ಚುನಾವಣಾ ಆಯೋಗ
azadi ka amrit mahotsav

ಗೆಜೆಟ್ ಅಧಿಸೂಚನೆ - ಉಪ ರಾಷ್ಟ್ರಪತಿ ಚುನಾವಣೆ, 2022

Posted On: 05 JUL 2022 5:28PM by PIB Bengaluru

ಇಂದು (2022ರ ಜುಲೈ 5) ಭಾರತ ಸರಕಾರದ ವಿಶೇಷ ಗೆಜೆಟ್‌ನಲ್ಲಿ ಪ್ರಕಟವಾದ ಅಧಿಸೂಚನೆಯ ಮೂಲಕ, ಚುನಾವಣಾ ಆಯೋಗವು ಉಪರಾಷ್ಟ್ರಪತಿ ಚುನಾವಣೆಗೆ ಈ ಕೆಳಗಿನ ದಿನಾಂಕಗಳನ್ನು ನಿಗದಿಪಡಿಸಿದೆ:-

a. ಜುಲೈ 19, 2022 (ಮಂಗಳವಾರ), ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ;

b. ಜುಲೈ 20, 2022, (ಬುಧವಾರ), ನಾಮಪತ್ರಗಳ ಪರಿಶೀಲನೆಯ ದಿನಾಂಕ;

c. ನಾಮ ಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಜುಲೈ 22, 2022, (ಶುಕ್ರವಾರ); ಮತ್ತು

d. ಆಗಸ್ಟ್ 6, 2022, (ಶನಿವಾರ), ಅಗತ್ಯಬಿದ್ದರೆ ಮತದಾನ ನಡೆಸಲಾಗುವ ದಿನಾಂಕ.

ಆಯೋಗವು 2022ರ ಜುಲೈ 1ರಂದು ಹೊರಡಿಸಲಾದ ಪ್ರತ್ಯೇಕ ಅಧಿಸೂಚನೆಗಳ ಮೂಲಕ , ಲೋಕಸಭೆಯ ಪ್ರಧಾನ ಕಾರ್ಯದರ್ಶಿ

ಶ್ರೀ ಉತ್ಪಲ್ ಕುಮಾರ್ ಸಿಂಗ್ ಅವರನ್ನು ಉಪರಾಷ್ಟ್ರಪತಿ ಚುನಾವಣೆಯ ಚುನಾವಣಾ ಅಧಿಕಾರಿಯಾಗಿ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ಪಿ.ಸಿ. ತ್ರಿಪಾಠಿ ಮತ್ತು ಲೋಕಸಭಾ ಸಚಿವಾಲಯದ ನಿರ್ದೇಶಕ ಶ್ರೀ ರಾಜು ಶ್ರೀವಾಸ್ತವ ಅವರನ್ನು ಸಹಾಯಕ ಚುನಾವಣಾಧಿಕಾರಿಗಳಾಗಿ ನೇಮಿಸಿದೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ ನಿಯಮಗಳು-1974ರ ನಿಯಮ 3ರ ಅಡಿಯಲ್ಲಿ ಅಗತ್ಯವಿರುವಂತೆ, ಚುನಾವಣಾ ಅಧಿಕಾರಿಯು ಸಾರ್ವಜನಿಕ ಟಿಪ್ಪಣಿಗಳ ಮೂಲಕ ಇಂದು, ಜುಲೈ 5, 2022 ರಂದು ಹೊರಡಿಸಿರುವ ಅಧಿಸೂಚನೆ ಏನೆಂದರೆ-

I. ನಾಮಪತ್ರಗಳನ್ನು ಅಭ್ಯರ್ಥಿ ಅಥವಾ ಅವರ ಯಾವುದೇ ಸೂಚಕರು(ಪ್ರಪೋಸರ್‌ಗಳು) ಅಥವಾ ಸೆಕೆಂಡರ್‌ಗಳು ನವದೆಹಲಿಯ ಸಂಸತ್ ಭವನದ ನೆಲಮಹಡಿಯ ಕೊಠಡಿ ಸಂಖ್ಯೆ 18ರಲ್ಲಿರುವ ರಿಟರ್ನಿಂಗ್‌ ಅಧಿಕಾರಿಯ ಕಚೇರಿಯಲ್ಲಿ ಚುನಾವಣಾಧಿಕಾರಿಗೆ ಅಥವಾ ಅವರು ಅನಿವಾರ್ಯವಾಗಿ ಗೈರುಹಾಜರಾದರೆ, ಸಹಾಯಕ ಚುನಾವಣಾಧಿಕಾರಿ ಶ್ರೀ ಪಿ.ಸಿ. ತ್ರಿಪಾಠಿ, ಜಂಟಿ ಕಾರ್ಯದರ್ಶಿ ಅಥವಾ ಲೋಕಸಭಾ ಸಚಿವಾಲಯದ ನಿರ್ದೇಶಕ ಶ್ರೀ ರಾಜು ಶ್ರೀವಾಸ್ತವ ಅವರಿಗೆ 2022ರ ಜುಲೈ 19ಕ್ಕಿಂತ ಮೊದಲು ಯಾವುದೇ ದಿನ (ಸಾರ್ವಜನಿಕ ರಜಾದಿನ ಹೊರತುಪಡಿಸಿ) ಬೆಳಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಸದರಿ ಕಚೇರಿಯಲ್ಲಿ ತಲುಪಿಸಬಹುದು;

II. ಪ್ರತಿ ನಾಮಪತ್ರದ ಜತೆಗೆ ಅಭ್ಯರ್ಥಿಯು ಮತದಾರರಾಗಿ ನೋಂದಾಯಿಸಲ್ಪಟ್ಟಿರುವ ಸಂಸತ್ ಕ್ಷೇತ್ರದ ಮತದಾರರ

     ಪಟ್ಟಿಯಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ನಮೂದುಗಳ ಪ್ರಮಾಣೀಕೃತ ಪ್ರತಿಯನ್ನು ಲಗತ್ತಿರಿಸರಬೇಕು;

III. ಪ್ರತಿಯೊಬ್ಬ ಅಭ್ಯರ್ಥಿಯು ಹದಿನೈದು ಸಾವಿರ ರೂಪಾಯಿಗಳನ್ನು ಠೇವಣಿ ಇಡಬೇಕು ಅಥವಾ ತಮ್ಮ ಪರವಾಗಿ ಠೇವಣಿ ಇಡುವಂತೆ ಮಾಡಬೇಕು. ನಾಮಪತ್ರವನ್ನು ಪ್ರಸ್ತುತಪಡಿಸುವ ಸಮಯದಲ್ಲಿ ಈ ಮೊತ್ತವನ್ನು ಚುನಾವಣಾ ಅಧಿಕಾರಿ ಬಳಿ ನಗದು ರೂಪದಲ್ಲಿ ಠೇವಣಿ ಇಡಬಹುದು ಅಥವಾ ಮುಂಚಿತವಾಗಿಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಥವಾ ಸರಕಾರಿ ಖಜಾನೆಯಲ್ಲಿ ಠೇವಣಿ ಇಡಬಹುದು. ಒಂದು ವೇಳೆ ಠೇವಣಿ ಇಡಲು ಎರಡನೇ ವಿಧಾನವನ್ನು ಅನುಸರಿಸಿದ್ದರೆ, ಈ ಮೊತ್ತವನ್ನು ಸೂಚಿಸಿದ ಕಡೆ ಠೇವಣಿ ಇಡಲಾಗಿದೆ ಎಂದು ತೋರಿಸುವ ರಸೀದಿಯನ್ನು ನಾಮಪತ್ರದೊಂದಿಗೆ ಲಗತ್ತಿಸಬೇಕಾಗುತ್ತದೆ;

IV. ನಾಮಪತ್ರಗಳ ನಮೂನೆಗಳನ್ನು ಮೇಲೆ ಹೇಳಿದ ಸಮಯದಲ್ಲಿ ಮೇಲಿನ ಕಚೇರಿಯಿಂದ ಪಡೆಯಬಹುದು;

V. ಕಾಯ್ದೆಯ ಸೆಕ್ಷನ್ 5 ʻಬಿʼಯ ಉಪ ವಿಧಿ (4)ರ ಅಡಿಯಲ್ಲಿ ತಿರಸ್ಕೃತಗೊಂಡ ನಾಮಪತ್ರಗಳನ್ನು ಹೊರತುಪಡಿಸಿ, ಉಳಿದ ನಾಮಪತ್ರಗಳನ್ನು ನವದೆಹಲಿಯ ಸಂಸತ್ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 62ರಲ್ಲಿ ಜುಲೈ 20ರಂದು ಬುಧವಾರ, ಬೆಳಗ್ಗೆ 11 ಗಂಟೆಗೆ ಪರಿಶೀಲನೆಗೆ ತೆಗೆದುಕೊಳ್ಳಲಾಗುತ್ತದೆ;

VI. ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ಸೂಚನೆಯನ್ನು ಅಭ್ಯರ್ಥಿ ಅಥವಾ ಅಭ್ಯರ್ಥಿಯಯ ಪರವಾಗಿ ಅವರಿಂದ ಲಿಖಿತವಾಗಿ ಅಧಿಕೃತಗೊಳಿಸಲಾದ ಯಾವುದೇ ವ್ಯಕ್ತಿ ಅಥವಾ ಅವರ ಸೂಚಕರು ಅಥವಾ ಸೆಕೆಂಡರ್‌ಗಳು 2022ರ ಜುಲೈ 22ರ ಮಧ್ಯಾಹ್ನ ಮೂರು ಗಂಟೆಗೆ ಮೊದಲು ಕರಂಡಿಕೆ (1) ರಲ್ಲಿ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಚುನಾವಣಾಧಿಕಾರಿಗೆ ತಲುಪಿಸಬಹುದು;

VII. ಒಂದು ವೇಳೆ ಚುನಾವಣೆ ನಡೆದರೆ, 2022ರ ಆಗಸ್ಟ್ 6ರ ಶನಿವಾರದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ಮತದಾನದ ಸ್ಥಳದಲ್ಲಿ ಮತದಾನ ನಡೆಯಲಿದೆ.

ಈ ಅಧಿಸೂಚನೆಗಳನ್ನು ಮತ್ತು ಚುನಾವಣಾ ಅಧಿಕಾರಿಯಿಂದ ಹೊರಡಿಸಲಾದ ಸಾರ್ವಜನಿಕ ಸೂಚನೆಗಳನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಅಧಿಕೃತ ಗೆಜೆಟ್‌ಗಳಲ್ಲಿ ಏಕಕಾಲದಲ್ಲಿ ಮರುಪ್ರಕಟಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. 

*******

 

 

 

 

 

 

 

 

 

 


(Release ID: 1839429) Visitor Counter : 197


Read this release in: English , Urdu , Hindi , Marathi