ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಪೌರಕಾರ್ಮಿಕರೊಂದಿಗೆ ಅಂಬೇಡ್ಕರ್ ಜಯಂತಿ ಆಚರಿಸಿದ ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್. ಕಾಶಿ ವಿಶ್ವನಾಥ ಮತ್ತು ವೆಳ್ಳಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ


ರಾಷ್ಟ್ರೀಯ ಮಹಿಳಾ ಕೌಶಲ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ

ಶ್ರೀ ನರೇಂದ್ರ ಮೋದಿಯವರ ಸರ್ಕಾರವು ನೀತಿ ನಿರೂಪಣೆಯಲ್ಲಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ಗೆ ಒತ್ತು ನೀಡುವ ಮೂಲಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಾನತೆಯ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತಿದೆ: ಶ್ರೀ ರಾಜೀವ್ ಚಂದ್ರಶೇಖರ್

Posted On: 14 APR 2022 7:10PM by PIB Bengaluru

ಸಮಾನತೆ ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೂಲಭೂತ ಅಂಶವಾಗಿದೆ. ಶ್ರೀ ನರೇಂದ್ರ ಮೋದಿಯವರ ಸರ್ಕಾರ ಸಬ್ಕಾ ಸಾಥ್ ಸಬ್ಕಾ ವಿಕಾಸ್‌ಗೆ ಒತ್ತು ನೀಡುವ ಮೂಲಕ ಸಮಾನತೆ ಮತ್ತು ಸಮಾನ ಅವಕಾಶಗಳ ಬಗೆಗಿನ ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಸಾಕಾರಗೊಳಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದರು. ಅವರು ಬೆಂಗಳೂರಿನ ರಾಷ್ಟ್ರೀಯ ಮಹಿಳಾ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಟ್ಟಕಡೆಯ ಮನುಷ್ಯನ ಬಗ್ಗೆ ಕಾಳಜಿ ವಹಿಸುವ ಅಂತ್ಯೋದಯ ತತ್ವವು, ನೀತಿ ರಚನೆ ಮತ್ತು ಎಲ್ಲಾ ಫಲಾನುಭವಿ ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಮತ್ತು ಆಡಳಿತವು ಪ್ರತಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರಾಮಾಣಿಕತೆ, ಪರಿಣಾಮ ಮತ್ತು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ವಿಧಾನದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಸಚಿವರು, “ಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರ ನಿರ್ಮಾಣಕ್ಕೆ ವಿಶೇಷ ಮಹತ್ವ ನೀಡಿದ್ದರು. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಮಾನತೆಯ ಮೂಲಭೂತ ಹಕ್ಕನ್ನು ವಿವರಿಸಿದ ಸಚಿವರು, ಇದು ಧರ್ಮ, ಜಾತಿ, ಬಣ್ಣ, ಪಂಥ ಅಥವಾ ಲಿಂಗವನ್ನು ಲೆಕ್ಕಿಸದೆ ಸಮಾನತೆಯನ್ನು ಒದಗಿಸುತ್ತದೆ ಎಂದರು. ವೈವಿಧ್ಯಮಯ ರಾಷ್ಟ್ರವಾಗಿರುವುದರಿಂದ ನಾವು ವಿವಿಧ ಭೌಗೋಳಿಕತೆಗಳಲ್ಲಿ ವಾಸಿಸುತ್ತಿರಬಹುದು. ಆದರೆ ನಾವೆಲ್ಲರೂ ಭಾರತೀಯರು ಎಂಬ ಒಂದೇ ಸಾಮಾನ್ಯ ಗುರುತನ್ನು ಹಂಚಿಕೊಳ್ಳುತ್ತೇವೆ ಎಂದರು. ಅಂಬೇಡ್ಕರ್ ಜಯಂತಿ ಹಾಗೂ ಮಹಾವೀರ ಜಯಂತಿಯಂದು ಅವರು ಎಲ್ಲರಿಗೂ ಶುಭ ಕೋರಿದರು. ಎನ್‌ಎಸ್‌ಟಿಐ ವಿದ್ಯಾರ್ಥಿಗಳು ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ವೀಕ್ಷಿಸಿದ ಸಚಿವರು, ಸ್ಪರ್ಧಾತ್ಮಕವಾಗಿ ಉಳಿಯಲು ನಿರಂತರವಾಗಿ ಕೌಶಲ್ಯವನ್ನು ಬೆಳೆಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ತ್ವರಿತ ಡಿಜಿಟಲೀಕರಣದ ಇಂದಿನ ಯುಗದಲ್ಲಿ ಡಿಜಿಟಲ್ ಕೌಶಲ್ಯಗಳನ್ನು ಕಲಿಯುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೌಶಲ್ಯಕ್ಕೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಶ್ರದ್ಧೆಯ ವಿಷಯವಾಗಿದೆ ಎಂದು ಅವರು ಹೇಳಿದರು.

ನಂತರ ಆಸ್ಟಿನ್‌ ಟೌನ್‌ಗೆ ತೆರಳಿದ ಸಚಿವರು, ಸಂಸದ ಶ್ರೀ ಪಿ.ಸಿ.ಮೋಹನ್‌, ಶ್ರೀ ಗೌತಮ್‌ಕುಮಾರ್‌, ಡಿಎಸ್‌ಎಸ್‌ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಸಚಿವರು ಕಾಶಿ ವಿಶ್ವನಾಥ ಮತ್ತು ವೆಳ್ಳಾರಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದರು ಮತ್ತು ಪೌರಕಾರ್ಮಿಕರೊಂದಿಗೆ ಊಟ ಮಾಡಿದರು.

***



(Release ID: 1816958) Visitor Counter : 88


Read this release in: English