ಕೃಷಿ ಸಚಿವಾಲಯ

ಐಸಿಎಆರ್-ಸಿಸಿಎಆರ್‌ಐ- ಗೋವಾದಿಂದ ನಾಮನಿರ್ದೇಶನಗೊಂಡ ಕರ್ನಾಟಕದ ಕರಾವಳಿ ಜಿಲ್ಲೆಯ ಪ್ರಗತಿಪರ ರೈತನಿಗೆ 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ

Posted On: 27 JAN 2022 2:03PM by PIB Bengaluru

ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾನಡ್ಕ ಗ್ರಾಮದ ಪ್ರಗತಿಪರ ರೈತ ಶ್ರೀ ಅಮೈ ಮಹಾಲಿಂಗ ನಾಯಕ್ (ವಯಸ್ಸು 77) ಅವರಿಗೆ ಭಾರತ ಸರ್ಕಾರವು 2022ನೇ ಸಾಲಿನ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅಮೈ ಮಹಾಲಿಂಗ ನಾಯಕ್ ಅವರು ತಾವೇ ಪ್ರಯೋಗ ಮಾಡಿದ ಸಣ್ಣ ನೀರಾವರಿ ವ್ಯವಸ್ಥೆಯ ಮೂಲಕ ಶುಷ್ಕ ಇಳಿಜಾರಿನ ಬೆಟ್ಟವನ್ನು ಫಲವತ್ತಾದ ಕೃಷಿ ಜಮೀನಾಗಿ ಪರಿವರ್ತಿಸಿ, ಫಲವತ್ತಾದ ಬೆಳೆ ಬೆಳೆಯುತ್ತಿದ್ದಾರೆ. ಗೋವಾದ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) – ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ(ಸಿಸಿಎಆರ್‌) ನಿರ್ದೇಶಕರ ನೇತೃತ್ವದ ಇಬ್ಬರು ಕೃಷಿ ವಿಜ್ಞಾನಿಗಳ ತಂಡವು ಪ್ರಗತಿಪರ ರೈತ ಅಮೈ ಮಹಾಲಿಂಗ ನಾಯಕ್ ಅವರ ಜಮೀನಿಗೆ ಭೇಟಿ ನೀಡಿ, ಅವರು ಅಳವಡಿಸಿಕೊಂಡಿರುವ ಸಣ್ಣ ನೀರಾವರಿಯ ಯಶಸ್ವೀ  ತಂತ್ರಜ್ಞಾನದ ಛಾಯಾಚಿತ್ರಗಳನ್ನು ಸೆರೆ ಹಿಡಿದು, 2022ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಕಳಿಸಿದ್ದರು.

ಶ್ರೀ ಅಮೈ ಮಹಾಲಿಂಗ ನಾಯಕ್ ಅವರು ತಮ್ಮ ಬರಡು ಭೂಮಿಯನ್ನು ಫಲವತ್ತಾದ ಜಮೀನಾಗಿ ಪರಿವರ್ತಿಸಲು 315 ಅಡಿ ಉದ್ದದ 6 ಸುರಂಗಗಳನ್ನು ಏಕಾಂಗಿಯಾಗಿ ತೋಡಿ, ನೀರು ತಂದಿದ್ದಾರೆ. ತಮ್ಮ ಜಮೀನಿನ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಇರುವ ಸುಮಾರು 5000 ಬೃಹತ್ ಗಾತ್ರದ ಕಲ್ಲುಗಳಲ್ಲಿ ಅವರು ಸ್ವತಃ ಸುಮಾರು 300 ಕಂದಕಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ಅವರು 15 ಅಡಿ ಉದ್ದ, 30 ಅಡಿ ಅಗಲ ಮತ್ತು 5 ಅಡಿ ಎತ್ತರದ 2 ತಡೆಗೋಡೆ (ಎದುರು ಗೋಡೆ)ಗಳನ್ನು ಹಾಕಿ, 12 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಿಸಿದ್ದಾರೆ. ತಮಗೆ ತಿಳಿದಿದ್ದ ನೀರು ಬಳಕೆಯ ಗ್ರಾಮೀಣ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಅಮೈ ಮಹಾಲಿಂಗ ನಾಯಕ್ ಅವರು, ಬಂಜರು ಭೂಮಿಯನ್ನು ಸೊಂಪಾದ ಓಯಸಿಸ್(ಫಲವತ್ತಾದ ಭೂಮಿ) ಆಗಿ ಪರಿವರ್ತಿಸಿದ್ದಾರೆ. ಅವರು ತಮ್ಮಜಮೀನಿನಲ್ಲಿ 300 ಅಡಕೆ ಮರಗಳು, 75 ತೆಂಗಿನ ಮರಗಳು, 150 ಗೋಡಂಬಿ ಮರಗಳು, 200 ಬಾಳೆ ಸಸಿಗಳು ಮತ್ತು ಕಾಳುಮೆಣಸಿನ ಬಳ್ಳಿಗಳನ್ನು ಬೆಳೆದು, ಸಮೃದ್ಧವಾಗಿಸಿದ್ದಾರೆ. ಇದರ ಜತೆಗೆ, ಅವರು ಜೇನು ಕೃಷಿ ಮಾಡುತ್ತಿದ್ದಾರೆ. ಜತೆಗೆ, ಹಸುಗಳ ಆಹಾರಕ್ಕಾಗಿ ಅಜೋಲಾ ಉತ್ಪಾದಿಸುತ್ತಿದ್ದಾರೆ. ಅವರು ಜೀವನದುದ್ದಕ್ಕೂ ರೀತಿಯ ಹೊಸ ಪ್ರಯತ್ನಗಳನ್ನು ಮಾಡುತ್ತಾ, ಆದರ್ಶ ಕೃಷಿಕನಾಗಿ ಬದುಕು ಸಾಗಿಸುತ್ತಿದ್ದಾರೆ. ಸ್ವಂತ ಶಕ್ತಿಯಿಂದ ನಡೆಸುತ್ತಿರುವ ಹೊಸ ಹೊಸ ಪ್ರಯೋಗಗಳಲ್ಲಿ ಯಶಸ್ಸು ಕಾಣುತ್ತಾ ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಎಲ್ಲಾ ಪ್ರಯತ್ನಗಳಿಗಾಗಿ ಅವರನ್ನು "ಒನ್ ಮ್ಯಾನ್ ಆರ್ಮಿ" ಮತ್ತು "ಟನಲ್ ಮ್ಯಾನ್" ಎಂದೇ ಜನಪ್ರಿಯತೆ ಗಳಿಸಿದ್ದಾರೆ. ಅಮೈ ಮಹಾಲಿಂಗ ನಾಯಕ್ ಅವರ ಮಾದರಿ ಕೃಷಿ ಭೂಮಿ ನೋಡಲೇ ಬೇಕಾದ ನೇಗಿಲ ಯೋಗಿಯ ಕರ್ಮಭೂಮಿಯಾಗಿ ಪರಿವರ್ತನೆಯಾಗಿದೆ. ವಿದೇಶಿ ಪ್ರವಾಸಿಗರು ಸೇರಿದಂತೆ ಪ್ರತಿವರ್ಷ 1 ಸಾವಿರಕ್ಕೆ ಹೆಚ್ಚಿನ ಕೃಷಿ ಪ್ರೇಮಿಗಳು (ಆಸಕ್ತರು) ಇಲ್ಲಿಗೆ ಭೇಟಿ ನೀಡುತ್ತಾರೆ. ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ವಿಚಾರ ಅವರ ಕಿವಿಗೆ ಬಿದ್ದಿದ್ದೇ ತಡ, ಅವರ ಮೊಗದಲ್ಲಿ ಮಂದಹಾಸ ಮೂಡಿತು. ಅವರ ಕಠಿಣ ಪರಿಶ್ರಮ ಮತ್ತು ನಾವೀನ್ಯತೆಯನ್ನು ಗುರುತಿಸಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಐಸಿಎಆರ್-ಸಿಸಿಎಆರ್ ಐಗೆ ತಮ್ಮ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಅರ್ಪಿಸಿದರು.

***



(Release ID: 1793235) Visitor Counter : 187


Read this release in: English , Marathi