ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ 3 ಕೆರೆಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. 


ಪ್ರಧಾನ ಮಂತ್ರಿಗಳ ʻಅಮೃತ್ ಕೆರೆʼಯ ಕನಸನ್ನು ಕರ್ನಾಟಕ ಸರಕಾರ ಈಡೇರಿಸುತ್ತಿದೆ: ರಾಜೀವ್ ಚಂದ್ರಶೇಖರ್

ಅತಿಕ್ರಮಣಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಕೆರೆಗಳನ್ನು ರಕ್ಷಿಸಲು ಶ್ರಮಿಸಿದ ರಾಜೀವ್ ಚಂದ್ರಶೇಖರ್ ಅವರು ಕೆರೆಗೆ ಭೇಟಿ ನೀಡಿದಾಗ ಅಲ್ಲಿನ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಅವರನ್ನು ಸ್ವಾಗತಿಸಲಾಯಿತು.

Posted On: 12 APR 2022 6:04PM by PIB Bengaluru

ಪ್ರತಿ ಜಿಲ್ಲೆಯಲ್ಲೂ 75 ಕೆರೆಗಳನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಕರೆಯು ಈ ಹಿಂದೆ ಕೆರೆಗಳನ್ನು ಉಳಿಸಲು ಸಂರಕ್ಷಿಸಲು ಅವಿರತವಾಗಿ ಶ್ರಮಿಸಿದ ಎಲ್ಲ ನಾಗರಿಕರು ಮತ್ತು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ ಎಂದು ರಾಜೀವ್ ಚಂದ್ರಶೇಖರ್ ಅವರು ಹೇಳಿದರು. ಏಪ್ರಿಲ್ 12ರ ಮಂಗಳವಾರದಂದು ಬೆಂಗಳೂರಿನ ಗುಬ್ಬಲಾಳ, ಕೆಂಪಾಂಬುದಿಕೆರೆ ಮತ್ತು ಮೇಸ್ತ್ರಿಪಾಳ್ಯ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಪ್ರಧಾನಿಯವರ `ಅಮೃತ್ ಖೇರ್’ ದೂರದೃಷ್ಟಿಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಈಡೇರಿಸುತ್ತಿದೆ. ಈ ಹಿಂದಿನ ಸರಕಾರಗಳ ಅವಧಿಯಲ್ಲಿ ವ್ಯಾಪಕ ನಿರ್ಲಕ್ಷ್ಯದಿಂದ ನರಳುತ್ತಿದ್ದ ಮತ್ತು ನಿಧಾನಗತಿಯಲ್ಲಿ ಅವನತಿಯತ್ತ ಸಾಗುತ್ತಿದ್ದ ಕೆರೆಗಳ  ಅಭಿವೃದ್ಧಿ ಹಾಗೂ  ಪುನಶ್ಛೇತನ ಕಾರ್ಯಗಳನ್ನು ಸಕ್ರಿಯವಾಗಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ದಕ್ಷಿಣ ಶಾಸಕರೊಂದಿಗೆ ಸಚಿವರು ಗುಬ್ಬಲಾಳ ಕೆರೆಗೆ ಭೇಟಿ ನೀಡಿದರು. ಈ ಕೆರೆಯು ಅವಶೇಷಗಳು, ಅತಿಕ್ರಮಣದ ತೆರವು; ಒಡ್ಡುಗಳ ಬಲವರ್ಧನೆ, ಪಾದಚಾರಿ ಮಾರ್ಗ ನಿರ್ಮಾಣ ಇತ್ಯಾದಿ ಕ್ರಮಗಳಿಂದ ಗಮನಾರ್ಹ ಪರಿವರ್ತನೆಗೆ ಒಳಗಾಗಿದೆ. ಮಳೆಗಾಲದಲ್ಲಿ ಕೆರೆಯು ಸಂಪೂರ್ಣವಾಗಿ ಪುನಶ್ಚೇತನಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಕೆಲವು ವರ್ಷಗಳ ಹಿಂದೆ ಅವರು ಸಂಸದರಾಗಿದ್ದಾಗ ಕೆರೆಗಳನ್ನು ಉಳಿಸಲು ಪ್ರಾರಂಭಿಸಿದ ʻಯುನೈಟೆಡ್ ಬೆಂಗಳೂರುʼ ಅಭಿಯಾನದಲ್ಲಿ ಸಚಿವರನ್ನು ಸಕ್ರಿಯವಾಗಿ ಬೆಂಬಲಿಸಿದ ಹತ್ತಿರದ ನಿವಾಸಿಗಳು ಸ್ಥಳಕ್ಕೆ ತಲುಪಿ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು.
ಸಚಿವರು ತಮ್ಮ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ ಮೂಲಕ ಕೆಲವು ವರ್ಷಗಳ ಹಿಂದೆ ಶೋಚನೀಯ ಸ್ಥಿತಿಯಲ್ಲಿ ಸೆರೆಹಿಡಿಯಲಾದ ಕೆರೆಗಳ ಚಿತ್ರಗಳನ್ನು ಮತ್ತು ಕಾಯಕಲ್ಪದ ಬಳಿಕ ಇತ್ತೀಚಿಗೆ ಸೆರೆಹಿಡಿಯಲಾದ ಕೆರೆಗಳ ಚಿತ್ರಗಳನ್ನು ಅಪ್‌ಲೋಡ್‌ ಮಾಡಿದ್ದಾರೆ. ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಈ ಜಲಮೂಲಗಳನ್ನು ಸಂರಕ್ಷಿಸುವಲ್ಲಿ ಹಿಂದಿನ ಸರಕಾರಗಳ ನಿರ್ಲಕ್ಷ್ಯ ಧೋರಣೆಯನ್ನು ಸಚಿವರು ಟೀಕಿಸಿದರು.
ಐತಿಹಾಸಿಕ ಕೆಂಪಾಂಬುದಿ ಕೆರೆ ಕೆರೆಗೆ ಭೇಟಿ ನೀಡಿದ ಸಚಿವರು, ಇತ್ತೀಚೆಗೆ ನಿರ್ಮಿಸಲಾದ ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಪರಿಶೀಲಿಸಿದರು. ತೆರವು ಬಾಕಿ ಇರುವ ಅತಿಕ್ರಮಣಗಳನ್ನು ಸಚಿವರು ಪರಿಶೀಲಿಸಿದರು ಮತ್ತು ಈ ವಿಷಯದಲ್ಲಿ ನಡೆಯುತ್ತಿರುವ ವ್ಯಾಜ್ಯದ ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಚಿಕ್ಕಪೇಟೆ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಮತ್ತು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಮತ್ತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಜಲಮೂಲಕ್ಕೆ ಹೊಂದಿಕೊಂಡಿರುವ ಜಿಂಕೆ ಉದ್ಯಾನವನವನ್ನು ಮರು-ಅಭಿವೃದ್ಧಿಪಡಿಸುವ ಮೂಲಕ  ಇದನ್ನು ಪ್ರವಾಸಿಗರ ಆಕರ್ಷಣೀಯ ಸ್ಥಳವನ್ನಾಗಿ ಮಾಡಬಹುದೆಂದು ಅವರು ಸಲಹೆ ನೀಡಿದರು.
ಬಿಡಿಎ ಮತ್ತು ಖಾಸಗಿ ವ್ಯಕ್ತಿಗಳ ನಡುವಿನ ದೀರ್ಘಕಾಲದ ಕಾನೂನು ಹೋರಾಟದ ಕೇಂದ್ರಬಿಂದುವಾಗಿದ್ದ ಮೇಸ್ತ್ರಿಪಾಳ್ಯ ಕೆರೆಯನ್ನು ಪರಿಶೀಲಿಸುವ ಮೂಲಕ ಸಚಿವರು ತಮ್ಮ ಕೆರೆ ಭೇಟಿಯನ್ನು ಸಂಪನ್ನಗೊಳಿಸಿದರು. ಮೇಸ್ತ್ರಿಪಾಳ್ಯ ಕೆರೆಯು ದೀರ್ಘಕಾಲದಿಂದ ವಿವಾದದಲ್ಲಿತ್ತು, ಬಿಡಿಎ ಒಟ್ಟು 16.4 ಎಕರೆ ಕೆರೆಯಲ್ಲಿ 6.21 ಎಕರೆಯನ್ನು ಬಹುತೇಕ ಅತಿಕ್ರಮಿಸಿಕೊಂಡಿತ್ತು. ಪ್ರಾಧಿಕಾರವು ಅತಿಕ್ರಮಣ ಮಾಡಲಾದ ಜಾಗದಲ್ಲಿ ನಿರ್ಮಿಸಿದ ನಿವೇಶನಗಳನ್ನು ಆರು ಶಾಸಕರಿಗೆ ಹಂಚಿಕೆ ಮಾಡಿತ್ತು. ಈ ಪ್ರದೇಶದ ʻಶ್ವಾಸಕೋಶʼ ಎಂದೇ ಪರಿಗಣಿಸಲಾದ ಈ ಜಾಗವನ್ನು ಉಳಿಸಲು, ಕೋರಮಂಗಲದ ೩ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು 2005ರಲ್ಲಿ ಕೋರ್ಟ್‌ ಮೆಟ್ಟಿಲೇರಿ, ಬಿಡಿಎ 6.21 ಎಕರೆ ಭೂಮಿಯನ್ನು ಯಾರಿಗೂ ಮಂಜೂರು ಮಾಡಬಾರದು ಎಂದು ರಿಟ್ ಅರ್ಜಿ ಸಲ್ಲಿಸಿದ್ದರು.  ಆ ಸ್ಥಳದಲ್ಲಿ ಮುಕ್ತವಾಗಿ ಉಳಿಸಲು, ಉದ್ಯಾನವನ, ಆಟದ ಮೈದಾನ ಇತ್ಯಾದಿಗಳಿಗಾಗಿ ಸಂರಕ್ಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಿದರು. ಅಂತಿಮವಾಗಿ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ರಾಜೀವ್ ಚಂದ್ರಶೇಖರ್ ಅವರ ಸಾಮೂಹಿಕ ಪ್ರಯತ್ನಗಳಿಂದಾಗಿ, ಕೆರೆಯ ಪುನಶ್ಚೇತನ ಕಾರ್ಯಗಳ ಮೇಲ್ವಿಚಾರಣೆಗಾಗಿ ನಾಗರಿಕ ಮೇಲ್ವಿಚಾರಣಾ ಸಮಿತಿಯೊಂದನ್ನು ರಚಿಸಲಾಯಿತು. ಈ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸಚಿವರು ಬಂದಾಗ ಅವರನ್ನು ಸ್ವಾಗತಿಸಿದರು. ಅಂತಿಮ ಹಂತದಲ್ಲಿರುವ ಕೆರೆಯ ಪುನಶ್ಚೇತನ ಮತ್ತು ಕಾರ್ಯಗಳನ್ನು ಮಳೆಗಾಲಕ್ಕೆ ಮುಂಚಿತವಾಗಿ ಸಕಾಲದಲ್ಲಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು. ಹೊರಡುವ ಮುನ್ನ, ಈ ಸಂಬಂಧ ಯಾವುದೇ ಸಹಾಯದ ಅಗತ್ಯವಿದ್ದರೆ ತಮಗೆ ದೂರವಾಣಿ ಕರೆ ಮಾಡುವಂತೆ ಸೂಚಿಸಿದರು.


****


(Release ID: 1816170) Visitor Counter : 106


Read this release in: English