ಶ್ರೀ ಪ್ರಲ್ಹಾದ್ ಜೋಶಿ ವಹಿಸಿದ್ದರು.

ಪ್ರಕಟಣಾ ದಿನಾಂಕ: 03 DEC 2022 4:41PM by PIB Bengaluru

ಕಲ್ಲಿದ್ದಲು ಮತ್ತು ಗಣಿ ವಲಯಗಳಲ್ಲಿನ ಸರ್ಕಾರದ ಸುಧಾರಣೆಗಳು ವ್ಯವಹಾರ ಮಾಡುವುದನ್ನು ಸುಲಭಗೊಳಿಸಿರುವುದರಿಂದ ಸಂಭಾವ್ಯ ಹೂಡಿಕೆದಾರರನ್ನು ಆಕರ್ಷಿಸಿವೆ ಮತ್ತು  ತಮ್ಮ ಸಚಿವಾಲಯವು  500 ಗಣಿಗಳನ್ನು ಹರಾಜು ಹಾಕುವ ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ಸಾಧಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು  ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.  ಭಾರತವು ಕಲ್ಲಿದ್ದಲಿನ ಅತಿದೊಡ್ಡ ಸಂಗ್ರಹವನ್ನು ಹೊಂದಿದೆ ಮತ್ತು ಅತಿದೊಡ್ಡ ಉತ್ಪಾದಕ ಮತ್ತು ಆಮದುದಾರನಾಗಿದ್ದರೂ, ನಮ್ಮ ಹೆಚ್ಚುತ್ತಿರುವ ಇಂಧನ ಭದ್ರತೆ ಅಗತ್ಯಗಳನ್ನು ಪೂರೈಸಲು ದೇಶವು ಕಲ್ಲಿದ್ದಲು ಉತ್ಪಾದನೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಇಂದು ಬೆಂಗಳೂರಿನಲ್ಲಿ ನಡೆದ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜು ಕುರಿತ ಹೂಡಿಕೆದಾರರ ಸಮಾವೇಶದ ಅಧ್ಯಕ್ಷತೆಯನ್ನು ಶ್ರೀ ಜೋಶಿ ವಹಿಸಿದ್ದರು.

ದೇಶೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ಏರಿಕೆಯನ್ನು ವಿವರಿಸಿದ ಶ್ರೀ ಪ್ರಲ್ಹಾದ್ ಜೋಶಿ, ಈ ವರ್ಷ ದೇಶವು 900 ಮಿಲಿಯನ್ ಟನ್ (ಎಂಟಿ) ಕಲ್ಲಿದ್ದಲು ಉತ್ಪಾದಿಸಲು ಸಜ್ಜಾಗಿದೆ. ಮುಂದಿನ ವರ್ಷ ಉತ್ಪಾದನೆಯು 1000 ದಶಲಕ್ಷ ಟನ್‌ಗಳನ್ನು ಮುಟ್ಟುವ ಅಂದಾಜಿದೆ ಎಂದು ಹೇಳಿದರು. ಪ್ರಸ್ತುತ ಕಲ್ಲಿದ್ದಲು ಮತ್ತು ಗಣಿ ವಲಯವು ಒಟ್ಟು ದೇಶೀಯ ಉತ್ಪನ್ನಕ್ಕೆ ಶೇಕಡಾ 0.9 ರಷ್ಟು ಕೊಡುಗೆ ನೀಡುತ್ತಿದೆ ಎಂದು ಸಚಿವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಇದನ್ನು ಶೇ 2.5ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಹಲವಾರು ಗಣಿಗಳ ಸಮೃದ್ಧ ಭಂಡಾರವನ್ನು ಹೊಂದಿರುವ ಕರ್ನಾಟಕವು ಕಲ್ಲಿದ್ದಲು ಮತ್ತು ಗಣಿ ವಲಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಚಿವರು ಹೇಳಿದರು. ಹೂಡಿಕೆದಾರರ ಸಮಾವೇಶವು ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು.

 ಸಮಾರಂಭದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಸಚಿವ ಶ್ರೀ ಹಾಲಪ್ಪ  ಆಚಾರ್ ಅವರು ಉಪಸ್ಥಿತರಿದ್ದರು.

ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ, ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ನಾಮನಿರ್ದೇಶಿತ ಪ್ರಾಧಿಕಾರಿ ಶ್ರೀ ಎಂ. ನಾಗರಾಜು,  ಗಣಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಂಜಯ್ ಲೋಹಿಯಾ ಅವರು ಸಮಾವೇಶದಲ್ಲಿ ಭಾಗವಹಿಸಿದ್ದರು. ಕಲ್ಲಿದ್ದಲು ಮತ್ತು ಗಣಿ ವಲಯದ ಚಟುವಟಿಕೆಗಳನ್ನು ಕುರಿತ ಪರಿಶೀಲನೆಯ ವಿಶೇಷ ಅಧಿವೇಶನ ಮಧ್ಯಾಹ್ನ ನಡೆಯಿತು.

ಕಲ್ಲಿದ್ದಲು ಸಚಿವಾಲಯವು ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಹೂಡಿಕೆದಾರರ ಸಮಾವೇಶ ಸರಣಿಯನ್ನು ನಡೆಸಲು ಯೋಜಿಸಿದೆ. ಈಗಾಗಲೇ ಇಂದೋರ್ ಮತ್ತು ಮುಂಬೈನಲ್ಲಿ ಇಂತಹ ಸಮಾವೇಶಗಳನ್ನು ಆಯೋಜಿಸಿದೆ, ಈಗ ಚಾಲ್ತಿಯಲ್ಲಿರುವ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಸಂಭಾವ್ಯ ಬಿಡ್ಡುದಾರರ ಉತ್ಸಾಹದ ಉತ್ತಮ ಭಾಗವಹಿಸುವಿಕೆಯು ಈ ಸಮಾವೇಶಗಳಲ್ಲಿ ಕಂಡುಬಂದಿದೆ. 

 ಕಲ್ಲಿದ್ದಲು ಸಚಿವಾಲಯವು 6 ನೇ ಸುತ್ತಿನ ವಾಣಿಜ್ಯ ಹರಾಜಿನ ಅಡಿಯಲ್ಲಿ 133 ಕಲ್ಲಿದ್ದಲು ಗಣಿಗಳ ಹರಾಜು ಮತ್ತು 5 ನೇ ಹಂತದ ವಾಣಿಜ್ಯ ಹರಾಜಿನ 2 ನೇ ಪ್ರಯತ್ನದ ಅಡಿಯಲ್ಲಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 141 ಕಲ್ಲಿದ್ದಲು ಗಣಿಗಳು ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಇವೆ ಮತ್ತು 305 MTPA ಯ ಒಟ್ಟು PRC ಯನ್ನು ಹೊಂದಿವೆ. ವಿವರವಾದ ಚರ್ಚೆಯ ನಂತರ ಗಣಿಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ನಿರ್ಣಾಯಕ ಆವಾಸಸ್ಥಾನಗಳು, ಶೇ.40 ಕ್ಕಿಂತ ಹೆಚ್ಚಿನ ಅರಣ್ಯವನ್ನು ಹೊಂದಿರುವ ಗಣಿಗಳು, ಹೆಚ್ಚು ನಿರ್ಮಾಣದ ಪ್ರದೇಶ ಇತ್ಯಾದಿಗಳನ್ನು ಹೊರಗಿಡಲಾಗಿದೆ. ಜನನಿಬಿಡ ವಾಸಸ್ಥಾನ, ಹೆಚ್ಚಿನ ಹಸಿರು ಹೊದಿಕೆ ಅಥವಾ ನಿರ್ಣಾಯಕ ಮೂಲಸೌಕರ್ಯ ಇತ್ಯಾದಿಗಳಿರುವ ಕೆಲವು ಕಲ್ಲಿದ್ದಲು ಗಣಿಗಳ ಗಡಿಗಳನ್ನು, ಈ ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಬಿಡ್‌ದಾರರ ಆಸಕ್ತಿ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಧ್ಯಸ್ಥಗಾರರ ಸಮಾಲೋಚನೆಯ ಸಮಯದಲ್ಲಿ ಸ್ವೀಕರಿಸಿದ ಅಭಿಪ್ರಾಯಗಳ  ಆಧಾರದ ಮೇಲೆ ಮಾರ್ಪಾಡು ಮಾಡಲಾಗಿದೆ. 

ಮುಂಗಡ ಮೊತ್ತ ಮತ್ತು ಬಿಡ್ ಭದ್ರತಾ ಮೊತ್ತದಲ್ಲಿ ಕಡಿತ, ಕಲ್ಲಿದ್ದಲು ಗಣಿಗಳನ್ನು ಭಾಗಶಃ ಪರಿಶೋಧಿಸಿದ ಸಂದರ್ಭದಲ್ಲಿಯೂ ಕಲ್ಲಿದ್ದಲು ಗಣಿಯ ಕೆಲವು ಭಾಗವನ್ನು ಬಿಟ್ಟುಕೊಡಲು ಅನುಮತಿ, ಯಾವುದೇ ಪ್ರವೇಶದ ಅಡೆತಡೆಗಳಿಲ್ಲದೆ ಸುಲಭವಾಗಿ ಭಾಗವಹಿಸುವಿಕೆ, ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಅತ್ಯುತ್ತಮ ಪಾವತಿ ವ್ಯವಸ್ಥೆಗಳು, ತ್ವರಿತ ಉತ್ಪಾದನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ ಮುಂತಾದುವು ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳಾಗಿವೆ.

ಟೆಂಡರ್ ದಾಖಲೆಯ ಮಾರಾಟವು ನವೆಂಬರ್ 03, 2022 ರಂದು ಪ್ರಾರಂಭವಾಯಿತು. ಗಣಿಗಳ ವಿವರಗಳು, ಹರಾಜು ನಿಯಮಗಳು, ಟೈಮ್‌ಲೈನ್‌ಗಳು ಇತ್ಯಾದಿಗಳನ್ನು ಎಂ ಎಸ್‌ ಟಿ ಸಿ  ಹರಾಜು ವೇದಿಕೆಯಲ್ಲಿ ನೋಡಬಹುದು. ಶೇಕಡಾವಾರು ಆದಾಯದ ಹಂಚಿಕೆಯ ಆಧಾರದ ಮೇಲೆ ಪಾರದರ್ಶಕವಾದ ಎರಡು ಹಂತದ ಪ್ರಕ್ರಿಯೆಯ ಮೂಲಕ ಆನ್‌ಲೈನ್‌ನಲ್ಲಿ ಹರಾಜು ನಡೆಸಲಾಗುವುದು.

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜಿಗಾಗಿ ಕಲ್ಲಿದ್ದಲು ಸಚಿವಾಲಯದ ಏಕೈಕ ವಹಿವಾಟು ಸಲಹೆಗಾರರಾದ ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್, ಕಲ್ಲಿದ್ದಲು ಸಚಿವಾಲಯವು  ಹರಾಜುಗಳನ್ನು ನಡೆಸಲು ನೆರವು ಮಾಡುತ್ತಿದೆ.

ಎಸ್. ಪ್ರಕಾಶ್ 
ಡೆಪ್ಯೂಟಿ ಡೈರೆಕ್ಟರ್ (ಎಂ&ಸಿ)

******


(ಪ್ರಕಟಣೆ ಐ.ಡಿ.: 1880673) ವಿಸಿಟರ್ ಕೌಂಟರ್ : 85