ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸೂಕ್ತ ಅವಧಿಯವರೆಗೆ ಸೂಕ್ತವಾದ ಔಷಧಗಳನ್ನು ತೆಗೆದುಕೊಂಡರೆ ಕ್ಷಯವನ್ನು ಸಂಪೂರ್ಣವಾಗಿ ಗುಣಪಡಿಸಬಹುದು - ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ನಿರ್ದೇಶಕರು
ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯ ರೋಗ ಪತ್ತೆ ಮತ್ತು ಕ್ಷಯರೋಗದ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತದೆ
"ಜನರು ಮುಂದೆ ಬಂದು, ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು"
ಮರುಕಳಿಸುವ ಕ್ಷಯ ಹೆಚ್ಚಾಗಿ ಧೂಮಪಾನಿಗಳು, ಮದ್ಯವ್ಯಸನಿಗಳು, ಅನಿಯಂತ್ರಿತ ಮಧುಮೇಹ ಹೊಂದಿರುವ ಜನರಲ್ಲಿ ಕಂಡುಬರುತ್ತದೆ; ಮರುಕಳಿಸುವ ಕ್ಷಯವನ್ನು ಸಹ ಗುಣಪಡಿಸಬಹುದಾಗಿದೆ
Posted On:
23 MAR 2022 12:54PM by PIB Bengaluru
2008ರಲ್ಲಿ, ಪುರಾತತ್ವಶಾಸ್ತ್ರಜ್ಞರು 9000 ವರ್ಷಗಳಷ್ಟು ಹಳೆಯದಾದ ಎರಡು ಅಸ್ಥಿಪಂಜರಗಳನ್ನು ಹೊರತೆಗೆದಿದ್ದರು, ಅವು ಕ್ಷಯರೋಗ ಅಥವಾ ಟಿಬಿಗೆ ಕಾರಣವಾಗುವ ಮೈಕೋಬ್ಯಾಕ್ಟೀರಿಯಂ ಟ್ಯೂಬಬರ್ ಕ್ಯುಲೋಸಿಸ್ ಸೋಂಕಿಗೆ ಒಳಗಾಗಿತ್ತು ಎಂಬುದು ಕಂಡುಬಂತು. ಈ ರೋಗಕಾರಕವು ಇಷ್ಟು ದೀರ್ಘಕಾಲದವರೆಗೆ ಹೇಗೆ ಉಳಿದುಕೊಂಡಿದೆ?
ಇಂದಿಗೂ, ಕ್ಷಯ ಇನ್ನೂ ಅತ್ಯಂತ ಮಾರಣಾಂತಿಕವಾದ ಸಾಂಕ್ರಾಮಿಕಗಳಲ್ಲಿ ಒಂದಾಗಿದೆ, ಇದು ಮಲೇರಿಯಾ ಅಥವಾ ಏಡ್ಸ್ ಗಿಂತ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತದೆ. ಜೊತೆಗೆ, ವಿಶ್ವದಾದ್ಯಂತದ ಒಟ್ಟು ಕ್ಷಯರೋಗ ಪ್ರಕರಣಗಳಲ್ಲಿ ಭಾರತದಲ್ಲಿ ಸುಮಾರು ಶೇ.26ರಷ್ಟಿದೆ. ನಾವು 2022ರ ಮಾರ್ಚ್ 24ರಂದು ವಿಶ್ವ ಕ್ಷಯರೋಗ ದಿನವನ್ನು ಆಚರಿಸುತ್ತಿರುವಾಗ, ರೋಗ ಮತ್ತು ಅದರ ಚಿಕಿತ್ಸೆಯ ಕುರಿತಾದ ಕೆಲವು ಪ್ರಮುಖ ಸಂಗತಿಗಳು ಇಲ್ಲಿವೆ.
ತಜ್ಞ ವೈದ್ಯರಾದ ಬೆಂಗಳೂರಿನ ರಾಷ್ಟ್ರೀಯ ಕ್ಷಯರೋಗ ಸಂಸ್ಥೆ (ಎನ್.ಟಿ.ಐ) ಯ ನಿರ್ದೇಶಕ ಡಾ. ಎನ್. ಸೋಮಶೇಖರ್ ಮತ್ತು ಎನ್.ಟಿ.ಐ ಬೆಂಗಳೂರಿನ ಮುಖ್ಯ ವೈದ್ಯಾಧಿಕಾರಿ (ಎಸ್.ಎ.ಜಿ) ಡಾ. ಸಿ. ರವಿಚಂದ್ರ ಅವರು ಪಿಐಬಿ ನಡೆಸಿದ ವೆಬಿನಾರ್ (https://youtu.be/X4OivuFPj60) ನಲ್ಲಿ ಮಾತನಾಡಿ, ಈ ಕೆಳಗಿನ ಮಾಹಿತಿಯನ್ನು ಹಂಚಿಕೊಂಡರು.
ಪ್ರ) ಕ್ಷಯರೋಗವನ್ನು ಗುಣಪಡಿಸಬಹುದೇ?
ಹೌದು, ರೋಗಿಯು ಬಿಡದೆ ಸೂಕ್ತ ಅವಧಿಗೆ ಸೂಕ್ತವಾದ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಂಡರೆ, ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಔಷಧಗಳ ಸೂಕ್ತ ಪರಿಪಾಲನೆ ಇಲ್ಲದಿದ್ದರೆ, ರೋಗಿಯು ಸಾವನ್ನಪ್ಪಬಹುದು. - ಡಾ. ಎನ್. ಸೋಮಶೇಖರ್, ನಿರ್ದೇಶಕರು, ಎನ್.ಟಿ.ಐ.
ಪ್ರ) ಕ್ಷಯರೋಗದ ಚಿಕಿತ್ಸೆಯು ಏಕೆ ಇಷ್ಟು ದೀರ್ಘ ಸಮಯ ತೆಗೆದುಕೊಳ್ಳುತ್ತದೆ?
ಸಂಪೂರ್ಣ ಚಿಕಿತ್ಸೆಗಾಗಿ, ರೋಗಿಯು ಕನಿಷ್ಠ ಆರು ತಿಂಗಳವರೆಗೆ ಕ್ಷಯರೋಗದ ಔಷಧಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಬೇಕು; ಕ್ಷಯ ರೋಗದ ಸ್ವರೂಪ, ವಿಧದ ಆಧಾರದ ಮೇಲೆ, ಈ ಚಿಕಿತ್ಸಾ ಅವಧಿಯು ದೀರ್ಘವಾಗಬಹುದು. ಏಕೆಂದರೆ ಮೈಕೋಬ್ಯಾಕ್ಟೀರಿಯಂ ಕ್ಷಯ ಎಂಬ ಬ್ಯಾಕ್ಟೀರಿಯಾ ನಿಧಾನವಾಗಿ ಬೆಳೆಯುತ್ತದೆ, ಬಹಳ ನಿಧಾನವಾಗಿ ವಿಭಜನೆಗೊಳ್ಳುತ್ತದೆ ಮತ್ತು ಅದು ಕೇವಲ ಸೋಂಕಿನಿಂದ ಕ್ಷಯ ರೋಗವಾಗಿ ಬೆಳೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದಕ್ಕಾಗಿಯೇ ದೀರ್ಘ ಚಿಕಿತ್ಸೆಯ ಅಗತ್ಯವಿರುತ್ತದೆ.
ಔಷಧಗಳನ್ನು ತೆಗೆದುಕೊಂಡ ಎರಡು ತಿಂಗಳ ನಂತರ ಪಡೆದ ಕಲ್ಚರ್ ಪರೀಕ್ಷೆ ಫಲಿತಾಂಶಗಳು ನೇತ್ಯಾತ್ಮಕವಾಗಿದ್ದರೂ ಸಹ, ಚಯಾಪಚಯ ಕ್ರಿಯೆಯಲ್ಲಿ ನಿಷ್ಕ್ರಿಯವಾಗಿರುವ ಸುಪ್ತ ಬ್ಯಾಸಿಲ್ಲಿ ರೋಗಿಯಲ್ಲಿ ಸಕ್ರಿಯವಾದಾಗ ಹಾನಿ ಉಂಟು ಮಾಡಬಹುದು. ಔಷಧದ ಶ್ರೇಣಿಯನ್ನು ನಿಯಮಿತವಾಗಿ ನಿರ್ವಹಿಸದಿದ್ದರೆ, ಸುಪ್ತ ಬ್ಯಾಕ್ಟೀರಿಯಾ ಸಕ್ರಿಯವಾದಾಗಲೆಲ್ಲಾ, ಕ್ಷಯ ಮರುಕಳಿಸುವ ಸಾಧ್ಯತೆಗಳೂ ಹೆಚ್ಚಿರುತ್ತದೆ. ಹೀಗಾಗಿ ಅಂತಹ ಯಾವುದೇ ಅಪಾಯ ತಪ್ಪಿಸಲು, ಔಷಧಗಳನ್ನು ದೀರ್ಘಕಾಲದವರೆಗೆ ಸೇವಿಸಬೇಕಾಗುತ್ತದೆ.
" ಕ್ಷಯದ ಸೋಂಕು ಇಂದು ನಮಗೆ ತಗುಲಿದರೂ, ಅದು ರೋಗವಾಗಿ ಪರಿವರ್ತನೆಯಾಲು ಕನಿಷ್ಠ ಆರು ತಿಂಗಳು ಬೇಕಾಗುತ್ತದೆ. ಇದು ಕೆಲವೊಮ್ಮೆ 60 ವರ್ಷಗಳವರೆಗೆ ವಿಸ್ತರಿಸಬಹುದು." - ಡಾ. ಎನ್. ಸೋಮಶೇಖರ್., ನಿರ್ದೇಶಕರು, ಎನ್.ಟಿ.ಐ.
ಪ್ರ) ಕ್ಷಯರೋಗದ ಚಿಕಿತ್ಸೆ
ಕ್ಷಯ ರೋಗದ ಔಷಧಗಳನ್ನು ರೋಗಿಗಳಿಗೆ ನೇರವಾಗಿ ನೀಡಲಾಗುವುದಿಲ್ಲ; ಅವುಗಳನ್ನು ಮೇಲ್ವಿಚಾರಣೆಯಲ್ಲಿ ನೀಡಲಾಗುತ್ತದೆ, ಇದನ್ನು ನೇರ ನಿಗಾ ಚಿಕಿತ್ಸೆ, ಶಾರ್ಟ್-ಕೋರ್ಸ್ (ಡಾಟ್ಸ್) ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಏಕೆಂದರೆ, ಎಲ್ಲಾ ದೀರ್ಘಕಾಲದ ಕಾಯಿಲೆಗಳಂತೆ, ರೋಗಲಕ್ಷಣಗಳು ಕಡಿಮೆಯಾಗುವವರೆಗೆ ಮಾತ್ರ ಕ್ಷಯರೋಗದ ಔಷಧಗಳನ್ನು ತೆಗೆದುಕೊಳ್ಳಬೇಕು. ಅದರ ನಂತರ ಔಷಧಗಳನ್ನು ಮುಂದುವರಿಸಬಾರದು. ಹೀಗಾಗಿ ಚಿಕಿತ್ಸೆಗೆ ರೋಗಿ-ಕೇಂದ್ರಿತ ವಿಧಾನದ ಅಗತ್ಯವಿದೆ. ಈ ವ್ಯವಸ್ಥೆಯ ಅಡಿಯಲ್ಲಿ, 'ಚಿಕಿತ್ಸೆಯ ಬೆಂಬಲಿಗರು' ಔಷಧಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಮತ್ತು ರೋಗಿಯು ಪ್ರತಿದಿನ ಭೇಟಿ ನೀಡಿ ಅವರಿಂದ ಔಷಧಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಕ್ಷಯ ರೋಗಿಗಳಿಗೆ ಸರ್ಕಾರದ ಬೆಂಬಲ
ಪ್ರತಿಯೊಂದು ಕ್ಷಯರೋಗದ ಔಷಧ ಮತ್ತು ಕ್ಷಯರೋಗದ ರೋಗ ಪತ್ತೆ ವಿಶೇಷವಾಗಿ ಸಾರ್ವಜನಿಕ ವಲಯದಲ್ಲಿ ಉಚಿತವಾಗಿರುತ್ತದೆ. ರೋಗಿಯು ಯಾವುದೇ ಹಣ ಖರ್ಚು ಮಾಡುವ ಅಗತ್ಯವಿರುವುದಿಲ್ಲ. ಜನರು ಮುಂದೆ ಬಂದು ಸರ್ಕಾರದಿಂದ ಉಚಿತವಾಗಿ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಪಡೆಯಬೇಕು. ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ರೋಗ ಪತ್ತೆ ಮಾಡಿದರೂ ಚಿಕಿತ್ಸೆ ಮತ್ತು ಸೌಲಭ್ಯಗಳು ಒಂದೇ ಆಗಿರುತ್ತವೆ - ಡಾ. ಎನ್. ಸೋಮಶೇಖರ್., ನಿರ್ದೇಶಕರು, ಎನ್.ಟಿಐ
ಭಾರತ ಸರ್ಕಾರವು ಎಲ್ಲಾ ನೋಂದಾಯಿತ ಮತ್ತು ಅಧಿಸೂಚಿತ ಕ್ಷಯ ರೋಗಿಗಳಿಗೆ ನೇರ ಸವಲತ್ತು ವರ್ಗಾವಣೆಯ ಮೂಲಕ ಪ್ರತಿ ತಿಂಗಳು 500 ರೂ.ಗಳನ್ನು ನೀಡುತ್ತದೆ. ಒಂದೊಮ್ಮೆ ಚಿಕಿತ್ಸೆಯು ಎರಡು ವರ್ಷಗಳವರೆಗೆ ವಿಸ್ತರಿಸಿದರೂ ಸಹ ಚಿಕಿತ್ಸೆಯ ಅವಧಿಯವರೆಗೆ ಈ ಸವಲತ್ತನ್ನು ಒದಗಿಸಲಾಗುತ್ತದೆ.
ಮೂಲತಃ ರೋಗಿಗಳಿಗೆ ಪೌಷ್ಟಿಕ ಆಹಾರವನ್ನು ಖಾತ್ರಿಪಡಿಸಿಕೊಳ್ಳಲು ಹಣಕಾಸಿನ ಬೆಂಬಲವನ್ನು ಒದಗಿಸಲಾಗುತ್ತದೆ. ಹೆಚ್ಚಿನ ಪೌಷ್ಟಿಕ ಆಹಾರವು ಚಿಕಿತ್ಸೆಯ ಸಮಯದಲ್ಲಿ ಉಂಟಾಗುವ ಪ್ರತಿಕೂಲ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ರೋಗಿಗಳನ್ನು ನೋಡಿಕೊಳ್ಳಲು ಮತ್ತು ಚಿಕಿತ್ಸೆಯನ್ನು ತಪ್ಪದೇ ಪೂರ್ಣಗೊಳಿಸಲು ನೆರವಾಗಲು ಸರ್ಕಾರವು ಈ ಬೆಂಬಲವನ್ನು ಒದಗಿಸುತ್ತದೆ.
ಸರ್ಕಾರವು ಸಾಮಾನ್ಯವಾಗಿ ರೋಗಿಗಳಿಗೆ ಔಷಧ ಒದಗಿಸುವ ಮತ್ತು ಔಷಧ ಸೇವನೆಯ ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಹೊತ್ತ ಚಿಕಿತ್ಸೆಯ ಬೆಂಬಲಿಗರಿಗೆ ಪ್ರೋತ್ಸಾಹಕಗಳನ್ನು ಸಹ ನೀಡುತ್ತದೆ.
ರೋಗಿಯು ಹೀಗೆ ಬಯಸುತ್ತಾನೆಯೋ, ಆಕೆ ಅಥವಾ ಆತ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದು, ಆದರೆ ಸೂಕ್ತ ಮೇಲ್ವಿಚಾರಣೆಯಲ್ಲಿ ಅವರು ಚಿಕಿತ್ಸೆಯ ಕೋರ್ಸ್ ಅನ್ನು ಪೂರ್ಣಗೊಳಿಸಬೇಕು.
ಖಾಸಗಿ ವಲಯದಲ್ಲೂ, ಸರ್ಕಾರವು ಖಾಸಗಿ ವೈದ್ಯರು ಮತ್ತು ನರ್ಸಿಂಗ್ ಹೋಂಗಳಿಗೆ ಗೌರವಧನದ ರೂಪದಲ್ಲಿ ಪ್ರೋತ್ಸಾಹಕಗಳನ್ನು ಒದಗಿಸುತ್ತದೆ.
ಪ್ರ) ಕ್ಷಯರೋಗ ಮರುಕಳಿಸಬಹುದೇ?
ಚೇತರಿಸಿಕೊಂಡ ಸುಮಾರು ಶೇ.10 ರಿಂದ 12ರಷ್ಟು ರೋಗಿಗಳಲ್ಲಿ ಮತ್ತೆ ಕ್ಷಯರೋಗ ಕಾಣಿಸಿಕೊಳ್ಳಬಹುದು; ಇದನ್ನು ಮರುಕಳಿಸಿದ ಕ್ಷಯ /ಸಂಚಯಿತ ಕ್ಷಯ ಎಂದು ಕರೆಯಲಾಗುತ್ತದೆ. ಇದು ಧೂಮಪಾನಿಗಳು, ಮದ್ಯವ್ಯಸನಿಗಳು ಮತ್ತು ಅನಿಯಂತ್ರಿತ ಮಧುಮೇಹ ಹೊಂದಿರುವ ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದಕ್ಕೆ ಅಪೌಷ್ಟಿಕತೆಯೂ ಮತ್ತೊಂದು ಕಾರಣವಾಗಿದೆ.
ಇದಕ್ಕಾಗಿಯೇ , ಚಿಕಿತ್ಸೆ ಪೂರ್ಣಗೊಂಡ ನಂತರವೂ, ಯಾವುದೇ ರೋಗ ಲಕ್ಷಣವಿಲ್ಲದಿದ್ದರೂ ಸಹ, ರೋಗಿಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಎರಡು ವರ್ಷಗಳ ಅವಧಿವರೆಗೆ ಚಿಕಿತ್ಸೆಯ ನಂತರದ ಅನುಸರಣೆಗಾಗಿ ಭೇಟಿ ಮಾಡಲಾಗುತ್ತದೆ.
ಈ ಅವಧಿಯಲ್ಲಿ ಯಾವುದೇ ಕ್ಷಯ ರೋಗಲಕ್ಷಣಗಳು ಕಂಡುಬಂದರೆ, ರೋಗಿಯು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಮರುಕಳಿಸುವ ಕ್ಷಯರೋಗವನ್ನು ಸಹ ಗುಣಪಡಿಸಬಹುದು -ಡಾ.ಎನ್. ಸೋಮಶೇಖರ್., ನಿರ್ದೇಶಕರು, ಎನ್.ಟಿಐ
ಪ್ರ) ಕ್ಷಯ ಮತ್ತು ಕೋವಿಡ್-19 ನಡುವೆ ಏನಾದರೂ ಸಂಬಂಧವಿದೆಯೇ?
ಇಲ್ಲಿಯವರೆಗೆ ಕೋವಿಡ್-19 ಮತ್ತು ಕ್ಷಯರೋಗದ ನಡುವೆ ನೇರ ಸಂಬಂಧದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ ಕುತೂಹಲ ಇರುವ ಏಕೈಕ ಕ್ಷೇತ್ರ ಹೆಚ್ಚುವರಿ ಪಲ್ಮನರಿ ಕ್ಷಯ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ. ಎಲ್ಲೆಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ಇವೆಯೋ ಅಲ್ಲಿ, ಹೆಚ್ಚಿನ ಶ್ವಾಸಕೋಶದ ಕ್ಷಯ ಪ್ರಕರಣಗಳೂ ವರದಿಯಾಗುತ್ತಿವೆ. - ಡಾ.ಸಿ. ರವಿಚಂದ್ರ, ಮುಖ್ಯ ವೈದ್ಯಾಧಿಕಾರಿ, ಎನ್.ಟಿ.ಐ.
ಕೋವಿಡ್-19 ರಾಷ್ಟ್ರೀಯ ಕ್ಷಯರೋಗ ಕಾರ್ಯಕ್ರಮದ ಮೇಲೆ ಹೆಚ್ಚಿನ ಪರಿಣಾಮ ಬೀರಿತು, ಏಕೆಂದರೆ ಸಾಂಕ್ರಾಮಿಕ ರೋಗ ಮತ್ತು ಅದರ ಪರಿಣಾಮವಾಗಿ ಲಾಕ್ ಡೌನ್ ಗಳಿಂದಾಗಿ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುವುದನ್ನು ನಿಲ್ಲಿಸಿದರು ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಕ್ಷಯರೋಗಕ್ಕೆ ನಿಯೋಜಿಸಲಾದ ಸಂಪನ್ಮೂಲಗಳು ಮತ್ತು ಸಿಬ್ಬಂದಿಯನ್ನು ಕೋವಿಡ್ -19 ನಿರ್ವಹಣೆಗೆ ನಿಯೋಜಿಸಲಾಯಿತು ನಂತರ ಗಂಭೀರ ಪರಿಣಾಮಗಳಿವೆ.
ಎರಡೂ ರೋಗಗಳಿಗೆ ರೋಗಲಕ್ಷಣವೂ ಒಂದೇ ಆಗಿರುತ್ತದೆ - ಕೆಮ್ಮು. ಆದ್ದರಿಂದ ಕೋವಿಡ್ -19 ರ ಆರಂಭಿಕ ಹಂತದಲ್ಲಿ, ಭಾರತ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿ, ಅಲ್ಲಿ ಕೋವಿಡ್ ನ ಯಾವುದೇ ರೋಗಲಕ್ಷಣ ವರದಿ ಮಾಡುವ ರೋಗಿಗಳಿಗೆ ಕ್ಷಯರೋಗಕ್ಕಾಗಿಯೂ ಪರೀಕ್ಷೆ ನಡೆಸಬೇಕು ಎಂದು ತಿಳಿಸಿತ್ತು.
ಅದರ ಹೊರತಾಗಿಯೂ, ಕ್ಷಯರೋಗದ ರೋಗನಿರ್ಣಯವು ತೀವ್ರವಾಗಿ ಕಡಿಮೆಯಾಯಿತು. ಜನರು ಕೆಮ್ಮು ಇದ್ದರೂ ಸಹ, ಕೋವಿಡ್ ವರದಿ ಬರುವ ಅಥವಾ ಪ್ರತ್ಯೇಕವಾಗಿರಬೇಕು ಎಂಬ ಭಯದಿಂದ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ಇದು ಇತರ ಕುಟುಂಬ ಸದಸ್ಯರಿಗೂ ಸೋಂಕು ಹರಡಲು ದಾರಿ ಮಾಡಿಕೊಟ್ಟಿತು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನೇಕ ರೋಗಿಗಳು ತೊಂದರೆ ಅನುಭವಿಸಿದರು, ಇದು ಹಲವು ಕ್ಷಯ ರೋಗಿಗಳ ಸಾವಿಗೂ ಕಾರಣವಾಯಿತು ಎಂದು ಎನ್.ಟಿ.ಐನ ವೈದ್ಯರು ತಿಳಿಸಿದರು.
ಪ್ರ) ಕ್ಷಯರೋಗದ ಔಷಧಗಳಿಂದ ಯಾವುದೇ ಅಡ್ಡಪರಿಣಾಮಗಳಿವೆಯೇ?
ಯಾವುದೇ ಔಷಧಯನ್ನು ಹೆಚ್ಚು ಸಮಯದವರೆಗೆ ತೆಗೆದುಕೊಂಡರೆ ವಾಕರಿಕೆ ಉಂಟಾಗುತ್ತದೆ - ಡಾ.ಎನ್.ಸೋಮಶೇಖರ್. ನಿರ್ದೇಶಕರು, ಎನ್.ಟಿಐ
ಸಾಮಾನ್ಯ ಅಡ್ಡಪರಿಣಾಮಗಳು ಮತ್ತು ಪರಿಹಾರಗಳು:
ತುರಿಕೆ - ಮಾಯಿಶ್ಚರೈಸರ್ ಅಥವಾ ಕೊಬ್ಬರಿ ಎಣ್ಣೆಯ ಬಳಕೆಯು ಸಹಾಯ ಮಾಡುತ್ತದೆ
ಜಠರ ಕರುಳಿನ ಉರಿಯೂತ - ಖಾಲಿ ಹೊಟ್ಟೆಯಲ್ಲಿ ಕ್ಷಯರೋಗದ ಔಷಧಿಗಳನ್ನು ತೆಗೆದುಕೊಳ್ಳಬಾರದು; ಯಾವಾಗಲೂ ಅವುಗಳನ್ನು ಆಹಾರ ಸೇವಿಸಿದ ನಂತರ ತೆಗೆದುಕೊಳ್ಳಬೇಕು.
ದೃಷ್ಟಿ ಮಂಕಾಗುವುದು - ಅಲ್ಲಿ ಹಸಿರು ಎಲೆಯು ರೋಗಿಗೆ ಕೆಂಪು ಬಣ್ಣದಲ್ಲಿ ಕಾಣುತ್ತದೆ; ಬಣ್ಣದಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ತಕ್ಷಣವೇ ವೈದ್ಯಾಧಿಕಾರಿಗಳಿಗೆ ವರದಿ ಮಾಡಬೇಕು, ಅವರು ನೇತ್ರತಜ್ಞರ ಬಳಿಗೆ ಕಳುಹಿಸುತ್ತಾರೆ.
ಕೆಲವು ಕ್ಷಯರೋಗದ ಔಷಧಗಳು ಶ್ರವಣ ಸಾಮರ್ಥ್ಯ ಕುಂಟಿತಗೊಳಿಸುತ್ತವೆ ಮತ್ತು ಥೈರಾಯ್ಡ್ ಅಸ್ವಸ್ಥತೆಗೆ ಕಾರಣವಾಗುತ್ತವೆ, ಇದು ಕೀಲು ನೋವಿಗೂ ಕಾರಣವಾಗಬಹುದು.
ನಮ್ಮ ದೇಹವು ಅದಕ್ಕೆ ಹೊಂದಿಕೊಳ್ಳುವವರೆಗೆ ಎಲ್ಲಾ ಅಡ್ಡಪರಿಣಾಮಗಳು ಎರಡು ತಿಂಗಳಲ್ಲಿ ಸ್ಥಿರವಾಗುತ್ತವೆ. ವೈದ್ಯರ ಸಲಹೆವರೆಗೆ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಬೇಕು - ಡಾ.ಎನ್. ಸೋಮಶೇಖರ್.
ಸೂಚನೆ: ಇದು ವೆಬಿನಾರ್ ನಲ್ಲಿ ನಮ್ಮ ಪತ್ರಿಕಾ ಪ್ರಕಟಣೆಗಳ ಎರಡನೇ ಭಾಗವಾಗಿದೆ. ದಯವಿಟ್ಟು ಮೊದಲ ಭಾಗವನ್ನೂ ಇಲ್ಲಿ ಕ್ಲಿಕ್ ಮಾಡಿ ಓದಿ
****
(Release ID: 1808725)
Visitor Counter : 2242