ಪ್ರಧಾನ ಮಂತ್ರಿಯವರ ಕಛೇರಿ

ಕೃಷಿ ವಲಯದ ಮೇಲೆ  ʻಕೇಂದ್ರ ಬಜೆಟ್-2022ʼರ ಸಕಾರಾತ್ಮಕ ಪರಿಣಾಮಗಳ ಬಗ್ಗೆ ವೆಬಿನಾರ್‌ ಉದ್ದೇಶಿಸಿ ಮಾತನಾಡಿದ ಪ್ರಧಾನಿ


"ಕೇವಲ 6 ವರ್ಷಗಳಲ್ಲಿ ಕೃಷಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ರೈತರ ಕೃಷಿ ಸಾಲ ಪೂರೈಕೆಯೂ ಎರಡೂವರೆ ಪಟ್ಟು ಹೆಚ್ಚಾಗಿದೆ" ಎಂದು ಹೇಳಿದರು

"2023 ಅನ್ನು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼವೆಂದು ಗುರುತಿಸಿರುವುದರಿಂದ, ಕಾರ್ಪೊರೇಟ್ ಜಗತ್ತು ಭಾರತೀಯ ಸಿರಿಧಾನ್ಯಗಳನ್ನು ಬ್ರಾಂಡಿಂಗ್ ಮಾಡಲು ಮತ್ತು ಉತ್ತೇಜಿಸಲು ಮುಂದೆ ಬರಬೇಕು"

"ಕೃತಕ ಬುದ್ಧಿಮತ್ತೆಯು 21 ನೇ ಶತಮಾನದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ"

"ಕಳೆದ 3-4 ವರ್ಷಗಳಲ್ಲಿ, ದೇಶದಲ್ಲಿ 700 ಕ್ಕೂ ಹೆಚ್ಚು ಕೃಷಿ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ"

"ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಹೊಸ ಸಚಿವಾಲಯವನ್ನು ಸರ್ಕಾರ ರಚಿಸಿದೆ. ಸಹಕಾರಿ ಸಂಘಗಳನ್ನು ಯಶಸ್ವಿ ವ್ಯಾಪಾರ ಉದ್ಯಮವನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದು ನಿಮ್ಮ ಗುರಿಯಾಗಿರಬೇಕು"

Posted On: 24 FEB 2022 11:48AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೃಷಿ ಕ್ಷೇತ್ರದ ಮೇಲೆ ಕೇಂದ್ರ ಬಜೆಟ್-2022 ಸಕಾರಾತ್ಮಕ ಪರಿಣಾಮಗಳ ಬಗ್ಗೆ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. ಕೃಷಿ ವಲಯವನ್ನು ಬಲಪಡಿಸಲು ಬಜೆಟ್ ಯಾವ ರೀತಿಯಲ್ಲಿ ಕೊಡುಗೆ ನೀಡುತ್ತದೆ ಎಂಬುದನ್ನು ಅವರು ಚರ್ಚಿಸಿದರು. 'ಸ್ಮಾರ್ಟ್ ಕೃಷಿ-ಅನುಷ್ಠಾನದ ಕಾರ್ಯತಂತ್ರಗಳುʼ ವಿಷಯದ ಮೇಲೆ ವೆಬಿನಾರ್‌ ಕೇಂದ್ರೀಕೃತವಾಗಿತ್ತು. ಸಂಬಂಧಪಟ್ಟ ಕೇಂದ್ರ ಸಚಿವರು, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಕೈಗಾರಿಕೆ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ದೇಶದ ವಿವಿಧ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಾರ್ಯಕ್ರಮದ ಆದಿಯಲ್ಲಿ ಪ್ರಧಾನಮಂತ್ರಿಯವರು  ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಆರಂಭದ ಮೂರನೇ ವಾರ್ಷಿಕೋತ್ಸವದ ಬಗ್ಗೆ ಪ್ರಸ್ತಾಪಿಸಿದರು. " ಯೋಜನೆಯು ದೇಶದ ಸಣ್ಣ ರೈತರಿಗೆ ಸದೃಢ ಬೆಂಬಲವಾಗಿ ಮಾರ್ಪಟ್ಟಿದೆ. ಯೋಜನೆಯಡಿ 11 ಕೋಟಿ ರೈತರಿಗೆ ಸುಮಾರು 1.75 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿದೆ", ಎಂದು ಅವರು ಹೇಳಿದರು. ಬೀಜದಿಂದ ಮಾರುಕಟ್ಟೆಯವರೆಗೆ ವ್ಯಾಪಿಸಿರುವ ಅನೇಕ ಹೊಸ ವ್ಯವಸ್ಥೆಗಳ ಬಗ್ಗೆ ಮತ್ತು ಕೃಷಿ ವಲಯದ ಹಳೆಯ ವ್ಯವಸ್ಥೆಗಳಲ್ಲಿನ ಸುಧಾರಣೆಗಳ ಬಗ್ಗೆಯೂ ಪ್ರಧಾನಿ ಮಾತನಾಡಿದರು. "ಕೇವಲ 6 ವರ್ಷಗಳಲ್ಲಿ ಕೃಷಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ರೈತರ ಕೃಷಿ ಸಾಲ ನೀಡಿಕೆಯನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ" ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ಸಂಕಷ್ಟದ ಸಮಯದಲ್ಲಿ, ವಿಶೇಷ ಅಭಿಯಾನದ ಭಾಗವಾಗಿ 3 ಕೋಟಿ ರೈತರಿಗೆ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳನ್ನು (ಕೆಸಿಸಿ) ನೀಡಲಾಯಿತು ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರುವ ರೈತರಿಗೂ ʻಕೆಸಿಸಿʼ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಅವರು ಗಮನ ಸೆಳೆದರು. ಸಣ್ಣ ರೈತರಿಗೆ ಹೆಚ್ಚಿನ ಪ್ರಯೋಜನವಾಗಲು ಸೂಕ್ಷ್ಮ ನೀರಾವರಿ ಜಾಲವನ್ನು ಸಹ ಬಲಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಯತ್ನಗಳ ಫಲವಾಗಿ ರೈತರು ದಾಖಲೆಯ ಉತ್ಪಾದನೆಯನ್ನು ನೀಡುತ್ತಿದ್ದಾರೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖರೀದಿಯಲ್ಲೂ ಹೊಸ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು. ಸಾವಯವ ಕೃಷಿಗೆ ಪ್ರೋತ್ಸಾಹದಿಂದಾಗಿ ಸಾವಯವ ಉತ್ಪನ್ನಗಳ ಮಾರುಕಟ್ಟೆ ಮೌಲ್ಯ 11000 ಕೋಟಿ ರೂ. ತಲುಪಿದೆ, 6 ವರ್ಷಗಳ ಹಿಂದೆ 2000 ಕೋಟಿ ರೂ.ಗಳಷ್ಟಿದ್ದ ಇವುಗಳ ರಫ್ತು ಪ್ರಸ್ತುತ 7000 ಕೋಟಿ ರೂಪಾಯಿಗಳಿಗೆ ಏರಿದೆ ಎಂದು ಪ್ರಧಾನಿ ಹೇಳಿದರು.

ಕೃಷಿಯನ್ನು ಆಧುನಿಕ ಮತ್ತು ʻಸ್ಮಾರ್ಟ್ʼ ಆಗಿ ಮಾಡಲು ಬಜೆಟ್ ಪ್ರಸ್ತಾಪಿಸುವ ಏಳು ಮಾರ್ಗಗಳ ಬಗ್ಗೆ ಪ್ರಧಾನಿ ವಿವರಿಸಿದರು. ಮೊದಲನೆಯದಾಗಿ, ಗಂಗಾ ನದಿಯ ಎರಡೂ ದಡದಲ್ಲಿ 5 ಕಿ.ಮೀ.ಗಳ ವ್ಯಾಪ್ತಿಯೊಳಗೆ ಸಮರೋಪಾದಿಯಲ್ಲಿ ನೈಸರ್ಗಿಕ ಕೃಷಿಯನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ. ಎರಡನೆಯದಾಗಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ರೈತರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಮೂರನೆಯದಾಗಿ, ಖಾದ್ಯ ತೈಲದ ಆಮದನ್ನು ಕಡಿಮೆ ಮಾಡಲು ʻಮಿಷನ್ ಆಯಿಲ್ ಪಾಮ್ʼ ಅನ್ನು ಬಲಪಡಿಸಲು ಒತ್ತು ನೀಡಲಾಗಿದೆ. ನಾಲ್ಕನೆಯದಾಗಿ, ಕೃಷಿ ಉತ್ಪನ್ನಗಳ ಸಾಗಣೆಗಾಗಿ ಪ್ರಧಾನಮಂತ್ರಿ ಘತಿ-ಶಕ್ತಿ ಯೋಜನೆಯ ಮೂಲಕ ಹೊಸ ಸರಕುಸಾಗಣೆ ವ್ಯವಸ್ಥೆಗಳನ್ನು ಮಾಡಲಾಗುವುದು. ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಐದನೇ ಪರಿಹಾರವೆಂದರೆ ಕೃಷಿ ತ್ಯಾಜ್ಯ ನಿರ್ವಹಣೆಯ ಉತ್ತಮ ಸಂಘಟನೆ ಮತ್ತು ತ್ಯಾಜ್ಯದಿಂದ ಇಂಧನ ಪರಿಹಾರಗಳ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು. ಆರನೆಯದಾಗಿ, 1.5 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳು ನಿಯಮಿತ ಬ್ಯಾಂಕಿಂಗ್ ನಂತಹ ಸೇವೆಗಳನ್ನು ಒದಗಿಸಲಿವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಏಳನೇಯದಾಗಿ, ಕೌಶಲ್ಯ ಅಭಿವೃದ್ಧಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಧುನಿಕ ಕಾಲದ ಬೇಡಿಕೆಗಳಿಗೆ ಅನುಗುಣವಾಗಿ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಪಠ್ಯಕ್ರಮವನ್ನು ಬದಲಾಯಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

2023ನೇ ವರ್ಷವನ್ನು ʻಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷʼ ಎಂದು ಗುರುತಿಸಿರುವ ವಿಷಯವನ್ನು ತಿಳಿಸಿದ ಪ್ರಧಾನಮಂತ್ರಿಯವರು, ಭಾರತೀಯ ಸಿರಿಧಾನ್ಯಗಳನ್ನು ಬ್ರಾಂಡ್ ಮಾಡುವಲ್ಲಿ ಮತ್ತು ಉತ್ತೇಜಿಸುವಲ್ಲಿ ಕಾರ್ಪೊರೇಟ್ ಜಗತ್ತು ಮುಂದೆ ಬರಬೇಕು ಎಂದು ಕರೆ ನೀಡಿದರು. ಭಾರತೀಯ ಸಿರಿಧಾನ್ಯಗಳ ಗುಣಮಟ್ಟ ಮತ್ತು ಪ್ರಯೋಜನಗಳನ್ನು ಜನಪ್ರಿಯಗೊಳಿಸಲು ವಿಚಾರ ಸಂಕಿರಣಗಳು ಮತ್ತು ಇತರ ಪ್ರಚಾರ ಚಟುವಟಿಕೆಗಳನ್ನು ಆಯೋಜಿಸುವಂತೆ ಅವರು ವಿದೇಶದಲ್ಲಿರುವ ಪ್ರಮುಖ ಭಾರತೀಯ ನಿಯೋಗಗಳಿಗೆ ಸೂಚಿಸಿದರು. ಪರಿಸರ ಸ್ನೇಹಿ ಜೀವನಶೈಲಿ ಹಾಗೂ ನೈಸರ್ಗಿಕ, ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ಒದಗಿಸಲು ಜನಜಾಗೃತಿ ಹೆಚ್ಚಿಸುವಂತೆ ಪ್ರಧಾನಿ ಕರೆ ನೀಡಿದರು. ನೈಸರ್ಗಿಕ ಕೃಷಿ ಉತ್ತೇಜನಕ್ಕಾಗಿ ತಲಾ ಒಂದು ಗ್ರಾಮವನ್ನು ದತ್ತು ತೆಗೆದುಕೊಳ್ಳುವ ಮೂಲಕ ನೈಸರ್ಗಿಕ ಕೃಷಿಯ ಬಗ್ಗೆ ಜಾಗೃತಿ ಮೂಡಿಸಲು ಕೃಷಿ ವಿಕಾಸ ಕೇಂದ್ರಗಳಿಗೆ (ಕೆವಿಕೆ) ಅವರು ಸಲಹೆ ನೀಡಿದರು.

ಭಾರತದಲ್ಲಿ ಮಣ್ಣಿನ ಪರೀಕ್ಷೆ ಸಂಸ್ಕೃತಿಯನ್ನು ವ್ಯಾಪಕವಾಗಿ ಬೆಳೆಸಬೇಕಾದ ಅಗತ್ಯವನ್ನು ಶ್ರೀ ಮೋದಿ ಒತ್ತಿ ಹೇಳಿದರು. ʻಮಣ್ಣಿನ ಆರೋಗ್ಯ ಕಾರ್ಡ್ʼಗಳ ಮೇಲೆ ಸರ್ಕಾರದ ಗಮನವನ್ನು ವಿಶೇಷವಾಗಿ ಪ್ರಸ್ತಾಪಿಸಿದ ಅವರು, ನಿಯಮಿತ ಮಧ್ಯಂತರ ಅವಧಿಯಲ್ಲಿ ಮಣ್ಣಿನ ಪರೀಕ್ಷಾ ಅಭ್ಯಾಸಕ್ಕೆ ಅನುವುಮಾಡಿಕೊಡಲು ಸ್ಟಾರ್ಟಪ್‌ಗಳು ಮುಂದೆ ಬರಬೇಕು ಎಂದು ಕರೆ ನೀಡಿದರು.

ನೀರಾವರಿ ಕ್ಷೇತ್ರದಲ್ಲಿನ ಆವಿಷ್ಕಾರಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, 'ಪ್ರತಿ ಹನಿಗೆ, ಹೆಚ್ಚು ಬೆಳೆ' ವಿಚಾರವಾಗಿ ಸರ್ಕಾರದ ನೀಡುತ್ತಿರುವ ಗಮನದ ಬಗ್ಗೆ ಒತ್ತಿ ಹೇಳಿದರು. ಇದರಲ್ಲಿಯೂ ಕಾರ್ಪೊರೇಟ್ ಜಗತ್ತಿಗೆ ಅನೇಕ ಸಾಧ್ಯತೆಗಳಿವೆ ಎಂದು ಅವರು ಹೇಳಿದರು. ಬುಂದೇಲ್‌ಖಂಡ್ ಪ್ರದೇಶದ ಕೆನ್-ಬೆಟ್ವಾ ಸಂಪರ್ಕ ಪರಿಯೋಜನೆಯಿಂದ ಉಂಟಾಗುವ ಪರಿವರ್ತನೆಯನ್ನು ಅವರು ಉಲ್ಲೇಖಿಸಿದರು. ಬಾಕಿ ಉಳಿದಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಶ್ರೀ ಮೋದಿ ಅವರು ಪುನರುಚ್ಚರಿಸಿದರು.

ಕೃತಕ ಬುದ್ಧಿಮತ್ತೆಯು 21ನೇ ಶತಮಾನದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರವೃತ್ತಿಯನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಕೃಷಿಯಲ್ಲಿ ಡ್ರೋನ್‌ಗಳ ಬಳಕೆಯನ್ನು ಹೆಚ್ಚಿಸುವುದು ಬದಲಾವಣೆಯ ಭಾಗವಾಗಿದೆ. "ನಾವು ಕೃಷಿ-ಸ್ಟಾರ್ಟಪ್‌ಗಳನ್ನು ಉತ್ತೇಜಿಸಿದಾಗ ಮಾತ್ರ ಡ್ರೋನ್ ತಂತ್ರಜ್ಞಾನವು ದೊಡ್ಡ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಕಳೆದ 3-4 ವರ್ಷಗಳಲ್ಲಿ ದೇಶದಲ್ಲಿ 700ಕ್ಕೂ ಹೆಚ್ಚು ಕೃಷಿ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ," ಎಂದು ಅವರು ಹೇಳಿದರು.

ಕೊಯ್ಲು ನಂತರದ ನಿರ್ವಹಣೆಯ ಕ್ಷೇತ್ರದಲ್ಲಿನ ಕೆಲಸಕ್ಕೆ ಸಂಬಂಧಿಸಿದಂತೆ, ಸಂಸ್ಕರಿಸಿದ ಆಹಾರದ ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅಂತರರಾಷ್ಟ್ರೀಯ ಗುಣಮಟ್ಟ ಮಾನದಂಡಗಳನ್ನು ಖಾತರಿಪಡಿಸಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ' ನಿಟ್ಟಿನಲ್ಲಿ ʻಕಿಸಾನ್ ಸಂಪದʼ ಯೋಜನೆ ಜೊತೆಗೆ ʻಪಿಎಲ್ಐʼ ಯೋಜನೆಯೂ ಮುಖ್ಯವಾಗಿದೆ. ಇದರಲ್ಲಿ ಮೌಲ್ಯ ಸರಪಳಿಯೂ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ, ಒಂದು ಲಕ್ಷ ಕೋಟಿ ರೂ.ಗಳ ವಿಶೇಷ ʻಕೃಷಿ ಮೂಲಸೌಕರ್ಯ ನಿಧಿʼಯನ್ನು ರಚಿಸಲಾಗಿದೆ", ಎಂದು ಪ್ರಧಾನಿ ಮಾಹಿತಿ ನೀಡಿದರು.

ʻಕೃಷಿ ಶೇಷʼ(ಪರಾಲಿ) ನಿರ್ವಹಣೆ ಬಗ್ಗೆ ಪ್ರಧಾನಿ ಒತ್ತು ಹೇಳಿದರು. "ಇದಕ್ಕಾಗಿ, ಬಜೆಟ್‌ನಲ್ಲಿ ಕೆಲವು ಹೊಸ ಉಪಕ್ರಮಗಳನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಬಹುದು ಮತ್ತು ರೈತರಿಗೂ ಆದಾಯ ಸಿಗಲಿದೆ," ಎಂದು ಅವರು ಹೇಳಿದರು. ಪ್ಯಾಕೇಜಿಂಗ್‌ಗಾಗಿ ಕೃಷಿ ತ್ಯಾಜ್ಯವನ್ನು ಬಳಸುವ ಮಾರ್ಗಗಳನ್ನು ಅನ್ವೇಷಿಸಲು ಅವರು ಸಲಹೆ ನೀಡಿದರು.

ಎಥೆನಾಲ್ ಕ್ಷೇತ್ರದಲ್ಲಿನ ದೇಶದ ಸಾಮರ್ಥ್ಯದ ಬಗ್ಗೆಯೂ ಪ್ರಧಾನಿ ಅವರು ವಿವರಿಸಿದರು, ಸರ್ಕಾರ ಶೇಕಡಾ 20ರಷ್ಟು ಮಿಶ್ರಣದ ಗುರಿಯತ್ತ ಮುಂದುವರಿಯುತ್ತಿದೆ. 2014ರಲ್ಲಿದ್ದ ಶೇಕಡಾ 1-2ರಷ್ಟಕ್ಕೆ ಹೋಲಿಸಿದರೆ ಮಿಶ್ರಣವು ಪ್ರಮಾಣವು ಪ್ರಸ್ತುತ ಶೇಕಡಾ 8ಕ್ಕೆ ತಲುಪಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನಮಂತ್ರಿಯವರು ಸಹಕಾರಿ ಕ್ಷೇತ್ರದ ಪಾತ್ರದ ಬಗ್ಗೆಯೂ ಮಾತನಾಡಿದರು. "ಭಾರತದ ಸಹಕಾರಿ ಕ್ಷೇತ್ರವು ಬಹಳ ಸಶಕ್ತವಾಗಿದೆ. ಸಕ್ಕರೆ ಕಾರ್ಖಾನೆಗಳು, ರಸಗೊಬ್ಬರ ಕಾರ್ಖಾನೆಗಳು, ಡೈರಿಗಳು, ಸಾಲದ ವ್ಯವಸ್ಥೆಗಳು, ಆಹಾರ ಧಾನ್ಯಗಳ ಖರೀದಿ - ಹೀಗೆ ಯಾವುದೇ ವಲಯವಾದರೂ ಸಹಕಾರಿ ಕ್ಷೇತ್ರದ ಪಾಲ್ಗೊಳ್ಳುವಿಕೆ ದೊಡ್ಡದಾಗಿದೆ. ನಮ್ಮ ಸರ್ಕಾರ ಅದಕ್ಕೆ ಸಂಬಂಧಿಸಿದ ಹೊಸ ಸಚಿವಾಲಯವನ್ನು ಸಹ ರಚಿಸಿದೆ. ಸಹಕಾರಿ ಸಂಘಗಳನ್ನು ಯಶಸ್ವಿ ವ್ಯಾಪಾರ ಉದ್ಯಮವನ್ನಾಗಿ ಪರಿವರ್ತಿಸುವುದು ಹೇಗೆ ಎಂಬ ಗುರಿಯತ್ತ ನೀವು ಗಮನ ಹರಿಸಬೇಕು,” ಎಂದು ಪ್ರಧಾನಿ ಹೇಳಿದರು.

 


***



(Release ID: 1800760) Visitor Counter : 653