ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಒಸಿಡಿ ಕ್ಲಿನಿಕ್, (ನಿಮ್ಹಾನ್ಸ್) ರಜತ ಮಹೋತ್ಸವದ ಸ್ಮರಣೆ
Posted On:
10 NOV 2022 4:24PM by PIB Bengaluru
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)ನ “ಒಸಿಡಿ ಕ್ಲಿನಿಕ್”ನ 25ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗೀಳುರೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳ ಕುರಿತು ನವೆಂಬರ್ 11 ರಿಂದ 13 ರವರೆಗೆ ನಿಮ್ಹಾನ್ಸ್ನ ಕನ್ವೆನಷನ್ ಸೆಂಟರ್ನಲ್ಲಿ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ .
“ಒಸಿಡಿ ಕ್ಲಿನಿಕ್”, ಗೀಳುರೋಗ ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆ ಇರುವವರಿಗೆ ಚಿಕಿತ್ಸೆ ನೀಡುವಲ್ಲಿ ವಿಶೇಷ ನೈಪುಣ್ಯತೆ ಹೊಂದಿದೆ. ಇದು ಭಾರತದಲ್ಲಿಯೇ ಗೀಳು ರೋಗವನ್ನು ಪರೀಕ್ಷಿಸುವ ಮತ್ತು ಉಪಚರಿಸುವ ಅತೀ ದೊಡ್ಡ ಚಿಕಿತ್ಸಾ ಸೌಲಭ್ಯವಾಗಿದೆ. ಗೀಳು ರೋಗವು ತೀವ್ರ ಮಾನಸಿಕ ರೋಗವಾಗಿದ್ದು, ಇದರಲ್ಲಿ ಗೀಳು (obsessions) ಮತ್ತು ಒತ್ತಡಪೂರಿತ ನಡುವಳಿಕೆಗಳೆಂಬ (compulsions) ಗುಣಲಕ್ಷಣಗಳು ಇರುತ್ತವೆ. ಅನವಶ್ಯಕ, ಅರ್ಥಹೀನ ಹಾಗು ಅತೀರೇಕದ ಎಂದು ತಿಳಿದರೂ ತಡೆಯಲಾಗದೆ ಪದೇ ಪದೇ ಮನದಲ್ಲಿ ಪುನರಾವರ್ತಿಸುವ ಯೋಚನೆಗಳು ಅಥವಾ ಚಿತ್ರಗಳನ್ನು ಗೀಳು (obsessions) ಎಂದು ಹೇಳಲಾಗುತ್ತದೆ. ಈ ಆಲೋಚನೆಗಳಿಂದ ಆಗುವ ಆತಂಕ ಎಷ್ಟು ತೀವ್ರವಾಗಿರುತ್ತದೆಂದರೆ, ಇದನ್ನು ಕಡಿಮೆ ಮಾಡಿಕೊಳ್ಳಲು ಒಬ್ಬ ವ್ಯಕ್ತಿ ಒತ್ತಡಪೂರಿತ ನಡುವಳಿಕೆಗಳನ್ನು ತೋರುತ್ತಾನೆ. ಗೀಳಿನ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಅವುಗಳನ್ನು ನಿಯಂತ್ರಿಸಲು ಮಾಡುವ ಪುನರಾವರ್ತಿಸುವ ಕ್ರಿಯೆಗಳನ್ನು “ಒತ್ತಡಪೂರಿತ ನಡುವಳಿಕೆಗಳೆಂಬ (compulsions) ಎನ್ನಬಹುದಾಗಿದೆ.
ಗೀಳು ರೋಗದ ರೋಗಲಕ್ಷಣಗಳು ಹಲವು ಪ್ರಕಾರಗಳಲ್ಲಿ ವ್ಯಕ್ತವಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ರೋಗಲಕ್ಷಣವೆಂದರೆ ಕೈ, ಶರೀರ ಹಾಗು ವಸ್ತುಗಳನ್ನು ಹಲವು ಬಾರಿ ತೊಳೆಯುವುದು. ಕೈ ಹಾಗು ಇತರ ವಸ್ತುಗಳಲ್ಲಿ ಕೊಳೆಯಿದೆ, ಶುದ್ದವಾಗಿಲ್ಲ ಎಂದು ಇವರಿಗೆ ಪದೇ ಪದೇ ಅನ್ನಿಸುತ್ತಿರುವುದರಿಂದ ಹೀಗೆ ತೊಳೆಯುವಿದರಲ್ಲಿ ಗಂಟೆಗಟ್ಟಲೆ ಸಮಯವನ್ನು ವಿನಿಯೋಗಿಸ ಬೇಕಾಗುತ್ತದೆಂದು ಹಲವರು ತಿಳಿಸುತ್ತಾರೆ. ಈ ಕಾಯಿಲೆಯಲ್ಲಿ ಅತಿಯಾದ ಸಂಶಯಗಳು, ತನಗೆ ಅಥವಾ ಇತರರಿಗೆ ಹಾನಿಯಾಗಬಹುದೆಂಬ ಅತಿಯಾದ ಭಯ, ನಿರ್ಧಿಷ್ಟ ವಿಧಾನ/ಸ್ಥಳದಲ್ಲೇ ವಸ್ತುಗಳು ಇರಬೇಕೆಂಬ ಆಲೋಚನೆಗಳು ಇತ್ಯಾದಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ. ಜನರು ಪದೇ ಪದೇ ಪರೀಕ್ಷಿಸುವುದು, ಹೆಚ್ಚಾಗಿ ಪ್ರಾರ್ಥನೆ ಮಾಡುವುದು, ಸರಿಯೋ ತಪ್ಪೋ ಎಂದು ಪದೇ ಪದೇ ಖಚಿತ ಪಡಿಸಿಕೊಳ್ಳುವುದು, ವಸ್ತುಗಳನ್ನು ಪುನಃ ಜೋಡಿಸುವುದು, ಇತ್ಯಾದಿ ಪದೇ ಪದೇ ಮಾಡುವ ಕ್ರಿಯೆಗಳ್ಳನ್ನು ಹೊಂದಿರುತ್ತಾರೆ. ಗೀಳುರೋಗವು ಸಾಮಾನ್ಯವಾಗಿ ಕಂಡು ಬರುವ ಕಾಯಿಲೆಯಾದರೂ ಸಹ ಬಹಳ ಜನರಿಗೆ ತಮ್ಮ ರೋಗಲಕ್ಷಣಗಳ ಬಗ್ಗೆ ಅರಿವು ಇರುವುದಿಲ್ಲ ಅಥವಾ ತಮ್ಮ ರೋಗಲಕ್ಷಣದ ಬಗ್ಗೆ ಮುಜುಗರವಿರುವುದರಿಂದ ಅವರು ಚಿಕಿತ್ಸೆ ಪಡೆಯುವಲ್ಲಿ ವಿಫಲರಾಗಿರುತ್ತಾರೆ.
ಒಸಿಡಿ ಕ್ಲಿನಿಕ್ಕಿನಲ್ಲಿ ಗೀಳು ರೋಗ ಜೊತೆ ಗೀಳು ಸಂಬಂಧಿತ ರೋಗಗಳಾದ ಬಾಡಿ ಡಿಸ್ ಮಾರ್ಫಿಕ್ಕ್ ಡಿಸ್ ಆರ್ಡರ್ (ತಮ್ಮ ಶಾರೀರಿಕ ಊನತ್ವಗಳ ಚಿಂತೆ), Trichotillomania (ಕೂದಲು ಕಿತ್ತುಕೊಳ್ಳುವ ತುಡಿತ), ಪದೇ ಪದೇ ಚರ್ಮವನ್ನು ಕೀಳುವುದು, Hoarding disorder (ಅನಗತ್ಯ ಶೇಖರಿಸುವ ಕಾಯಿಲೆ) ಇತ್ಯಾದಿ ಕಾಯಿಲೆಗಳಿಗೆ ಕೂಡ ಚಿಕಿತ್ಸೆ ನೀಡಲಾಗುತ್ತದೆ.
ಈ ವಿಶೇಷ ಕ್ಲಿನಿಕ್ ಪ್ರತಿ ಮಂಗಳವಾರ ಹೊರರೋಗಿಗಳಿಗಾಗಿ ಸೇವೆಯನ್ನು ನೀಡುತ್ತದೆ. ತೀವ್ರ ಕಾಯಿಲೆಯಿರುವವರು ಹಾಗು ಚಿಕಿತ್ಸೆಗಳಿಗೆ ಸೂಕ್ತವಾಗಿ ಸ್ಪಂದಿಸದವರು ಗಾಡ ಹಾಗು ಸಮಗ್ರವಾದ ಚಿಕಿತ್ಸೆಗಾಗಿ ಒಳ ರೋಗಿ ವಿಭಾಗದಲ್ಲಿ ದಾಖಲಾಗುತ್ತಾರೆ. ಔಷಧಿಗಳು ಮತ್ತು ಸಾಮಾನ್ಯವಾಗಿ ಅರಿವಿನ ಕುರಿತ ಆಪ್ತ ಸಮಾಲೋಚನೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಇದರ ಜೊತೆಗೆ ಮೆದುಳಿನ ಪ್ರಚೋದಾತ್ಮಕ ಚಿಕಿತ್ಸಾ ವಿಧಾನಗಳಾದ rTMS, tDCS ಇತ್ಯಾದಿಗಳ ಸೌಲಭ್ಯವನ್ನು ಉಪಯೋಗಿಸಿ ಚಿಕಿತ್ಸೆ ನೀಡಲಾಗುತ್ತದೆ.
ಈ ಎಲ್ಲಾ ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ ಮೆದುಳಿನ ಆಳದಲ್ಲಿ ಪ್ರಚೋದಿಸುವ ಆಧುನಿಕ ಚಿಕಿತ್ಸಾ ವಿಧಾನದ ಸೌಲಭ್ಯವನ್ನು ನೀಡುವಲ್ಲಿ ನಮ್ಮ ಘಟಕವು ಪರಿಣಿತವಾಗಿದೆ. ಕಳೆದ 25 ವರ್ಷಗಳಲ್ಲಿ, ಸರಿ ಸುಮಾರು 50,000 ರೋಗಿಗಳು ಹೊರ ರೋಗಿ ವಿಭಾಗದಲ್ಲಿ ಮತ್ತು 7000 ರೋಗಿಗಳು ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.
ವಿಶೇಷ ತರಬೇತಿ ಕೇಂದ್ರವಾಗಿ ಇಲ್ಲಿ ಗೀಳು ರೋಗ ಹಾಗು ಸಂಬಂಧಿತ ರೋಗಗಳ ಬಗ್ಗೆ ಮನೋವೈದ್ಯರಿಗೆ (Psychiatrists), ಚಿಕಿತ್ಸಾತ್ಮಕ ಮನಶ್ಶಾಸ್ತ್ರಜ್ಞರಿಗೆ (Clinical Psychologist), ಹಾಗು ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಿಗೆ (Psychiatric Social Workers) ಔಷಧೀಯ ಹಾಗು ಆಪ್ತಾಲೋಚನೆ ಚಿಕಿತ್ಸೆಯ ಕುರಿತು ಕ್ರಮಬದ್ದವಾಗಿ ತರಬೇತಿಯನ್ನೂ ನೀಡಲಾಗುತ್ತಿದೆ. ಈ ತರಬೇತಿಗಳನ್ನು ಪಡೆಯಲು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ (SAARC) ರಾಷ್ಟ್ರಗಳಿಂದಲೂ ಸಹ ಬಾಹ್ಯ ಪ್ರಶಿಕ್ಷಣಾರ್ಥಿಗಳು ಬರುತ್ತಾರೆ. ಗೀಳು ರೋಗ ವಿಷಯದಲ್ಲಿ ಡಾಕ್ಟರೇಟ್ ನಂತರದ ಉನ್ನತ ಅಧ್ಯಯನ ಕಾರ್ಯಕ್ರಮವು (Post-Doctoral Fellowship) ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ.
ಒಸಿಡಿ ಕ್ಲಿನಿಕ್ಕಿನ ಈ ದಶಕಗಳ ಇತಿಹಾಸದಾದ್ಯಂತ ಗೀಳು ಮತ್ತು ಸಂಬಂಧಿಸಿದ ರೋಗಗಳ ಕುರಿತು ಉನ್ನತಸ್ಥರದ ಸಂಶೋಧನೆ ನಡೆಸುತ್ತಾ ಬಂದಿದೆ.
ಇದಕ್ಕೆ ಸುಪ್ರಸಿದ್ಧ ರಾಷ್ಟ್ರೀಯ ಹಾಗು ಆಂತರಾಷ್ಟ್ರೀಯ ಸಂಶೋಧನಾ ಅನುದಾನಗಳ ಬೆಂಬಲ ಪಡೆದಿದೆ.
ಈ ರಜತ ಮಹೋತ್ಸವದಲ್ಲಿ ಗೀಳು ಹಾಗು ಸಂಬಂಧಿಸಿದ ರೋಗಗಳ ಬಗ್ಗೆ ಸುಪ್ರಸಿದ್ಧ ರಾಷ್ಟ್ರೀಯ ಹಾಗು ಆಂತರಾಷ್ಟ್ರೀಯ ಕುಶಲ ಸಂಪನ್ಮೂಲ ವ್ಯಕ್ತಿಗಳು ಮಾತನಾಡಲಿದ್ದಾರೆ. ಮತ್ತು, ಈ ಶೈಕ್ಷಣಿಕ ಉತ್ಸವವು ನುರಿತ ಚಿಕಿತ್ಸಾ ಕಾರ್ಯಾಗಾರಗಳು, ಬಿತ್ತಿ ಚಿತ್ರ ಪ್ರದರ್ಶನ, ರಸಪ್ರಶ್ನೆ ಸ್ಪರ್ಧೆಗಳನ್ನು ಒಳಗೊಂಡಿರುತ್ತದೆ.
ನಿಮ್ಹಾನ್ಸ್ ಪಾರಂಪರಿಕ ವಸ್ತುಸಂಗ್ರಹಾಲಯದಲ್ಲಿ “Expressions of OCD” ಅಥವಾ ‘ಗೀಳಿನ ಅಭಿವ್ಯಕ್ತಿ’ ಎಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನದಲ್ಲಿ ಗೀಳು ಮತ್ತು ಸಂಬಂಧಿಸಿದ ರೋಗಗಳ ಬಗೆಗಿನ ಸೃಜನಶೀಲ ಆಲೋಚನೆಗಳು, ಭಾವಾನೆಗಳು ಮತ್ತು ಒಳ ಅರಿವನ್ನು ಪ್ರತಿಬಿಂಬಿಸುವಲ್ಲಿ ನಡೆದ ರಾಷ್ತ್ರೀಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ಕವನ, ಚಿತ್ರ, ಛಾಯಾಗ್ರಹಣ ಮತ್ತು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ . ಈ ಪ್ರದರ್ಶನವು ನವೆಂಬರ್ 2022ರಾದ್ಯಂತ ತೆರೆದಿರುತ್ತದೆ.
*****
(Release ID: 1874961)
Visitor Counter : 193