ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav

ಪೋಷಣ್ ಅಭಿಯಾನ 2.0, ಶಕ್ತಿ ಮತ್ತು ವಾತ್ಸಲ್ಯ ಅಭಿಯಾನ, ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸುತ್ತಿದೆ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ

Posted On: 04 APR 2022 7:16PM by PIB Bengaluru

ದೇಶಾದ್ಯಂತ ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ಪೋಷಣ್ 2.0, ಶಕ್ತಿ ಮತ್ತು ವಾತ್ಸಲ್ಯ ಎಂಬ ಮೂರು ಪ್ರಮುಖ ಅಭಿಯಾನಗಳನ್ನು ಜಾರಿ ಮಾಡಿದೆ. ಈ ಅಭಿಯಾನಗಳು ನಮ್ಮ ರಾಷ್ಟ್ರದ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಕ್ರಮಗಳನ್ನು ಶ್ರೇಣೀಕೃತ ಮತ್ತು ಸುವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿವೆ, ಇದು ಭಾರತದ ಜನಸಂಖ್ಯೆಯ ಶೇ.65ರಷ್ಟು ಜನರ ಜೀವನವನ್ನು ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ದಕ್ಷಿಣ ರಾಜ್ಯಗಳು ಮತ್ತು ಬಾಧ್ಯಸ್ಥರ ವಲಯ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ, ಮಾನ್ಯ ಸಚಿವರು, ಈ ಅಭಿಯಾನಗಳ ಗರಿಷ್ಠ ಪರಿಣಾಮವನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೇಶದ ಪ್ರತಿಯೊಂದು ವಲಯದ ರಾಜ್ಯ ಸರ್ಕಾರಗಳು ಮತ್ತು ಬಾಧ್ಯಸ್ಥರೊಂದಿಗೆ ಸರಣಿ ಸಭೆಗಳನ್ನು ಪ್ರಾರಂಭಿಸಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪ್ರಮುಖ ಉದ್ದೇಶ, ಮಹಿಳೆಯರು ಮತ್ತು ಮಕ್ಕಳಿಗೆ ಕೈಗೆಟುಕುವ, ಪ್ರವೇಶಾರ್ಹ, ವಿಶ್ವಾಸಾರ್ಹ ಮತ್ತು ಎಲ್ಲಾ ರೀತಿಯ ತಾರತಮ್ಯ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣವನ್ನು ಕಲ್ಪಿಸುವುದಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.

ಪೋಷಣ್ ಅಭಿಯಾನ 2.0, ಶಕ್ತಿ ಮತ್ತು ವಾತ್ಸಲ್ಯ ಅಭಿಯಾನವನ್ನು 15 ನೇ ಹಣಕಾಸು ಆಯೋಗದ ಅವಧಿಯಲ್ಲಿ 2021-22 ರಿಂದ 2025-26 ರವರೆಗೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.

ಈ ಮೂರು ಅಭಿಯಾನಗಳ ಬಗ್ಗೆ ಸವಿಸ್ತಾರವಾದ ವಿವರಣೆಯನ್ನು ನೀಡಿದ ಶ್ರೀಮತಿ ಸ್ಮೃತಿ ಇರಾನಿ, ಪೋಷಣ್ 2.0 ಗುಣಮಟ್ಟದ ಆಹಾರವನ್ನು ವಿತರಿಸುವ ಮೂಲಕ ಮಕ್ಕಳು, ಹದಿಹರೆಯದ ಬಾಲಕಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿನ ಅಪೌಷ್ಟಿಕತೆಯ ಸವಾಲುಗಳನ್ನು ಪರಿಹರಿಸಲು ಸಮಗ್ರ ಪೌಷ್ಟಿಕಾಂಶ ಬೆಂಬಲ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ಶಕ್ತಿ ಅಭಿಯಾನವು ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣವನ್ನು ಉತ್ತಮಪಡಿಸುವುದಲ್ಲದೆ, 'ಸಂಬಾಲ್' ಮತ್ತು 'ಸಾಮರ್ಥ್ಯ' ಎಂಬ ಎರಡು ಉಪ ಯೋಜನೆಗಳ ಮೂಲಕ ವ್ಯಾಪಕವಾದ ಲಿಂಗ ತಾರತಮ್ಯ ಮತ್ತು ತಾರತಮ್ಯಗಳನ್ನು ನಿವಾರಿಸುವ ಮಧ್ಯಸ್ಥಿಕೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಸಂಬಾಲ್ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿದ್ದರೆ, ಸಮರ್ಥ್ಯವು ಮಹಿಳೆಯರ ಸಬಲೀಕರಣಕ್ಕಾಗಿದೆ. ಹಾಲಿ ಚಾಲ್ತಿಯಲ್ಲಿರುವ ಏಕ ನಿಲುಗಡೆ ಕೇಂದ್ರಗಳು, ಮಹಿಳಾ ಸಹಾಯವಾಣಿ, ಬೇಟಿ ಬಚಾವೋ ಬೇಟಿ ಪಡಾವೋ ಮತ್ತು ನಾರಿ ಅದಾಲತ್ ಗಳನ್ನು ಶಕ್ತಿ ಅಭಿಯಾನ ಎಂಬ ಒಂದೇ ಛತ್ರಿಯಡಿ ತರಲಾಗಿದೆ ಎಂದು ಅವರು ಹೇಳಿದರು.

ಮಾನ್ಯ ಸಚಿವರು ವಾತ್ಸಲ್ಯ ಅಭಿಯಾನದ ವಿವರಗಳನ್ನು ನೀಡಿ, ಈ ಅಭಿಯಾನ ಭಾರತದ ಪ್ರತಿ ಮಗುವಿಗೆ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು. ಶೂನ್ಯ ಹಸಿವು (ಹಸಿವು ರಹಿತ), ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸಭ್ಯ ಕೆಲಸ ಮತ್ತು ಆರ್ಥಿಕ ಗುರಿ ಹಾಗೂ ಶಾಂತಿ, ನ್ಯಾಯ ಮತ್ತು ಬಲವಾದ ಸಂಸ್ಥೆಗಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು 2030ರ ವೇಳೆಗೆ ಸಾಧಿಸುವ ಗುರಿಯನ್ನೂ ಇದು ಹೊಂದಿದೆ ಎಂದರು.

ವಲಯ ಸಮ್ಮೇಳನದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ಪುದುಚೇರಿ ಮತ್ತು ತೆಲಂಗಾಣದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿ,  ಹೆಚ್ಚಿನ ಸಂಖ್ಯೆಯ ಅಂಗನವಾಡಿ ಕೇಂದ್ರಗಳು ಮತ್ತು ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ ಅಗತ್ಯವನ್ನು ಪ್ರತಿಪಾದಿಸಿದರು.  ಯುನಿಸೆಫ್, ಮಕ್ಕಳ ಹಕ್ಕುಗಳ ನ್ಯಾಸ (ಚೈಲ್ಡ್ ರೈಟ್ ಟ್ರಸ್ಟ್), ಮಹಿಳಾ ಸಮಕ್ಯ ಮುಂತಾದವುಗಳ ಪ್ರತಿನಿಧಿಗಳು, ಪಾಲ್ಗೊಂಡಿದ್ದ ಬಾಧ್ಯಸ್ಥರಲ್ಲಿ, ಕೆಲವರಾಗಿದ್ದು, ಮೂರು ಅಭಿಯಾನಗಳ ಉದ್ದೇಶಗಳನ್ನು ಸಾಧಿಸಲು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.

****


(Release ID: 1813634) Visitor Counter : 240


Read this release in: English