ಹಣಕಾಸು ಸಚಿವಾಲಯ
ತಮ್ಮ 2 ದಿನಗಳ ಕರ್ನಾಟಕ ಭೇಟಿ ವೇಳೆ ಎಂ.ಪಿ.ಲ್ಯಾಡ್ ಯೋಜನೆಯಡಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಪರಿಶೀಲಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್
ಟಿ.ಎ. ಪೈ ಮ್ಯಾನೇಜ್ ಮೆಂಟ್ ಸಂಸ್ಥೆ ಮತ್ತು ವೇದನಾದ ಗುರುಕುಲದ ಘಟಿಕೋತ್ಸವ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದ ಶ್ರೀಮತಿ ಸೀತಾರಾಮನ್.
Posted On:
15 MAY 2022 7:07PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2022ರ ಮೇ 14 ರಿಂದ 15 ರಂದು ತಮ್ಮ ಎರಡು ದಿನಗಳ ಕರ್ನಾಟಕ ಭೇಟಿಯ ವೇಳೆ ಎಂಪಿ ಲ್ಯಾಡ್ ಯೋಜನೆಯಡಿ ಪೂರ್ಣಗೊಂಡ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಪರಿಶೀಲಿಸಿದರು.
ತಮ್ಮ ಭೇಟಿಯ ಸಂದರ್ಭದಲ್ಲಿ ಶ್ರೀಮತಿ ಸೀತಾರಾಮನ್ ಅವರು ಟಿ.ಎ. ಪೈ ಮ್ಯಾನೇಜ್ ಮೆಂಟ್ ಸಂಸ್ಥೆ ಮತ್ತು ವೇದನಾದ ಗುರುಕುಲದ ಘಟಿಕೋತ್ಸವ ಸಮಾರಂಭಗಳಲ್ಲಿ ಭಾಗವಹಿಸಿದ್ದರು.
ತಮ್ಮ ಭೇಟಿಯ ಮೊದಲ ದಿನ ಕೇಂದ್ರ ಹಣಕಾಸು ಸಚಿವರು ಶ್ರೀ ವಿಶ್ವೇಶ ತೀರ್ಥ ಸೇವಾಧಾಮ ಮತ್ತು ಉಡುಪಿಯ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನ ವಿಸ್ತರಣಾ ಘಟಕಗಳನ್ನು ಉದ್ಘಾಟಿಸಿದರು, ಇದಕ್ಕೆ ಅವರು ತಮ್ಮ ಎಂಪಿಲ್ಯಾಡ್ ನಿಧಿಯಿಂದ 25ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ಉಡುಪಿಯ ಟಿ.ಎ. ಪೈ ಮ್ಯಾನೇಜ್ ಮೆಂಟ್ ಸಂಸ್ಥೆಯ 36ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶ್ರೀಮತಿ ಸೀತಾರಾಮನ್ ಭಾಗವಹಿಸಿದ್ದರು.
ಪದವಿ ಪಡೆದ ವಿದ್ಯಾರ್ಥಿಗಳನ್ನುದ್ದೇಶಿಸಿ ಘಟಿಕೋತ್ಸವ ಭಾಷಣ ಮಾಡಿದ ಕೇಂದ್ರ ಹಣಕಾಸು ಸಚಿವರು, "ಭಾರತದ ಸ್ವಾತಂತ್ರ್ಯದ 75 ರಿಂದ 100ನೇ ವರ್ಷಗಳ ನಡುವಿನ ಅಮೃತಕಾಲದ ಸಮಯದಲ್ಲಿ ಅನೇಕ ಭವಿಷ್ಯದ ಸಾಧನೆಯ ಗುರಿಯನ್ನು ಸರ್ಕಾರ ಹೊಂದಿದೆ. ನಮ್ಮ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರ ಜೊತೆಗೆ ಡಿಜಿಟಲ್ ಬ್ಯಾಂಕಿಂಗ್ ಮತ್ತು ಪಾವತಿ, ಡಿಜಿಟಲ್ ತಂತ್ರಜ್ಞಾನ, ಡಿಜಿಟಲ್ ಕಲಿಕೆ ಮತ್ತು ಬೋಧನೆಯನ್ನು ಪ್ರಾವೀಣ್ಯತೆ ಸಾಧಿಸಿದ ಸರ್ಕಾರದ ಬಗ್ಗೆ ಮುಂದಿನ ಪೀಳಿಗೆಯು ಹೆಮ್ಮೆಪಡುತ್ತದೆ " ಎಂದು ಹೇಳಿದರು.
ಭೂಮಿಯ ರೂಪುರೇಷೆಗಳ ನಕ್ಷೆ ಮಾಡಲು ಮತ್ತು ಮುಂದಿನ ಪೀಳಿಗೆಗಾಗಿ ದಾಖಲೆಗಳ ಡಿಜಿಟಲ್ ಸಂರಕ್ಷಣೆಯನ್ನು ಖಾತ್ರಿಪಡಿಸಲು; ಕಡುಬಡವ ರೈತರನ್ನು ಮತ್ತು ಅವರ ಹಕ್ಕುಗಳನ್ನು ಗುರುತಿಸಿ, ಪಾರದರ್ಶಕವಾಗಿ ಭೂಮಿಯ ಭದ್ರತೆ ಮತ್ತು ಮಾಲೀಕತ್ವವನ್ನು ಒದಗಿಸಿ ಅವರನ್ನು ಹಣಕಾಸು ಜಾಲದಲ್ಲಿ ಸೇರಿಸಲು ಡ್ರೋನ್ ತಂತ್ರಜ್ಞಾನವನ್ನು ಪರಿಚಯಿಸಿದ್ದಕ್ಕಾಗಿ ಕೇಂದ್ರ ಹಣಕಾಸು ಸಚಿವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು.
ಸೆಪ್ಟೆಂಬರ್ 2022ರವರೆಗೆ ಸರ್ಕಾರವು 80ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸುವುದನ್ನು ಮುಂದುವರಿಸಿದೆ, ಜೊತೆಗೆ ಗುಂಡಿ ಒತ್ತುವ ಮೂಲಕ ಆಧಾರ್ ಗುರುತಿನ ಚೀಟಿಯನ್ನು ಆಧಾರವಾಗಿ ಬಳಸಿಕೊಂಡು ಸೋರಿಕೆಯಿಲ್ಲದೆ ಹಣ ಜನರ ಖಾತೆಗಳಿಗೆ ಸೇರುವುದನ್ನು ಖಚಿತಪಡಿಸಿಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
"ಡಿಜಿಟಲೀಕರಣವು ಸಾಮಾನ್ಯ ಜನರಿಗೂ ಪ್ರಯೋಜನಗಳನ್ನು ಒದಗಿಸುತ್ತಿದ್ದು, ಇದು ಇನ್ನು ಮುಂದೆ ಶ್ರೀಮಂತ ವರ್ಗದ ಸವಲತ್ತಾಗಿ ಮಾತ್ರ ಉಳಿದಿಲ್ಲ" ಎಂದು ಕೇಂದ್ರ ಹಣಕಾಸು ಸಚಿವರು ಹೇಳಿದರು.
ಭಾರತವನ್ನು ವಿಶ್ವ ನಾಯಕನನ್ನಾಗಿ ಪರಿವರ್ತಿಸಲು ಪ್ರಯತ್ನಿಸುವ ಮೂಲಕ ಅಮೃತ ಕಾಲಕ್ಕೆ ನೀಡುವ ಕೊಡುಗೆಯ ಗುಣಮಟ್ಟಕ್ಕೆ ನಿಮ್ಮ ಕಲಿಕೆಯು ನೇರ ಪ್ರಸ್ತುತತೆ ಹೊಂದಿದೆ ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಶ್ರೀಮತಿ ಸೀತಾರಾಮನ್ ಹೇಳಿದರು.
ಕೇಂದ್ರ ಬಜೆಟ್ 2022-23ರಲ್ಲಿ ಮಾಡಿದ ಡಿಜಿಟಲ್ ಕರೆನ್ಸಿ ಘೋಷಣೆಯ ಬಗ್ಗೆ ಮಾತನಾಡುವಾಗ ಶ್ರೀಮತಿ ಸೀತಾರಾಮನ್, "ಡಿಜಿಟಲ್ ಕರೆನ್ಸಿಯಲ್ಲಿ ನಾಯಕರಾಗುವ ಅವಕಾಶವನ್ನು ನಾವು ಕಳೆದುಕೊಳ್ಳಲು ಬಯಸುವುದಿಲ್ಲ ಏಕೆಂದರೆ ನಾವು ವಿತರಿಸಬಹುದಾದ ಲೆಡ್ಜರ್ ತಂತ್ರಜ್ಞಾನದ ಸಾಮರ್ಥ್ಯವನ್ನು ಅರ್ಥಮಾಡಿಕೊಂಡಿದ್ದೇವೆ, ಅದು ಲಭ್ಯವಿರಬೇಕು ಮತ್ತು ಅದನ್ನು ಭಾರತದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು" ಎಂದು ಹೇಳಿದರು.
ಕೇಂದ್ರ ಹಣಕಾಸು ಸಚಿವರು ತಮ್ಮ 2ನೇ ದಿನದ ಭೇಟಿಯ ಭಾಗವಾಗಿ ಇಂದು ಬೆಂಗಳೂರಿನ ಕಾಳೇನ ಅಗ್ರಹಾರ ಕೆರೆಗೆ ಭೇಟಿ ನೀಡಿದ್ದರು. 2017ರಲ್ಲಿ, ಶ್ರೀಮತಿ ಸೀತಾರಾಮನ್ ಅವರು ಸರೋವರದ ಜೀರ್ಣೋದ್ಧಾರ ಕಾರ್ಯಕ್ಕಾಗಿ ತಮ್ಮ ಎಂ.ಪಿ.ಲ್ಯಾಡ್ ನಿಧಿಯಿಂದ 75 ಲಕ್ಷ ರೂ.ಗಳನ್ನು ನೀಡಿದ್ದರು.
ಹೂಳು ತೆಗೆದು ಕೆರೆಯ ಸಾಮರ್ಥ್ಯವನ್ನು ಹೆಚ್ಚಿಸಲು, ಪುನಶ್ಚೇತನ ಮತ್ತು ಹುಲ್ಲುಹಾಸು ಸೇರಿದಂತೆ ಮುಖ್ಯ ಬದುವನ್ನು ಬಲಪಡಿಸಲು ಭೂಮಿಯನ್ನು ಬಳಸಿಕೊಂಡು ವರ್ತುಲ ಏರಿ ನಿರ್ಮಿಸಲು ಈ ಹಣವನ್ನು ಬಳಸಲಾಯಿತು. ನಿರ್ಲಕ್ಷಿತವಾಗಿದ್ದ ಈ ಕೆರೆ 2017 ರಿಂದ ಪ್ರಮುಖ ಪರಿವರ್ತನೆಯನ್ನು ಕಂಡಿದ್ದು ಈಗ ಸ್ಥಳೀಯ ಸಮುದಾಯ ಭೇಟಿ ನೀಡುವ ಜನಪ್ರಿಯ ತಾಣವಾಗಿದೆ.
ಕೆರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಶ್ರೀಮತಿ ಸೀತಾರಾಮನ್ ಅವರು ನಿವಾಸಿಗಳು, ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ನಂತರ, ಕೇಂದ್ರ ಹಣಕಾಸು ಸಚಿವರು ರಾಜ್ಯದ ರಾಜಧಾನಿಯಲ್ಲಿ ವೇದನಾದ ಗುರುಕುಲದ ವೈದಿಕ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಭೇಟಿಯ ಸಮಯದಲ್ಲಿ, ಶ್ರೀಮತಿ ಸೀತಾರಾಮನ್ ಅವರು ತಮ್ಮ ಎಂಪಿಲ್ಯಾಡ್ ನಿಧಿಯಿಂದ ಮಂಜೂರು ಮಾಡಿದ್ದ 1 ಕೋಟಿ ರೂ.ಗಳನ್ನು ಬಳಸಿಕೊಂಡು ಬೆಂಗಳೂರಿನ ಜಯನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನವಜಾತ ಮತ್ತು ಮಕ್ಕಳ ಐಸಿಯು ವಾರ್ಡ್ ನಿರ್ಮಿಸಲಾಗಿದ್ದು, ಈಗ ರೋಗಿಗಳಿಗಾಗಿ ಸಿದ್ಧವಾಗಿದೆ ಎಂದು ತಿಳಿಸಲಾಯಿತು. ಈ ಯೋಜನೆಯಲ್ಲಿ 20 ಹಾಸಿಗೆಗಳ ಮಕ್ಕಳ ಐಸಿಯು ಸ್ಥಾಪನೆ, ಭೌತಿಕ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ವೈದ್ಯಕೀಯ ಆಮ್ಲಜನಕ ಸೌಲಭ್ಯ ಸೇರ್ಪಡೆ ಮತ್ತು ಆಸ್ಪತ್ರೆಯಲ್ಲಿನ ವಿದ್ಯುತ್ ಮೂಲಸೌಕರ್ಯ ಮೇಲ್ದರ್ಜೆಗೇರಿಸುವುದೂ ಸೇರಿತ್ತು.
****
(Release ID: 1825684)
Visitor Counter : 178